Dr Nagraj Shenoy Column: ಭಗವದ್ಗೀತೆ: ಅರ್ಥ ಮತ್ತು ಅನರ್ಥದ ಸುತ್ತಮುತ್ತ
“ನಿನಗೆ ನಿನ್ನ ಕರ್ತವ್ಯ ಮಾಡಲು ಮಾತ್ರ ಅಧಿಕಾರವಿದೆ, ಅದರ ಫಲದ ಮೇಲಲ್ಲ. ಅದನ್ನು ನಾನು ನಿರ್ಧರಿಸುತ್ತೇನೆ" ಎಂದು ಶ್ರೀಕೃಷ್ಣನು ಅರ್ಜುನನಿಗೆ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಹೇಳಿದ ಮಾತಿದು. ಅದನ್ನೇ ಹೇಳಿದೆವು. ಆಗ ಮೇಷ್ಟ್ರು, “ಅದು ಹಂಗಲ್ರೋ, ಅದು ಕೆಲಸ ಮಾಡೋ ಕಾರ್ಮಿಕ ರಿಗೆ, ‘ನೀವು ಕೆಲಸ ಅಷ್ಟೇ ಮಾಡಬೇಕು. ಕೂಲಿ ಕೇಳಬಾರದು. ಕೊಡೋದು ಬಿಡೋದು ನಮ್ಮ ಮರ್ಜಿ’ ಅಂತ ತಿಳಿಸಲಿಕ್ಕಾಗಿ ದೇವರ ಬಾಯಲ್ಲಿ ಇಂಥ ಶ್ಲೋಕ ಹಾಕಿ ಎಲ್ಲರಿಗೂ ಹೇಳಿಸ್ಯಾರು" ಅಂದರು.
-
ಅರ್ಥಾನುಸಂಧಾನ
ಡಾ.ನಾಗರಾಜ ಶೆಣೈ
ಆಧುನಿಕ ಯುಗದಲ್ಲಿ ಭಗವದ್ಗೀತೆಯನ್ನು ಬರೀ ಆಧ್ಯಾತ್ಮಿಕ ಗ್ರಂಥವಾಗಿ ನೋಡದೆ, ನಾಯಕತ್ವದ ಗುಣಗಳು, ಮ್ಯಾನೇಜ್‌ಮೆಂಟ್ ಮುಂತಾದ ವಿಷಯಗಳ ಕುರಿತಾದ ಚರ್ಚೆ ಗಳಲ್ಲಿ ವಿಶ್ವದೆಲ್ಲೆಡೆ ಅದನ್ನು ಪ್ರಸ್ತಾಪಿಸಲಾಗುತ್ತದೆ. ಜೀವನಕ್ರಮದಲ್ಲಿ ಎದುರಾಗುವ ಆಂತರಿಕ- ಬಾಹ್ಯ ಒತ್ತಡಗಳನ್ನು, ನಿಭಾಯಿಸುವಲ್ಲಿ ಅದನ್ನೊಂದು ದಾರಿದೀವಿಗೆಯಂತೆ ಪರಿಗಣಿಸಲಾಗುತ್ತದೆ. ಆದರೆ, ನಮ್ಮದೇ ಶಿಕ್ಷಣ ಸಂಸ್ಥೆಗಳಲ್ಲಿ ‘ಭಗವದ್ಗೀತೆಯು ಒಂದು ಪ್ರತಿಗಾಮಿ ಪುಸ್ತಕ’ ಎಂಬ ಭಾವನೆಯನ್ನು ನೆಟ್ಟಿದ್ದಾರೆ.
ಇದು ಸಾಕಷ್ಟು ವರ್ಷಗಳ ಹಿಂದಿನ ಮಾತು. “ಭಗವದ್ಗೀತೆಯಲ್ಲಿ ಬರುವ ‘ಕರ್ಮಣ್ಯೇವಾಧಿಕಾರಸ್ತೆ, ಮಾ ಫಲೇಷು ಕದಾಚನ’ ಶ್ಲೋಕದ ಅರ್ಥ ನಿಮಗೇನಾದರೂ ಗೊತ್ತೇನ್ರೋ?" ಅಂತ ಹೈಸ್ಕೂಲಿನಲ್ಲಿ ನಮ್ಮ ಮೇಷ್ಟ್ರು ಪ್ರಶ್ನಿಸಿದರು. ನಮ್ಮಲ್ಲಿ ಕೆಲವರು ಗೊತ್ತಿದ್ದಷ್ಟನ್ನು ಹೇಳಲು ಮುಂದಾದೆವು.
