ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahalli Column: ಹೆರುವುದು ದೈಹಿಕ ಸುಖದ ಕೊನೆ ಫಲಿತಾಂಶವಲ್ಲ !

ಒಳಿತು-ಕೆಡುಕಿನ ನಡುವಿನ ಸಂಘರ್ಷ ಶತಶತಮಾನಗಳಿಂದ ಸಾಗಿ ಬರುತ್ತಿದೆ. ಇಲ್ಲಿ ಈಕ್ವಿಲಿಬ್ರಿಯಂ ತಪ್ಪುವಂತಿಲ್ಲ. ಆದರೆ, ಇಂದೇನಾಗಿದೆ? ಉತ್ತಮರು ಎನಿಸಿಕೊಂಡವರು ಮದುವೆಯಾಗುತ್ತಿಲ್ಲ, ಇನ್ನು ಕೆಲವರು ಮಕ್ಕಳು ಬೇಡ ಎನ್ನುತ್ತಾರೆ. ಎಲ್ಲರೂ ಅವರವರ ಸ್ವಾರ್ಥ ನೋಡಿಕೊಂಡರೆ ಮುಂದಿನ ಭವಿಷ್ಯದ ಕಥೆಯೇನು? ಮೆಲ್ಲಗೆ ಈ ಭೂಮಿ ರಾಕ್ಷಸಿ ಪ್ರವೃತ್ತಿಯ ಜನರ ಕೈ ಸೇರುವುದು ನಿಶ್ಚಿತ.

ಹೆರುವುದು ದೈಹಿಕ ಸುಖದ ಕೊನೆ ಫಲಿತಾಂಶವಲ್ಲ !

-

ವಿಶ್ವರಂಗ

ನಾನು, ನನ್ನ ದೇಹ, ನನಗೆ, ನನ್ನಿಂದ ಎನ್ನುವುದು ಭಾರತೀಯ ಸಂಸ್ಕಾರವಲ್ಲ. ‘ಪರೋಪ ಕಾರಂ ಇದಂ ಶರೀರಂ’ ಎನ್ನುವುದು ಭಾರತೀಯ ಚಿಂತನೆ, ಸಂಸ್ಕಾರ. ನಾವು ಕೇವಲ ನಮಗಾಗಿ ಬದುಕುವುದಿಲ್ಲ, ಕೆಲಸ ಮಾಡುವುದಿಲ್ಲ. ಅಮ್ಮ, ಅಪ್ಪ, ಅಕ್ಕ, ತಂಗಿ, ಹೆಂಡತಿ, ಮಕ್ಕಳು, ಬಂಧು-ಮಿತ್ರರಿಗಾಗಿ ಬದುಕುವುದು ನಮ್ಮ ಬದುಕಿನ ರೀತಿ.

ಭೂಮಿ ಮೇಲೆ ಪ್ರತಿ ದಿನ ಲಕ್ಷಾಂತರ ಜನ ಹುಟ್ಟುತ್ತಾರೆ, ಸಾಯುತ್ತಾರೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೀಗಾಗಿ ಉತ್ತಮರ ಹುಟ್ಟು ಸಂಭ್ರಮಿಸಬೇಕು. ಉತ್ತಮರ ಸಾವಿಗೆ ಸಂತಾಪಪಡಬೇಕು. ಒಬ್ಬ ಉತ್ತಮ ವ್ಯಕ್ತಿ ಯಾವುದೇ ವೃತ್ತಿಯಲ್ಲಿದ್ದರೂ, ಆತ ಇಲ್ಲವಾದಾಗ ಮತ್ತೆ ಅದೇ ಮಟ್ಟದ ವ್ಯಕ್ತಿ ಯನ್ನು ತಯಾರು ಮಾಡಲು ಸಮಾಜಕ್ಕೆ ಕನಿಷ್ಠ 3 ದಶಕ ಸಮಯ ಬೇಕಾಗುತ್ತದೆ.

