R T Vittalmurthy Column: ಬಿಜೆಪಿ ನಾಯಕರು ʼಭಾಗವತʼ ಓದಬೇಕು
ಇವತ್ತು ಸಿದ್ದರಾಮಯ್ಯ ಸಿಎಂ ಆಗಿ ಉಳಿಯಲಿ, ಇಲ್ಲವೇ ಅವರ ಜಾಗಕ್ಕೆ ಡಿ.ಕೆ. ಶಿವಕುಮಾರ್ ಬರಲಿ ಅಥವಾ ದಲಿತರೊಬ್ಬರು ಸಿಎಂ ಆಗಲಿ. ಅದರಿಂದ ನಮಗೇನಾಗಬೇಕು?" ಎಂದು ಗುಡು ಗಿದ್ದಾರೆ. ಹೀಗೆ ಮೋಹನ್ ಭಾಗವತ್ ಅವರು ಗುಡುಗಿ ಹೋದ ಮೇಲೆ ರಾಜ್ಯದ ಬಿಜೆಪಿ ನಾಯಕ ರು ತಣ್ಣಗಾಗಿದ್ದಾರೆ. ಅಷ್ಟೇ ಅಲ್ಲ, ದಿನ ಬೆಳಗಾದರೆ ಕಾಂಗ್ರೆಸ್ ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾರೆ.
-
ಮೂರ್ತಿಪೂಜೆ
ಕಳೆದ ವಾರ ಬೆಂಗಳೂರಿಗೆ ಬಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅಸಮಾಧಾನಗೊಂಡಿದ್ದರು. ಇದಕ್ಕೆ ಬಿಜೆಪಿಯ ರಾಜ್ಯ ನಾಯಕರೇ ಕಾರಣ. ಅಂದ ಹಾಗೆ, ಸಿಎಂ ಹುದ್ದೆಯ ವಿಷಯದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ಶೀತಲ ಸಮರ ನಡೆಸಿದ್ದಾರಲ್ಲ? ಈ ಸಮರವನ್ನು ಮೌನವಾಗಿ ಗಮನಿಸಬೇಕಿದ್ದ ರಾಜ್ಯ ಬಿಜೆಪಿಯ ನಾಯಕರು ಅನಗತ್ಯವಾಗಿ ಮಾತನಾಡುತ್ತಿರುವುದು ಮೋಹನ್ ಭಾಗವತ್ ಅವರಿಗೆ ಇಷ್ಟವಾಗಿಲ್ಲ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳು ಪರಸ್ಪರ ಕತ್ತಿ ಹಿಡಿದು ನಿಂತಿರುವಾಗ ಬಳ್ಳಾರಿಯ ಬಿಜೆಪಿ ನಾಯಕರೊಬ್ಬರು, “ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ನಾನು ಸ್ವಾಗತಿಸುತ್ತೇನೆ" ಎಂದರು. ಅವರ ಹೇಳಿಕೆಯ ಅಸುಪಾಸಿನ ಬೆಂಗಳೂರಿನ ನಾಯಕರೊಬ್ಬರು, “ನವೆಂಬರ್‌ನಲ್ಲಿ ಸಿದ್ದರಾಮಯ್ಯ ಕೆಳಗಿಳಿದು ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿ" ಎಂದರು.
ಇವತ್ತು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ, ಸರಕಾರದ ಆಡಳಿತ ವೈಫಲ್ಯಗಳ ಬಗ್ಗೆ ಮಾತನಾಡಬೇಕಾದ ನಾಯಕರು ಹೀಗೆ ಕಾಂಗ್ರೆಸ್‌ನ ಆಂತರಿಕ ವಿಷಯವನ್ನು ಹಿಡಿದು ಕೊಂಡು ಜಗ್ಗಾಡುತ್ತಿರುವುದು ಎಳ್ಳಷ್ಟೂ ಸರಿಯಲ್ಲ ಎಂಬುದು ಮೋಹನ್ ಭಾಗವತ್ ಅವರ ಅಸಮಾಧಾನ. ಹಾಗಂತಲೇ ಬೆಂಗಳೂರಿಗೆ ಬಂದಾಗ ಆರೆಸ್ಸೆಸ್ ಪ್ರಚಾರಕರು ಮತ್ತು ವಿಸ್ತಾರಕರ ಸಭೆಯಲ್ಲಿ ಸೂಚ್ಯವಾಗಿ ಮಾತನಾಡಿದ ಮೋಹನ್ ಭಾಗವತ್, “ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕಚ್ಚಾಟದ ಬಗ್ಗೆ ನಮ್ಮವರೇಕೆ ಅನಗತ್ಯವಾಗಿ ಮಾತ ನಾಡುತ್ತಿದ್ದಾರೆ? ಕಚ್ಚಾಡುವುದಿದ್ದರೆ ಅವರು ಕಚ್ಚಾಡಲಿ ಬಿಡಿ.
