ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Naveen Sagar Column: ರಾಮನ ತಾತನ ಮುತ್ತಾತನ ಹೆಸರೇನು ಹೇಳುವಿರಾ ?

ಒಮ್ಮೆ ಸಣ್ಣ ಟೆಸ್ಟ್ ಮಾಡಿ ನೋಡಿ. ಔರಂಗಜೇಬನ ತಂದೆ ಹೆಸರೇನು ಎಂದು ಕೇಳಿ. ತಕ್ಷಣ ಷಹಜಹಾನ್ ಎಂಬ ಉತ್ತರ ಬರುತ್ತದೆ. ಷಹಜಹಾನ್ ತಂದೆ ಯಾರೆಂದು ಕೇಳಿದರೆ ಜಹಾಂಗೀರ್ ಎಂದೂ, ಜಹಾಂಗೀರ್ ತಂದೆ ಅಕ್ಬರ್ ಎಂದೂ, ಅಕ್ಬರ್ ತಂದೆ ಹುಮಾಯೂನ್, ಹುಮಾಯೂನ್ ತಂದೆ ಬಾಬರ್ ಎಂದೂ ನಿದ್ದೆಗಣ್ಣಲ್ಲಿ ಎಬ್ಬಿಸಿ ಕೇಳಿದ್ರೂ ಉತ್ತರ ಹೇಳೋಷ್ಟು ಫೀಡ್ ಆಗಿಬಿಟ್ಟಿದೆ ನಮಗೆ ಮೊಘಲ್ ಇತಿಹಾಸ!

ರಾಮನ ತಾತನ ಮುತ್ತಾತನ ಹೆಸರೇನು ಹೇಳುವಿರಾ ?

-

ಪದಸಾಗರ

ಇತ್ತೀಚೆಗೆ ಶಿರಸಿಯಿಂದ ದಾವಣಗೆರೆ ಮಾರ್ಗದಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಅಂದು ಗ್ರಾಮ ಕಾಣಿಸಿತು. ಹಸಿರು ಕ್ರಾಂತಿಯೇ ನಡೆದಿತ್ತು ಅಲ್ಲಿ. ಹಸಿರು ಕ್ರಾಂತಿ ಅಂದಾಕ್ಷಣ ಅದು ಖುಷಿ ಪಡುವ ಹಸಿರು ಕ್ರಾಂತಿ ಅಲ್ಲ. ಸರ್ವಂ ಮುಸ್ಲಿಂ ಮಯ ಎಂಬಂತೆ ಹಸಿರು ಬಾವುಟಗಳು ರಾರಾಜಿಸುತ್ತಿದ್ದವು. ಟಿಪ್ಪು ಸುಲ್ತಾನನ ಬ್ಯಾನರ್, ಕಟೌಟ್ ಮತ್ತು ಪೋಸ್ಟರ್‌ಗಳು ಎಂದರಲ್ಲಿ ತಾರಾಡುತ್ತಿದ್ದವು. ಇವರಿಗೆ ಟಿಪ್ಪು ಸುಲ್ತಾನನನ್ನು ಬಿಟ್ಟರೆ ಬೇರೆ ಐತಿಹಾಸಿಕ ನಾಯಕರೇ ಇಲ್ಲವಾ ಅಂತ ಯೋಚಿಸುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಔರಂಗಜೇಬ್ ಎಂಬ ಮಹಾಶಯನ ಪೋಸ್ಟರ್!

ಮತಾಂಧ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಿ ನಂಬಿಸಿ ಒಪ್ಪಿಸಿ‌ ಬಿಟ್ಟಿದೆ ಸರಕಾರ. ಓಕೆ. ಆದರೆ ಔರಂಗಜೇಬನನ್ನು ಹೀರೋ ಆಗಿಸುವ ಈ ಮನಸ್ಥಿತಿಯನ್ನು ಒಪ್ಪಿಕೊಳ್ಳ ಬೇಕೇ? ಯಾಕೆ? ತೀರಾ ಔರಂಗಜೇಬನನ್ನು ಆರಾಧಿಸುವ ಹಾಗೂ ಆರಾಧನೆಗೆ ಒಪ್ಪಿಗೆ ಕೊಡುವ ಹಂತಕ್ಕೆ ರಾಜ್ಯ ಬದಲಾಗಿದೆ ಅಂದರೆ ಯಾರನ್ನು ಬಯ್ಯಬೇಕು? ನಮಗೆ ಬಾಲ್ಯದಿಂದಲೂ ಹೀಗೇ ಹೇಳಿಕೊಡುತ್ತಾ ಬರಲಾಗಿದೆ. ಶಾಲೆಗಳಲ್ಲೂ ಇದನ್ನೇ ಹೇಳಿಕೊಟ್ಟಿದ್ದಾರೆ.

