Shishir Hegde Column: ಯಃಕಶ್ಚಿತ್ ಮುತ್ತು ಕೊಟ್ಟದ್ದಕ್ಕೆ ಕಲ್ಲು ಹೊಡೆದು ಕೊಂದರೆ ?
ವರದಿಗಳು ಹೇಳುವಂತೆ ಅವರಿಬ್ಬರೂ ಪರಸ್ಪರ ಚುಂಬಿಸಿದ್ದಂತೆ. ಜಸ್ಟ್ ಆ ಕಿಸ್! ಸೌದಿ ಅರೇಬಿಯಾದ ಇಸ್ಲಾಮಿಕ್ ಕಾನೂನಿನಲ್ಲಿ ಶಿಕ್ಷೆ ಪ್ರಕ್ರಿಯೆ ಮೂರು ಪ್ರಕಾರ. ಮೊದಲನೆಯದು ‘ಹುದೂದ್’. ಇಂತಿಂಥದ್ದಕ್ಕೆ ಇಂತಿಂಥದ್ದು ಎಂಬ ಪೂರ್ವನಿಗದಿತ ಶಿಕ್ಷೆಗಳು. ಪಿಕ್ ಪಾಕೆಟ್ ಮಾಡಿದರೆ ಇದು, ವಿವಾಹದಾಚೆಯ ಸಂಬಂಧಕ್ಕೆ, ಡಕಾಯತಿಗೆ, ಹೆಂಡ ಕುಡಿದರೆ, ಹರಾಮಿ ಕೆಲಸ ಮಾಡಿದರೆ- ಹೀಗೆ ಒಂದೊಂದಕ್ಕೆ ಒಂದೊಂದು ಶಿಕ್ಷೆ
-
ಶಿಶಿರಕಾಲ
ಅಷ್ಟಕ್ಕೂ ಇದೇ ಘಟನೆ ಅಯೋಧ್ಯೆಯ ಶ್ರೀರಾಮ ಮಂದಿರದ ಅಥವಾ ತಿರುಪತಿ ತಿಮ್ಮಪ್ಪನ ಸನ್ನಿಧಾನ ದೊಳಗೋ ನಡೆದಿದ್ದರೆ ಏನಾಗುತ್ತಿತ್ತು? ಹೊಸತಾಗಿ ಮದುವೆಯಾದ ಜೋಡಿ ದೇವಸ್ಥಾನದ ಆವಾರದಲ್ಲಿ ಚುಂಬಿಸಿದರೆ, ಪ್ರೇಮಿಗಳಿಬ್ಬರು, ಗಂಡು- ಹೆಣ್ಣು ಸಾಮೀಪ್ಯದಲ್ಲಿ ಸಭ್ಯವಲ್ಲದ ರೀತಿಯಲ್ಲಿ ವ್ಯವಹರಿಸಿದರೆ ಏನಾಗುತ್ತಿತ್ತು? ಹೆಚ್ಚೆಂದರೆ ದೇವಸ್ಥಾನದ ಆಡಳಿತ ಅವರನ್ನು ಕೆಲಸದಿಂದ ಹೊರ ಹಾಕಿ ಸುಮ್ಮನಾಗು ತ್ತಿದ್ದರು. ಇಲ್ಲವೇ ಪೊಲೀಸರಿಗೆ ಅವರನ್ನು ಒಪ್ಪಿ ಸುತ್ತಿದ್ದರು. ಪೊಲೀಸರು ಅವರನ್ನು ಕರೆಯಿಸಿ ಆವಾಜ್ ಹಾಕಿ ಕಳುಹಿಸುತ್ತಿದ್ದರು. ಕೇಸ್ ದಾಖಲು ಮಾಡಿಕೊಳ್ಳಲೇಬೇಕು ಎಂದು ದೇವಸ್ಥಾನದವರೇ ಗಲಾಟೆ ಎಬ್ಬಿಸಿದರೆ, ಅವರಿಬ್ಬರ ಮೇಲೆ ಸೆಕ್ಷನ್ 296 ಪ್ರಕಾರ ಒಂದು ಕೇಸ್ ದಾಖಲು ಆಗುತ್ತಿತ್ತು.