“ನಿನಗೆ ನಿನ್ನ ಕರ್ತವ್ಯ ಮಾಡಲು ಮಾತ್ರ ಅಧಿಕಾರವಿದೆ, ಅದರ ಫಲದ ಮೇಲಲ್ಲ. ಅದನ್ನು ನಾನು ನಿರ್ಧರಿಸುತ್ತೇನೆ" ಎಂದು ಶ್ರೀಕೃಷ್ಣನು ಅರ್ಜುನನಿಗೆ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಹೇಳಿದ ಮಾತಿದು. ಅದನ್ನೇ ಹೇಳಿದೆವು. ಆಗ ಮೇಷ್ಟ್ರು, “ಅದು ಹಂಗಲ್ರೋ, ಅದು ಕೆಲಸ ಮಾಡೋ ಕಾರ್ಮಿಕರಿಗೆ, ‘ನೀವು ಕೆಲಸ ಅಷ್ಟೇ ಮಾಡಬೇಕು. ಕೂಲಿ ಕೇಳಬಾರದು. ಕೊಡೋದು ಬಿಡೋದು ನಮ್ಮ ಮರ್ಜಿ’ ಅಂತ ತಿಳಿಸಲಿಕ್ಕಾಗಿ ದೇವರ ಬಾಯಲ್ಲಿ ಇಂಥ ಶ್ಲೋಕ ಹಾಕಿ ಎಲ್ಲರಿಗೂ ಹೇಳಿಸ್ಯಾರು" ಅಂದರು.
ನಮಗೋ, ಇವರು ಯಾವುದೋ ಹೊಸ ಅರ್ಥವನ್ನು ಹೇಳುತ್ತಿದ್ದಾರಲ್ಲಾ ಅಂತ ಅನಿಸಿತು. ಅವರು ಮುಂದುವರಿದು, “ಇವೆಲ್ಲ ಸನಾತನ ಧರ್ಮೀಯರು ಕೆಳವರ್ಗದ, ದುಡಿಯುವ ವರ್ಗದ ಜನರನ್ನು ತುಳಿಯಲು ಮಾಡಿಕೊಂಡ ಅಸ್ತ್ರಗಳು. ಬಂಡವಾಳಶಾಹಿ, ಪುರೋಹಿತಶಾಹಿ ವ್ಯವಸ್ಥೆಯಲ್ಲಿ ಭೂಮಾಲೀಕರು, ಸಿರಿವಂತರು, ಬಡವರ್ಗದ ಜನರನ್ನು ಮೊದಲು ಧರ್ಮದ ಹೆಸರಿನಲ್ಲಿ ಮರುಳು ಮಾಡಿ, ನಂತರ ಇಂಥ ಶ್ಲೋಕಗಳನ್ನು ಬರೆದು, ಅವರ ಎಲ್ಲಾ ಹಕ್ಕುಗಳನ್ನು ಕಸಿದು ಶೋಷಣೆ ಮಾಡಲಿಕ್ಕೆ ಇದನ್ನು ಸಾಧನವನ್ನಾಗಿ ಮಾಡಿಕೊಂಡರು" ಎಂದರು.
ಇದನ್ನೂ ಓದಿ: Vinayak V Bhat Column: ಸಂಪ್ರದಾಯ ಮೀರದ ಹೊಸತನಕ್ಕೆ ಸದಾ ಸ್ವಾಗತವಿದೆ
ಆಗ ನಮ್ಮಂಥ ವಿದ್ಯಾರ್ಥಿಗಳ ಮನಸ್ಸಿನಲ್ಲಿ, “ಅಬ್ಬಾ! ಎಂಥ ಕ್ರೂರ ಶಾಸನಗಳು! ಇದೆಂಥ ಶ್ಲೋಕ! ಅದು ಹೇಗೆ ಪವಿತ್ರಗ್ರಂಥ?" ಎಂಬೆಲ್ಲಾ ಅಭಿಪ್ರಾಯಗಳು ತುಂಬಿಕೊಂಡುಬಿಟ್ಟಿದ್ದವು. ‘ನಮಗೆ ಹೈಸ್ಕೂಲಿನಲ್ಲಿ ಇಂಥ ಪಾಠ ಬೋಧಿಸಿದ ಮೇಷ್ಟ್ರು ಯಾವ ವಿಷಯದ ಬೋಧಕರಾಗಿದ್ದರು ಗೊತ್ತೇ?’ ಎಂಬ ನನ್ನ ಪ್ರಶ್ನೆಗೆ ‘ಸಮಾಜಶಾಸ್ತ್ರ’ ಎಂಬುದು ನಿಮ್ಮ ಉತ್ತರವಾಗಿದ್ದರೆ, ನಿಮ್ಮ ಊಹೆ ಸರಿ, ಆದರೆ ಉತ್ತರ ತಪ್ಪು!
