ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಕತ್ತಲಿನತ್ತ ಸಾಗಿ, ಕತ್ತಲನ್ನು ನಿವಾರಿಸುವ ಬೆಳಕು

ಬೆಳೆಯುತ್ತಾ ಮಕ್ಕಳು ಗುಣಾವಗುಣಗಳನ್ನು ಅಳವಡಿಸಿಕೊಳ್ಳುತ್ತಾ ಕೆಲವೊಮ್ಮೆ ಹಾದಿ ತಪ್ಪುತ್ತಾರೆ. ತಂದೆ-ತಾಯಿಯಾಗಿ ಪ್ರತಿ ಬಾರಿಯೂ ಅವರನ್ನು ಗಟ್ಟಿಸಿ ಸರಿಪಡಿಸಲು ಆತ್ಮ ಗೌರವ ಅಡ್ಡ ಬರುತ್ತದೆ. ಕೆಲವೊಮ್ಮೆ ಮಕ್ಕಳಂತೂ ಉದ್ಧಟತನದಿಂದ ಉತ್ತರಿಸಿ ನಮ್ಮ ಆತ್ಮಭಿಮಾನಕ್ಕೆ ಪೆಟ್ಟು ಕೂಡ ಕೊಡು ತ್ತಾರೆ, ಹಾಗೆಂದು ತಂದೆ-ತಾಯಿಗಳಾಗಿ ನಾವು ಕೈಚೆಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

Roopa Gururaj Column: ಕತ್ತಲಿನತ್ತ ಸಾಗಿ, ಕತ್ತಲನ್ನು ನಿವಾರಿಸುವ ಬೆಳಕು

-

ಒಂದೊಳ್ಳೆ ಮಾತು

ಒಮ್ಮೆ ಶ್ರೀಕೃಷ್ಣನು ಕನ್ನಡಿಯ ಮುಂದೆ ನಿಂತು ನಿಧಾನವಾಗಿ ಚೆನ್ನಾಗಿ ಅಲಂಕಾರ ಮಾಡಿಕೊಳ್ಳು ತ್ತಿದ್ದ. ಕಿರೀಟವೇನು... ಒಡವೆವಸ್ತ್ರಗಳೇನು... ಮುಗಿಯಲಿಲ್ಲ ಅಲಂಕಾರ. ಅವನನ್ನು ಕರೆದೊಯ್ಯ ಬೇಕಾದ ರಥದ ಸಾರಥಿ ಹೊರಗೆ ಕಾದ... ಕಾದ.. ಕಾದ... ಆದರೆ ಶ್ರೀಕೃಷ್ಣ ಬರಲೇ ಇಲ್ಲ. ಸಾರಥಿಗೆ ಕುತೂಹಲ ಉಂಟಾಯಿತು.

ಇಂದು ಹೊರಗೆ ಹೋಗುವೆವೋ, ಇಲ್ಲವೋ ಎಂದು ತಿಳಿದುಕೊಳ್ಳಲು ಒಳಬಂದ. ಶ್ರೀಕೃಷ್ಣ ಕನ್ನಡಿಯ ಮುಂದೆ ನಿಂತು ತನ್ನನ್ನು ತಾನು ಮೆಚ್ಚಿಕೊಳ್ಳುತ್ತಿದ್ದ. ‘ಪ್ರಭೂ... ಒಂದು ಮಾತು. ನೀವು ತಪ್ಪು ತಿಳಿಯಬಾರದು. ಅದೇನು ಇಂದು ಅಷ್ಟೊಂದು ಅಲಂಕಾರ ಮಾಡಿಕೊಳ್ಳುತ್ತಿದ್ದೀರಿ? ಇಂದು ನಾವೆಲ್ಲಿಗೆ ಹೋಗುತ್ತಿದ್ದೇವೆ?’ ಎಂದು ಕೇಳಿದ. ಶ್ರೀಕೃಷ್ಣ ನಗುತ್ತಾ, ‘ನಾವು ಇಂದು ದುರ್ಯೋಧನ ನನ್ನು ನೋಡಲು ಹೋಗುತ್ತಿದ್ದೇವೆ’ ಎಂದು ಉತ್ತರಿಸಿದ. ಸಾರಥಿ ಅಚ್ಚರಿಯಿಂದ, ‘ದುರ್ಯೋಧನ ನನ್ನು ನೋಡಲು ಇಷ್ಟೊಂದು ಅಲಂಕಾರವೇ!’ ಎಂದು ಉದ್ಗರಿಸಿದ.

‘ಹೌದು, ದುರ್ಯೋಧನ ನನ್ನ ಬಾಹ್ಯವನ್ನು ಮಾತ್ರ ಗುರುತಿಸಿ ಮೆಚ್ಚಿಕೊಳ್ಳಬಲ್ಲ. ಅವನು ನೋಡ ಬಲ್ಲವನಾಗುವುದು ಕೇವಲ ನನ್ನ ಹೊರಗಿನ ಅಲಂಕಾರ. ಅವನು ನನ್ನ ಅಂತರಂಗವನ್ನು ಅರಿಯಲಾರ’ ಎಂದ ಶ್ರೀಕೃಷ್ಣ ಮುಗುಳ್ನಕ್ಕು.

ಇದನ್ನೂ ಓದಿ: Roopa Gururaj Column: ಕಾರ್ತಿಕ ಮಾಸದಲ್ಲಿ ದೀಪ ಬೆಳಗಿಸುವುದರ ಫಲ

ಸಾರಥಿ ‘ಪ್ರಭೂ, ಇದು ನ್ಯಾಯವಲ್ಲ, ನೀವು ಭಗವಂತ. ಅವನು ನಿಮ್ಮ ಬಳಿಗೆ ಬರಬೇಕು. ನೀವು ಅವನ ಬಳಿ ಹೋಗಬೇಕೇ? ಅವನೇ ಬರಲಿ ನಿಮ್ಮ ಬಳಿಗೆ’ ಎಂದ. ಶ್ರೀಕೃಷ್ಣ ಕನ್ನಡಿಯ ಕಡೆಯಿಂದ ಹಿಂದೆ ತಿರುಗಿ ಸಾರಥಿಯನ್ನು ನೋಡಿ ಒಂದು ಸುಂದರ ನಗೆ ಬೀರಿ ಹೇಳಿದ.

‘ಕತ್ತಲೆ ಬೆಳಕಿನತ್ತ ಬರುವುದಿಲ್ಲ, ಬೆಳಕೇ ಕತ್ತಲೆಯತ್ತ ಹೋಗಬೇಕು ಮತ್ತು ಕತ್ತಲೆಯನ್ನು ನಿವಾರಿಸ ಬೇಕು. ಗಾಢಾಂಧಕಾರವು ದಿವ್ಯ ಜ್ಯೋತಿಯ ಕಡೆಗೆ ಬರುವುದಿಲ್ಲ, ದಿವ್ಯ ಜ್ಯೋತಿಯು ಗಾಢಾಂಧ ಕಾರದ ಕಡೆಗೆ ತೆರಳಿ ಅದನ್ನು ನಿವಾರಿಸಬೇಕು’ ಎಂದ. ಸಾರಥಿ ಈ ಮಾತನ್ನು ಕೇಳಿ ಕೈಮುಗಿದು ನಮಸ್ಕರಿಸಿದ.

ಮಹಾಭಾರತದ ಇಂತಹ ಎಷ್ಟೋ ಘಟನಾವಳಿಗಳು ನಿಜವೋ, ಕಾಲ್ಪನಿಕವೋ ಹೇಳುವುದು ಕಷ್ಟ. ಆದರೆ ಅವುಗಳು ನೀಡುವ ತಾತ್ವಿಕ ಸಂದೇಶ ಮಾತ್ರ ಬದುಕಲ್ಲಿ ದೊಡ್ಡ ಪ್ರೇರೇಪಣೆಯನ್ನೇ ನೀಡು ತ್ತದೆ. ಯೋಚಿಸಿ ನೋಡಿ, ಮಕ್ಕಳನ್ನು ಬೆಳೆಸುವಾಗ ಅನೇಕ ತಂದೆ- ತಾಯಿಗಳಿಗೆ ಇಂತಹ ಸಂದಿಗ್ಧತೆ ಗಳು ಮೂಡುತ್ತವೆ.