ಹಿಂದೂ ಧರ್ಮದ ಇತಿಹಾಸವನ್ನು ಪುರಾಣ.. ಕಾಲ್ಪನಿಕ ಅಂತ. ರಾಮಕೃಷ್ಣ ಇವೆಲ್ಲ ನಂಬಿಕೆ ಅಂತ. ಇದೇ ಕಾರಣಕ್ಕೆ ನಮ್ಮ ಇತಿಹಾಸದ ಪುಟಗಳಲ್ಲಿ ರಾಮಕೃಷ್ಣ ಇವರಿಗೆ ಸ್ಥಾನವಿಲ್ಲ. ಅಲ್ಲಿ ನಾವು ಜಾಗ ಕೊಟ್ಟಿರುವುದು ಬಾಬರ್, ಅಕ್ಬರ್, ಷಹಜಹಾನ್, ಔರಂಗಜೇಬ್, ಹೈದರ್ ಅಲಿ, ಟಿಪ್ಪೂ ಸುಲ್ತಾನ್ ಇಂಥವರಿಗೆ! ಬರೀ ಮೊಘಲರ ಮತ್ತು ಮುಸ್ಲಿಮರ ಇತಿಹಾಸವನ್ನು ಮಾತ್ರ ಕಲಿಸಿ ಅದನ್ನೇ ವೈಭವೀಕರಿಸಿ ತಲೆಗೆ ತುಂಬಿರುವುದರಿಂದ ಒಂದು ದೊಡ್ಡ ಪೀಳಿಗೆಗೆ ಅವರ ಬಗ್ಗೆ ಮಾತ್ರವೇ ಚೆನ್ನಾಗಿ ಗೊತ್ತು.

ಇದನ್ನೂ ಓದಿ: Naveen Sagar Column: ಕಪಿಲ್‌ ದೇವ್‌ ಬಗ್ಗೆ ಬಂದ ಆ ಹಾರ್ಟ್‌ ಬ್ರೇಕಿಂಗ್‌ ನ್ಯೂಸ್‌ !

ಒಮ್ಮೆ ಸಣ್ಣ ಟೆಸ್ಟ್ ಮಾಡಿ ನೋಡಿ. ಔರಂಗಜೇಬನ ತಂದೆ ಹೆಸರೇನು ಎಂದು ಕೇಳಿ. ತಕ್ಷಣ ಷಹಜಹಾನ್ ಎಂಬ ಉತ್ತರ ಬರುತ್ತದೆ. ಷಹಜಹಾನ್ ತಂದೆ ಯಾರೆಂದು ಕೇಳಿದರೆ ಜಹಾಂಗೀರ್ ಎಂದೂ, ಜಹಾಂಗೀರ್ ತಂದೆ ಅಕ್ಬರ್ ಎಂದೂ, ಅಕ್ಬರ್ ತಂದೆ ಹುಮಾಯೂನ್, ಹುಮಾಯೂನ್ ತಂದೆ ಬಾಬರ್ ಎಂದೂ ನಿದ್ದೆಗಣ್ಣಲ್ಲಿ ಎಬ್ಬಿಸಿ ಕೇಳಿದ್ರೂ ಉತ್ತರ ಹೇಳೋಷ್ಟು ಫೀಡ್ ಆಗಿಬಿಟ್ಟಿದೆ ನಮಗೆ ಮೊಘಲ್ ಇತಿಹಾಸ! ಅದೇ ನೀವು ರಾಮನ ತಂದೆ ಯಾರು ಅಂತ ಕೇಳಿ. ಹಾ ಅಂತ ಒಂದು ಸೆಕೆಂಡ್ ಯೋಚನೆ ಮಾಡಿ ದಶರಥ ಎಂಬ ಉತ್ತರ ಉದುರಿಸುತ್ತಾರೆ.

