Dr Maithri Bhat Column: ಮಾತನ್ನು ಆಡುವ ಮುನ್ನ ಇರಲಿ ಒಂದಿಷ್ಟು ಎಚ್ಚರ !
ಅನಗತ್ಯವಾಗಿ ಮಾತಾಡುವುದು, ಅಗತ್ಯಕ್ಕೆ ತಕ್ಕಂತೆ ಮಾತಾಡುವುದು ಮತ್ತು ಅಗತ್ಯವಿದ್ದಾ ಗಲೂ ಮಾತಾಡದೆ ಇರುವುದು ಇವು ಮಾತಿನ ಮಹತ್ವ ಎಲ್ಲಿ, ಎಷ್ಟು ಎಂಬುದನ್ನು ತಿಳಿಸುತ್ತವೆ. ಒಟ್ಟಿನಲ್ಲಿ ಮಾತಿನ ಅಗತ್ಯ ಯಾವಾಗ, ಎಲ್ಲಿ, ಹೇಗೆ, ಎಷ್ಟು ಎಂಬುದನ್ನು ತಿಳಿಯುವುದು ಮುಖ್ಯ.
-
ಮಾತಿನ ಮಂಟಪ
ಡಾ.ಮತ್ರಿ ಭಟ್, ವಿಟ್ಲ
ಸಂಸ್ಕೃತ ಅಲಂಕಾರಿಕ ದಂಡಿಯು “ಈ ಮಾತೆಂಬ ಬೆಳಕು ಲೋಕವನ್ನು ಬೆಳಗದಿದ್ದರೆ ಜಗತ್ತೆಲ್ಲ ಕತ್ತಲೆಯಲ್ಲಿ ಮುಳುಗಿರುತ್ತಿತ್ತು" ಎಂದಿದ್ದಾನೆ. ಈ ಹೇಳಿಕೆಯು ಮಾತಿನ ಮಹತ್ವ ಏನೆಂಬುದನ್ನು ತಿಳಿಸುತ್ತದೆ. ಮಾನವನು ತನ್ನ ಮಾತು ಮತ್ತು ಆಲೋಚನಾ ಶಕ್ತಿಯಿಂದಲೇ ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ.
ಮಾತಿಲ್ಲದ ಪ್ರಪಂಚವನ್ನು ಊಹಿಸಲೂ ಸಾಧ್ಯವಿಲ್ಲ. ಮೌನದಲ್ಲಿ ಸಂಚಯವಾಗುತ್ತಾ ಹೋಗುವ ನಮ್ಮ ಶಕ್ತಿಯು ಮಾತಿಗೆ ದ್ರವ್ಯವನ್ನು ಒದಗಿಸುತ್ತದೆ. ಹಾಗಾಗಿ ಮಾತು ಮತ್ತು ಮೌನಗಳು ಒಂದೇ ನಾಣ್ಯದ ಎರಡು ಮುಖಗಳು. ಮಾತು ಎಂಬುದು ಪ್ರಕಟಿತ ಮೌನ ವಾದರೆ, ಮೌನವೆಂಬುದು ಅದುಮಿಟ್ಟ ಮಾತು.