ಆಮೇಲೆ ಅದು ಯಾವತ್ತೋ ಸಾಬೀತಾದಲ್ಲಿ ಮೂರು ತಿಂಗಳ ಜೈಲು- ಒಂದು ಸಾವಿರ ರೂಪಾಯಿ ದಂಡ ಬೀಳುತ್ತಿತ್ತು. ಅಬ್ಬಬ್ಬಾ ಎಂದರೆ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆಯಾಗುತ್ತಿತ್ತು. ಅಷ್ಟೆ. ಕೆಲ ದಿನಗಳ ಹಿಂದೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಇಂಥದ್ದೇ ಘಟನೆ ನಡೆಯಿತು. ಬಾಂಗ್ಲಾದೇಶದ ಪ್ರಜೆಗಳು- ನಜ್ರುಲ್ ಇಸ್ಲಾಂ ಮತ್ತು ಮಹಿಳೆ ಸ್ವೀಟಿ ಅಕ್ತರ್- ಪವಿತ್ರ ಮೆಕ್ಕಾದ ಮಸೀ ದಿಯ ಆವಾರದಲ್ಲಿ ಅನುಚಿತ ವಾಗಿ ವ್ಯವಹರಿಸಿದ್ದರಂತೆ. ಅದು ಬಹುಶಃ ಚಕ್ ಟಿವಿಯಲ್ಲಿ ದಾಖಲಾಗಿದೆ.
ವರದಿಗಳು ಹೇಳುವಂತೆ ಅವರಿಬ್ಬರೂ ಪರಸ್ಪರ ಚುಂಬಿಸಿದ್ದಂತೆ. ಜಸ್ಟ್ ಆ ಕಿಸ್! ಸೌದಿ ಅರೇಬಿಯಾದ ಇಸ್ಲಾಮಿಕ್ ಕಾನೂನಿನಲ್ಲಿ ಶಿಕ್ಷೆ ಪ್ರಕ್ರಿಯೆ ಮೂರು ಪ್ರಕಾರ. ಮೊದಲನೆಯದು ‘ಹುದೂದ್’. ಇಂತಿಂಥದ್ದಕ್ಕೆ ಇಂತಿಂಥದ್ದು ಎಂಬ ಪೂರ್ವನಿಗದಿತ ಶಿಕ್ಷೆಗಳು. ಪಿಕ್ ಪಾಕೆಟ್ ಮಾಡಿದರೆ ಇದು, ವಿವಾಹದಾಚೆಯ ಸಂಬಂಧಕ್ಕೆ, ಡಕಾಯತಿಗೆ, ಹೆಂಡ ಕುಡಿದರೆ, ಹರಾಮಿ ಕೆಲಸ ಮಾಡಿದರೆ- ಹೀಗೆ ಒಂದೊಂದಕ್ಕೆ ಒಂದೊಂದು ಶಿಕ್ಷೆ. ಎರಡನೆಯದು ‘ಕೀಸಾಸ್’. ಕೊಲೆ, ದೇಹಕ್ಕೆ ಹಾನಿ ಇತ್ಯಾದಿ ಸಂದರ್ಭದಲ್ಲಿ ಇದು ಲಾಗು. ಇಲ್ಲಿ ಅನ್ಯಾಯಕ್ಕೊಳಗಾದವರು, ಕೊಲೆಯಾದಲ್ಲಿ ಅವರ ಕುಟುಂಬದವರು ಅಪರಾಧಿಯಿಂದ ಇಂತಿಷ್ಟು ಎಂದು ಹಣ ಪಡೆಯಬಹುದು. ಅಥವಾ ಅಪರಾಧಿಯನ್ನು ಕ್ಷಮಿಸಬಹುದು ಇತ್ಯಾದಿ.
ಇದನ್ನೂ ಓದಿ: Shishir Hegde Column: ಇನ್ನೆರಡು ವಾರದಲ್ಲಿ ಅಮೆರಿಕಾದ ಮಧ್ಯಂತರ ಚುನಾವಣೆ !
ಮೂರನೆಯದೇ ‘ತಾಹೀರ್’- ಮೋಸ, ವಂಚನೆ, ಅಥವ ಯಾವುದೇ ದೊಡ್ಡ ಅಪರಾಧಕ್ಕೆ ನ್ಯಾಯಾಧೀಶ ಶಿಕ್ಷೆಯನ್ನು ವಿವೇಚನೆಯ ಪ್ರಕಾರ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ರಕರಣದಲ್ಲಿ ನ್ಯಾಯಾಧೀಶ ಅವರಿಬ್ಬರಿಗೆ ಮರಣದಂಡನೆ ವಿಧಿಸಿದ. ಅದನ್ನು ಅಲ್ಲಿನ ರಾಜಸ್ಥಾನವೂ ಒಪ್ಪಿಗೆ ಸೂಚಿಸಿತು. ಘಟನೆ ಯಾವಾಗ ನಡೆಯಿತು ಎನ್ನುವುದು ಗೊತ್ತಿಲ್ಲ, ಆದರೆ ಇವರನ್ನು ಆಗ ತಿಂಗಳಲ್ಲಿ ಬಂಧಿಸಲಾಗಿತ್ತು. ಎರಡೇ ತಿಂಗಳಲ್ಲಿ, ಬಾಂಗ್ಲಾದೇಶಕ್ಕೆ ಸಹ ತಿಳಿಸದೆ ಅವರಿಬ್ಬರನ್ನು ಕಲ್ಲು ಹೊಡೆಯಲಾಯಿತೋ ಅಥವಾ ತಲೆ ಕಡಿಯಲಾಯಿತೋ ಗೊತ್ತಿಲ್ಲ. ಅಪರಾಧ ಮತ್ತು ಶಿಕ್ಷೆಯ ವಿವರಣೆಯನ್ನು ಬಾಂಗ್ಲಾದೇಶಕ್ಕೆ ಸೌಜನ್ಯಕ್ಕೂ ವಿವರಿಸಿದಂತಿಲ್ಲ.
ಮರಣದಂಡನೆ. ಒಬ್ಬ ವ್ಯಕ್ತಿ ಬದುಕಲು ಅರ್ಹನಲ್ಲ ಎಂದು ವ್ಯವಸ್ಥೆ, ಸಮಾಜ ನಿರ್ಧರಿಸುವ ಕಾನೂನು. ಇದು ಮಾನವೀಯವೋ ಅಮಾನವೀಯವೋ? ಮರಣ ದಂಡನೆಯ ಸುದ್ದಿಯಾದಾಗಲೆಲ್ಲ ಇಂತಹ ಕೆಲವು ವಿಚಾರಗಳು ಚರ್ಚೆಗೆ ಬರುತ್ತವೆ. ಶಿಕ್ಷಿಸಬಹುದು, ಜೈಲಿಗೆ ಹಾಕಬಹುದು, ದಂಡ- ಬಹಿಷ್ಕಾರ ಇತ್ಯಾದಿ ಹಾಕಬಹುದು. ಆದರೆ ಜೀವ ಪಡೆಯುವ ಅಧಿಕಾರ ಯಾವುದೇ ಕಾನೂನಿಗೆ ನೀಡುವುದು ಸರಿಯೇ? ಹಿಂದಿನ ತಿಂಗಳು ಅಮೆರಿಕಾದ ಟೆನೆಸ್ಸಿ ರಾಜ್ಯದಲ್ಲಿ ಈ ಘಟನೆ ನಡೆಯಿತು. ಕ್ರಿಸ್ಟಾ ಪೈಕ್ ಎಂಬ ಮಹಿಳೆ ಹೈಸ್ಕೂಲ್ನಲ್ಲಿರುವಾಗ ತನ್ನ ಸಹಪಾಠಿ ಯನ್ನು ಅಸೂಯೆಯ ಕಾರಣಕ್ಕೆ ಕೊಲೆ ಮಾಡಿದ್ದಳು.
ಇದು ನಡೆದದ್ದು 1995ರಲ್ಲಿ. ಬರೋಬ್ಬರಿ ಮೂವತ್ತು ವರ್ಷದ ಹಿಂದೆ! ನ್ಯಾಯಾಲಯ ಅವಳಿಗೆ ಮರಣದಂಡನೆ ವಿಧಿಸಿತ್ತು. ಮೇಲ್ಮನವಿ, ಕ್ಷಮಾದಾನ ಇದೆಲ್ಲ ಪ್ರಕ್ರಿಯೆ ಮುಗಿದು, ಮೂರು ದಶಕದ ನಂತರ- ಹಿಂದಿನ ತಿಂಗಳು ಅವಳಿಗೆ ಮರಣದಂಡನೆ ಎಂದಾಯಿತು. ಟೆನೆಸ್ಸಿ ರಾಜ್ಯದ ಕಾನೂನಿನ ಪ್ರಕಾರ ಅವಳಿಗೆ ವಿಷದ ಇಂಜೆಕ್ಷನ್ ನೀಡುವುದು ನಿರ್ಧಾರವಾಯಿತು. ಮುಹೂರ್ತ (!) ನಿಗದಿಯಾಯಿತು ಮತ್ತು ಅವಳಿಗೆ ಎರಡು ಡೋಜ್ ವಿಷದ ಇಂಜೆಕ್ಷನ್ ನೀಡಲಾಯಿತು. ಅವಳು ಗಟ್ಟಿ ಜೀವ. ಸಾಯಲಿಲ್ಲ- ಬದಲಿಗೆ ಕೋಮಾ ತಲುಪಿದಳು.
ದೋಷಪೂರಿತ- ವಿಫಲ ಮರಣದಂಡನೆ- Botched Execution. ದೇಶಾದ್ಯಂತ ಸುದ್ದಿಯಾಯಿತು. ಕೆಲವೇ ನಿಮಿಷಗಳ ಹಿಂದೆ ವಿಷಪೂರಿತ ಇಂಜೆಕ್ಷನ್ ನೀಡಿದ ಅದೇ ವೈದ್ಯರು ಅವಳ ಜೊತೆ ಆಂಬ್ಯುಲೆ ನಲ್ಲಿ ಕೂತು ಪ್ರಾಣ ಉಳಿಸಲು ಏಗುತ್ತಿದ್ದರು. ಇಡೀ ವೈದ್ಯಕೀಯ ವ್ಯವಸ್ಥೆ ಅವಳನ್ನು ಬಚಾವ್ ಮಾಡಲು ಹಗಲಿರುಳು ಶ್ರಮವಹಿಸಿತು.
ಸುದ್ದಿ ವಾಹಿನಿಗಳು ಅವಳ ದೇಹ ಸ್ಥಿತಿಯನ್ನು ಕ್ಷಣಕ್ಷಣ ಬಿತ್ತರಿಸಿದವು. ಅವಳು ಅಂದುಕೊಂಡಂತೆ ಸಾಯಲಿಲ್ಲ ಎಂದು ಘಟನೆಯನ್ನು ವಿವರಿಸುವಾಗ ಜೈಲರ್ ‘ಇದೊಂದು ಬಹಳ ದುಃಖಕರ ವಿಚಾರ’ ಎಂದರು! ಕೊನೆಗೂ ಅವಳು ಬಚಾವ್ ಆಗಿ ಬಂದಳು. ಅಷ್ಟಕ್ಕೂ ಬದುಕಿಸಿದ್ದೇಕೆ? ಅವಳಿಗೆ ಇನ್ನೊಂದು ದಿನ ಸದ್ಯದ ನಿಗದಿಯಾಗಬೇಕಿದೆ. ಇಲ್ಲಿ ಸೌದಿ ಮತ್ತು ಅಮೆರಿಕಾದ ಎರಡು ಘಟನೆಗಳ ವೈರುಧ್ಯಗಳನ್ನು ಸ್ವಲ್ಪ ಗಮನಿಸಿ. ವಿಶೇಷವಾಗಿ ಎರಡನೇ ಘಟನೆಯಲ್ಲಿ ಏರ್ಪಟ್ಟ ದ್ವಂದ್ವ- ಮಾನವೀಯ ವೈರುಧ್ಯಗಳನ್ನು ಕೂಡ ಗಮನಿಸಿ. ಇಲ್ಲಿ ಏಳುವ ಪ್ರಶ್ನೆಗಳನ್ನು ಕೂಡ! ಮರಣ ದಂಡನೆ- ಬಹಳ ಹಳೆಯ ಪ್ರಕಾರದ ಶಿಕ್ಷೆ. ನಮ್ಮಲ್ಲಿ ಮರಣದಂಡನೆ ಎಂದರೆ ಬ್ರಿಟೀಶರು ಬಿಟ್ಟು ಹೋದ ಕೊಲೋನಿಯಲ್ ಪದ್ಧತಿ- ಗಲ್ಲು ಶಿಕ್ಷೆ. Hanging by the neck until death.
