ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಮಂಕಿ ಶೋಲ್ಡರ್‌ ಕುಡಿದಿದ್ದೀರಾ ಅಂತ ಕೇಳಿ, ನಂತರ ಏನಂದ್ರು ಹೇಳಿ !

‘ವಿಲಿಯಂ ಗ್ರಾಂಟ್ ಅಂಡ್ ಸನ್ಸ್’ ಕಂಪನಿಯು ತನ್ನ ಹೊಸ ವಿಸ್ಕಿಗೆ ಈ ಹೆಸರನ್ನು ಇಡಲು ನಿರ್ಧರಿ ಸಿತು, ಅದರ ಹಿಂದೆ ಒಂದು ಉದಾತ್ತ ಉದ್ದೇಶವಿತ್ತು. ಆಧುನಿಕ ಕಾಲದಲ್ಲಿ ಯಂತ್ರಗಳು ಬಂದಿರುವು ದರಿಂದ ಈಗ ಯಾರೂ ‘ಮಂಕಿ ಶೋಲ್ಡರ್’ ಸಮಸ್ಯೆಯಿಂದ ಬಳಲುತ್ತಿಲ್ಲ. ಆದರೆ, ವಿಸ್ಕಿ ಉದ್ಯಮವು ಇಂದು ಈ ಮಟ್ಟಕ್ಕೆ ಬೆಳೆಯಲು ಅಂದು ಬೆವರು ಸುರಿಸಿದ ಆ ಹಳೆಯ ತಲೆಮಾರಿನ ಕಾರ್ಮಿಕರ ತ್ಯಾಗ ಮತ್ತು ಕಠಿಣ ಪರಿಶ್ರಮವೇ ಕಾರಣ.‌

ಮಂಕಿ ಶೋಲ್ಡರ್‌ ಕುಡಿದಿದ್ದೀರಾ ಅಂತ ಕೇಳಿ, ನಂತರ ಏನಂದ್ರು ಹೇಳಿ !

-

ಇದೇ ಅಂತರಂಗ ಸುದ್ದಿ

ಹೌದು, ಅಪ್ಪಟ ಕುಡುಕರನ್ನೂ, “ನೀವು ‘ಮಂಕಿ ಶೋಲ್ಡರ್’ ಕುಡಿದಿದ್ದೀರಾ?" ಎಂದು ಕೇಳಿ. ಅನುಮಾನವೇ ಬೇಡ, ತಕ್ಷಣ ಅವರ ಪ್ರತಿಕ್ರಿಯೆ ವಿಚಿತ್ರವಾಗಿರುತ್ತದೆ. ಕಾರಣ ಅನೇಕರು ‘ಮಂಕಿ ಶೋಲ್ಡರ್’ ಹೆಸರನ್ನೇ ಕೇಳಿಲ್ಲ. ಮಂಕಿ ಶೋಲ್ಡರ್ (Monkey Shoulder) ಎಂಬುದು ಒಂದು ‘ಗುಂಡು’ (ಮದ್ಯ, ಲಿಕ್ಕರ್). ಇದು ಸ್ಕಾಟ್ಲೆಂಡ್‌ನ ಪ್ರಸಿದ್ಧ ಬ್ಲೆಂಡೆಡ್ ಮಾಲ್ಟ್ ಸ್ಕಾಚ್ ವಿಸ್ಕಿಗಳಲ್ಲಿ ಒಂದು. ಈ ವಿಸ್ಕಿಯು ತನ್ನ ವಿಶಿಷ್ಟವಾದ ಹೆಸರು ಮತ್ತು ಬಾಟಲಿಯ ಮೇಲಿರುವ ಮೂರು ಲೋಹದ ಕೋತಿಗಳ ಚಿತ್ರದಿಂದಾಗಿ ಜಗತ್ತಿನಾದ್ಯಂತ ಪ್ರಸಿದ್ಧ. ‌

ಹಿಂದಿನ ಕಾಲದಲ್ಲಿ, ವಿಸ್ಕಿ ತಯಾರಿಕೆಯಲ್ಲಿ ‘ಮಾಲ್ಟಿಂಗ್’ (Malting) ಪ್ರಕ್ರಿಯೆಯು ಸಂಪೂರ್ಣ ವಾಗಿ ಕೈಯಿಂದಲೇ ನಡೆಯುತ್ತಿತ್ತು. ಬಾರ್ಲಿ ಧಾನ್ಯವನ್ನು ಮೊಳಕೆ ಬರಿಸಲು ದೊಡ್ಡ ನೆಲದ ಮೇಲೆ ಹರಡಲಾಗುತ್ತಿತ್ತು. ಈ ಬಾರ್ಲಿ ಸಮನಾಗಿ ಒಣಗಲು ಮತ್ತು ಗಾಳಿಯಾಡಲು ಕಾರ್ಮಿಕರು ದೊಡ್ಡ ಸಲಿಕೆಗಳನ್ನು ಬಳಸಿ ದಿನಕ್ಕೆ ಹಲವು ಬಾರಿ ಅದನ್ನು ಕೈಯಿಂದಲೇ ತಿರುವು ಹಾಕಬೇಕಿತ್ತು.

ಇದ ಅತ್ಯಂತ ಕಠಿಣ, ತಲೆನೋವಿನ ಕೆಲಸವಾಗಿತ್ತು. ಕಾರ್ಮಿಕರು ಗಂಟೆಗಟ್ಟಲೆ ಬಾಗಿಕೊಂಡು, ಭಾರವಾದ ಸಲಿಕೆಗಳಿಂದ ಧಾನ್ಯವನ್ನು ಎತ್ತಿ ಎಸೆಯುತ್ತಿದ್ದರು. ವರ್ಷಗಟ್ಟಲೆ ಹೀಗೆ ಒಂದೇ ಬದಿಯಲ್ಲಿ ಶ್ರಮ ಹಾಕುವುದರಿಂದ, ಅವರ ಹೆಗಲ ಮೂಳೆ ಮತ್ತು ಸ್ನಾಯುಗಳ ಮೇಲೆ ವಿಪರೀತ ಒತ್ತಡ ಬೀಳುತ್ತಿತ್ತು. ಇದರ ಪರಿಣಾಮವಾಗಿ, ಅವರ ಒಂದು ಹೆಗಲು ಸ್ವಲ್ಪ ಕೆಳಕ್ಕೆ ಜಾರಿ, ಕೈ ಉದ್ದವಾದಂತೆ ಕಾಣುತ್ತಿತ್ತು.