ಕೆಲವೊಮ್ಮೆ ಅಷ್ಟು ಮೇಧಾವಿ ಸಿಗದೆ ಕೂಡ ಹೋಗಬಹುದು. ಆಗ ಅಂತಹ ವ್ಯಕ್ತಿಯನ್ನು ಭೂಮಿ ಪಡೆದುಕೊಳ್ಳಲು ನೂರಾರು ವರ್ಷ ತೆಗೆದುಕೊಳ್ಳುತ್ತದೆ. ಯಾರಾದರೂ ಉತ್ತಮರು ಸತ್ತಾಗ ಶೋಕಿಸುವುದು ಈ ಕಾರಣಕ್ಕೆ! ಈ ಸಾಮಾನ್ಯಜ್ಞಾನ ಎಲ್ಲರಿಗೂ ಇರಬೇಕು. ನಾನು, ನನ್ನ ದೇಹ, ನನಗೆ, ನನ್ನಿಂದ ಎನ್ನುವುದು ಭಾರತೀಯ ಸಂಸ್ಕಾರವಲ್ಲ. ಅದು ಪಾಶ್ಚಾತ್ಯ ಚಿಂತನೆ. ‘ಪರೋಪಕಾರಂ ಇದಂ ಶರೀರಂ’ ಎನ್ನುವುದು ಭಾರತೀ ಯ ಚಿಂತನೆ, ಸಂಸ್ಕಾರ.

ನಾವು ಕೇವಲ ನಮಗಾಗಿ ಬದುಕುವುದಿಲ್ಲ, ಕೆಲಸ ಮಾಡುವುದಿಲ್ಲ. ಅಮ್ಮ, ಅಪ್ಪ, ಅಕ್ಕ, ತಂಗಿ, ಹೆಂಡತಿ, ಮಕ್ಕಳು, ಬಂಧು-ಮಿತ್ರರಿಗಾಗಿ ಬದುಕುವುದು ನಮ್ಮ ಬದುಕಿನ ರೀತಿ. ಜೀವನ ಶೈಲಿ. ನನ್ನ ಓದುಗರಿಗೆ ಈಗ ನಾನು ಬರೆಯುವ ಸಾಲು ಹೊಸತಲ್ಲ. ಮಕ್ಕಳನ್ನು ಸಾಕುವುದು ಒಂದೆರಡು ದಿನದ ಕೆಲಸವಲ್ಲ, ಅದು ಬರೋಬ್ಬರಿ ಇಪ್ಪತ್ತು ವರ್ಷದ ತಪಸ್ಸು. ಅವರನ್ನು ಈ ಸಮಾಜಕ್ಕೆ ಉತ್ತಮ ನಾಗರಿಕ ರನ್ನಾಗಿ, ಆಸ್ತಿಯನ್ನಾಗಿ ಪರಿವರ್ತಿಸಿ ಬಿಡಬೇಕು.

ಅದು ವರ್ಷದಲ್ಲಿ ಆಗುವ ಮಾತಲ್ಲ. ಕನಿಷ್ಠ ಇಪ್ಪತ್ತು ವರ್ಷ ನಮ್ಮ ವೇಳೆಯನ್ನು ಅವರೊಂದಿಗೆ ಕಳೆಯಬೇಕು. ಅವರನ್ನು ತಿದ್ದಿತೀಡಿ ಸಮಾಜಕ್ಕೆ ಉಪಯೋಗವಾಗು ವಂತಹ ಪ್ರಜೆಗಳನ್ನಾಗಿ ಮಾಡಬೇಕು. ಯಾರಿಗೆ ಗೊತ್ತು ಈ ಭೂಮಿ ನೂರಾರು ವರ್ಷದಿಂದ ಕಾಯುತ್ತಿರುವ ವ್ಯಕ್ತಿ ನಮ್ಮ ಮಗುವಾಗಿರಬಹುದು! ವಜ್ರವನ್ನು ಸಾಣೆ ಹಿಡಿಯದಿದ್ದರೆ ಅದಕ್ಕೂ ಕಲ್ಲಿಗೂ ಹೆಚ್ಚಿನ ವ್ಯತ್ಯಾಸ ವೇನೂ ಕಾಣದು ಎನ್ನುವುದು ನೆನಪಿರಲಿ.

ಇದನ್ನೂ ಓದಿ: Rangaswamy Mookanahalli Column: ಪರಿಪೂರ್ಣತೆ ಬದುಕಿನ ಸಂಕೀರ್ಣತೆಯನ್ನು ಹಿಡಿದಿಡಲಾರದು !

