Setback violation: ಬೆಂಗಳೂರಿನ ಕಟ್ಟಡ ಮಾಲಿಕರಿಗೆ ಸಿಹಿ ಸುದ್ದಿ, ಸೆಟ್ ಬ್ಯಾಕ್ ಉಲ್ಲಂಘನೆ ವಿನಾಯಿತಿ ವಿಸ್ತರಣೆ
ಕರಡು ಅಧಿಸೂಚನೆಯಂತೆ ನಗರದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಸೆಟ್‌ಬ್ಯಾಕ್‌ನಲ್ಲಿ ಎಡ- ಬಲ, ಹಿಂದೆ- ಮುಂದೆ ಎಂಬ ಲೆಕ್ಕಾಚಾರ ಕೈಬಿಟ್ಟು ಒಟ್ಟು ಶೇ.15ರಷ್ಟು ಸೆಟ್‌ಬ್ಯಾಕ್ ಉಲ್ಲಂಘಿಸಿದ್ದರೆ ಸಕ್ರಮವಾಗಲಿದೆ. ಬೆಂಗಳೂರು ನಗರ ಪಾಲಿಕೆ ಬೈಲಾ 2003ರಲ್ಲಿ ನಮೂದಿಸಿರುವ ನೆಲ ಮಹಡಿ, ಎತ್ತರದ ಕಟ್ಟಡಗಳಿಗೆ ನೆಲಬಾಡಿಗೆ ನಿಯಮಗಳನ್ನು ಕೈಬಿಡಲಾಗಿದೆ.
ಜಿಬಿಎ -
ಬೆಂಗಳೂರು, ಏ.04: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಕಟ್ಟಡಗಳ ಸೆಟ್‌ಬ್ಯಾಂಕ್ ಉಲ್ಲಂಘನೆ (Setback violation) ವಿನಾಯಿತಿಯನ್ನು (exemption) ಶೇಕಡಾ 5 ರಿಂದ 15ಕ್ಕೆ ವಿಸ್ತರಿಸಿ ಐದು ನಗರ ಪಾಲಿಕೆಗಳ ಆಯುಕ್ತರು ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಜಿಬಿಎ ಕಾಯಿದೆಯಡಿ ಸೆಟ್‌ಬ್ಯಾಕ್ ಉಲ್ಲಂಘನೆ ನಿಯಮಗಳನ್ನು ತಿದ್ದುಪಡಿ ಮಾಡಿ ಏಪ್ರಿಲ್ 1ರಂದು ಪಂಚ ಪಾಲಿಕೆಗಳು ಕರಡು ಅಧಿಸೂಚನೆ ಹೊರಡಿಸಿವೆ. ನಾಗರಿಕರಿಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಸದ್ಯ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಕಟ್ಟಡಗಳು, ನಿರ್ಮಾಣ ಆಗುತ್ತಿರುವ ಹಾಗೂ ನಿರ್ಮಾಣಗೊಳ್ಳುವ ಕಟ್ಟಡಗಳಿಗೆ ಉಲ್ಲಂಘನೆ ಸಡಿಲಿಕೆ ಅನ್ವಯಿಸಲಿದೆ.
