Lokesh Kaayarga Column: ಬಿರಿಯಾನಿ ತಿಂದ ನಾಯಿಗಳು ಕಚ್ಚೋದಿಲ್ವೇ ?!
ಬೀದಿ ನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಇತ್ತೀಚೆಗೆ ಒಂದರ ಬಳಿಕ ಒಂದರಂತೆ ನೀಡಿರುವ ನಿರ್ದೇಶನಗಳು, ಅದನ್ನು ಪಾಲಿಸಲು ನಮ್ಮ ಸರಕಾರ ಮತ್ತು ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಈ ನಿಟ್ಟಿನಲ್ಲಿ ಅಂದಾಜಿಸಿರುವ ಹಣಕಾಸು ಬೇಡಿಕೆಗಳನ್ನು ನೋಡಿದರೆ ಖಂಡಿತ ವಾಗಿಯೂ ಬೀದಿ ನಾಯಿಗಳು, ಹುಲಿ, ಸಿಂಹ, ಚಿರತೆ ಮುಂತಾದ ವನ್ಯ ಪ್ರಾಣಿಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತಿವೆ.
-
ಲೋಕಮತ
ನಾಯಿ ಮರಿ, ನಾಯಿ ಮರಿ ತಿಂಡಿ ಬೇಕೆ ?’ ಎನ್ನುವ ಜಿ.ಪಿ.ರಾಜರತ್ನ ಅವರ ಸುಪ್ರಸಿದ್ಧ ಪದ್ಯ ಕನ್ನಡ ಮೀಡಿಯಂ ಮಕ್ಕಳಿಗೆ ಚಿರಪರಿಚಿತ. ಆ ಜಮಾನದ ನಾವು, ನಾಯಿ ಮರಿಗಳಿಗೆ ಮತ್ತದರ ಅಮ್ಮ-ಅಪ್ಪಂದಿರಿಗೆ ನಾವೇನು ತಿನ್ನುತ್ತಿದ್ದೆವೋ ಅದನ್ನೇ ಕೊಡುತ್ತಿದ್ದೆವು. ರೊಟ್ಟಿ, ದೋಸೆ, ಇಡ್ಲಿ, ಅನ್ನ ಇದಾವುದನ್ನು ಹಾಕಿದರೂ ಆ ಕಾಲದ ನಾಯಿಗಳು ಬಾಲ ಅಲ್ಲಾಡಿಸಿಕೊಂಡು ತಿನ್ನುತ್ತಿದ್ದವು. ಈಗ ನಾಯಿಗಳದ್ದೂ ಜೆನ್‌ಜೀ ಕಾಲ. ಬೀದಿ ನಾಯಿಗಳಿಗೂ ಅನ್ನಕ್ಕಿಂತ ಬಿಸ್ಕತ್ ಹೆಚ್ಚು ಪ್ರಿಯ. ಅದರಲ್ಲೂ ಜಾತಿ ನಾಯಿಗಳಿಗೆ ‘ಡಾಗ್ ಬಿಸ್ಕತ್’ ನೀಡುವುದು ಕಡ್ಡಾಯ !
ಬೀದಿ ನಾಯಿಗಳ ಊಟದ ಮೆನು ಈಗ ರಾಷ್ಟ್ರೀಯ ಚರ್ಚೆಯ ವಿಷಯ. ನಮ್ಮ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೀದಿ ನಾಯಿಗಳಿಗೆ ಪ್ರತಿದಿನ ಎರಡು ಹೊತ್ತು ಬಿರಿಯಾನಿ ಉಣಿಸಲು ಮುಂದಾಗಿದೆ. ಇನ್ನು ಮುಂದೆ ಪುಷ್ಕಳ ಬಿರಿಯಾನಿ ಊಟ ಉಂಡ ಬೀದಿ ನಾಯಿಗಳು ಯಾರಿಗೂ ಕಚ್ಚದಿರಲು ತೀರ್ಮಾನ ತೆಗೆದುಕೊಳ್ಳಬಹುದು. ನಮ್ಮ ಇಂಗ್ಲಿಷ್ ಮೀಡಿಯಂ ಮಕ್ಕಳು ‘ಪಪ್ಪಿ, ಪಪ್ಪಿ ಡು ಯೂ ವಾಂಟ್ ಬಿರಿಯಾನಿ’ ಎಂದು ಆಡಿಕೊಳ್ಳಬಹುದು !
ಬೀದಿ ನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಇತ್ತೀಚೆಗೆ ಒಂದರ ಬಳಿಕ ಒಂದರಂತೆ ನೀಡಿರುವ ನಿರ್ದೇಶನಗಳು, ಅದನ್ನು ಪಾಲಿಸಲು ನಮ್ಮ ಸರಕಾರ ಮತ್ತು ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಈ ನಿಟ್ಟಿನಲ್ಲಿ ಅಂದಾಜಿಸಿರುವ ಹಣಕಾಸು ಬೇಡಿಕೆಗಳನ್ನು ನೋಡಿದರೆ ಖಂಡಿತ ವಾಗಿಯೂ ಬೀದಿ ನಾಯಿಗಳು, ಹುಲಿ, ಸಿಂಹ, ಚಿರತೆ ಮುಂತಾದ ವನ್ಯ ಪ್ರಾಣಿಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತಿವೆ.
ಮುಂದೊಂದು ದಿನ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಜೆಟ್‌ನಲ್ಲಿ ಬೀದಿನಾಯಿಗಳ ಸಮಗ್ರ ಪೌಷ್ಟಿಕಾಂಶ ಯೋಜನೆಯಡಿ ವಿಶೇಷ ಅನುದಾನ ಮೀಸಲಿರಿಸಿದರೂ ಅಚ್ಚರಿ ಇಲ್ಲ. ಒಂದು ಸಮಸ್ಯೆಯ ಮೇಲೆ ಭೂತಗನ್ನಡಿ ಇಟ್ಟು ಪದೇ ಪದೆ ನೋಡಿದರೆ, ಅದು ಬೃಹದಾಕಾರವಾಗಿ ಕಾಣು ತ್ತದೆ.
ಇದನ್ನೂ ಓದಿ: Lokesh Kaayarga Column: ರಾಜ್ಯಕ್ಕೆ ಮುಳುವಾಯಿತೇ ಹೈಕಮಾಂಡ್ ಸಂಸ್ಕೃತಿ
ನಮ್ಮ ನ್ಯಾಯವೇತ್ತರು ಮತ್ತು ನಾಯಕರಿಗೂ ಈಗ ಬೀದಿ ನಾಯಿಗಳ ಸಮಸ್ಯೆ ಭೂತಾಕಾರವಾಗಿ ಕಾಣಿಸತೊಡಗಿದೆ. ಈ ಬಗ್ಗೆ ತೆಗೆದುಕೊಳ್ಳುತ್ತಿರುವ ಒಂದಷ್ಟು ನಿರ್ಧಾರಗಳು ನಮ್ಮ ಸಾಮಾನ್ಯ ಜ್ಞಾನ ಮತ್ತು ನಾಗರಿಕ ಪ್ರಜ್ಞೆಗೂ ನಿಲುಕುವುದಿಲ್ಲ.
ದಶಕದ ಹಿಂದೆ ಬೀದಿ ನಾಯಿಗಳ ಹಾವಳಿ ಹೆಚ್ಚಾದಾಗ ಜನರು ಪಂಚಾಯಿತಿ, ಇಲ್ಲವೇ ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ದೂರು ನೀಡುತ್ತಿದ್ದರು. ಪುರಸಭೆ, ಪಾಲಿಕೆಗಳ ವ್ಯಾಪ್ತಿಯಲ್ಲಿ ಶ್ವಾನಸಂಹಾರ ಕ್ಕಾಗಿಯೇ ಒಂದು ತಂಡವಿರುತ್ತಿತ್ತು. ನಮ್ಮ ನಾಗರಿಕ ಪ್ರಜ್ಞೆ ವಿಸ್ತಾರಗೊಂಡಂತೆಲ್ಲ, ಶ್ವಾನ ಸಂಹಾರ ಪ್ರಾಣಿಗಳ ಮೇಲಿನ ಕ್ರೂರತೆಯ ವ್ಯಾಪ್ತಿಗೆ ಸೇರಿತು.