ಮೊದಲೇ ಹೇಳಿದಂತೆ ನಾನು, ನನ್ನದು, ನನಗಾಗಿ ಎನ್ನುವುದು ಮತ್ತು ದೇಹಕ್ಕೆ, ದೇಹಸಿರಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುವುದು ಸ್ವಾರ್ಥದ ಬದುಕು. ಅದು ಪಾಶ್ಚಾತ್ಯ ಜೀವನ ಶೈಲಿ. ಮೂರು ದಶಕಗಳ ಹಿಂದೆಯೆ ಇವತ್ತಿನ ಜೆನ್ ಝಿ ಹೇಳುವ ಮಾತುಗಳನ್ನು ಯೂರೋಪಿನಲ್ಲಿ ಕೇಳಿದ್ದೇನೆ.

ಅವತ್ತಿಗೆ ಅಲ್ಲಿನ ಯುವಕ/ಯುವತಿಯರಿಗೆ ಮಕ್ಕಳು ಬೇಕಿರಲಿಲ್ಲ. ದಶಕಗಳಿಂದ ಜಪಾನ್ ಕೂಡ ಇದೇ ರೀತಿ ಯ ಮನಸ್ಥಿತಿ ಹೊಂದಿರುವ ನಾಗರಿಕರನ್ನು ಸೃಷ್ಟಿಸಿದೆ. ಬಹುತೇಕರಿಗೆ ಸುಖ ಬೇಕು ಆದರೆ ಜವಾಬ್ದಾರಿ ಬೇಡ. ಅನಿದ್ದರೂ ಸ್ವ-ಸುಖವಷ್ಟೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಇರೋ ತನಕ ಮಜಾ ಮಾಡಬೇಕು ಎನ್ನುವುದು ಜೀವನದ ಪರಮ ಉದ್ದೇಶ. ಸಮಾಜಕ್ಕೆ ನಾವು ಉತ್ತಮರನ್ನು ಕೊಡುಗೆಯಾಗಿ ಕೊಟ್ಟು ಹೋಗುವುದು ನಮ್ಮ ಕರ್ತವ್ಯ. ಮಕ್ಕಳನ್ನು ಮಾಡಿಕೊಳ್ಳು ವುದು ಎನ್ನುವುದು ಕೇವಲ ದೈಹಿಕ ಸುಖದ ಕೊನೆ ಪಲಿತಾಂಶವಲ್ಲ, ಅದು ಎಲ್ಲವನ್ನೂ ಮೀರಿದ ಪಾರಮಾರ್ಥಿಕ ಬದುಕು.

ಒಳಿತು-ಕೆಡುಕಿನ ನಡುವಿನ ಸಂಘರ್ಷ ಶತಶತಮಾನಗಳಿಂದ ಸಾಗಿ ಬರುತ್ತಿದೆ. ಇಲ್ಲಿ ಈಕ್ವಿಲಿಬ್ರಿಯಂ ತಪ್ಪುವಂತಿಲ್ಲ. ಆದರೆ, ಇಂದೇನಾಗಿದೆ? ಉತ್ತಮರು ಎನಿಸಿಕೊಂಡವರು ಮದುವೆ ಯಾಗುತ್ತಿಲ್ಲ, ಇನ್ನು ಕೆಲವರು ಮಕ್ಕಳು ಬೇಡ ಎನ್ನುತ್ತಾರೆ. ಎಲ್ಲರೂ ಅವರವರ ಸ್ವಾರ್ಥ ನೋಡಿಕೊಂಡರೆ ಮುಂದಿನ ಭವಿಷ್ಯದ ಕಥೆಯೇನು? ಮೆಲ್ಲಗೆ ಈ ಭೂಮಿ ರಾಕ್ಷಸಿ ಪ್ರವೃತ್ತಿಯ ಜನರ ಕೈ ಸೇರುವುದು ನಿಶ್ಚಿತ.

