ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ‘ನೀಟಾ’ಗಿ ನಡೆಯಲಿಲ್ಲವೇ ಜಿರಳೆ ಹೋರಾಟ?

ಭಾರತ ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಇತಿಹಾಸದಲ್ಲಿ ನಿತ್ಯ ಹತ್ತು ಹಲವು ಹೋರಾಟಗಳು ನಡೆಯು‌ತ್ತವೆ. ಆದರೆ ಕೆಲವೇ ಕೆಲವು ಹೋರಾಟಗಳು ಇಡೀ ದೇಶದ ಗಮನ ಸೆಳೆಯುತ್ತವೆ. ಅಂತಹ ಹೋರಾಟದ ಸಾಲಿಗೆ ಸದ್ಯ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಪಕ್ಷ ನಡೆಸುತ್ತಿರುವ ಹೋರಾಟ ಹಾಗೂ ಸೋನಂ ವಾಂಗ್‌ಚುಕ್ ಅವರ ಸತ್ಯಾಗ್ರಹ ಸೇರಿದೆ.

‘ನೀಟಾ’ಗಿ ನಡೆಯಲಿಲ್ಲವೇ ಜಿರಳೆ ಹೋರಾಟ?

-

ಅಶ್ವತ್ಥಕಟ್ಟೆ

ಹೋರಾಟದಿಂದಲೇ ದಾಸ್ಯಮುಕ್ತವಾದ ಭಾರತದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಸಂವಿಧಾನವೇ ದಯಪಾಲಿಸಿದೆ. ಆದ್ದರಿಂದ ಯಾವುದೇ ಧರಣಿ, ಪ್ರತಿಭಟನೆ, ಸತ್ಯಾಗ್ರಹಗಳು ದೇಶದ ವ್ಯವಸ್ಥೆಗೆ ಹೊಸದೇನಲ್ಲ. ಆಯಾ ಕಾಲಕ್ಕೆ ‘ಔಟ್ ಆಫ್ ದಿ ಸಿಲೆಬಸ್’ ರೀತಿ ಬಂದು ಹೋರಾಟ, ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಅನೇಕ ಘಟನೆಗಳು ಭಾರತ ಇತಿಹಾಸದಲ್ಲಿ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಗಳಿರುವುದೇ ಈ ರೀತಿ ಪ್ರತಿಭಟನೆ ನಡೆಸಲು ಎನ್ನುವ ರೀತಿಯಾಗಿದೆ.

ಭಾರತ ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಇತಿಹಾಸದಲ್ಲಿ ನಿತ್ಯ ಹತ್ತು ಹಲವು ಹೋರಾಟಗಳು ನಡೆಯು‌ತ್ತವೆ. ಆದರೆ ಕೆಲವೇ ಕೆಲವು ಹೋರಾಟಗಳು ಇಡೀ ದೇಶದ ಗಮನ ಸೆಳೆಯುತ್ತವೆ. ಅಂತಹ ಹೋರಾಟದ ಸಾಲಿಗೆ ಸದ್ಯ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಪಕ್ಷ ನಡೆಸುತ್ತಿರುವ ಹೋರಾಟ ಹಾಗೂ ಸೋನಂ ವಾಂಗ್‌ಚುಕ್ ಅವರ ಸತ್ಯಾಗ್ರಹ ಸೇರಿದೆ.

ರಾತ್ರೋರಾತ್ರಿ ದೇಶದ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಸೃಷ್ಟಿಸಿದ್ದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ), ಇದೀಗ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದೆ. ಆರಂಭದಲ್ಲಿ ಪೊಲೀಸರಿಂದ ಅನುಮತಿ ನಿರಾಕರಿಸಿ, ಬಳಿಕ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಸಿಕ್ಕಿತ್ತು. ಜಿರಳೆ ಪಕ್ಷ ಹೋರಾಟ ಆರಂಭಿಸಿ ಕೆಲದಿನಗಳ ಬಳಿಕ ಸೋನಂ ಆರಂಭಿಸಿದ ಉಪವಾಸ ಸತ್ಯಾಗ್ರಹದ ಬಳಿಕ ಈ ಪ್ರತಿಭಟನೆ ಇಡೀ ದೇಶದ ಗಮನ ಸೆಳೆಯಿತು. ಬಿಜೆಪಿ ವಿರೋಧಿ ಗುಂಪಿನವರೇ ಹೆಚ್ಚಾಗಿ ಈ ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆ ಎನ್ನುವ ಕೊಂಕಿನ ಹೊರತಾಗಿಯೂ ನೀಟ್ ಅಕ್ರಮದಿಂದ ಪ್ರಾಣ ಕಳೆದುಕೊಂಡ ಹತ್ತಾರು ವಿದ್ಯಾರ್ಥಿಗಳಿಗೆ, ಪ್ರತಿ ವರ್ಷ ಪೇಪರ್ ಲೀಕ್‌ನ ಆತಂಕದಲ್ಲಿಯೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಈ ಹೋರಾಟ ವನ್ನು ಬೆಂಬಲಿಸಿದ್ದರು.