‘ಮಾತು ಬೆಳ್ಳಿ, ಮೌನ ಬಂಗಾರ’ ಎಂಬ ಮಾತಿದೆ. ಆದರೆ ಇಂದು ಈ ಜಗವನ್ನು ಆಳುತ್ತಿರು ವುದು ಮಾತೇ ಹೊರತು ಮೌನವಲ್ಲ. ‘ಮಾತೇ ಮುತ್ತು, ಮಾತೇ ಮೃತ್ಯು’ ಎಂಬ ಮಾತೂ ಇದೆ. ಮಾತಾನಾಡುವಾಗ ನಮ್ಮ ನಾಲಗೆಯ ಮೇಲೆ ಹಿಡಿತವಿರಬೇಕು. ನಾವು ಎಚ್ಚರತಪ್ಪಿ ಆಡುವ ಮಾತಿನ ಪರಿಣಾಮ ಏನು ಬೇಕಾದರೂ ಆಗಬಹುದು. ಅದು ಮನಸ್ಸಿಗೆ ನೋವು, ಸಿಟ್ಟು, ಕಿರಿಕಿರಿ ಉಂಟು ಮಾಡಬಹುದು. ಯಾವುದೋ ಸಂದರ್ಭದಲ್ಲಿ ತಪ್ಪಿಯೋ, ಉದ್ದೇಶಪೂರ್ವಕವಾಗಿಯೋ ಆಡಿದ ಮಾತು ಕಾಲಾನಂತರದಲ್ಲಿ ನಮ್ಮ ಕೊರಳಿಗೆ ಉರುಳಾಗಲೂಬಹುದು.
ಅನಗತ್ಯವಾಗಿ ಮಾತಾಡುವುದು, ಅಗತ್ಯಕ್ಕೆ ತಕ್ಕಂತೆ ಮಾತಾಡುವುದು ಮತ್ತು ಅಗತ್ಯವಿದ್ದಾ ಗಲೂ ಮಾತಾಡದೆ ಇರುವುದು ಇವು ಮಾತಿನ ಮಹತ್ವ ಎಲ್ಲಿ, ಎಷ್ಟು ಎಂಬುದನ್ನು ತಿಳಿಸುತ್ತವೆ. ಒಟ್ಟಿನಲ್ಲಿ ಮಾತಿನ ಅಗತ್ಯ ಯಾವಾಗ, ಎಲ್ಲಿ, ಹೇಗೆ, ಎಷ್ಟು ಎಂಬುದನ್ನು ತಿಳಿಯುವುದು ಮುಖ್ಯ.
ಇದನ್ನೂ ಓದಿ: Dr Maithri Bhat Column: ಕರುಳುಬಳ್ಳಿಯ ನಂಟು
ಹಾಗಾಗಿ ನಾವು ಆಡಲೇಬೇಕಿರುವ ಮತ್ತು ಆಡದಿದ್ದರೂ ತೊಂದರೆಯಾಗದ ಮಾತುಗಳ ಬಗ್ಗೆ ಖಚಿತ ನಿಲುವು ಹೊಂದಿರುವುದು ಮುಖ್ಯವಾಗಿದೆ. ವಚನಕಾರರು ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದರೆ, ಬಸವಣ್ಣನವರಂತೂ ‘ನುಡಿದರೆ ಮುತ್ತಿನಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು, ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ’ ಎಂದಿದ್ದಾರೆ.
ಒಂದೆಡೆ ‘ನುಡಿದಂತೆ ನಡೆ’ ಎಂದು ಶರಣರು ಹೇಳಿದರೆ, ತತ್ವಪದಕಾರ ಕಡಕೋಳ ಮಡಿವಾಳಪ್ಪನವರು ‘ಮೂಕಾಗಿರಬೇಕೋ, ಜಗದೊಳು ಜ್ವಾಕ್ಯಾಗಿರಬೇಕೋ’ ಎಂದು ಹಾಡಿದ್ದಾರೆ.
ಸರ್ವಜ್ಞನ ‘ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಕೊಲೆಯು, ಮಾತಿನಿಂ ಸರ್ವಸಂಪ ದವು ಲೋಕಕ್ಕೆ, ಮಾತೇ ಮಾಣಿಕವು ಸರ್ವಜ್ಞ’ ಎಂಬ ತ್ರಿಪದಿಯಂತೂ ಜನಜನಿತವಾಗಿದೆ.