ಯಾಕೆಂದರೆ, ಅವರು ನಮಗೆ ವಿಜ್ಞಾನ ವಿಷಯ ಕಲಿಸುವ ಶಿಕ್ಷಕರಾಗಿದ್ದರು! ಹೌದು, ಅವರು ವಿಜ್ಞಾನ ವಿಷಯದ ತರಗತಿಗಳಲ್ಲಿ ಇಂಥ ಸಂಗತಿಗಳನ್ನೆಲ್ಲ ನಮ್ಮ ತಲೆಗೆ ತುಂಬುತ್ತಿದ್ದರು. ಇಂದಿನಂತೆಯೇ ಅಂದೂ ನಮ್ಮ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದ ಯಾವ ಪಠ್ಯಕ್ರಮದಲ್ಲೂ ಇಂಥ ಪಾಠಗಳಿರಲಿಲ್ಲ. ಆದರೂ ಅವರು ‘ಸ್ವಯಂಸ್ಪೂರ್ತಿ’ ಯಿಂದ ಕಮ್ಯು ನಿಸಂ, ಮಾರ್ಕ್ಸ್‌ವಾದ, ಸಮಾಜವಾದ, ಬಂಡಾಯ, ಹೋರಾಟ ಇವುಗಳ ಬಗ್ಗೆಯೇ ಸದಾ ನಮಗೆ ಪಾಠ ಮಾಡುತ್ತಿದ್ದರು.
“ಈ ಒಂದು ವರ್ಷ ಮುಗಿಯುವುದರೊಳಗೆ ನಿಮ್ಮೆಲ್ಲರನ್ನೂ ಒಂದೊಂದು ಕ್ರಾಂತಿಯ ಕಿಡಿಗ ಳನ್ನಾಗಿ ಮಾಡಿ ಬಿಡುತ್ತೇನೆ" ಎಂದು ಅವರು ಹೇಳಿದ್ದರು. ಆದರೆ ದುರದೃಷ್ಟವಶಾತ್ (ಅಥವಾ ಅದೃಷ್ಟವಶಾತ್!) ವರ್ಷದ ಮಧ್ಯೆಯೇ ಅವರಿಗೆ ಬೇರೊಂದು ಶಾಲೆಗೆ ವರ್ಗವಾಯಿತು. ಹೀಗಾಗಿ ನಾವೆಲ್ಲ ಯಾವುದೇ ತರಹದ ಕಿಡಿಗಳಾಗದೆ, ನಿಜಜೀವನದ ಸತ್ಯವನ್ನು ನಾವೇ ಹುಡುಕಿಕೊಂಡು ಹೋಗುವ ಸತ್ಯಾರ್ಥಿಗಳಾದೆವು.
