ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Keshava Prasad B Column: ರುಪಾಯಿ ಮತ್ತಷ್ಟು ಬಿದ್ದರೂ, ಆತಂಕವೇ ಬೇಡ! ಏಕೆ ಗೊತ್ತೇ ?!

ಮೊದಲನೆಯದಾಗಿ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿಯ ಮೌಲ್ಯ ಇಳಿಕೆಯಾಗುವು ದನ್ನು ರುಪಾಯಿ ಕುಸಿತ ಎನ್ನುತ್ತಾರೆ. ಮುಖ್ಯವಾಗಿ ಡಾಲರ್ ಎದುರು ಅದರ ಮೌಲ್ಯ ಇಳಿಕೆ ಯಾಗುವುದನ್ನು ಪರಿಗಣಿಸುತ್ತಾರೆ. ರುಪಾಯಿ ಈಗ 91ಕ್ಕೆ ಕುಸಿದಿದೆ ಎಂದರೆ ಅದರ ಅರ್ಥ ಡಾಲರ್ ಎದುರು ರುಪಾಯಿ ಮೌಲ್ಯ 91ಕ್ಕೆ ಇಳಿದಿದೆ. 1 ಡಾಲರ್ ಪಡೆಯಲು 91 ರುಪಾಯಿ ಕೊಡಬೇಕು ಎಂದರ್ಥ.

ರುಪಾಯಿ ಮತ್ತಷ್ಟು ಬಿದ್ದರೂ, ಆತಂಕವೇ ಬೇಡ! ಏಕೆ ಗೊತ್ತೇ ?!

-

ಮನಿ ಮೈಂಡೆಡ್

ಈಗ ಡಾಲರ್ ಎದುರು ರುಪಾಯಿ ಮೌಲ್ಯ 91ಕ್ಕೆ ಇಳಿದರೂ, ಪ್ರತಿಪಕ್ಷಗಳೂ ಸದ್ದುಗದ್ದಲ ಮಾಡಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯಪ್ರವೇಶಿಸಿಲ್ಲ. ರುಪಾಯಿ ಮಾರು ಕಟ್ಟೆಯ ಶಕ್ತಿಗೆ ಅನುಗುಣವಾಗಿ ಸಹಜವಾಗಿರಲಿ ಎಂದು ದಿಟ್ಟ ನಿಲುವು ತೆಗೆದುಕೊಂಡು ನಿರಾತಂಕವಾಗಿದೆ! ‌

ಭಾರತದ ರುಪಾಯಿ ಕುಸಿತವನ್ನು ಹಿಂದೆಲ್ಲ ಪಕ್ಷ ಭೇದ ಇಲ್ಲದೆ ರಾಜಕಾರಣಿಗಳು ಭಾವನಾ ತ್ಮಕವಾಗಿ ತೆಗೆದುಕೊಂಡು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದರು. ಹಾಗಾದರೆ ಆಗಿ ದ್ದೇನು? ರುಪಾಯಿ ದುರ್ಬಲವಾಗಿದ್ದರೂ, ದೇಶವು ಲೀಲಾಜಾಲವಾಗಿ ನಿಭಾಯಿಸಲು ಕಾರಣವಾಗಿ ರುವ ಬ್ರಹ್ಮಾಸ್ತ್ರ ಯಾವುದು? ಇದು ಅಧ್ಯಯನಯೋಗ್ಯ ಸಂಗತಿ.

ರುಪಾಯಿ ಕುಸಿತ ಎಂದರೇನು? ಅದಕ್ಕೆ ಕಾರಣವೇನು? ಅದರ ಪರಿಣಾಮವೇನು? ಜಗತ್ತಿನ ಇತರ ಕರೆನ್ಸಿಗಳೂ ಏಕೆ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ? ಡಾಲರ್ ಕೂಡ ಕ್ರಮೇಣ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದೇಕೆ? ಭಾರತ ಏಕೆ ನಿಶ್ಚಿಂತೆಯಲ್ಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳೋಣ.