ದಶರಥನ ತಂದೆ ಯಾರು ಎಂದು ಕೇಳಿದರೆ, ಉಹೂಂ.. ನಿಮಗೆ ಉತ್ತರ ಸಿಗೋದೇ ಇಲ್ಲ. ಲಕ್ಷ ಜನರನ್ನು ಕೇಳಿದರೂ ಸಿಗುವ ಉತ್ತರ ಒಂದೇ. ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ! ಹಾಗಾದರೆ ದಶರಥನಿಗೆ ತಂದೆಯೇ ಇರಲಿಲ್ವಾ? ತಂದೆ ಇಲ್ಲದೆ ದಶರಥ ಹುಟ್ಟಿದ್ದಾ? ವಿಷಯ ಇಷ್ಟೇ. ನಮ್ಮ ಇತಿಹಾಸ, ನಮ್ಮ ದೇಶ ಈ ವಂಶವೃಕ್ಷದ ಬಗ್ಗೆ ಮಕ್ಕಳಿಗೆ ಹೇಳಿಕೊಟ್ಟಿಲ್ಲ. ಇದನ್ನು ಪುರಾಣ, ಕಾಲ್ಪನಿಕ ಎಂದು ಹೇಳಿ ನಂಬಿಸಿಬಿಟ್ಟಿದೆ.

ಇಂಗ್ಲಿಷಿನಲ್ಲಿ ಇದಕ್ಕೊಂದು ಪಾಲಿಶ್ಡ್ ಪದ ಇದೆ. ಮೈಥಾಲಜಿ ಎಂದು. ಆ ಪದದ ಮೂಲಕವೇ ನಮ್ಮ ರಾಮಾಯಣ ಮಹಾಭಾರತ ಎಲ್ಲವನ್ನೂ ಸುಳ್ಳು (ಮಿಥ್ಯ) ಎಂದು ಹೇಳಿಬಿಟ್ಟಿದ್ದಾರೆ! ಗೌರಿ ಲಂಕೇಶ್, ಭಗವಾನ್, ನಿಜಗುಣ ಮುಂತಾದ ನಕಲಿ ಕ್ರಾಂತಿಕಾರಿಗಳು, ಭಾಷಣಕೋರರು ಇದರ ಮುಂದುವರಿದ ಭಾಗವಾಗಿ, ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ.. ರಾಮ ಕಾಲ್ಪನಿಕ ಎಂದೆಲ್ಲ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ್ದು ಹೇಗೆ ಮರೆಯೋಕೆ ಸಾಧ್ಯ? ದಶರಥನ ತಂದೆ ಯಾರೆಂದು ನಾವು ನಮ್ಮ ಹಿಂದೂ ಧರ್ಮೀಯರಿಗೆ ತಿಳಿಸಿಯೇ ಕೊಟ್ಟಿಲ್ಲ.

Naveen S 1011

ಹೇಳಿಕೊಡಬೇಕೆಂದು ನಮ್ಮ ಶಿಕ್ಷಣ ವ್ಯವಸ್ಥೆಗೂ ಅನಿಸಿಲ್ಲ. ಇದು ದುರಂತ. ನಿಮ್ಮ ಗಮನಕ್ಕಿರಲಿ; ದಶರಥನ ತಂದೆಯ ಹೆಸರು ಅಜ. ಅಜನ ತಂದೆ ನಾಭಾಗ. ನಾಭಾಗನ ತಂದೆ ಯಯಾತಿ. ಯಯಾತಿ ಯ ತಂದೆ ನಹುಷ. ನಹುಷನ ತಂದೆ ಅಂಬಋಷಿ ಅಥವಾ ಅಂಬರೀಶ. ಅಂಬಋಷಿಯ ತಂದೆ ಪ್ರಶುಷ್ರುಕ. ಪ್ರಶುಷ್ರುಕನ ತಂದೆ ಮರು. ಮರು ತಂದೆ ಶೀಘ್ರಗ. ಶೀಘ್ರಗನ ತಂದೆ ಅಗ್ನಿವರ್ಣ. ಅಗ್ನಿವರ್ಣನ ತಂದೆ ಸುದರ್ಶನ. ಸುದರ್ಶನನ ತಂದೆ ಶಂಖಣ. ಶಂಖಣನ ತಂದೆ ಪ್ರವ್ರಧ. ಪ್ರವ್ರಧನ ತಂದೆ ಅನ್ಶುಮನ್.