ನಡೆಯುವಾಗ ಅವರ ಕೈಗಳು ಕೋತಿಗಳ ಕೈಗಳಂತೆ ಜೋಲಾಡುತ್ತಿದ್ದವು. ಈ ದೈಹಿಕ ಸ್ಥಿತಿಯನ್ನು ಕಾರ್ಮಿಕರು ತಮಾಷೆಯಾಗಿ ಅಥವಾ ಸಂಕೇತವಾಗಿ ‘ಮಂಕಿ ಶೋಲ್ಡರ್’ (ಕೋತಿಯ ಭುಜ) ಎಂದು ಕರೆಯತೊಡಗಿದರು. ಇದು ಅಂದಿನ ಕಾಲದ ವಿಸ್ಕಿ ಕಾರ್ಮಿಕರು ಅನುಭವಿಸುತ್ತಿದ್ದ ಒಂದು ರೀತಿಯ ‘ವೃತ್ತಿಪರ ಗಾಯ’ ಆಗಿತ್ತು.

ಇದನ್ನೂ ಓದಿ: Vishweshwar Bhat Column: ರಾಷ್ಟ್ರವ್ಯಾಪಿ ಹಸ್ತಪ್ರತಿ ಸಮೀಕ್ಷೆ: ಇದು ದೇಶದ ಆತ್ಮ ಹುಡುಕುವ ಪ್ರಯತ್ನ !

‘ವಿಲಿಯಂ ಗ್ರಾಂಟ್ ಅಂಡ್ ಸನ್ಸ್’ ಕಂಪನಿಯು ತನ್ನ ಹೊಸ ವಿಸ್ಕಿಗೆ ಈ ಹೆಸರನ್ನು ಇಡಲು ನಿರ್ಧರಿಸಿತು, ಅದರ ಹಿಂದೆ ಒಂದು ಉದಾತ್ತ ಉದ್ದೇಶವಿತ್ತು. ಆಧುನಿಕ ಕಾಲದಲ್ಲಿ ಯಂತ್ರಗಳು ಬಂದಿರುವುದರಿಂದ ಈಗ ಯಾರೂ ‘ಮಂಕಿ ಶೋಲ್ಡರ್’ ಸಮಸ್ಯೆಯಿಂದ ಬಳಲುತ್ತಿಲ್ಲ. ಆದರೆ, ವಿಸ್ಕಿ ಉದ್ಯಮವು ಇಂದು ಈ ಮಟ್ಟಕ್ಕೆ ಬೆಳೆಯಲು ಅಂದು ಬೆವರು ಸುರಿಸಿದ ಆ ಹಳೆಯ ತಲೆಮಾರಿನ ಕಾರ್ಮಿಕರ ತ್ಯಾಗ ಮತ್ತು ಕಠಿಣ ಪರಿಶ್ರಮವೇ ಕಾರಣ.‌

ಅಂಥ ಅನಾಮಧೇಯ ಕಾರ್ಮಿಕರಿಗೆ ಗೌರವ ಸಲ್ಲಿಸಲು ಮತ್ತು ಅವರ ಪರಂಪರೆಯನ್ನು ನೆನಪಿಸಲು ಈ ವಿಸ್ಕಿಗೆ ‘ಮಂಕಿ ಶೋಲ್ಡರ್’ ಎಂದು ಹೆಸರಿಡಲಾಯಿತು. ಇದು ಕೇವಲ ಒಂದು ಹೆಸರಲ್ಲ, ಬದಲಾಗಿ ವಿಸ್ಕಿ ಇತಿಹಾಸದ ಒಂದು ಭಾಗವಾಗಿದೆ. ಇದರ ಬಾಟಲಿಯನ್ನು ಬೇರೆ ವಿಸ್ಕಿ ಬಾಟಲಿಗಳಿಗಿಂತ ಸ್ವಲ್ಪ ಭಿನ್ನವಾಗಿ, ಅಗಲವಾದ ಭುಜಗಳನ್ನು ಹೊಂದಿರುವಂತೆ ವಿನ್ಯಾಸಗೊಳಿಸ ಲಾಗಿದೆ. ಇದು ಆ ಹಳೆಯ ಕಾಲದ ಕೆಲಸಗಾರರ ಭುಜದ ಶಕ್ತಿಯನ್ನು ನೆನಪಿಸುತ್ತದೆ.

ಈ ಬ್ರ್ಯಾಂಡ್ ಲಾಂಚ್ ಮಾಡುವ ಮೊದಲು, ಮಾರ್ಕೆಟಿಂಗ್ ತಜ್ಞರು “ಇದಕ್ಕೆ ‘ಮಂಕಿ ಶೋಲ್ಡರ್’ ಅಂತ ಹೆಸರು ಬೇಡ, ಜನರಿಗೆ ಇದು ಒಂದು ಕಾಯಿಲೆಯ ಹೆಸರು ಅಂತ ಅನಿಸಬಹುದು ಅಥವಾ ಮಂಗನ ಹೆಸರು ಕೇಳಿ ನಗಬಹುದು" ಎಂದು ಹೇಳಿದ್ದರು. ಆದರೆ ಮಾಲೀಕರು ಹಠ ಹಿಡಿದು ಅದೇ ಹೆಸರನ್ನು ಇಟ್ಟರು. ಇಂದು ಅದೇ ವಿಚಿತ್ರವಾದ ಹೆಸರು ಈ ಬ್ರ್ಯಾಂಡ್ ಇಷ್ಟು ಪ್ರಸಿದ್ಧವಾಗಲು ಕಾರಣವಾಗಿದೆ.