ಕರಡು ಅಧಿಸೂಚನೆಯಂತೆ ನಗರದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಸೆಟ್‌ಬ್ಯಾಕ್‌ನಲ್ಲಿ ಎಡ- ಬಲ, ಹಿಂದೆ- ಮುಂದೆ ಎಂಬ ಲೆಕ್ಕಾಚಾರ ಕೈಬಿಟ್ಟು ಒಟ್ಟು ಶೇ.15ರಷ್ಟು ಸೆಟ್‌ಬ್ಯಾಕ್ ಉಲ್ಲಂಘಿಸಿದ್ದರೆ ಸಕ್ರಮವಾಗಲಿದೆ. ಬೆಂಗಳೂರು ನಗರ ಪಾಲಿಕೆ ಬೈಲಾ 2003ರಲ್ಲಿ ನಮೂದಿಸಿರುವ ನೆಲ ಮಹಡಿ, ಎತ್ತರದ ಕಟ್ಟಡಗಳಿಗೆ ನೆಲಬಾಡಿಗೆ ನಿಯಮಗಳನ್ನು ಕೈಬಿಡಲಾಗಿದೆ. ಕಟ್ಟಡದ ಎತ್ತರದ ಉಲ್ಲಂಘನೆ ಪ್ರಮಾಣವು ಶೇಕಡಾ 5 ರಿಂದ 7.5ಕ್ಕೆ ಏರಿಕೆಯಾಗಲಿದೆ. ಅಲ್ಲದೆ, ಎಫ್‌ಎಎಆರ್ (ಫ್ಲೋರ್ ಏರಿಯಾ ರೇಷಿಯೊ) ಉಲ್ಲಂಘನೆ ಪ್ರಮಾಣ ಶೇಕಡಾ 5 ರಿಂದ 15ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಈ ಎಲ್ಲ ಉಲ್ಲಂಘನೆ ಪ್ರಮಾಣ 5 ಸಾವಿರ ಚದರಡಿ ಒಳಗಿನ ನಿವೇಶನಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ವಸತಿ ಕಟ್ಟಡಗಳ ಸೆಟ್‌ಬ್ಯಾಕ್‌ನಲ್ಲಿ ಭಾರಿ ಕಡಿತ ಮಾಡಿ 2026ರ ಜನವರಿ 5ರಂದು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಈಗ ಕಡಿಮೆಯಾಗಿರುವ ಸೆಟ್‌ಬ್ಯಾಕ್‌ನಲ್ಲೇ ಶೇಕಡಾ 15ರಷ್ಟು ಉಲ್ಲಂಘನೆಯಾಗಿದ್ದರೂ ಕಟ್ಟಡ ಸಕ್ರಮಗೊಳ್ಳಲಿದೆ. ಸ್ವಾಧೀನಾನುಭವ ಪ್ರಮಾಣ ಪತ್ರ ಲಭ್ಯವಾಗಲಿದೆ. ಇದರಿಂದ ಸಣ್ಣ ನಿವೇಶನಗಳಲ್ಲಿರುವ ಕಟ್ಟಡಗಳಿಗೆ ಭಾರಿ ಅನುಕೂಲವಾಗಲಿದೆ. ವಿದ್ಯುತ್, ನೀರಿನ ಸಂಪರ್ಕ ಸಿಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜಿಬಿಎ ಪಾಲಿಕೆಗಳ ಬಜೆಟ್; ಹಣಕಾಸು ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರದಿಂದ ನೆರವು: ಡಿ.ಕೆ. ಶಿವಕುಮಾರ್
ಮಂಜೂರಾತಿ ನಕ್ಷೆಗೆ ವ್ಯತಿರಿಕ್ತ ನಿರ್ಮಾಣ
ನಗರದ ವ್ಯಾಪ್ತಿಯಲ್ಲಿ ಭೂಮಿ ಬೆಲೆ ಏರಿಕೆ ಮತ್ತು ಹಲವು ಅನಿವಾರ್ಯ ಕಾರಣಗಳಿಂದ ನಿವೇಶನ ಮಾಲೀಕರು ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಕಡಿಮೆ ನಡುಜಾಗಗಳನ್ನು ಬಿಟ್ಟು ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ, ಬಹುತೇಕ ಕಟ್ಟಡಗಳಲ್ಲಿ ಉಲ್ಲಂಘನೆ ಪ್ರಮಾಣವು ಶೇಕಡಾ 5ಕ್ಕಿಂತ ಹೆಚ್ಚಾಗಿರುತ್ತದೆ. ಈ ರೀತಿ ನಿರ್ಮಾಣವಾಗಿರುವ ಹಲವಾರು ಕಟ್ಟಡಗಳಿಗೆ ನಗರ ಪಾಲಿಕೆಗಳಿಂದ ಸ್ವಾಧೀನಾನುಭವ ಪ್ರಮಾಣಪತ್ರ ದೊರೆಯದೆ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೇಕಡಾ 15ರಷ್ಟು ಉಲ್ಲಂಘನೆವರೆಗೆ ದಂಡ ಪಾವತಿಸಿ ಸಕ್ರಮ ಮಾಡಿಕೊಳ್ಳಬಹುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಈ ಕರಡು ಅಧಿಸೂಚನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೆಬ್ ಸೈಟ್ ಅನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.
ಜಿಬಿಎ ಚುನಾವಣೆಯಲ್ಲೂ ವಿಜಯಪತಾಕೆ ಹಾರಿಸಲು ಶ್ರಮಿಸೋಣ: ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಕರೆ