Shishir Hegde Column: ದಾಸರಳ್ಳಿ ದಾಟದ ನಿರ್ದೇಶಕರು-ಮಲಯಾಳಂ ಚಿತ್ರ ನೆಚ್ಚುವ ಪ್ರೇಕ್ಷಕರು
ಸಿನಿಮಾದಲ್ಲಿ ಕೆಲವೇ ನಿಮಿಷ ಕಾಣಿಸಿಕೊಂಡ ವ್ಯಕ್ತಿಯೊಬ್ಬ, ಹೆಚ್ಚು ಮಾತನಾಡದ ಮಹಿಳೆಯೊಬ್ಬಳು, ಯಾವುದೋ ಸಾಮಾನ್ಯ ವಿಷಯಕ್ಕೆ ಜಗಳವಾಡುತ್ತಿದ್ದ ಕುಟುಂಬ ಇವೆಲ್ಲ ಆಪ್ತವೆನಿಸಿ ಮತ್ತೆ ಮತ್ತೆ ನೆನಪಾಗುತ್ತವೆ. ಸಿನಿಮಾ ಮುಗಿದ ಮೇಲೂ ಆ ಜನರ ಬದುಕಿನಲ್ಲಿ ಏನಾಯಿತು ಎಂಬ ಯೋಚನೆ ಉಳಿಯುತ್ತದೆ. ಭಾಷೆ - ನೆಲ ಪರಕೀಯವೆನಿಸಿದರೂ ಕಥೆಗಳು ಮಾತು ಪಾತ್ರ ನಮ್ಮವೇ - ಸುತ್ತಮುತ್ತ ಕಾಣಿಸಿಕೊಳ್ಳುವವು.
-
ಶಿಶಿರಕಾಲ
ನನ್ನ ಅತ್ತೆಯ ಮನೆ ಕೇರಳದ ಕಾಸರಗೋಡಿನಲ್ಲಿ - ಕುಂಬಳೆಯ ಆಚೆ ನೀರ್ಚಾಲಿನಲ್ಲಿತ್ತು. ಹೆಸರಿಗೆ ಮಾತ್ರ ಅದು ಕೇರಳ. ಅಲ್ಲಿ ಬಹುತೇಕ ಜನರ ವ್ಯವಹಾರ, ಶಾಲೆ, ಕಚೇರಿ ಇತ್ಯಾದಿ ಎಲ್ಲವೂ ಕನ್ನಡದ ನಡೆಯುತ್ತಿತ್ತು. ಗಡಿನಾಡ ಕನ್ನಡಿಗರು. ಅಲ್ಲಿಗೆ ಹೋದಾಗ ಕನ್ನಡ ‘ವೆಲ್ಕಮ್ ಟು ಗಾಡ್ಸ್ ಓನ್ ಕಂಟ್ರಿ’ ಎಂಬ ಬೋರ್ಡಿನಾಚೆಯೂ ವಿಸ್ತರಿಸಿದ್ದು ನೋಡಿ ಹೆಮ್ಮೆಯಾಗುತ್ತಿತ್ತು. ಆದರೆ ನನ್ನ ಅತ್ತೆಯ ಮನೆಯಲ್ಲಿ ಮಾತ್ರ ಒಂದು ವಿಚಿತ್ರ ಸನ್ನಿವೇಶವಿತ್ತು. ಹೊರಗೆಲ್ಲ ಕನ್ನಡ, ಕನ್ನಡದ ವಾತಾವರಣವಿದ್ದರೂ, ಅವರ ಮನೆಯ ಟಿವಿಯಲ್ಲಿ ಸದಾ ಮಲಯಾಳಂ ಸಿನಿಮಾಗಳದ್ದೇ ಕಾರುಬಾರು!
ಪರದೆಯ ಮೇಲೆ ಬರುವ ಹೆಸರುಗಳೆಲ್ಲ ಜಿಲೇಬಿಯಂತೆ ಕಂಡರೆ ಮಾತು ಎರಡು ಸಾಲು ಅರ್ಥ ವಾಗುತ್ತಿರಲಿಲ್ಲ. ಹಾಗಂತ ಅವರ ಮನೆಯವರಿಗೆ ಬರುತ್ತಿದ್ದ ಮಲಯಾಳಂ ಅಷ್ಟಕ್ಕಷ್ಟೆ. ಆದರೂ ಸಿನಿಮಾ ಮಾತ್ರ, ಮಲಯಾಳಂ! ಒಮ್ಮೆ ನನ್ನ ಮಾವನಲ್ಲಿ, ‘ಕೇರಳದಲ್ಲಿದ್ದೀರಿ ಎಂಬ ಏಕೈಕ ಕಾರಣಕ್ಕೆ ಮಲಯಾಳಂ ಸಿನಿಮಾಗಳನ್ನೇ ನೋಡಬೇಕೇ?’ ಎಂದು ವಾದಕ್ಕಿಳಿದಿದ್ದೆ.
ಆಗ ನನ್ನಲ್ಲಿ ಕನ್ನಡ ಸಿನಿಮಾ ನೋಡುವುದೇ ನಿಜವಾದ ಕನ್ನಡಾಭಿಮಾನ, ಕನ್ನಡ ಪ್ರೇಮ ಮತ್ತು ಕನ್ನಡ ಸೇವೆ ಎಂಬ ಗಟ್ಟಿ ನಂಬಿಕೆಯಿತ್ತು. ರಾಜ್ಕುಮಾರ್, ವಿಷ್ಣುವರ್ಧನ್ ರನ್ನು ಬಿಟ್ಟು ಮೋಹನ್ ಲಾಲ್, ಮಮ್ಮುಟ್ಟಿಯನ್ನು ಅವರು ಇಷ್ಟಪಡುವುದನ್ನು ಮನಸ್ಸು ಒಪ್ಪುತ್ತಿರಲಿಲ್ಲ!
ಇದನ್ನೂ ಓದಿ: Shishir Hegde Column: ಕ್ಷಣವೊಂದು ಯುಗವಾಗಿ ಮನಸೆಲ್ಲ ಸೆರೆಯಾಗಿ..
ಅದೆಂತಹ ಕೃತಘ್ನ ಕನ್ನಡಿಗರಪ್ಪಾ!! ಅತ್ತೆಯ ಮಗ ನವೀನ ನೂರಾರು ಬಾರಿ, ‘ನೀನು ಒಮ್ಮೆ ಮಲಯಾಳಂ ಸಿನಿಮಾ ನೋಡಿ, ಆಮೇಲೆ ಮಾತನಾಡು’ ಎನ್ನುತ್ತಿದ್ದ. ಆದರೆ ನಾನು ಬಿಲ್ಕುಲ್ ಒಪ್ಪಲಿಲ್ಲ. ಕನ್ನಡ ಬಿಟ್ಟರೆ ಹಿಂದಿ ಸರಿ, ಇಂಗ್ಲಿಷ್ ಆದರೂ ಓಕೆ. ನಮ್ಮ ದೇಶದ ಇನ್ನೊಂದು ಭಾಷೆಯ ಸಿನಿಮಾ ನೋಡುವುದೆಂದರೆ ಕನ್ನಡ ಪ್ರೇಮಕ್ಕೆ ಚ್ಯುತಿ ಬಂದಂತೆ ಎಂದೇ ಅನಿಸುತ್ತಿತ್ತು.
ಕೊನೆಗೆ ಆ ಶಪಥ ಮುರಿದದ್ದು ಈಗ ಕೆಲವು ವರ್ಷಗಳ ಹಿಂದೆ. ಹೊಸ ಕನ್ನಡ ಸಿನಿಮಾಗಳನ್ನು ನೋಡಿ ನೋಡಿ ಬಳಲಿ, ಬೆಂಡಾಗಿ, ಸುಸ್ತಾದ ಮೇಲೆ! ಒಬ್ಬ ಕನ್ನಡಿಗನಾಗಿ, ಕನ್ನಡದ ಅಂಕಣಕಾರನಾಗಿ ಹೀಗೆ ಹೇಳುವುದು ಎಷ್ಟು ಸರಿ ಎಂದು ನೀವು ಪ್ರಶ್ನಿಸಬಹುದು! ಆದರೂ ಸತ್ಯ ಕಣ್ಣೆದುರಿಗೆ ಇರುವಾಗ! ಈಗೀಗ ಬಹುತೇಕ ಕನ್ನಡ ಸಿನಿಮಾ ನೋಡಿದರೆ ಮುಂದಿನ ಸನ್ನಿವೇಶ ಇಂಥದ್ದೇ ಇಂದು ಊಹಿಸಿಬಿಡಬಹುದು. ಹೆಚ್ಚಿನವು. ಆದರೆ ಒಳ್ಳೆಯ ಮಲಯಾಳಂ ಸಿನಿಮಾ ನೋಡುವ ಅನುಭವವೇ ಅನನ್ಯ. ಸಿನಿಮಾ ಮುಗಿಸಿ-ಟಿವಿ ನಿಲ್ಲಿಸಿ, ಲೋಟ ನೀರು ಕುಡಿಯಲು ಅಡುಗೆ ಮನೆಗೆ ಹೋದರೂ ಮನಸ್ಸು ಮಾತ್ರ ಸಿನಿಮಾದೊಳಗೇ ಇರುತ್ತದೆ.
ಸಿನಿಮಾದಲ್ಲಿ ಕೆಲವೇ ನಿಮಿಷ ಕಾಣಿಸಿಕೊಂಡ ವ್ಯಕ್ತಿಯೊಬ್ಬ, ಹೆಚ್ಚು ಮಾತನಾಡದ ಮಹಿಳೆ ಯೊಬ್ಬಳು, ಯಾವುದೋ ಸಾಮಾನ್ಯ ವಿಷಯಕ್ಕೆ ಜಗಳವಾಡುತ್ತಿದ್ದ ಕುಟುಂಬ ಇವೆಲ್ಲ ಆಪ್ತವೆನಿಸಿ ಮತ್ತೆ ಮತ್ತೆ ನೆನಪಾಗುತ್ತವೆ. ಸಿನಿಮಾ ಮುಗಿದ ಮೇಲೂ ಆ ಜನರ ಬದುಕಿನಲ್ಲಿ ಏನಾಯಿತು ಎಂಬ ಯೋಚನೆ ಉಳಿಯುತ್ತದೆ. ಭಾಷೆ - ನೆಲ ಪರಕೀಯವೆನಿಸಿದರೂ ಕಥೆಗಳು ಮಾತು ಪಾತ್ರ ನಮ್ಮವೇ - ಸುತ್ತಮುತ್ತ ಕಾಣಿಸಿಕೊಳ್ಳುವವು. ಹೆಚ್ಚಿನ ಮಲಯಾಳಂ ಸಿನಿಮಾಗಳಲ್ಲಿ ಎರಡು ಗಂಟೆಗಳ ಕಾಲ ಅಂಥದ್ದೇನೂ ಅಸಾಮಾನ್ಯವೆನ್ನುವ ದೊಡ್ಡ ಘಟನೆ ನಡೆಯುವುದೇ ಇಲ್ಲ.
ನಾಯಕ ಐವತ್ತು ಖಳನಾಯಕರನ್ನು ಹೊಡೆದುರುಳಿಸುವುದಿಲ್ಲ ಅಥವಾ ಮಹಾನಗರವೊಂದನ್ನು ರಕ್ಷಿಸಿಬಿಡುವುದಿಲ್ಲ. ಅವನು ದೊಡ್ಡ ದೊಡ್ಡ ಭಾಷಣವನ್ನೂ ಮಾಡುವುದಿಲ್ಲ ಅಥವಾ ಕೈ ಅಡ್ಡ ಮಾಡಿ ಓಡುವ ರೈಲನ್ನೂ ನಿಲ್ಲಿಸುವುದಿಲ್ಲ! ಸಿನಿಮಾದಲ್ಲಿ ಮದುವೆಯ ಮನೆಯ ಹಿತ್ತಲಿನಲ್ಲಿ ಅಡುಗೆ ಮಾಡುವ ಭಟ್ಟರೇ ಅಲ್ಲಿ ಮುಖ್ಯ ಪಾತ್ರಧಾರಿಯಾಗಬಹುದು.
ಯಾರೋ ಅಡುಗೆ ಮಾಡುತ್ತಾರೆ, ಮತ್ಯಾರೋ ಜಗಳವಾಡುತ್ತಾರೆ, ಇನ್ನಾರೋ ಪ್ರೀತಿಯಲ್ಲಿ ಬೀಳುತ್ತಾರೆ. ಒಬ್ಬ ವಿನಾಕಾರಣ ಸುಳ್ಳು ಹೇಳುತ್ತಾನೆ. ಇನ್ನೊಬ್ಬ ಯಾರಿಗೂ ಹೇಳಿಕೊಳ್ಳದ ನೋವು ತಿನ್ನುತ್ತಿರುತ್ತಾನೆ. ಅಷ್ಟೇ. ಆ ಸಾಮಾನ್ಯ ಪಾತ್ರಗಳು ನಮ್ಮ ಮನಸ್ಸಿನಲ್ಲಿ ಅಸಾಮಾನ್ಯವಾಗಿ ಜಾಗ ಪಡೆಯುತ್ತವೆ. ನಿಮಗೆ ಒಂದೆರಡು ಉದಾಹರಣೆ ಕೊಡುತ್ತೇನೆ. ಇತ್ತೀಚೆಗೆ ಕುಂಬಳಂಗಿ ನೈಟ್ಸ್ ಎಂಬ ಮಲಯಾಳಂ ಸಿನಿಮಾ ನೋಡಿದೆ.
ಅದು ಮೀನುಗಾರರ ಹಳ್ಳಿಯೊಂದರ ಅಸ್ತವ್ಯಸ್ತ ಮನೆಯಲ್ಲಿ ಬದುಕುವ ನಾಲ್ವರು ಸಹೋದರರ ಕಥೆ. ಅವರಲ್ಲಿ ಯಾರೂ ಪರಿಪೂರ್ಣರಲ್ಲ. ಅವರವರೇ ಜಗಳವಾಡುತ್ತಾರೆ, ಎಡವಟ್ಟು ಮಾಡಿ ಕೊಳ್ಳುತ್ತಾರೆ, ತಮ್ಮದೇ ಅಭದ್ರತೆಗಳೊಂದಿಗೆ ಹೋರಾಡುತ್ತಿರುತ್ತಾರೆ. ಅಲ್ಲಿ ಪ್ರೀತಿ ಹುಟ್ಟಿದಾಕ್ಷಣ ಹೀರೋ - ಹೀರೋಯಿನ್ ಸ್ವಿಜರ್ಲೆಂಡ್ಗೆ ಹೋಗಿ ಕುಣಿಯುವುದಿಲ್ಲ. ಒಮ್ಮೆ ನೋಡಿ ನಕ್ಕು - ಅವರದೇ ಊರಿನ ಬೀದಿಗಳಲ್ಲಿ ಓಡಾಡುತ್ತ - ಸಣ್ಣಪುಟ್ಟ ಮಾತುಕತೆ ಮತ್ತು ಜಗಳಗಳ ನಡುವೆಯೇ ಅವರ ನಡುವಿನ ಪ್ರೀತಿ ಸಂಭವಿಸುತ್ತದೆ. ಸಹಜ ಬದುಕಿನಂತೆ!
‘ದ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾದಲ್ಲಿ ಹೊಸದಾಗಿ ಮದುವೆಯಾದ ಮಹಿಳೆಯ ಅಡುಗೆ, ಮನೆಗೆಲಸ, ಪಾತ್ರೆ ತೊಳೆಯುವ ದಿನಚರಿಯೇ ಕಥೆ. ಸಿಂಕ್ನಲ್ಲಿ ತುಂಬುವ ಪಾತ್ರೆಗಳನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಪ್ರತಿದಿನ ಪುನರಾವರ್ತನೆಯಾಗುವ ಕೆಲಸಗಳವರೆಗೆ ಕ್ಯಾಮೆರಾ ಬದುಕನ್ನು ಅಲ್ಲಿ ಅತ್ಯಂತ ತಾಳ್ಮೆಯಿಂದ ಗಮನಿಸುತ್ತದೆ. ಅಲ್ಲಿ ಮಹಿಳಾ ಶೋಷಣೆಯ ಬಗ್ಗೆ ದೊಡ್ಡ ಭಾಷಣವಿಲ್ಲ. ಒಂದು ಕೊಳಕಾದ ಸಿಂಕ್ನಿಂದಲೇ ಇಷ್ಟೊಂದು ದೊಡ್ಡ ಸಾಮಾಜಿಕ ಕೊಂಕನ್ನು ಹೇಳಬಹುದಲ್ಲ ಎಂಬ ಅಚ್ಚರಿ. ಅಲ್ಲಿನ ಸಿನಿಮಾಗಳ ಸಂದೇಶಕ್ಕೆ ಕಟ್ಟಡ ಬೀಳಬೇಕಿಲ್ಲ, ಗಂಡ ಹೊರಗಿರುವಾಗ ಬೀಳುವ ಪಾತ್ರೆಯ ಸದ್ದು ಸಾಕಾಗುತ್ತದೆ !
ಸುಡಾನಿ ಫ್ರಮ್ ನೈಜೀರಿಯಾ ಚಿತ್ರ - ಕೇರಳದ ಫುಟ್ಬಾಲ್ ತಂಡದಲ್ಲಿ ಆಡುವ ನೈಜೀರಿಯಾದ ಆಟಗಾರನೊಬ್ಬನ ಕಥೆ. ಆ ನೈಜೀರಿಯನ್ ಗಾಯಗೊಂಡು ತಂಡದ ಮ್ಯಾನೇಜರ್ ಮನೆಯಲ್ಲಿ ಹೋಗಿ ವಾಸವಾಗುತ್ತಾನೆ. ಭಾಷೆ, ದೇಶ, ಸಂಸ್ಕೃತಿ ಎಲ್ಲವೂ ಬೇರೆ. ಮ್ಯಾನೇಜರ್ನ ತಾಯಿಯೊಂದಿಗೆ ಆತನಿಗೆ ಆತ್ಮೀಯತೆ ಬೆಳೆಯುತ್ತದೆ. ಅದು ಮನಸ್ಸಿಗೆ ಗಾಢವಾಗಿ ತಟ್ಟುತ್ತದೆ. ಭಾಷೆ ಗೊತ್ತಿಲ್ಲದಿದ್ದರೂ ಮನುಷ್ಯರು ಪ್ರೀತಿ ಮತ್ತು ಕಾಳಜಿಯ ಮೂಲಕ ಸಂಬಂಧ ಬೆಳೆಸಬಹುದು ಎಂಬುದನ್ನು ಸಿನಿಮಾ ತೋರಿಸುತ್ತದೆ. ಮಹೇಶಿಂತೆ ಪ್ರತೀಕಾರಂ, ಹೋಮ್, ಪ್ರೇಮಲು, ಮಂಜುಮೇಲ್ ಬಾಯ್ಸ್ - ಹೀಗೆ ಹೆಸರುಗಳ ಪಟ್ಟಿಯನ್ನು ಮಾಡುತ್ತಲೇ ಹೋಗಬಹುದು.
ಎಲ್ಲವೂ ವಿಭಿನ್ನ ಕಥೆಗಳು. ಕೆಲವೊಂದರಲ್ಲಿ ಸಹಜ ಹಾಸ್ಯ, ಇನ್ನೊಂದರಲ್ಲಿ ಅಪರಿಪೂರ್ಣ ಸ್ನೇಹ, ಮತ್ತೊಂದರಲ್ಲಿ ಕುಟುಂಬ ಸಂಬಂಧಗಳು. ಆದರೆ ಮನುಷ್ಯರ ಬದುಕನ್ನು ಗಮನಿಸುವ ಕುತೂಹಲದ ಕಥೆಗಳು ಹಲವಾರು. ಈ ಕಥೆಗಳ ವೈವಿಧ್ಯ ನೋಡಿ. ಕಥಾ ವ್ಯಾಪ್ತಿ - ವಿಸ್ತಾರವನ್ನು ಗಮನಿಸಿ. ಬಹುಶಃ ಇದುವೇ ಮಲಯಾಳಂ ಸಿನಿಮಾಗಳ ದೊಡ್ಡ ಶಕ್ತಿ. ಅವರು ತಮ್ಮ ಸುತ್ತಲಿನ ಜನರನ್ನು, ಅವರ ಸಣ್ಣಪುಟ್ಟ ಆಸೆಗಳನ್ನು, ದೌರ್ಬಲ್ಯಗಳನ್ನು ಮತ್ತು ಸಂಬಂಧಗಳನ್ನು ಕಥೆಯನ್ನಾಗಿ ಮಾಡುತ್ತಾರೆ.
ನಾನಿಲ್ಲಿ ಮಲಯಾಳಂ ಚಿತ್ರವನ್ನು ಉದಾಹರಣೆಗೆ ತೆಗೆದುಕೊಂಡದ್ದಷ್ಟೇ. ಪ್ರಶ್ನೆ - ಇಂತಹ ಚಲನ ಚಿತ್ರಗಳು ಕನ್ನಡದಲ್ಲಿ ಏಕೆ ಬರುವುದಿಲ್ಲ? ಇಂತಹ ಕೆಲವು ಅನನ್ಯ ಸಿನಿಮೀಯ ಅನುಭವ ಪಡೆಯಲು ನಾವೇಕೆ ಬೇರೆ ಭಾಷೆಯ ಮೊರೆ ಹೋಗಬೇಕು? ಈಗ ಮಲಯಾಳಂ ಸಿನಿಮಾಗಳು ಕನ್ನಡ ಡಬ್ಬಿಂಗ್ನಲ್ಲೂ ಸಿಗುತ್ತಿವೆ. ಒಳ್ಳೆಯದೇ. ಆದರೆ ಈ ಕಥೆಗಳನ್ನು ಮಲಯಾಳಂನಲ್ಲಿ ಯಾರೋ ಮಾಡಿ ಮಾಡಿದ್ದನ್ನು ನಾವು ಕನ್ನಡದಲ್ಲಿ ನೋಡಬೇಕೇಕೆ? ನಮ್ಮ ಜನ, ನಮ್ಮ ಊರು, ನಮ್ಮ ಹಾಸ್ಯ, ನಮ್ಮ ಬದುಕು ಮತ್ತು ನಮ್ಮ ಸಂವೇದನೆಗಳನ್ನು ಇಟ್ಟುಕೊಂಡು ಇಂಥ ಕಥೆಗಳನ್ನು ನಮ್ಮ ಕನ್ನಡದ ಚಿತ್ರಗಳು ಏಕೆ ಹೇಳಬಾರದು? ಇದು ಕೇವಲ ಸಿನಿಮಾಗಳ ಗುಣ ಮಟ್ಟದ ಪ್ರಶ್ನೆಯಲ್ಲ.
ಕನ್ನಡದ ಸಾಂಸ್ಕೃತಿಕ ಬದುಕಿನಲ್ಲಿ ಸಿನಿಮಾ ಎಷ್ಟು ದೊಡ್ಡ ಸ್ಥಾನ ಪಡೆದಿದೆ ಎಂಬುದು ಎಲ್ಲರಿಗೂ ಗೊತ್ತು. ನಾನು ಬೆಂಗಳೂರಿನಲ್ಲಿದ್ದಾಗ ನಮ್ಮ ಬೀದಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಗೆ ನಾನು ತೀರ್ಪುಗಾರನಾಗಿದ್ದೆ. ಒಬ್ಬ ಹುಡುಗ ಭಾಷಣ ಆರಂಭಿಸಿ ಮೊದಲು ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು ಹೇಳಿದ. ಮುಂದಿನ ಐದು ನಿಮಿಷ ರಾಜ್ಕುಮಾರ್, ವಿಷ್ಣುವರ್ಧನ್ನಿಂದ ಹಿಡಿದು ಮುಸುರಿ ಕೃಷ್ಣಮೂರ್ತಿಯವರೆಗೂ ಕನ್ನಡದ ಸಿನಿಮಾ ನಟರ ಗುಣಗಾನ ಮಾಡಿದ.