ಬೀದಿನಾಯಿಗಳನ್ನು ಕೊಲ್ಲುವುದಿರಲಿ, ಹಿಡಿದು ಬೇರೆ ಕಡೆಗೆ ಸಾಗಾಟ ಮಾಡುವುದು ಅಪರಾಧ ವಾಯಿತು. ವರ್ಷಗಳ ಹಿಂದೆ ಬೀದಿ ನಾಯಿಗಳ ಹತ್ಯೆಯ ಬದಲು ಅವುಗಳ ‘ಜನನ ನಿಯಂತ್ರಣ (ಎಬಿಸಿ)’ಕ್ಕಾಗಿ ನಿಯಮಗಳನ್ನು ರೂಪಿಸಲಾಯಿತು. ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ನೆರವೇರಿಸಿ ಎಲ್ಲಿ ಹಿಡಿಯಲಾಯಿತೋ ಅಲ್ಲಿಯೇ ಮರಳಿ ಬಿಡುಗಡೆ ಮಾಡುವು ದನ್ನು ಕಡ್ಡಾಯಗೊಳಿಸಲಾಯಿತು.
ಬೀದಿ ನಾಯಿಗಳ ಪರ ಹೋರಾಟ ನಡೆಸಲು ಪ್ರಾಣಿ ದಯಾಪರ ಸಂಘಟನೆಗಳು ಹುಟ್ಟಿಕೊಂಡವು. ಕಾನೂನು ರಕ್ಷಣೆ ಸಿಕ್ಕಿದ ಬಳಿಕ ಬೀದಿನಾಯಿಗಳು ನಿರಾಳವಾಗಿವೆ. ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಬೀದಿ ನಾಯಿಗಳ ಸಂತಾನಹರಣದ ನೆಪದಲ್ಲಿ ಹತ್ತಾರು ಪ್ರಾಣಿ ದಯಾ ಸಂಘಟನೆ ಗಳು ಸರಕಾರದಿಂದ ಕೋಟಿಗಟ್ಟಲೆ ಹಣ ಪಡೆದಿವೆ.
ಸಂತಾನ ಹರಣ ಚಿಕಿತ್ಸೆಗೆ ಒಳಗಾದ ನಾಯಿಯ ಗುರುತಿಗೆ ‘ವಿ’ ಗುರುತು ಹಾಕಬೇಕು. ಶ್ವಾನದ ಕಿವಿಯಲ್ಲಿ ಈ ಚಿನ್ಹೆ ಇಲ್ಲದಿದ್ದರೂ ದಯಾಸಂಘಟನೆಗಳ ಮುಖಂಡರು ‘ವಿಕ್ಟರಿ’ ಗುರುತು ತೋರಿಸಿ ಬೀಗುತ್ತಿದ್ದಾರೆ. ಆದರೆ ಇತ್ತೀಚೆಗೆ ಸರಕಾರವೇ ನೀಡಿದ ಅಂಕಿಅಂಶಗಳ ಪ್ರಕಾರ, ಬೀದಿ ನಾಯಿಗಳ ಸಂಖ್ಯೆ ದುಪ್ಪಟ್ಟಾಗಿದೆ.
ನಾಯಿಗಳ ದಾಳಿಗೆ ಒಳಗಾಗುವವರು, ದಾಳಿಗೆ ಸಿಲುಕಿ ಮೃತಪಡುವವರು, ರೇಬಿಸ್ ಎಂಬ ಭೀಕರ ಕಾಯಿಲೆ ಅಂಟಿಸಿಕೊಂಡು ನರಳಿ, ನರಳಿ ಉಸಿರು ಚೆಲ್ಲುವವರ ಸಂಖ್ಯೆಯೂ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ಮುಂದೆ ಮಂಡನೆಯಾದ ಅಂಕಿ ಅಂಶಗಳನ್ನು ತೆಗೆದುಕೊಂಡರೆ 2025ರಲ್ಲಿ ಜುಲೈವರೆಗೆ ದೇಶದಲ್ಲಿ 26 ಲಕ್ಷ ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ.