ಹೈಸ್ಕೂಲ್ ನಂತರ ನಾನು ನನ್ನ ಕಾಲೇಜು ಶಿಕ್ಷಣಕ್ಕೆಂದು ಧಾರವಾಡಕ್ಕೆ ಹೋದೆ. ಅಲ್ಲಿ ನಾನು ಭಾಗವಹಿಸಿದ ಒಂದು ಭಾಷಣದಲ್ಲಿ ಚಿನ್ಮಯ ಮಿಷನ್‌ನ ಸ್ವಾಮೀಜಿಯವರೊಬ್ಬರು ಭಗವದ್ಗೀ ತೆಯ ಕುರಿತಾದ ಉಪನ್ಯಾಸದಲ್ಲಿ ಇದೇ ಶ್ಲೋಕದ ಬಗ್ಗೆ ಒಂದು ಪುಟ್ಟ ಕಥೆಯನ್ನು ಹೇಳಿದರು: ಸುಶಿಕ್ಷಿತ ಯುವಕನೊಬ್ಬ ಗ್ರಾಮವೊಂದರ ದಾರಿಯಲ್ಲಿ ಹಾದುಹೋಗುವಾಗ ಪಕ್ಕದ ತೋಟದಲ್ಲಿ ವಯೋವೃದ್ಧನೊಬ್ಬ 12 ವರ್ಷದ ನಂತರ ಫಲ ಬಿಡುವ ತೆಂಗಿನ ಸಸಿಗಳನ್ನು ನೆಡುತ್ತಿರುವುದನ್ನು ನೋಡಿದ. ನಂತರ ಆತ ಆ ವೃದ್ಧರನ್ನು ಸಮೀಪಿಸಿ ಸ್ವಲ್ಪ ಕುಹಕದ ಧ್ವನಿಯಲ್ಲಿ, “ಈ ತೆಂಗಿನ ಮರವು ಫಲ ಬಿಡುವ ತನಕ ನೀವು ಬದುಕಿರುವ ವಿಶ್ವಾಸವಿದೆಯೋ?" ಎಂದು ತಿವಿದ.
ಆಗ ಆ ವೃದ್ಧರು, “ನೋಡು ಮಗೂ, ಈಗ ನಾನು ಮಾಡುತ್ತಿರುವ ಯಾವ ಕೆಲಸದ ಪ್ರತಿಫಲವೂ ನನಗೆ ಖಂಡಿತವಾಗಿಯೂ ಸಿಗುವುದಿಲ್ಲ ಎಂಬ ವಿಶ್ವಾಸದಿಂದಲೇ ಇದನ್ನೆಲ್ಲ ಮಾಡುತ್ತಿರುವೆ. ಯಾಕೆ ಗೊತ್ತಾ? ನಾನು ನನ್ನ ಜೀವನಪೂರ್ತಿ ಅನುಭವಿಸಿದ ಫಲಗಳೆಲ್ಲವೂ ದಕ್ಕಿದ್ದು ನನ್ನ ತಂದೆ-ತಾತ-ಮುತ್ತಾತಂದಿರು ಮಾಡಿದ ಕೆಲಸಗಳಿಂದ. ಆ ಋಣವನ್ನು ನಾನು ಹೇಗೆ ತೀರಿಸಲಿ? ಹೀಗಾಗಿ, ಅವರಂತೆಯೇ ನಾನು ಈಗ ಮಾಡುತ್ತಿರುವುದು ನನ್ನ ಮಕ್ಕಳು-ಮೊಮ್ಮಕ್ಕಳಿಗಾಗಿ.
ಜೀವನಸರಣಿ ಹೀಗೆ ಮುಂದುವರಿದಾಗಲೇ ಅದು ಸರಿಯಾದ ಕ್ರಮದಲ್ಲಿ ಸಾಗುತ್ತದೆ. ನನ್ನೆಲ್ಲಾ ಕೆಲಸದ ಪ್ರತಿಫಲಗಳು ನನಗೇ ಸಿಗಬೇಕೆಂಬ ಬಯಕೆ ಮೂಡಿದಾಗ, ಎಲ್ಲರ ಜೀವನವೂ ಅಸ್ತವ್ಯಸ್ತ ವಾಗುತ್ತದೆ, ಎಲ್ಲರೂ ನರಳುತ್ತಾರೆ" ಎಂದರು. ಈ ಕಥೆಯನ್ನು ಹೇಳಿ ಮುಗಿಸಿದ ಸ್ವಾಮೀಜಿ, “ಕರ್ಮಣ್ಯೇವಾಧಿಕಾರಸ್ತೆ ಎಂಬ ಶ್ಲೋಕದ ಅರ್ಥವೂ ಇದೇ. ನಮ್ಮ ಬದುಕಿನಲ್ಲಿ ನಾವು ಪಡೆದಿರುವ ಅನೇಕ ಸುಖ-ಸೌಕರ್ಯಗಳನ್ನು ಸೃಷ್ಟಿಸಿರುವವರು ಇನ್ಯಾರೋ. ಫಲಾಪೇಕ್ಷೆ ಇಲ್ಲದ ಅವರ ಕೆಲಸಗಳ ಲಾಭವನ್ನು ಪಡೆಯುತ್ತಿರುವವರು ನಾವು.