ಮೊದಲನೆಯದಾಗಿ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿಯ ಮೌಲ್ಯ ಇಳಿಕೆ ಯಾಗುವುದನ್ನು ರುಪಾಯಿ ಕುಸಿತ ಎನ್ನುತ್ತಾರೆ. ಮುಖ್ಯವಾಗಿ ಡಾಲರ್ ಎದುರು ಅದರ ಮೌಲ್ಯ ಇಳಿಕೆಯಾಗುವುದನ್ನು ಪರಿಗಣಿಸುತ್ತಾರೆ. ರುಪಾಯಿ ಈಗ 91ಕ್ಕೆ ಕುಸಿದಿದೆ ಎಂದರೆ ಅದರ ಅರ್ಥ ಡಾಲರ್ ಎದುರು ರುಪಾಯಿ ಮೌಲ್ಯ 91ಕ್ಕೆ ಇಳಿದಿದೆ. 1 ಡಾಲರ್ ಪಡೆಯಲು 91 ರುಪಾಯಿ ಕೊಡಬೇಕು ಎಂದರ್ಥ.

ಇದನ್ನೂ ಓದಿ: Keshava Prasad B Column: ನಮ್ಮೂರ ಒಬೆರಾಯ್‌, ಗೋಪಾಡಿ ಶ್ರೀನಿವಾಸ ರಾವ್‌ !

ಅದಕ್ಕೆ ಕಾರಣವೇನು? ಡಾಲರ್‌ಗೆ ಬೇಡಿಕೆ ಹೆಚ್ಚಳವಾದಾಗ ರುಪಾಯಿ ಮೌಲ್ಯ ಕುಸಿಯು ತ್ತದೆ. ಈ ವರ್ಷ ಭಾರತೀಯ ಮಾರುಕಟ್ಟೆಯಿಂದ, ಮುಖ್ಯವಾಗಿ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆ ದಾರರು ವ್ಯಾಪಕವಾಗಿ ಹೂಡಿಕೆಯನ್ನು ಹಿಂತೆಗೆದು ಕೊಂಡಿದ್ದಾರೆ. ಇದರ ಪರಿಣಾಮ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಳವಾಗಿ ಅದರ ಮೌಲ್ಯವೂ ಏರಿಕೆಯಾಗಿದೆ.

ರುಪಾಯಿ ಕುಸಿತಕ್ಕೀಡಾಗಿದೆ. ಹೀಗೆ ಬಂಡವಾಳ ಹೂಡಿಕೆಯ ನಿರ್ಗಮನ, ಆಮದು ವೆಚ್ಚ ಹೆಚ್ಚಳ, ಜಾಗತಿಕ ಆರ್ಥಿಕತೆಯ ಮಂದಗತಿಯಿಂದ ಕರೆನ್ಸಿಯ ಮೌಲ್ಯ ಇಳಿಯುತ್ತದೆ. ಇದರ ಪರಿಣಾಮ ವೇನು? ಡಾಲರ್ ಕೊಟ್ಟು ಮಾಡಿಕೊಳ್ಳುವ ಆಮದು ತುಟ್ಟಿಯಾಗುತ್ತದೆ. ವಿದೇಶ ಪ್ರವಾಸ, ಶಿಕ್ಷಣ ವೆಚ್ಚ ಏರಿಕೆಯಾಗುತ್ತದೆ. ಆದರೆ ರಫ್ತುದಾರರಿಗೆ ಲಾಭದಾಯಕ ವಾಗುತ್ತದೆ. ಐಟಿ ಕಂಪನಿಗಳ ಆದಾಯ ಹೆಚ್ಚುತ್ತದೆ.

ಹಾಗಂತ ರುಪಾಯಿ ಮಾತ್ರ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿಲ್ಲ. ಸ್ವತಃ ಡಾಲರ್ ಕೂಡ ತನ್ನ ಮೌಲ್ಯವನ್ನು ಕ್ರಮೇಣ ನಷ್ಟ ಮಾಡಿಕೊಂಡಿದೆ. ಅದರ ಕಿಮ್ಮತ್ತು ಕೂಡ ಸ್ಥಿರವಾಗಿಲ್ಲ. ಲೆಬನಾನ್, ಇರಾನ್, ವಿಯೆಟ್ನಾಂ, ಲಾವೋಸ್, ಇಂಡೋನೇಷ್ಯಾ, ಉಜ್ಬೆಕಿ ಸ್ತಾನ್ ಮೊದಲಾದ ದೇಶಗಳ ಕರೆನ್ಸಿ ಗಳು ತೀವ್ರ ಕುಸಿತಕ್ಕೀಡಾಗಿವೆ.