ಆಧುನಿಕ ಕನ್ನಡ ಕಾವ್ಯದಲ್ಲೂ ಮಾತಿನ ಪ್ರಸ್ತಾಪವಿದ್ದು, ಶಬ್ದಗಾರುಡಿಗರಾದ ವರಕವಿ ದ.ರಾ. ಬೇಂದ್ರೆಯವರು ‘ಮಾತು-ಮಾತು ಮಥಿಸಿ ಬಂತು ನಾದದ ನವನೀತ’ ಎಂದಿದ್ದಾರೆ. ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು ‘ನೀನಾಡುವ ಮಾತು ಹೀಗಿರಲಿ ಗೆಳೆಯ, ಮೃದು ವಚನ ಮೂಲೋಕ ಗೆಲ್ಲುವುದು ತಿಳಿಯ’ ಎಂದಿದ್ದಾರೆ.
ಮಾತಿನಲ್ಲಿ ಶಿಷ್ಟಾಚಾರದ ಮಾತು, ಅರ್ಥಹೀನ ಮಾತು, ಪಟ್ಟಾಂಗದ ಮಾತು, ಮಾತ್ಸರ್ಯದ ಮಾತು, ಹುಸಿ ಸಹಾನುಭೂತಿಯ ಮಾತುಗಳಿವೆ. ಅದೇನೇ ಇರಲಿ, ನಾವಾಡುವ ಪ್ರತಿಯೊಂದು ಮಾತೂ ನಮ್ಮ ವ್ಯಕ್ತಿತ್ವ ಎಂಬ ಕಟ್ಟಡವನ್ನು ನಿರ್ಮಾಣ ಮಾಡುವ ಒಂದೊಂದು ಇಟ್ಟಿಗೆಯಂತೆ ಎನ್ನುವುದಂತೂ ನಿಜ.
ಬದುಕಿನಲ್ಲಿ ಈ ಮಾತು ಎನ್ನುವುದು ಒಂದು ಕಲೆ. ಅದನ್ನು ಕಲಾತ್ಮಕವಾಗಿ ಬಳಸಲು ಗೊತ್ತಿರಬೇಕು ಅಷ್ಟೇ. ಏಕೆಂದರೆ, ನಮ್ಮ ಜೀವನದ ನಿಜವಾದ ಶತ್ರು ಮತ್ತು ಮಿತ್ರ ಅಂದರೆ ಅದು ನಮ್ಮ ಮಾತು. ಯೋಚಿಸಿ ಆಡಿದ ಮಾತು ಒಳ್ಳೆಯ ಪರಿಣಾಮವನ್ನು ಉಂಟು ಮಾಡಿದರೆ, ಸಿಟ್ಟಿನಿಂದ ಆಡಿದ ಮಾತು ಕೆಟ್ಟ ಪರಿಣಾಮವನ್ನು ಬೀರುವುದರೊಂದಿಗೆ ನಾವು ತಲೆಯೆತ್ತಿ ಓಡಾಡದಂತೆ ಮಾಡಿಬಿಡುತ್ತದೆ.
ಹಾಗಾಗಿ ಮಾತುಗಳನ್ನು ಆಡುವಾಗ ಆದಷ್ಟು ಎಚ್ಚರವನ್ನು ವಹಿಸಬೇಕು. ನಾವಾಡುವ ಪ್ರತಿಯೊಂದು ಮಾತೂ ಮುತ್ತಿನ ತರಹ ಇರಬೇಕು ಎಂದೇನಿಲ್ಲ. ಆದರೆ ಬೇರೆಯವರ ಮನಸ್ಸಿಗೆ ನೋವನ್ನು ಉಂಟುಮಾಡುವ ತರಹ ಇರಬಾರದು ಅಷ್ಟೇ. ಮಾತುಗಳು ಕೆಲವೊಮ್ಮೆ ಮೌನಕ್ಕೆ, ಕೆಲವೊಮ್ಮೆ ವಿಮರ್ಶೆಗೆ, ಕೆಲವೊಮ್ಮೆ ಜಗಳಕ್ಕೆ, ಕೆಲವೊಮ್ಮೆ ಸನ್ಮಾನಕ್ಕೆ ಕಾರಣವಾಗುತ್ತವೆ.
