Dr Sadhanashree Column: ಅತಿಸಾರದಲ್ಲಿ ಎಚ್ಚರಿಕೆ-ತಕ್ಷಣದ ಪರಿಹಾರವೇ ಸಮಸ್ಯೆಯಾಗಬಹುದು !
ಹಸಿವಿಲ್ಲದಿದ್ದರೂ ಸಹ ಪದೇ ಪದೇ ಏನಾದರೂ ತಿನ್ನುವ ಚಟವನ್ನು ನಾವು ಬೆಳೆಸಿಕೊಂಡಿ ದ್ದೇವೆ. ಸ್ವಲ್ಪ ಸ್ವಲ್ಪವಾಗಿ ಏನಾದರೂ ತಿನ್ನುತ್ತಿರಬೇಕು ಎಂಬ ಅಭ್ಯಾಸವು ಜೀರ್ಣಾಂಗವನ್ನು ದುರ್ಬಲಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ, ದೇಹವು ಅದನ್ನು ಮಲದ ರೂಪದಲ್ಲಿ ಪದೇ ಪದೇ ಹೊರಹಾಕುತ್ತದೆ. ಇದನ್ನು ಆಯುರ್ವೇದ ದಲ್ಲಿ ಆಮಾತಿಸಾರ ಎಂದು ಕರೆಯುತ್ತಾರೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಅತಿಸಾರ ಅಥವಾ ಭೇಧಿ ಎನ್ನುವುದು ನಮ್ಮಲ್ಲಿ ಬಹಳ ಸಾಮಾನ್ಯವಾಗಿ ಕಂಡು ಬರುವ ಒಂದು ತೊಂದರೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ. ಆದರೆ, ಆಯುರ್ವೇದದ ದೃಷ್ಟಿಯಲ್ಲಿ ಅತಿಸಾರವು ದೇಹದ ಜೀರ್ಣ ವ್ಯವಸ್ಥೆಯಲ್ಲಿ ಏನೋ ತಪ್ಪಾ ಗಿದೆ ಎಂಬ ಪ್ರಮುಖ ಸೂಚನೆ.
ಅತಿಸಾರದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ - ಜೀರ್ಣಿಸಲು ಜಡವಾದ, ನಮ್ಮ ಜೀರ್ಣ ಶಕ್ತಿಯನ್ನು ಮೀರಿದ ಆಹಾರ ಸೇವನೆ. ಇಂದಿನ ದಿನಗಳಲ್ಲಿ ಅತಿಯಾದ ಜಿಡ್ಡುಳ್ಳ, ಅತಿ ರೂಕ್ಷವಾದ, ಅತಿ ಉಷ್ಣ ಅಥವಾ ಅತಿ ಶೀತಲವಾದ ಆಹಾರಗಳನ್ನು ಸೇವಿಸುವ ಪ್ರವೃತ್ತಿ ಹೆಚ್ಚಾಗಿದೆ.
ಇವು ಜಠರಾಗ್ನಿಯನ್ನು ದುರ್ಬಲಗೊಳಿಸಿ, ಆಹಾರವು ಸರಿಯಾಗಿ ಜೀರ್ಣವಾಗದೇ ಹಾಗೆಯೇ ದ್ರವ ಸ್ವರೂಪದಲ್ಲಿ ಹೊರ ಹೋಗುವ ಸ್ಥಿತಿಯನ್ನು ಉಂಟು ಮಾಡುತ್ತದೆ. ಆಯುರ್ವೇದದಲ್ಲಿ ಇದನ್ನು ಆಮಾತಿಸಾರ ಎಂದು ಕರೆಯುತ್ತಾರೆ.
ಅತಿಸಾರದ ಇನ್ನೊಂದು ಮುಖ್ಯ ಕಾರಣ - ಅತಿಯಾದ ದ್ರವಾಹಾರದ ಸೇವನೆ. ಬಾಯಾರಿಕೆ ಇಲ್ಲದಿದ್ದರೂ ಸಹ ಹೈಡ್ರೇಶನ್ ಎಂಬ ಹೆಸರಿನಲ್ಲಿ ಅತಿಯಾಗಿ ದ್ರವಗಳನ್ನು ಸೇವಿಸುವುದು. ಬೇಸಿಗೆಯಲ್ಲಿ ಅತಿಯಾಗಿ ಮಜ್ಜಿಗೆ ಕುಡಿಯುವುದು, ಅಗತ್ಯವಿಲ್ಲದಿದ್ದರೂ ಹಣ್ಣಿನ ರಸ, ತರಕಾರಿ ರಸಗಳನ್ನು ಪದೇ ಪದೇ ಕುಡಿಯುವುದು, ಅಥವಾ ಎಳನೀರು, ಹಾಲು ಇತ್ಯಾದಿ ಗಳನ್ನು ಮಿತಿಯಿಲ್ಲದೆ ಸೇವಿಸುವುದು - ಇವುಗಳೆಲ್ಲವೂ ಜೀರ್ಣಾಗ್ನಿಯನ್ನು ಕುಂದಿಸಿ ಅತಿಸಾರಕ್ಕೆ ಕಾರಣವಾಗಬಹುದು.