ಇದಕ್ಕೆ ಪ್ರತಿಯಾಗಿ ನಮ್ಮ ಜೀವನದಲ್ಲಿ ನಾವು ಮಾಡುವ ಎಲ್ಲ ಕೆಲಸಗಳನ್ನು ಫಲದ ಅಪೇಕ್ಷೆ ಇಲ್ಲದೆ ಮಾಡಬೇಕಾಗಿರುವುದು ನಮ್ಮ ಧರ್ಮ. ನಮಗೆ ಸಿಗಬೇಕಾದುದನ್ನು ಆ ದೇವರು ನಮಗೆ ಕೊಟ್ಟೇ ಕೊಡುತ್ತಾನೆ- ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ..." ಎಂದರು.
ಆಗ ನನಗೆ, “ಅರೆ, ಒಂದು ಶ್ರೇಷ್ಠ ಕಲ್ಪನೆಯನ್ನು ಮಡಿಲಲ್ಲಿ ಇಟ್ಟುಕೊಂಡಿರುವ ಶ್ಲೋಕ ವೊಂದನ್ನು ಎಷ್ಟೊಂದು ಕೀಳುಮಟ್ಟಕ್ಕೆ ಇಳಿಸಿದವರ ವಿಚಾರಗಳನ್ನು ಇಷ್ಟೂ ಕಾಲ ನಾನು ಹೊತ್ತುಕೊಂಡಿದ್ದೆನಲ್ಲಾ...?!!" ಎಂದನಿಸಿದ್ದು ನಿಜ. ಈಗಿನ ಆಧುನಿಕ ಯುಗದಲ್ಲಿ ನಮ್ಮ ಭಗವದ್ಗೀತೆಯನ್ನು ಬರೀ ಆಧ್ಯಾತ್ಮಿಕ ಗ್ರಂಥವಾಗಿ ನೋಡದೆ, ನಾಯಕತ್ವದ ಗುಣಗಳು, ಮ್ಯಾನೇಜ್ ಮೆಂಟ್ ಮುಂತಾದ ವಿಷಯಗಳ ಕುರಿತಾದ ಚರ್ಚೆಗಳಲ್ಲಿ ವಿಶ್ವದೆಲ್ಲೆಡೆ ಅದನ್ನು ಪ್ರಸ್ತಾಪಿಸಲಾಗುತ್ತದೆ.
ಒತ್ತಡದ ಜೀವನಕ್ರಮದಲ್ಲಿ ಎದುರಾಗುವ ಆಂತರಿಕ ಮತ್ತು ಬಾಹ್ಯ ಒತ್ತಡಗಳನ್ನು, ಸಂಘರ್ಷ ಗಳನ್ನು ನಿಭಾಯಿಸುವಲ್ಲಿ ಅದನ್ನು ಒಂದು ದಾರಿದೀವಿಗೆಯಂತೆ ಪರಿಗಣಿಸಲಾಗುತ್ತದೆ. ಆದರೆ, ನಮ್ಮದೇ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿನ ಎಲ್ಲಾ ವಿಷಯಗಳಲ್ಲಿ, ಕೆಲ ಶಿಕ್ಷಕರು ಸಾವಿರ, ಲಕ್ಷಗಳ ಸಂಖ್ಯೆಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ‘ಭಗವದ್ಗೀತೆಯು ಒಂದು ಪ್ರತಿಗಾಮಿ ಪುಸ್ತಕ’ ಎಂಬ ಭಾವನೆಯನ್ನು ನೆಟ್ಟಿದ್ದಾರೆ.
ಭಾರತೀಯತೆ, ಹಿಂದೂ ಧಮ, ಸನಾತನ ಸಂಸ್ಕೃತಿ ಇವುಗಳ ಬಗ್ಗೆ ಈಗಿನ ಜನಾಂಗದಲ್ಲಿ ಅವಜ್ಞೆ, ಕೀಳರಿಮೆ, ತಿರಸ್ಕಾರ ಮೂಡುತ್ತಿರುವುದಕ್ಕೆ ಇದುವೇ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
(ಲೇಖಕರು ಶಿಕ್ಷಣತಜ್ಞರು ಹಾಗೂ ಚಿಂತಕರು)