ಇದನ್ನೂ ಓದಿ: Ranjith H Ashwath Column: ಜೇಡರ ಬಲೆಯಂತಿರುವ ನದಿ ಜೋಡಣೆ ಆಲೋಚನೆ

ಸುಮಾರು 20 ದಿನಗಳ ಕಾಲ ಸೋನಂ ಉಪವಾಸ ಸತ್ಯಾಗ್ರಹ ನಡೆಸಿದರೂ, ಕೇಂದ್ರ ಸರಕಾರದ ಪ್ರತಿನಿಧಿ ಗಳಾಗಲಿ, ಅಧಿಕಾರಿಗಳಾಗಲಿ ಜಂತರ್ ಮಂತರ್‌ನತ್ತ ಸುಳಿಯದೇ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದು ಸಹ ಹಲವರ ಆಕ್ರೋಶಕ್ಕೆ ಕಾರಣವಾಯಿತು. ಸತತ ಉಪವಾಸದಿಂದ ಸೋನಂ ಆರೋಗ್ಯ ಕೈಕೊಡಲು ಶುರುವಾಗುತ್ತಿದ್ದಂತೆ ಪೊಲೀಸರು ಬಲವಂತ ವಾಗಿ ಚಿಕಿತ್ಸೆ ಕೊಡಿಸಿದ್ದು, ಅದನ್ನು ಪ್ರಶ್ನಿಸಿ ಸೋನಂ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದು,

ಇತ್ತ ಜಿರಳೆ ಪಕ್ಷದವರು ಸರಕಾರದ ಈ ನಡೆಯನ್ನು ಖಂಡಿಸಿ ಗದ್ದಲ ಎಬ್ಬಿಸಿದರು. ಈ ಎಲ್ಲದರ ನಡುವೆ, ಸೋಮವಾರದಿಂದ ಮಳೆಗಾಲದ ಅಧಿವೇಶನ ಆರಂಭವಾಗಿರುವುದರಿಂದ ಜಿರಳೆ ಪಕ್ಷದ ಕಾರ್ಯಕರ್ತರು ಸಂಸತ್ ಮುತ್ತಿಗೆಗೆ ಮುಂದಾಗಿದ್ದರಿಂದ, ಪೊಲೀಸರು ಲಾಠಿ ಚಾರ್ಜ್ ಮಾಡಿ ಪ್ರತಿಭಟನಾ ನಿರತರನ್ನು ಚದುರಿಸುವ ಕಾರ್ಯ ಮಾಡಿದ್ದಾರೆ. ಪೊಲೀಸರ ನಡೆಗೆ ವಿರೋಧ, ಗದ್ದಲ ಗಲಾಟೆ ಶುರುವಾಗಿ ಆಡಳಿತ-ಪ್ರತಿಪಕ್ಷಗಳ ವಾಕ್ಸಮರ ಜೋರಾಗಿದೆ. ಆದರೆ ಪ್ರತಿಭಟನೆ ಆರಂಭ ವಾದ ಕಾರಣವನ್ನೇ ಎಲ್ಲರೂ ಮರೆತಂತಿದೆ.

ಸೋಷಿಯಲ್ ಮೀಡಿಯಾ ಮೂಲಕ ಸದ್ದು ಮಾಡಿದ್ದ ಜಿರಳೆ ಪಕ್ಷ ನೀಟ್ ವಿರುದ್ಧ ಹೋರಾಟ ವನ್ನು ಆರಂಭಿಸಿದ್ದರೂ, ಅದು ಕೊಂಚ ಗಂಭೀರತೆ ಪಡೆದುಕೊಂಡಿದ್ದು ಸೋನಂ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ಕೂತ ಬಳಿಕವೇ. ಲಡಾಖ್ ಮೂಲದ ಸೋನಮ್ ಮೂಲತ ಎಂಜಿನಿಯರ್. ಲಡಾಖ್‌ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಾಗಿ ತಮ್ಮ ಹೋರಾ ಟವನ್ನು ಆರಂಭಿಸಿದರು.

ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕೂತ ಸೋನಮ್, ನೀಟ್ ಪರೀಕ್ಷೆಯಲ್ಲಿ ಆಗಿರುವ ಅಕ್ರಮದ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಎರಡನೇಯದ್ದಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತಾಗಿ ಸಮಗ್ರ ನ್ಯಾಯಾಂಗ ಅಥವಾ ಸಂಸತ್ ಸದನ ಸಮಿತಿಯಿಂದ ಸಮಗ್ರ ತನಿಖೆ ನಡೆಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಬರೆದುಕೊಡಬೇಕು. ಅಂತಿಮವಾಗಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರು ಧ್ವನಿ ಎತ್ತುವುದಾಗಿ ಬರೆದುಕೊಡಬೇಕು ಎನ್ನುವುದಾಗಿತ್ತು.

jirale horata

ಪದೇಪದೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಗಮನಿಸಿದಾಗ ಸೋನಮ್ ಅವರ ಬೇಡಿಕೆಗಳು ಸರಿಯಾಗಿಯೇ ಇದೆ. ಈ ಹಿಂದೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾದಾಗ ಹಲವು ರಾಜ್ಯಗಳಲ್ಲಿ ಅಂದಿನ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಉದಾಹರಣೆಗಳಿವೆ. ಪ್ರತಿಪಕ್ಷ ದಲ್ಲಿದ್ದಾಗ ಬಿಜೆಪಿ ನಾಯಕರೇ, ಸಚಿವರುಗಳ ರಾಜೀನಾಮೆ ನೀಡಬೇಕು ಎನ್ನುವ ಬೇಡಿಕೆಯಿಟ್ಟಿ ರುವ ಉದಾಹರಣೆಯಿದೆ. ಇನ್ನು ಮುಂದೆ ಹೀಗಾಗದಂತೆ ಕ್ರಮವಹಿಸುವ ಹಾಗೂ ಈಗಾಗಿರುವುದಕ್ಕೆ ಕಾರಣವೇನು ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸುವ ವಿಷಯದಲ್ಲಿಯೂ ಬಿಜೆಪಿ ಸರಕಾರ ತೀರಾ ಪ್ರತಿಷ್ಠೆ ಇಟ್ಟುಕೊಳ್ಳಬಾರದು ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಆದರೆ ಸೋನಮ್ ಆರಂಭಿಸಿದ ಬಳಿಕ ಹೋರಾಟದ ಸುತ್ತ ಕಾಣಿಸಿಕೊಂಡ ಕೆಲವರಿಂದಾಗಿ ಇಡೀ ಹೋರಾಟದ ಮೂಲ ಆಶಯ ಮರೆಯುವಂತಾಯಿತು. ಸೋನಮ್‌ಗೆ ಬೆಂಬಲ ಸೂಚಿಸುವ ನೆಪದಲ್ಲಿ, ಸ್ಟಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕರ್ಮಾ, ‘ಸೀತೆಯ ಹೆಸರು ತೆಗೆದುಕೊಳ್ಳುವ ಸರಕಾರ, ನೀತಾ ಗಂಡನ ಕೆಲಸ ಮಾಡುತ್ತಿದೆ’ ಎನ್ನುವುದಿರಬಹುದು, ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಹಿಂದೂ ವಿರೋಧಿ ಹೇಳಿಕೆಗಳು, ಈ ಹೇಳಿಕೆಗಳನ್ನೇ ದೊಡ್ಡ ಸುದ್ದಿಯನ್ನಾಗಿ ವಿದೇಶಿ ಮಾಧ್ಯಮಗಳು ತೋರಿಸುತ್ತಿರುವುದು ಇದೀಗ ವಿವಾದವಾಗಿದೆ.