ಅನ್ಶುಮನ್ ತಂದೆ ದಿಲೀಪ. ದಿಲೀಪನ ತಂದೆ ಭಗೀರಥ. ಭಗೀರಥ ಅಂದರೆ ಅದೇ ಭಗೀರಥ; ಗಂಗೆಯನ್ನು ಕರೆತಂದವ. ಇಲ್ಲಿಗೆ ಮುಗಿಯುವುದಿಲ್ಲ ರಾಮನ ವಂಶವೃಕ್ಷ. ಭಗೀರಥನ ತಂದೆ ಯಾರು ಅಂತ ಕೇಳಿ. ಭಗೀರಥನ ತಂದೆ ಕುಕುಸ್ಥ. ಕುಕುಸ್ಥನ ತಂದೆ ರಘು. ಹೌದು. ನಾವು ರಘು ಕುಲ.. ರಘುವಂಶ ಎಂದು ಕರೆಯುತ್ತೇವಲ್ಲ ಅದರ ಆರಂಭ ಇರುವುದೇ ಇಲ್ಲಿ. ಹಾಗಾದರೆ ರಘುಕುಲ ದಿಂದಲೇ ಶುರು ಆಗಿz ರಾಮನ ವಂಶವೃಕ್ಷ? ಇಲ್ಲ. ಅದಕ್ಕೂ ಹಿಂದೆ ಹಲವಾರು ತಲೆಮಾರು ಇವೆ. ರಘುವಿನ ತಂದೆ ಹೆಸರು ರಾಜಾ ಅಸಮಂಜ. ರಾಜಾ ಅಸಮಂಜನ ತಂದೆ ರಾಜಾ ಸಗರ. ರಾಜಾ ಸಗರನ ತಂದೆ ಅಸಿತ. ಅಸಿತನ ತಂದೆ ರಾಜಾ ಭರತ.

ರಾಜಾ ಭರತನ ತಂದೆ? ಧ್ರುವಸಂಧಿ. ಧ್ರುವಸಂಧಿಯ ತಂದೆ ರಾಜಾ ಸುಸಂಧಿ. ರಾಜಾ ಸುಸಂಧಿಯ ತಂದೆ ರಾಜಾ ಮಾಂಧಾತ. ರಾಜಾ ಮಾಂಧಾತನ ತಂದೆ ಯುವನಾಶ್ರೀ. ಯುವನಾಶ್ರೀಯ ತಂದೆ ಧುಂಧುಮಾರ. ಧುಂಧುಮಾರನ ತಂದೆ ತ್ರಿಶಂಕು. ತ್ರಿಶಂಕುವಿನ ತಂದೆ? ಪೃಥು. ಪೃಥುವಿನ ತಂದೆ ಅನರಣ್ಯ. ಅನರಣ್ಯನ ತಂದೆ ರಾಜಾ ಬಾಣ. ರಾಜಾ ಬಾಣನ ತಂದೆ ವಿವಸ್ವನ. ವಿವಸ್ವನನ ತಂದೆ ಮನು. ಮನುವಿನ ತಂದೆ ಇಕ್ಷುವಾಕು. ಇಕ್ಷುವಾಕುವಿನ ತಂದೆ ರಾಜಾ ಕುಕ್ಷಿ. ರಾಜಾ ಕುಕ್ಷಿಯ ತಂದೆ ರಾಜಾ ವಿಕುಕ್ಷಿ. ರಾಜಾ ವಿಕುಕ್ಷಿಯ ತಂದೆ ರಾಜಾ ಕಶ್ಯಪ. ರಾಜಾ ಕಶ್ಯಪನ ತಂದೆ ರಾಜಾ ಮರೀಚಿ. ಮರೀಚಿಯ ತಂದೆ ಬ್ರಹ್ಮ!

ಇದು ಪ್ರಭು ಶ್ರೀರಾಮನ ವಂಶದ ಬೇರು! ಅಂದರೆ ಶ್ರೀರಾಮನ ವಂಶದ ಮೂಲಪುರುಷ ತ್ರಿಮೂರ್ತಿ ಗಳಬ್ಬರಾದ ಬ್ರಹ್ಮದೇವ. ಬ್ರಹ್ಮನ ಮೂವತ್ತೊಂಬತ್ತನೆಯ ಪೀಳಿಗೆ, ಮೂವತ್ತೊಂಬತ್ತನೆಯ ತಲೆಮಾರು ಶ್ರೀರಾಮ. ನಲವತ್ತನೆಯ ಪೀಳಿಗೆ ಲವಕುಶರು ಅಂತ ಹೇಳ್ಬಹುದು. ಈಗ ಹೇಳಿ.. ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲವಾ? ಆರೋ ಏಳೋ ದುರುಳ ರಾಜರ ವೈಭವೀಕರಣದ ಮೂಲಕ ಇತಿಹಾಸ ಬರೆದ ನಮ್ಮ ಇತಿಹಾಸಕಾರರಿಗೆ, ರಾಮನ ವಂಶವೃಕ್ಷ ಮಾತ್ರ ಕಾಲ್ಪನಿಕ ಮತ್ತು ಪುರಾಣ!

ಮೊಘಲ್ ರಾಜರ ಬಗ್ಗೆ ಕೇಳಿದ ಕೂಡಲೇ ಪಟಪಟನೆ ಉತ್ತರ ಕೊಡುವ ನಾವು ರಾಮನ ತಂದೆ, ತಾತ ಮುತ್ತಾತನ ಬಗ್ಗೆ ಕೇಳಿದಾಗ ಕಕ್ಕಾಬಿಕ್ಕಿ ಆಗಬೇಕೇ? ರಾಮನಿಂದ ಬ್ರಹ್ಮನ ತನಕ ಇರುವ ಸುದೀರ್ಘ ವಂಶವೃಕ್ಷ ಕೊಡಲಾರೆವೇ? ಔರಂಗಜೇಬನೆಂಬ ಪರಮ ಕ್ರೂರಿ, ವಿಕೃತನನ್ನು ಇತಿಹಾಸ ವೈಭವೀಕರಿಸುವು ದಕ್ಕೆ ಅವಕಾಶವಾಗಿದ್ದು ಹಿಂದೂ ಇತಿಹಾಸ ಮರೆಯಾಗಿದ್ದರ ಫಲವಲ್ಲವೇ? ಹಿಂದೂ ದೇವಾಲಯ ಗಳನ್ನು ಧ್ವಂಸಗೊಳಿಸಿದ ಔರಂಗಜೇಬನ ಬ್ಯಾನರ್ ಪೋಸ್ಟರ್‌ಗಳನ್ನು ಈ ದೇಶ ಸಹಿಸಬೇಕೇ? ಯಾರಿಗೆ ಅನುಕರಣೀಯವಾಗಿತ್ತು ಔರಂಗಜೇಬನ ವ್ಯಕ್ತಿತ್ವ? ಔರಂಗಜೇಬ್ ಈ ದೇಶ ಕಂಡ ಅತ್ಯಂತ ಕ್ರೂರ ರಾಜರಬ್ಬ.

ಮೊಘಲ್ ದೊರೆಗಳೇ ಕ್ರೂರಿಗಳು, ಅವರ ಅತಿ ಕ್ರೂರಿ, ಅತಿ ನೀಚ, ದೊಡ್ಡ ಅತ್ಯಾಚಾರಿ ರಾಜ ಅಂದ್ರೆ ಅದು ಔರಂಗಜೇಬ್. ಹಿಂದೂ ಧರ್ಮದ, ದೇವಾಲಯಗಳ ಮೇಲೆ ವಿಪರೀತವಾಗಿ ದಾಳಿ ಮಾಡಿ ದವನು, ಹಿಂದೂ ಗಳನ್ನು ಅತಿಯಾಗಿ ಶಿಕ್ಷಿಸಿದವನೂ ಇದೇ ಔರಂಗಜೇಬ್. ಷಹಜಹಾನ್‌ಗೆ ನಾಲ್ವರು ಮಕ್ಕಳು. ದಾರ ಶಿಕೋ, ಶುಜಾ, ಔರಂಗಜೇಬ್ ಮತ್ತು ಮುರಾದ್. ಷಹಜಹಾನ್‌ಗೆ ಮೊದಲನೆಯ ಮಗ ದಾರ ಶಿಕೋ ಮೇಲೆ ಹೆಚ್ಚು ಪ್ರೀತಿ. ಮಿಕ್ಕ ಮೂವರು ಬೇರೆ ಬೇರೆ ಸಂಸ್ಥಾನ ಗಳನ್ನು ನೋಡಿಕೊಂಡು ಇರುತ್ತಾರೆ. ‌