ಇದನ್ನೂ ಓದಿ: R T Vittalmurthy Column: ಅಧಿಕಾರ ಸಂಘರ್ಷಕ್ಕೆ ರಾಹುಲ್ ಬ್ರೇಕ್ ?
ಅದರಿಂದೇನಾಗುತ್ತದೆ? ಮುಂದಿನ ಚುನಾವಣೆಯ ನಂತರ ನಮ್ಮವರೇ ಅಧಿಕಾರದಲ್ಲಿರು ತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮವರು ಮೌನವಾಗಿರಬೇಕು. ಅದೇ ಕಾಲಕ್ಕೆ ಕಾಂಗ್ರೆಸ್ ಪಕ್ಷದ ಕಚ್ಚಾಟದ ಕಡೆ ಗಮನ ಕೊಡುವ ಬದಲು ಜನರಿಗಾಗಿ ಹೋರಾಡ ಬೇಕು.
ಇವತ್ತು ಸಿದ್ದರಾಮಯ್ಯ ಸಿಎಂ ಆಗಿ ಉಳಿಯಲಿ, ಇಲ್ಲವೇ ಅವರ ಜಾಗಕ್ಕೆ ಡಿ.ಕೆ. ಶಿವಕುಮಾರ್ ಬರಲಿ ಅಥವಾ ದಲಿತರೊಬ್ಬರು ಸಿಎಂ ಆಗಲಿ. ಅದರಿಂದ ನಮಗೇ ನಾಗಬೇಕು?" ಎಂದು ಗುಡುಗಿದ್ದಾರೆ. ಹೀಗೆ ಮೋಹನ್ ಭಾಗವತ್ ಅವರು ಗುಡುಗಿ ಹೋದ ಮೇಲೆ ರಾಜ್ಯದ ಬಿಜೆಪಿ ನಾಯಕರು ತಣ್ಣಗಾಗಿದ್ದಾರೆ. ಅಷ್ಟೇ ಅಲ್ಲ, ದಿನ ಬೆಳಗಾದರೆ ಕಾಂಗ್ರೆಸ್ ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾರೆ.
ಸಂಪುಟ ಪುನಾರಚನೆ ಸದ್ಯಕ್ಕಿಲ್ಲ
ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನ ಮಂತ್ರಿಗಿರಿ ಅಕಾಂಕ್ಷಿಗಳು ನಿರಾಶರಾಗಿದ್ದಾರೆ. ಕಾರಣ? ಅವರಂದುಕೊಂಡಂತೆ ಮಂತ್ರಿಮಂಡಲ ಪುನಾರಚನೆಗೆ ಕಾಲ ಕೂಡಿ ಬರುವಂತೆ ಕಾಣು ತ್ತಿಲ್ಲ. ಯಾಕೆಂದರೆ ಈ ತಿಂಗಳ ಅಂತ್ಯದಲ್ಲಿ ಮಂತ್ರಿಮಂಡಲ ಪುನಾರಚನೆಯಾಗುತ್ತದಾ ಎಂದರೆ ರಾಹುಲ್ ನಡೆಅಡ್ಡವಾಗುವುದು ಸ್ಪಷ್ಟವಾಗಿದೆ. ಸದ್ಯಕ್ಕಿರುವ ಮಾಹಿತಿಗಳ ಪ್ರಕಾರ, ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ಹೊರಡಲಿದ್ದಾರೆ.