Monkey_serve_bottle_shot

ಸಾಮಾನ್ಯವಾಗಿ ಹಳೆಯ ವಿಸ್ಕಿ ಪ್ರೇಮಿಗಳು “ವಿಸ್ಕಿಗೆ ಐಸ್ ಹಾಕಬೇಡಿ, ನೀರು ಹಾಕಬೇಡಿ" ಎಂದು ಚರ್ಚೆ ಮಾಡುತ್ತಾರೆ. ಆದರೆ ‘ಮಂಕಿ ಶೋಲ್ಡರ್’ ಕಂಪನಿಯವರು ಇದಕ್ಕೆ ವಿರುದ್ಧವಾಗಿ ಒಂದು ದೊಡ್ಡ ‘ಮಿಕ್ಸರ್ ಟ್ರಕ್’ ಅನ್ನು ತಯಾರಿಸಿದರು. ಇದು ನೋಡಲು ಸಿಮೆಂಟ್ ಮಿಕ್ಸರ್ ಥರ ಇರುತ್ತದೆ, ಆದರೆ ಅದರೊಳಗೆ ಸಾವಿರಾರು ಲೀಟರ್ ವಿಸ್ಕಿ ಕಾಕ್ಟೇಲ್ ಇರುತ್ತದೆ. ಅವರು ಇದನ್ನು ಹಬ್ಬಗಳಲ್ಲಿ ಮತ್ತು ಪಾರ್ಟಿಗಳಲ್ಲಿ ಬಳಸಿ, ‘ವಿಸ್ಕಿಯನ್ನು ಹೇಗೆ ಬೇಕಾದರೂ ಎಂಜಾಯ್ ಮಾಡಿ’ ಎಂದು ಜಗತ್ತಿಗೆ ತೋರಿಸಿಕೊಟ್ಟರು.

‘ಮಂಕಿ ಶೋಲ್ಡರ್’ ಬಾಟಲಿಯ ಹೆಗಲ ಮೇಲೆ ಮೂರು ಸಣ್ಣ ಲೋಹದ ಕೋತಿಗಳ ಚಿತ್ರವಿರುವು ದನ್ನು ನೀವು ಗಮನಿಸಬಹುದು. ಇದು ಕೇವಲ ವಿನ್ಯಾಸವಲ್ಲ, ಇದು ವಿಸ್ಕಿಯ ಮಿಶ್ರಣವನ್ನು ( Blend) ಪ್ರತಿನಿಧಿಸುತ್ತದೆ. ಮಂಕಿ ಶೋಲ್ಡರ್ ಎಂಬುದು ’ಬ್ಲೆಂಡೆಡ್ ಮಾಲ್ಟ್’ ವಿಸ್ಕಿ. ಅಂದರೆ, ಇದನ್ನು ಸ್ಕಾಟ್ಲೆಂಡ್‌ನ ಸ್ಪೈಸೈಡ್ (Speyside) ಪ್ರಾಂತ್ಯದ ಮೂರು ಪ್ರಸಿದ್ಧ ಸಿಂಗಲ್ ಮಾಲ್ಟ್ ಡಿಸ್ಟಿಲರಿಗಳಿಂದ ಪಡೆಯಲಾದ ವಿಸ್ಕಿಗಳನ್ನು ಬೆರೆಸಿ ತಯಾರಿಸಲಾಗುತ್ತದೆ- ‌ಮೊದಲನೆಯದು ‘ಗ್ಲೆನಿಡಿಚ್’, ಎರಡನೆಯದು ‘ದ ಬೆಲ್ವೆನಿ’ ಹಾಗೂ ಮೂರನೆಯದು, ‘ಕಿನಿನ್ವಿ’.‌

ಈ ಮೂರು ಪ್ರಸಿದ್ಧ ಡಿಸ್ಟಿಲರಿಗಳ ಸಮ್ಮಿಲನವನ್ನು ಸೂಚಿಸಲು ಬಾಟಲಿಯ ಮೇಲೆ ಮೂರು ಕೋತಿಗಳ ಲಾಂಛನವನ್ನು ಬಳಸಲಾಗಿದೆ. ‘ಮಂಕಿ ಶೋಲ್ಡರ್’ನ ವಿಶಿಷ್ಟ ಗುಣಗಳೇನು? ಈ ವಿಸ್ಕಿಯು ಸಾಂಪ್ರದಾಯಿಕವಾಗಿದ್ದರೂ, ತನ್ನ ಆಲೋಚನೆಯಲ್ಲಿ ಆಧುನಿಕವಾಗಿದೆ.

ALS

ಇದು ಅತ್ಯಂತ ಮೃದುವಾಗಿದ್ದು, ವೆನಿ, ಕಿತ್ತಳೆ ಹಣ್ಣು ಮತ್ತು ಜೇನುತುಪ್ಪದ ಸ್ವಾದವನ್ನು ಹೊಂದಿದೆ. ಇದರಲ್ಲಿ ಹೊಗೆಯ ವಾಸನೆ (Smokiness) ಕಡಿಮೆ ಇರುವುದರಿಂದ ಹೊಸದಾಗಿ ವಿಸ್ಕಿ ಕುಡಿಯುವವರಿಗೂ ಇದು ಇಷ್ಟವಾಗುತ್ತದೆ. ಸಾಮಾನ್ಯವಾಗಿ ಸ್ಕಾಚ್ ವಿಸ್ಕಿಯನ್ನು ನೇರವಾಗಿ ಅಥವಾ ಐಸ್ ಜತೆ ಕುಡಿಯಬೇಕು ಎಂಬ ನಿಯಮವಿದೆ. ಆದರೆ ‘ಮಂಕಿ ಶೋಲ್ಡರ್’ Mix it Up ಎಂಬ ಘೋಷಣೆಯೊಂದಿಗೆ ಬಂದಿದೆ.