ದಾರಾ ಮಾತ್ರ ಅಪ್ಪನ ಜೊತೆಯೇ ದೆಹಲಿಯ ರಾಜಧಾನಿಯಲ್ಲಿ ಇರುತ್ತಾನೆ. ಒಂದು ದಿನ ವಯೋ ಸಹಜವಾಗಿ ಷಹಜಹಾನ್ ದಿಢೀರ್ ಕಾಯಿಲೆ ಮಲಗುತ್ತಾನೆ. ಈ ಸುದ್ದಿ ಇಡೀ ರಾಜ್ಯದ ತುಂಬ ಹಬ್ಬುತ್ತೆ. ಷಹಜಹಾನ್‌ಗೆ ವಿಪರೀತ ಅನಾರೋಗ್ಯ ಎಂಬ ಸುದ್ದಿ ಎಲ್ಲ ಕಡೆ ಹರಡುತ್ತಿದ್ದಂತೆ, ಈ ಶುಜಾ, ಮುರಾದ್ ಮತ್ತು ಔರಂಗಜೇಬ್ ‘ಅಪ್ಪ ಸತ್ತುಹೋಗಿದ್ದಾನೆ. ಆದರೆ ದಾರಾ ಶಿಕೋ ಈ ವಿಷಯವನ್ನು ಮುಚ್ಚಿಡುತ್ತಿದ್ದಾನೆ. ತಾನೇ ರಾಜ ಆಗಬೇಕು ಎಂದು ಹುನ್ನಾರ ನಡೆಸಿದ್ದಾನೆ’ ಎಂದು ಭಾವಿಸುತ್ತಾರೆ.

ಎರಡನೆಯ ಮಗ ಶುಜಾ ತಾನಿದ್ದ ಜಾಗದಿಂದಲೇ ಇನ್ನು ಮುಂದೆ ನಾನೇ ರಾಜ ಅಂತ ಘೋಷಣೆ ಮಾಡಿ ಬಿಡುತ್ತಾನೆ. ಹಾಗೆ ಅನೌ ಮಾಡ್ಕೊಂಡು ಸೀದಾ ಅಪ್ಪನ ರಾಜಧಾನಿ ಕಡೆ ತನ್ನ ಸೇನೆ ಜೊತೆ ಪ್ರಯಾಣ ಬೆಳೆಸುತ್ತಾನೆ. ವಾರಾಣಸಿ ಬಳಿ ಬರ್ತಾ ಇದ್ದ ಹಾಗೆ ಇವನ ಮೇಲೆ ಅಣ್ಣ ದಾರ ಶಿಕೋನ ಮಗ ಸುಲೇಮಾನ್ ದಾಳಿಗೈಯ್ಯುತ್ತಾನೆ. ಅತ್ತ ಅಹಮದಾಬಾದ್‌ನಲ್ಲಿ ನಾಲ್ಕನೆಯ ಮಗ ಮುರಾದ್ ತಾನೇ ರಾಜ ಎಂದು ಘೋಷಣೆ ಮಾಡಿಕೊಳ್ಳುತ್ತಾನೆ. ಆಗ ಔರಂಗಜೇಬ್ ಮತ್ತು ಮುರಾದ್ ಕೈ ಕೈ ಮಿಲಾಯಿಸ್ತಾರೆ. ಅಣ್ಣ ದಾರಾನನ್ನು ಸಾಯಿಸಲು ಇಬ್ಬರೂ ಸೇರಿಕೊಳ್ಳುತ್ತಾರೆ.

ಮೊದಲು ದಾರಾ ಶಿಕೋನನ್ನು ಸೋಲಿಸಿ ರಾಜ್ಯವನ್ನು ವಶಪಡಿಸಿಕೊಂಡು ರಾಜ್ಯವನ್ನು ಇಬ್ಬರೂ ಸಮಭಾಗ ಮಾಡಿಕೊಳ್ಳುವುದೆಂದು ತೀರ್ಮಾನವಾಗಿರುತ್ತದೆ. ದಾರ ಶಿಕೋ ಹೆದರಿ ಜೀವಭಯದಿಂದ ತಲೆ ಮರೆಸ್ಕೊಂಡು ಓಡಿಹೋಗುತ್ತಾನೆ. ಆಗ ಔರಂಗಜೇಬ್ ತನ್ನ ಅಸಲಿ ಮುಖವನ್ನು ತೋರು ತ್ತಾನೆ. ಸಹೋದರ ಮುರಾದನನ್ನೇ ಮಾರಕಾಸ್ತ್ರದಿಂದ ಚುಚ್ಚಿ ಕೊಂದು ಬಿಡುತ್ತಾನೆ.