ನಮ್ಮ ರಾಜ್ಯದ ವಿಷಯಕ್ಕೆ ಬಂದರೆ ಜನವರಿ 1 ರಿಂದ ನವೆಂಬರ್ 3, 2025ರವರೆಗೆ 4,10,151 ನಾಯಿ ಕಡಿತ ಪ್ರಕರಣಗಳು, 34 ಸಾವುಗಳು ಸಂಭವಿಸಿವೆ. ರಾಜಧಾನಿ ಬೆಂಗಳೂರಿನಲ್ಲಿ ಆಗಸ್ಟ್ʼವರೆಗಿನ ಅವಧಿಯಲ್ಲಿ 13,831 ಜನರು ನಾಯಿ ದಾಳಿಗೆ ಗುರಿಯಾಗಿದ್ದಾರೆ.
ಇವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಅಂಕಿ ಅಂಶಗಳು. ನಾಯಿ ದಾಳಿಗೆ ಬೆದರಿ ಓಡಲು ಯತ್ನಿಸಿ, ಕೈ ಕಾಲು ಮೂಳೆ ಮುರಿದುಕೊಂಡವರು, ರಸ್ತೆಯಲ್ಲಿ ನಾಯಿ ಅಡ್ಡ ಬಂತೆಂದು ದಿಢೀರ್ ಬ್ರೇಕ್ ಹಾಕಿ ನೇರವಾಗಿ ಮಸಣಕ್ಕೆ ಸೇರಿದವರ ಸಂಖ್ಯೆ ಇದರಲ್ಲಿ ಇಲ್ಲ.
ಈ ಅಂಕಿ ಅಂಶಗಳನ್ನು ನೋಡಿ ಗಾಬರಿಯಾದ ಸುಪ್ರೀಂಕೋರ್ಟ್ ಕಳೆದ ಆಗಷ್ಟ್‌ನಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿ ಹಲವು ನಿರ್ದೇಶನಗಳನ್ನು ನೀಡುತ್ತಲೇ ಬಂದಿದೆ. ಆಗಸ್ಟ್ 11ರಂದು, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು, “ನಾಯಿ ಕಡಿತ ಪ್ರಕರಣಗಳು ಕಠಿಣ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ರಾಷ್ಟ್ರ ರಾಜಧಾನಿ ಪ್ರದೇಶದ ಎಲ್ಲ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವು ಮಾಡಬೇಕು. ಈ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಾಣಿದಯಾ ಹೋರಾಟಗಾರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳ ಬೇಕು.
ಶ್ವಾನ ಆಶ್ರಯ ಕೇಂದ್ರಗಳನ್ನು ರಚಿಸಿ ಬೀದಿ ನಾಯಿಗಳಿಗೆ ಆಸರೆ ಕಲ್ಪಿಸಬೇಕು. ಸೆರೆ ಹಿಡಿಯಲಾದ ಬೀದಿ ನಾಯಿಗಳ ದೈನಂದಿನ ದಾಖಲೆಗಳನ್ನು ನಿರ್ವಹಿಸಬೇಕು. ಒಂದೇ ಒಂದು ಬೀದಿ ನಾಯಿ ಯನ್ನೂ ಬಿಡಬಾರದು, ನಾಯಿ ಕಡಿತ ಪ್ರಕರಣಗಳನ್ನು ವರದಿ ಮಾಡಲು ವಾರದೊಳಗೆ ಸಹಾಯ ವಾಣಿಗೆ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿತ್ತು.
ಈ ತೀರ್ಪು ಹೊರಬೀಳುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಯಿತು. ಪ್ರಾಣಿ ದಯಾ ಸಂಘಟನೆಗಳು ಪ್ರತಿಭಟನೆಗಿಳಿದರೆ ಬಾಲಿವುಡ್ ಸೇರಿದಂತೆ ನೂರಾರು ಸೆಲೆಬ್ರೆಟಿಗಳು ನಾಯಿಗಳ ಮೇಲೆ ಸುಪ್ರೀಂ ಕೋರ್ಟ್ ಕರುಣೆ ತೋರಬೇಕೆಂದು ಆಗ್ರಹಿಸಿದರು. ಈ ಒತ್ತಡಕ್ಕೆ ಮಣಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಎರಡೇ ದಿನಗಳಲ್ಲಿ ಈ ಆದೇಶವನ್ನು ಹಿಂಪಡೆದು ಹೊಸ ನಿರ್ದೇಶನ ನೀಡಿತು.