ಇದನ್ನು ಕಾಕ್‌ಟೇಲ್‌ಗಳಲ್ಲಿ ಬಳಸಲು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಮೊದಲ ಬಾರಿಗೆ ಈ ವಿಸ್ಕಿಯನ್ನು ತಯಾರಿಸಿದಾಗ 27 ಬೇರೆ ಬೇರೆ ಮಿಶ್ರಣಗಳನ್ನು ಪರೀಕ್ಷಿಸಲಾಗಿತ್ತು. ಕೊನೆಗೆ 27ನೇ ನಂಬರ್‌ನ ಮಿಶ್ರಣ ಅತ್ಯುತ್ತಮವಾಗಿ ಬಂದಿದ್ದರಿಂದ ಇಂದಿಗೂ ಇದನ್ನು ತಯಾರಿಸುವಾಗ ಅದೇ ಫಾರ್ಮುಲಾವನ್ನು ಬಳಸಲಾಗುತ್ತದೆ.

ಸಾಮಾನ್ಯವಾಗಿ ಸ್ಕಾಚ್ ವಿಸ್ಕಿಗಳನ್ನು ಕುಡಿಯುವಾಗ ಅದಕ್ಕೆ ಏನನ್ನೂ ಬೆರೆಸಬಾರದು ಎಂಬ ನಿಯಮವಿತ್ತು (Sipping it neat). ಆದರೆ ‘ಮಂಕಿ ಶೋಲ್ಡರ್’ ಕಂಪನಿಯವರು, “ನಮ್ಮ ವಿಸ್ಕಿಯನ್ನು ನೀವು ಕಾಕ್‌ಟೇಲ್ ಮಾಡಿಯಾದರೂ ಕುಡಿಯಿರಿ ಅಥವಾ ಸೋಡಾ ಹಾಕಿಯಾದರೂ ಕುಡಿಯಿರಿ, ಒಟ್ಟಿನಲ್ಲಿ ಎಂಜಾಯ್ ಮಾಡಿ" ಎಂದು ಪ್ರಚಾರ ಮಾಡಿದರು. ಈ ಮೂಲಕ ಅವರು ವಿಸ್ಕಿ ಕುಡಿಯುವ ಹಳೆಯ ಸಂಪ್ರದಾಯವನ್ನೇ ಬದಲಿಸಿದರು.

ಇಂದು ‘ಮಂಕಿ ಶೋಲ್ಡರ್’ ವಿಶ್ವದ ‘ಅತ್ಯಂತ ಟ್ರೆಂಡಿ’ ಸ್ಕಾಚ್ ಬ್ರ್ಯಾಂಡ್ ಎಂದು ಗುರುತಿಸಿ ಕೊಂಡಿದೆ. ಬಾರ್ ಟೆಂಡರ್‌ಗಳ ನೆಚ್ಚಿನ ವಿಸ್ಕಿ ಇದಾಗಿದ್ದು, ಇದು ಹಳೆಯ ಸಂಪ್ರದಾಯ ವಾದಿ ವಿಸ್ಕಿ ಜಗತ್ತಿಗೆ ಒಂದು ಹೊಸ ಮತ್ತು ಚುರುಕಾದ ಮೆರುಗನ್ನು ನೀಡಿದೆ. ಅನೇಕರು ‘ಮಂಕಿ 47’ (Monkey 47 - ಇದು ಒಂದು ಜಿನ್ ಬ್ರ್ಯಾಂಡ್) ಮತ್ತು ‘ಮಂಕಿ ಶೋಲ್ಡರ್’ ಒಂದೇ ಕಂಪನಿ ಎಂದು ಅಂದು ಕೊಳ್ಳುತ್ತಾರೆ. ಆದರೆ ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ.

Fart

‘ಮಂಕಿ ಶೋಲ್ಡರ್’ ತನ್ನ ಹೆಸರನ್ನು ಹಳೆಯ ಕೆಲಸಗಾರರ ಶ್ರಮದಿಂದ ಪಡೆದರೆ, ‘ಮಂಕಿ 47’ ತನ್ನ ಹೆಸರನ್ನು ಒಬ್ಬ ಬ್ರಿಟಿಷ್ ಅಧಿಕಾರಿ ಸಾಕಿದ ಮಂಗನಿಂದ ಪಡೆದಿದೆ. ಇದು ಮದ್ಯದ ಲೋಕದ ಒಂದು ಕುತೂಹಲಕಾರಿ ಗೊಂದಲ.

‘ಮಂಕಿ ಶೋಲ್ಡರ್’ ವಿಸ್ಕಿ ಪ್ರಪಂಚದಲ್ಲಿ ಒಂದು ಕೂಲ ಮತ್ತು ಮಾಡರ್ನ್ ಬ್ರ್ಯಾಂಡ್ ಆಗಿ ಗುರುತಿಸಿ ಕೊಂಡಿದೆ. ಸಾಮಾನ್ಯವಾಗಿ ಹಳೆಯ ಕಾಲದ ಶ್ರೀಮಂತರು ಅಥವಾ ಸಂಪ್ರದಾಯವಾದಿ ಪ್ರಸಿದ್ಧ ವ್ಯಕ್ತಿಗಳು ಬಹಳ ವರ್ಷಗಳಷ್ಟು ಹಳೆಯದಾದ ‘ಸಿಂಗಲ್ ಮಾಲ್ಟ್’ ವಿಸ್ಕಿಗಳನ್ನು ಇಷ್ಟಪಟ್ಟರೆ, ಇತ್ತೀಚಿನ ಯುವ ತಲೆಮಾರಿನ ಸೆಲೆಬ್ರಿಟಿಗಳು ಮತ್ತು ಕ್ರಿಯೇಟಿವ್ ಫೀಲ್ಡ್‌‌ ನಲ್ಲಿರುವವರು ‘ಮಂಕಿ ಶೋಲ್ಡರ್’ ಅನ್ನು ಇಷ್ಟಪಡುತ್ತಾರೆ.