ಹಿಂದೂಸ್ಥಾನಕ್ಕೆ ಈಗ ಔರಂಗಜೇಬನೇ ಏಕಚಕ್ರಾಧಿಪತಿ! ದಾರಾ ಶಿಕೋ ನಿಜಕ್ಕೂ ಒಳ್ಳೆ ಮನುಷ್ಯ ನೂ, ಧರ್ಮಸಹಿಷ್ಣು ಮತ್ತು ಉದಾರಿಯೂ ಆಗಿರುತ್ತಾನೆ. ಆತ ಬದುಕಿದ್ದರೆ ಮುಂದೆ ಜನಪ್ರಿಯ ನಾಗಿ ತನ್ನ ಸಿಂಹಾಸನಕ್ಕೆ ಸಂಚಕಾರ ಬರುತ್ತದೆಂದು ಔರಂಗಜೇಬ್ ಅವನನ್ನು ಹುಡುಕಿಸಿ, ಸೆರೆ ಹಿಡಿಸಿ ಶಿರಚ್ಛೇದ ಮಾಡುತ್ತಾನೆ. ಆ ತಲೆರಹಿತ ದೇಹವನ್ನು ಇಡೀ ರಾಜ್ಯದ ತುಂಬ ಮೆರವಣಿಗೆ ಮಾಡಿಸುತ್ತಾನೆ.

ನಿಮ್ಮ ಪ್ರೀತಿಯ ನಾಯಕ ಇನ್ನಿಲ್ಲ ಅಂತ ಕೂಗಿಸಿ ವಿಕೃತ ಸಂತೋಷ ಪಡುತ್ತಾನೆ. ನಂತರ ದಾರಾ ಶಿಕೋನ ಮಗ ಸುಲೇಮಾನ್‌ನನ್ನು ಸೆರೆ ಹಿಡಿಯುವ ಈತ ಅವನಿಗೆ ಎರಡು ಆಯ್ಕೆಗಳನ್ನು ಕೊಡುತ್ತಾನೆ. ನಿನಗೆ ಮರಣದಂಡನೆ ಬೇಕೋ ಅಥವಾ ಸ್ಲೋ ಪಾಯಿಸನ್ ಹಾಕಿ ಇಂಚಿಂಚಾಗಿ ಕೊಲ್ಲಲೋ ಎಂದು! ಅದಕ್ಕೆ ಸುಲೇಮಾನ್ ಮೊದಲ ಆಯ್ಕೆ ಕೇಳುತ್ತಾನೆ. ಆದರೆ ಔರಂಗಜೇಬ್, ಸುಲೇಮಾನ್‌ನನ್ನು ಜೈಲಲ್ಲಿಟ್ಟು ದಿನವೂ ಅವನಿಗೆ ಸ್ಲೋ ಪಾಯಿಸನ್ ಕೊಟ್ಟು ಎರಡು ವರ್ಷ ನರಕ ಯಾತನೆ ನೀಡುತ್ತಾನೆ.

ಸಿಖ್ ಗುರು ತೇಜ್ ಬಹದ್ದೂರ್ ಸಿಂಗ್ ಅವರನ್ನು ಸುಖಾಸುಮ್ಮನೆ ಬಂಧನದಲ್ಲಿಡುತ್ತಾನೆ. ಕಾರಣ ಆತ ಸಿಖ್ ಧರ್ಮೀಯ ಎಂದು. ಮತಾಂತರ ಅಥವಾ ಸಾವು ಎಂಬ ಎರಡು ಆಪ್ಶನ್ ಕೊಡುವ ಔರಂಗಜೇಬ್, ಐದು ದಿನಗಳ ಕಾಲ ಸಿಖ್ ಗುರುವನ್ನು ಉಗ್ರವಾಗಿ ಹಿಂಸಿಸಿ, ನಂತರ ಗಲ್ಲಿಗೇರಿಸುತ್ತಾ ನೆ. ತನಗೆ ಜನ್ಮ ಕೊಟ್ಟ ತಂದೆಗೇ ಹೇಗೆಲ್ಲ ಟಾರ್ಚರ್ ಕೊಟ್ಟ ಈ ರಾಕ್ಷಸ ಎಂಬುದನ್ನು ಓದಿದರೆ ಔರಂಗಜೇಬನನ್ನು ಇತಿಹಾಸದ ಪುಟಗಳಲ್ಲಿ ನಾವು ಓದಿದ ಪಾಪ ತೊಳ್ಕೊಳೋಕೆ ಮರುಜನ್ಮ ಎತ್ತಿ ಬರಬೇಕಾಗುತ್ತದೆ. ‌