ಮತ್ತೊಂದು ಮಹತ್ವದ ಕಾರಣ - ಪರಸ್ಪರ ವಿರುದ್ಧ ಗುಣವುಳ್ಳ ಆಹಾರಗಳ ಸೇವನೆ (ವಿರುದ್ಧಾಹಾರ). ಉದಾಹರಣೆಗೆ ಹಾಲಿನೊಂದಿಗೆ ಮೀನು/ ಮೊಸರು/ ಮಾವು/ ಹಲಸು/ಉದ್ದು ಇತ್ಯಾದಿಗಳನ್ನು ಸೇವಿಸುವುದು. ಇದೇ ರೀತಿ ಹಾಲಿನೊಂದಿಗೆ ಸೊಪ್ಪು ಅಥವಾ ಹಸಿ ತರಕಾರಿಗಳನ್ನು ಸೇವಿಸುವುದೂ ದೇಹಕ್ಕೆ ಅನುಕೂಲಕರವಲ್ಲ.
ಇದನ್ನೂ ಓದಿ: Dr Sadhanashree Column: ಸದ್ವೃರ್ಥದ ಸಾರ್ಥಕತೆ: ಶ್ರೀರಾಮನ ಆದರ್ಶ ಜೀವನ
ಇಂತಹ ಸಂಯೋಜನೆಗಳು ದೇಹಕ್ಕೆ ಅನಾವಶ್ಯಕ ಅಥವಾ ಅನಾನುಕೂಲ ಪದಾರ್ಥ ಗಳಂತೆ ಕಾಣುತ್ತವೆ. ಪರಿಣಾಮವಾಗಿ, ದೇಹವು ಅದನ್ನು ಜೀರ್ಣಿಸಲು ಪ್ರಯತ್ನಿಸದೇ ನೇರವಾಗಿ ಹೊರ ಹಾಕಲು ಯತ್ನಿಸುತ್ತದೆ. ಇದರಿಂದ ಅತಿಸಾರ ಉಂಟಾಗುತ್ತದೆ.
ಹಸಿವಿಲ್ಲದಿದ್ದರೂ ಸಹ ಪದೇ ಪದೇ ಏನಾದರೂ ತಿನ್ನುವ ಚಟವನ್ನು ನಾವು ಬೆಳೆಸಿಕೊಂಡಿ ದ್ದೇವೆ. ಸ್ವಲ್ಪ ಸ್ವಲ್ಪವಾಗಿ ಏನಾದರೂ ತಿನ್ನುತ್ತಿರಬೇಕು ಎಂಬ ಅಭ್ಯಾಸವು ಜೀರ್ಣಾಂಗ ವನ್ನು ದುರ್ಬಲಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ, ದೇಹವು ಅದನ್ನು ಮಲದ ರೂಪದಲ್ಲಿ ಪದೇ ಪದೇ ಹೊರಹಾಕುತ್ತದೆ. ಇದನ್ನು ಆಯುರ್ವೇದದಲ್ಲಿ ಆಮಾತಿಸಾರ ಎಂದು ಕರೆಯುತ್ತಾರೆ.
ಇನ್ನೊಂದು ಪ್ರಮುಖ ಅಂಶ - ಕರುಳಿನ ಕಾರ್ಯವೈಖರಿಯಲ್ಲಿ ಕುಂದು. ಸಾಮಾನ್ಯವಾಗಿ ಕರುಳು (ಅಂತ್ರಗಳು) ಆಹಾರವನ್ನು ಕೆಲವು ಕಾಲ ಹಿಡಿದುಕೊಂಡು, ಅದರಿಂದ ಪೋಷ ಕಾಂಶಗಳನ್ನು ಶೋಷಿಸಿ, ನಂತರ ಮಲವನ್ನು ರೂಪಿಸುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾದಾಗ, ಆಹಾರವು ನೇರವಾಗಿ ಹೊರಹೋಗುತ್ತದೆ. ಇದರಿಂದಲೂ ಅತಿಸಾರ ಉಂಟಾಗುತ್ತದೆ.