ನಿಮಗೆ ಆಶ್ಚರ್ಯವಾಗಬಹುದು, ಆದರೆ ಈ ವಿಸ್ಕಿಯ ಅತಿ ದೊಡ್ಡ ಅಭಿಮಾನಿಗಳು ಪ್ರಸಿದ್ಧ ಬಾರ್ ಟೆಂಡರ್‌ಗಳೇ! ಜಿಮ್ ಮೀಹನ್‌ನಂಥ ಪ್ರಪಂಚದ ನಂಬರ್ ಒನ್ ಮಿಕ್ಸಾಲಜಿಸ್ಟ್‌ಗಳು ‘ಮಂಕಿ ಶೋಲ್ಡರ್’ ಅನ್ನು ತಮ್ಮ ಮೊದಲ ಆಯ್ಕೆಯನ್ನಾಗಿ ಇಟ್ಟುಕೊಂಡಿದ್ದಾರೆ.

ಯಾಕೆಂದರೆ ಇದು ಯಾವುದೇ ಕಾಕ್‌ಟೇಲ್ ಜತೆ ಅದ್ಭುತವಾಗಿ ಬೆರೆಯುತ್ತದೆ. ಹಲವು ಹಾಲಿವುಡ್ ಪಾರ್ಟಿಗಳಲ್ಲಿ ಮತ್ತು ’ಬ್ಯಾಕ್‌ಸ್ಟೇಜ್’ ಲಾಂಜ್‌ಗಳಲ್ಲಿ ‘ಮಂಕಿ ಶೋಲ್ಡರ್’ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಬ್ರಿಟಿಷ್ ನಟರು ಮತ್ತು ಪಾಪ್ ಗಾಯಕರು (ಉದಾಹರಣೆಗೆ ಎಡ್ ಶೀರನ್‌ನಂಥ ಯುವ ಕಲಾವಿದರು) ಹೆಚ್ಚು ಗಂಭೀರವಲ್ಲದ, ಆದರೆ ಸ್ಟೈಲಿಶ್ ಆಗಿರುವ ಈ ಬ್ರ್ಯಾಂಡ್ ಅನ್ನು ಇಷ್ಟಪಡುತ್ತಾರಂತೆ.

ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಪ್ರಸಿದ್ಧರಾಗಿರುವ ‘ಲೈಫ್-ಸ್ಟೈಲ್’ ಬ್ಲಾಗರ್‌ಗಳಿಗೆ ‘ಮಂಕಿ ಶೋಲ್ಡರ್’ ನೆಚ್ಚಿನ ಬ್ರ್ಯಾಂಡ್. ಇದರ ಬಾಟಲಿ ವಿನ್ಯಾಸ ಫೋಟೋಗಳಿಗೆ ತುಂಬಾ ಚೆನ್ನಾಗಿ ಕಾಣಿಸುವುದರಿಂದ, ಇದು ಯುವ ಸೆಲೆಬ್ರಿಟಿಗಳ ನಡುವೆ ಫೇಮಸ್ ಆಗಿದೆ.

ಒಂದು ವಿಸ್ಕಿಯ ಹೆಸರು ಕೇಳಲು ವಿಚಿತ್ರವಾಗಿದ್ದರೂ, ಅದರ ಹಿಂದೆ ಒಂದು ಸುದೀರ್ಘ ಇತಿಹಾಸ ಮತ್ತು ಕಾರ್ಮಿಕರ ಬೆವರಿನ ಕಥೆಯಿದೆ ಎಂಬುದು ‘ಮಂಕಿ ಶೋಲ್ಡರ್’ನ ವಿಶೇಷ. ಈ ‘ಮಂಕಿ ಶೋಲ್ಡರ್’ ಕಥೆ ನಮಗೆ ಒಂದು ಪಾಠವನ್ನೂ ಕಲಿಸುತ್ತದೆ- ‘ಕಷ್ಟಪಟ್ಟು ಕೆಲಸ ಮಾಡುವವರ ಗುರುತು ಎಂದಿಗೂ ಅಳಿಯುವುದಿಲ್ಲ’.

ಮಂಕಿ ಶೋಲ್ಡರ್ ಬಗ್ಗೆ ತಮಾಷೆ

‘ಮಂಕಿ ಶೋಲ್ಡರ್’ ಹೆಸರೇ ಸ್ವಲ್ಪ ವಿಚಿತ್ರವಾಗಿರುವುದರಿಂದ, ಅದರ ಬಗ್ಗೆ ಕೆಲವು ತಮಾಷೆಗಳಿವೆ.

ಹೆಸರಿನ ಮಹಿಮೆ

ಹೆಂಡತಿ: ಏನ್ರೀ ಅದು, ದಿನಾ ಕುಡಿದು ಬಂದು ಮಂಗನ ಥರ ಆಡ್ತೀರಾ?

ಗಂಡ: ಅದಕ್ಕೇ ಕಣೇ ಇವತ್ತು ಬ್ರ್ಯಾಂಡ್ ಬದಲಾಯಿಸಿದ್ದೇನೆ, ‘ಮಂಕಿ ಶೋಲ್ಡರ್’ ಕುಡಿದಿದ್ದೇನೆ. ಈಗ ಮಂಗನ ಥರ ಆಡಲ್ಲ, ಮಂಗನ್ನ ಹೆಗಲ ಮೇಲೆ ಕೂರಿಸಿಕೊಂಡಿರೋ ಥರ ಫೀಲ್ ಆಗ್ತಿದೆ ಅಷ್ಟೇ!