ಹಿರಿಮಗ ದಾರ ಶಿಕೋನನ್ನು ಬೆಂಬಲಿಸಿದ ಅನ್ನೋ ಕಾರಣಕ್ಕೆ, ಅನಾರೋಗ್ಯದಲ್ಲಿದ್ದ ಅಪ್ಪನನನ್ನು ಆಗ್ರಾ ಕೋಟೆಯಲ್ಲಿ ಬಂಧಿಸಿಟ್ಟು, ಅವನಿಗೆ ಚಿಕಿತ್ಸೆ ಕೊಡಿಸುವ ಬದಲು ಆ ಜೈಲಲ್ಲಿ ಊಟ ನೀರು ಸಿಗದೇ ಇರುವ ಹಾಗೆ ಮಾಡುತ್ತಾನೆ. ಆಗ್ರಾ ಕೋಟೆಗೆ ವಾಟರ್ ಸಪ್ಲೈನೇ ಇಲ್ಲದ ಹಾಗೆ ಮಾಡಿ ಬಿಡುತ್ತಾನೆ.

ಅಪ್ಪನ ಜೊತೆ ತನ್ನ ಸೋದರಿ ಜಹನಾರಾಗೂ ಇದೇ ಶಿಕ್ಷೆ ಕೊಡುತ್ತಾನೆ. ಅವರಿಬ್ಬರೂ ಜೈಲಿನಲ್ಲಿ ಅನ್ನ ನೀರು ಇಲ್ಲದೇ ಸಾಯುತ್ತಾರೆ! ರಾಜನಾದ ನಂತರವೂ ಈತನ ವಿಕೃತಿ ಕ್ರೌರ್ಯ ನಿಲ್ಲುವುದಿಲ್ಲ. ಮುಸ್ಲಿಮರೆಲ್ಲರೂ ಮುಸ್ಲಿಮೇತರರ ವಿರುದ್ಧ ಯುದ್ಧ ಸಾರಲೇಬೇಕು. ಮುಸಲ್ಮಾನ ಅಲ್ಲದೇ ಇರುವವರು ಈ ಭೂಮಿ ಮೇಲೆ ಇರಬಾರದು. ಒಂದೋ ಕನ್ವರ್ಟ್ ಆಗಬೇಕು ಅಥವಾ ಸಾಯಬೇಕು ಎಂಬ ಆದೇಶ ನೀಡಿದ ರಾಜ ಔರಂಗಜೇಬ್.

ಅನ್ಯಧರ್ಮೀಯರಾಗಿರೋ ಕಾರಣಕ್ಕೆ ಕಟ್ಟಬೇಕಾಗಿರೋ ತೆರಿಗೆ ಜಿಜ್ಯಾ ಟ್ಯಾಕ್ಸ್ ಹೇರಿದ್ದು ಇದೇ ಔರಂಗಜೇಬ್. ಇದನ್ನೆಲ್ಲ ಇತಿಹಾಸಕಾರರು ಯಾಕೆ ಬರೆದು ತಿಳಿಸಲಿಲ್ಲ? ಇಂಥ ದುರುಳನನ್ನು ವೈಭವೀಕರಿಸುವುದಕ್ಕೆ, ಇವನ ಹೆಸರನ್ನು ಸಂಭ್ರಮಿಸುವುದಕ್ಕೆ ಅವಕಾಶ ನೀಡಬೇಕೇ? ಇದನ್ನೆಲ್ಲ ಸಹಿಸಿಕೊಳ್ಳಬೇಕೇ? ಇದನ್ನು ರಾಜ್ಯದ ಹಿಂದೂಧರ್ಮೀಯರ ದುರ್ವಿಧಿ ಎನ್ನದೆ ಬೇರೇನು ಹೇಳೋಣ.