ಇನ್ನೊಂದು ಕಡೆ, ಪಕ್ವಾತಿಸಾರ ಎಂಬ ಸ್ಥಿತಿಯೂ ಇದೆ. ಸಾಮಾನ್ಯವಾಗಿ ಅನ್ನವು ಜೀರ್ಣ ಗೊಂಡ ನಂತರ ಅದರ ಸಾರಭಾಗ ಮತ್ತು ಮಲಭಾಗ ಬೇರ್ಪಡುತ್ತವೆ. ಘನಮಲವು ಬೇರೆ, ದ್ರವಭಾಗವು ಬೇರೆ ರೀತಿಯಲ್ಲಿ ದೇಹದಲ್ಲಿ ಬಳಸಲ್ಪಡಬೇಕು. ಆದರೆ ಈ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾದಾಗ, ಘನಮಲದೊಂದಿಗೆ ದ್ರವವೂ ಸೇರಿಕೊಂಡು ವಿಸರ್ಜನೆ ಯಾಗುತ್ತದೆ - ಇದನ್ನೇ ಪಕ್ವಾತಿಸಾರವೆಂದು ಕರೆಯುತ್ತಾರೆ.
ಜೀರ್ಣಾಂಗದ ಕೊನೆಯ ಹಂತವಾದ ವಿಸರ್ಜನೆಯ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾ ದಾಗ, ಮಲವು ಮಲಾಶಯದಲ್ಲಿ ನಿಲ್ಲದೆ ಪದೇ ಪದೇ ಹೊರಹೋಗುತ್ತದೆ. ಇದು ಪಕ್ವಾತಿ ಸಾರದ ಲಕ್ಷಣವಾಗಿದೆ. ಅಭ್ಯಾಸವಿಲ್ಲದ ಆಹಾರಗಳನ್ನು ಸೇವಿಸುವುದು, ಕ್ರಿಮಿದೋಷ, ಅತಿಯಾದ ಪಂಚಕರ್ಮ ಚಿಕಿತ್ಸೆ, ಅಶುದ್ಧ ನೀರು, ವಿಷಪದಾರ್ಥಗಳು, ಅತಿಯಾದ ಮದ್ಯ ಪಾನ, ಹಾಗೂ ಮಾನಸಿಕ ಕಾರಣಗಳಾದ ಶೋಕ ಮತ್ತು ಭಯ ಕೂಡ ಅತಿಸಾರವನ್ನು ಉಂಟು ಮಾಡಬಹುದು.
ಇದಲ್ಲದೆ, ದೇಹದ ಸಹಜ ವೇಗಗಳನ್ನು (ನೈಸರ್ಗಿಕ ಕರೆಗಳನ್ನು) ತಡೆಯುವುದು - ಮಲ, ಮೂತ್ರ, ನಿದ್ದೆ, ಹಸಿವು, ದಾಹ ಇತ್ಯಾದಿಗಳನ್ನು ನಿರ್ಲಕ್ಷಿಸುವುದು - ಜೀರ್ಣಾಂಗದ ಕಾರ್ಯ ವೈಖರಿಯನ್ನು ಕೆಡಿಸುತ್ತದೆ. ಇದರಿಂದಲೂ ಅತಿಸಾರ ಉಂಟಾಗಬಹುದು. ಒಟ್ಟಾರೆ ನೋಡಿ ದರೆ, ಅತಿಸಾರದ ಮೂಲದಲ್ಲಿ ಜಠರಾಗ್ನಿಯ ಅಸಮತೋಲನವೇ ಇದೆ.
ಜೀರ್ಣಾಗ್ನಿ ನೀರಿನ ಅಂಶದಿಂದ ಅಥವಾ ತಪ್ಪಾದ ಆಹಾರ ಪದ್ಧತಿಯಿಂದ ಮಂದ ವಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೇ, ಅದರ ಸಾರಭಾಗ ಶೋಷಿಸ ಲ್ಪಡದೆ, ದ್ರವದೊಂದಿಗೆ ಮಲವಾಗಿ ಹೊರ ಹೋಗುತ್ತದೆ. ಕೆಲವೊಮ್ಮೆ ಕರುಳು ತನ್ನ ಸಹಜ ಚಲನವಲನವನ್ನು ಕಳೆದುಕೊಂಡು, ಮಲವನ್ನು ಹಿಡಿದುಕೊಳ್ಳದೇ ಹೊರಹಾಕುತ್ತದೆ.
ಎಲ್ಲಾ ರೀತಿಯ ಅತಿಸಾರದಲ್ಲಿಯೂ ಒಂದು ಸಾಮಾನ್ಯ ಲಕ್ಷಣವೆಂದರೆ - ಪದೇ ಪದೇ ಮಲವಿಸರ್ಜನೆ ಮತ್ತು ದ್ರವಸ್ವರೂಪದ ಮಲ. ಈ ಸಂದರ್ಭದಲ್ಲಿ ಒಂದು ಪ್ರಮುಖ ವಿಷಯವನ್ನು ವಿಶೇಷವಾಗಿ ಗಮನಿಸಬೇಕು. ಸಾಮಾನ್ಯವಾಗಿ ಅತಿಸಾರವಾದಾಗ, ’ಹೆಚ್ಚು ದ್ರವಗಳನ್ನು ಸೇವಿಸಬೇಕು’ ಎಂಬ ಅಭಿಪ್ರಾಯ ಇದೆ. ಆದರೆ ಆಯುರ್ವೇದದ ದೃಷ್ಟಿಯಲ್ಲಿ ಇದು ಎಲ್ಲ ಸಂದರ್ಭಗಳಲ್ಲೂ ಸರಿಯಾದ ಕ್ರಮವಲ್ಲ.