ಅಚ್ಚರಿಯೆಂದರೆ, ನಂತರ ಬಂದ ಬಹುತೇಕ ಸ್ಪರ್ಧಿಗಳ ಭಾಷಣವೂ ಇದೇ ಮಾದರಿಯಲ್ಲಿತ್ತು. ಕನ್ನಡ ಎಂದರೆ ಜ್ಞಾನಪೀಠಿಗಳು ಮತ್ತು ಕನ್ನಡ ಸಿನಿಮಾ - ಕನ್ನಡ ಸಿನಿಮಾ ನಟರು - ಕನ್ನಡ ಸಿನಿಮಾ ಹಾಡುಗಾರರು - ಸಂಗೀತ ನಿರ್ದೇಶಕರು. ಇದು ಆ ಹುಡುಗರ ತಪ್ಪಲ್ಲ. ಕನ್ನಡದ ಸಿನಿಮಾದ ಆಳ ಅಂಥದ್ದು. ಅದರಲ್ಲೂ ಡಾ.ರಾಜ್ಕುಮಾರ್ ಅವರ ನಂತರ ಕನ್ನಡದ ರಕ್ಷಕ ಎಂಬ ವಿಶೇಷ ಸ್ಥಾನವನ್ನು ಚಿತ್ರರಂಗ ಪಡೆದುಕೊಂಡಿದೆ. ಆದರೆ ಕನ್ನಡವನ್ನು ಪ್ರೀತಿಸುವುದು ಬೇರೆ, ಕನ್ನಡ ಸಿನಿಮಾವನ್ನು ಪ್ರಶ್ನಿಸದೆ ಬೆಂಬಲಿಸುವುದು ಬೇರೆ. ಗೊಂದಲವಿರುವುದೇ ಇಲ್ಲಿ.
ಪ್ರತಿ ರಾಜ್ಯೋತ್ಸವದಲ್ಲೂ ವೇದಿಕೆಯ ಮುಂಭಾಗದಲ್ಲಿ ಸಿನಿಮಾ ನಾಯಕರು ಬಂದು ಕೂರುತ್ತಾರೆ. ದಸರಾ ಮೆರವಣಿಗೆಯಲ್ಲಿ ಇತ್ತೀಚೆ ಸೂಪರ್ ಹಿಟ್ ಆದ ಹೊಸ ನಟ ಪಥಸಂಚಲನದ ವ್ಯಾನ್ ಏರಿ ಕೈಬೀಸುತ್ತಾನೆ. ಆದರೆ ಜಯಂತ ಕಾಯ್ಕಿಣಿ, ವಿವೇಕ್ ಶಾನಭಾಗ್, ಜೋಗಿ, ವಿ.ಭಟ್ಟರಂತ ಸಮಕಾಲೀನ ಬರಹಗಾರರಿಗೆ, ಯಕ್ಷಗಾನ ನಟರಿಗೆ ಅಷ್ಟೇ ಗೌರವ, ಪ್ರಚಾರ, ಪ್ರಾಧಾನ್ಯತೆ ಸಿಗುವುದಿಲ್ಲ. ಬೇಸರದ ವಿಷಯವೇನಲ್ಲ- ಇರೋದೇ ಹಾಗೆ. ಚಿತ್ರರಂಗಕ್ಕೆ ಇಷ್ಟೊಂದು ಸಾಂಸ್ಕೃತಿಕ ಪ್ರಭಾವವಿರುವಾಗ ಅದರ ಜವಾಬ್ದಾರಿಯೂ ಹೆಚ್ಚಿರಬೇಕಲ್ಲವೇ? ಆದರೆ ನಮ್ಮ ಕನ್ನಡ ಸಿನಿಮಾ ದವರು - ಸಿನಿಮಾ ನೋಡುವುದನ್ನೇ ಕನ್ನಡಿಗನ ಕರ್ತವ್ಯವನ್ನಾಗಿ ಮಾಡುವ ಪ್ರಯತ್ನದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿರುತ್ತಾರೆ.
ಕನ್ನಡ ಸಿನಿಮಾ ನೋಡುವುದು ಸಾಮಾಜಿಕ ಕರ್ತವ್ಯ ಎಂಬ ವಾದವನ್ನು ಒಪ್ಪೋಣ. ಆದರೆ ಏನಿವರ ವಾದ? ಬಿಡುಗಡೆಯಾದ ಪ್ರತಿಯೊಂದು ಕನ್ನಡ ಸಿನಿಮಾವನ್ನೂ ನೋಡಬೇಕೇ? ಹೇಗಿದ್ದರೂ ನೋಡಬೇಕೆ? ಅಥವಾ ಕೇವಲ ನೀವು ಚೆನ್ನಾಗಿದೆ ಎಂಬ ಕಾರಣಕ್ಕೆ ನೋಡಬೇಕೆ? ಒಳ್ಳೆಯ ಹಿಂದಿ ಸಿನಿಮಾ ಮತ್ತು ಕನ್ನಡ ಸಿನಿಮಾ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾದರೆ ಕೇವಲ ಭಾಷೆಯ ಕಾರಣಕ್ಕೆ ಕನ್ನಡ ಸಿನಿಮಾವನ್ನೇ ಆರಿಸಿಕೊಳ್ಳಬೇಕೆ? ಪ್ರೇಕ್ಷಕರ ತನ್ನ ಒಳಮಾತು ‘ನೀವು ಮೊದಲು ನಾವು ನೋಡುವಂಥ ಸಿನಿಮಾ ಮಾಡಿ!’ ಎಂದು ಹೇಳಿದರೆ ಇವರಿಗೆ ಕೋಪ ಬರುತ್ತದೆ. ಉತ್ತರವಾಗಿ - ಈ ವರ್ಷ ಬಿಡುಗಡೆಯಾದ ಇಪ್ಪತ್ತು ಒಳ್ಳೆಯ ಚಿತ್ರ, ಇದರಲ್ಲಿ ಹೆಚ್ಚಿನವುದನ್ನು ಕನ್ನಡಿಗ ನೋಡಲಿಲ್ಲ - ಹಾಗಾಗಿ ‘ಸೋತಿತು’ ಎನ್ನುತ್ತಾರೆ. ಪ್ರೇಕ್ಷಕ ನೋಡಲಿಲ್ಲ - ಸಿನಿಮಾ ಸೋತಿತು ಎಂದು ಅವರು - ನೋಡುವಂತಹ ಸಿನಿಮಾ ಮಾಡಿ ಎಂದು ನಾವು!