ಒಂದು ಇಕ್ಕಟ್ಟಿನ ಸಂದರ್ಭದಲ್ಲಿ ಹೇಳಿದ ಸುಳ್ಳು, ನಮ್ಮನ್ನು ದುರಂತದ ಸ್ಥಿತಿಗೆ ತಂದೊಡ್ಡಬಹುದು. ಹಾಗಾಗಿ ನಾವು ಮಾತನಾಡುವ ಮುನ್ನ ಯೋಚಿಸಿ ಮಾತನಾಡ ಬೇಕು. ‘ಮಾತು ಆಡಿದರೆ ಹೋಯಿತು, ಮಾತು ಮನೆ ಕೆಡಿಸಿತು, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಜಾಣನುಡಿಗಳನ್ನು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಮನುಷ್ಯನಿಗೆ ಇರುವ ಪ್ರಮುಖ ಆಸ್ತಿ, ದೈವದತ್ತವಾಗಿ ಬಂದವರ ಈ ಮಾತು. ಆದರೆ ಎಲುಬಿಲ್ಲದ ನಾಲಿಗೆ ಹೇಗೆ ಬೇಕಾದರೂ ಹೊರಳಬಹುದು. ಈ ಮಾತು ಎನ್ನುವುದು ಒಂದು ರೀತಿಯಲ್ಲಿ ಬಿಟ್ಟ ಬಾಣದಂತೆ. ಕಂಪ್ಯೂಟರ್ ಕೀಲಿಮಣೆಯಲ್ಲಿರುವ ಹಾಗೆ ‘ಅನ್ ಡೂ’ ಅಥವಾ ‘ಡಿಲೀಟ್’ ಬಟನ್ ಈ ಮಾತಿಗಿಲ್ಲ. ಆಡಿದ ನಂತರ ‘ಕ್ಷಮಿಸಿ’ ಎಂದರೂ ಆ ಮಾತು ವಾಪಸ್ ಹೋಗಲಾರದು.
ಅದಕ್ಕಾಗಿಯೇ ‘ಆಚಾರವಿಲ್ಲದ ನಾಲಗೆ, ನಿನ್ನ ನೀಚಬುದ್ಧಿಯ ಬಿಡು ನಾಲಗೆ’ ಎಂದಿದ್ದಾರೆ ದಾಸರು. ‘ಮುತ್ತಿನಂಥ ಮಾತು’ ಎಂದೂ ಹೇಳುತ್ತಾರೆ. ಅಂತೆಯೇ, ಮೌನದ ಮಾತೂ ಒಂದಿದೆ. ಹೃದಯದ ಭಾವನೆಗಳಿಗೆ ಮಾತಿನ ರೂಪ ಕೊಡಲಾರದೇ ಹೋದಾಗ ಅರಿವಿಗೆ ಬರುವುದೇ ಮುಖದಲ್ಲಿನ ಭಾವನೆ. ಅದೇ ಮೌನದ ಮಾತು.
ಈ ಮನದಾಳದ ಮಾತಿಗೆ ಭಾಷೆ ಬೇಕಿಲ್ಲ. ನಾವು ಮಾತನಾಡಲೇಬೇಕು. ಮಾತನಾಡದೇ ಸುಮ್ಮನೆ ಕುಳಿತು ನಮಗ್ಯಾರಿಗೂ ಅಭ್ಯಾಸವಿಲ್ಲ. ಏನಾದರೊಂದು ಹೇಳುತ್ತಲೇ ಇರುತ್ತೇವೆ. ನಮ್ಮನ್ನು ನಾವೇ ಹೊಗಳಿಕೊಳ್ಳುವುದರಿಂದ ಆರಂಭಗೊಂಡು ಇನ್ನೊಬ್ಬರನ್ನು ತೆಗಳುವ ತನಕವೂ ನಮ್ಮ ಮಾತು ನಿಲ್ಲುವುದಿಲ್ಲ.
