ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಕರುಣಾಳು ಬಾ ಬೆಳಕೇ, ನೇತಿಯಿಂದ ಇತಿಯೆಡೆಗೆ ನಡೆಸೆಮ್ಮನು

ನಮ್ಮೊಳಗಿನ ನೇತ್ಯಾತ್ಮಕತೆಯನ್ನು ನಾವೇ ಹೋಗಲಾಡಿಸಬೇಕಿದೆ. ‘ಅಸತೋ ಮಾ ಸದ್ಗಮಯ... ತಮಸೋ ಮಾ ಜ್ಯೋತಿರ್ಗಮಯ... ಮೃತ್ಯೋರ್ಮಾ ಅಮೃತಂ ಗಮಯ...’ ಎಂಬ ಪ್ರಾರ್ಥನೆ ಯೊಂದಿಗೆ ಈಗ ‘ಮೈನಸ್ಸೋ ಮಾ ಪ್ಲಸ್ಸೋ ಗಮಯ...’ ಅಂತ ಸೇರಿಸಬೇಕಾಗಿದೆ, ಇಂಗ್ಲಿಷ್-ಸಂಸ್ಕೃತ ಕಲಬೆರಕೆ ಯಾದರೂ. ಅಂತೂ ಋಣತ್ವದಿಂದ ಧನತ್ವದೆಡೆಗೆ ಹೊರಳಬೇಕಿದೆ.

ಕರುಣಾಳು ಬಾ ಬೆಳಕೇ, ನೇತಿಯಿಂದ ಇತಿಯೆಡೆಗೆ ನಡೆಸೆಮ್ಮನು

-

ತಿಳಿರು ತೋರಣ

ಅರ್ಜೆಂಟಾಗಿ ಬೇಕಾಗಿದ್ದಾರೆ! ಜನಗಳ ನಡುವೆ ಕಡಿದು ಹೋಗಿರುವ ಸೌಹಾರ್ದ ಸಂಪರ್ಕ ಮತ್ತೆ ಸ್ಥಾಪಿಸಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು, ತುಂಡಾಗಿರುವ ಫ್ಯೂಸನ್ನು ಬದಲಾಯಿಸಲು, ಒಬ್ಬ ಇಲೆಕ್ಟ್ರಿಷಿಯನ್ ಬೇಕಾಗಿದ್ದಾರೆ! ಜನರ ಸಂಕುಚಿತ ದೃಷ್ಟಿಕೋನವನ್ನು ಬದಲಾಯಿಸಲು ಒಬ್ಬ ನುರಿತ ನೇತ್ರತಜ್ಞ ಬೇಕಾಗಿದ್ದಾರೆ!

ಎಲ್ಲರ ಮುಖದಲ್ಲೂ ಮರೆಯಾಗಿರುವ ಮುಗುಳ್ನಗೆಯನ್ನು ಬರೆಯುವಂಥ ಕಲಾವಿದನೊಬ್ಬ ಬೇಕಾಗಿದ್ದಾರೆ! ನೆರೆಹೊರೆಯವರು ಸಾಮರಸ್ಯದಿಂದಿರಲು ನಡುವೆ ಸೇತುವೆ ಕಟ್ಟಲೊಬ್ಬ ಮೇಸಿ ಬೇಕಾಗಿದ್ದಾರೆ! ಜನರ ಮನಸ್ಸಿನ ತೋಟದೊಳಗೆ ಒಳ್ಳೆಯ ಯೋಚನೆಗಳನ್ನು ಬೆಳೆಸುವ ಮಾಲಿ ಯೊಬ್ಬ ಬೇಕಾಗಿದ್ದಾರೆ!

ಎಲ್ಲರ ಮನದೊಳಗೆ ಕಟ್ಟಿಕೊಂಡಿರುವ ಅಡಚಣೆ ಕಸಕಡ್ಡಿಗಳ ತೆಗೆದು ಸ್ವಚ್ಛಗೊಳಿಸಲು ಒಬ್ಬ ನಿಷ್ಣಾತ ಪ್ಲಂಬರ್ ಬೇಕಾಗಿದ್ದಾರೆ! ಜನರ ಹೃದಯದೊಳಗೆ ಹುದುಗಿರುವ ಪ್ರೀತಿ ಅನುಕಂಪವನ್ನು ಹೆಕ್ಕಿ ತೆಗೆಯಲು ಒಬ್ಬ ವಿಜ್ಞಾನಿ ಬೇಕಾಗಿದ್ದಾರೆ! ಜನರಲ್ಲಿ ಕಳೆದುಹೋಗಿರುವ ಸದ್ಭಾವನೆಗಳನ್ನು ಎಣಿಸಿ ಗುಣಿಸಿ ವೃದ್ಧಿಸಲು ಒಬ್ಬ ಗಣಿತಜ್ಞ ಬೇಕಾಗಿದ್ದಾರೆ!" ನನ್ನೊಬ್ಬ ಹಿರಿಯ ಸ್ನೇಹಿತ, ಬೆಂಗಳೂರಿನ ವಿ.ವಿಜಯೇಂದ್ರ ರಾವ್ ಮೊನ್ನೆ ಒಂದು ದಿನ ವಾಟ್ಸ್ಯಾಪ್‌ನಲ್ಲಿ ಹಂಚಿಕೊಂಡಿದ್ದಿದು.

ಇದನ್ನೂ ಓದಿ: Srivathsa Joshi Column: ಸೀತೆಯನ್ನು ರಾವಣನು ಅಶೋಕವನದಲ್ಲೇ ಕೂರಿಸಿದ್ದೇಕೆ ?

ಅವರದೇ ರಚನೆ, ಮಾಸಪತ್ರಿಕೆಯೊಂದರಲ್ಲಿ ಕವಿತೆ ರೂಪದಲ್ಲಿ ಪ್ರಕಟವಾದದ್ದಂತೆ. ಇದರಲ್ಲಿ ವ್ಯಕ್ತವಾದ ವಿಚಾರವನ್ನಷ್ಟೇ ಎತ್ತಿಕೊಳ್ಳುವುದು ನನ್ನ ಉದ್ದೇಶವಾದ್ದರಿಂದ ಹೀಗೆ ಪಠ್ಯ ರೂಪದಲ್ಲಿ ಬರೆದಿದ್ದೇನೆ. ಆಲೋಚಿಸಿದರೆ, ಕವಿತೆಯಲ್ಲಿರುವ ಒಂದೊಂದು ‘ಬೇಕಾಗಿದ್ದಾರೆ’ ಕೂಡ ಅದೆಷ್ಟು ನಿಜ ಅಂತನಿಸುವುದಿಲ್ಲವೇ? ಹೀಗಾಗಲಿಕ್ಕೆ ಕಾರಣವೇನಿರಬಹುದು? ನನಗನಿಸುವಂತೆ ಒಟ್ಟಾರೆ ಯಾಗಿ ಈಗ ಜನರ ಮನಸ್ಸು-ಹೃದಯಗಳನ್ನು ಒಂಥರದ ನೇತ್ಯಾತ್ಮಕತೆ (negativity) ಆವರಿಸಿರು ವುದೇ ಮುಖ್ಯ ಕಾರಣ. ಅದರ ಉಪಉತ್ಪನ್ನಗಳಾಗಿ ಅಸಹಿಷ್ಣುತೆ, ಸ್ವಾರ್ಥ, ಮತ್ಸರ, ಸಂತುಲನ ವಿಲ್ಲದ ಅರಿಮೆ- ಒಂದೋ ಕೀಳರಿಮೆ, ಇಲ್ಲವೇ ಭಯಂಕರ ಪೊಗರು ದಂಭ.

ಇವೆಲ್ಲದಕ್ಕೆ ತುಪ್ಪ ಸುರಿದು ಉರಿ ಹೆಚ್ಚಿಸಲಿಕ್ಕೆ ಸಾಮಾಜಿಕ ಮಾಧ್ಯಮ. ಇದು, ‘ಈಗ ಕಾಲ ಕೆಟ್ಟಿದೆ, ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು...’ ರೀತಿಯ ಹಳವಂಡ ಅಲ್ಲ. ‘ಕಾಲ ಕೆಟ್ಟೈತಂತ ನೀವು ಕಟ್ಟಿ ಮ್ಯಾಲ ಮಾತಾಡ್ತೀರಿ ಕಾಲ ಕೆಟ್ಟಿಲ್ಲಪ್ಪ ನಿಮ್ಮ ತಲಿ ಕೆಟ್ಟೈತಿ...’ ಎಂದು ಪಕ್ಕಾ ಉತ್ತರಕರ್ನಾಟಕ ಶೈಲಿಯಲ್ಲಿರುವ ‘ಪಪ್ಪಿ’ ಚಿತ್ರಗೀತೆ ಹೇಳುತ್ತಿರುವುದು ಸರಿಯೇ ಇದೆ.

ನಮ್ಮೊಳಗಿನ ನೇತ್ಯಾತ್ಮಕತೆಯನ್ನು ನಾವೇ ಹೋಗಲಾಡಿಸಬೇಕಿದೆ. ‘ಅಸತೋ ಮಾ ಸದ್ಗಮಯ... ತಮಸೋ ಮಾ ಜ್ಯೋತಿರ್ಗಮಯ... ಮೃತ್ಯೋರ್ಮಾ ಅಮೃತಂ ಗಮಯ...’ ಎಂಬ ಪ್ರಾರ್ಥನೆ ಯೊಂದಿಗೆ ಈಗ ‘ಮೈನಸ್ಸೋ ಮಾ ಪ್ಲಸ್ಸೋ ಗಮಯ...’ ಅಂತ ಸೇರಿಸಬೇಕಾಗಿದೆ, ಇಂಗ್ಲಿಷ್-ಸಂಸ್ಕೃತ ಕಲಬೆರಕೆಯಾದರೂ. ಅಂತೂ ಋಣತ್ವದಿಂದ ಧನತ್ವದೆಡೆಗೆ ಹೊರಳಬೇಕಿದೆ.

ಈ ನಿಟ್ಟಿನಲ್ಲಿ ಹಿಂದೊಮ್ಮೆ ನಾನೋದಿದ್ದ ವ್ಯಕ್ತಿತ್ವವಿಕಸನ ಆಂಗ್ಲ ಲೇಖನವೊಂದರ ಅನುವಾದಿತ ಅಂಶಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ದೀಪಾವಳಿ ಹಬ್ಬಕ್ಕೆ ಇದು ನಮಗೆಲ್ಲರಿಗೂ ಒಂದು ಹೊಸ ಬೆಳಕು ಆಗಲೆಂದು ಆಶಯ.

S Joshi 19

“8ರಲ್ಲಿ 5ನ್ನು ಕಳೆದರೆ ಎಷ್ಟು?" ಹೊಸದಾಗಿ ಅಂಕಗಣಿತ ಕಲಿಯತೊಡಗಿರುವ ಪುಟ್ಟ ಮಗುವನ್ನು ಕೇಳಿನೋಡಿ. ಎರಡೂ ಕೈಗಳ ಬೆರಳುಗಳನ್ನು ಬಳಸಿ ಲೆಕ್ಕ ಮಾಡಿ, “ಮೂರು!" ಎಂಬ ಉತ್ತರ ಬರಬಹುದು. ಈಗ, “5ರಿಂದ 8ನ್ನು ಕಳೆದರೆ ಎಷ್ಟು?" ಎಂದು ಕೇಳಿ. “ಚಿಕ್ಕ ಸಂಖ್ಯೆಯಿಂದ ದೊಡ್ಡ ಸಂಖ್ಯೆಯನ್ನು ಕಳೆಯಲು ಆಗುವುದಿಲ್ಲ!" ಎಂದಷ್ಟೇ ಉತ್ತರಿಸಬಹುದು ಆ ಮಗು.

ಏಕೆಂದರೆ ಮಗುವಿನ ‘ನಂಬರ್ ಸ್ಕೇಲ್’ನಲ್ಲಿ ಸೊನ್ನೆ ಮತ್ತು ಅದಕ್ಕಿಂತ ಹೆಚ್ಚು ಬೆಲೆಯ ಧನಸಂಖ್ಯೆ ಗಳು ಮಾತ್ರ ಇರುವುದು. ಅದೇ ಮಗು ಮುಂದೆ ಆರನೆಯ ಏಳನೆಯ ತರಗತಿಗೆ ಹೋದಾಗ “5 ರಿಂದ 8ನ್ನು ಕಳೆದರೆ ಮೈನಸ್ 3" ಎಂದು ಉತ್ತರಿಸುವುದನ್ನು ಕಲಿತಿರುತ್ತದೆ!

ಅಂದರೆ, ಕಲಿತು ಬಲಿತು ದೊಡ್ಡವರಾದಂತೆ ಸೊನ್ನೆಯ ಕೆಳಕ್ಕೆ ಇರುವ ಮೈನಸ್ ಸಂಖ್ಯೆಗಳ ಪರಿಚಯ ನಮಗೆ ಆಗಿರುತ್ತದೆ. ಅಷ್ಟೇಅಲ್ಲ, ಅಂಕಗಣಿತದ ಈ ನಂಬರ್‌ಸ್ಕೇಲ್ ನಮ್ಮ ಜೀವನದ ರೀತಿ-ನೀತಿ-ಪ್ರೀತಿಗಳಲ್ಲೂ ಕಾಣಿಸಿಕೊಳ್ಳುತ್ತದೆ. ಸೊನ್ನೆಗಿಂತ ಕಡಿಮೆ ಬೆಲೆಯ ಸಂಖ್ಯೆಗಳ ಪರಿಚಯ ವೇ ಇಲ್ಲದ ಮಗುವಿನ ಮನಸ್ಸಿನಲ್ಲಿ, ನೆಗೆಟಿವ್ ಅಂದರೇನೆಂದೇ ಗೊತ್ತಿಲ್ಲದಿರುವಾಗ ಯಾವುದೇ ವಸ್ತುವಿನ ಬಗ್ಗೆ, ವ್ಯಕ್ತಿಯ ಬಗ್ಗೆ, ಅಥವಾ ತನ್ನ ಬಗ್ಗೆಯೇ ನೆಗೆಟಿವ್ ಧೋರಣೆ ಖಂಡಿತ ಇರಲಿಕ್ಕಿಲ್ಲ, ಇರುವುದೂ ಇಲ್ಲ.

ಪ್ರಾಯವಾದಂತೆಲ್ಲ ಮೈನಸ್ ಸಂಖ್ಯೆಗಳೂ ನಂಬರ್ ಸ್ಕೇಲಲ್ಲಿ ಇರುವುದೆಂಬ ಸಂಗತಿ ಗೊತ್ತಾಗು ತ್ತದೆ. ಇದಕ್ಕೆ ಸಮಾನಾಂತರವಾಗಿ- ಬಾಹ್ಯ ಪ್ರಪಂಚದ ಪರಿಚಯ ಹೆಚ್ಚುಹೆಚ್ಚು ಆದಂತೆಲ್ಲ ಯಾವುದೋ ವಸ್ತು, ವ್ಯಕ್ತಿ, ಅಥವಾ ಅಪರೂಪಕ್ಕೆ ನಮ್ಮ ಬಗ್ಗೆಯೇ ನೆಗೆಟಿವ್ ನಿಲುವುಗಳೂ ಹುಟ್ಟಿಕೊಳ್ಳುತ್ತವೆ. ಒಮ್ಮೆ ಹುಟ್ಟಿಕೊಂಡಿತೋ, ಅದೊಂಥರದ ಕ್ಯಾನ್ಸರ್. ನಿರ್ಮೂಲನ ಕಷ್ಟ ಕಷ್ಟ.

ಒಂದಿಲ್ಲೊಂದು ಕಾರಣದಿಂದ, ಪರಿಸ್ಥಿತಿಯಿಂದ ಯಾವುದಾದರೂ ವಿಷಯದ ಬಗ್ಗೆ ಅಥವಾ ವ್ಯಕ್ತಿಯ ಬಗ್ಗೆ ನಮ್ಮಲ್ಲಿ ದ್ವೇಷ ಹುಟ್ಟಿಕೊಂಡಿರುತ್ತದೆ ಎಂದಿಟ್ಟುಕೊಳ್ಳಿ. ಆ ದ್ವೇಷವನ್ನು ಪೋಷಿಸ ಬೇಕಾದರೆ ನಾವು ಅದೆಷ್ಟು ಶಕ್ತಿ-ಸಂಯಮಗಳನ್ನು ವ್ಯಯಿಸಬೇಕಾಗುತ್ತದೆ ನೋಡಿ. ಉದಾಹರಣೆಗೆ, ನಾವು ಭಾಗವಹಿಸುವ ಒಂದು ಸಭೆ-ಸಮಾರಂಭದಲ್ಲಿ ಅಕಸ್ಮಾತ್ ಆ ‘ದ್ವೇಷಿತ ವ್ಯಕ್ತಿ’ ಕಾಣಿಸಿ ಕೊಂಡರೆ? ಆವತ್ತಿನ ಮೂಡ್ ಎಲ್ಲ ಖರಾಬ್ ಆಗುವುದಿಲ್ಲವೇ? ಆ ವ್ಯಕ್ತಿ ನಮ್ಮ ದೃಷ್ಟಿಗೆ ಬೀಳದಂತೆ ಏನೆಲ್ಲ ಸರ್ಕಸ್ ಮಾಡುತ್ತೇವೆ.

ಯಾಕೆ? ಆ ವ್ಯಕ್ತಿಯ ಬಗ್ಗೆ ನಾವು ತಳೆದಿರುವ ನೇತ್ಯಾತ್ಮಕ ನಿಲುವಿನಿಂದ. ಅದೇರೀತಿ ನಮಗಿಷ್ಟ ವಾಗದ ಸಂಗತಿಯೇನಾದರೂ ಅಪ್ಪಿತಪ್ಪಿ ನೆನಪಿಗೆ ಬಂತೆಂದರೆ ಇನ್ನಿಲ್ಲದಂತೆ ಇರಿಸುಮುರಿಸು ಅನುಭವಿಸುತ್ತೇವೆ. ಕಾರಣ ಅದೇ, ಸ್ಕೇಲ್‌ನಲ್ಲಿ ನೆಗೆಟಿವ್ ಸ್ಥಾನಗಳಲ್ಲಿ ನಾವು ಆ ವಿಷಯವನ್ನು ಶಾಶ್ವತವಾಗಿ ಸ್ಥಾಪಿಸಿಟ್ಟಿರುವುದು. ನಂಬರ್ ಸ್ಕೇಲ್‌ನಲ್ಲಿ ನೆಗೆಟಿವ್‌ನಿಂದ ಇನ್ನೂ ಬಲಭಾಗಕ್ಕೆ (ಅಥವಾ ಮೇಲ್ಭಾಗಕ್ಕೆ) ಬಂದರೆ ಸೊನ್ನೆ ಇರುವುದು ತಾನೆ? ದ್ವೇಷಿತ ವ್ಯಕ್ತಿ, ಅನಪೇಕ್ಷಿತ ಸಂಗತಿ ಮುಂತಾದವನ್ನೆಲ್ಲ ಮೈನಸ್ ವಲಯದಿಂದ ಸರಿಸಿ ‘ಸೊನ್ನೆ’ಯ ಮೇಲೆ ಸ್ಥಾಪಿಸಿದರೆ? ಸೊನ್ನೆ ಯಿಂದ ಗುಣಿಸಿದರೆ ಸೊನ್ನೆಯೇ.

ಸೊನ್ನೆ ಕೂಡಿಸಿದರೆ, ಸೊನ್ನೆ ಕಳೆದರೂ ಏನೂ ಬದಲಾಗುವುದಿಲ್ಲ ತಾನೆ? ಊಹಿಸಿಕೊಳ್ಳಿ, ಸೊನ್ನೆ ಬೆಲೆಯದಕ್ಕೆ ನಾವು ಯಾವುದೇ ನಮೂನೆಯ ಶಕ್ತಿಯನ್ನು ವ್ಯಯಿಸಬೇಕಿಲ್ಲ. ಇದನ್ನೇ ‘ದಿವ್ಯ ನಿರ್ಲಕ್ಷ್ಯ’ ಎನ್ನಬಹುದು. ಯಾವುದೇ ವಿಷಯದ ಬಗ್ಗೆಯಾಗಲೀ ವ್ಯಕ್ತಿಯ ಕುರಿತಾಗಲೀ ನಮ್ಮ ನೇತ್ಯಾತ್ಮಕ ನಿಲುವನ್ನೆಲ್ಲ ಸೊನ್ನೆಗೆ ತಂದು ಸ್ಥಾಪಿಸಿದರೆ, ಅಂದರೆ reset ಮಾಡಿಬಿಟ್ಟರೆ ಬದುಕು ನಿರುಮ್ಮಳ.

ಬೆಲೆಯಿಲ್ಲದ ಸೊನ್ನೆಯ ಮೇಲೆ ಅದೆಷ್ಟು ಸಂಗತಿಗಳಿದ್ದರೇನಂತೆ, ನಮ್ಮ ಗಂಟೇನೂ ಹೋಗುವು ದಿಲ್ಲ. ಅಷ್ಟೇಅಲ್ಲ, ಹೀಗೆ ಉಳಿತಾಯವಾಗುವ ಶಕ್ತಿಯೆಲ್ಲ ನಮ್ಮ ಇತ್ಯಾತ್ಮಕ (ಪಾಸಿಟಿವ್) ವಿಚಾರಗಳ ವಿನಿಯೋಗಕ್ಕೆ ಸಿಗುತ್ತದೆ!

ಹೇಳಿದಷ್ಟು, ಬರೆದಷ್ಟು, ಓದಿದಷ್ಟು ಸುಲಭವಲ್ಲ ನೇತ್ಯಾತ್ಮಕ ನಿಲುವುಗಳನ್ನು ಸೊನ್ನೆಯಲ್ಲಿ ಪಾರ್ಕ್ ಮಾಡುವುದು. ಕಷ್ಟಸಾಧ್ಯವಿರಬಹುದು, ಆದರೆ ಅಸಾಧ್ಯವಂತೂ ಖಂಡಿತ ಅಲ್ಲ. ವ್ಯಕ್ತಿತ್ವ ವಿಕಸನ ಶಿಬಿರದ ಟಿಪ್ಪಣಿಗಳನ್ನು ತಿರುವಿದರೆ ಅಲ್ಲಿ ಈ ಬಗ್ಗೆ ಯಥೇಷ್ಟ ಪಾಠಗಳು ಸಿಗುತ್ತವೆ. ಆದರೆ ಅದು ಬರೀ ಪುಸ್ತಕದ ಬದನೆಕಾಯಿ ಆಗಿದ್ದರೆ ಉಪಯೋಗವಿಲ್ಲ.

ಆಚರಣೆಗೆ ತರುವುದರಲ್ಲಿರುವುದು ನಿಜವಾದ ವಿಕಸನ. ಮೈ-ಮನಸ್ಸುಗಳಲ್ಲಿ ತುಂಬಿರುವ ವೈಮನಸ್ಯದ ಪಾರ್ಥೇನಿಯಂ ಕಳೆಯಂಥದನ್ನು ಬೇರುಸಹಿತ ಕಿತ್ತುಹಾಕುವುದರಲ್ಲಿನ ಪರಿಶ್ರಮ. ಅಲ್ಟ್ರಾಪಾಸಿಟಿವ್ ಆಗಿರಲು ಮತ್ತು ತನ್ಮೂಲಕ ಕ್ರಿಯಾಶೀಲ, ಸೃಜನಾತ್ಮಕ, ಶಕ್ತಿಯುತ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಉಪಯೋಗಕ್ಕೆ ಬರುವ ಕೆಲವು ಅಂಶಗಳು ಇಲ್ಲಿವೆ. ಇವು ನೇತ್ಯಾತ್ಮಕದಿಂದ ಇತ್ಯಾತ್ಮಕದೆಡೆಗಿನ ಪರಿವರ್ತನೆಗೆ ಅನುಕೂಲವಾಗುವ ಸೂತ್ರಗಳು.

೧. ನಿರಾಶಾವಾದಿಗಳ, ಅಳುಮುಂಜಿಗಳ, ಸದಾ ಗೊಣಗುತ್ತಿರುವವರ, ಅನುಗಾಲವೂ ಚಿಂತೆ ಜೀವಕ್ಕೆ ಎನ್ನ... ಎಂದು ಕೊರಗುತ್ತಿರುವವರ ಸಖ್ಯದಿಂದ ಆದಷ್ಟು ಮಟ್ಟಿಗೆ ಪ್ರತ್ಯೇಕಗೊಳ್ಳುವುದು, ದೂರ ವುಳಿಯುವುದು. ಇತ್ಯಾತ್ಮಕ ಚಿಂತನೆಗಳು ನಮ್ಮಲ್ಲಿ ಮೊಳಕೆಯೊಡೆದು ಚಿಗುರಬೇಕಾದರೆ ಮಾಡ ಬೇಕಾದ ಮೊತ್ತಮೊದಲ ಕೆಲಸ ಅದು.

೨. ಪ್ರತಿದಿನದ ಆರಂಭವನ್ನು ಮತ್ತು ಅಂತ್ಯವನ್ನು ‘ಮಾನಸಿಕ ಶಕ್ತಿಯ ಟಾನಿಕ್’ ಕುಡಿದೇ ಮಾಡುವುದು. ಯಾವ ರೀತಿಯ ಟಾನಿಕ್ ಅದು? ಸೂರ್ತಿದಾಯಕ, ಆರೋಗ್ಯಕರ, ಅಭಿವೃದ್ಧಿಯ ಪಥದ, ಆಧ್ಯಾತ್ಮಿಕ ಗುರಿಸಾಧನೆಯ ಆಲೋಚನೆಗಳು. ಒಳ್ಳೆಯ ವಿಚಾರಗಳಿರುವ ಪುಸ್ತಕಗಳ ಓದು, ಪ್ರವಚನ-ಉಪನ್ಯಾಸಗಳ ಆಲಿಸುವಿಕೆ ಇತ್ಯಾದಿ.

೩. ಚಿಕ್ಕದಿರಲಿ, ದೊಡ್ಡದಿರಲಿ ಸಾಧಿಸಿದ ಪ್ರತಿಯೊಂದು ಯಶಸ್ಸನ್ನೂ ದಾಖಲಿಸಿಕೊಳ್ಳುವುದು, ಯಥೋಚಿತವಾಗಿ ಸಂಭ್ರಮಿಸುವುದು. ನಮ್ಮದಷ್ಟೇ ಅಲ್ಲ ಇತರರ ಯಶಸ್ಸನ್ನೂ ಸಂಭ್ರಮಿಸಿ ಸ್ಪೂರ್ತಿ ಹುರುಪು ಪಡೆದರಂತೂ ಮತ್ತೂ ಒಳ್ಳೆಯದು. ಆತ್ಮವಿಶ್ವಾಸ ವೃದ್ಧಿಗೆ ಇದಕ್ಕಿಂತ ಸುಲಭ ಸೋಪಾನವಿಲ್ಲ.

೪. ವ್ಯಕ್ತಿತ್ವ ನಿರ್ಮಾಣದಲ್ಲಿ ಇನ್ನೊಂದು ಮಹಾಸ್ತಂಭವೆಂದರೆ ನಿಯತ ಮತ್ತು ನಿಯಮಿತ ದೈಹಿಕ ವ್ಯಾಯಾಮ. ಸುಂದರ ಸುದೃಢ ಶರೀರವಷ್ಟೇ ಮನಸ್ಸಿನ ಯೋಚನೆ-ಯೋಜನೆಗಳನ್ನು ಅನುಷ್ಠಾನಕ್ಕೆ ತರಬಲ್ಲದು.

೫. ಭಯ, ಚಿಂತೆ, ದೂರುವಿಕೆ ಮತ್ತು ತಪ್ಪಿತಸ್ಥ ಭಾವ- ಇವು ನಾಲ್ಕು ಮಹಾ ಅಪಾಯಕಾರಿ ಭಾವನೆಗಳು. ಪಾಸಿಟಿವ್ ಆಗಿರುವುದಕ್ಕೆ ತಡೆ ಒಡ್ಡುವಂಥವು. ಇವು ನಾಲ್ಕೂ ಒಂದಕ್ಕೊಂದು ಸರಪಳಿಯಂತೆ ಬೆಸೆದುಕೊಂಡಿರುತ್ತವೆ. ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ ಇನ್ನು ತಾನೇನೂ ಮಾಡಲಾರೆನೇನೋ ಎಂಬ ಭಯ. ಅದರಿಂದಲೇ ಚಿಂತೆ. ಮತ್ತೂ ಮುಂದೆ ಹೋಗಿ ಯಾರನ್ನಾ ದರೂ ದೂರುವುದಕ್ಕೆ ನೆಪ. ಕೊನೆಗೆ ಅಪರಾಧಿ ಭಾವನೆ. ಅದಕ್ಕಿಂತ, ಅಂಥ ನೆಗೆಟಿವ್ ವಿಚಾರಗಳಿಗೆ ಮಣೆ ಹಾಕೋದೇ ಇಲ್ಲ ಎಂಬ ನಿರ್ಧಾರ ಒಳ್ಳೆಯದು.

೬. ಕ್ಷಮಯಾ ಧರಿತ್ರೀ ಆಗಿ ಇರುವುದು. ಅಂದರೆ ಕ್ಷಮಾಗುಣವನ್ನು ರೂಢಿಸಿಕೊಳ್ಳುವುದು. ಇತರರ ತಪ್ಪನ್ನು ಅಥವಾ ತನ್ನದೇ ತಪ್ಪನ್ನು ಮನ್ನಿಸಿ ಮುಂದೆ ಮರುಕಳಿಸದಂತೆ ಎಚ್ಚರ ಮತ್ತು ಆಶಾವಾದದಿಂದ ಇರುವುದು. ತಪ್ಪನ್ನು ತಿದ್ದಿಕೊಳ್ಳುವ ಮುಕ್ತ ಮನಸ್ಸು, ವ್ಯಕ್ತಿನಿಷ್ಠನಾಗಿರದೆ ವಸ್ತುನಿಷ್ಠನಾಗಿರುವುದು ಇದನ್ನು ಸಾಧ್ಯವಾಗಿಸುತ್ತದೆ.

೭. ಇಷ್ಟಾಗಿಯೂ ನೆಗೆಟಿವಿಟಿ ನಿರ್ಮೂಲನ ಅಸಾಧ್ಯವೆನಿಸಿದಲ್ಲಿ ವಾರಕ್ಕೊಮ್ಮೆಯೋ ತಿಂಗಳಿ ಗೊಮ್ಮೆಯೋ ‘ಚಿಂತಿಸುವ ಸಮಯ’ ಎಂದೇ ಒಂದೆರಡು ಗಂಟೆಗಳ ಅವಧಿಯನ್ನು ನಿಗದಿಪಡಿಸ ಬಹುದು. ಬೇರೆ ದಿನಗಳ ಟೈಮ್‌ಟೇಬಲ್‌ನಲ್ಲಿ ಚಿಂತೆ-ಕೊರಗುಗಳಿಗೆ ಸ್ಥಾನವಿಲ್ಲ. ಅದೇನಿದ್ದರೂ ‘ಚಿಂತೆ’ ಪೀರಿಯಡ್‌ನಲ್ಲಿ ಮಾತ್ರ.

೮.ಆಸ್ತಿಕರಾಗಿದ್ದರೆ ‘ಎಲ್ಲದಕ್ಕೂ ಉನ್ನತವಾಗಿ ದೇವನೊಬ್ಬನಿದ್ದಾನೆ, ಕೈಹಿಡಿದು ನಡೆಸುತ್ತಾನೆ’ ಎಂದು, ಅಥವಾ ದೇವರಲ್ಲಿ ನಂಬಿಕೆಯಿಲ್ಲದವರಾದರೆ ‘ನನ್ನೊಳಗಿನ ವಿಶೇಷ ಶಕ್ತಿಯಿಂದಲೇ ನೆಗೆಟಿವಿಟಿಯನ್ನು ಹತ್ತಿಕ್ಕಬಲ್ಲೆ’ ಎಂದು, ದೃಢವಾಗಿ ನಂಬಿ ನಡೆದರೆ ಅದೇ ಒಂದು ದಿವ್ಯೌಷಧ.

೯. ಕ್ರೀಡಾಳುಗಳು ನಡುನಡುವೆ ಶಕ್ತಿವರ್ಧಕ ಪೇಯಗಳನ್ನು ಸೇವಿಸುವಂತೆ ನಮ್ಮ ದೈನಂದಿನ ಬದುಕಿನ ಓಡಾಟದಲ್ಲೂ ಮೂರ್ನಾಲ್ಕು ಗಂಟೆಗಳ ಅವಽಗೊಮ್ಮೆ ಕನಿಷ್ಠ ಐದು ನಿಮಿಷಗಳ ‘ಪಾಸಿಟಿವ್ ಇಂಜೆಕ್ಷನ್ ಬ್ರೇಕ್’ಗಳನ್ನು ತೆಗೆದುಕೊಳ್ಳಬೇಕು. ಆ ಅವಧಿಯಲ್ಲಿ ಮಧುರಕ್ಷಣವೊಂದರ ನೆನಪು ಮಾಡಿಕೊಳ್ಳುವುದು, ಬಂಧುಮಿತ್ರರಿಗೊಂದು ಥ್ಯಾಂಕ್ಯೂ ಮೆಸೇಜ್ ಕಳುಹಿಸುವುದು, ಅಥವಾ ಸ್ಪೂರ್ತಿ ಹೆಚ್ಚಿಸುವ ಏನಾದರೂ ಲಘು ಓದು, ಹಿತವಾದ ಸಂಗೀತ... ಹೀಗೆ ಮಾಡುವು ದರಿಂದ ರೀಚಾರ್ಚ್ ಆಗುತ್ತೇವೆ; ನೆಗೆಟಿವ್ ಯೋಚನೆಗಳು ನಮ್ಮ ಮೇಲೆ ದಾಳಿ ನಡೆಸುವ ಸಂಭವನೀಯತೆ ಕಡಿಮೆಯಾಗುತ್ತದೆ.

೧೦. ಸಂಕೀರ್ಣತೆ ( complexity ) ಬಹುತೇಕ ನೇತ್ಯಾತ್ಮಕವೇ. ಅದಕ್ಕಿಂತ, ಸರಳತೆ ( simplicity) ಯಾವತ್ತಿಗೂ ಧನಾತ್ಮಕ. ಭೌತಿಕವಾಗಿ ಮತ್ತು ಮಾನಸಿಕವಾಗಿ ರಾಶಿರಾಶಿ ಗುಡ್ಡೆ ಹಾಕಿಟ್ಟುಕೊಳ್ಳ ಬಾರದು. ಒಂದುವೇಳೆ ಇದ್ದರೂ ಅದನ್ನೆಲ್ಲ ವಿಂಗಡಿಸಿ ಒಪ್ಪಓರಣವಾಗಿಸುತ್ತ ಬಂದರೆ ನೆಗೆಟಿವಿಟಿ ಅರ್ಧದಷ್ಟು ಕಡಿಮೆಯಾದಂತೆಯೇ.

೧೧. ಬಳಲಿದ ದೇಹಕ್ಕೆ ವಿಶ್ರಾಂತಿ ತಪ್ಪಿಸಿದರೆ ಇನ್ನೂ ಆತಂಕ ಹೆಚ್ಚುವುದರಿಂದ ಒತ್ತಡದ ದಿನಗಳಲ್ಲಿ ತುಸು ಬೇಗನೇ, ಮಾಮೂಲಿಗಿಂತ ಒಂದರ್ಧ ಗಂಟೆಯಷ್ಟು ಮೊದಲೇ, ಮಲಗಿ ಬಿಡುವುದು ಒಳ್ಳೆಯದು. ಯಶಸ್ಸಿನ, ಗೆಲುವಿನ ಕನಸುಗಳನ್ನು ಕಟ್ಟುತ್ತಲೇ ನಿದ್ದೆಗೆ ಜಾರಿದರೂ ಸರಿಯೇ. ಮನಸ್ಸು ಮತ್ತು ದೇಹ ಕೃತಜ್ಞವಾಗಿರುತ್ತವೆ.

೧೨. ಗಾಂಧೀಜಿಯವರು ಅನುಸರಿಸುತ್ತಿದ್ದ, ಈಗ ಪ್ರಧಾನಿ ಮೋದಿಯವರೂ ಅನುಸರಿಸುವ, ಉಪವಾಸ ವ್ರತ ಆಚರಣೆ ಗೊತ್ತಲ್ಲ? ಅದು ಆಹಾರ ಸೇವನೆಯ ಮಟ್ಟಿಗೆ ಉಪವಾಸ. ಅದೇರೀತಿ ಮನಸ್ಸಿಗೆ ಹಾಕುವ ನೇತ್ಯಾತ್ಮಕ ಮೇವನ್ನು ತಪ್ಪಿಸಿ ಒಂದುದಿನದ ಮಾನಸಿಕ ಉಪವಾಸ ಆಚರಣೆ. ಆ ಅವಧಿಯಲ್ಲಿ ಗೊಣಗಾಟ, ದೂರುವಿಕೆ, ಕಾರಣ ಹುಡುಕುವಿಕೆ, ಅಪರಾಧಿ ಭಾವನೆ- ಎಲ್ಲದಕ್ಕೂ ‘ಅಪ್ಪಣೆ ಇಲ್ಲದೆ ಒಳಗೆ ಪ್ರವೇಶವಿಲ್ಲ’ ಬೋರ್ಡ್!

೧೩. ನೆಗೆಟಿವ್ ಆಲೋಚನೆಗಳ ವಿರುದ್ಧ ಸಮರತಂತ್ರವೊಂದು ಸಿದ್ಧವಿರಬೇಕು. ಯಾವುದೇ ಕ್ಷಣದಲ್ಲಿ ನೆಗೆಟಿವಿಟಿ ಉದ್ಭವಿಸಿದರೂ, ‘ಇಲ್ಲ, ನಾನೊಬ್ಬ ಜವಾಬ್ದಾರಿಯುಳ್ಳ ವ್ಯಕ್ತಿ. ದೇವರನ್ನು ನಂಬಿ ನಾನು ಧೈರ್ಯದಿಂದ ಇದನ್ನು ಮಾಡಬಲ್ಲೆ...’ ಎಂದು ಸಂಕಲ್ಪಿಸಿ ಇದ್ದಬಿದ್ದ ಪಾಸಿಟಿವ್ ಅಂಶಗಳನ್ನೆಲ್ಲ ಒಟ್ಟುಗೂಡಿಸಿದರೆ, ನೆಗೆಟಿವಿಟಿಯನ್ನು ಒದ್ದು ಝಾಡಿಸಿ ಬಿಡಬಹುದು. ‘ಉದ್ಧರೇ ದಾತ್ಮನಾತ್ಮಾನಂ..’ ಎಂಬ ಗೀತಾಚಾರ್ಯನ ಬೋಧನೆ ನೆನಪಿರಬೇಕು.

೧೪. ಇತ್ಯಾತ್ಮಕ ಚಿಂತನೆಯುಳ್ಳವರ, ಬದುಕಿನಲ್ಲಿ ಲವಲವಿಕೆ ಇಟ್ಟುಕೊಂಡಿರುವವರ ಸ್ನೇಹ-ಸಹವಾಸ ಬೆಳೆಸಿಕೊಳ್ಳಬೇಕು. ನೆಗೆಟಿವಿಟಿ ಹೇಗೆ ಅಂಟುರೋಗವೋ, ಪಾಸಿಟಿವಿಟಿ ಕೂಡ ಆರೋಗ್ಯ ಕರವಾಗಿ ಒಬ್ಬರಿಂದೊಬ್ಬರಿಗೆ ಹರಡಬಾರದೆಂದೇನಿಲ್ಲ. ಇನ್ನೊಬ್ಬರನ್ನು ನೋಡಿಯಾದರೂ, ಪಾಸಿಟಿವ್ ಆಗಿರುವುದರಿಂದ ಅವರಿಗಾಗುವ ಲಾಭವನ್ನು ಗಮನಿಸಿಯಾದರೂ, ನಮ್ಮ ವ್ಯಕ್ತಿತ್ವ ದಲ್ಲಿ ಪಾಸಿಟಿವಿಟಿಯನ್ನು ಹುಟ್ಟಿಸಬಹುದು, ಹೆಚ್ಚಿಸಿಕೊಳ್ಳಬಹುದು. ಮತ್ತೆ ನಮ್ಮನ್ನು ನೋಡಿ ಇತರರೂ ಅನುಸರಿಸಿದರೆ ಅದೆಷ್ಟು ಚೆನ್ನ!

೧೫. ಎಲ್ಲಕ್ಕಿಂತ ಉತ್ಕೃಷ್ಟವಾದ ಮತ್ತು ಶತಸ್ಸಿದ್ಧವಾದ ಮೂಲಿಕೆಯೆಂದರೆ ಗೊತ್ತೇ ಇದೆಯಲ್ಲಾ, ನಗು! ನೆಚ್ಚಿನ ಕಾರ್ಟೂನ್ ಫಿಲಂ ಇರಬಹುದು, ವಾಟ್ಸ್ಯಾಪ್‌ನಲ್ಲಿ ಫಾವರ್ಡ್ ಆಗಿ ಬಂದ ನಗೆಹನಿ ಇರಬಹುದು, ಅಥವಾ ಸ್ವತಃ ಪೇಚಿಗೆ ಸಿಕ್ಕಿಬಿದ್ದ ತಮಾಷೆ ಪ್ರಸಂಗದ ನೆನಪಿರಬಹುದು, ಒಟ್ಟಿನಲ್ಲಿ ಸಿಂಡರಿಸಿದ ಮುಖವನ್ನು ಸಿಂಗರಿಸುವಂತೆ ಮಾಡುವ ನಗು ಮನಸ್ಸನ್ನು ಹಗುರಾಗಿಸುತ್ತದೆ.

ನಂಬರ್ ಸ್ಕೇಲ್‌ನಲ್ಲಿ ಮೈನಸ್ ಸೈಡಲ್ಲಿರುವುದೆಲ್ಲವನ್ನೂ ಶೂನ್ಯಕ್ಕೆ ತಂದು ನಿಲ್ಲಿಸುವಲ್ಲಿ ಪರಿಣಾಮಕಾರಿಯಾಗಿ ನೆರವಾಗುತ್ತದೆ. ಹಾಗಾದರೆ ಈವತ್ತಿಂದಲೇ ನಾವೆಲ್ಲರೂ, ಅಲ್ಪಸ್ವಲ್ಪ ‘ಮೈನಸ್ ’ಗಳನ್ನೇನಾದರೂ ಇಟ್ಟುಕೊಂಡಿದ್ದರೆ ಅವೆಲ್ಲವನ್ನೂ ಶೂನ್ಯವಾಗಿಸೋಣವೇ? ‘ಅಸತೋ ಮಾ ಸದ್ಗಮಯ... ತಮಸೋಮಾ ಜ್ಯೋತಿರ್ಗಮಯ... ಮೃತ್ಯೋರ್ಮಾ ಅಮೃತಂ ಗಮಯ...’ ಜತೆಗೆ, ‘ನೇತಿ’ಯಿಂದ ‘ಇತಿ’ಯೆಡೆಗೆ ನಡೆಸೆಮ್ಮನು ಎಂಬ ಪ್ರಾರ್ಥನೆಯನ್ನೂ ಸೇರಿಸಿಕೊಳ್ಳೋಣವೇ? ಪ್ರತಿಯೊಬ್ಬರೂ ಹಾಗೆ ಮಾಡಿದ್ದೇ ಆದರೆ ಲೇಖನದ ಆರಂಭದ ಕವಿತೆಯಲ್ಲಿನ ‘ಅರ್ಜೆಂಟಾಗಿ ಬೇಕಾಗಿದ್ದಾರೆ! ಜಾಹೀರಾತಿನ ಅಗತ್ಯವೇ ಇರುವುದಿಲ್ಲ.

ಏಕೆಂದರೆ ಅದೆಲ್ಲವೂ ನಾವೇ ಆಗಿರುತ್ತೇವೆ. ಇದಕ್ಕೆ ಮನೆ-ಮನಗಳ ಒಳಗೂ ಹೊರಗೂ ಬೆಳಕು ತುಂಬುವ ಬೆಳಕಿನ ಹಬ್ಬಕ್ಕಿಂತ ಒಳ್ಳೆಯ ಮುಹೂರ್ತ ಬೇರೆ ಬೇಕೇ! ಎಲ್ಲರಿಗೂ ದೀಪಾವಳಿ ಶುಭಾಶಯಗಳು.