ಗೂಬೆ ಪ್ರೇಕ್ಷಕನಿಗೆ ಹೊರಿಸಿ ಗಾಂಧಿನಗರ ಸಮಾಧಾನ ಪಡುತ್ತದೆ! ಇವೆಲ್ಲದರಿಂದಾಗಿ ಫ್ಯಾನ್ ಕ್ಲಬ್ ಸಂಸ್ಕೃತಿಯನ್ನು ವ್ಯವಸ್ಥೆ ನೆಚ್ಚಿಕೊಳ್ಳುವ ಸ್ಥಿತಿಗೆ ಕನ್ನಡ ಸಿನಿಮಾ ಬಂದು ನಿಂತಿದೆ! ಸಿನಿಮಾ ಮಾಡುವುದು ಮನರಂಜನೆಗಾಗಿ. ನಟರಿಗೆ ಹಣ ಕೊಡುವುದೂ ನಮ್ಮನ್ನು ರಂಜಿಸುವುದಕ್ಕಾಗಿ. ಹಾಗಿರುವಾಗ ಒಬ್ಬ ನಟನಿಗಾಗಿ ಗುಂಪು ಕಟ್ಟಿಕೊಂಡು, ಇನ್ನೊಬ್ಬ ನಟನ ಅಭಿಮಾನಿಗಳೊಂದಿಗೆ ಜಗಳವಾಡಿ, ವೈಯಕ್ತಿಕ ಸ್ನೇಹವನ್ನು ವೈರತ್ವವಾಗಿ ಬದಲಿಸಿಕೊಳ್ಳುವ ಅಗತ್ಯವೇನು? ಇವೆಲ್ಲ ಅಪಸವ್ಯಗಳಲ್ಲವೇ? ನಟರು ತಮ್ಮ ಅಭಿಮಾನಿಗಳಿಗೆ ಜಗಳವಾಡಿ ಎಂದು ಹೇಳದಿರಬಹುದು.
ಆದರೆ ಈ ಆರಾಧನಾ ಸಂಸ್ಕೃತಿ ಬೆಳೆಯುವುದನ್ನು ತಡೆಯುವ ಆಸಕ್ತಿ ಅವರಲ್ಲಿ ಎಷ್ಟಿದೆ? ಒಬ್ಬ ನಟನನ್ನು ಮೆಚ್ಚಿಕೊಳ್ಳುವುದು ತಪ್ಪಲ್ಲ. ಆದರೆ ಒಬ್ಬ ಮನರಂಜಕನನ್ನೇ ನಮ್ಮ ಗುರುತಾಗಿಸಿ ಕೊಳ್ಳುವುದು, ಒಂದು ಸಿನಿಮಾವನ್ನೇ ವೈಯಕ್ತಿಕ ನಿಷ್ಠೆಯ ಪ್ರಶ್ನೆಯಾಗಿಸುವುದು ಎಂಥ ವಿಚಿತ್ರ! ನಾವು ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗುವುದೋ ಅಥವಾ ಅಭಿಮಾನಿ ಸಂಘದ ಸದಸ್ಯತ್ವ ಪಡೆಯಲಿಕ್ಕೋ? ವಾಹಿನಿಯಲ್ಲಿ ಈ ಫ್ಯಾನ್ ಕ್ಲಬ್ಗಳ ನಡುವಿನ ವಾರ್ ಚರ್ಚೆಯಾಗು ವಷ್ಟು ಕಥೆ, ನಟನೆ, ಕ್ಯಾಮೆರಾ, ಸಂಗೀತ, ಪ್ರಸ್ತುತಿ ಚರ್ಚೆಯಾಗುವುದಿಲ್ಲವಲ್ಲ!
ಹಾಗಾದರೆ ಕನ್ನಡ ಚಿತ್ರರಂಗದ ಈ ಸೀಮಿತ ಕಥನದ ಹಿಂದಿರುವ ಸಮಸ್ಯೆ ಏನು? ಗಾಂಧಿನಗರದಲ್ಲಿ ವಾಸ್ತವಕ್ಕೆ ಹತ್ತಿರವಾದ ಸಿನಿಮಾಗಳ ಬಗ್ಗೆ ಕೇಳಿದರೆ ಸಿಗುವ ಸಿದ್ಧ ಉತ್ತರ: ‘ಸಾರ್, ಅವಾರ್ಡ್ ಸಿನಿಮಾ ಓಡಲ್ಲ!’. ಅಲ್ಲಾ - ಪ್ರಶಸ್ತಿ ಗೆಲ್ಲುವ ಸಿನಿಮಾ ಅಥವಾ ಹಣ ಗಳಿಸುವ ಸಿನಿಮಾ - ಇವೆರಡೇ ಆಯ್ಕೆಗಳೇ? ಇವೆರಡರ ನಡುವೆ ಒಳ್ಳೆಯ ಕಥೆ ಹೇಳಿ ಪ್ರೇಕ್ಷಕರನ್ನು ರಂಜಿಸುವ ಸಿನಿಮಾಕ್ಕೆ ಜಾಗವಿಲ್ಲವೇ? ಕನ್ನಡದಲ್ಲಿ ಮಾತ್ರ ಹೀಗೇಕೆ? ನಮ್ಮಲ್ಲಿ ಗೆದ್ದ ಸಿನಿಮಾವೊಂದನ್ನು ಕಂಡರೆ ಸಾಕು, ಅದರ ಸೂತ್ರವನ್ನೇ ಎಲ್ಲರೂ ಅನುಸರಿಸಲು ಹೊರಡುತ್ತಾರೆ.