ಅತಿಸಾರದ ಕಾರಣಗಳು ಮತ್ತು ಅದರ ಪ್ರಕ್ರಿಯೆಯನ್ನು ಗಮನಿಸಿದರೆ, ಅತಿಯಾದ ದ್ರವಾ ಹಾರವು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಜೀರ್ಣಾಗ್ನಿ ಈಗಾಗಲೇ ದುರ್ಬಲ ಗೊಂಡಿರುವ ಸಂದರ್ಭದಲ್ಲಿ, ದ್ರವಾಹಾರವನ್ನು ಮಿತಿಮೀರಿಸಿ ಸೇವಿಸಿದರೆ ಅದು ಜಠರಾಗ್ನಿಯನ್ನು ಇನ್ನಷ್ಟು ಮಂದಗೊಳಿಸುತ್ತದೆ ಅತಿಸಾರದ ಲಕ್ಷಣಗಳನ್ನು ಹೆಚ್ಚಿಸುವು ದಕ್ಕೆ ಕಾರಣವಾಗುತ್ತದೆ.
ಇದರಿಂದ ಕರುಳಿನ ಚಲನೆಯಲ್ಲಿ ವೇಗ ಹೆಚ್ಚಾಗಿ, ಅದು ಆಯಾಸಗೊಳ್ಳುತ್ತದೆ. ಪರಿಣಾಮ ವಾಗಿ, ರೋಗವು ಶೀಘ್ರವಾಗಿ ಗುಣವಾಗದೆ, ಮತ್ತಷ್ಟು ಕಾಲ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಅತಿಸಾರವಾದ ಸಂದರ್ಭದಲ್ಲಿ ನಾವು ಕುಡಿಯುವ ದ್ರವಗಳ ಬಗ್ಗೆ ವಿಶೇಷ ಗಮನ ಅಗತ್ಯ.
ಸರಿಯಾದ ರೀತಿಯಲ್ಲಿ ನೋಡಿಕೊಳ್ಳದಿದ್ದರೆ, ಅತಿಸಾರವು ಪೂರ್ಣವಾಗಿ ಗುಣವಾಗದೆ ಮುಂದಿನ ಹಂತದಲ್ಲಿ ಗ್ರಹಣಿ ಎಂಬ ಗಂಭೀರ ರೋಗಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಆಯುರ್ವೇದದಲ್ಲಿ ಅತಿಸಾರದ ಚಿಕಿತ್ಸೆಯನ್ನು ಮಲದ ಸ್ವರೂಪವನ್ನು ಗಮನಿಸಿ ನಿರ್ಧರಿಸಲಾಗುತ್ತದೆ. ಮುಖ್ಯವಾಗಿ, ಇದು ಎರಡು ರೀತಿಯಲ್ಲಿ ಕಾಣಿಸಬಹುದು - ಅಜೀರ್ಣದ ಲಕ್ಷಣಗಳಿರುವ ಆಮಾತಿಸಾರ ಮತ್ತು ಜೀರ್ಣಗೊಂಡ ಮಲದ ಲಕ್ಷಣಗಳಿರುವ ಪಕ್ವಾತಿಸಾರ. ಮಲದ ಗುಣವನ್ನು ಸರಿಯಾಗಿ ಅವಲೋಕಿಸಿ, ಅದರ ಆಧಾರದ ಮೇಲೆ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ.
ಇದರ ಜೊತೆಗೆ, ಮಲದಲ್ಲಿ ರಕ್ತವಿದೆಯೇ ಇಲ್ಲವೇ ಎಂಬುದರ ಆಧಾರದಲ್ಲಿಯೂ ಅತಿಸಾರ ವನ್ನು ಇನ್ನೂ ಎರಡು ವಿಧಗಳಾಗಿ ವಿಂಗಡಿಸಬಹುದು - ರಕ್ತರಹಿತ ಅತಿಸಾರ ಮತ್ತು ರಕ್ತಸಹಿತ ಅತಿಸಾರ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಚಿಕಿತ್ಸೆಯನ್ನು ರೂಪಿಸುವುದು ಅತ್ಯಂತ ಮುಖ್ಯ.