ಈ ತಿಂಗಳ ಅಂತ್ಯಕ್ಕೆ ಅವರು ವಾಪಸ್ಸಾಗುತ್ತಾರಾದರೂ ಅಷ್ಟೊತ್ತಿಗೆ ಬೆಳಗಾವಿಯ ವಿಧಾನ ಮಂಡಲ ಅಧಿವೇಶನಕ್ಕೆ ದಿನಗಣನೆ ಶುರುವಾಗಿರುತ್ತದೆ. ಅಂದ ಹಾಗೆ, ಅಧಿವೇಶನ ಹತ್ತಿರ ವಾಗಿರುವ ಸಂದರ್ಭದಲ್ಲಿ ಮಂತ್ರಿಮಂಡಲ ಪುನಾರಚನೆಗೆ ಕೈ ಹಾಕುವುದು ಹೈ ರಿಸ್ಕು.
ಯಾಕೆಂದರೆ ಇಂಥ ಕಸರತ್ತಿಗೆ ಕೈ ಹಾಕಿದಾಗ ಅತೃಪ್ತರ ದಂಡು ದೊಡ್ಡದಿರುತ್ತದೆ. ಈಗಿರುವ ಮಾಹಿತಿಯ ಪ್ರಕಾರ ಸಿದ್ದರಾಮಯ್ಯ ಸಂಪುಟದಲ್ಲಿರುವ ಬಹುತೇಕ ಸೀನಿಯರ್ ಮಂತ್ರಿ ಗಳನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸುವುದು ಹೈಕಮಾಂಡ್ ಲೆಕ್ಕಾಚಾರ.
ಅದರೆ ಈ ಲೆಕ್ಕಾಚಾರಕ್ಕೆ ಪೂರಕವಾಗಿ ಹೆಜ್ಜೆ ಇಟ್ಟರೆ ಮಂತ್ರಿಗಿರಿ ಕಳೆದುಕೊಳ್ಳುವ ಸೀನಿಯರುಗಳು ರೆಬೆಲ್ ಆಗುತ್ತಾರೆ. ಹೀಗೆ ಒಂದು ಕಡೆಯಿಂದ ಅವರು ತಲೆನೋವಾದರೆ, ಮತ್ತೊಂದು ಕಡೆಯಿಂದ ಮಂತ್ರಿಗಿರಿ ಸಿಗದವರು ಕನಲಿ ನಿಲ್ಲುತ್ತಾರೆ. ಹೀಗೆ ಎರಡು ಕಡೆಯಿಂದ ಅತೃಪ್ತರ ದಂಡು ತಿರುಗಿ ಬಿದ್ದಾಗ ಅಧಿವೇಶನ ನಡೆಯುತ್ತಿದ್ದರೆ ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಾಗಿ ಧಗ-ಧಗ ಎನ್ನುತ್ತದೆ.
ಹೀಗಾಗಿ ಅಧಿವೇಶನ ಮುಗಿಯುವವರೆಗೆ ಸಂಪುಟ ಪುನಾರಚನೆಗೆ ವರಿಷ್ಠರು ಕೈ ಹಾಕುವುದು ಕಷ್ಟ. ಇನ್ನು ಅಧಿವೇಶನ ಮುಕ್ತಾಯದ ಹಂತದಲ್ಲಿರುವಾಗ ಧನುರ್ಮಾಸ ಶುರುವಾಗುತ್ತದೆ. ಅಲ್ಲಿಗೆ ಜನವರಿ ಮಧ್ಯಭಾಗದವರೆಗೆ ಸಂಪುಟ ಪುನಾರಚನೆ ಎಂಬುದು ಮರೀಚಿಕೆ.
ಇದಾದ ನಂತರ ರಾಜ್ಯದ ನಿಗಮ-ಮಂಡಳಿಗಳಿಗೆ ಈ ಹಿಂದೆ ಅಧ್ಯಕ್ಷರಾದವರ ಕಾಲಾವಧಿ ಮುಕ್ತಾಯದ ಹಂತಕ್ಕೆ ಬಂದಿರುತ್ತದೆ.ಹೀಗಾಗಿ ಅವರ ಜಾಗಕ್ಕೆ ಯಾವ ಶಾಸಕರನ್ನು ತರಬೇಕು ಎಂಬ ಕಸರತ್ತು ಶುರುವಾಗುತ್ತದಲ್ಲದೇ, ಅದರ ಬೆನ್ನಿಗೇ ರಾಜ್ಯ ಬಜೆಟ್ ಮಂಡನೆಯ ಜ್ವರ ಶುರುವಾಗುತ್ತದೆ. ಅಲ್ಲಿಗೆ ಸಂಪುಟ ಪುನಾರಚನೆ ಎಂಬುದು ‘ತೋಳ ಬಂತು ತೋಳ’ ಎಂಬ ಕತೆಯಂತಾಗುತ್ತದೆ ಎಂಬುದೇ ಮಂತ್ರಿ ಪದವಿ ಆಕಾಂಕ್ಷಿಗಳ ತಲೆನೋವು. ಮುಂದೇನಾಗುತ್ತದೋ?