ಬೆಳೆಯುತ್ತಾ ಮಕ್ಕಳು ಗುಣಾವಗುಣಗಳನ್ನು ಅಳವಡಿಸಿಕೊಳ್ಳುತ್ತಾ ಕೆಲವೊಮ್ಮೆ ಹಾದಿ ತಪ್ಪುತ್ತಾರೆ. ತಂದೆ-ತಾಯಿಯಾಗಿ ಪ್ರತಿ ಬಾರಿಯೂ ಅವರನ್ನು ಗಟ್ಟಿಸಿ ಸರಿಪಡಿಸಲು ಆತ್ಮಗೌರವ ಅಡ್ಡ ಬರುತ್ತದೆ. ಕೆಲವೊಮ್ಮೆ ಮಕ್ಕಳಂತೂ ಉದ್ಧಟತನದಿಂದ ಉತ್ತರಿಸಿ ನಮ್ಮ ಆತ್ಮಭಿಮಾನಕ್ಕೆ ಪೆಟ್ಟು ಕೂಡ ಕೊಡುತ್ತಾರೆ, ಹಾಗೆಂದು ತಂದೆ-ತಾಯಿಗಳಾಗಿ ನಾವು ಕೈಚೆಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಕೆಳಗೆ ಬಿದ್ದು ಅವರೇ ಮತ್ತೆ ಸಹಾಯಕ್ಕಾಗಿ ಯಾಚಿಸಲಿ ಎಂದು ಕಾಯುವುದೂ ಸಲ್ಲ. ಅಜ್ಞಾನದ ಕತ್ತಲಲ್ಲಿ ತಪ್ಪು ಹೆಜ್ಜೆ ಇಡುತ್ತಿರುವವರು ಬೆಳಕಿನ ಕಡೆಗೆ ನಡೆದು ಬರಲು ಕೆಲವೊಮ್ಮೆ ಸಾಧ್ಯ ವಾಗುವುದಿಲ್ಲ. ಪರಿಪಕ್ವ ಮನಸ್ಸಿನ ತಂದೆ ತಾಯಿಗಳೇ ಮತ್ತೊಮ್ಮೆ ತಾಳ್ಮೆ ತಂದುಕೊಂಡು ಸಮಾಧಾನ ಚಿತ್ತರದಿಂದ ಮಕ್ಕಳನ್ನು ತಿದ್ದಿ ತಿಡಿ ಸರಿದಾರಿಗೆ ತರಬೇಕಾಗುತ್ತದೆ. ಇಲ್ಲಿ ಯಾರು ಯಾರನ್ನು ಹುಡುಕಿಕೊಂಡು ಬಂದರು ಎನ್ನುವುದು ಮುಖ್ಯವಾಗುವುದಿಲ್ಲ. ಯಾರು ಕತ್ತಲಿನಲ್ಲಿ ದ್ದಾರೋ ಅವರನ್ನ ಬೆಳಕಿಗೆ ತರುವುದು ಮುಖ್ಯವಾಗುತ್ತದೆ.

ಸ್ನೇಹ ವಿಶ್ವಾಸಗಳಲ್ಲಿ ಕೂಡ ಕೆಲವೊಮ್ಮೆ ಕಷ್ಟದ ಪರಿಸ್ಥಿತಿಯಲ್ಲಿರುವವರೇ ನಮ್ಮನ್ನು ಸಹಾಯ ಕೇಳಲಿ ಎಂದು ಕಾದು ಕುಳಿತುಕೊಳ್ಳುತ್ತೇವೆ. ಆದರೆ ಸ್ವತ: ಕಷ್ಟದ ಕತ್ತಲಲ್ಲಿ ಇರುವವರು ಕೆಲವೊಮ್ಮೆ ಬೆಳಕನ್ನು ಅರಸುವುದನ್ನೇ ಮರೆತು ಬಿಟ್ಟಿರುತ್ತಾರೆ. ನಾವೇ ಕೈಚಾಚಿ ಅವರಿಗೆ ಸಹಾಯ ಮಾಡುವುದರಲ್ಲಿ ನಾವು ಕಳೆದುಕೊಳ್ಳುವುದು ಏನೂ ಇಲ್ಲ, ಖಂಡಿತ ನಾವು ಇದರಿಂದ ಚಿಕ್ಕವ ರಾಗುವುದಿಲ್ಲ. ಆದರೆ ಯಾರಿಗೆ ಸಹಾಯ ಮಾಡಬೇಕು ಅವರು ಅದಕ್ಕೆ ಅರ್ಹರೋ, ಅಲ್ಲವೋ ಎನ್ನುವುದನ್ನು ಮಾತ್ರ ಸಮಚಿತ್ತದಿಂದ ನಿರ್ಧರಿಸಬೇಕು.

ತಮಸೋಮ ಜ್ಯೋತಿರ್ಗಮಯ.. ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ನಡೆಯುವಂಥ ಶಕ್ತಿಯನ್ನ ಭಗವಂತ ಎಲ್ಲರಿಗೂ ಕರುಣಿಸಲಿ.