ಆಮಾತಿಸಾರ - ಅಪಕ್ವ ಜೀರ್ಣದ ಪರಿಣಾಮ
ಆಯುರ್ವೇದದಲ್ಲಿ ಆಮ ಎಂದರೆ ಅಪಕ್ವ ಅಥವಾ ಸರಿಯಾಗಿ ಜೀರ್ಣವಾಗದ ಪದಾರ್ಥ ಎಂದು ಅರ್ಥ. ನಾವು ಸೇವಿಸಿದ ಆಹಾರವು ಪೂರ್ಣವಾಗಿ ಜೀರ್ಣಗೊಳ್ಳುವ ಮೊದಲು, ಅದೇ ಅಪಕ್ವ ಸ್ಥಿತಿಯಲ್ಲಿ ಮಲದೊಂದಿಗೆ ದ್ರವಸ್ವರೂಪದಲ್ಲಿ ಹೊರಹೋದರೆ, ಅದನ್ನು ಆಮಾತಿಸಾರ ಎಂದು ಕರೆಯುತ್ತಾರೆ.
ಈ ರೀತಿಯ ಅತಿಸಾರದಲ್ಲಿ ಕೆಲವು ವಿಶೇಷ ಲಕ್ಷಣಗಳು ಕಾಣಿಸುತ್ತವೆ. ಮಲವು ಸಾಮಾನ್ಯ ವಾಗಿ ದುರ್ಗಂಧದಿಂದ ಕೂಡಿರುತ್ತದೆ. ಹೊಟ್ಟೆಯಲ್ಲಿ ಗುಡುಗುಡು ಶಬ್ದಗಳು, ತೀವ್ರ ಹೊಟ್ಟೆ ನೋವು, ಕೆಳ ಹೊಟ್ಟೆಯಲ್ಲಿ ಸ್ತಬ್ಧವಾದ ಅನುಭವ ಕಂಡುಬರುತ್ತದೆ.
ಕೆಲವೊಮ್ಮೆ ಬಾಯಿಯಲ್ಲಿ ವಾಂತಿ ಬರುವಂತೆ ನೀರು ತುಂಬುವುದು, ಹಾಗೂ ಮಲವು ಹಿಡಿತವಿಲ್ಲದೆ ದ್ರವಸ್ವರೂಪದಲ್ಲಿ ಸೋರುವುದೂ ಕಾಣಬಹುದು. ಇಂತಹ ಮಲವು ಸಾಮಾನ್ಯವಾಗಿ ನೀರಿನಲ್ಲಿ ಮುಳುಗುವ ಗುಣ ಹೊಂದಿರುತ್ತದೆ.
ಈ ಸಂದರ್ಭದಲ್ಲಿ ಒಂದು ಪ್ರಮುಖ ತಪ್ಪನ್ನು ತಪ್ಪಿಸಬೇಕು - ಅತಿಯಾದ ದ್ರವಾಹಾರ ಸೇವನೆ. ಎಳನೀರು, ಹಣ್ಣಿನ ರಸ, ಮಜ್ಜಿಗೆ, ಮೊಸರು ನೀರು ಇತ್ಯಾದಿಗಳನ್ನು ಈ ಹಂತದಲ್ಲಿ ಸೇವಿಸುವುದು ಸಮಸ್ಯೆಯನ್ನು ಹೆಚ್ಚಿಸಬಹುದು. ಏಕೆಂದರೆ ಇವು ಜೀರ್ಣಾಗ್ನಿಯನ್ನು ಇನ್ನಷ್ಟು ಮಂದಗೊಳಿಸಿ, ಕರುಳಿನ ಕಾರ್ಯವೈಖರಿಯನ್ನು ದುರ್ಬಲಗೊಳಿಸುತ್ತವೆ.
ಇಂತಹ ಸಂದರ್ಭಗಳಲ್ಲಿ ಲಂಘನ (ಉಪವಾಸ) ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಕೆಲಕಾಲ ಆಹಾರ ಮತ್ತು ದ್ರವ ಸೇವನೆಯನ್ನು ನಿಯಂತ್ರಿಸುವುದರಿಂದ, ದೇಹವು ಸ್ವಾಭಾ ವಿಕವಾಗಿ ದೋಷಗಳನ್ನು ಹೊರ ಹಾಕಲು ಸಹಾಯವಾಗುತ್ತದೆ. ಈ ಪ್ರಕ್ರಿಯೆಯ ನಂತರ, ಮತ್ತೆ ಹಸಿವು ಮತ್ತು ದಾಹ ಸಹಜವಾಗಿ ಕಾಣಿಸಿಕೊಂಡಾಗ, ಲಘುವಾದ ಆಹಾರವನ್ನು ನಿಧಾನವಾಗಿ ಪ್ರಾರಂಭಿಸಬಹುದು.