ಬಾರ್‌ನಲ್ಲಿ ಸಂಭಾಷಣೆ

ಗ್ರಾಹಕ: ಸರ್, ಒಂದು ‘ಮಂಕಿ ಶೋಲ್ಡರ್’ ಕೊಡಿ.

ಬಾರ್ ಟೆಂಡರ್: ಸರ್, ಅದು ಸ್ವಲ್ಪ ಕಾಸ್ಟ್ಲಿ

ಗ್ರಾಹಕ: ಪರವಾಗಿಲ್ಲ ಕೊಡಿ, ಜೀವನ ಪೂರ್ತಿ ಸಂಸಾರ ಅನ್ನೋ ಮಂಗನ್ನ ಹೆಗಲ ಮೇಲೆ ಹೊತ್ತು ಸಾಕಾಗಿದೆ. ಇವತ್ತು ಅಟ್‌ಲೀ ಈ ಮಂಗನ ಶೋಲ್ಡರನ್ನಾದರೂ ಸವರಿ ಟೇ ಮಾಡ್ತೇನೆ.

ಪ್ರಾಣಿ ಸಂಗ್ರಹಾಲಯದ ಕಥೆ

ಒಬ್ಬ ವ್ಯಕ್ತಿ ‘ಮಂಕಿ ಶೋಲ್ಡರ್’ ಕುಡಿದು ಮೃಗಾಲಯಕ್ಕೆ ಹೋಗಿದ್ದನಂತೆ. ಕೋತಿಗಳ ಪಂಜರದ ಮುಂದೆ ನಿಂತು ಅಳಲು ಶುರು ಮಾಡಿದ. ಪಕ್ಕದಲ್ಲಿದ್ದವನು ಕೇಳಿದ, “ಯಾಕೆ ಅಳ್ತಿದ್ದೀಯಾ?". ಅದಕ್ಕವನು ಹೇಳಿದ, “ನನ್ನ ಹೆಗಲ ಮೇಲೆ ಇರಬೇಕಾದ ಕೋತಿನ ಯಾರೋ ಪಂಜರದಲ್ಲಿ ಹಾಕಿದ್ದಾರೆ ಅನ್ಸುತ್ತೆ, ಅದಕ್ಕೇ ಬಾಟಲಿ ಖಾಲಿಯಾದ್ರೂ ನನಗೆ ಕಿಕ್ ಹತ್ತುತ್ತಿಲ್ಲ!"

ಕುಡುಕರ ಫಿಲಾಸಫಿ

ಒಬ್ಬ ಕುಡುಕ ಇನ್ನೊಬ್ಬನಿಗೆ ಹೇಳಿದ: ನೋಡು ಮಗಾ, ಲೈಫ್‌ʼನಲ್ಲಿ ಏನೇ ಪ್ರಾಬ್ಲಂ ಬಂದ್ರೂ ಹೆಗಲ ಮೇಲೆ ಕೋತಿ ಇರಲಿ (ಮಂಕಿ ಶೋಲ್ಡರ್), ಆದ್ರೆ ತಲೆ ಮೇಲೆ ಕೋತಿ ಕೂರೋಕೆ ಬಿಡಬಾರದು!ಪಕ್ಕದಲ್ಲಿದ್ದವನು ಕೇಳಿದ: ಅಂದ್ರೆ ಏನು? ಅದಕ್ಕವನು ಹೇಳಿದ: ಬಾಟಲಿ ಕೈಯಲ್ಲಿ ಇರಲಿ, ಆದ್ರೆ ಹೆಂಡತಿ ಕೈಗೆ ಸಿಕ್ಕಿಬೀಳಬೇಡ ಅಂತ!

ವಿಚಿತ್ರ ಹೆಸರಿನ ‘ಗುಂಡು’ಗಳು

ದೇವರು ತಯಾರಿಸಿದ ಅತ್ಯಂತ ಅನುಪಮ ಮತ್ತು ಅದ್ಭುತ ಸೃಷ್ಟಿಗಳಲ್ಲಿ ವೈನ್ ಕೂಡ ಒಂದು ಎಂದು ವೈನ್ ಪ್ರಿಯರು ಅಭಿಮಾನದಿಂದ ಹೇಳುವುದನ್ನು ಕೇಳಿರಬಹುದು. ವೈನ್ ತಯಾರಿಸು ವುದು ಎಷ್ಟು ಕುಶಲವಾದ ಕಸುಬೋ, ಅವುಗಳಿಗೆ ಹೆಸರಿಡುವುದೂ ಅಷ್ಟೇ ಕುಶಲವಾದದ್ದು. ವೈನ್ ತಯಾರಿಕೆ ಎನ್ನುವುದು ವಿಜ್ಞಾನ ಮತ್ತು ಕಲೆಯ ಸಮ್ಮಿಶ್ರಣವಾದರೆ, ಅದಕ್ಕೆ ಹೆಸರಿಡುವುದು ಒಂದು ಪ್ರಬಲವಾದ ಮಾರ್ಕೆಟಿಂಗ್ ತಂತ್ರ.