ಕೆಜಿಎಫ್ ಯಶಸ್ಸು ಕಂಡಿತು. ಹೆಮ್ಮೆಯ ವಿಷಯ. ಆದರೆ ಪ್ರತಿಯೊಂದು ಯಶಸ್ಸನ್ನೂ ಮಾದರಿಯನ್ನಾಗಿ ಮಾಡಿಕೊಂಡು ಬೇರೆ ಬೇರೆ ವೇಷದಲ್ಲಿ ಸೃಷ್ಟಿಸುವುದೇಕೆ? ಎಲ್ಲರಿಗೂ ಮುಂದಿನ ಕೆಜಿಎಫ್ ಬೇಕಾಗಿದೆ. ಆದರೆ ಪ್ರತಿಯೊಂದು ಕಥೆಯೂ ಕೆಜಿಎಫ್ ಆಗಬೇಕಿಲ್ಲವಲ್ಲ!
ಕನ್ನಡ ನಿರ್ದೇಶಕರು ಕರ್ನಾಟಕವನ್ನೇ ನೋಡುತ್ತಿಲ್ಲ ಎಂಬ ಭಾವನೆ ಬರುವುದೂ ಇದೇ ಕಾರಣಕ್ಕೆ. ನಮ್ಮ ಸುತ್ತಲಿನ ಬದುಕಿನಲ್ಲಿ ಎಷ್ಟೊಂದು ಕಥೆಗಳಿವೆ. ಆದರೆ ನಮ್ಮ ನಿರ್ದೇಶಕರ ವೈಶಾಲ್ಯ ಮಾತ್ರ ಆ ಕಡೆ ಪೀಣ್ಯ-ದಾಸರ ಹಳ್ಳಿ-ಈ ಕಡೆ ಮಂಡ್ಯ, ರಾಮನಗರ ದಾಟುವುದಿಲ್ಲ. ಡಬ್ಬಿಂಗ್ ವಿಚಾರದಲ್ಲೂ ಕನ್ನಡ ಚಿತ್ರರಂಗ ಬಹುಕಾಲ ರಕ್ಷಣಾತ್ಮಕ ನಿಲುವು ತಳೆದಿತ್ತು. ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗುವುದು ಕನ್ನಡಕ್ಕೆ ಸಂಚಕಾರ ಎಂದು ಕರ್ನಾಟಕವೇ ನಂಬಿತ್ತು. ಸ್ಪರ್ಧೆ ಕಷ್ಟ ಎಂಬ ಆತಂಕ ಅರ್ಥವಾಗುತ್ತದೆ. ಆದರೆ ಆ ರಕ್ಷಣೆಯ ನೆರಳಿನಲ್ಲಿಯೇ ಕನ್ನಡ ಸಿನಿಮಾ ರಂಗ ಹಿಂದೆ ಬಿದ್ದುಬಿಟ್ಟಿತೆ? ಇಂದು ಒಟಿಟಿ ಮತ್ತು ಡಬ್ಬಿಂಗ್ನಿಂದ ಪ್ರೇಕ್ಷಕರ ಆಯ್ಕೆಗಳು ಹೆಚ್ಚಿವೆ. ಪೈಪೋಟಿಯೂ ಹೆಚ್ಚಿದೆ.
ಕನ್ನಡ ಸಿನಿಮಾ ರಂಗ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರೇಕ್ಷಕರನ್ನು ತಲುಪುತ್ತಿಲ್ಲ. ಹಿಂದಿನ ವರ್ಷ 255 ಕನ್ನಡ ಸಿನಿಮಾಗಳು ಬಿಡುಗಡೆಯಾದವಂತೆ. ಸರಾಸರಿ ವಾರಕ್ಕೆ ಐದು ಚಿತ್ರಗಳು. ಇಷ್ಟು ಸಂಖ್ಯೆಯ ಸಿನಿಮಾಗಳಲ್ಲಿ ಎಷ್ಟು ನಿರ್ಮಾಪಕರು ಹಣ ಗಳಿಸಿರಬಹುದು? ಕಾಂತಾರ, ಕೆಜಿಎಫ್ ಇವೆಲ್ಲ ಕೋಟಿ ಬಾಚುವುದು ಹೆಮ್ಮೆ - ಆದರೆ ಸೋತ ಚಿತ್ರಗಳೆಷ್ಟು? ಗೆದ್ದ ಸಿನಿಮಾದ ಚೌಕಟ್ಟನ್ನೇ ಅನುಸರಿಸಿದರೆ ಪ್ರೇಕ್ಷಕರು ಬರುತ್ತಾರೆ ಎಂಬ ಲೆಕ್ಕಾಚಾರವಿಟ್ಟು ಸಿನಿಮಾ ಮಾಡಿ ಕೈಸುಟ್ಟು ಕೊಂಡವರೆಷ್ಟು? ಸಿನಿಮಾಗಳ ಸಂಖ್ಯೆ ಹೆಚ್ಚುವುದಷ್ಟೇ ಸಾಧನೆಯೇ? ಪ್ರೇಕ್ಷಕರು ನೆನಪಿಟ್ಟುಕೊಳ್ಳು ವಂಥ ಕಥೆಗಳು ಹೆಚ್ಚಬೇಕಲ್ಲವೇ? ಅದರ ಸರಾಸರಿ ಎಷ್ಟು? ಹೊಸ ಪ್ರಯತ್ನಗಳೇ ನಡೆಯುತ್ತಿಲ್ಲ ಎಂದಲ್ಲ.