ಡಾಲರ್ ಎದುರು ರುಪಾಯಿ 91 ಇಟ್ಟುಕೊಳ್ಳಬೇಕು. ಹಲವು ದೇಶಗಳ ಕರೆನ್ಸಿಗಳಿಗಿಂತ ಭಾರತದ ರುಪಾಯಿಯೇ ಪ್ರಬಲವಾಗಿದೆ. ಉದಾಹರಣೆಗೆ ವಿಯೆಟ್ನಾಂ, ಇಂಡೋ ನೇಷ್ಯಾ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ಜಿಂಬಾಬ್ವೆ, ನೇಪಾಳ, ಶ್ರೀಲಂಕಾ, ಪೆರುಗ್ವೆ, ಹಂಗರಿ ಮುಂತಾದ ದೇಶಗಳ ಕರೆನ್ಸಿಗಿಂತ ನಮ್ಮ ರುಪಾಯಿಯ ಮೌಲ್ಯ ಹೆಚ್ಚು.

ಆದ್ದರಿಂದ ಭಾರತೀಯರು ಈ ದೇಶಗಳಿಗೆ ಪ್ರವಾಸ ಮಾಡಿದಾಗ ಹಣ ಉಳಿತಾಯವಾಗುತ್ತದೆ. ಅಥವಾ ಹೆಚ್ಚು ಖರ್ಚು ಮಾಡಬಹುದು. ಬಜೆಟ್ ಟ್ರಾವೆಲ್‌ಗೆ ಹೆಚ್ಚು ಮೌಲ್ಯ ಸಿಗುತ್ತದೆ. “ರುಪಾಯಿ ಮತ್ತಷ್ಟು ಬೀಳಬಹುದು, ಆದರೆ ಭಯ ಬೇಡ" ಎನ್ನುತ್ತಾರೆ ಎಕ್ಸಿಸ್ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞರಾದ ನೀಲ್‌ಕಾಂತ್ ಮಿಶ್ರಾ. ಡಾಲರ್ ಎದುರು ರುಪಾಯಿ ಮೌಲ್ಯವು 2027ರ ಜೂನ್ ವೇಳೆಗೆ 92-94 ರುಪಾಯಿಗೆ ಇಳಿಯಬಹುದು. ಆದರೆ ಇದು ಆತಂಕಕಾರಿ ವಿಷಯವಲ್ಲ.

ಏಕೆಂದರೆ ಭಾರತದ ವಿದೇಶಿ ವಿನಿಮಯ ಸಂಗ್ರಹ ಸಮೃದ್ಧವಾಗಿದೆ. ವಿದೇಶಿ ಕಂಪನಿಗಳು ಭಾರತ ದಲ್ಲಿ ಹೂಡಿಕೆಗೆ ಬದ್ಧವಾಗಿವೆ. ಕರೆನ್ಸಿಯ ಫಂಡಮೆಂಟಲ್ಸ್ ಉತ್ತಮವಾಗಿವೆ. ಆದ್ದರಿಂದ ರುಪಾಯಿ ಬಗ್ಗೆ ಚಿಂತೆ ಮಾಡಬೇಕಿಲ್ಲ. 685-690 ಶತಕೋಟಿ ಡಾಲರ್ ಮೌಲ್ಯದ ವಿದೇಶಿ ವಿನಿಮಯ ಸಂಗ್ರಹ ಇರುವಾಗ ಚಿಂತೆಗೆ ಕಾರಣವಿಲ್ಲ. ‌