ವಿಜಯೇಂದ್ರ ಬಾಯಿಗೆ ಕಬ್ಬು
ಈ ಮಧ್ಯೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವರ್ಚಸ್ಸು ಹೆಚ್ಚಾಗುವ ಘಟನೆ ನಡೆದಿದೆ. ಇದಕ್ಕೆ ಕಬ್ಬು ಬೆಳೆಗಾರರ ಜತೆ ಸೇರಿ ಅವರು ನಡೆಸಿದ ಬೀದಿ ಹೋರಾಟವೇ ಕಾರಣ. ಅಂದ ಹಾಗೆ, ಸಕ್ಕರೆ ಕಾರ್ಖಾನೆಗಳಿಗೆ ತಾವು ಪೂರೈಸುವ ಪ್ರತಿ ಟನ್ ಕಬ್ಬಿಗೆ 3500 ರು. ನೀಡಬೇಕು ಅಂತ ಆಗ್ರಹಿಸಿ ರಾಜ್ಯದ ಕಬ್ಬು ಬೆಳೆಗಾರರು ಹೋರಾಟ ನಡೆಸಿದ್ದರಲ್ಲ? ನವೆಂಬರ್ ನಾಲ್ಕರಂದು ಈ ಹೋರಾಟವನ್ನು ಬೆಂಬಲಿಸಿ ಗುರ್ಲಾಪುರ ದಲ್ಲಿ ಬೀದಿಗಳಿದ ಬಿ.ವೈ.ವಿಜಯೇಂದ್ರ ಅವರು, “ರೈತರಿಗೆ ನ್ಯಾಯ ಸಿಗದಿದ್ದರೆ ನಾನಿಲ್ಲಿಂದ ಹೊರಡಯವುದಿಲ್ಲ" ಅಂತ ಘೋಷಿಸಿಬಿಟ್ಟರು.
ಅಂದ ಹಾಗೆ, ಇದರ ಮರುದಿನವೇ ವಿಜಯೇಂದ್ರ ಅವರ ಹುಟ್ಟಿದ ಹಬ್ಬ. ಇದಕ್ಕಾಗಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಶುಭಾಶಯ ಹೇಳಲು ಫೋನ್ ಮಾಡಿದರೆ, “ಸರ್, ಇಲ್ಲಿ ರೈತರ ಜತೆ ಇದ್ದೇನೆ. ಇವರಿಗೆ ನ್ಯಾಯ ಕೊಡಿಸುವವರೆಗೆ ನಾನಿಲ್ಲಿಂದ ಕದಲುವುದಿಲ್ಲ" ಅಂತ ವಿವರಿಸಿದ ವಿಜಯೇಂದ್ರ ಅವತ್ತು ಅ ಉಳಿದುಕೊಂಡು ಮರುದಿನ ಅ ತಮ್ಮ ಜನ್ಮದಿನದ ಶುಭಾಶಯಗಳನ್ನು ಸ್ವೀಕರಿಸಿದರು.
ಅಷ್ಟೇ ಅಲ್ಲ, ಕಬ್ಬು ಬೆಳೆಗಾರರ ಅಹವಾಲು ಸ್ವೀಕರಿಸಲು ಸರಕಾರದ ಪ್ರತಿನಿಧಿ ಬರುವುದು ಸ್ಪಷ್ಟವಾದ ಮೇಲೆ ಅಲ್ಲಿಂದ ಹೊರಟರು. ಯಾವಾಗ ಈ ಬೆಳವಣಿಗೆ ನಡೆಯಿತೋ, ಆಗ ಸರಕಾರ ಕೂಡಾ ಗಡಬಡಿಸಿ ಮೇಲೆದ್ದಿದ್ದಲ್ಲದೆ ರೈತರ ಕಬ್ಬಿಗೆ ಹೆಚ್ಚುವರಿ ನೂರು ರುಪಾಯಿ ಕೊಡಿಸುವುದಾಗಿ ಘೋಷಿಸಿದೆ.
