ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಕೊಟ್ಟು ಕಿತ್ತುಕೊಂಡ ಸರಕಾರ, ನೈಜ ಸಾಧಕನಿಗೆ ರಾಜ್ಯೋತ್ಸವ ಪ್ರಶಸ್ತಿ ʼಅಪಚಾರ!

ಹಿಂದಿನಿಂದಲೂ ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ ಪ್ರಭಾವ, ಲಾಬಿ, ಸ್ವಜನಪಕ್ಷಪಾತಗಳು ಕೆಲಸ ಮಾಡಿ ಅನೇಕ ಅನರ್ಹರಿಗೆ ಪ್ರಶಸ್ತಿಗಳು ಸಂದಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂಥ ಸಂದರ್ಭಗಳಲ್ಲ ಸಾರ್ವಜನಿಕ ವಲಯದಲ್ಲಿ ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದರೂ ಸರಕಾರ ಗಳು ಅದನ್ನು ಸಮರ್ಥಿಸಿಕೊಂಡು ಪ್ರಶಸ್ತಿ ಪ್ರದಾನ ಮಾಡಿ ಕೈತೊಳೆದುಕೊಂಡಿದ್ದವು.

ಕೊಟ್ಟು ಕಿತ್ತುಕೊಂಡ ಸರಕಾರ, ನೈಜ ಸಾಧಕನಿಗೆ ರಾಜ್ಯೋತ್ಸವ ಪ್ರಶಸ್ತಿ ʼಅಪಚಾರ!

-

ಕರ್ನಾಟಕ ರಾಜ್ಯದ ಅತ್ಯುನ್ನತ ಮತ್ತು ಗೌರವಾನ್ವಿತ ನಾಗರಿಕ ಗೌರವವಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಇತಿಹಾಸದ ಇತ್ತೀಚೆಗೆ ನಡೆದ ಒಂದು ವಿದ್ಯಮಾನ ಇಡೀ ನಾಡಿನ ಪ್ರಜ್ಞಾವಂತ ನಾಗರಿಕರನ್ನು ತಲೆತಗ್ಗಿಸುವಂತೆ ಮಾಡಿದೆ. ಸಮಾಜ ಸೇವೆ, ಆರೋಗ್ಯ ರಕ್ಷಣೆ ಹಾಗೂ ಜನಪರ ಕಾಳಜಿಯ ಮೂಲಕ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವ ಡಾ.ಜಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಅಧಿಕೃತವಾಗಿ ಘೋಷಿಸಿದ ನಂತರ, ಏಕಾಏಕಿ ಅವರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಅಕ್ಷಮ್ಯ ಅಪಚಾರ.

ಯಾವುದೇ ಒಬ್ಬ ಸಾಧಕನಿಗೆ ಪ್ರಶಸ್ತಿ ನೀಡದೇ ಇರುವುದು ಒಂದು ವಿಚಾರವಾದರೆ, ಸ್ವತಃ ಸರಕಾರವೇ ಗೌರವವನ್ನು ಘೋಷಿಸಿ, ಇಡೀ ನಾಡು ಸಂಭ್ರಮಿಸುವಂತೆ ಮಾಡಿ, ಕೊನೆ ಗಳಿಗೆಯಲ್ಲಿ ಅದನ್ನು ಹಿಂಪಡೆಯುವುದು ಆ ಸಾಧಕನಿಗೆ ಮಾಡುವ ಘೋರ ಅನ್ಯಾಯ ಮತ್ತು ಅಪಮಾನ.

ಹಿಂದಿನಿಂದಲೂ ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ ಪ್ರಭಾವ, ಲಾಬಿ, ಸ್ವಜನಪಕ್ಷಪಾತಗಳು ಕೆಲಸ ಮಾಡಿ ಅನೇಕ ಅನರ್ಹರಿಗೆ ಪ್ರಶಸ್ತಿಗಳು ಸಂದಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂಥ ಸಂದರ್ಭಗಳಲ್ಲ ಸಾರ್ವಜನಿಕ ವಲಯದಲ್ಲಿ ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದರೂ ಸರಕಾರ ಗಳು ಅದನ್ನು ಸಮರ್ಥಿಸಿಕೊಂಡು ಪ್ರಶಸ್ತಿ ಪ್ರದಾನ ಮಾಡಿ ಕೈತೊಳೆದುಕೊಂಡಿದ್ದವು.

ಆದರೆ, ಸಮಾಜಕ್ಕೆ ನಿಜವಾಗಿ ಕಾಯಕಲ್ಪ ನೀಡಿದ, ಸಂಪೂರ್ಣ ಅರ್ಹತೆಯುಳ್ಳ ಒಬ್ಬ ನೈಜ ಸಾಧಕನ ಹೆಸರನ್ನು ಅಧಿಕೃತ ಪಟ್ಟಿಯಲ್ಲಿ ಪ್ರಕಟಿಸಿ, ಆನಂತರ ತಾಂತ್ರಿಕ ನೆಪವೊಡ್ಡಿ ಅದನ್ನು ಹಿಂಪಡೆದು ಅವಮಾನಿಸಿದ ಕೆಟ್ಟ ನಿದರ್ಶನ ರಾಜ್ಯೋತ್ಸವ ಪ್ರಶಸ್ತಿಯ ಇತಿಹಾಸದ ಬಹುಶಃ ಇದೇ ಮೊದಲು. ಇದು ಕೇವಲ ಒಬ್ಬ ವ್ಯಕ್ತಿಗೆ ಆದ ನೋವಲ್ಲ, ಇಡೀ ಪ್ರಶಸ್ತಿಯ ಪಾವಿತ್ರ್ಯಕ್ಕೇ ತಗುಲಿದ ಕಳಂಕ.

ಇದನ್ನೂ ಓದಿ: Vishweshwar Bhat Column: ಬ್ರೆಂಡನ್ ಗಿಲ್ ನೆನಪು

ಡಾ.ಜಿ.ಎಸ್.ಚಂದ್ರಶೇಖರ್ ಅವರ ವಿಷಯದಲ್ಲಿ ಎದ್ದು ಕಾಣುತ್ತಿರುವುದು ಅವರ ಸೇವಾ ಅರ್ಹತೆಯ ಕೊರತೆಯಲ್ಲ, ಬದಲಿಗೆ ಆಡಳಿತ ವ್ಯವಸ್ಥೆಯ ಅಕ್ಷಮ್ಯ ಎಡವಟ್ಟು. ಪ್ರಶಸ್ತಿ ಪಟ್ಟಿಯಲ್ಲಿ ಅವರ ‘ಜಿ’ ಅಥವಾ ಪ್ರಾದೇಶಿಕ ಸಮತೋಲನದ ಗೊಂದಲ ಉಂಟಾಗಿತ್ತೇ ಹೊರತು, ಅವರ ನಿಸ್ವಾರ್ಥ ಸಾಧನೆಯಗಲೀ, ಸಮಾಜಮುಖಿ ಸೇವೆಯಗಲೀ ಕಿಂಚಿತ್ತೂ ಕೊರತೆಯಿರಲಿಲ್ಲ. ಹಿರಿಯ ವೈದ್ಯರಾಗಿ, ಸಮಾಜ ಸೇವಕರಾಗಿ ನೂರಾರು ಬಡವರ ಬದುಕಿಗೆ ಆಸರೆಯಾಗಿ ನಿಂತಿರುವ ಅವರ ಅರ್ಹತೆ ಮತ್ತು ಯೋಗ್ಯತೆಗಳು ಯಾವುದೇ ಪ್ರಶಸ್ತಿಗಿಂತಲೂ ಮಿಗಿಲಾದವು. ಜಿಲ್ಲೆಯ ಹೊಂದಾಣಿಕೆಯ ಹೆಸರಿನಲ್ಲಿ ಅವರ ಅರ್ಹತೆಯನ್ನೇ ಬಲಿಕೊಟ್ಟ ಸರಕಾರದ ಈ ನಿರ್ಧಾರವು ನಿಜವಾದ ಪ್ರತಿಭೆ ಮತ್ತು ಸಾಧನೆಗೆ ಮಾಡಿದ ಬಹಿರಂಗ ಅವಮಾನವಾಗಿದೆ.

ಒಬ್ಬ ವ್ಯಕ್ತಿಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿ ಘೋಷಣೆಯಾದಾಗ ಅವರ ಕುಟುಂಬ, ಸ್ನೇಹಿತರು, ಹಿತೈಷಿಗಳು ಹಾಗೂ ಅವರು ಮಾಡಿದ ಸೇವೆಯಿಂದ ಉಪಕೃತರಾದ ಸಮಾಜದ ಜನರಲ್ಲಿ ಉಂಟಾಗುವ ಸಂಭ್ರಮ ಅಪಾರವಾದದ್ದು. ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತದೆ, ಮಾಧ್ಯಮಗಳಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಕೊಂಡಾಡುತ್ತಾರೆ. ಅಂಥ ಉತ್ತುಂಗದ ಸಂತಸದ ಕ್ಷಣದಲ್ಲಿ, ಯಾವುದೇ ಮುನ್ಸೂಚನೆಯಿಲ್ಲದೆ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದೆ ಎಂದು ಪ್ರಕಟಿಸು ವುದು ಆ ಸಾಧಕನ ಎದೆಯ ಮೇಲೆ ಚಪ್ಪಡಿ ಎಳೆದಂತಾಗುತ್ತದೆ.

Notice ok

ಇದು ಸಮಾಜದ ಮುಂದೆ ಅವರನ್ನು ಅಪರಾಧಿಯಂತೆ ನಿಲ್ಲಿಸುವ, ಅವರ ಸ್ವಾಭಿಮಾನವನ್ನು ಧೂಳೀಪಟ ಮಾಡುವ ಘೋರ ಅಪಚಾರವಲ್ಲದೆ ಮತ್ತೇನು?

ನಮ್ಮ ಸಂಸ್ಕೃತಿಯಲ್ಲಿ ಊಟಕ್ಕೆ ಕುಳಿತ ವ್ಯಕ್ತಿಯನ್ನು ಅರ್ಧದ ಎಬ್ಬಿಸುವುದು ಅಥವಾ ಪಂಕ್ತಿಭೇದ ಮಾಡುವುದು ಅತ್ಯಂತ ಹೇಯ ಕೃತ್ಯವೆಂದು ಪರಿಗಣಿಸಲಾಗುತ್ತದೆ. ಸರಕಾರ ಮಾಡಿರುವ ಈ ಕೆಲಸವು ಸಾಂಸ್ಕೃತಿಕವಾಗಿ ಪಂಕ್ತಿಯಿಂದ ಎಬ್ಬಿಸಿದಷ್ಟೇ ಘೋರ ಅವಮಾನ. ಡಾ.ಚಂದ್ರಶೇಖರ್ ಅವರಿಗೆ ಪ್ರಶಸ್ತಿ ಘೋಷಿಸಿದ ಬಳಿಕ ಯಾವುದೇ ಗೊಂದಲಗಳಿದ್ದರೂ ಸರಕಾರ ಅದನ್ನು ಆಡಳಿತಾತ್ಮಕವಾಗಿ ಸರಿದೂಗಿಸಬೇಕಿತ್ತೇ ಹೊರತು, ಪ್ರಶಸ್ತಿಯನ್ನೇ ಹಿಂಪಡೆಯುವ ಹೇಯ ಕೃತ್ಯಕ್ಕೆ ಕೈಹಾಕಬಾರದಿತ್ತು.

ಜಿಲ್ಲಾ ಕೋಟಾ ಅಥವಾ ತಾಂತ್ರಿಕ ಕಾರಣಗಳು ಸರಕಾರದ ಆಂತರಿಕ ಲೋಪಗಳೇ ಹೊರತು, ಅದಕ್ಕೆ ಸ್ವತಂತ್ರವಾಗಿ ಸೇವೆ ಸಲ್ಲಿಸಿದ ಸಾಧಕರು ಹೊಣೆಯಾಗಲು ಹೇಗೆ ಸಾಧ್ಯ?

ಈ ಅನಿರೀಕ್ಷಿತ ಅವಮಾನದಿಂದಾಗಿ ಡಾ. ಚಂದ್ರಶೇಖರ್ ಅವರ ಮನಸ್ಸಿನಲ್ಲಿ ಎಂಥ ಆಘಾತ, ನೋವು ಮತ್ತು ವೇದನೆ ಉಂಟಾಗಿರ ಬಹುದು ಎಂಬುದನ್ನು ಸರಕಾರ ಮತ್ತು ಸಮಾಜ ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಸಮಾಜಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಪ್ರಚಾರದ ಹಂಬಲವಿಲ್ಲದೆ ಕೆಲಸ ಮಾಡಿದ ಒಬ್ಬ ಹಿರಿಯ ಜೀವಕ್ಕೆ ವ್ಯವಸ್ಥೆ ನೀಡಿದ ಬಹುಮಾನವೇ ಈ ಅಪಮಾನವೇ? ಮಾನಸಿಕವಾಗಿ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ, ಜೀವಮಾನದ ತಪಸ್ಸಿನಂತಿದ್ದ ಸೇವಾ ಮನೋಭಾವಕ್ಕೆ ಕೊಡಲಿ ಪೆಟ್ಟು ಹಾಕುವ ಇಂಥ ಘಟನೆಗಳು ಸಮಾಜದಲ್ಲಿ ಸದ್ದಿಲ್ಲದೆ ಸೇವೆ ಮಾಡುವ ಅದೆಷ್ಟೋ ನಿಸ್ವಾರ್ಥ ಮನಸ್ಸುಗಳನ್ನು ಹತಾಶೆ ಗೊಳಿಸುತ್ತವೆ.

ಪ್ರಶಸ್ತಿಗಳು ಸಾಧಕರ ಘನತೆಯನ್ನು ಹೆಚ್ಚಿಸಬೇಕೇ ವಿನಃ ಅವರ ಸ್ವಾಭಿಮಾನಕ್ಕೆ ಕೊಳ್ಳಿ ಇಡಬಾರದು. ಸರಕಾರದ ಇಂಥ ಬೇಜವಾಬ್ದಾರಿ ನಡೆಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯ ಮೇಲಿದ್ದ ಜನಸಾಮಾನ್ಯರ ಗೌರವ ಮತ್ತು ವಿಶ್ವಾಸಾರ್ಹತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪ್ರಶಸ್ತಿ ಸಮಿತಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನ, ಪರಿಶೀಲನೆಯ ಕೊರತೆ ಹಾಗೂ ರಾಜಕೀಯ ಒತ್ತಡಗಳ ಫಲವಾಗಿ ಇಂದು ಒಬ್ಬ ಅರ್ಹ ಸಾಧಕ ಸಾರ್ವಜನಿಕವಾಗಿ ತಲೆತಗ್ಗಿಸು ವಂತಾಗಿದೆ.

ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಸಾಧಕನ ಹೆಸರನ್ನೇ ಅಳಿಸಿ ಹಾಕಿದ್ದು ವ್ಯವಸ್ಥೆಯ ನಿರ್ದಯ ಮುಖವನ್ನು ಅನಾವರಣಗೊಳಿಸಿದೆ.

ಸರಕಾರಕ್ಕೆ ತನ್ನ ತಪ್ಪಿನ ಅರಿವಾಗಿದ್ದರೆ ತಕ್ಷಣವೇ ಎಚ್ಚೆತ್ತುಕೊಂಡು ಡಾ.ಜಿ.ಎಸ್.ಚಂದ್ರಶೇಖರ್ ಅವರಲ್ಲಿ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸ ಬೇಕು. ಕೇವಲ ತಾಂತ್ರಿಕ ನೆಪಗಳನ್ನು ಮುಂದಿಟ್ಟು ಕೊಂಡು ಕೈತೊಳೆದುಕೊಳ್ಳುವ ಬದಲು, ಅವರ ನಿಸ್ವಾರ್ಥ ಸೇವೆಗೆ ತಕ್ಕ ಮನ್ನಣೆ ನೀಡಿ ಅವರ ಘನತೆಯನ್ನು ಮರುಸ್ಥಾಪಿಸುವ ಕೆಲಸವಾಗ ಬೇಕು. ಮುಂದೆಂದೂ ಇಂಥ ಅವಿವೇಕದ ಮತ್ತು ಅಮಾನವೀಯ ಪ್ರಮಾದಗಳು ಮರುಕಳಿಸದಂತೆ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ದೋಷಮುಕ್ತಗೊಳಿಸಬೇಕಿದೆ. ಅರ್ಹ ನ್ನು ಗೌರವಿಸುವುದು ಸರಕಾರದ ಕರ್ತವ್ಯವೇ ಹೊರತು, ಅವರನ್ನು ಅಪಹಾಸ್ಯಕ್ಕೀಡುಮಾಡುವ ಹಕ್ಕು ಯಾವ ವ್ಯವಸ್ಥೆಗೂ ಇಲ್ಲ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಅಪಸವ್ಯ ಮತ್ತು ಅಸಹ್ಯದ ನಡೆಯನ್ನು ಸರಿಪಡಿಸಬೇಕು. ಡಾ.ಚಂದ್ರಶೇಖರ ಅವರಿಗೆ ನ್ಯಾಯ ಒದಗಿಸಬೇಕು.