ಇದು ಭಾರತದ 11 ತಿಂಗಳಿನ ಆಮದು ವೆಚ್ಚಕ್ಕೆ ಸಾಕಾಗುತ್ತದೆ. ದೇಶದ ಆರ್ಥಿಕತೆ ಎಷ್ಟು ಸದೃಢ ವಾಗಿದೆ ಎಂಬುದಕ್ಕೆ ಇದು ಉದಾಹರಣೆ. ಮಾತ್ರವಲ್ಲದೆ ಅಮೆಜಾನ್, ಮೈಕ್ರೊಸಾಫ್ಟ್ ಮೊದಲಾದ ದಿಗ್ಗಜ ಕಂಪನಿಗಳು ಭಾರತದಲ್ಲಿ ಭಾರಿ ಹೂಡಿಕೆಯನ್ನು ಘೋಷಿಸಿವೆ. ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ ನಿರ್ವಹಣೆ ಮಾಡಬಲ್ಲ ಮಟ್ಟದಲ್ಲಿದೆ. ಡಾಲರ್ ಪ್ರಾಬಲ್ಯ, ಮಾರುಕಟ್ಟೆಯ ಹೈ ವಾಲ್ಯೂಯೇಶನ್ ಕೂಡ ವಿದೇಶಿ ಹೂಡಿಕೆಯ ಹಿಂತೆಗೆತಕ್ಕೆ ಕಾರಣ‌ ವಾಗಿವೆ. ‌

ಹೀಗಿದ್ದರೂ, ಭಾರತವು ಅಚಲವಾಗಿರಲು ಕಾರಣ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಹಲವು ವರ್ಷಗಳಿಂದ ಜತನವಾಗಿ ಉಳಿಸಿಕೊಂಡು, ಬೆಳೆಸಿರುವ ಸಮೃದ್ಧ ವಿದೇಶಿ ವಿನಿಮಯ ಸಂಗ್ರಹ. ಇದರಿಂದಲೇ ಅಗತ್ಯ ಬಿದ್ದಾಗ ಆರ್‌ಬಿಐ ಫಾರೆಕ್ಸ್ ಮಾರುಕಟ್ಟೆಗೆ ಮಧ್ಯಪ್ರವೇಶಿಸುತ್ತದೆ. ‌

ಡಾಲರ್‌ಗಳನ್ನು ಮಾರಾಟ ಮಾಡುತ್ತದೆ. ಆಗ ರುಪಾಯಿ ಮೌಲ್ಯವನ್ನು ಸ್ಥಿರವಾಗಿಸಲು ಅನುಕೂಲ ವಾಗುತ್ತದೆ. ಆತಂಕ ದೂರವಾಗುತ್ತದೆ. ಅದೇ ರೀತಿ ರುಪಾಯಿ ಬಲ ವರ್ಧಿಸಿಕೊಂಡಾಗ ಡಾಲರ್‌ ಗಳನ್ನು ಖರೀದಿಸಿಟ್ಟುಕೊಳ್ಳುತ್ತದೆ. ಆರ್‌ಬಿಐ ನಿರ್ವಹಿಸುತ್ತಿರುವ ವಿದೇಶಿ ವಿನಿಮಯ ಸಂಗ್ರಹ (ಫಾರೆಕ್ಸ್ ರಿಸರ್ವ್) ಒಂದು ಬ್ರಹ್ಮಾಸ್ತ್ರ ಎಂದರೆ ಅತಿ ಶಯೋಕ್ತಿಯಲ್ಲ.

ಇದರಿಂದ ಹಲವು ಪ್ರಯೋಜನಗಳು ಇವೆ. ಡಾಲರ್ ಎದುರು ರುಪಾಯಿ ಮೌಲ್ಯ ಸವಕಳಿ ಯಾದಾಗ ಆರ್‌ಬಿಐ ಮಧ್ಯಪ್ರವೇಶಕ್ಕೆ ಸಮೃದ್ಧ ಫಾರೆಕ್ಸ್ ಬಲ ತುಂಬುತ್ತದೆ. ಎರಡನೆಯದಾಗಿ ಭಾರತವು ಕಚ್ಚಾ ತೈಲ, ಔಷಧ, ರಸಗೊಬ್ಬರ ಮೊದಲಾದ ಕ್ರಿಟಿಕಲ್ ವಸ್ತುಗಳನ್ನು ಆಮದು ಮಾಡುತ್ತದೆ. ವಿದೇಶಿ ವಿನಿಮಯ ಸಂಗ್ರಹ ಚೆನ್ನಾಗಿದ್ದಾಗ ಇವುಗಳ ಖರೀದಿಗೆ ಹಣಕಾಸು ಒದಗಿಸು ವುದು ಸಮಸ್ಯೆ ಯಾಗುವುದಿಲ್ಲ.