ಮಾತಿನ ವಿಚಾರದಲ್ಲಿರುವ ಸ್ವಾತಂತ್ರ್ಯವೇ ಕೆಲವರು ತಮಗೆ ಅನಿಸಿದ್ದನ್ನು ಮಾತನಾಡಿ ಸಂಕಷ್ಟಕ್ಕೀಡಾಗಲು ಅಥವಾ ಬೇರೆಯವರನ್ನು ಸಂಕಷ್ಟಕ್ಕೀಡು ಮಾಡಲು ಕಾರಣ. ಅದರಲ್ಲೂ ‘ಹೊಡೆದ ಏಟನ್ನು ಮರೆಯಬಹುದು, ಆಡಿದ ಮಾತನ್ನು ಮರೆಯಲಾಗದು’ ಎಂಬ ಹಿರಿಯರ ಮಾತುಗಳು ಸರ್ವಕಾಲಕ್ಕೂ ಪ್ರಸ್ತುತ. ಆದರೆ ಕೆಲವರ ಮಾತಿನಿಂದ ಮನೆ, ಮನ ಎರಡೂ ಹಾಳಾಗುತ್ತವೆ.
ಒಬ್ಬರತ್ತ ಬೆರಳು ತೋರಿಸಿ ಮಾತನಾಡುವುದು ಕಷ್ಟವಲ್ಲ, ಅದರ ಪರಿಣಾಮ ಬಲು ಘೋರ. ದಿನನಿತ್ಯ ಭೇಟಿಯಾಗುವ ವ್ಯಕ್ತಿಗಳನ್ನು ಗಮನಿಸಿ ನೋಡಿದರೆ ಒಬ್ಬೊಬ್ಬರ ಮಾತಿನ ವರಸೆ ಒಂದೊಂದು ರೀತಿಯಲ್ಲಿರುವುದು ಅರಿವಾಗುತ್ತದೆ. ಬಹಳಷ್ಟು ಸಲ ಮಾತಿನ ಭರಾಟೆಯಲ್ಲಿ ಹಿಂದೆ ಮುಂದೆ ಯೋಚಿಸದೆ ಏನೇನೋ ಮಾತನಾಡಿ ಬಿಡುತ್ತೇವೆ. ಆದರೆ ಆ ಮಾತು ನಮ್ಮ ಎದುರಿಗೆ ಇರುವ ವ್ಯಕ್ತಿಯ ಮನಸ್ಸಿಗೆ ಎಷ್ಟು ಘಾಸಿಯನ್ನುಂಟು ಮಾಡಿದೆ ಎಂಬ ಪರಿವೆಯೇ ನಮಗಿರುವುದಿಲ್ಲ. ಅದರಲ್ಲೂ ಮಾತಿನ ಭರದಲ್ಲಿ ಮತ್ತೊಬ್ಬರನ್ನು ಅಪಹಾಸ್ಯ, ಅಪಮಾನ, ತೇಜೋವಧೆ ಮಾಡುವುದು ಕೆಲವರ ಚಾಳಿ.
ಆದರೆ ಹೀಗೆ ಮಾತಿನಿಂದ ಬೇರೆಯವರನ್ನು ಚುಚ್ಚಿ ನಾವು ಖುಷಿಪಡುವುದು ನಿಜಕ್ಕೂ ಒಳ್ಳೆಯದಲ್ಲ. ನಾವು ಬೇರೆಯವರನ್ನು ತೆಗಳಿ ಸಂತೋಷಪಟ್ಟರೆ ನಮ್ಮನ್ನು ತೆಗಳಲು ಮತ್ತೊಬ್ಬರಿರುತ್ತಾರೆ. ಇದರೊಂದಿಗೆ ಆ ತಕ್ಷಣಕ್ಕೆ ಮಾತನಾಡಬೇಕೆಂಬ ಕಾರಣಕ್ಕೆ ಮಾತ್ರವಲ್ಲ, ಬೇರೆಯವರ ಗಮನವನ್ನು ತಮ್ಮತ್ತ ಸೆಳೆಯುವುದಕ್ಕೋಸ್ಕರ ಕಥೆಕಟ್ಟಿ ಮಾತನಾಡುವುದನ್ನು ರೂಢಿಸಿಕೊಂಡ ಜನರಿದ್ದಾರೆ.