ಈ ಹಂತದಲ್ಲಿ, ಶುಂಠಿ, ಕೊತ್ತಂಬರಿ ಬೀಜ ಅಥವಾ ಕೊನ್ನಾರಿಗೆಡ್ಡೆ(ಭದ್ರಮುಷ್ಟಿ) ಮುಂತಾ ದ ದ್ರವ್ಯಗಳನ್ನು ಹಾಕಿ ಕುದಿಸಿ ತಣ್ಣಗಾಗಿಸಿದ ನೀರನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಯುವುದು ಹಿತಕರ. ನಂತರ ಹಸಿವು ಚೆನ್ನಾಗಿ ಮೂಡಿದಾಗ, ಹುರಿದ ರವೆ, ಅಕ್ಕಿ ಅಥವಾ ಹುರಿದ ಬೇಳೆಯಿಂದ ತಯಾರಿಸಿದ ಲಘು ಆಹಾರವನ್ನು ಸೇವಿಸಬಹುದು. ಕ್ರಮೇಣ ಹಸಿವು ಹೆಚ್ಚಿ ದಂತೆ, ಸರಳ ತರಕಾರಿಯನ್ನು ಸೇರಿಸಬಹುದು.
ಸರಕ್ತ ಆಮಾತಿಸಾರ
ಆಮಾತಿಸಾರದ ಮೇಲಿನ ಲಕ್ಷಣಗಳ ಜೊತೆಗೆ, ಮಲದಲ್ಲಿ ರಕ್ತವೂ ಸೇರಿ ಹೊರಹೋದರೆ ಅದನ್ನು ಸರಕ್ತ ಆಮಾತಿಸಾರ ಎಂದು ಕರೆಯುತ್ತಾರೆ. ಇದು ಗಮನಿಸಬೇಕಾದ ಗಂಭೀರ ಸ್ಥಿತಿಯಾಗಿದೆ. ಈ ಸಂದರ್ಭದಲ್ಲಿ ದೇಹದಿಂದ ರಕ್ತಸ್ರಾವವನ್ನು ಹೆಚ್ಚಿಸುವ ಆಹಾರಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು.
ವಿಶೇಷವಾಗಿ, ಹೆಚ್ಚು ಉಪ್ಪು, ಖಾರ, ಹುಳಿ, ಕರಿದ ಮತ್ತು ಮಸಾಲೆಯುಕ್ತ ಆಹಾರಗಳು ಈ ಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಬಹುದು. ಆಹಾರದಲ್ಲಿ ಸರಳತೆ ಮತ್ತು ಮಿತಿಯೇ ಮುಖ್ಯ. ಮೆಂತ್ಯಕಾಳು, ಭದ್ರಮುಷ್ಟಿ, ಕೊತ್ತಂಬರಿ ಬೀಜ, ದ್ರಾಕ್ಷಿ ಮುಂತಾದ ದ್ರವ್ಯಗಳನ್ನು ಸೇರಿಸಿ ಕುದಿಸಿ ತಣ್ಣಗಾಗಿಸಿದ ನೀರನ್ನು, ಬಾಯಾರಿಕೆ ಕಂಡಾಗ ಸ್ವಲ್ಪ ಸ್ವಲ್ಪವಾಗಿ ಸೇವಿಸು ವುದು ಹಿತಕರ.
ಹಸಿವು ನಿಧಾನವಾಗಿ ಮರಳಿ ಬಂದ ನಂತರ ಲಘು ಗಂಜಿಯನ್ನು, ಅದೂ ಉಪ್ಪಿಲ್ಲದೆ ಸೇವಿಸುವುದು ಸೂಕ್ತ. ನಂತರ, ಶುಂಠಿ ಸೇರಿಸಿದ ಹೆಸರುಬೇಳೆಯ ಸಾರು ಅಥವಾ ದಾಳಿಂಬೆ ಹಣ್ಣಿನ ಸಿಹಿ ರಸವನ್ನು ನಿಧಾನವಾಗಿ ಆಹಾರದಲ್ಲಿ ಸೇರಿಸಬಹುದು.
ಪಕ್ವಾತಿಸಾರ
ಸಂಪೂರ್ಣವಾಗಿ ಜೀರ್ಣಗೊಂಡ ಮಲವು ಪದೇ ಪದೇ ದ್ರವಸ್ವರೂಪದಲ್ಲಿ ವಿಸರ್ಜನೆ ಯಾದರೆ ಅದನ್ನು ಪಕ್ವಾತಿಸಾರ ಎಂದು ಕರೆಯುತ್ತಾರೆ. ಈ ರೀತಿಯ ಅತಿಸಾರದಲ್ಲಿ ಮಲವು ಸಾಮಾನ್ಯವಾಗಿ ನೀರಿನಲ್ಲಿ ತೇಲುವ ಗುಣ ಹೊಂದಿರುತ್ತದೆ ಮತ್ತು ದುರ್ಗಂಧವೂ ಕಡಿಮೆ ಇರುತ್ತದೆ.ಇದಲ್ಲದೆ, ಹೊಟ್ಟೆನೋವು, ಬಿಗಿತ, ಗುಡುಗುಡು ಶಬ್ದ ಅಥವಾ ಉಬ್ಬು ವಿಕೆ ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಮಲವು ಯಾವುದೇ ತೊಂದರೆ ಇಲ್ಲದೆ, ಶಬ್ದವಿಲ್ಲದೆ ಸಲೀಸಾಗಿ ವಿಸರ್ಜನೆಯಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯ ಉದ್ದೇಶ - ಕರುಳಿನ ದೌರ್ಬಲ್ಯವನ್ನು ಸರಿಪಡಿಸಿ ಅದರ ಸ್ಥಿರತೆಯನ್ನು ಹೆಚ್ಚಿಸು ವುದು.
ಹಸಿವು ಮತ್ತು ಬಾಯಾರಿಕೆ ಕಾಣಿಸಿಕೊಂಡಾಗ, ದಾಳಿಂಬೆ ರಸವನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಯುವುದು ಹಿತಕರ. ಇದೇ ರೀತಿ, ಭದ್ರಮುಷ್ಟಿ ಕಷಾಯ, ದಾಳಿಂಬೆ ಹಣ್ಣಿನ ಸಿಪ್ಪೆಯ ಕಷಾಯ ಅಥವಾ ದಾಳಿಂಬೆ ಚಿಗುರಿನಿಂದ ತಯಾರಿಸಿದ ತಂಬುಳಿಯನ್ನು ಮೆತ್ತಗಿನ ಅನ್ನದೊಂದಿಗೆ ಸೇವಿಸುವುದು ಲಾಭಕರ.
ಅದೇ ರೀತಿ, ಮೆಂತ್ಯಕಾಳಿನ ತಂಬುಳಿ ಅಥವಾ ಒಗ್ಗರಿಸಿದ ಮಜ್ಜಿಗೆಯನ್ನು ಅನ್ನದೊಂದಿಗೆ ಸೇವಿಸುವುದು ಕರುಳಿನ ಬಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.
ರಕ್ತ ಪಕ್ವಾತಿಸಾರ
ಪಕ್ವಾತಿಸಾರದ ಲಕ್ಷಣಗಳ ಜೊತೆಗೆ, ಮಲದೊಂದಿಗೆ ಅಥವಾ ಮಲ ವಿಸರ್ಜನೆಗೆ ಮುನ್ನ ಅಥವಾ ನಂತರ ರಕ್ತಸ್ರಾವ ಕಾಣಿಸಿದರೆ ಅದನ್ನು ಸರಕ್ತ ಪಕ್ವಾತಿಸಾರ ಎಂದು ಕರೆಯು ತ್ತಾರೆ. ಈ ಸಂದರ್ಭದಲ್ಲಿ ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಕಷಾಯವನ್ನು ತಣ್ಣಗಾಗಿಸಿ, ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಕಲ್ಲುಸಕ್ಕರೆ ಸೇರಿಸಿ ಸ್ವಲ್ಪ ಸ್ವಲ್ಪವಾಗಿ ಕುಡಿಯುವುದು ಹಿತಕರ. ಅದೇ ರೀತಿ, ಕರಗಿಸಿದ ತುಪ್ಪಕ್ಕೆ ಕಲ್ಲುಸಕ್ಕರೆ ಬೆರೆಸಿ, ಸಿಹಿಯಾದ ಮಜ್ಜಿಗೆ ಅಥವಾ ಮೊಸರಿನೊಂದಿಗೆ ಸೇರಿಸಿ ಸೇವಿಸುವುದೂ ಸಹ ಉಪಕಾರಿಯಾಗುತ್ತದೆ.
ಇವು ಜೀರ್ಣವಾದ ನಂತರ, ಹಸಿವು ಕಂಡಂತೆ ಬೆಣ್ಣೆಯನ್ನು ಬಿಸಿ ಅನ್ನದೊಂದಿಗೆ ಸೇವಿಸಬಹುದು. ಜೊತೆಗೆ ಕೊತ್ತಂಬರಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುದಿಸಿದ ನೀರನ್ನು ಕುಡಿಯುವುದು ದೇಹಕ್ಕೆ ಸಹಾಯಕವಾಗುತ್ತದೆ.
ಸ್ನೇಹಿತರೆ, ಅತಿಸಾರದ ಚಿಕಿತ್ಸೆಯಲ್ಲಿ ಒಂದು ಮುಖ್ಯ ಅಂಶವೆಂದರೆ - ಮಲದ ಸ್ವರೂಪ ವನ್ನು ಗಮನಿಸುವುದು. ಮಲವು ಹೇಗೆ ವಿಸರ್ಜನೆಯಾಗುತ್ತಿದೆ ಎಂಬುದನ್ನು ಅವಲೋಕಿಸಿ, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುವುದು ಆಯುರ್ವೇದದ ವಿಧಾನ ವಾಗಿದೆ. ಈ ರೀತಿಯ ಜಾಗ್ರತೆ ವಹಿಸಿದರೆ, ಅತಿಸಾರವು ಶೀಘ್ರವಾಗಿ ಗುಣಮುಖವಾಗುವುದರ ಜೊತೆಗೆ, ಪುನಃ ಪುನಃ ಬಾಧಿಸುವುದನ್ನು ತಡೆಯಬಹುದು.
ಈ ಕ್ರಮಗಳನ್ನು ಭೇದಿಯಾದ ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆಯಾಗಿ ಅನುಸರಿಸ ಬಹುದು. ಅತಿಸಾರವನ್ನು ಎದುರಿಸಿದಾಗ ನಾವು ಸಾಮಾನ್ಯವಾಗಿ ಮಾಡುವ ಒಂದು ದೊಡ್ಡ ತಪ್ಪು - ಅದನ್ನು ತಕ್ಷಣ ಒಂದು ಮಾತ್ರೆಯಿಂದ ನಿಲ್ಲಿಸುವುದು. ಆದರೆ ಆಯುರ್ವೇ ದದ ದೃಷ್ಟಿಯಲ್ಲಿ ಇದು ಎಲ್ಲ ಸಂದರ್ಭಗಳಲ್ಲೂ ಸರಿಯಾದ ಕ್ರಮವಲ್ಲ.
ವಿಶೇಷವಾಗಿ ಆಮಾತಿಸಾರದಲ್ಲಿ, ದೇಹದೊಳಗೆ ಜೀರ್ಣವಾಗದ, ವಿಷಸ್ವರೂಪದ ಪದಾರ್ಥ ಗಳು ಇರುತ್ತವೆ. ಈ ಸಂದರ್ಭದಲ್ಲಿ ದೇಹವು ಸ್ವತಃ ಅವುಗಳನ್ನು ಹೊರ ಹಾಕಲು ಪ್ರಯತ್ನಿಸುತ್ತಿರುತ್ತದೆ. ಆದರೆ ನಾವು ಅದನ್ನು ಬಲವಂತವಾಗಿ ಮಾತ್ರೆಗಳ ಮೂಲಕ ನಿಲ್ಲಿಸಿದರೆ, ಆ ವಿಷಪದಾರ್ಥಗಳು ದೇಹದೊಳಗೇ ಉಳಿದುಕೊಳ್ಳುತ್ತವೆ. ನಂತರ ಅವು ದೇಹದ ಬೇರೆ ಬೇರೆ ಅಂಗಗಳಿಗೆ ಹರಿದು, ಅಲ್ಲಿ ಸಂಗ್ರಹವಾಗಿ ಭವಿಷ್ಯದಲ್ಲಿ ಇನ್ನಿತರ ರೋಗಗಳಿಗೆ ಕಾರಣವಾಗುವ ಸಾಧ್ಯತೆಯಿದೆ.
ಆದ್ದರಿಂದ, ಅತಿಸಾರದಲ್ಲಿ , ಇದು ಆಮಾತಿಸಾರವೇ ಅಥವಾ ಪಕ್ವಾತಿಸಾರವೇ ಎಂಬು ದನ್ನು ಗುರುತಿಸಬೇಕು. ಆಮಾತಿಸಾರವಾದಲ್ಲಿ, ದೇಹಕ್ಕೆ ಸ್ವಲ್ಪ ಸಮಯ ನೀಡಿ ಅದು ಸ್ವಾಭಾವಿಕವಾಗಿ ದೋಷಗಳನ್ನು ಹೊರ ಹಾಕಲು ಅವಕಾಶ ನೀಡುವುದು ಆರೋಗ್ಯಕರ ಮಾರ್ಗ.
ಪಕ್ವಾತಿಸಾರವಾದಲ್ಲಿ, ಕರುಳಿನ ಸಹಜ ಚಲನೆಯನ್ನು ಸರಿಪಡಿಸುವುದು ಮತ್ತು ನಂತರ ನಿಧಾನವಾಗಿ ಅತಿಸಾರವನ್ನು ನಿಯಂತ್ರಿಸುವುದು ಮುಖ್ಯ. ಒಟ್ಟಾರೆ, ಅತಿಸಾರದ ಚಿಕಿತ್ಸೆ ಯಲ್ಲಿ ಹಠಾತ್ ನಿಯಂತ್ರಣಕ್ಕಿಂತ ಸಮಗ್ರ ತಿಳುವಳಿಕೆ ಮುಖ್ಯ. ಕೇವಲ ಒಂದು ಮಾತ್ರೆ ಯಿಂದ ಸಮಸ್ಯೆಯನ್ನು ಮುಚ್ಚಿಹಾಕುವುದಕ್ಕಿಂತ, ಅದರ ಮೂಲವನ್ನು ಅರ್ಥಮಾಡಿ ಕೊಂಡು ಚಿಕಿತ್ಸೆ ನೀಡುವುದು ದೇಹದ ದೀರ್ಘಕಾಲೀನ ಆರೋಗ್ಯಕ್ಕೆ ಅತ್ಯುತ್ತಮ ಮಾರ್ಗ.