ಭಾರತವು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಸಾಲ ಪಡೆಯುತ್ತದೆ. ನಾವು ಸಕಾಲ ದಲ್ಲಿ ಸಾಲ ಮರು ಪಾವತಿಸಬಲ್ಲೆವು ಎಂಬುದಕ್ಕೆ ಸಮೃದ್ಧ ಫಾರೆಕ್ಸ್ ರಿಸರ್ವ್ ಖಾತರಿ ಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ನಮ್ಮ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಸಾಂಕ್ರಾಮಿಕ ರೋಗಗಳು, ಯುದ್ಧಗಳು, ಆರ್ಥಿಕ ಹಿಂಜರಿತಗಳು ಸಂಭವಿಸುತ್ತವೆ. ಆದರೆ ಫಾರೆಕ್ಸ್ ರಿಸರ್ವ್ ಚೆನ್ನಾಗಿದ್ದಾಗ ಇಂಥ ಆಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ.

1990ರಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ 2 ತಿಂಗಳಿನ ಆಮದು ಖರ್ಚಿಗಾಗುವಷ್ಟು ಮಾತ್ರ ಉಳಿದಿತ್ತು. ಆಗ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ ಬಂಗಾರವನ್ನು ಅಡಮಾನ ಇಟ್ಟು ಸಾಲ ಪಡೆಯಲಾಗಿತ್ತು. ಆದರೆ ಇವತ್ತು 685 ಶತಕೋಟಿ ಡಾಲರ್ ವಿದೇಶಿ ವಿನಿಮಯ ಸಂಗ್ರಹ ಇದೆ. ‌ಆರ್ಥಿಕತೆಯಲ್ಲಿ ಅಥವಾ ಜಿಡಿಪಿ ಗಾತ್ರದಲ್ಲಿ ಬ್ರಿಟನ್ ಮತ್ತು ಜಪಾನನ್ನು ಭಾರತವು ಹಿಂದಿಕ್ಕಿದೆ! ವಿಶ್ವದ 4ನೇ ಅತಿದೊಡ್ಡ ಇಕಾನಮಿ ಯಾಗಿ ಹೊರಹೊಮ್ಮಿದೆ. ಜರ್ಮನಿ ಯನ್ನೂ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರುವ ದಿನಗಳು ದೂರವಿಲ್ಲ!

ಆದ್ದರಿಂದ ಇವತ್ತು ಭಾರತದ ರುಪಾಯಿಯು ಡಾಲರ್ ಎದುರು 91ಕ್ಕೆ ಇಳಿದಿರುವುದರ ಬಗ್ಗೆ ಆತಂಕಪಡುವ ಅವಶ್ಯಕತೆಯೇ ಇಲ್ಲ. ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆ ಗಳಲ್ಲಿ ಪ್ರಮಖ ವಾಗಿರುವ ಡಾಲರ್ ಅನ್ನು ಜಾಗತಿಕ ಕರೆನ್ಸಿ ಎಂದು ಕರೆಯುತ್ತಾರೆ. ಇದು ಅಮೆರಿಕಕ್ಕೆ ವರದಾನ ವೂ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಡಾಲರ್ ಪ್ರಾಬಲ್ಯಕ್ಕೂ ಸವಾಲು ಎದುರಾಗಿದೆ.

ಜೆಪಿ ಮೋರ್ಗಾನ್ ವರದಿಯ ಪ್ರಕಾರ ಡಾಲರ್ ತನ್ನ ಮೌಲ್ಯವನ್ನು ಕಳೆದುಕೊಳ್ಳಲು ಕಾರಣವಿದೆ. ಅಮೆರಿಕದಲ್ಲೂ ಹಣದುಬ್ಬರ ಹೆಚ್ಚುತ್ತಿರುವುದರಿಂದ ವಿದೇಶಿ ಹೂಡಿಕೆ ದಾರರು ಡಾಲರ್ ಕೂಡ ಭವಿಷ್ಯದಲ್ಲಿ ಕಿಮ್ಮತ್ತು ಕಳೆದುಕೊಳ್ಳಬಹುದು ಎಂಬ ನಿರೀಕ್ಷೆ ಯಲ್ಲಿದ್ದಾರೆ. ಅಮೆರಿಕದ ಆರ್ಥಿಕತೆ ಯ ಅಂಕಿ-ಅಂಶಗಳು ನಿರಾಸೆ ಮೂಡಿಸಿರುವುದು, ಫೆಡರಲ್ ರಿಸರ್ವ್ ಬಡ್ಡಿದರ ಕಡಿಮೆ ಮಾಡುವ ಸಾಧ್ಯತೆ ಇರುವುದರಿಂದ ಡಾಲರ್ ಅಸೆಟ್ ಕ್ರಮೇಣ ಆಕರ್ಷಣೆ ಕಳೆದುಕೊಳ್ಳುತ್ತಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆಯನ್ನು ‘ಡೆಡ್ ಇಕಾನಮಿ’ ಎಂದು ಟೀಕಿಸಿದ್ದರು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರತಿಪಕ್ಷ ಸಂಸದರ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಡಕ್ ಉತ್ತರ ಕೊಟ್ಟಿದ್ದರು.

“ಟ್ರಂಪ್ ಅವರು ದೇಶದ ಇಕಾನಮಿ ಡೆಡ್ ಆಗಿದೆ ಎನ್ನುತ್ತಾರೆ ಅಲ್ಲವೇ? ಹಾಗಾದರೆ ಕಳೆದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಾಗತಿಕ ಜಿಡಿಪಿಯ ಸರಾಸರಿ ಬೆಳವಣಿಗೆ ಶೇ.3.2 ರಷ್ಟು ಇರುವಾಗ ಭಾರತದ ಜಿಡಿಪಿ ಶೇ.8.2ರ ಮಟ್ಟದಲ್ಲಿ ಬೆಳೆದಿರುವುದು ಹೇಗೆ? ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಆಮೂಲಾಗ್ರವಾಗಿ ಸುಧಾರಿಸಿದೆ.

ಯಾವುದೇ ಬಾಹ್ಯ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳಾದ ಡಿಬಿಆರ್‌ಎಸ್, ಎಸ್ ಆಂಡ್ ಪಿ, ಆರ್ ಆಂಡ್ ಐ ದೇಶದ ಸಾವರಿನ್ ರೇಟಿಂಗ್ ಅನ್ನು ಅಪ್‌ಗ್ರೇಡ್ ಮಾಡಿವೆ" ಎಂದು ನಿರ್ಮಲಾ ಸೀತಾರಾಮನ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಹೀಗಾಗಿ ರುಪಾಯಿ ಕುಸಿತವನ್ನು ಭಾವನಾತ್ಮಕವಾಗಿ ಚರ್ಚಿಸುವು ದಕ್ಕಿಂತಲೂ, ವಸ್ತುನಿಷ್ಠವಾಗಿ ಸಾಧಕ-ಬಾಧಕಗಳನ್ನು ನೋಡಬೇಕಾಗಿದೆ.

ಭಾರತ-ಅಮೆರಿಕ ಟ್ರೇಡ್ ಡೀಲ್ ವಿಳಂಬವಾಗಿರುವುದು ಮತ್ತು ಈಕ್ವಿಟಿ ಮಾರುಕಟ್ಟೆ ಯಿಂದ ವಿದೇಶಿ ಹೂಡಿಕೆಯ ನಿರ್ಗಮನವೇ ಬಂಡವಾಳ ಹೊರಹರಿವಿಗೆ ಕಾರಣ ಎನ್ನುತ್ತಾರೆ ತಜ್ಞರು. ರುಪಾಯಿ ದುರ್ಬಲವಾಗಿದ್ದಾಗ ಹಣದುಬ್ಬರ ಏರಿಕೆಯಾಗಬಹುದು. ಆದರೆ ಸದ್ಯಕ್ಕೆ ಹಣದುಬ್ಬರ ಶೇ.0.7ರಲ್ಲಿ ಇರುವುದರಿಂದ ನಿಶ್ಚಿಂತೆಯಿಂದ ಇರಬಹುದು.

ಇದೇ ಸಂದರ್ಭ ರುಪಾಯಿ ಮೌಲ್ಯ ಇಳಿಕೆಯು ರಫ್ತುದಾರರಿಗೆ ಲಾಭದಾಯಕವಾಗಿರುತ್ತದೆ. ಅಮೆರಿಕದ ಜತೆಗಿನ ಟಾರಿಫ್ ಸಂಘರ್ಷ, ಪರ್ಯಾಯ ಮಾರುಕಟ್ಟೆಯ ಶೋಧ, ರಫ್ತು ಹೆಚ್ಚಳದ ಅನಿವಾರ್ಯತೆಯ ಸಂದರ್ಭದಲ್ಲಿ ರುಪಾಯಿ ಮೌಲ್ಯ ಇಳಿಕೆಯು ಸಹಕಾರಿ.

ರಫ್ತು ಹೆಚ್ಚಿಸಲು ಇದೇ ಸಂದರ್ಭವನ್ನು ಬಳಸಬಹುದು. ಇಲೆಕ್ಟ್ರಾನಿಕ್ಸ್, ರಾಸಾಯನಿಕ, ಯಂತ್ರೋ ಪಕರಣ, ಪೆಟ್ರೋಲಿಯಂ, ಕೃಷಿ-ಆಹಾರ ಉತ್ಪನ್ನಗಳ ರಫ್ತಿಗೆ ಅನುಕೂಲವಾಗುತ್ತದೆ. ನವೆಂಬರ್‌ ನಲ್ಲಿ ರಫ್ತು ಕೂಡ ಶೇ.19ರಷ್ಟು ಹೆಚ್ಚಳವಾಗಿತ್ತು. ಹೀಗಿದ್ದರೂ, ಆಮದು ವೆಚ್ಚವನ್ನು ಇದು ಹೆಚ್ಚಿಸುತ್ತದೆ. ಆಗ ವ್ಯಾಪಾರ ಕೊರತೆಯೂ ಹೆಚ್ಚುತ್ತದೆ.

ಉದ್ದಿಮೆಗಳಿಗೆ ಕಚ್ಚಾ ಸಾಮಗ್ರಿಗಳ ಆಮದು ವೆಚ್ಚ ಕೂಡ ಏರಿಕೆಯಾಗುತ್ತದೆ. ಹಾಗಂತ ತೀರಾ ಆತಂಕಪಡಬೇಕಿಲ್ಲ. ಪ್ರಧಾನಿಯವರ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸಂನ್ಯಾಲ್ ಪ್ರಕಾರ, ಯಾವುದೇ ದೇಶ ವೇಗವಾಗಿ ಬೆಳೆಯುವ ಹಂತದಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಕರೆನ್ಸಿಯ ದರ ದುರ್ಬಲವಾಗುವುದು ಸಾಮಾನ್ಯ. ಅದನ್ನು ಆರ್ಥಿಕತೆಯ ಬಿಕ್ಕಟ್ಟು ಎಂದು ಗ್ರಹಿಸು ವುದು ತಪ್ಪಾಗುತ್ತದೆ.

ಉದಾಹರಣೆಗೆ ಜಪಾನ್ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದಾಗ ಆ ದೇಶದ ಕರೆನ್ಸಿ ವಿನಿಮಯ ದರ ದುರ್ಬಲವಾಗಿತ್ತು. ಚೀನಾದ ಕರೆನ್ಸಿ ಕೂಡ 90ರ ದಶಕದಲ್ಲಿ ಮತ್ತು 2000ರ ತನಕ ದುರ್ಬಲ ವಾಗಿತ್ತು. ಇದರ ಪರಿಣಾಮ ಅವುಗಳ ರಫ್ತು ಸ್ಪರ್ಧಾತ್ಮಕವಾಗಿತ್ತು. ಹಣದುಬ್ಬರ ಅಥವಾ ಬೆಲೆ ಏರಿಕೆ ನಿಯಂತ್ರಣದಲ್ಲಿ ಇರುವ ತನಕ ಕರೆನ್ಸಿ ದುರ್ಬಲವಾಗಿರುವುದು ಅನುಕೂಲಕರವೇ ಹೊರತು ಸಮಸ್ಯೆಯಾಗುವುದಿಲ್ಲ.