ಈ ಬೆಳವಣಿಗೆಯಾದ ನಂತರ ರೈತ ಹೋರಾಟದ ಯಶಸ್ಸಿನಲ್ಲಿ ವಿಜಯೇಂದ್ರ ಪಾತ್ರ ದೊಡ್ಡದು ಎಂಬ ಮಾತು ಹರಡತೊಡಗಿದೆ. ಈ ಮಾತಿನಿಂದ ಮೊದಲು ಬೆಚ್ಚಿ ಬಿದ್ದವರು ವಿಜಯೇಂದ್ರ ವಿರೋಧಿಗಳು. ಹೀಗಾಗಿಯೇ ಹಲ ಮಾಧ್ಯಮ ಪ್ರತಿನಿಧಿಗಳನ್ನು ಸಂಪರ್ಕಿಸ ತೊಡಗಿದ ಈ ವಿರೋಧಿ ಪಾಳಯದ ನಾಯಕರು, “ಯೇ, ರೈತರ ಹೋರಾಟದ ಯಶಸ್ಸಿಗೂ, ವಿಜಯೇಂದ್ರ ಅವರಿಗೂ ಸಂಬಂಧವಿಲ್ಲ.
ಯಾವಾಗ ರೈತ ಹೋರಾಟಗಾರರ ಪ್ರತಿಭಟನೆ ಜೋರಾಗತೊಡಗಿತೋ? ಮಂತ್ರಿ ಶಿವಾನಂದ ಪಾಟೀಲರ ಮೇಲೆ ರೈತರು ಮುಗಿ ಬಿದ್ದರೋ? ಆಗ ರಾಜ್ಯ ಸರಕಾರ ಎಚ್ಚೆತ್ತು ಕೊಂಡಿದೆ. ರೈತರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ಇದರಲ್ಲಿ ವಿಜಯೇಂದ್ರ ಹೆಗ್ಗಳಿಕೆ ಏನು ಬಂತು?" ಅನ್ನತೊಡಗಿದ್ದಾರೆ.
ಅದರೆ ಯಾರೇನೇ ಹೇಳಲಿ, ಈ ಎಪಿಸೋಡಿನಲ್ಲಿ ವಿಜಯೇಂದ್ರರ ವರ್ಚಸ್ಸು ಹೆಚ್ಚಿದೆ ಯಲ್ಲದೆ, 90ರ ದಶಕದಲ್ಲಿ ಅವರ ತಂದೆ ಯಡಿಯೂರಪ್ಪ ಅವರು ನಡೆಸುತ್ತಿದ್ದ ಬೀದಿ ಹೋರಾಟದ ದಿನಗಳು ಪುನರಾವರ್ತನೆಗೊಂಡಂತೆ ಭಾಸವಾಗುತ್ತಿದೆ.
ಕೋರ್ ಕಮಿಟಿಗೆ ಕುಮಾರಣ್ಣ?
ಇನ್ನು ಜೆಡಿಎಸ್ ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದಿಂದ ಶಾಸಕ ಜಿ.ಟಿ.ದೇವೇ ಗೌಡರು ಕೆಳಗಿಳಿಯುವುದು ನಿಶ್ಚಿತವಾಗಿದೆಯಲ್ಲ? ಹೀಗೆ ಅವರು ಖಾಲಿ ಮಾಡುವ ಜಾಗಕ್ಕೆ ನೀವೇ ಬನ್ನಿ ಅಂತ ಪಕ್ಷದ ನಾಯಕರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯವರನ್ನು ಆಗ್ರಹಿಸುತ್ತಿದ್ದಾರಂತೆ. ಕಾರಣ? ಈ ಸ್ಥಾನಕ್ಕೆ ಯಾರ ಹೆಸರನ್ನು ಪರಿಗಣಿಸಲು ಹೋದರೂ ಅವರು ಹಿಂಜರಿಯತೊಡಗಿದ್ದಾರೆ.