ಸು ಫ್ರಮ್ ಸೋ, ಕಾಂತಾರ -1 ಇವೆಲ್ಲ ಉದಾಹರಣೆ. ರಾಜ್ ಬಿ. ಶೆಟ್ಟಿ, ರಿಷಭ್ ಶೆಟ್ಟಿ ಸೇರಿದಂತೆ ಕೆಲವರು ವಿಭಿನ್ನ ಕಥನದ ಮೂಲಕ ಹೊಸ ಸಾಧ್ಯತೆಗಳನ್ನು ತೋರಿಸಿದ್ದಾರೆ. ಆದರೆ ಸೀಮಿತ. ನಮ್ಮಲ್ಲಿ ಹೊಸ ಪ್ರತಿಭೆಗಳಿಗೆ ಬೆಂಬಲ ಬೇಕು, ನಿಜ. ಆದರೆ ಮೊದಲು ಗಾಂಧಿನಗರ ಮೈಚಳಿ ಬಿಟ್ಟು ಕನ್ನಡಿಗರ ಅವಶ್ಯಕತೆಯನ್ನು ಗಮನಿಸಬೇಕು.
ಸ್ಥಾಪಿತ ಸೂಪರ್ ಸ್ಟಾರ್ ಪ್ರತಿಭೆಗಳು ಕೂಡ ತಮ್ಮ ಹಳೆಯ ಸೂತ್ರಗಳಿಂದ ಹೊರಬರಬೇಕು. ಹೊಸ ಬರಹಗಾರರು, ಹೊಸ ಕಥೆಗಳು, ಹೊಸ ಪ್ರಯೋಗಗಳನ್ನು ಗಾಂಧಿನಗರ ಒಪ್ಪಬೇಕು. ಇದರ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಏಕೆಂದರೆ ಕನ್ನಡ ಸಿನಿಮಾಗಳನ್ನು ನೋಡುವುದನ್ನು ನಿಲ್ಲಿಸಿರುವ ಬಹು ದೊಡ್ಡ ಪ್ರೇಕ್ಷಕ ವರ್ಗವಿದೆ. ಅವರು ಮನೆಯಲ್ಲಿ ಕುಳಿತು ಮಲಯಾಳಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳನ್ನು ಸಬ್ ಟೈಟಲ್ ಹಾಕಿಕೊಂಡೇ ನೋಡುತ್ತಿದ್ದಾರೆ.
ಅವರಿಗೆ ಕನ್ನಡದ ಮೇಲೆ ಅಭಿಮಾನವಿಲ್ಲ ಎಂದಲ್ಲ. ಅವರಿಗೆ ಬೇಕಾದ ಮನರಂಜನೆ ಇಲ್ಲಿ ಸಿಗುತ್ತಿಲ್ಲ - ಬೇರೆಡೆ ಸಿಗುತ್ತಿದೆ. ಈ ಪ್ರೇಕ್ಷಕರನ್ನು ಮರಳಿ ಚಿತ್ರಮಂದಿರಕ್ಕೆ, ಒಟಿಟಿ ಪರದೆಯ ಎದುರು ಕರೆತರುವ ಜವಾಬ್ದಾರಿ ಚಿತ್ರರಂಗದ್ದು. ಭಾಷಾಭಿಮಾನವನ್ನೇ ಟಿಕೆಟ್ ಮಾರಾಟದ ಶಾಶ್ವತ ತಂತ್ರವನ್ನಾಗಿ ಬಳಸಲು ಸಾಧ್ಯವಿಲ್ಲ ಎನ್ನುವುದು ಅರ್ಥವಾಗುವುದು ಯಾವಾಗ? ಕನ್ನಡ ಸಿನಿಮಾಗಳು ಮಲಯಾಳಂ ಸಿನಿಮಾಗಳನ್ನು ಅನುಸರಿಸಬೇಕು ಎನ್ನುವುದು ನನ್ನ ವಾದವೇ ಅಲ್ಲ. ನಮಗೆ ಬೇಕಿರುವುದು ನಮ್ಮದೇ ನೆಲದ ಕಥೆಗಳು. ಪ್ರತಿದಿನ ಹಳ್ಳಿಯ ಅದೇ ಟೀ ಅಂಗಡಿಗೆ ಹೋಗುವ ವೃದ್ಧ, ಪಿಂಚಣಿಗಾಗಿ ಕಾಯುತ್ತಿರುವ ನಿವೃತ್ತ ಶಿಕ್ಷಕ, ಇಪ್ಪತ್ತು ವರ್ಷಗಳಿಂದ ಮಾತನಾಡದ ಅಣ್ಣತಮ್ಮಂದಿರು, ಮತ್ತೆ ಕೆಲಸಕ್ಕೆ ಹೊರಟ ಮಹಿಳೆ, ಅವಳ ಹಿಂಜರಿಕೆ, ಗಂಡನಲ್ಲಿ ಹೇಳಿಕೊಳ್ಳ ಲಾಗದ ಏನೋ ಒಂದು ಒತ್ತಡ, ಮನೆಯ ಅಪರಿಚಿತರಾಗುವ ಕುಟುಂಬ - ಇವೆಲ್ಲ ಬದುಕಿನಲ್ಲೂ ಸಿನಿಮಾ ಇದೆ.
ಸಿನಿಮಾ ಸಂದೇಶವಾಗಲು ಹೆಲಿಕಾಪ್ಟರ್, ನೂರು ಖಳನಾಯಕರು ಅಥವಾ ಲಾರಿಯನ್ನೇ ಎತ್ತುವ ನಾಯಕ ಬೇಕಿಲ್ಲ. ಒಳಮನೆಯಲ್ಲಿ ಗೃಹಿಣಿ ಪಾತ್ರೆ ಬೀಳಿಸಿದ ಸದ್ದು ಕೂಡ ಸಂದೇಶವಾಗಬಹುದು. ಗಾಂಧಿನಗರ ಹಳೆ ಚಾಳಿ ಬಿಟ್ಟು ಸುಧಾರಿಸಲಿ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯ.