ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

R T Vittalmurthy Column: ಸಿದ್ದರಾಮಯ್ಯ-ಡಿಕೆಶಿ ಕ್ಯಾಂಪಿನ ಫ್ರೆಷ್‌ ರಿಪೋರ್ಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಡಿದ ಮಾತನ್ನು ಕೇಳಿ ರಾಜಣ್ಣ ಸುಮ್ಮನೆ ಮುಖ ನೋಡಿದಾಗ ಪುನಃ ಮಾತನಾಡಿದ ಸಿದ್ದರಾಮಯ್ಯ: ‘ನಾನು ಇರಬೇಕೋ ಕೆಳಗಿಳಿಯಬೇಕೋ? ಎರಡರಲ್ಲಿ ಒಂದು ವಿಷಯವನ್ನು ಕನ್ʼಫರ್ಮ್ ಅಗಿ ಹೇಳಿ. ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕು ಎಂಬುದು ನಿಮ್ಮ ಇಚ್ಚೆಯಾದರೆ ನನ್ನ ಸಚಿವ ಸಂಪುಟವನ್ನು ಪುನಾರಚಿಸಲು ಗ್ರೀನ್ ಸಿಗ್ನಲ್ ಕೊಡಿ ಅಂತ ಕೇಳುತ್ತೇನೆ.

ಸಿದ್ದರಾಮಯ್ಯ-ಡಿಕೆಶಿ ಕ್ಯಾಂಪಿನ ಫ್ರೆಷ್‌ ರಿಪೋರ್ಟು

-

ಮೂರ್ತಿಪೂಜೆ

ಕಳೆದ ವಾರ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ‘ಮತ್ತೇನ್ರೀ ರಾಜಣ್ಣ’ ಅಂತ ಸಿದ್ದರಾಮ ಯ್ಯ ಕೇಳಿದರೆ: ‘ಸಾರ್, ನಾನಿವತ್ತು ನಿಮ್ಮ ವಿರುದ್ಧ ಸ್ಟೇಟ್‌ಮೆಂಟ್ ಕೊಟ್ಟಿದ್ದೇನೆ’ ಎಂದರಂತೆ ರಾಜಣ್ಣ.

ಅವರಾಡಿದ ಮಾತು ಕೇಳಿ ಹುಬ್ಬೇರಿಸಿದ ಸಿದ್ದರಾಮಯ್ಯನರು: ‘ನನ್ನ ವಿರುದ್ಧ ಸ್ಟೇಟ್‌ ಮೆಂಟ್ ಕೊಟ್ರಾ, ಅದ್ಯಾಕ್ರೀ ರಾಜಣ್ಣ?’ಅಂತ ಪ್ರಶ್ನಿಸಿದ್ದಾರೆ. ಆಗ ಮರು ಉತ್ತರ ನೀಡಿದ ರಾಜಣ್ಣ: ‘ಹೌದು ಸಾರ್ ಮತ್ತೆ. ಮೊದಲ ಬಾರಿ ಸಿಎಂ ಆದಾಗ ನೀವು ಎಷ್ಟು ಪವರ್ ಫುಲ್ಲಾಗಿ ಇದ್ರಿ? ನೀವು ಏನು ಹೇಳುತ್ತೀರೋ ಅದು ಫೈನಲ್ ಆಗಿರುತ್ತಿತ್ತು. ಆದರೆ ಎರಡನೇ ಬಾರಿ ಸಿಎಂ ಅದ ಮೇಲೆ ನೀವು ಅಸಹಾಯಕರಾಗಿದ್ದೀರಿ.

ನಿಮಗೆ ಯಾರೋ ಮಾಟ-ಮಂತ್ರ ಮಾಡಿಸಿರಬೇಕು. ಇಲ್ಲ ಅಂದ್ರೆ ನೀವೇಕೆ ಅಸಹಾಯಕ ರಾಗುತ್ತೀರಿ? ಹಾಗಂತಲೇ ನಾನು ಈ ಬಗ್ಗೆ ಸ್ಟೇಟ್ ಮೆಂಟ್ ಕೊಟ್ಟಿದ್ದೇನೆ’ ಎಂದಿದ್ದಾರೆ. ಯಾವಾಗ ರಾಜಣ್ಣ ಈ ಮಾತುಗಳನ್ನಾಡಿದರೋ? ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಕಾಲ ಮೌನವಾಗಿದ್ದಾರೆ.

ಆನಂತರ ರಾಜಣ್ಣ ಅವರತ್ತ ನೋಡಿ: ‘ಇರಿ ರಾಜಣ್ಣ, ಸ್ವಲ್ಪ ದಿನ ಮೌನವಾಗಿರಿ. ಐದು ರಾಜ್ಯಗಳ ಎಲೆಕ್ಷನ್ ರಿಸಲ್ಟ್ ಹೇಗಿದ್ದರೂ ಮೇ 4 ರಂದು ಬರುತ್ತಲ್ವಾ? ಆನಂತರ ನಾನೇ ದಿಲ್ಲಿಗೆ ಹೋಗ್ತೀನಿ. ಒಂದಲ್ಲ,‌ ಮೂರ್ನಾಲ್ಕು ದಿನ ಅ ಉಳಿದುಕೊಳ್ತೀನಿ. ಅಧಿಕಾರ ಹಂಚಿಕೆ, ಅದು-ಇದು ಅಂತ ಮಾತಿದೆಯಲ್ವಾ? ಈ ವಿಷಯದಲ್ಲಿ ಒಂದು ಫೈನಲ್ ಸೆಟ್ಲ್ಮೆಂಟ್ ಮಾಡಿಕೊಂಡೇ ಬರುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ: R T Vittalmurthy Column: ಜಮೀರ್‌ ಕೋಟೆಗೆ ʼನಾಹುʼ ಸಾಬ್‌ ಲಗ್ಗೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಡಿದ ಮಾತನ್ನು ಕೇಳಿ ರಾಜಣ್ಣ ಸುಮ್ಮನೆ ಮುಖ ನೋಡಿದಾಗ ಪುನಃ ಮಾತನಾಡಿದ ಸಿದ್ದರಾಮಯ್ಯ: ‘ನಾನು ಇರಬೇಕೋ ಕೆಳಗಿಳಿಯ ಬೇಕೋ? ಎರಡರಲ್ಲಿ ಒಂದು ವಿಷಯವನ್ನು ಕನ್ʼಫರ್ಮ್ ಅಗಿ ಹೇಳಿ. ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕು ಎಂಬುದು ನಿಮ್ಮ ಇಚ್ಚೆಯಾದರೆ ನನ್ನ ಸಚಿವ ಸಂಪುಟವನ್ನು ಪುನಾರಚಿಸಲು ಗ್ರೀನ್ ಸಿಗ್ನಲ್ ಕೊಡಿ ಅಂತ ಕೇಳುತ್ತೇನೆ.

ರಾಹುಲ್ ಗಾಂಧಿ ಏನು ಹೇಳುತ್ತಾರೋ ನೋಡೋಣ. ಹೀಗೆ ನಾನು ಈ ಸಲ ಫೈನಲ್ ಸೆಟ್ಲ್‌ಮೆಂಟ್ ಮಾಡಿಕೊಂಡು, ಎಲ್ಲವನ್ನೂ ಸರಿ ಮಾಡಿಕೊಂಡು ಬರುವ ತನಕ ನೀವೆಲ್ಲ ಮೌನವಾಗಿದ್ದು ಬಿಡಿ’ ಅಂತ ಹೇಳಿದ್ದಾರೆ.

ಯಾವಾಗ ಅವರು ಖಚಿತ ಧ್ವನಿಯಲ್ಲಿ ಈ ಮಾತುಗಳನ್ನು ಹೇಳಿದರೋ? ಅಗ ರಾಜಣ್ಣ ಸ್ವಲ್ಪ ಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲ, ‘ಆಗಲಿ ಸಾರ್, ನೀವು ಹೇಳಿದಂತೆ ಮೌನ ವಾಗಿರುತ್ತೇವೆ’ ಅಂತ ಹೇಳಿ ಅಲ್ಲಿಂದ ವಾಪಸ್ಸು ಬಂದಿದ್ದಾರೆ.

ಸಿದ್ದು-ಡಿಕೆ ಕ್ಯಾಂಪಿನ ರಿಪೋರ್ಟು

ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಕ್ಯಾಂಪುಗಳಿಂದ ಡಿಫರೆಂಟ್ ರಿಪೋರ್ಟು ಹೊರಬರುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಯಾಂಪಿನ ರಿಪೋರ್ಟ್ ಪ್ರಕಾರ: ಮೊನ್ನೆ ದೆಹಲಿಗೆ ಹೋದ ಡಿಕೆಶಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಒಂದೂವರೆ ಗಂಟೆ ಮಾತನಾಡಿದ್ದಲ್ಲದೆ ಖಡಕ್ಕಾಗಿ ತಮ್ಮ ಡಿಮಾಂಡುಗಳ ವಿವರ ನೀಡಿದ್ದಾರೆ.

Screenshot_4

‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೂವರೆ ವರ್ಷಗಳ ನಂತರ ನನಗೆ ಸಿಎಂ ಪಟ್ಟ ಬಿಟ್ಟು ಕೊಡುವ ಬಗ್ಗೆ ಒಪ್ಪಂದವಾಗಿತ್ತು. ಆದರೆ ಮೂರು ವರ್ಷ ವಾಗುತ್ತಾ ಬಂದರೂ ಅಧಿಕಾರ ಬಿಟ್ಟುಕೊಡುವ ಡೇಟು ಫಿಕ್ಸಾಗುತ್ತಿಲ್ಲ. ಆದರೆ ಈ ವಿಳಂಬವನ್ನು ಇನ್ನು ಸಹಿಸಲು ಸಾಧ್ಯವಿಲ್ಲ.

ಹೀಗಾಗಿ ನನಗೆ ಸಿಎಂ ಹುದ್ದೆ ಬಿಟ್ಟುಕೊಡುವ ಡೇಟನ್ನು ಮೇ ಹತ್ತರೊಳಗೆ ಫಿಕ್ಸು ಮಾಡ ಬೇಕು. ಇಲ್ಲದಿದ್ದರೆ ಮುಂದೇನಾಗುತ್ತದೋ ಅದಕ್ಕೆ ನಾನು ಜವಾಬ್ದಾರನಲ್ಲ. ಯಾಕೆಂದರೆ ಈ ವಿಷಯದಲ್ಲಿ ಪಕ್ಷ ತೋರುತ್ತಿರುವ ನಿರ್ಲಕ್ಷ್ಯದಿಂದ ಹಲವು ಶಾಸಕರು ಬೇಸತ್ತಿದ್ದಾರೆ. ಹೀಗಾಗಿ ಅವರು ಯಾವ ನಿಲುವಿಗೆ ಬರುತ್ತಾರೆ ಅಂತ ನಾನು ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಯಾವಾಗ ಡಿಕೆಶಿ ತಮ್ಮ ನಿಲುವನ್ನು ಖಡಕ್ಕಾಗಿ ಹೇಳಿ ಟೈಮು ಫಿಕ್ಸು ಮಾಡಿದರೋ? ಆಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು: ‘ಈಗ ರಾಹುಲ್ ಗಾಂಧಿಯವರು ಪ್ರವಾಸ ದಲ್ಲಿದ್ದಾರೆ. ಅವರು ಬಂದ ನಂತರ ಮಾತನಾಡೋಣ’ ಎಂದು ಹೇಳಿದ್ದಾರೆ.

ಹೀಗೆ ದಿಲ್ಲಿಯಲ್ಲಿ ಡಿಕೆಶಿ ಆರ್ಭಟದ ಎಪಿಸೋಡಿನ ಬಗ್ಗೆ ವಿವರಿಸುವ ಅವರ ಆಪ್ತರು: ಇವತ್ತು ಸಾಹೇಬರು ಇಡುತ್ತಿರುವ ಹೆಜ್ಜೆಗಳನ್ನು ನೋಡಿದರೆ ಅವರ ಕೈಗೆ ‘ಮೇ’ ಫ್ಲವರ್ ಸಿಗುವುದು ಗ್ಯಾರಂಟಿ ಎನ್ನುತ್ತಾರೆ.

ಆದರೆ ಸಿಎಂ ಕ್ಯಾಂಪಿನ ಪ್ರಕಾರ, ‘ಅಧಿಕಾರ ಹಂಚಿಕೆಯ ವಿಷಯದಲ್ಲಿ ರಾಹುಲ್ ಗಾಂಧಿ ಆಸಕ್ತರೇ ಅಲ್ಲ. ಹಾಗೊಂದು ವೇಳೆ ಅವರಿಗೆ ಆಸಕ್ತಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಗ್ನಲ್ಲು ರವಾನಿಸುತ್ತಿದ್ದರು.

ಈಗಿರುವ ಮಾಹಿತಿಯ ಪ್ರಕಾರ: ಜೂನ್, ಜುಲೈ ತಿಂಗಳಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತ್ತು ವಿಧಾನಪರಿಷತ್ತಿನ ಹಲವು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ತನಕ ಕರ್ನಾಟಕದ ಪವರ್ ಪಾಲಿಟಿಕ್ಸ್‌ನ ಉಸಾಬರಿ ರಾಹುಲ್ ಗಾಂಧಿ ಅವರಿಗೆ ಬೇಕಿಲ್ಲ.

ಹೀಗಾಗಿ ‘ಸರ್ಕಾರಕ್ಕೆ ಮೂರು ವರ್ಷ ಭರ್ತಿಯಾದ ಸಂದರ್ಭದಲ್ಲಿ ಸಂಪುಟ ಪುನಾರ್ರಚನೆ ಮಾಡಲು ಅವಕಾಶ ಕೊಡಬೇಕು’ ಎಂದು ಸಿದ್ದರಾಮಯ್ಯ ಮುಂದಿಡುವ ಬೇಡಿಕೆಗೆ ಗ್ರೀನ್ ಸಿಗ್ನಲ್ ದೊರೆಯಲಿದೆ.

ಹಾಗೊಂದು ವೇಳೆ ತಾವೇನಾದರೂ ಅಧಿಕಾರ ಹಂಚಿಕೆಗೆ ರೆಡಿಯಾಗಿ ಎಂದು ಸಿದ್ದರಾಮಯ್ಯ ಅವರಿಗೆ ಸೂಚಿಸಿದರೆ ಅವರು ದುಸರಾ ಮಾತನಾಡದೆ ಒಪ್ಪುತ್ತಾರೆ. ಆದರೆ ಅದೇ ಕಾಲದಲ್ಲಿ ಡಿಕೆಶಿ ಸಿಎಂ ಆಗುವುದನ್ನು ಬಿಲ್ ಕುಲ್ ಒಪ್ಪುವುದಿಲ್ಲ. ಬದಲಿಗೆ ಸಿಎಂ ಹುzಯನ್ನು ಬೇರೊಬ್ಬ ನಾಯಕರಿಗೆ ಕೊಡುವಂತೆ ಪಟ್ಟು ಹಿಡಿಯುತ್ತಾರೆ ಎಂಬುದು ರಾಹುಲ್ ಗಾಂಧಿಯವರಿಗೆ ಗೊತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದು ಪದಚ್ಯುತಿಯೇ ರಾಹುಲ್ ಗಾಂಧಿ ಅವರಿಗೆ ಬೇಕಾಗಿಲ್ಲ. ಹೀಗಾಗಿ ಈ ವಿಷಯದಲ್ಲಿ ಮುಂದುವರಿಯುವುದು, ಅನಗತ್ಯ ಗೋಳು ಸೃಷ್ಟಿ ಮಾಡಿ ಕೊಳ್ಳುವುದು ಅವರಿಗೆ ಬೇಕಿಲ್ಲ ಎಂಬುದು ಸಿದ್ದು ಆಪ್ತರ ಲೇಟೆಸ್ಟು ರಿಪೋರ್ಟು.

ಇದು ಸೀತಾನ್ವೇಷಣೆ ಎಪಿಸೋಡು

ಇನ್ನು ಮೇ ನಾಲ್ಕರ ನಂತರ ದಿಲ್ಲಿಯಲ್ಲಿ ನಡೆಯುವುದೇನು ಅಂತ ಬಣ್ಣಿಸುತ್ತಿರುವ ಸಿಎಂ ಸಿದ್ದರಾಮಯ್ಯ ಕ್ಯಾಂಪು ಇನ್ನೊಂದು ಬೆಳವಣಿಗೆಯ ಬಗ್ಗೆ ಕುತೂಹಲಕಾರಿಯಾಗಿ ಬಣ್ಣಿಸುತ್ತದೆ.

ಅದರ ಪ್ರಕಾರ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಸ್ಟೇಟ್‌ಮೆಂಟುಗಳನ್ನು ಸೀತಾನ್ವೇಷಣೆ ಎಪಿಸೋಡು ಅಂತ ವರ್ಣಿಸುತ್ತದೆ. ಅಂದ ಹಾಗೆ ಇತ್ತೀಚೆಗೆ ಸಚಿವ ಜಾರಕಿಹೊಳಿ ಮತ್ತು ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಚೋದಿಸುವ ಮಾತುಗಳನ್ನಾಡಿದ್ದಾರೆ.

ಈ ಪೈಕಿ ಸತೀಶ್ ಜಾರಕಿಹೊಳಿ ಅವರು: ‘ಸಿಎಂ ಸಿದ್ಧರಾಮಯ್ಯ ಈಗ ಕಾಂಪ್ರಮೈಸ್ ಲೀಡರು’ ಎಂದಿದ್ದರೆ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು: ‘ಸಿದ್ದು ಈಗ ಅಸಹಾಯ ಕರು’ ಅಂತ ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಅವರ ಸಿಟ್ಟಿನ ಹೇಳಿಕೆಗಳಂತೆ ಕಂಡರೂ ಆಳದಲ್ಲಿ ಇದು ಸಿದ್ದರಾಮಯ್ಯ ಅವರನ್ನು ಪ್ರಚೋದಿಸುವ ವಿಧಾನ.

ರಾಮಾಯಣದಲ್ಲಿ ಸೀತಾನ್ವೇಷಣೆ ಎಪಿಸೋಡು ನಡೆಯುತ್ತದಲ್ಲ? ಆ ಸಂದರ್ಭದಲ್ಲಿ ಸೀತೆ, ಲಂಕೆಯಲ್ಲಿರುವ ಮಾಹಿತಿ ದೊರೆಯುತ್ತದೆ. ಆದರೆ ಅಲ್ಲಿಗೆ ಹೋಗಬೇಕೆಂದರೆ ಸಮುದ್ರೋಲ್ಲಂಘನ ಮಾಡಬೇಕು. ಆದರೆ ಲಂಕೆಯವರೆಗೆ ಹಾರುವವರು ಯಾರು? ಹಾಗಂತ ಪ್ರಶ್ನೆ ಎದ್ದಾಗ, ಸುಗ್ರೀವನ ಸೈನ್ಯದ ಅತಿರಥ-ಮಹಾರಥರು ತಾವು ಎಷ್ಟು ದೂರ ಹಾರಬಲ್ಲೆವು ಎಂದು ಹೇಳತೊಡಗು ತ್ತಾರೆ. ಆದರೆ ಲಂಕೆಗೆ ಹೋಗಲು ಅದರಿಂದ ಸಾಧ್ಯ ವಿಲ್ಲ ಎಂದಾಗ ಪ್ರಮುಖರ ಗಮನ ದೂರದಲ್ಲಿ ಕುಳಿತಿದ್ದ ಆಂಜನೇಯನ ಕಡೆ ಹರಿಯು ತ್ತದೆ. ಹೀಗಾಗಿ ಅವನ ಬಳಿ ಧಾವಿಸುವ ಪ್ರಮುಖರು ಆಂಜನೇಯನನ್ನು ಹುರಿದುಂಬಿಸ ತೊಡಗುತ್ತಾರೆ. ‘ನಿನ್ನ ಶಕ್ತಿಯೇನು ಕಡಿಮೆಯೇ’ ಅಂತ ಇವರು ಬಣ್ಣಿಸ ತೊಡಗಿದಾಗ ಆಂಜನೇಯ ಎದೆ ಉಬ್ಬಿಸಿ ನಿಲ್ಲುತ್ತಾನೆ, ಲಂಕೆಗೆ ಹಾರುತ್ತಾನೆ.

ಈ ಎಪಿಸೋಡಿಗೂ ಜಾರಕಿಹೊಳಿ, ರಾಜಣ್ಣ ಅವರ ಮಾತಿಗೂ ಸಂಬಂಧವಿದೆ. ‘ಸಿದ್ದು ಅಸಹಾಯಕರಾಗಿದ್ದಾರೆ. ಕಾಂಪ್ರಮೈಸ್ ಲೀಡರ್ ಆಗಿದ್ದಾರೆ’ ಅಂತ ಅವರು ಇವತ್ತು ಹೇಳುತ್ತಿರುವುದು ಕೂಡಾ ಪ್ರಚೋದನೆಯ ಮಾತು. ಸಿದ್ದರಾಮಯ್ಯ ಅವರಿಗೆ ತಮ್ಮ ಸಾಮರ್ಥ್ಯವನ್ನು ನೆನಪಿಸುವ ಮಾತು.

ಇಂತಹ ಪ್ರಚೋದನೆಯಿಂದ ಸಿದ್ದು ಕೆರಳಿದರೆ ಮುಂದಿನದು ಸಲೀಸು. ಅರ್ಥಾತ್, ದಿಲ್ಲಿಗೆ ಹೋಗಿ ಅವರು ಘರ್ಜಿಸಿದರೆ ಅಧಿಕಾರ ಹಂಚಿಕೆಯ ಮಾತು ಕ್ಷೀಣಿಸುತ್ತದೆ. ಸಂಪುಟ ಪುನಾರಚನೆ ನಿಗದಿಯಾಗುತ್ತದೆ ಎಂಬುದು ಜಾರಕಿಹೊಳಿ, ರಾಜಣ್ಣ ಲೆಕ್ಕಾಚಾರ. ಇದು ಕೂಡಾ ಸೀತಾನ್ವೇಷಣೆ ಎಪಿಸೋಡಿದ್ದಂತೆ ಎಂಬುದು ಸಿದ್ದು ಕ್ಯಾಂಪಿನ ಮಾತು.

ಉತ್ಸವಕ್ಕೆ ಬಿಜೆಪಿ ರೆಡಿ

ಈ ಮಧ್ಯೆ ರಾಜ್ಯ ಬಿಜೆಪಿ ಯಡಿಯೂರೋತ್ಸವಕ್ಕೆ ರೆಡಿಯಾಗಿದೆ. ಮಾಜಿ ಸಿಎ ಯಡಿಯೂ ರಪ್ಪ ಅವರನ್ನು ಅಭಿನಂದಿಸುವ ಈ ಉತ್ಸವವನ್ನು ಸ್ವಲ್ಪ ದಿನ ಮುಂದೂಡುವಂತೆ ಕೆಲ ನಾಯಕರು ಅಭಿಪ್ರಾಯಿಸಿದ್ದರಾದರೂ ನಿಗದಿಯಂತೆ ಮೇ ಒಂಭತ್ತರಂದು ಚಿತ್ರದುರ್ಗ ದಲ್ಲಿ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ.

ಮೂಲಗಳ ಪ್ರಕಾರ, ಬೈ ಎಲೆಕ್ಷನ್ ರಿಸಲ್ಟು ಬಿಜೆಪಿಗೆ ಉಲ್ಟಾ ಆದರೆ? ಎಂಬ ಅನುಮಾನ ದಿಂದ ಕೆಲ ನಾಯಕರು ಉತ್ಸವ ಮುಂದೂಡಿದರೆ ಬೆಟರ್ರು. ಅಂತ ಅಭಿಪ್ರಾಯಿಸಿದ್ದ ರಂತೆ. ಆದರೆ ಬೈ ಎಲೆಕ್ಷನ್ ನಡೆದ ದಾವಣಗೆರೆ ದಕ್ಷಿಣ ಕ್ಷೇತ್ರವಾಗಲೀ, ಬಾಗಲಕೋಟೆ ಕ್ಷೇತ್ರವೇ ಆಗಿರಲಿ. ಇವು ಬಿಜೆಪಿ ಕೈಲಿದ್ದ ಕ್ಷೇತ್ರಗಳಲ್ಲ. ಹೀಗಾಗಿ ರಿಸಲ್ಟು ನಮಗೆ ಉಲ್ಟಾ ಅದರೆ ನಷ್ಟವೇನಿಲ್ಲ. ಇದೇ ರೀತಿ ಕಾಂಗ್ರೆಸ್ ಸರ್ಕಾರ ಆಂತರಿಕ ಸಂಘರ್ಷದಲ್ಲಿ ಬಳಲು ತ್ತಿರುವಾಗ ಈ ಸಂದರ್ಭದಲ್ಲಿ ರಾಜ್ಯದ ಜನರಿಗೆ ಬಿಜೆಪಿ ಪರ್ಯಾಯ ಶಕ್ತಿಯಾಗಿ ಕಾಣಬೇಕು.

ಯಡಿಯೂರಪ್ಪ ಉತ್ಸವ ಇದಕ್ಕೆ ವೇದಿಕೆಯಾಗಬೇಕು ಎಂದು ಬಹುತೇಕರು ಅಭಿಪ್ರಾಯಿ ಸಿದ್ದಾರೆ. ಇದೇ ರೀತಿ ಉತ್ಸವಕ್ಕೆ ಬರಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೇ ಒಂಭತ್ತರ ಡೇಟು ಕೊಟ್ಟಿರುವುದರಿಂದ ಅದನ್ನು ಚೇಂಜು ಮಾಡುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೀಗಾಗಿ ಈ ಎಲ್ಲ ಕಾರಣಗಳು ಸೇರಿ ಉತ್ಸವಕ್ಕೆ ಮೇ ಒಂಭತ್ತರ ಡೇಟು ಫಿಕ್ಸಾಗಿದೆ. ಅಲ್ಲಿಗೆ ಬಿಜೆಪಿ ಚಿತ್ತ ಉತ್ಸವದತ್ತ ಎಂಬುದು ನಿಕ್ಕಿಯಾಗಿದೆ. ಬಿಜೆಪಿ ಮೂಲಗಳ ಪ್ರಕಾರ, ಈ ಉತ್ಸವದ ಯಶಸ್ಸು ಪಕ್ಷಕ್ಕೆ ಮಾತ್ರವಲ್ಲ,ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೂ ಪುಷ್ಟಿ ತುಂಬಲಿದೆ.

ಲಾಸ್ಟ್ ಸಿಪ್: ಇನ್ನು ಕಾಂಗ್ರೆಸ್ ಪಾಲಿಗೆ ಮುಳುವಾಗಲಿದ್ದ ಪರಿಶಿಷ್ಟರ ಒಳಮೀಸಲಾತಿ ಎಪಿಸೋಡು ಸುಖಾಂತ್ಯ ಕಂಡಿದೆ. ಬಲಗೈನವರಿಗೆ ಶೇ. 5.25, ಎಡಗೈನವರಿಗೆ ಶೇ. 5.25 ಮತ್ತು ಪರಿಶಿಷ್ಟರ ಪೈಕಿ ಇತರರಿಗೆ ಶೇ.4.50ರ ಮೀಸಲಾತಿ ಒದಗಿಸುವ ಸಿದ್ದು ಸರ್ಕಾರದ ಕ್ರಮ ರಿಯಲ್ ಮಾಸ್ಟರ್ ಸ್ಟ್ರೋಕ್.

ಮೂಲಗಳ ಪ್ರಕಾರ, ಸರ್ಕಾರಕ್ಕೆ ತಲೆನೋವಾಗಿದ್ದ ಒಳಮೀಸಲಾತಿ ವಿಷಯವನ್ನು ಬಗೆಹರಿಸಲು ಎಲ್ಲ ಪರಿಶಿಷ್ಟ ನಾಯಕರನ್ನು ಕರೆದು ಮಾತನಾಡಬೇಕು ಅಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ್ದರಂತೆ. ಅದರ ಪ್ರಕಾರ ಎಲ್ಲ ಪರಿಶಿಷ್ಟ ನಾಯಕರ ಜತೆ ಮಾತುಕತೆ ನಡೆಸಿ ಸಿದ್ದರಾಮಯ್ಯ ಈ ವಿಷಯ ವನ್ನು ಬಗೆಹರಿಸಿದ್ದಾರೆ. ಆ ಮೂಲಕ ಒಳಮೀಸಲಾತಿ ಹಂಚಿಕೆ ವಿಷಯದಲ್ಲಿ ದೇಶಕ್ಕೆ ಕರ್ನಾಟಕ ರೋಲ್ ಮಾಡೆಲ್ ಅಗಿದೆ.