Screenshot_2

ಇವತ್ತಿನ ಯುವಜನತೆ ಯೋಚಿಸುವಂತೆ ಅವರ ಹೆತ್ತವರು ಯೋಚಿಸಿದ್ದರೆ? ಇಂದು ನಮ್ಮ ಮೇಧಾವಿ ಜೆನ್ ಝಿ ಇರುತ್ತಿರಲಿಲ್ಲ. ಇವತ್ತಿನ ಜೆನ್ ಝಿಗಳು ತಮ್ಮ ಜೀವನವನ್ನು ಪೂರ್ಣವಾಗಿ ಉಪಭೋಗಿಸಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಅವರಿಗೆ ಮದುವೆ, ಮಕ್ಕಳು, ಸಂಸಾರ ಎನ್ನು ವುದು ಜೀವನದ ಉತ್ತಮ 20 ವರ್ಷ ಹಾಳು ಮಾಡುತ್ತದೆ ಎನ್ನುವ ಭಾವನೆಯಿದೆ.

ನೆನಪಿರಲಿ ನಾವು ಈ ಭೂಮಿಗೆ ಬಂದದ್ದಕ್ಕೆ, ಇಲ್ಲಿನ ಸಂಪನ್ಮೂಲ ಬಳಸಿದ್ದಕ್ಕೆ ನೀಡುವ ಪುಟಾಣಿ ಬಾಡಿಗೆ. ಅಷ್ಟೂ ಜವಾಬ್ದಾರಿ ಬೇಡ ಎನ್ನುವ ಇವತ್ತಿನ ಹುಡುಗ/ಹುಡುಗಿಯರ ಮನಃಸ್ಥಿತಿಗೆ ನನ್ನ ಧಿಕ್ಕಾರ. ಇದನ್ನು ಬರೆಯುವುದೋ ಬೇಡವೋ ಎನ್ನುವ ಗೊಂದಲದಲ್ಲಿ ಸುಮ್ಮನಿದ್ದೆ.

ಅದು ಅವರ ವೈಯಕ್ತಿಕ ವಿಷಯ, ಅವರು ಮದುವೆ ಆಗುತ್ತಾರೋ ಇಲ್ಲವೋ, ಮಕ್ಕಳನ್ನು ಮಾಡಿ ಕೊಳ್ಳುತ್ತಾರೋ ಇಲ್ಲವೋ, ಅದರಿಂದ ನನಗೇನು? ಅದು ಸಂಪೂರ್ಣವಾಗಿ ಅವರ ಪರ್ಸನಲ್ ಮ್ಯಾಟರ್! ಅಲ್ವಾ? ಇಲ್ಲ, ಇದೇ ನಾವು ಮಾಡುತ್ತಿರುವ ತಪ್ಪು. ಎಲ್ಲರೂ ಇದೇ ರೀತಿ ಯೋಚಿಸಲು ಶುರು ಮಾಡಿದರೆ? ಎಲ್ಲರೂ ನಮಗೇನು ಎಂದರೆ ಹೇಗಾಗುತ್ತದೆ.

ಸಮಾಜ ಸೃಷ್ಟಿಯಾಗಿರುವುದು ನಮ್ಮಂತಹ ಜನರಿಂದ ಅಲ್ಲವೇ? ಸಮಾಜದಲ್ಲಿ ಯೋಚಿಸುವ ಸಂಖ್ಯೆ ಕಡಿಮೆಯಾಗುತ್ತಿದೆ. ಒಬ್ಬರು ಹೇಳಿದ್ದು, ಮಾಡಿದ್ದು ಸುಲಭ ಎನ್ನಿಸಿದರೆ ಅದನ್ನು ಬೇಗ ತಮ್ಮದಾಗಿಸಿ ಕೊಳ್ಳುತ್ತಾರೆ. ಬೆಳಗ್ಗೆ 4 ಗಂಟೆಗೆ ಏಳಿ, ವ್ಯಾಯಾಮ ಮಾಡಿ, ಪ್ರಾರ್ಥನೆ ಮಾಡಿ ಎನ್ನುವುದು ರುಚಿಸುವುದಿಲ್ಲ.

ಅದೇ ಮದುವೆ, ಸಂಸಾರ ಮಾಡಿಕೊಳ್ಳಬೇಡಿ, ಇರುವುದೊಂದು ಜೀವನ ಮಜಾ ಮಾಡಿ ಎಂದು ಒಮ್ಮೆ ಹೇಳಿ ಸಾಕು, ಅದನ್ನು ಜೆನ್ ಝಿ ಬಹಳ ಬೇಗ ಒಪ್ಪಿಕೊಂಡು ಬಿಡುತ್ತಾರೆ. ಇದೇ ಸರಿ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ನಿಮಗೆ ಗೊತ್ತಿರಲಿ, ಇಂದಿನ ಜನರೇಷನ್ ಮಕ್ಕಳು ನಮಗೆ ಸಿಗುತ್ತಿರುವ ಎಲ್ಲ ಸೌಲಭ್ಯಕ್ಕೂ ನಾವು ಹಕ್ಕು ದಾರರು ಎನ್ನುವಂತೆ ವರ್ತಿಸುತ್ತಿದ್ದಾರೆ.

ನಾವು, ನಮ್ಮದು ಎನ್ನುವ ಜಾಗದಲ್ಲಿ ನಾನು, ನನ್ನದು ಎನ್ನುವ ಸ್ವ-ಸುಖ ಹೆಚ್ಚು ಮನ್ನಣೆ ಪಡೆದು ಕೊಳ್ಳುತ್ತಿದೆ. ಸಮಾಜಕ್ಕೆ ಉತ್ತಮ ಸಂತಾನವನ್ನು ನೀಡಿ ಹೋಗುವುದು ಕರ್ತವ್ಯ ಎನ್ನುವ ಸಾಮಾನ್ಯ ತಿಳಿವಳಿಕೆ ಇಲ್ಲದ ಸ್ವಾರ್ಥ ಬದುಕಿಗೆ ನನ್ನ ಸಂತಾಪಗಳು. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಕಾಣಿಕೆ ನೀಡಲು ಇಪ್ಪತ್ತು ವರ್ಷದ ತಪಸ್ಸಿನ ಅವಶ್ಯಕತೆಯಿದೆ.

ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಕ್ಕಳು ಮಾಡಿ ಕೊಳ್ಳುವ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. ಇದನ್ನು ಮನಗಂಡು ಚಂದ್ರಬಾಬು ನಾಯ್ಡು ಅವರು ಮೂರನೇ ಮಗುವಿಗೆ 30 ಸಾವಿರ ಮತ್ತು ನಾಲ್ಕನೇ ಮಗುವನ್ನು ಮಾಡಿಕೊಂಡರೆ 40 ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ರೀತಿ ಹೇಳುವುದಕ್ಕೆ ಒಂದು ಸರಳ ಲೆಕ್ಕಾಚಾರವಿದೆ. ಗಂಡ-ಹೆಂಡತಿ ದೈಹಿಕವಾಗಿ ಇಲ್ಲವಾದಾಗ ಅವರ ಸ್ಥಾನದಲ್ಲಿ ಕನಿಷ್ಠ ಇಬ್ಬರು ಮಕ್ಕಳಿದ್ದರೆ ಆಗ ಸತ್ತವರ ಜಾಗದಲ್ಲಿ ಅವರು ಇಬ್ಬರನ್ನು ಬಿಟ್ಟು ಹೋದಂತೆ ಆಗುತ್ತದೆ. ಅದು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ. ಅದು ಅದೇ ಜನಸಂಖ್ಯೆ ಉಳಿಸಿಕೊಳ್ಳಲು ಸಹಾಯ ಮಾಡಿದಂತೆ ಆಗುತ್ತದೆ.

ಒಂದು ಮಗುವಿದ್ದರೆ ಅದು ಜನಸಂಖ್ಯೆ ಕುಸಿತಕ್ಕೆ ಕಾರಣವಾಗುತ್ತದೆ. ಮೂರು ಅಥ ವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಂಡರೆ ಮಾತ್ರ ಅದು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಲೆಕ್ಕಾಚಾರದಲ್ಲಿ ದಕ್ಷಿಣ ಭಾರತದ ಫರ್ಟಿಲಿಟಿ 1.5! ಅಂದರೆ ಪ್ರತಿ ಇಬ್ಬರಿಗೆ ಒಂದೂವರೆ ಮಕ್ಕಳು ಸರಾಸರಿ ಲೆಕ್ಕಾಚಾರದಲ್ಲಿ ಜನಿಸುತ್ತಿದ್ದಾರೆ.

ಮೇಲಿನ ಲೆಕ್ಕಾಚಾರದಲ್ಲಿ ಇನ್ನೊಂದು ಸಣ್ಣ ಲೆಕ್ಕಾಚಾರವನ್ನು ಸಹಿತ ನಾವು ಮಾಡಬಹುದು. ಈ ರೀತಿ ಹೆಚ್ಚಿನ ಮಕ್ಕಳನ್ನು ಅಂದರೆ ಮೂರು ಮತ್ತು ನಾಲ್ಕನೇ ಮಕ್ಕಳನ್ನು ಮಾಡಿಕೊಳ್ಳುವವರು ಯಾರು? ಎನ್ನುವುದು ಆ ಪ್ರಶ್ನೆ. ಉತ್ತರವನ್ನು ನಾನಿಲ್ಲಿ ಹೇಳಲು ಹೋಗುವುದಿಲ್ಲ. ಬುದ್ಧಿವಂತ ಓದುಗರಿಗೆ ಅದನ್ನು ಹೇಳುವ ಅವಶ್ಯಕತೆ ಕೂಡ ಇಲ್ಲ.

ಸಮಾಜದಲ್ಲಿ ಉತ್ತಮರ ಸಂಖ್ಯೆ ಕುಸಿಯುತ್ತಾ ಹೋಗುತ್ತದೆ. ಮುಂದಿನ ಮೂರ್ನಾಲ್ಕು ದಶಕದಲ್ಲಿ ಒಳಿತು ಮತ್ತು ಕೆಡುಕಿನ ನಡುವಿನ ಸಂಘರ್ಷ ತಾರಕ್ಕಕೇರುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದೆ. ಹೆಚ್ಚು ಕಲಿತ ವಿದ್ಯಾವಂತ ಮಹಿಳೆಯರು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಲು ಸಿದ್ಧವಿಲ್ಲ. ಕಲಿತ ಪೋಷಕರನ್ನು ಈ ಬಗ್ಗೆ ಕೇಳಿದರೆ, ಇವತ್ತಿನ ಶಿಕ್ಷಣ ವ್ಯವಸ್ಥೆ, ಕೆಲಸ, ಕಠಿಣವಾಗುತ್ತಿರುವ ಬದುಕು ಇವುಗಳ ಕಾರಣ ಹೇಳಿ ಒಂದು ಸಂತಾನ ಸೃಷ್ಟಿಸಿಕೊಂಡಿರುವುದೇ ಅಪರಾಧ ಎನ್ನುವಂತಾಗಿದೆ ಎನ್ನುತ್ತಿದ್ದಾರೆ.

ಇದು ಇವತ್ತಿನ ಸಮಸ್ಯೆಯಲ್ಲ. ಕಳೆದ ಎರಡು ದಶಕದಿಂದ ಒಂದು ಮಗುವನ್ನು ಮಾಡಿ ಕೊಳ್ಳುವುದು ಅತಿ ಸಾಮಾನ್ಯ ಎನ್ನುವಂತಾಗಿದೆ. ಭಾರತದ ಕಥೆ ಹೀಗಾಗಿದೆ ಎಂದ ಮೇಲೆ ಪೂರ್ಣ ಮುಂದುವರಿದ ದೇಶಗಳ ಕಥೆ ಹೇಳುವುದೇ ಬೇಡ. ಇವತ್ತಿಗೆ ಚಂದ್ರಬಾಬು ನಾಯ್ಡು ಅವರು ಮೂರು ಮತ್ತು ನಾಲ್ಕನೇ ಮಗು ಮಾಡಿಕೊಂಡರೆ ಹಣದ ಆಮಿಷ ನೀಡಿದ್ದಾರೆ. ಎರಡು ದಶಕದ ಹಿಂದೆಯೇ ಯೂರೋ ಪಿನ ಸ್ಪೇನ್ ದೇಶದಲ್ಲಿ ಒಂದು ಮಗು ಮಾಡಿಕೊಂಡರೆ ಮೂರು ಸಾವಿರ ಯುರೋ ಹಣ ಕೊಡುವ ಯೋಜನೆ ಜಾರಿಗೆ ತಂದಿದ್ದರು!

ಕೇವಲ ಸಂಖ್ಯೆ ಹೆಚ್ಚಿಸಿಕೊಳ್ಳುವ ದೃಷ್ಟಿಯಲ್ಲಿ ಸಂತಾನ ಅಭಿವೃದ್ಧಿಗೆ ಮುಂದಾಗುವುದು ಕೂಡ ವಿವೇಚನೆಯಿಲ್ಲದ ನಡೆ. ಇಡೀ ಭೂಮಿಯನ್ನು ಆಳುತ್ತಿದ್ದ ಪೆಂಡ ಭೂತಗಳು ಕೂಡ ಅಳಿವಿಗೆ ತುತ್ತಾಗಿರುವುದು ನಮಗೆ ಗೊತ್ತಿರುವ ವಿಚಾರ. ಬದಲಾವಣೆ ಎನ್ನುವುದು ಸಹಜ. ಹೀಗಾಗಿ ಪ್ರತಿ ಐವತ್ತು ಅಥವಾ ನೂರು ವರ್ಷಕ್ಕೆ ಗುರುತಿಸಲು ಅಸಾಧ್ಯ ಎನ್ನುವ ಮಟ್ಟಿನ ಬದಲಾವಣೆ ಆಗುತ್ತಲೆ ಬರುತ್ತಿದೆ. ಹೀಗಾಗಿ ಸಾಮಾನ್ಯಜ್ಞಾನವಿರುವ ಜನ ಸಂಖ್ಯೆ ಹೆಚ್ಚಳವಾಗಬೇಕಿದೆ. ಮನುಷ್ಯ ಹುಟ್ಟಿದ ಮೇಲೆ ಮೂರು ಋಣಗಳನ್ನು ತೀರಿಸಬೇಕಂತೆ ಎಂದು ಶಾಸ್ತ್ರ ಹೇಳುತ್ತದೆ.

೧. ದೈವ ಋಣ

೨. ಮಾತಾ-ಪಿತೃ ಋಣ

೩. ಗುರುವಿನ ಋಣ

ಭಗವಂತ ಅಥವಾ ಬ್ರಹ್ಮವಸ್ತು (ಸಕಲ ಚರಾಚರಗಳಲ್ಲಿ ಅಡಗಿರುವ ಚೈತನ್ಯ) ನಮ್ಮನ್ನು ಈ ಭೂಮಿಗೆ ತಂದಿದೆ. ಅದರ ಹಿಂದೆಯೂ ಯಾವುದೋ ಉದ್ದೇಶ ಇದ್ದೇ ಇದೆ. ಆ ಬ್ರಹ್ಮ ವಸ್ತುವಿನ ಉದ್ದೇಶವನ್ನ ಅರಿತು ಸಕಲ ಜೀವಜಂತುಗಳಿಗೆ ಆನಂದ ನೀಡುವಂತೆ ಬದುಕಿ ನಡೆದರೆ ಅಲ್ಲಿಗೆ ದೈವ ಋಣ ತೀರಿದಂತೆ. ನಮ್ಮ ಹಿಂದಿನ ಪಿತೃಗಳು ಈ ಸಮಾಜಕ್ಕೆ ನಮ್ಮನ್ನು ಕೊಡುಗೆಯಾಗಿ ನೀಡಿದ್ದಾರೆ.

ಅದರಂತೆ ನಾವು ಕೂಡ ಸಮಾಜದ ಉತ್ತಮ ಮುಂದುವರಿಕೆಗಾಗಿ ಉತ್ತಮ ಸಂತಾನವನ್ನು ಈ ಭೂಮಿಗೆ ನೀಡುವುದು ಕೂಡ ನಮ್ಮ ಕರ್ತವ್ಯ. ಆ ಮೂಲಕ ನಾವು ಮಾತಾ-ಪಿತೃಗಳ ಋಣವನ್ನು ತೀರಿಸಬಹುದು. ಆದರೂ ಮನುಷ್ಯ ಕೇವಲ ತಂದೆ ಅಥವಾ ತಾಯಿ ಒಬ್ಬರ ಋಣವನ್ನು ಮಾತ್ರ ತೀರಿಸಬಹುದಂತೆ.

ಯಾಕೆಂದರೆ ಅವನು ತಂದೆಯಾಗ ಬಹುದು ಅಥವಾ ತಾಯಿಯಾಗಬಹುದು. ತಂದೆಯಾದರೆ ತಾಯಿಯ ಋಣ ಬಾಕಿ, ತಾಯಿ ಆದರೆ ತಂದೆಯ ಋಣ ಬಾಕಿ ಉಳಿಯುತ್ತದೆ ಎನ್ನುತ್ತದೆ ಶಾಸ್ತ್ರ. ಹೀಗಾಗಿ ಸಂತಾನದಲ್ಲಿ ಹೆಣ್ಣು- ಗಂಡು ಎರಡೂ ಇದ್ದವರು ಇಬ್ಬರ ಋಣವನ್ನು ತೀರಿಸಿದ ಸಮಾಧಾನ ಪಟ್ಟುಕೊಳ್ಳಬಹುದು.

ಮೇಲಿನ ಲೆಕ್ಕಾಚಾರ ನೋಡಿದಾಗ, ಇದ್ದುದರಲ್ಲಿ ಗುರುವಿನ ಋಣವನ್ನು ತೀರಿಸುವುದು ಸುಲಭ. ಗುರುವಿನಿಂದ ಕಲಿತ ಜ್ಞಾನವನ್ನು ತನ್ನ ಶಿಷ್ಯನಿಗೆ ಅಥವಾ ಮುಂದಿನ ಜನಾಂಗಕ್ಕೆ ವರ್ಗಾಯಿಸಿ ದರೆ ಅದು ಗುರುವಿನ ಋಣವನ್ನು ತೀರಿಸಿದಂತೆ. ಹೀಗಾಗಿ ಈ ಮನುಷ್ಯ ಈ ಮೂರು ಋಣಗಳ ತೀರಿಸುವಿಕೆಗಾಗಿ ತನ್ನ ಮಾನವ ಜನ್ಮವನ್ನು ಸವೆಸಬೇಕು ಎನ್ನುವುದು, ಆ ಮೂಲಕವಾಗಿ ಸತ್ಪ್ರಜೆ ಗಳ ಸೌಖ್ಯಸಮಾಜದ ಸ್ಥಾಪನೆ ಮಾಡುವುದು ಉದ್ದೇಶವಾಗಬೇಕು.

ಬಾಲ್ಯ, ಯೌವ್ವನ, ಮುಪ್ಪು ಮೂರೂ ಅವಸ್ಥೆಗಳಿಗೆ ಅದರದೇ ಆದ ಚೆಂದದ ಗುರಿ, ಉದ್ದೇಶ ಎಲ್ಲ ಇದೆ. ಬಾಲ್ಯದಲ್ಲಿ ಮುದ್ದಾಗಿ ತುಂಟತನದಿಂದ ಎಲ್ಲರ ಮನ ಗೆಲ್ಲುತ್ತೇವೆ. ಯೌವ್ವನದಲ್ಲಿ ವಿದ್ಯೆ, ಉದ್ಯೋಗ, ವಿವಾಹ, ಆ ಬಂಧದಿಂದ ಜನಿಸುವ ಮಕ್ಕಳು, ಈ ಎಲ್ಲದರಿಂದ ಸ್ವತಃ ನಮಗೆ ಮತ್ತು ನಮ್ಮ ಪೋಷಕರಿಗೆ ಸಿಗುವ ಹೆಮ್ಮೆ, ಸಂತೋಷ, ಸಾರ್ಥಕತೆ ನೀಡಬೇಕು, ಪಡೆದುಕೊಳ್ಳಬೇಕು.

ಕೊನೆಗೆ ವೃದ್ಧಾಪ್ಯದಲ್ಲಿ ಈ ಎಲ್ಲ ವ್ಯಾಮೋಹ, ಬಂಧಗಳಿಂದ ಒಂದೊಂದಾಗಿ ಬಿಡಿಸಿಕೊಂಡು ನಿರ್ಲಿಪ್ತರಾಗಿ, ಕೊನೆಯನ್ನು ಸ್ವೀಕರಿಸುವಂಥ ಬಾಳನ್ನು ಬದುಕಬೇಕು. ಪ್ರತಿ ಹಂತಕ್ಕೂ ಒಂದು ಅರ್ಥವಿದೆ. ಇಂಥಾ ಉದಾತ್ತ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಹೊರುವುದು ನೀರಸ ಕೆಲಸವಲ್ಲ. ಅದು ನಮ್ಮೆಲ್ಲರ ಪಾಲಿನ ಪೂಜನೀಯ ಕರ್ತವ್ಯ.