ಆಗಸ್ಟ್ 14 ರಂದು, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ವಿಶೇಷ ಪೀಠವು ರೇಬೀಸ್ ಸೋಂಕಿಗೆ ಒಳಗಾದ ಅಥವಾ ಆಕ್ರಮಣಕಾರಿ ನಡವಳಿಕೆಯನ್ನು ಹೊಂದಿರುವ ನಾಯಿಗಳನ್ನು ಹೊರತುಪಡಿಸಿ, ದೆಹಲಿ ಯಲ್ಲಿ ಹಿಡಿದಿರುವ ನಾಯಿಗಳಿಗೆ ರೇಬಿಸ್ ತಡೆ ಮತ್ತು ಸಂತಾನ ನಿಯಂತ್ರಣ ಚಿಕಿತ್ಸೆ ನೀಡಿ ಎಲ್ಲಿ ಹಿಡಿಯಲಾಗಿದೆಯೋ ಅಲ್ಲಿಯೇ ಬಿಡುಗಡೆ ಮಾಡಲು ಆದೇಶ ನೀಡಿದೆ.
ಇದರೊಂದಿಗೆ ದಿಲ್ಲಿಗೆ ಸೀಮಿತವಾಗಿದ್ದ ಈ ಪ್ರಕರಣವನ್ನು ಇಡೀ ದೇಶಕ್ಕೆ ವಿಸ್ತರಿಸಿದ ನ್ಯಾಯಪೀಠ, ನಾನಾ ರಾಜ್ಯಗಳಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ಮುಖ್ಯ ಕಾರ‍್ಯದರ್ಶಿಗಳಿಗೆ ಸೂಚನೆ ನೀಡಿದೆ. ಇಲ್ಲಿಂದ ಬೀದಿ ನಾಯಿಗಳು ಎಲ್ಲ ರಾಜ್ಯಗಳ ತಲೆನೋವಿಗೆ ಕಾರಣವಾಗಿವೆ.
ಅದರಲ್ಲೂ ದೆಹಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಬೀದಿ ನಾಯಿಗಳ ನಿರ್ವಹಣೆ ವಿಷಯ ವೇ ಸ್ಥಳೀಯಾಡಳಿತಗಳಿಗೆ ಸವಾಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಸುಪ್ರೀಂಕೋರ್ಟ್ ಈ ಪ್ರಕರಣದ ಬಗ್ಗೆ ಸತತ ವಿಚಾರಣೆ ನಡೆಸುತ್ತಲೇ ಬಂದಿದೆ. ಕರ್ನಾಟಕ ಸೇರಿದಂತೆ ಬೀದಿನಾಯಿ ಗಳ ಬಗ್ಗೆ ಸರಿಯಾದ ವಿವರಣೆ ನೀಡದ ರಾಜ್ಯಗಳ ಕಿವಿ ಹಿಂಡಿದೆ.
ಆಯಾ ರಾಜ್ಯಗಳ ಮುಖ್ಯ ಕಾರ‍್ಯದರ್ಶಿಗಳ ಖುದ್ದು ಹಾಜರಾತಿಗೆ ಆದೇಶ ನೀಡಿದೆ. ಜತೆಗೆ ಕಳೆದ ತಿಂಗಳು (ನವೆಂಬರ್) ಸುಪ್ರೀಂಕೋರ್ಟ್ ಒಂದಷ್ಟು ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಇದರ ಪ್ರಕಾರ ಶಾಲೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮುಂತಾದ ಸಾರ್ವಜನಿಕ ಸಂಸ್ಥೆಗಳ ಆವರಣಗಳಲ್ಲಿ ಇನ್ನು ಬೀದಿ ನಾಯಿಗಳು ಕಾಣಿಸಿಕೊಳ್ಳುವಂತಿಲ್ಲ. ಇವುಗಳನ್ನು ಸಂತಾನ ನಿಯಂತ್ರಣ ಮತ್ತು ಲಸಿಕೆ ಹಾಕಿದ ನಂತರ ನಿರ್ದಿಷ್ಟ ಆಶ್ರಯತಾಣಗಳಿಗೆ ಸ್ಥಳಾಂತರಿಸ ಬೇಕು.