ವೈನ್ ತಯಾರಿಕೆಯನ್ನು ‘ವಿನಿಫಿಕೇಶನ್’ (Vinification) ಎನ್ನಲಾಗುತ್ತದೆ. ಇದು ಕೇವಲ ರಸ ತೆಗೆಯುವ ಕೆಲಸವಲ್ಲ, ಬದಲಾಗಿ ಹಂತ ಹಂತದ ಜಾಗರೂಕತೆಯ ಪ್ರಕ್ರಿಯೆ. ಮಣ್ಣಿನ ಗುಣ, ಹವಾಮಾನ ಮತ್ತು ಭೌಗೋಳಿಕ ಪರಿಸರಗಳು ದ್ರಾಕ್ಷಿಯ ರುಚಿಯನ್ನು ನಿರ್ಧರಿಸುತ್ತವೆ. ಒಬ್ಬ ಕುಶಲ ತಯಾರಕ ಮೊದಲು ಈ ನೈಸರ್ಗಿಕ ಅಂಶಗಳನ್ನು ಅರ್ಥಮಾಡಿಕೊಳ್ಳುತ್ತಾನೆ.

ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವಲ್ಲಿ ಯೀಸ್ಟ್‌ನ ಪಾತ್ರ ದೊಡ್ಡದು. ಇಲ್ಲಿ ತಾಪಮಾನದಲ್ಲಿ ಒಂದು ಡಿಗ್ರಿ ವ್ಯತ್ಯಾಸವಾದರೂ ವೈನ್‌ನ ರುಚಿ ಕೆಡಬಹುದು. ಓಕ್ ಮರದ ಪೀಪಾಯಿಗಳಲ್ಲಿ ವೈನ್ ಅನ್ನು ವರ್ಷಗಳ ಕಾಲ ಇಡಲಾಗುತ್ತದೆ. ಮರದ ಸುವಾಸನೆ ವೈನ್‌ಗೆ ಸೇರಿ ಅದು ‘ಬಾಡಿ’ ಮತ್ತು ಟೆಕ್ಸ್‌ಚರ್’ ಪಡೆಯುತ್ತದೆ.

ವಿವಿಧ ತಳಿಯ ದ್ರಾಕ್ಷಿ ರಸಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಒಂದು ವಿಶಿಷ್ಟ ರುಚಿಯನ್ನು ಸೃಷ್ಟಿಸುವುದು ವೈನ್ ಮಾಸ್ಟರ್‌ನ ಅತಿ ದೊಡ್ಡ ಕಲೆ. ವೈನ್ ಬಾಟಲಿಯ ಮೇಲಿರುವ ಹೆಸರು ಗ್ರಾಹಕನ ಮೇಲೆ ಮೊದಲ ಪ್ರಭಾವ ಬೀರುತ್ತದೆ. ಹೀಗಾಗಿ ವೈನ್‌ಗೆ ಅತ್ಯಂತ ಜಾಗರೂಕವಾಗಿ ಹೆಸರಿಡುತ್ತಾರೆ. ವೈನ್ ಅನ್ನು ಕುಡಿಯುವವರು ವಿಶೇಷ ವ್ಯಕ್ತಿಗಳಾಗಿರುವುದರಿಂದ, ಅವುಗಳಿಗೆ ವಿಶೇಷವಾದ ಹೆಸರನ್ನು ಇಡುವುದು ಶತಮಾನಗಳಿಂದ ಅನುಸರಿಸಿಕೊಂಡು ಬಂದ ಪದ್ಧತಿ.

ಕೆಲವೊಮ್ಮೆ ವೈನ್ ತಯಾರಿಸಿದ ಬಳಿಕ ಅದಕ್ಕೆ ಏನೆಂದು ನಾಮಕರಣ ಮಾಡಬೇಕೆಂದು ಸಾವಿರಾರು ಜನರನ್ನು ಕೇಳುವುದುಂಟು. ಆ ಕಾರಣಕ್ಕಾಗಿಯೇ ದೊಡ್ಡ ದೊಡ್ಡ ಪಾರ್ಟಿಗಳನ್ನು ಏರ್ಪಡಿಸುತ್ತಾರೆ. 1990ರ ದಶಕದ ಕೊನೆಯಲ್ಲಿ ಫ್ರೆಂಚ್ ವೈನ್ ತಯಾರಕ ಥಿಯೆರಿ ಬೌಡಿನ್ ಮತ್ತು ಬ್ರಿಟಿಷ್ ವೈನ್ ವ್ಯಾಪಾರಿ ಗೈ ಆಂಡರ್ಸನ್ ಸೇರಿ ಒಂದು ಪ್ರಯೋಗ ಮಾಡಿದರು. ಯೀಸ್ಟ್‌ನೊಂದಿಗೆ ದೀರ್ಘಕಾಲ ಶೇಖರಿಸಿಟ್ಟ ವೈನ್ ಅನ್ನು ರುಚಿ ನೋಡಿದಾಗ, ಅದರ ಗಾಢವಾದ ಮತ್ತು ಶ್ರೀಮಂತ ರುಚಿಯನ್ನು ಕಂಡು ಥಿಯೆರಿ ಅವರು ಬ್ರಿಟಿಷ್ ಶೈಲಿಯ ಸ್ಲ್ಯಾಂಗ್ ಬಳಸಿ Now, that's a fat bastard ಎಂದು ಉದ್ಗರಿಸಿದರು. ಮುಂದೆ ಅದಕ್ಕೆ ಫ್ಯಾಟ್ ಬಾಸ್ಟರ್ಡ್ ಎಂದೇ ಹೆಸರಿಡಲಾಯಿತು.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟೋನ್ ಬ್ರೂಯಿಂಗ್ 1997ರಲ್ಲಿ ಒಂದು ಬಿಯರನ್ನು ಮಾರುಕಟ್ಟೆಗೆ ತಂದಿತು. ಅದರ ಹೆಸರು Arrogant Bastard Ale ಅಛಿ. ಹೆಸರೇ ಸೂಚಿಸುವಂತೆ ಈ ಬಿಯರ್ ತುಂಬಾ ಒರಟಾಗಿ ವರ್ತಿಸುತ್ತದೆ. ಇದರ ಬಾಟಲಿಯ ಮೇಲೆ ಇರುವ ಲೇಬಲ್ ಗ್ರಾಹಕರಿಗೆ ಸವಾಲು ಹಾಕುತ್ತದೆ.