ನೀಟ್ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಸೋನಂ ಪ್ರತಿಭಟನೆಗೆ ಎಸ್‌ಎಫ್ಐ, ಎಐಎಸ್‌ಎ ವಿದ್ಯಾರ್ಥಿ ಸಂಘಟನೆಗಳು, ಪ್ರಕಾಶ್ ರಾಜ್, ಅರುಂಧತಿ ರಾಯ್, ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ ಬಿಜೆಪಿ ವಿರುದ್ಧ ನಿತ್ಯ ಟೀಕಿಸುವ ನಾಯಕರು ಭಾಗವಹಿಸಿ, ಅಸಂಬದ್ಧ ಹೇಳಿಕೆಗಳನ್ನು ನೀಡಿರುವುದು ಇಡೀ ಹೋರಾಟದ ಮೂಲವನ್ನೇ ಬಿಟ್ಟು ರಾಜಕೀಯ ವೇದಿಕೆಯಾಗಿ ಮಾರ್ಪಡಿಸಿದೆ. ಇದಕ್ಕೆ ಪೂರಕವಾಗಿ ಜಿರಳೆ ಪಕ್ಷದ ಅಭಿಜಿತ್ ದಿಪ್ಕೆ ಸೇರಿ ಹಲವು ನಾಯಕರು, ನೀಟ್ ಅಕ್ರಮದ ಅನ್ಯಾಯ ಬಿಟ್ಟು ಬೇರೆಲ್ಲ ಮಾತನಾಡುತ್ತಿರುವುದರಿಂದ ಕೇಂದ್ರ ಸರಕಾರದ ಲೋಪವನ್ನು ಹೈಲೈಟ್ ಆಗುವ ಬದಲು, ವೇದಿಕೆಯಲ್ಲಿ ಪ್ರಸ್ತಾಪಿಸಿರುವ ಅನಗತ್ಯ ವಿಷಯಗಳು ಮುನ್ನಲೆಗೆ ಬರುತ್ತಿದೆ ಎನ್ನುವುದು ವಾಸ್ತವ.

ನೀಟ್ ಪರೀಕ್ಷೆಯಲ್ಲಿನ ಎಡವಟ್ಟಿನ ವಿಷಯದಲ್ಲಿ ಸಿಜೆಪಿ ಆರಂಭಿಸಿದ ಆನ್‌ಲೈನ್ ಅಭಿಯಾನಗಳು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಡೆಸಿದ ಧರಣಿಗಳಿರಲಿ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭಿಸಿದ ಪ್ರತಿಭಟನೆಯ ‘ವಿಷಯ’ ತಪ್ಪು ಎನ್ನಲು ಸಾಧ್ಯವಿಲ್ಲ. ನೀಟ್ ಹೆಸರಲ್ಲಿ ಏನನ್ನು ಸಾಧಿಸಲು ಹೊರಟಿದ್ದಾರೆ? ಪ್ರತಿಭಟನೆಯಲ್ಲಿ ಸರಕಾರದ ಲೋಪ-ದೋಷ ಎತ್ತಿ ಹಿಡಿಯುವ ವಿಷಯವಿರಲಿ, ಧಮೇಂದ್ರ ಪ್ರಧಾನ್ ರಾಜೀನಾಮೆ ಕೇಳುವುದಾಗಿ ತಪ್ಪಲ್ಲ. ಆದರೆ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನಡೆಸುತ್ತಿರುವ ಹೋರಾಟದ ವೇದಿಕೆಯಲ್ಲಿ, ಕೆಲವರ ಮಾತು ಇಡೀ ಹೋರಾಟವನ್ನು ಪ್ರಶ್ನಿಸುವಂತಾಗಿದೆ.

ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂದು ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಹಿಂದೂ ದೇವರುಗಳಿಗೆ ಅಪಮಾನವಾಗುವಂತೆ ಮಾತನಾಡುವುದು, ಇಡೀ ಕೇಂದ್ರ ಸರಕಾರವನ್ನೇ ಅಪಮಾನಿಸುವಂತೆ ಮಾಡುವುದು ಹಲವು ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಆರಂಭವಾಗಿರುವ ಈ ಹೋರಾಟ ರಾಜಕೀಯ ಅಜೆಂಡಾಗಳನ್ನು ಹೊರಹಾಕಲು ವೇದಿಕೆಯಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದಲ್ಲಿ ಈ ರೀತಿಯ ಹೋರಾಟಗಳು ಇದೇ ಮೊದಲೇನಲ್ಲ. ಈ ಹಿಂದೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ದಶಕಗಳ ಕಾಲ ಚಳವಳಿ ನಡೆದಿತ್ತು. ಇದಾದ ಬಳಿಕ 1974ರಲ್ಲಿ ಭ್ರಷ್ಟಾಚಾರ, ಆಡಳಿತ ವೈಫಲ್ಯದ ವಿರುದ್ಧ ಶುರುವಾಗಿ, ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದು ಜಯಪ್ರಕಾಶ್ ನಾರಾಯಣ ಚಳವಳಿ (ಜೆಪಿ ಚಳವಳಿ). ಜೆಪಿ ಚಳುವಳಿ ದೇಶದ ರಾಜಕೀಯ ಇತಿಹಾಸಕ್ಕೆ ಮಹತ್ವದ ತಿರುವು ನೀಡಿದ ಚಳವಳಿ ಎಂದರೆ ತಪ್ಪಾಗುವುದಿಲ್ಲ. ಈ ಚಳವಳಿ ಯಿಂದಲೇ ಜನತಾ ಪಕ್ಷದ ಉದಯವಾಗಿ, 1977ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಂಡು, ಮೊದಲ ಬಾರಿಗೆ ದೇಶದಲ್ಲಿ ಕಾಂಗ್ರೇಸೇತರ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯೂ ಆಗಿತ್ತು!

ಈ ಹೋರಾಟದ ಬಳಿಕ ಅಸ್ಸಾಂ ಚಳುವಳಿ, ಮಂಡಲ್ ಆಯೋಗ ವಿರೋಧಿ ಪ್ರತಿಭಟನೆಗಳು ನಡೆದರೂ, ಇಡೀ ದೇಶವನ್ನು ತನ್ನ ಕಡೆ ತಿರುಗುವಂತೆ ಮಾಡಿದ, ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ. ಉಪವಾಸ ಸತ್ಯಾಗ್ರಹ ಆರಂಭಿಸಿ, ಲೋಕಪಾಲ ಬಿಲ್ ಜಾರಿಗೆ ಆಗ್ರಹಿಸಿದ್ದರು. ಈ ಹೋರಾಟದಲ್ಲಿ ಯಾವುದೇ ಪಕ್ಷದ ಬಲವಿಲ್ಲದಿದ್ದರೂ, ಭವಿಷ್ಯದಲ್ಲಿ ಈ ಚಳವಳಿಯ ಮೂಲಕ ಉಗಮವಾಗಿದ್ದೇ ಆಮ್ ಆದ್ಮಿ ಪಕ್ಷ.

ಎರಡು ಹಂತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆಯ ಅವರ ಹೋರಾಟದ ಫಲವಾಗಿ ದೇಶದಲ್ಲಿ ಲೋಕಪಾಲ ಬಿಲ್ ಮಂಡಿಸಿ, ಅಂಗೀಕರಿಸಲಾಯಿತು (ಈಗ ಲೋಕಪಾಲ್ ಎಷ್ಟು, ಏನು ಕೆಲಸ ಮಾಡುತ್ತಿದೆ ಎನ್ನುವುದು ಬೇರೆ ಮಾತು). ಇದರ ಮುಂದುವರಿದ ಭಾಗ ಎನ್ನುವಂತೆ 2013ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರಕಾರ ಹೋಗಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಭರ್ಜರಿ ಬಹುಮತದೊಂದಿಗೆ ಕೇಂದ್ರದ ಅಧಿಕಾರದ ಗದ್ದುಗೆ ಏರಿತ್ತು. ಇನ್ನೊಂದಡೆ ಅಣ್ಣಾ ಹಜಾರೆ ತೆರೆಮರೆಗೆ ಸರಿದರೂ, ಚಳವಳಿಯನ್ನು ಮುಂದಿಟ್ಟು ಕೊಂಡು ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಪಕ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಕ್ಕೆ ಬರುವುದಷ್ಟೇ ಅಲ್ಲದೇ, ದೇಶದ ವಿವಿಧ ರಾಜ್ಯಗಳಿಗೂ ತನ್ನ ಅಸ್ತಿತ್ವವನ್ನು ಸ್ಥಾಪಿಸಿತು.