ಅಷ್ಟೇ ಅಲ್ಲ, ರಾಜ್ಯ ರಾಜಕಾರಣ ನಿರ್ಣಾಯಕ ತಿರುವು ಪಡೆಯುತ್ತಿರುವ ಈ ಸಂದರ್ಭ ದಲ್ಲಿ ಕುಮಾರಣ್ಣ ಅವರೇ ಕೋರ್ ಕಮಿಟಿ ಅಧ್ಯಕ್ಷರಾದರೆ ಒಳ್ಳೆಯದು ಎಂದು ಹೇಳತೊಡಗಿದ್ದಾರೆ. ಪರಿಣಾಮ? ಕುಮಾರಸ್ವಾಮಿ ಅವರಿಗೀಗ ಧರ್ಮಸಂಕಟ. ಯಾಕೆಂದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜತೆ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನೂ ಹೊರುವುದು ಎಂದರೆ ಭಾರ ಭಾರ.
ಅಂದ ಹಾಗೆ, ಈಗಾಗಲೇ ಯೋಚಿಸಿದಂತೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದರೆ ಈ ಕಡೆ ಕೋರ್ ಕಮಿಟಿಯ ಜವಾಬ್ದಾರಿ ಹೊರಬಹುದಿತ್ತು ಎಂಬುದು ಕುಮಾರಸ್ವಾಮಿ ಅವರ ಯೋಚನೆ. ಗಮನಿಸಬೇಕಾದ ಅಂಶವೆಂದರೆ ನಿಖಿಲ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲು ಪಕ್ಷದಲ್ಲೀಗ ಯಾರ ತಕರಾರೂ ಇಲ್ಲ. ಅದರೆ ವಿಧಾನಸಭೆ ಚುನಾವಣೆ ಹತ್ತಿರ ಇಲ್ಲದಿರುವಾಗ ನಿಖಿಲ್ ಅವರಿಗೆ ತಕ್ಷಣ ಜವಾಬ್ದಾರಿ ವಹಿಸುವುದು ಕುಮಾರಸ್ವಾಮಿಯವರಿಗೆ ಇಷ್ಟವಿಲ್ಲ.
ಪರಿಣಾಮ? ಈ ವಾರ ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷದ ನಾಯಕರ ಜತೆ ಮಹತ್ವದ ಸಭೆ ನಡೆಸಲು, ಅಂತಿಮ ತೀರ್ಮಾನ ಕೈಗೊಳ್ಳಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಲಾಸ್ಟ್ ಸಿಪ್: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಕಚ್ಚಾಟಕ್ಕೆ ಬ್ರೇಕ್ ಬೀಳುವ ಲಕ್ಷಣ ದಟ್ಟವಾಗಿದೆಯಲ್ಲ? ಈ ಹಿನ್ನೆಲೆಯಲ್ಲಿಯೇ ದಿಲ್ಲಿಯ ಕೆಲ ಮಾಧ್ಯಮ ಪ್ರತಿನಿಧಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರಂತೆ. ಈ ಸಂದರ್ಭ ದಲ್ಲಿ ಖರ್ಗೆಯವರನ್ನು ಅವರು, “ಈ ಸಂದರ್ಭದಲ್ಲಿ ನೀವು ಕರ್ನಾಟಕದ ಸಿಎಂ ಆಗಲು ಬಯಸುತ್ತೀರಾ?" ಎಂದು ಕೇಳಿದ್ದಾರೆ. ಅಗ ಖರ್ಗೆಯವರು, “ಈ ವಿಷಯದಲ್ಲಿ ವರಿಷ್ಠರ ಬಳಿ ನಾನು ಹೇಗ್ರೀ ಕೇಳೋಕಾಗುತ್ತೆ. ಚುನಾವಣೆಯಲ್ಲಿ ಸೋತರೂ ನನಗೆ ವರಿಷ್ಠರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ, ವಿರೋಧ ಪಕ್ಷದ ನಾಯಕನ ಸ್ಥಾನಗಳನ್ನು ನೀಡಿದ್ದಾರೆ. ಇಷ್ಟೆಲ್ಲ ಆದ ಮೇಲೂ ನನಗೆ ಸಿಎಂ ಸ್ಥಾನ ಕೊಡಿ ಅಂತ ಹೇಗೆ ಕೇಳೋಕಾ ಗುತ್ರೀ?" ಅಂತ ಮರುಪ್ರಶ್ನಿಸಿದರಂತೆ.