ಅಲ್ಲಿ ಹೀಗೆ ಬರೆಯಲಾಗಿದೆ- This is an aggressive beer. You probably won't like it. It is quite doubtful that you have the taste or sophistication to be able to appreciate an ale of this quality and depth.

ಇದನ್ನು ಬಿಯರ್ ಲೋಕದ ಒಂದು ‘ಬಂಡಾಯ’ ಅಂತಾರೆ. ಯಾಕೆಂದರೆ ಸಾಮಾನ್ಯವಾಗಿ ಕಂಪನಿಗಳು ‘ನಮ್ಮ ಉತ್ಪನ್ನ ಅದ್ಭುತವಾಗಿದೆ, ದಯವಿಟ್ಟು ಖರೀದಿಸಿ’ ಎಂದು ಕೇಳಿಕೊಳ್ಳುತ್ತವೆ. ಆದರೆ ಅರೋಗೆಂಟ್ ಬಾಸ್ಟರ್ಡ್ ಬ್ರಾಂಡ್ ‘ಇದು ನಿಮಗಾಗಿ ಅಲ್ಲ, ಇದನ್ನು ಕುಡಿಯುವ ತಾಕತ್ತು ನಿಮಗಿಲ್ಲ’ ಎಂದು ಹೇಳುವ ಮೂಲಕ ಜನರ ಕುತೂಹಲವನ್ನು ಕೆರಳಿಸಿತು. ಈ ‘ರಿವರ್ಸ್ ಸೈಕಾಲಜಿ’ ವಿಪರೀತ ಯಶಸ್ಸು ಕಂಡಿತು.

ಇದರ ಬಾಟಲಿಯ ಮೇಲೆ ‘ಗಾರ್ಗೋಯ್ಲ್’ ಎಂಬ ವಿಚಿತ್ರಪ್ರಾಣಿಯ ಚಿತ್ರವಿದೆ. ಪುರಾಣಗಳ ಪ್ರಕಾರ ಗಾರ್ಗೋಯ್ಲ್‌ಗಳು ಕೆಟ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತವೆ. ಇಲ್ಲಿ ಈ ಲೋಗೋ ‘ಕಳಪೆ ಗುಣಮಟ್ಟದ ಬಿಯರ್‌ಗಳಿಂದ ನಿಮ್ಮನ್ನು ರಕ್ಷಿಸುತ್ತೇನೆ’ ಎಂಬ ಅರ್ಥವನ್ನು ನೀಡುತ್ತದೆ.

ಇದೆಂಥ ಹೆಸರು?!

ವೈನ್ ಲೋಕದಲ್ಲಿ ಅತ್ಯಂತ ತಮಾಷೆಯ ಮತ್ತು ವಿಲಕ್ಷಣ ಹೆಸರಿನ ವೈನ್ ಇದೆ. ಅದರ ಹೆಸರು ಓಲ್ಡ್ ಪಾರ್ಟ್! ಇದು ಗಂಭೀರವಾದ ವೈನ್ ಸಂಸ್ಕೃತಿಯನ್ನು ಸ್ವಲ್ಪ ಲೇವಡಿ ಮಾಡುವ ಉದ್ದೇಶ ದಿಂದ ಹುಟ್ಟಿಕೊಂಡಿದ್ದು. ಇಂಗ್ಲಿಷ್‌ನಲ್ಲಿ ’Old Fart’ ಎನ್ನುವ ಪದವನ್ನು ಸಾಮಾನ್ಯವಾಗಿ ‘ತುಂಬಾ ಹಳೆಯ ವಿಚಾರದ ಅಥವಾ ವಿಚಿತ್ರವಾಗಿ ವರ್ತಿಸುವ ವಯಸ್ಸಾದ ವ್ಯಕ್ತಿ’ ಎಂಬ ಅರ್ಥದಲ್ಲಿ ತಮಾಷೆಯಾಗಿ ಬಳಸಲಾಗುತ್ತದೆ.

ವೈನ್ ಲೋಕವು ಸಾಮಾನ್ಯವಾಗಿ ತುಂಬಾ ಗಂಭೀರ ಮತ್ತು ಶ್ರೀಮಂತಿಕೆಯ ಸಂಕೇತವೆಂದು ಪರಿಗಣಿಸಲ್ಪಡುತ್ತದೆ. ಆದರೆ, ಈ ಬ್ರಾಂಡ್ ಆ ಗಂಭೀರತೆಯನ್ನು ಬದಿಗಿಟ್ಟು, ವೈನ್ ಕುಡಿಯುವು ದನ್ನು ಒಂದು ಮೋಜಿನ ವಿಷಯವನ್ನಾಗಿ ಮಾಡಿದೆ.

ಈ ವೈನ್ ತನ್ನ ರುಚಿಗಿಂತ ತನ್ನ ಹೆಸರಿನಿಂದಲೇ ಹೆಚ್ಚು ಮಾರಾಟವಾಗುತ್ತದೆ. ಸ್ನೇಹಿತರ ನಿವೃತ್ತಿ ಸಮಾರಂಭಕ್ಕೆ, 50 ಅಥವಾ 60ನೇ ವರ್ಷದ ಹುಟ್ಟುಹಬ್ಬಕ್ಕೆ ತಮಾಷೆಯ ಉಡುಗೊರೆಯಾಗಿ ನೀಡಲು ಜನರು ಇದನ್ನು ಹೆಚ್ಚಾಗಿ ಖರೀದಿಸುತ್ತಾರೆ. ಪಾರ್ಟಿಗಳಲ್ಲಿ ಸಂಭಾಷಣೆಯನ್ನು ಆರಂಭಿ ಸಲು ಇದು ಅತ್ಯುತ್ತಮ ಬಾಟಲಿ.