ಆದರೆ ಅವರ ಬಾಯಿಚಪಲಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ ಎಂಬ ಅರಿವು ಅವರಿಗಿರುವುದಿಲ್ಲ. ಹಾಗೆ ನೋಡಿದರೆ ನಾವೆಲ್ಲರೂ ಮಾತುಗಾರರೇ. ಅದರಲ್ಲೂ ಕೆಲವರಿಗೆ ಮಾತೇ ಜೀವಾಳ. ಹಾಗೆಂದು ಆಲೋಚಿಸದೇ ಮಾತನಾಡಿ ಸಣ್ಣವರಾಗುವುದು ನಿಜಕ್ಕೂ ಒಳ್ಳೆಯ ಲಕ್ಷಣವಲ್ಲ. ಒಬ್ಬ ವ್ಯಕ್ತಿ ತನ್ನ ಘನತೆಯನ್ನು ಉಳಿಸಿಕೊಳ್ಳಬೇಕಾದರೆ ಆತ ಆಡುವ ಮಾತುಗಳಿಗೂ ತೂಕವಿರಬೇಕು.
ಅಷ್ಟೇ ಅಲ್ಲ, ಆಯಾಯ ಸನ್ನಿವೇಶಗಳನ್ನು ಅರಿತು ಮಾತನಾಡುವ ಕೌಶಲವನ್ನು ಹೊಂದಿರಬೇಕು. ಏನೇ ಆಗಲಿ, ಮನುಷ್ಯ ಮನುಷ್ಯರನ್ನು ಬೆಸೆಯುವ ಕೊಂಡಿಯೇ ಈ ಮಾತು ಅಥವಾ ಸಂವಹನ. ನಮ್ಮ ಬೆಸುಗೆ ವರುಷಗಳ ಕಾಲ ಉಳಿಯಬೇಕಾದರೆ ನಮ್ಮ ಮಾತುಗಳ ಮೇಲೆ ಹಿಡಿತವಿರಬೇಕು.
ಮಾತಿಗೆ ಮನಸ್ಸುಗಳನ್ನು ಬೆಸೆಯುವ ಮತ್ತು ಒಡೆಯುವ ಎರಡೂ ಸಾಮರ್ಥ್ಯವಿದೆ. ಮಾತು ನಮ್ಮ ಭಾವನೆಗಳ ಪ್ರತಿಬಿಂಬ. ಮಾತೊಂದು ಶಕ್ತಿ. ಆದುದರಿಂದ ಅದನ್ನು ಯುಕ್ತಿಯಿಂದ ಪ್ರಯೋಗಿಸೋಣ. ಹೀಗಾಗಿ ನಾವು ಆಡುವ ಮಾತು ಸುಂದರವಾಗಿರಲಿ, ಕೇಳುವವರ ಕಿವಿಗೆ ಇಂಪಾಗಿರಲಿ. ಆಡುವ ಪ್ರತಿಯೊಂದು ಮಾತೂ ಮೌಲ್ಯಯುತ ವಾಗಿರಲಿ. ನಮ್ಮ ಮಾತು ಅನ್ಯರ ಮನವನ್ನು ಕೆರಳಿಸುವಂತಿರದೆ ಅರಳಿಸುವಂತಿರಲಿ. ಆ ಮೂಲಕ ನಮ್ಮ ನಡುವಿನ ನಂಟು ಹೆಚ್ಚು ಕಾಲ ಗಟ್ಟಿಯಾಗಿ, ಮಧುರವಾಗಿ ಉಳಿಯಲಿ.
(ಲೇಖಕಿ ಹವ್ಯಾಸಿ ಬರಹಗಾರ್ತಿ)