Shishir Hegde Column: ಮರೆಯಲಿ ಹ್ಯಾಂಗ ಮರೆವಿನ ಹಂಗ: ಮರೆವು ಒಳ್ಳೆಯದು
ಮರುಜನ್ಮವನ್ನು ಭಾರತೀಯರಷ್ಟೇ ಅಲ್ಲ, ಬಹುತೇಕ ಸಂಸ್ಕೃತಿಯವರು ನಂಬುತ್ತಾರೆ. ಇನ್ನು ಕೆಲವರಿಗೆ ‘ಇದ್ದರೂ ಇರಬಹುದು’. ಅಲ್ಲಲ್ಲಿ-ಆಗೀಗ ಎಳೆಯ ಪ್ರಾಯದ ಹುಡುಗ ಹುಡುಗಿಯರು ಹಿಂದಿನ ಜನ್ಮದ್ದೆಲ್ಲ ಹೇಳಿ ಬೆರಗುಮೂಡಿಸುವುದಿದೆ. ‘ನಾನು ಹಿಂದಿನ ಜನ್ಮದಲ್ಲಿ ಅಲ್ಲಿ ಹುಟ್ಟಿದ್ದೆ, ಆ ವ್ಯಕ್ತಿ ಯಾಗಿದ್ದೆ, ಹೀಗೆ ಸತ್ತೆ’ ಎಂಬ ಪ್ರಸಂಗಗಳು ಭಾರತದಲ್ಲಷ್ಟೇ ಅಲ್ಲ, ಅಮೆರಿಕ, ಇಂಗ್ಲೆಂಡಿನಲ್ಲಿಯೂ ನಡೆಯುತ್ತಿರುತ್ತದೆ


ಶಿಶಿರಕಾಲ
shishirh@gmail.com
ಚೀನಿಯರ ಪುರಾಣದಲ್ಲಿ ಹೀಗೊಂದು ಪರಿಕಲ್ಪನೆಯಿದೆ. ವ್ಯಕ್ತಿ ಸತ್ತ ನಂತರ ಆತನ ‘ಆತ್ಮ’ ಮರುಜನ್ಮ ಪಡೆಯಬೇಕೆಂದರೆ ಒಂದಿಷ್ಟು ಕೆಲಸಗಳನ್ನು ಪೂರೈಸಬೇಕು. ಅದರಲ್ಲಿ ಒಂದು- ಪಾತಾಳ ಲೋಕದ ಒಂದು ವಿಶೇಷ ಸೇತುವೆಯನ್ನು ದಾಟುವುದು. ಆ ಸೇತುವೆಯ ಹೆಸರು ‘ಮರೆವಿನ ಸೇತುವೆ’. ಅಲ್ಲಿ ಹಾದುಹೋಗುವ ಪ್ರತಿ ಆತ್ಮಕ್ಕೆ ‘ಮೆಂಗ್ ಪೊ’ ಎಂಬ ದೇವತೆ ಮರೆವಿನ ಚಹಾ ಕೊಡುತ್ತಾಳೆ. ಆ ಚಹಾ ಕುಡಿದರಷ್ಟೇ ಮುಂದೆ ಹೋಗಬಹುದು. ಚಹಾದ ವಿಶೇಷತೆ ಏನೆಂದರೆ, ಅದನ್ನು ಕುಡಿದದ್ದೇ ತಡ, ಆತ್ಮ ತನ್ನ ಪೂರ್ವಜನ್ಮದ ಎಲ್ಲ ವಿಚಾರಗಳನ್ನೂ ಮರೆತು ಬಿಡುತ್ತದೆ- ಕಂಪ್ಯೂಟರಿನ ಹಾರ್ಡ್ ಡಿಸ್ಕ್‌ನ ಮಾಹಿತಿಯನ್ನು ಫಾರ್ಮ್ಯಾಟ್ ಮಾಡಿ ಅಳಿಸಿದಂತೆ.
ಮುಂದೆ ಒಂದು ಸ್ವಚ್ಛ ಹೊಸಜನ್ಮ. ಆದರೆ ಅಪರೂಪಕ್ಕೆ ಸರತಿಯಲ್ಲಿ ನಿಂತ ಕುಚೇಷ್ಟೆಯ ಕೆಲವು ಆತ್ಮಗಳು ಈ ಚಹಾ ಕುಡಿಯುವುದನ್ನು ತಪ್ಪಿಸಿಕೊಂಡು ಬಿಡುತ್ತವಂತೆ. ಅಂಥವರು ಮುಂದಿನ ಜನ್ಮದಲ್ಲಿ ಹುಟ್ಟಿದಾಗಲೂ ಹಿಂದಿನದೆಲ್ಲ ನೆನಪಿಟ್ಟುಕೊಳ್ಳುತ್ತಾರೆ.
ಇದು ಅವರ ನಂಬಿಕೆ. ಮರುಜನ್ಮವನ್ನು ಭಾರತೀಯರಷ್ಟೇ ಅಲ್ಲ, ಬಹುತೇಕ ಸಂಸ್ಕೃತಿಯವರು ನಂಬುತ್ತಾರೆ. ಇನ್ನು ಕೆಲವರಿಗೆ ‘ಇದ್ದರೂ ಇರಬಹುದು’. ಅಲ್ಲಲ್ಲಿ-ಆಗೀಗ ಎಳೆಯ ಪ್ರಾಯದ ಹುಡುಗ ಹುಡುಗಿಯರು ಹಿಂದಿನ ಜನ್ಮದ್ದೆಲ್ಲ ಹೇಳಿ ಬೆರಗು ಮೂಡಿಸುವುದಿದೆ. ‘ನಾನು ಹಿಂದಿನ ಜನ್ಮದಲ್ಲಿ ಅಲ್ಲಿ ಹುಟ್ಟಿದ್ದೆ, ಆ ವ್ಯಕ್ತಿಯಾಗಿದ್ದೆ, ಹೀಗೆ ಸತ್ತೆ’ ಎಂಬ ಪ್ರಸಂಗಗಳು ಭಾರತದಲ್ಲಷ್ಟೇ ಅಲ್ಲ, ಅಮೆರಿಕ, ಇಂಗ್ಲೆಂಡಿನಲ್ಲಿಯೂ ನಡೆಯುತ್ತಿರುತ್ತದೆ.
ಪತ್ರಿಕೆಗಳಲ್ಲಿ ಸುದ್ದಿಯೂ ಆಗುತ್ತದೆ. ಇವರು ನೆನಪಿಸಿ ಹೇಳುವುದು ಎಷ್ಟು ಸತ್ಯವೋ, ವಿಷಯ ಅದಲ್ಲ. ಈ ನೆನಪಿನ ಶಕ್ತಿಯ ವಿಚಾರ ಬಂದಾಗಲೆಲ್ಲ ನನಗೆ ಇಂಥವರನ್ನು ಕಂಡರೆ ಭಯ ವಾಗುತ್ತದೆ. ಈ ಹೋದ ಜನ್ಮದ್ದೆಲ್ಲ ಇವರಿಗೆ ನೆನಪಿನಲ್ಲಿರುವುದು ಎಂದರೆ ಹೇಗೆ? ಏಕೆಂದರೆ ನನ್ನಂಥವರಿಗೆ ಅಂಗಡಿಗೆ ದಿನಸಿ ತರಲು ಹೋದರೆ ಮೂರರಲ್ಲಿ ಎರಡು ಮರೆತುಹೋಗಿರುತ್ತದೆ.
ಹೆಂಡತಿಗೆ ಕರೆ ಮಾಡಿ ಉಗಿಸಿಕೊಳ್ಳಬೇಕಾಗುತ್ತದೆ. ಮದುವೆಯಾದ ದಿನ, ಮಡದಿಯ ಹುಟ್ಟಿದ ದಿನ- ಬಿಡಿ ನಮ್ಮದೇ ಹುಟ್ಟಿದ ದಿನ ನೆನಪುಳಿಯುವುದಿಲ್ಲ. ಈಗ ಮೊಬೈಲ್ ಮತ್ತು ಸೋಶಿಯಲ್
ಮೀಡಿಯಾ ಬಂದಾಗಿನಿಂದ ಬಚಾವ್. ಇಲ್ಲದಿದ್ದರೆ ಇಂಥ ಕ್ಷಮೆಯೇ ಇಲ್ಲದ ಮರೆವಿನಿಂದಾಗಿ ಅದೆಷ್ಟು ಜನರ ವಿಚ್ಛೇದನ ಆಗಿಹೋಗುತ್ತಿತ್ತೋ?!
ನಮ್ಮೆಲ್ಲರದ್ದೂ ಅಥವಾ ಬಹುತೇಕರದ್ದು ಇದೇ ಕಥೆ. ಏನೇನೋ ನೆನಪಿದ್ದುಬಿಡುತ್ತದೆ. ಅವಶ್ಯ ವೆನಿಸಿದ್ದು ಮರೆತು ಹೋಗಿರುತ್ತದೆ. ಕಾರ್ಯಕ್ರಮದಲ್ಲಿ ಪರಿಚಯವಾದ ವ್ಯಕ್ತಿಯ ಜತೆ ಅರ್ಧಗಂಟೆ ಮಾತನಾಡಿದ ಮೇಲೆ ಅವರೇ ಹೆಸರೇ ಮರೆತುಹೋಗಿರುತ್ತದೆ. ಪುನಃ ಕೇಳುವಂತಿಲ್ಲ- ಫಜೀತಿ.
ಆದರೆ ಹೈಸ್ಕೂಲಿಗೆ ಹೋಗುವಾಗಿನ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ನೆನಪಿದ್ದುಬಿಡುತ್ತದೆ. ಪ್ರೈಮರಿ ಟೀಚರ್ ಗಂಡನ ಬೈಕ್ ಮಾಡೆಲ್ ನೆನಪಿರುತ್ತದೆ. ಅವರವರಿಗೆ ಮಹತ್ವವಾದದ್ದು ಅವರವರಿಗೆ ನೆನಪಿರುತ್ತದೆ ಎಂಬೊಂದು ಮಾತಿದೆ. ಆದರೆ ಹೀಗೆ ನೆನಪಿರುವ ಕೆಲವಕ್ಕೆ ಅರ್ಥವೇ ಇರುವುದಿಲ್ಲ. ನಮ್ಮ ಕುತೂಹಲ, ಆಸಕ್ತಿಯಿರುವ ಎಲ್ಲವೂ ನೆನಪಿರುವುದಿಲ್ಲ.
ಸಹಜ ನೆನಪು ಮತ್ತು ಮರೆವು ಎನ್ನುವುದು ಐಚ್ಛಿಕವಲ್ಲ. ಗಮನವಿಟ್ಟದ್ದು ನೆನಪಿರುತ್ತದೆ ಎಂದರೆ ಅದು ಕೂಡ ಪೂರ್ತಿ ಸತ್ಯವಲ್ಲ. ಗಮನವಿಟ್ಟು ಕೇಳಿದ ನಂತರವೂ ನೆನಪಿಡಲು ಆಗೀಗ ನೆನಪಿಸಿ ಕೊಳ್ಳಬೇಕು. ನಾನಿಲ್ಲಿ ಹೇಳುತ್ತಿರುವುದು ಬಾಯಿಪಾಠದ ನೆನಪಿನ ಶಕ್ತಿಯ ಬಗ್ಗೆ ಅಲ್ಲ. ಸಾಧಾರಣ, ದಿನನಿತ್ಯದ ಬದುಕಿನ ನೆನಪು ಮರೆವಿನ ಬಗ್ಗೆ. ಬಹುತೇಕರ ಪರಿಸ್ಥಿತಿ ಹೀಗಿರುವಾಗ ಕೆಲವರಿಗೆ ಹೋದ ಜನ್ಮದ್ದೆಲ್ಲ ನೆನಪಿರುತ್ತದೆ ಎಂದರೆ? ನಮ್ಮಲ್ಲಿ ಬಹುತೇಕರ ಆತ್ಮಗಳು ಈ ‘ಚೀನಿಯರ ಮರೆವಿನ ಚಹಾ’ವನ್ನು ಸ್ವಲ್ಪ ಜಾಸ್ತಿಯೇ ಕುಡಿದುಬಿಟ್ಟಿರುತ್ತವೆ ಎಂದೆನಿಸುತ್ತದೆ.
ಇಲ್ಲಿ ಹೇಳುತ್ತಿರುವುದು ಮರೆವಿನ ರೋಗ ಅಥವಾ ವಯೋಸಹಜ ಲಕ್ಷಣದ ಬಗ್ಗೆ ಅಲ್ಲ. ನನ್ನ ಸ್ನೇಹಿತನೊಬ್ಬನಿದ್ದಾನೆ- ಸಚಿನ್. ಅವನಿಗೆ ನೋಡಿದ ಸಾವಿರಾರು ಚಲನಚಿತ್ರದ ಹೆಸರು-ಕಥೆ ಎಲ್ಲವೂ ನೆನಪಿರುತ್ತದೆ. ಸಿನಿಮಾ ಹಾಡಿನ ಒಂದು ಸಾಲು ಹೇಳಿದರೆ ಇದು ಈ ಸಿನಿಮಾದ್ದು, ಹೀರೋ ಇಂಥವನು, ವಿಲನ್ ಇವನು, ಹೀರೋಯಿನ್, ಅವರಮ್ಮ, ನಿರ್ದೇಶಕ, ಗೀತರಚನಕಾರ ಎಲ್ಲ ಪಟಪಟನೆ ಹೇಳಿ ಬಿಡುತ್ತಾನೆ.
ಅಷ್ಟೇ ಅಲ್ಲ- ಹೀರೋಯಿನ್ ಅಜ್ಜಿಯ ಪಾತ್ರ ಮಾಡಿದವರ ಹೆಸರು, ಹೀರೋ ಮನೆಯ ಕೆಲಸ ದವಳ ಹೆಸರಿನವರೆಗೆ ನೆನಪಿರುತ್ತದೆ, ಪುಣ್ಯಾತ್ಮನಿಗೆ! ಇನ್ನೊಬ್ಬ ಸ್ನೇಹಿತೆ ತ್ರಿವೇಣಿ ರಾವ್ ಅವರಿಗೆ ಕನ್ನಡ ಸಾಹಿತ್ಯ ಮತ್ತು ಚಲನಚಿತ್ರದ ವಿಷಯದಲ್ಲಿ ಇದೇ ರೀತಿಯ ಅಸಾಧ್ಯ ನೆನಪಿನ ಶಕ್ತಿ. ಇನ್ನೊಬ್ಬ ಸ್ನೇಹಿತ ಹರ್ಷವರ್ಧನನಿಗೆ ಕರ್ನಾಟಕ ಮತ್ತು ಭಾರತದ ರಾಜಕಾರಣದಲ್ಲಿ ಕಳೆದ ಐವತ್ತು ವರ್ಷದಲ್ಲಿ ನಡೆದ ಪ್ರತಿಯೊಂದು ಘಟನೆಯೂ ನೆನಪಿರುತ್ತದೆ.
ಮೊನ್ನೆ ಪರೀಕ್ಷಿಸೋಣ ಎಂದು ‘ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಹೋದದ್ದು ಯಾವಾಗ?’ ಎಂದು ಕೇಳಿದೆ. 2015ರ ಕ್ರಿಸ್ಮಸ್ ದಿನ ಎಂದು ಥಟ್ಟನೆ ಹೇಳಿ ಬಿಟ್ಟ. ನನಗೆ ಕೆಲವರ ಆಸಕ್ತಿಯ ಹೊರತಾಗಿ ಅದರಾಚೆಯ ನೆನಪಿನ ಸಾಮರ್ಥ್ಯ ಕಂಡು ಆಶ್ಚರ್ಯವಾಗುತ್ತದೆ. ಇವರೆಲ್ಲರಿಗೂ, ನಮಗೆಲ್ಲರಿಗೂ ಅಷ್ಟೇ, ಕೆಲವೊಂದು ವಿಷಯಗಳಲ್ಲಿ ಅಸಾಮಾನ್ಯವೆನಿಸುವಷ್ಟು ನೆನಪಿನ ಶಕ್ತಿ- ಇನ್ನು ಕೆಲವು ವಿಷಯದಲ್ಲಿ ನಾಚಿಕೆಯಾಗುವಷ್ಟು ಮರೆವು.
ಇದು ಹೀಗೆಯೇ ಎಂಬ ವಿವರಣೆ ಕಷ್ಟ. ನಮ್ಮ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಮರೆಗುಳಿತನದ ಬಗ್ಗೆ ನೀವು ಕೇಳಿರಬಹುದು. ಮೊಬೈಲ್, ಪರ್ಸ್, ಪಾಸ್‌ಪೋರ್ಟ್ ಇವನ್ನೆಲ್ಲ ರೋಹಿತ್ ಹೋದ ಹೋದಲ್ಲಿ ಬಿಟ್ಟು ಮರೆತು ಬರುತ್ತಾನಂತೆ. ರೋಹಿತ್ ಮರೆಗುಳಿ ತನದ ಬಗ್ಗೆ ವಿರಾಟ್ ಕೊಹ್ಲಿ- ‘ನಾನು ಅಷ್ಟು ಮರೆವಿನ ಮನುಷ್ಯನನ್ನೇ ನೋಡಿಲ್ಲ’ ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದ.
ರೋಹಿತ್ ಪ್ರೆಸ್‌ಮೀಟ್ ಮಾಡುವಾಗ ಆಗೀಗ ನೆನಪಿನ ಶಕ್ತಿ ಕೈಕೊಡುತ್ತದೆ. ಒಂದು ಟೂರ್ನಮೆಂಟಿ ನಲ್ಲಂತೂ ಫೈನಲ್‌ನಲ್ಲಿ ಗೆದ್ದ ಕಪ್ ಅನ್ನು ರೋಹಿತ್ ಸ್ಟೇಡಿಯಮ್‌ನ ಮೀಡಿಯಾ ರೂಮಿನ ಬಿಟ್ಟು ಬಂದಿದ್ದನಂತೆ. ರೋಹಿತ್ ಬಗ್ಗೆ ಹೀಗೊಂದು ಜೋಕ್ ಇದೆ- ‘ಮರೆವು ಒಲಿಂಪಿಕ್ಸ್ ನಲ್ಲಿದ್ದರೆ ರೋಹಿತ್ ಶರ್ಮಾ ಮೊದ ಲನೇ ಸ್ಥಾನ ಗೆಲ್ಲುತ್ತಿದ್ದನಂತೆ. ಆದರೆ ಮೆಡಲ್ ಸ್ವೀಕರಿಸಲು ಬರಲು ಮರೆಯುತ್ತಿದ್ದನಂತೆ’. ಈ ರೀತಿ ಅಸಾಮಾನ್ಯ ಸಾಧಕರೆಲ್ಲ ಕೆಲವೊಂದಿಷ್ಟು ವಿಷಯದಲ್ಲಿ ಮಹಾ ಮರೆಗುಳಿ ಎನ್ನುವುದಕ್ಕೆ ರೋಹಿತ್ ಒಳ್ಳೆಯ ಉದಾಹರಣೆ.
ಉಬರ್ ಕಂಪನಿ ಪ್ರತಿವರ್ಷ ತನ್ನ ಬಾಡಿಗೆ ಕಾರಿನಲ್ಲಿ ಗ್ರಾಹಕರು ಬಿಟ್ಟುಹೋಗುವ ವಸ್ತುಗಳ ಬಗ್ಗೆ ಒಂದಿಷ್ಟು ವರದಿ-ವಿವರಣೆ ನೀಡುತ್ತದೆ. ಆ ವಿವರಣೆ ಮತ್ತು ವಿಶ್ಲೇಷಣೆ ಮಜವಾಗಿರುತ್ತವೆ. ಅದರ ಪ್ರಕಾರ ನ್ಯೂಯಾರ್ಕ್ ನಗರದಲ್ಲಿ ವಸ್ತುಗಳನ್ನು ಮರೆತುಬಿಟ್ಟು ಹೋಗುವುದು ಅತ್ಯಂತ ಹೆಚ್ಚಂತೆ. ಭಾರತದಲ್ಲಿ ಮೊದಲ ಸ್ಥಾನ ಮುಂಬೈಗೆ.
ನಾಲ್ಕನೇ ಸ್ಥಾನ ಬೆಂಗಳೂರಿಗೆ. ಹೈದರಾಬಾದ್‌ಗೆ ಮರೆಗುಳಿತನದಲ್ಲಿ ಕೊನೆಯ ಸ್ಥಾನ. ಹಬ್ಬಗಳ ಸಮಯದಲ್ಲಿ ಜನರು ಮರೆತುಬಿಡುವುದು ಗಣನೀಯ ಜಾಸ್ತಿಯಂತೆ. ಬ್ಯಾಕ್ ಪ್ಯಾಕ್, ಇಯರ್ ಫೋನ್, ಮೊಬೈಲ್, ಕನ್ನಡಕ, ಬಟ್ಟೆ, ಕೀಲಿ ಇವೆಲ್ಲ ಸಾಮಾನ್ಯವಾಗಿ ಬಿಟ್ಟುಹೋಗುವ ವಸ್ತುಗಳು. ಈ ಪಟ್ಟಿಯಲ್ಲಿ ಅರ್ಧ ಕೆಜಿ ಚಿನ್ನದ ಬಿಸ್ಕಿಟ್, ಹತ್ತು ಲಕ್ಷ ಬೆಲೆಯ ಮದುವೆಯ ಸೀರೆ, ತಾಳಿ, ಇಪ್ಪತ್ತೈದು ಕೆ.ಜಿ. ಆಕಳ ತುಪ್ಪ, ವಿಗ್, ಹಾರ್ಮೋನಿಯಂ, ಬೆಕ್ಕಿನ ಮರಿ ಹೀಗೆ- ಜನರು ಇಂಥ ವಸ್ತುಗಳನ್ನೂ ಬಿಟ್ಟುಹೋಗುತ್ತಾರಾ ಎಂದು ಆಶ್ಚರ್ಯವಾಗುತ್ತದೆ.
ಮನುಷ್ಯನ ನೆನಪಿನ ಶಕ್ತಿ ಕಂಪ್ಯೂಟರಿನಂತೆ, ಮೊಬೈಲ್ ಫೋನ್‌ನಂತೆ ಎಂದು ಕೆಲವರು ಭಾವಿಸಿ ದ್ದಾರೆ. ಕಂಪ್ಯೂಟರಿನಲ್ಲಿ ಒಂದು ಕಡೆ ‘ಫೋಲ್ಡರ್’ ಮಾಡಿ, ಅದರೊಳಕ್ಕೆ ‘ಫೈಲ್’ ಮಾಡಿಟ್ಟರೆ ಎಷ್ಟು ಕಾಲ ಹೋದರೂ ವಿಷಯ ಹಾಗೆಯೇ ಇರುತ್ತದೆ. ಮೊಬೈಲ್‌ನಲ್ಲಿ ತೆಗೆದ ಫೋಟೋ ಕಾಲ ಕಳೆದಂತೆ ಮಸುಕಾಗಿ ಮಾಯವಾಗುವುದಿಲ್ಲವಲ್ಲ. ಆದರೆ ಮನುಷ್ಯನ ನೆನಪಿನ ಶಕ್ತಿ ಹಾಗಲ್ಲ. ನಾವು ಒಂದು ವಿಷಯವನ್ನು ನೆನಪಿಡುವ ರೀತಿ ಕಂಪ್ಯೂಟರಿಗಿಂತ ಸಂಪೂರ್ಣ ವಿಭಿನ್ನ.
ಸುಮ್ಮನೆ ಹೀಗೊಂದು ಕಲ್ಪಿಸಿಕೊಳ್ಳಿ. ನೀವು ಜೀವನದ ಸುಮಾರು ಹತ್ತು ವರ್ಷ ಪ್ರತಿನಿತ್ಯ ಬೆಳಗ್ಗೆ ಎದ್ದು ದೋಸೆ ಮತ್ತು ಸಾಂಬಾರ್ ಅನ್ನೇ ತಿಂದಿದ್ದೀರಿ ಎಂದಿಟ್ಟುಕೊಳ್ಳಿ. ಒಂದು ನಿರ್ದಿಷ್ಟ ಸಮಯ ಮತ್ತು ಜಾಗದಲ್ಲಿ ಕುಳಿತು ಪ್ರತಿನಿತ್ಯ ಅದೇ ತಿಂಡಿ. ಈಗ ಆ ಹತ್ತು ವರ್ಷ ಪ್ರತಿದಿನ ದೋಸೆ ತಿಂದ ವಿವರವನ್ನು ಮಿದುಳು ಪ್ರತ್ಯೇಕವಾಗಿ ನೆನಪಿಟ್ಟುಕೊಳ್ಳುವುದಿಲ್ಲ. ಆ ದಿನ ಎಷ್ಟು ಸೌಟು ಸಾಂಬಾರ್ ಬಡಿಸಿಕೊಂಡೆ, ಎಷ್ಟು ದೋಸೆ ತಿಂದೆ ಹೀಗೆ ನಿತ್ಯದ ವಿವರಣೆ ನೆನಪಾಗಿ ಉಳಿಯುವುದಿಲ್ಲ.
ಬದಲಿಗೆ ಒಂದು ಸಾರಾಂಶ ಮಾತ್ರ ನೆನಪಿರುತ್ತದೆ. ಬೆಳಗ್ಗೆ ಎದ್ದು ಹೀಗೆ ದೋಸೆ ತಿನ್ನುತ್ತಿದ್ದೆ ಮತ್ತು ಆಗಿನ ನನ್ನ ಅನುಭವ, ಭಾವನೆ ಹೀಗಿರುತ್ತಿತ್ತು ಎಂದಷ್ಟೇ ನೆನಪಿರುತ್ತದೆ. ಆ ವಿಷಯವನ್ನು ಸ್ಮೃತಿಪಟಲದಿಂದ ಮರುಕರೆಯುವಾಗ, ನೆನಪು ಮಾಡಿಕೊಳ್ಳುವಾಗ, ಆ ಘಟನೆಯ ಕೆಲವೊಂ ದಿಷ್ಟು ವಿಷಯ, ಇಂದ್ರಿಯ ಮತ್ತು ಭಾವನಾತ್ಮಕ ಅನುಭವ ಇವನ್ನೆಲ್ಲ ಸೇರಿಸಿ ‘ಮನಸ್ಸು’ ಅದನ್ನು ಮರುಸೃಷ್ಟಿಸುತ್ತದೆ.
ಪ್ರತಿ ಬಾರಿ ಏನನ್ನೇ ನೆನಪಿಸಿಕೊಂಡಾಗಲೂ ಮನಸ್ಸಿನಲ್ಲಿ ಅದು ಮತ್ತೆ ಸಂಭವಿಸುತ್ತದೆ. ಹಳೆಯ ಗೆಳೆಯರ ಗುಂಪು ಬಹಳ ಕಾಲದ ನಂತರ ಜತೆ ಸೇರಿದಾಗ ಅವರ ಹಿಂದಿನ, ಜತೆಯಲ್ಲಿ ಕಳೆದ ಅನುಭವವನ್ನು ನೆನಪು ಮಾಡಿಕೊಳ್ಳುವುದು ಸಾಮಾನ್ಯ. ಅಂತಲ್ಲಿ ನೀವು ಇದನ್ನು ಗಮನಿಸಿರ ಬಹುದು, ಒಂದೇ ಘಟನೆ ಇಬ್ಬರು ಸ್ನೇಹಿತರಿಗೆ ವಿಭಿನ್ನವಾಗಿ ನೆನಪಿರುತ್ತದೆ. ಕೆಲವೊಮ್ಮೆ ಅವರ ಮಧ್ಯೆ ಈ ಕಾರಣಕ್ಕೆ ಚಿಕ್ಕ ವಾದವೂ ಆಗುತ್ತದೆ.
ಒಬ್ಬ ಹೇಳುತ್ತಾನೆ ‘ನನಗೆ ಸ್ಪಷ್ಟ ನೆನಪಿದೆ- ಈ ಘಟನೆ ಹೀಗೆಯೇ ಆಗಿದ್ದು’ ಎಂದು. ಇನ್ನೊಬ್ಬ ಅದಕ್ಕೆ ವಿರುದ್ಧವಾಗಿ- ‘ಇಲ್ಲ ಆ ಘಟನೆ ಹಾಗೆ ನಡೆದದ್ದೇ ಅಲ್ಲ, ಆಗಿದ್ದು ಹೀಗೆ’ ಎಂದು. ಈ
ವ್ಯತ್ಯಾಸಕ್ಕೆ ಕಾರಣ ಅವರು ಆ ಘಟನೆಯನ್ನು ನಡೆದ ನಂತರ ನೆನಪಿಸಿಕೊಳ್ಳುವಾಗ ಮರು ಸೃಷ್ಟಿಸುವಲ್ಲಿ ಆಗುವ ವ್ಯತ್ಯಯ. ಮನೆಯಲ್ಲಿ ಚಿಕ್ಕ ಮಕ್ಕಳು ಬೆಳೆಯುವಾಗ ಇದು ಗಮನಕ್ಕೆ ಬರುತ್ತದೆ. ಹಿರಿಯರು ಮಾತಾಡಿಕೊಂಡ ವಿಷಯವನ್ನು ಮಕ್ಕಳು ಕೇಳಿಸಿಕೊಳ್ಳುತ್ತಾರೆ.
ಆ ವಿವರವನ್ನು ಬಳಸಿ ಮಕ್ಕಳು ಆ ಘಟನೆಯನ್ನು ಮನಸ್ಸಿನಲ್ಲಿಯೇ ಮರುಸೃಷ್ಟಿಸಿಕೊಳ್ಳುತ್ತಾರೆ. ಮಕ್ಕಳು ಈ ರೀತಿ ಘಟನೆಯನ್ನು ಮರುಸೃಷ್ಟಿಸುವಾಗ ತಮ್ಮನ್ನು ಅಲ್ಲಿ ವೀಕ್ಷಕರನ್ನಾಗಿ ಇಟ್ಟು ಕೊಂಡಿರುತ್ತಾರೆ. ಇದರಿಂದಾಗಿ ವರ್ಷಗಳು ಕಳೆದ ನಂತರ- ಇಂಥ ಕೆಲವೊಂದು ಘಟನೆಗಳು ಅವರೆದುರೇ ನಡೆದಿವೆ ಎಂದೇ ನೆನಪಿನಲ್ಲಿರುತ್ತವೆ.
ಅಸಲಿಗೆ ಅವರು ಅದನ್ನು ಕೇಳಿಸಿಕೊಂಡಿರುತ್ತಾರೆ ಮತ್ತು ಪರೋಕ್ಷ ಅನುಭವಿಸಿರುತ್ತಾರೆ. ತೀರಾ ವಿರಳಾತಿವಿರಳ ಜನರಿಗೆ ಕಂಡದ್ದೆಲ್ಲಾ ನೆನಪುಳಿಯುತ್ತದೆ. ಅದನ್ನು ವೈದ್ಯಕೀಯ ಭಾಷೆಯಲ್ಲಿ ಒಂದು ‘ condition ‘- ಪರಿಸ್ಥಿತಿ/ಅವಸ್ಥೆ ಎಂದೇ ಸಂಬೋಧಿಸುವುದು. ಅದು ಅಸಹಜ- ಒಂದು ಸಮಸ್ಯೆ. Hyperthymesia ಇರುವವರಿಗೆ ನಿತ್ಯದ ಅತ್ಯಂತ ಚಿಕ್ಕ ವಿವರಣೆ ಕೂಡ ಅನವಶ್ಯ ನೆನಪಿರುತ್ತದೆ. ಹೇಗೆಂದರೆ- ಎಂಟು ವರ್ಷದ ಹಿಂದಿನ ಒಂದು ದಿನಾಂಕ ಹೇಳಿದರೆ, ಆ ದಿನ ಎಷ್ಟು ಗಂಟೆಗೆ ಎದ್ದೆ, ಏನೇನು ಮಾಡಿದೆ, ಏನನ್ನು ಎಲ್ಲಿ ಕಂಡೆ, ಪೇಪರಿನಲ್ಲಿ ಏನು ಹೆಡ್‌ಲೈನ್ ಇತ್ತು, ಯಾರ‍್ಯಾರನ್ನು ಭೇಟಿಯಾದೆ, ಯಾವ ಬಣ್ಣದ ಬಟ್ಟೆ ಧರಿಸಿದ್ದೆ- ಹೀಗೆ ಪ್ರತಿಯೊಂದೂ.
ಅಬ್ಬಾ! ನನಗಂತೂ ಅಂಥವರ ಪರಿಸ್ಥಿತಿಯನ್ನು ಊಹೆ ಮಾಡಿಕೊಂಡರೆ ಹೆದರಿಕೆಯಾಗುತ್ತದೆ. ಯಾವುದೂ ಮರೆತುಹೋಗುವುದು ಎನ್ನುವುದೇ ಇಲ್ಲ. ಮರೆಯುವುದನ್ನು ಒಂದು ರೀತಿಯಲ್ಲಿ ನೆನಪನ್ನು ಜೀರ್ಣಿಸಿಕೊಳ್ಳುವ ಕ್ರಿಯೆಗೆ ಹೋಲಿಸಬಹುದು. ಆದರೆ ಹೈಪರ್ ಥಿಮಿಷಿಯ ಇರುವವ ರಿಗೆ ನೆನಪಿನ ಅಜೀರ್ಣವಾಗಿ ಬಿಡಬಹುದು. ಅವರ ತಲೆಯೊಳಗಿನ ಪರಪ್ರವೇಶ ಕಲ್ಪನೆಗೆ ನಿಲುಕದ್ದು.
ಈ ಮಾತನ್ನು ನೀವು ಕೇಳಿರಬಹುದು- People will forget what you said, people will forget what you did, but people will never forget how you made them feel.' ನಾವು ನೆನಪಿಟ್ಟು ಕೊಳ್ಳುವ ರೀತಿಯೇ ಹಾಗೆ. ನೆನಪೆಂದರೆ ಘಟನೆ ಮಾತ್ರವಲ್ಲ, ಆ ಸಮಯದಲ್ಲಿನ ನಮ್ಮ ಚಿತ್ತಸ್ಥಿತಿ ಕೂಡ ನೆನಪಿನ ಭಾಗವಾಗಿ ಉಳಿಯುತ್ತದೆ. ಸಿಟ್ಟು ಬಂದ ಘಟನೆಯಿದ್ದರೆ ಸಿಟ್ಟಿನ ಅನುಭವ, ನೋವಾದಾಗ ಆಗುವ ವೇದನೆಯ ಅನುಭವ ಹೀಗೆ. ನಾವು ಘಟನೆಯನ್ನು ನೆನಪಿಸಿಕೊಳ್ಳುವಾಗ- ಆ ನೆನಪನ್ನು ಮನಸ್ಸಿನೊಳಗೆ ಮರು ಸೃಷ್ಟಿಸಿಕೊಳ್ಳುವಾಗ ಆ ಘಟನೆಯ ಸಂದರ್ಭದ ಚಿತ್ತಸ್ಥಿತಿ ಕೂಡ ಮರುಕಳಿಸುತ್ತದೆ. ನೆನಪು ಭಾವನೆಯನ್ನು ಕದಡುವುದು ಎಂದರೆ ಅದುವೇ. ನೆನಪಿಸಿಕೊಳ್ಳುವಾಗ ಮನಸ್ಸು ಅದೇ ಚಿತ್ತಸ್ಥಿತಿ ಯನ್ನು ಮರು ಸೃಷ್ಟಿಸಿಕೊಳ್ಳುತ್ತದೆ.
ಖುಷಿಯ ನೆನಪುಗಳು ಖುಷಿಕೊಡುವುದು, ಕೆಟ್ಟ ನೆನಪುಗಳು ಬೇಸರವನ್ನು ತರುವುದು ಎಂದರೆ ಹಾಗೆ. ಯಾವುದೇ ಕೆಟ್ಟ ಘಟನೆಯಿರಲಿ, ಕ್ರಮೇಣ ಸೂಕ್ಷ್ಮ ವಿವರಗಳು ಒಂದಿಷ್ಟು ಕಾಲ ಮಾತ್ರ ನೆನಪಿರುತ್ತವೆ. ಉದಾಹರಣೆಗೆ ಕುಟುಂಬದದ ಅಕಾಲಿಕ ಸಾವು, ಅಪಘಾತ, ಶೋಷಣೆ ಇವೆಲ್ಲ ಹಾಗೆ. ಆ ದಿನದ ವಿವರಣೆಗಳಲ್ಲಿ ಕೆಲವೊಂದಿಷ್ಟು ವಿಷಯಗಳು ಕ್ರಮೇಣ ಮರೆಯುತ್ತವೆ. ಆ ಮೂಲಕ ಬೇಸರ ಕೂಡ. ಇದೊಂದು ಸ್ವಾಭಾವಿಕ ಗುಣಪ್ರಕ್ರಿಯೆ. ಇದಾಗಲಿಲ್ಲ, ವ್ಯಕ್ತಿಯು ವಿವರಣೆಗಳನ್ನು ಮರೆಯುವುದೇ ಇಲ್ಲ ಎಂದರೆ ಅದು ಕ್ರಮೇಣ ‘ಡಿಪ್ರೆಶನ್’- ಖಿನ್ನತೆಗೆ ಎಡೆಮಾಡಿಕೊಡುತ್ತದೆ.
ಕೆಟ್ಟ ಘಟನೆಯನ್ನು ಅದರಷ್ಟಕ್ಕೆ ಬಿಟ್ಟುಬಿಟ್ಟರೆ ಗಾಯದ ನೋವು ಬೇಗ ಮಾಯುತ್ತದೆ. ಅದು ಐಚ್ಛಿಕ. ನೆನಪಿನ ಮರುಸೃಷ್ಟಿ ನೆನಪಿಗೆ ಒಳ್ಳೆಯದಾದರೂ ಅದು ನಂತರದಲ್ಲಿ ಅನವಶ್ಯಕ. ಕೆಟ್ಟದ್ದನ್ನು ನೆನಪಿಸಿಕೊಳ್ಳುತ್ತಿರಬಾರದು ಎಂದರೆ ಮರು ಸೃಷ್ಟಿಸಿಕೊ ಳ್ಳುತ್ತಿರಬಾರದು. ಆಗ ಮಾತ್ರ ಶಮನ ಸಾಧ್ಯ. ವಿಸ್ಮೃತಿ- ನಾವು ಜೀವನದಲ್ಲಿ ಅನುಭವಿಸಿದ ಯಾವ ಘಟನೆ, ಪಾಠ ಮುಂದಿನ ಬದುಕಿಗೆ ಅವಶ್ಯ ಎಂಬುದನ್ನು ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ್ದು. ಮರೆಯುವುದು ಏನೋ ಒಂದು ರೋಗ, ಕೊರತೆ ಎಂದೇ ತಿಳಿಯಬೇಕಿಲ್ಲ ಅಥವಾ ಏನೋ ಒಂದನ್ನು ಮರೆಯುವುದು ಅಸಂವೇದಿ ಲಕ್ಷಣವಲ್ಲ.
ಒಮ್ಮೆ ಬುದ್ಧನಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿ ಬಂದು ತನ್ನ ವ್ಯಾಪಾರವೆಲ್ಲ ನಷ್ಟವಾಗಿ ಬೀದಿಗೆ ಬಂದುಬಿಟ್ಟಿರುವುದಾಗಿ ಅಲವತ್ತುಕೊಂಡ. ಅದನ್ನು ಕೇಳಿದ ಬುದ್ಧ- ‘ಇದೆಲ್ಲ ಮುಂದೆ ಕಳೆದು ಹೋಗುತ್ತದೆ. ತಲೆಕೆಡಿಸಿಕೊಳ್ಳಬೇಡ, ಹೋಗು’ ಎಂದು ಕಳುಹಿಸಿದ. ವರ್ಷಗಳು ಉರುಳಿದವು. ವ್ಯಾಪಾರಿ ಮತ್ತೆ ಕಷ್ಟಪಟ್ಟು ತನ್ನ ವ್ಯವಹಾರವನ್ನು ಕಟ್ಟಿ ನಿಲ್ಲಿಸಿ ಸುಧಾರಿಸಿಕೊಂಡ. ಆಗ ಬುದ್ಧ ನಲ್ಲಿ ಬಂದು ‘ಸ್ವಾಮಿ, ನೀವು ಕಷ್ಟಕಾಲದಲ್ಲಿ ನನಗೆ ಧೈರ್ಯ ತುಂಬಿದಿರಿ. ಈಗ ನೀವು ಹೇಳಿದಂತೆ ಯೇ ಆಗಿದೆ. ನನ್ನ ಕಷ್ಟಗಳೆಲ್ಲ ಕಳೆದಿವೆ. ನಾನು ಮತ್ತೆ ಐಶ್ವರ್ಯ ಪಡೆದಿದ್ದೇನೆ, ಖುಷಿಯಲ್ಲಿದ್ದೇನೆ’ ಎಂದ.
ಬುದ್ಧ ಅದಕ್ಕೆ ಪ್ರತ್ಯುತ್ತರವಾಗಿ ಪುನಃ ಅದನ್ನೇ ಅಂದನಂತೆ- ‘ಇದೆಲ್ಲ ಮುಂದೆ ಕಳೆದುಹೋಗುತ್ತದೆ. ತಲೆಕೆಡಿಸಿಕೊಳ್ಳಬೇಡ, ಹೋಗು’. ಪರಿಸ್ಥಿತಿ ಒಳ್ಳೆಯದಿರಬಹುದು, ಕೆಟ್ಟದ್ದಿರಬಹುದು- ಯಾವುದೂ ಶಾಶ್ವತವಲ್ಲ, ಅಥವಾ ಎಲ್ಲವೂ ಬದಲಾಗುತ್ತವೆ. ಅಂತೆಯೇ ಒಳ್ಳೆಯ ಅಥವಾ ಕೆಟ್ಟ ಅನುಭವದ ನೆನಪು ಕೂಡ ಹಾಗೆಯೇ. ಅವು ಕ್ರಮೇಣ ಮರೆಯಾಗಬೇಕು. ಮರೆತರಷ್ಟೇ ಮುಂದೆ ಸುಲಭ. ನೆನಪಿನ ಪಾಠ ನೆನಪಿರಬೇಕೆ ವಿನಾ ಅನವಶ್ಯಕವೆನಿಸುವ ನೆನಪುಗಳಲ್ಲ ಎಂಬುದು ಇಲ್ಲಿನ ಸೂಕ್ಷ್ಮ.
ಮುಂದಿನ ಬಾರಿ ಕೀಲಿ, ಮೊಬೈಲ, ಪಾಸ್‌ವರ್ಡ್, ವಾಹನ ಪಾರ್ಕ್ ಮಾಡಿದ ಜಾಗ, ದಿನಸಿ ಸಾಮಾನಿನ ಲಿಸ್ಟ್ ಹೀಗೆ ಏನೋ ಒಂದು ಮರೆತುಹೋಯಿತೆಂದಿಟ್ಟುಕೊಳ್ಳಿ. ಅದರ ಬಗ್ಗೆ ತೀರಾ ತಲೆಕೆಡಿಸಿಕೊಳ್ಳಬೇಕಿಲ್ಲ. ಹಾಳಾದ ಮರೆವು ಇಂದು ಬೇಸರಿಸಬೇಕಿಲ್ಲ. ಬದಲಿಗೆ ಮರೆವಿನ ಶಕ್ತಿ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಖುಷಿಪಡಬಹುದು. ಈ ವಿಷಯ ಆಗ ನೆನಪಿಗೆ ಬರಬೇಕಷ್ಟೆ !
ಇದೆಲ್ಲದರ ಹೊರತಾಗಿ ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯ ಯಾವುದೆಂದು ಗುರುತಿಸಿ ಅದನ್ನು ಆಗೀಗ ನೆನಪು ಮಾಡಿಕೊಳ್ಳುವುದು ಒಳ್ಳೆಯದು. ಖುಷಿಯ ಘಟನೆ ಖುಷಿಯನ್ನು ಮರು ಕಳಿಸಬಹುದು, ಉಲ್ಲಾಸ ಹುಟ್ಟಿಸಬಹುದು. ಆದರೆ ಕೆಟ್ಟದ್ದನ್ನು ನೆನಪುಮಾಡಿ ಹುಣ್ಣು ಕೆರೆದು ಕೊಳ್ಳುವುದನ್ನು ಗಮನಿಸಿದಲ್ಲಿ ನಿಲ್ಲಿಸಬಹುದು. ಮನಸ್ಸು ಏನನ್ನು ಯೋಚಿಸುತ್ತಿದೆ ಎಂಬ ನಿರಂತರ ಅರಿವು ಬೆಳೆಸಿಕೊಂಡರೆ ಯಾವುದನ್ನು ನೆನಪಿಟ್ಟುಕೊಳ್ಳಬೇಕೋ ಅದನ್ನಷ್ಟೇ ನೆನಪಿಟ್ಟು ಕೊಳ್ಳಬಹುದು. ಕೆಟ್ಟದ್ದನ್ನು ಮರೆಯಲು ಸಾಧ್ಯವಾಗದಿದ್ದರೂ ನೆನಪಿಸಿ ಹಿಂಸಿಸಿಕೊಳ್ಳುವುದನ್ನು ನಿಲ್ಲಿಸಬಹುದು, ಆ ಮೂಲಕ ಮರೆಯಲು ಅವಕಾಶಮಾಡಿಕೊಳ್ಳಬಹುದು. ಮರೆವು ಒಳ್ಳೆಯದು