ರಾಜಕೀಯ ಹೊರತಾಗಿ ನಿರ್ಭಯಾ ಹೋರಾಟ, ಕೇಂದ್ರ ಸರಕಾರದ ಕೃಷಿ ವಿಧೇಯಕದ ವಿರುದ್ಧ ರೈತರ ಪ್ರತಿಭಟನೆಗಳು ದೇಶದ ಗಮನ ಸೆಳೆದಿವೆ. ಈ ಹೋರಾಟಗಳ ಮಾದರಿಯಲ್ಲಿಯೇ ಜಿರಳೆ ಪಕ್ಷ ತನ್ನ ಹೋರಾಟ ನಡೆಸುವ ಆಲೋಚನೆಯಲ್ಲಿದೆ. ಕೃಷಿ ವಿಧೇಯಕ ವಿರುದ್ಧದ ರೈತರ ಹೋರಾಟದ ಹೊರತಾಗಿ ಉಳಿದ ಹೋರಾಟಗಳಲ್ಲಿ ನಿರ್ದಿಷ್ಠ ಗುರಿಯಿತ್ತು. ತಮ್ಮ ಬೇಡಿಕೆಯ ಆಚೆ ರಾಜಕೀಯ ಹೇಳಿಕೆಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.

ಆದರೆ ಸಿಜೆಪಿ ಜಂತರ್ ಮಂತರ್‌ನಲ್ಲಿ ಆರಂಭಿಸುವಾಗ ‘ನೀಟ್’ನಲ್ಲಿರುವ ಅಕ್ರಮಕ್ಕೆ ಸಂಬಂಧಿಸಿದ ಹೋರಾಟವೆಂದು ಆರಂಭಿಸಿ ಬಳಿಕ, ಸೀತೆಯ ವಿಷಯ ಪ್ರಸ್ತಾಪಿಸುವುದು, ವೈಯಕ್ತಿಕ ಟೀಕೆಗೆ ಇಳಿದಿರುವುದೇ ಈ ಹೋರಾಟ ನೈಜ ವಿಷಯಕ್ಕಿಂತ ಹೆಚ್ಚಾಗಿ, ಅನಗತ್ಯ ವಿಷಯಗಳಿಂದ ಸುದ್ದಿ ಯಾಗುತ್ತಿದೆ. ವೈಯಕ್ತಿಕ ಹಿತಾಸಕ್ತಿ, ಲಾಭಗಳನ್ನು ಮೀರಿದ ಹೋರಾಟಗಳಿಗೆ ಮಾತ್ರ ಜನಮನ್ನಣೆ ಸಿಗುತ್ತದೆ. ಇನ್ನು ಜಿರಳೆ ಪಕ್ಷ ಆರಂಭಿಸಿರುವ ಈ ಹೋರಾಟದ ಹಿಂದೆ ರಾಜಕೀಯ ಅಜೆಂಡಾ, ವೈಯಕ್ತಿಕ ದ್ವೇಷವಿದೆ ಎನ್ನುವ ಕಾರಣಕ್ಕೆ ಹೋರಾಟದ ಮೂಲ ಆಶಯವಾಗಿರುವ ‘ನೀಟ್ ವಿದ್ಯಾರ್ಥಿಗಳಿಗೆ ಹಿತಾಸಕ್ತಿಯ’ ರಕ್ಷಣೆಯ ವಿಷಯವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ದೇಶದಲ್ಲಿ ಹೋರಾಟ ಗಳು ನಡೆದಾಗ ಅವುಗಳನ್ನು ಗಂಭೀರವಾಗಿ ಪರಿಗಣಿಸದೇ ಕುತ್ತಿಗೆಗೆ ಬರುವ ತನಕ ಬಿಟ್ಟುಕೊಂಡ ರಾಜಕೀಯ ಪಕ್ಷಗಳ ಕಥೆಯೇನಾಗಿದೆ? ಹಾಗೂ ಆ ಸರಕಾರಗಳ ನಿರ್ಲಕ್ಷ್ಯದಿಂದಾಗಿ ರಾಜಕೀಯ ದಲ್ಲಾದ ಬದಲಾವಣೆಯಿಂದ ಆಗಿರುವ ಲಾಭ-ನಷ್ಟಗಳ ಬಗ್ಗೆ ಬಿಜೆಪಿಗೆ ಬಿಡಿಸಿ ಹೇಳಬೇಕಿಲ್ಲ!