ಈ ಸಂಸ್ಥೆಗಳ ಆವರಣಗಳಿಂದ ಸೆರೆ ಹಿಡಿದ ನಾಯಿಗಳನ್ನು ಸಂತಾನ ನಿಯಂತ್ರಣದ ನಂತರ ಮತ್ತೆ ಅದೇ ಆವರಣಕ್ಕೆ ಮರಳಿ ಬಿಡುಗಡೆ ಮಾಡುವಂತಿಲ್ಲ. ಶಾಲಾ, ಕಾಲೇಜುಗಳಲ್ಲಿ ಬೀದಿ ನಾಯಿ ಪ್ರವೇಶಿಸದಂತೆ ಆವರಣ ಗೋಡೆ ನಿರ್ಮಿಸಬೇಕು. ಕೋರ್ಟ್ ಆದೇಶ ಪಾಲನೆಗೆ ಪ್ರತಿ ಸಂಸ್ಥೆಯು ನೋಡಲ್ ಅಧಿಕಾರಿಯನ್ನು ನೇಮಿಸಬೇಕು.
ಪ್ರಾಣಿಗಳ ಜನನ ನಿಯಂತ್ರಣ ಮತ್ತು ರೇಬೀಸ್ ತಡೆ ಲಸಿಕೆ ಕಾರ್ಯಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಜಂಟಿಯಾಗಿ ನಡೆಸಬೇಕು. ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಸ್ಥಳೀಯ ಸಂಸ್ಥೆಗಳು (ಮುನ್ಸಿಪಲ್ ಅಽಕಾರಿಗಳು) ಪ್ರತಿ ವಾರ್ಡ್‌ನಲ್ಲಿ ಗೊತ್ತು ಪಡಿಸಬೇಕು. ಇಲ್ಲಿ ಬಿಟ್ಟು ಬೇರೆಲ್ಲಿಯೂ ಆಹಾರ ನೀಡುವಂತಿಲ್ಲ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ವರಿಷ್ಠ ನ್ಯಾಯಾಲಯದ ಆದೇಶಗಳ ಪಾಲನೆ ಜಿಬಿಎ ಸೇರಿದಂತೆ ಸ್ಥಳಿಯಾಡಳಿತ ಸಂಸ್ಥೆಗಳಿಗೆ ಸವಾಲಾಗಿದೆ. ಬೀದಿ ನಾಯಿಗಳು ಪ್ರವೇಶಿಸದಂತೆ ಆವರಣ ಗೋಡೆ ನಿರ್ಮಿಸುವುದೆಂದರೆ ಅಭೇದ್ಯ ಕೋಟೆಯನ್ನೇ ನಿರ್ಮಿಸಬೇಕು. ನಮ್ಮ ಬಹುತೇಕ ಸರಕಾರಿ ಶಿಕ್ಷಣ ಸಂಸ್ಥೆಗಳು ಆವರಣ ಗೋಡೆ ಹೊಂದಿಲ್ಲ.
ಈಗ ನಾಯಿಗಳಿಂದ ರಕ್ಷಣೆ ಪಡೆಯುವ ಕಾರಣಕ್ಕೆ ಆವರಣ ಗೋಡೆ ನಿರ್ಮಿಸಬೇಕಾಗಿದೆ. ನಗರ ಪ್ರದೇಶಗಳಲ್ಲಿ ಶ್ವಾನ ಪುನರ್ವಸತಿ ಕೇಂದ್ರಗಳನ್ನು ತೆರೆಯಲು ಸ್ಥಳಾವಕಾಶ ಸಿಗುವುದು ಬಹಳ ಕಷ್ಟ. ಸಿಕ್ಕಿದರೂ ಸ್ಥಳೀಯ ಜನರ ವಿರೋಧ ಎದುರಾಗುವುದು ಖಚಿತ.
ಇನ್ನು ಬೀದಿ ನಾಯಿಗಳಿಗೆ ಒಂದೇ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಆಹಾರ ನೀಡಬೇಕೆಂಬ ನಿಯಮವೇ ಅತಾರ್ಕಿಕವಾದದ್ದು. ಪ್ರತಿಯೊಂದು ಬೀದಿ ನಾಯಿ ಕೂಡ ತನಗೆ ಆಹಾರ ಸಿಗುವ ಸ್ಥಳವನ್ನು ತಾನೇ ಹುಡುಕಿಕೊಂಡಿರುತ್ತದೆ. ತಮ್ಮ ವ್ಯಾಪ್ತಿ ಬಿಟ್ಟು ಬೀದಿನಾಯಿಗಳು ತೀರ ದೂರಕ್ಕೆ ಸಂಚರಿಸುವುದಿಲ್ಲ.
ನಿರ್ದಿಷ್ಟ ಪ್ರದೇಶ ಎಂದರೆ ಎಷ್ಟು ದೂರಕ್ಕೊಂದು ಆಹಾರ ವಿತರಣೆ ಕೇಂದ್ರ ತೆರೆಯಬೇಕೆಂಬ ಪ್ರಶ್ನೆ ಎದುರಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನೂರಾರು ನಾಯಿಗಳಿಗೆ ಒಂದೇ ಕಡೆ ಆಹಾರ ನೀಡುವ ಮತ್ತು ಅವು ಆಹಾರ ಸ್ವೀಕರಿಸುವ ದೃಶ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ.
ಇದೀಗ ಈ ಆದೇಶವನ್ನೂ ಬದಲಿಸಬೇಕೆಂಬ ಕೂಗೆದ್ದಿದೆ. ಸ್ಥಳಾಂತರ ಕುರಿತ ತೀರ್ಪಿನ ಮರು ಪರಿಶೀಲನೆಗೆ ಒತ್ತಾಯಿಸಿ ಬೆಂಗಳೂರಿನ 1.75 ಲಕ್ಷ ನಾಗರಿಕರು ಸಲ್ಲಿಸಿದ ಪತ್ರಗಳನ್ನು ಸುಪ್ರೀಂ ಕೋರ್ಟ್‌ಗೆ ರವಾನಿಸಲಾಗಿದೆ. ಈ ತೀರ್ಪಿನ ಮುಂದುವರಿದ ಭಾಗವಾಗಿ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂದು ಪೌರಾಡಳಿತ ಸಂಸ್ಥೆಗಳು ಸುಪ್ರೀಂಕೋರ್ಟಿಗೆ ಲೆಕ್ಕ ಕೊಡಬೇಕಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ನಾಯಿಗಣತಿ ಕಾರ‍್ಯವನ್ನೂ ಶಿಕ್ಷಕರ ಹೆಗಲಿಗೇರಿಸಿದೆ. ಈಗಾ ಗಲೇ ಜನಗಣತಿ ನಡೆಸಿ ಸುಸ್ತಾಗಿರುವ ಶಿಕ್ಷಕರು, ನಾಯಿಗಣತಿಗೆ ನಾವು ಒಲ್ಲೆ ಎನ್ನುತ್ತಿದ್ದಾರೆ. ಇದರ ನಡುವೆಯೇ ಪ್ರಾಧಿಕಾರ ಬೀದಿ ನಾಯಿಗಳ ಬಗ್ಗೆ ‘ಬೀರಬಲ್ಲ’ನ ಅಂಕಿಅಂಶಗಳನ್ನು ಸಿದ್ಧಪಡಿಸಿದೆ. ಇದುವರೆಗೆ ಬೆಂಗಳೂರು ನಗರಪಾಲಿಕೆ ಬೀದಿನಾಯಿಗಳ ನಿಯಂತ್ರಣ ಮತ್ತು ರೇಬಿಸ್ ಲಸಿಕೆ ನೆಪದಲ್ಲಿ ವರ್ಷಕ್ಕೆ ಒಂದಷ್ಟು ಕೋಟಿ ಹಣ ಖರ್ಚು ಮಾಡುತ್ತಿತ್ತು.
ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ನೆಪದಲ್ಲಿ ವಾರ್ಷಿಕ ನೂರು ಕೋಟಿ ಮೀರುವ ‘ಬೃಹತ್’ ಯೋಜನೆ ಸಿದ್ಧಪಡಿಸಿದೆ. ಬೆಂಗಳೂರಿನ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಬಾರಿ ಚಿಕನ್ ಬಿರಿಯಾನಿ ಬಡಿಸಲು ಪ್ರಾಧಿಕಾರ ಮುಂದಾಗಿದೆ.
ಇದಕ್ಕಾಗಿ ಎರಡು ಹೊತ್ತಿನ ಊಟಕ್ಕೆ 50ರೂ ನಿಗದಿ ಪಡಿಸಲಾಗಿದೆ. ಇದರ ಪ್ರಕಾರ ಮಾಸಿಕ ಪ್ರತಿ ನಾಯಿಗೆ 3035 ರೂ ವೆಚ್ಚವಾಗಲಿದೆ. ಕಡತದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿಸಿ ಈ ಮೊತ್ತ ವನ್ನು ಎಷ್ಟು ಬೇಕಾದರೂ ಹಿಗ್ಗಿಸಬಹುದು.
ಇಲ್ಲಿ ನಮ್ಮ ಸಾಮಾನ್ಯ ಜ್ಞಾನಕ್ಕೆ ಹೊಳೆಯುವ ಒಂದಷ್ಟು ವಿಷಯಗಳಿವೆ. ಇದುವರೆಗೂ ಬೀದಿ ನಾಯಿಗಳಿಗೆ ಎಲ್ಲಿಂದ ಆಹಾರ ಸಿಗುತ್ತಿತ್ತು. ಸೂಕ್ತ ಆಹಾರ ಸಿಗದೇ ಹೋಗಿದ್ದರೆ ಅವುಗಳ ಸಂಖ್ಯೆ ಇಷ್ಟೊಂದು ವೃದ್ಧಿಯಾಗುವ ಸಾಧ್ಯತೆ ಇರಲಿಲ್ಲ.
ಬೀದಿ ನಾಯಿಗಳು ಹಸಿವಿನ ಕಾರಣಕ್ಕೆ ಮನುಷ್ಯರ ಮೇಲೆ ದಾಳಿ ನಡೆಸುತ್ತವೆ ಎನ್ನಲು ಆಧಾರಗಳೇ ನಿವೆ ? ಮನುಷ್ಯರ ಒಡನಾಟವಿರುವ ನಾಯಿಗಳು ಮಾಂಸಾಹಾರವನ್ನಷ್ಟೇ ಸೇವಿಸುವ ಪ್ರಾಣಿಗಳೇ ? ನಮ್ಮ ನಗರಗಳಲ್ಲಿರುವ ನೂರಾರು ವೆಜ್ ಮತ್ತು ನಾನ್ ವೆಜ್ ಹೋಟೆಲ್‌ಗಳಲ್ಲಿ ದಿನ ನಿತ್ಯ ಉಳಿಯುವ ಆಹಾರವನ್ನು ಕೆಡುವ ಮುನ್ನವೇ ನಾಯಿ ಗಳಿಗೆ ಬಡಿಸಲು ಸಾಧ್ಯವಿಲ್ಲವೇ ? ಈ ಸಮನ್ವಯ ಕಾರ‍್ಯವನ್ನು ಮಾಡಲು ಜಿಬಿಎ ನಾಗರಿಕರು ಮತ್ತು ಪ್ರಾಣಿದಯಾ ಸಂಘಟನೆಗಳ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ಸಾಧ್ಯವಿಲ್ಲವೇ ? ಎಲ್ಲಕ್ಕಿಂತ ಮುಖ್ಯವಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡುವ, ಬೀದಿ ನಾಯಿಗಳ ಬಗ್ಗೆ ಅತೀವ ಕರುಣೆ ತೋರುವ ಬೆಂಗಳೂರಿನ ಮೇಲ್ಮಧ್ಯಮ ಮತ್ತು ಸಿರಿವಂತ ಜನರು ಮನೆ ಗೊಂದರಂತೆ ಬೀದಿನಾಯಿಗಳನ್ನು ಏಕೆ ದತ್ತು ತೆಗೆದುಕೊಳ್ಳಬಾರದು ? ಈ ಪ್ರಶ್ನೆಗಳನ್ನು ಒತ್ತಟ್ಟಿಗಿಟ್ಟು ಕೇಳುವುದಾದರೆ ಜಿಬಿಎ ಉಣಬಡಿಸುವ ಪೌಷ್ಟಿಕ ಬಿರಿಯಾನಿ ತಿಂದ ನಾಯಿಗಳು ದಾರಿಹೋಕರ ಮೇಲೆ ದಾಳಿ ಮಾಡುವುದಿಲ್ಲ, ಕಚ್ಚುವು ದಿಲ್ಲ ಎಂಬ ಗ್ಯಾರಂಟಿ ಇದೆಯೇ?