ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಸಮಸ್ಯೆ ಇದೆ ಎಂದರೂ ಪರಿಹಾರ ಬೇಕಿಲ್ಲ !

ಭಾರತದಲ್ಲಿ ವಾಯುಮಾಲಿನ್ಯವನ್ನು ಒಂದು ಸಹಜ ಸಂಗತಿ ಎಂಬಂತೆ ಎಲ್ಲರೂ ಸ್ವೀಕರಿಸಿದ್ದಾರೆ. ಯಾರೂ ಅದರ ಬಗ್ಗೆ ಮಾತಾಡ್ತಾನೇ ಇಲ್ಲ. ಇದು ನ್ಯಾಷನಲ್ ಎಮರ್ಜೆನ್ಸಿ ಆಗಬೇಕಾದ ವಿಷಯ ಎಂದು ರೇಗಿದ. ದಿಲ್ಲಿಯ ಭೀಕರ ವಾತಾವರಣದಲ್ಲಿ ಎಲ್ಲರೂ ಮಾಸ್ಕ್ ಇಲ್ಲದೆ ನಿರಾಳವಾಗಿ ಓಡಾಡು ತ್ತಿರುವುದನ್ನು ಕಂಡು ಬೆಚ್ಚಿಬಿದ್ದ.

Harish Kera Column: ಸಮಸ್ಯೆ ಇದೆ ಎಂದರೂ ಪರಿಹಾರ ಬೇಕಿಲ್ಲ !

-

ಹರೀಶ್‌ ಕೇರ
ಹರೀಶ್‌ ಕೇರ Dec 11, 2025 7:47 AM

ಕಾಡುದಾರಿ

ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರಿನ ವಾಯು ಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ಕುರಿತು ಶಾಸಕ ದಿನೇಶ್ ಗೂಳಿಗೌಡರು ಸರಕಾರದ ಗಮನಕ್ಕೆ ತಂದಿದ್ದರು. ಪರಿಸ್ಥಿತಿ ಗಂಭೀರ ಎಂದು ಎಲ್ಲರಿಗೂ ಗೊತ್ತು. ಈಗ ಬೇಕಿರುವುದು ಸ್ವಚ್ಛ ವಾಯುಕ್ರಿಯಾ ಯೋಜನೆ.

ಕಳೆದ ವರ್ಷ ಇದೇ ಸಮಯದಲ್ಲಿ ಅಮೆರಿಕದ ಬಿಲಿಯನೇರ್ ಉದ್ಯಮಿ ಬ್ರ್ಯಾನ್ ಜಾನ್ಸನ್ ಬೆಂಗಳೂರಿಗೆ ಬಂದಿದ್ದ. ಇವನು ಚಿರಂಜೀವಿಯಾಗ ಬಯಸಿರುವ ಕುಬೇರ. ತನ್ನ ಮಗನ ಪ್ಲಾಸ್ಮಾ ವನ್ನೇ ತೆಗೆದು ತನ್ನ ದೇಹಕ್ಕೆ ತುಂಬಿಸಿಕೊಳ್ಳುವ ಇವನು ನೂರಾರು ವರ್ಷ ಬದುಕಬಯಸಿರುವ ಆಧುನಿಕ ಯಯಾತಿ. ಶುದ್ಧ ಗಾಳಿ ಉಸಿರಾಡ ಬಯಸುವ ಇವನು ಹೋದಲ್ಲ ಏರ್ ಪ್ಯೂರಿಫೈಯರ್ ಗಳನ್ನು ಕೊಂಡೊಯ್ಯುತ್ತಾನೆ.

ಹಾಗೇ ಬೆಂಗಳೂರಿಗೆ ಬಂದವನು ಇಲ್ಲಿನ ವಾಯು ಗುಣಮಟ್ಟ ಕಂಡು ಕಂಗಾಲಾಗಿದ್ದ. ‘ಇದು ಕ್ಯಾನ್ಸರ್‌ಗಿಂತ ಭೀಕರವಾಗಿದೆ’ ಎನ್ನುತ್ತಾ, ನಿಖಿಲ್ ಕಾಮತ್ ಜೊತೆಗೆ ಶುರು ಹಚ್ಚಿಕೊಂಡಿದ್ದ ಪಾಡ್‌ಕಾಸ್ಟ್ ಅನ್ನು ಅರ್ಧದ ನಿಲ್ಲಿಸಿ ಪರಾರಿಯಾಗಿದ್ದ.

ಭಾರತದಲ್ಲಿ ವಾಯುಮಾಲಿನ್ಯವನ್ನು ಒಂದು ಸಹಜ ಸಂಗತಿ ಎಂಬಂತೆ ಎಲ್ಲರೂ ಸ್ವೀಕರಿಸಿದ್ದಾರೆ. ಯಾರೂ ಅದರ ಬಗ್ಗೆ ಮಾತಾಡ್ತಾನೇ ಇಲ್ಲ. ಇದು ನ್ಯಾಷನಲ್ ಎಮರ್ಜೆನ್ಸಿ ಆಗಬೇಕಾದ ವಿಷಯ ಎಂದು ರೇಗಿದ. ದಿಲ್ಲಿಯ ಭೀಕರ ವಾತಾವರಣದಲ್ಲಿ ಎಲ್ಲರೂ ಮಾಸ್ಕ್ ಇಲ್ಲದೆ ನಿರಾಳವಾಗಿ ಓಡಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದ.

ಇದನ್ನೂ ಓದಿ: Harish Kera Column: ಶ್ರೀರಾಮನ ಕೋವಿದಾರ, ನಮ್ಮೂರ ಮಂದಾರ

ಇದು ಸ್ವಚ್ಛ ಹವೆಯಲ್ಲಿ ಹುಟ್ಟಿ ಬೆಳೆದು ಆರೋಗ್ಯದ ಗೀಳು ಬೆಳೆಸಿಕೊಂಡ ಬಿಲಿಯನೇರ್ ಗಳ ಗೀಳುಗಳು ಎಂದು ಪಕ್ಕಕ್ಕಿಡುವ ಮುನ್ನ ಇನ್ನೂ ಒಂದಷ್ಟು ಸಂಗತಿಗಳ ಕಡೆ ಗಮನ ಹರಿಸೋಣ. ಇದೊಂದು ವೈಯಕ್ತಿಕ ಅನುಭವ. ನನ್ನ ಸಂಬಂಧಿಕರೊಬ್ಬರ ಒಂದು ವರ್ಷದ ಮಗಳಲ್ಲಿ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು.

ಚಳಿಗಾಲದಲ್ಲಿ ಮೈ ನೀಲಿಗಟ್ಟತೊಡಗಿತು. ವೈದ್ಯರ ಬಳಿಗೆ ಹೋದರು. ಇದು ಬೆಂಗಳೂರಿನ ಗಾಳಿ ಯಿಂದ ಉಂಟಾದ ಅಲರ್ಜಿ ಎಂದು ಸ್ಪಷ್ಟವಾಯಿತು. ಔಷಧ ಮಾಡಿದರೆ ಸಮಸ್ಯೆ ಒಂದು ತಿಂಗಳು ಕಡಿಮೆಯಾಗಿ, ಮತ್ತೆ ಉಲ್ಬಣಿಸುತ್ತಿತ್ತು. ಮಗುವಿನ ಒzಟ ನೋಡಲು ಸಾಧ್ಯವಿರಲಿಲ್ಲ. ಮಗುವಿನ ಬದುಕಿನ ದೃಷ್ಟಿಯಿಂದ ದಂಪತಿ ದೊಡ್ಡ ಕಂಪನಿಯ ತಮ್ಮ ಉದ್ಯೋಗ ತೊರೆದು ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ಊರಿಗೆ ಮರಳಿದರು. ಅಲ್ಲಿ ಮಗು ಹಾಯಾಗಿದೆ. ಇದು ಹಲವು ಸಂಸಾರಗಳ ಕತೆ ಇರಬಹುದು.

ಶ್ರೀಮಂತರು ಮನೆಗೆ- ಕಚೇರಿಗೆ ಏಸಿ, ಏರ್ ಪ್ಯೂರಿಫೈಯರ್ ಹಾಕಿಸಿಕೊಳ್ಳುತ್ತಾರೆ. ಸದಾ ಹೊರಗೇ ಇರಬೇಕಾದ, ಕೆಲಸ ಮಾಡಬೇಕಾದ ಬಡವರು- ಮಧ್ಯಮ ವರ್ಗದವರು ವಾಯುಮಾಲಿನ್ಯದ ಮೊದಲ ಬಲಿ. ಇನ್ನೊಂದು ಇತ್ತೀಚಿನ ಬೆಳವಣಿಗೆ. ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನ ವಾಯು ಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ಕುರಿತು ವಿಧಾನ ಪರಿಷತ್ ಶಾಸಕ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡರು ಮೊನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಒಂದು ಮನವಿ ಮಾಡಿದ್ದರು.

H Kera

ದೆಹಲಿಯಂತೆಯೇ ಬೆಂಗಳೂರು ಸಹ ಭವಿಷ್ಯದಲ್ಲಿ ತೀವ್ರ ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ಈ ವಿಷಯದ ಕುರಿತು ತುರ್ತು ಕ್ರಮ ಕೈಗೊಳ್ಳಲು, ಮಾರ್ಗೋಪಾಯಗಳನ್ನು ಕಂಡುಹಿಡಿಯಲು ತಜ್ಞರ ತಂಡ ರಚಿಸಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ದಿನೇಶ್ ಗೂಳಿಗೌಡರು ಡಿಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ ವಿಷಯಗಳನ್ನಷ್ಟೇ ಇಲ್ಲಿ ನೋಡಿ ದರೂ ಸಾಕು- ಬೇರೆ ಅಂಕಿ ಅಂಶಗಳೇನನ್ನೂ ನಾನು ಕೊಡಬೇಕಿಲ್ಲ. ಬೆಂಗಳೂರಿನಲ್ಲಿ ಈಗ 1,23,24,919 ನೋಂದಾಯಿತ ಮೋಟಾರ್ ವಾಹನಗಳಿವೆ. ಜನಸಂಖ್ಯೆ ಸುಮಾರು 1.47 ಕೋಟಿ. ಅಂದರೆ ಮನುಷ್ಯರು ಮತ್ತು ವಾಹನಗಳ ಅನುಪಾತ ಸರಿಸುಮಾರು ಪ್ರತಿ ನಾಗರಿಕರಿಗೆ ಒಂದು ಎಂಬಂತಿದೆ.

ಪ್ರತಿದಿನ ಸರಾಸರಿ 2563 ಹೊಸ ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗುತ್ತಿವೆ. ಇರುವವು ಗಳಲ್ಲಿ ೮೪ ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು. ಬೆಂಗಳೂರಿನ ಪ್ರಸ್ತುತ ವಾಯು ಗುಣಮಟ್ಟ ಸೂಚ್ಯಂಕ (ಅಕಿಐ) ೫೦ನ್ನು ಮೀರಿ ೭೦ರ ಮಧ್ಯಮ’ ವರ್ಗದಲ್ಲಿದೆ. ಆದರೆ ಮುಂದಿನ ೫-೧೦ ವರ್ಷಗಳಲ್ಲಿ ನಗರ ತೀವ್ರ ಮಾಲಿನ್ಯದ ಮಟ್ಟ ತಲುಪಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮುಂದಿನ ದಶಕದಲ್ಲಿ ಬೆಂಗಳೂರಿನ ಮಾಲಿನ್ಯದ ಪಥವನ್ನು ನಿರ್ಣಯಿಸುವುದು, ತುರ್ತು ಮತ್ತು ದೀರ್ಘಕಾಲೀನ ಕ್ರಮಗಳನ್ನು ಶಿಫಾರಸು ಮಾಡುವುದು, ಹೊಗೆ ಹೊರಸೂಸುವಿಕೆಯ ನಿಯಮಗಳ ಜಾರಿ ಬಲಪಡಿಸುವುದು, ಹೊಸ ವಾಹನ ನೋಂದಣಿ ಮತ್ತು ಸಂಚಾರ ದಟ್ಟಣೆ ನಿರ್ವಹಿಸುವ ತಂತ್ರಗಳನ್ನು ರೂಪಿಸುವುದು- ಇವೆಲ್ಲ ಸೇರಿದಂತೆ ಬೆಂಗಳೂರಿಗಾಗಿ ಸಮಗ್ರ ಸ್ವಚ್ಛ-ವಾಯು ಕ್ರಿಯಾ ಯೋಜನೆಯೊಂದು ಬೇಕು ಎಂಬುದು ಬೇಡಿಕೆ.

ಬೆಂಗಳೂರಿನ ವಾಯುಗುಣದ ಬಗ್ಗೆ ಮಾತನಾಡುವ ಮೊದಲು ದಿಲ್ಲಿಯ ಪರಿಸ್ಥಿತಿ ಏನಿದೆ ಎಂದು ಸ್ವಲ್ಪ ನೋಡಬಹುದು. ಬಹಳ ಸಿಂಪಲ್- ಅಲ್ಲಿ ಹುಟ್ಟುತ್ತಿರುವ ಮಕ್ಕಳು ದಿಲ್ಲಿಯಲ್ಲಿ ಹುಟ್ಟಿ ರೋದು ಎಂಬ ಕಾರಣಕ್ಕಾಗಿಯೇ ತಮ್ಮ ಆಯುಷ್ಯದಲ್ಲಿ ಹತ್ತು ವರ್ಷವನ್ನು ಆ ಕೆಟ್ಟ ಗಾಳಿಗಾಗಿ ಎತ್ತಿಟ್ಟಿವೆ.

ಅಂದರೆ ಮನುಷ್ಯನ ಸರಾಸರಿ ಆಯುಷ್ಯ ಎಂಬತ್ತು ವರ್ಷ ಎಂದಿಟ್ಟುಕೊಂಡರೆ ಈ ಗಾಳಿಯ ಕಾರಣದಿಂದ ಅದು ಎಪ್ಪತ್ತಕ್ಕಿಳಿಯುತ್ತದೆ. ಇದು ಆರೋಗ್ಯದ ಇತರೆಲ್ಲ ಫ್ಯಾಕ್ಟರ್‌ಗಳು ಸರಿಯಾಗಿ ದ್ದರೆ ಮಾತ್ರ. ದಿಲ್ಲಿ ಎರಡೂ ಕಡೆಯಿಂದ ಹಿಮಾಲಯ, ಅರಾವಳಿ ಹಿಲ್ಸ್ ಹಾಗೂ ಮಧ್ಯಭಾರತದ ಪ್ರಸ್ಥಭೂಮಿಯಿಂದ ಸುತ್ತುವರಿದು ಒಂದು ಬೋಗುಣಿಯಂತೆ ಇರುವುದರಿಂದ ಅಲ್ಲಿ ಗಾಳಿ ಟ್ರ್ಯಾಪ್ ಆಗುತ್ತದೆ.

ಇದಕ್ಕೆ ದಿಲ್ಲಿಯ ಸುತ್ತಮುತ್ತಲಿನ ಫ್ಯಾಕ್ಟರಿಗಳು, ವಾಹನಗಳು ಹಾಗೂ ಹರ್ಯಾಣದ ಕೂಳೆ ಸುಡುವಿಕೆಯ ಕೊಡುಗೆ ಕೂಡ ಸೇರಿ ಪರಿಸ್ಥಿತಿ ಬರ್ಬರವಾಗುತ್ತದೆ. ಸದ್ಯ ಬೆಂಗಳೂರಿನ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲ. ಆದರೆ ಇನ್ನೊಂದು ದಿಲ್ಲಿಯಾಗುವತ್ತ ವೇಗವಾಗಿ ಧಾವಿಸುತ್ತಿದೆ.

ಗಾಳಿಯಲ್ಲಿರುವ ಪಿಎಂ ೨.೫ ಕಣಗಳ ಅಂಶ ಗಂಟೆಗೆ ಸರಾಸರಿ ೧೫ ಎಂಜಿ/ಘನ ಮೀ. ಒಳಗಿದ್ದರೆ ಆರೋಗ್ಯಕರ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸೂಚಿ. ದಿಲ್ಲಿಯಲ್ಲಿ ಅದೀಗ 276 ಎಂಜಿ/ಘನ ಮೀ. ಇದೆ. ಕೆಲವೊಮ್ಮೆ ಅದು 700ನ್ನೂ ದಾಟುವುದುಂಟು. ಬೆಂಗಳೂರಿನಲ್ಲಿ ಅದರ ಪ್ರಮಾಣ ಸರಾಸರಿ ೭೬ ಇದೆ.

ಕಸ, ತ್ಯಾಜ್ಯ ಇತ್ಯಾದಿ ಸಮಸ್ಯೆಗಳನ್ನು ಮತ್ತೆ ನೋಡೋಣ. ಮೊದಲು ಸ್ವಚ್ಛ ಗಾಳಿ ಉಸಿರಾಡುತ್ತ ಆರೋಗ್ಯವಾಗಿ ಬದುಕೋಣ ಎಂಬಂತಿದ್ದರೆ ಈಗಿನಿಂದಲೇ ನಾವು ಕೆಲಸ ಶುರು ಮಾಡಬೇಕು. ಸಮಸ್ಯೆಯ ಕಾರಣಗಳು ಮತ್ತು ಪರಿಹಾರಗಳು ನಮಗೆ ಗೊತ್ತಿವೆ- ನಗರದೊಳಗಿನ ಫ್ಯಾಕ್ಟರಿಗಳನ್ನು ಹೊರಹಾಕಬೇಕು.

ಆಗಮಿಸುತ್ತಿರುವ ಜನಸಂಖ್ಯೆಯೆಲ್ಲವೂ ನಗರದ ಮಧ್ಯಭಾಗದಲ್ಲಿಯೇ ಟ್ರ್ಯಾಪ್ ಆಗದಂತೆ ಸಬರ್ಬ್ ಗಳಿಗೆ ಉದ್ಯಮಗಳನ್ನು ಹಂಚಬೇಕು. ಸುತ್ತಮುತ್ತಲಿನ ಜನತೆಯ ಉಸಿರುಕಟ್ಟಿಸದಂತೆ ರಿಯಲ್ ಎಸ್ಟೇಟ್ ನಿರ್ಮಾಣಗಳಿಗೆ ಬಿಗಿಯಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು.

ಕಸ ಸುಡುವುದಕ್ಕೆ ಕಡಿವಾಣ ಹಾಕಬೇಕು. ಹದಿನೈದು ವರ್ಷಕ್ಕಿಂತ ಹೆಚ್ಚಿನ ಅವಧಿಯ ವಾಹನಗಳ ನಿರ್ವಹಣೆಗೆ ಜನಸ್ನೇಹಿ ಮಾರ್ಗಸೂಚಿ ರೂಪಿಸಬೇಕು. ಯಾಕೆಂದರೆ ಹಳೆ ವಾಹನ ಹೊಂದಿರುವ ಎಲ್ಲರೂ ಅದನ್ನು ಜಂಕ್‌ಗೆ ಎಸೆದು ಹೊಸ ವಾಹನ ಕೊಂಡುಕೊಳ್ಳಲು ಶಕ್ತರಲ್ಲ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಬೇಕು.

ಇದೆಲ್ಲ ಸರಕಾರಗಳಿಗೆ ಗೊತ್ತಿಲ್ಲದ್ದೇನಲ್ಲ. ಜಾರಿಗೆ ಇಚ್ಛಾಶಕ್ತಿ ಬೇಕು ಅಷ್ಟೆ. ಈಗ ಆಶಾಕಿರಣವನ್ನೂ ನೋಡೋಣ. ಚೀನಾ ದೇಶದ ರಾಜಧಾನಿ ಬೀಜಿಂಗ್ ಕೂಡ ಹಿಂದೊಮ್ಮೆ ನಮ್ಮ ದಿಲ್ಲಿಯಂಥ ಪರಿಸ್ಥಿತಿಯನ್ನೇ ಎದುರಿಸಿತ್ತು. ಅದು ಕೂಡ ದಿಲ್ಲಿಯಂತೆಯೇ ಲ್ಯಾಂಡ್ಲಾಕ್ ಆಗಿರುವ ಪ್ರದೇಶ. 2013ರಲ್ಲಿ ಅದರ ಪಿಎಂ ೨.೫ ಪ್ರಮಾಣ 755 ಎಂಜಿಗಳಿಗೆ ಏರಿತು.

ಇದರ ವಾರ್ಷಿಕ ಸರಾಸರಿ ಡಬ್ಲ್ಯುಎಚ್‌ಒ ನಿಗದಿಪಡಿಸಿದ್ದಕ್ಕಿಂತ ೯ ಪಟ್ಟು ಹೆಚ್ಚಿತ್ತು. ಐದಾರು ವರ್ಷ ಇದೇ ಪರಿಸ್ಥಿತಿ ಇತ್ತು. ಆದರೆ ಇಂದು ಬೀಜಿಂಗ್‌ನ ಆಕಾಶ ಸ್ವಚ್ಛ ನೀಲಿಯಾಗಿದೆ. ಪಿಎಂ ೨.೫ ಪ್ರಮಾಣ ೨೯ರ ಆಸುಪಾಸಿನಲ್ಲಿದೆ. ಜನ ಮಾಸ್ಕ್ ಇಲ್ಲದೆ ಓಡಾಡುತ್ತಾರೆ. ನಗರದಲ್ಲಿ ಓಡಾಡುವಾಗ ಎದೆ ತುಂಬ ಗಾಳಿ ತೆಗೆದುಕೊಳ್ಳಬಹುದು. ಈ ಮ್ಯಾಜಿಕ್ ಸಂಭವಿಸಲು ಕಾರಣ ಏನು? ಅವರು ಮೊದಲು ಒಂದು ಪಂಚವಾರ್ಷಿಕ ಕ್ರಿಯಾಯೋಜನೆ ರೂಪಿಸಿದರು.

ಅದರಲ್ಲಿದ್ದ ಮಾರ್ಗಸೂಚಿಗಳು ನಿಖರವಾಗಿ, ಬಿಗಿಯಾಗಿದ್ದವು. ಮೊದಲು ಅತ್ಯಂತ ದೊಡ್ಡ ಮಾಲಿನ್ಯಕಾರಕಗಳೆನಿಸಿದ್ದ 2000ಕ್ಕೂ ಅಧಿಕ ದೊಡ್ಡ ಫ್ಯಾಕ್ಟರಿಗಳನ್ನು ದಯಾದಾಕ್ಷಿಣ್ಯವಿಲ್ಲದೆ ಮುಚ್ಚಿಸಿದರು. ಅತೀ ದೊಡ್ಡದಾಗಿದ್ದ ಶೌಗಾಂಗ್ ಸ್ಟೀಲ್ ಫ್ಯಾಕ್ಟರಿಯನ್ನು ಹಬೆ ಪ್ರಾಂತ್ಯಕ್ಕೆ ವರ್ಗಾಯಿಸಿದರು. ಇದರಿಂದ ೧೫ ಶತಕೋಟಿ ಡಾಲರ್ ನಷ್ಟ, 80000 ಉದ್ಯೋಗ ನಷ್ಟವಾದರೂ ಚಿಂತಿಸಲಿಲ್ಲ.

ಲಕ್ಷಗಟ್ಟಲೆ ಮನೆಗಳು ಹಾಗೂ ಗೃಹಕೈಗಾರಿಕೆಗಳು ಕಲ್ಲಿದ್ದಲು ಬಳಸುತ್ತಿದ್ದವು. ಅಲ್ಲಿಗೆ ಪರ್ಯಾಯ ವಾಗಿ ವಿದ್ಯುತ್, ಗ್ಯಾಸ್ ಸಂಪರ್ಕ ಒದಗಿಸಿದರು. ಸಾರ್ವಜನಿಕ ಸಾರಿಗೆಯನ್ನು ಕ್ಷಿಪ್ರವೇಗದಲ್ಲಿ ವಿಸ್ತರಿಸಿತು. 2000ನೇ ಇಸವಿಯಲ್ಲಿ ಎರಡು ಲೈನ್ ಹಾಗೂ ೫೪ ಕಿಮೀ ಉದ್ದವಿದ್ದ ಮೆಟ್ರೋ ರೈಲು ಇಂದು 1000 ಕಿಮೀಗೆ ಬೆಳೆದಿದೆ. ಲಕ್ಷಾಂತರ ಎಲೆಕ್ಟ್ರಿಕ್ ಬಸ್ಗಳನ್ನು ಪರಿಚಯಿಸಿತು.

ಜೊತೆಗೆ ೫.೪ ಕೋಟಿ ಮರಗಳನ್ನು ನಗರದ ನಡುವೆ ಹಾಗೂ ಸುತ್ತಮುತ್ತ ನೆಟ್ಟರು. ಪಾರ್ಕ್‌ಗಳನ್ನು ವಿಸ್ತರಿಸಿದರು. ನಮ್ಮಂತೆಯೇ ಅಲ್ಲೂ ಸುತ್ತಮುತ್ತ ಕೂಳೆ ಸುಡುವ ರೂಢಿ ಇತ್ತು. ಅದನ್ನು ಬ್ಯಾನ್ ಮಾಡುವ ಬದಲಿಗೆ, ಅದೇ ಬೆಳೆ ತ್ಯಾಜ್ಯವನ್ನು ರೈತರು ತಾವಾಗಿ ಬಯೋಪ್ಲಾಂಟ್‌ಗಳಿಗೆ ತಂದು ಕೊಡುವಂತೆ, ಅದರಿಂದ ದುಡ್ಡು ಪಡೆಯುವಂತೆ ಮಾಡಿದರು.

ದುಡ್ಡು ಸಿಕ್ಕರೆ ಯಾರು ಸುಡುತ್ತಾರೆ? ಜೊತೆಗೆ ಸಬ್ಸಿಡಿ ದರದಲ್ಲಿ ಕೂಳೆಯನ್ನು ಮಣ್ಣಿಗೆ ಸೇರಿಸುವ ಯಂತ್ರಗಳನ್ನು ರೈತರಿಗೆ ಕೊಟ್ಟರು. ಮೂರೇ ವರ್ಷದಲ್ಲಿ ಬೆಳೆ ತ್ಯಾಜ್ಯ ಸುಡುವಿಕೆ ೭೦ ಶೇಕಡಾ ತಗ್ಗಿತು. ಮತ್ತು ಇವೆಲ್ಲದರ ಮೇಲೆ ಬಹು ಶಿಸ್ತುಬದ್ಧವಾಗಿ, ಕಠಿಣವಾಗಿ ಕಾನೂನು ನಿಗಾ ಇಟ್ಟರು. ಸ್ಯಾಟಲೈಟ್‌ಗಳನ್ನೇ ಇದಕ್ಕಾಗಿ ಮೀಸಲಿಟ್ಟರು.

ಹೊಗೆ ಕಂಡರೆ ಸ್ಥಳೀಯಾಡಳಿತಗಳಿಗೆ ಫೈನ್ ಬೀಳುತ್ತಿತ್ತು. ಇದೆಲ್ಲದರ ಪರಿಣಾಮ, ಇಂದು ಬೀಜಿಂಗ್ ಜಗತ್ತಿನ ಮಾಲಿನ್ಯಭರಿತ ನಗರಗಳ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ನಮ್ಮಲ್ಲಿ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದಕ್ಕೇ ಮೊದಲು ನಾವು ಹಿಂಜರಿಯುತ್ತೇವೆ. ಒಂದು ವೇಳೆ ಇದೆ ಎಂದು ಒಪ್ಪಿ ಕೊಂಡರೂ, ಒಬ್ಬರು ಇನ್ನೊಬ್ಬರನ್ನು ಇದಕ್ಕೆ ಕಾರಣ ಎಂದು ಬೆಟ್ಟು ಮಾಡುತ್ತಾರೆ.

ರೈತರು ಸರಕಾರವನ್ನು, ಸರಕಾರ ವಾಹನಗಳನ್ನು, ಆಟೊಮೊಬೈಲ್ ಇಂಡಸ್ಟ್ರಿಯು ಪ್ಯಾಕ್ಟರಿ ಗಳನ್ನು, ಫ್ಯಾಕ್ಟರಿಗಳು ಬಿಲ್ಡಿಂಗ್ ನಿರ್ಮಾತೃಗಳನ್ನು- ಹೀಗೆ ಬೆರಳುಗಳು ಇನ್ನೊಬ್ಬರತ್ತ ಚಾಚುತ್ತವೆ. ಬೀಜಿಂಗ್ ಹೀಗೆ ಮಾಡಲಿಲ್ಲ. ಅಲ್ಲಿ ಪ್ರಧಾನಿ ಆಡಿದ ಮೊದಲ ಮಾತೇ ‘ನಾವು ಮಾಲಿನ್ಯದ ವಿರುದ್ಧ ಯುದ್ಧ ಸಾರುತ್ತಿದ್ದೇವೆ’ ಎಂಬುದಾಗಿತ್ತು.

ಯುದ್ಧೋಪಾದಿ ಯ ಕೆಲಸ ಸಾಗಿತು. ಉಡಾಫೆ, ಉದಾಸೀನ ಮಾಡಿದವರು ಕೆಲಸ ಕಳೆದು ಕೊಂಡರು. ನಮ್ಮಲ್ಲಿ ಏನು ಮಾಡುತ್ತೇವೆ? ದೀಪಾವಳಿಯಲ್ಲಿ ಪಟಾಕಿ ಸುಡುತ್ತೀರಲ್ಲ ನೀವು ಎಂದು ಅವರೂ, ಹೊಸ ವರ್ಷಕ್ಕೆ ನೀವು ಸುಡುವುದಿಲ್ಲವೇ ಎಂದು ಇವರೂ ಗುದ್ದಾಡಿಕೊಳ್ಳುವುದರಲ್ಲಿ ಆನಂದ ಕಂಡುಕೊಳ್ಳುತ್ತೇವೆ.