ನಮ್ಮಲ್ಲಿನ ಮರಣದಂಡನೆಯ ತಯಾರಿಯನ್ನು ಬರೆದರೆ ಅದುವೆ ಒಂದು ಲೇಖನವಾದೀತು. ಮೊದಲಿಗೆ ಆ ವ್ಯಕ್ತಿಗೆ ಇಂತಹ ದಿನ, ಘಳಿಗೆ ಎಂದು ತಿಳಿಸಲಾಗುತ್ತದೆ. ಅವನಿಗೆ ಡೆತ್ ವಾರೆಂಟ್ ಓದಿ ವಿವರಿಸಿ ಹೇಳಲಾಗುತ್ತದೆ. ನಂತರ ಕುಟುಂಬದವರನ್ನು ಭೇಟಿಯಾಗಲು ಅವಕಾಶ. ಈ ಸಮಯ ದಲ್ಲಿಯೇ ವಿಲ್- ಆಸ್ತಿ ಪರಭಾರೆ ಇತ್ಯಾದಿ ಮಾಡಿಕೊಳ್ಳಬಹುದು. ಹಿಂದಿನ ದಿನ-ರಾತ್ರಿ ಕುಣಿಕೆ ಯಾಗುವ ಹಗ್ಗವನ್ನು ಸರಿಯಾಗಿ ಜಾರಬೇಕೆಂದು ಬಾಳೆಹಣ್ಣು, ಅಥವಾ ವ್ಯಾಧಿ, ಬೆಣ್ಣೆ ಬಳಿಯಲಾಗುತ್ತದೆ.
ಹಗ್ಗದ ಅಳತೆ ದೇಹದ ತೂಕದ ಪ್ರಕಾರ ಇಂತಿಷ್ಟು ಎತ್ತರದ ಕುಣಿಕೆ. ಜಾಸ್ತಿ ಎತ್ತರದ ಕುಣಿಕೆಯಾದರೆ ಕುತ್ತಿಗೆ ಮುರಿದೀತು, ಕಡಿಮೆಯಾದರೆ ದೇಹ ಬದುಕೀತು ಎಂಬೆ ಲೆಕ್ಕಾಚಾರ. 1991ರಲ್ಲಿ ಕಾಶ್ಮೀರ ದಂದು ಘಟನೆ ನಡೆಯಿತು. ರಾಜ ಗೋಪಾಲ್ ನಾಯರ್ ಆಸ್ತಿ ವಿವಾದದಲ್ಲಿ ತನ್ನ ಸಹೋದರ ಮತ್ತು ತಂದೆಯನ್ನೇ ಕೊಂದಿದ್ದ. ಅವನಿಗೆ ಗಲ್ಲು ಶಿಕ್ಷೆ ನಿಗದಿಯಾಗಿತ್ತು. ಆ ದಿನ ಗಲ್ಲುಗಾರ ಹಗ್ಗ ತಯಾರಿ ಮಾಡಿಕೊಂಡು ಬಂದಿದ್ದ. ಇನ್ನೇನು ರಾಜಗೋಪಾಲ್ ನಾಯರ್ ಗೆ ಮುಸುಕು ಹಾಕಿ- ಲೆವೆರ್ ಎಳೆದರಾಗಿತ್ತು. ಅಷ್ಟರಲ್ಲಿ ಹ್ಯಾಂಗ್ ಮ್ಯಾನ್- ಗಲ್ಲುಗಾರ ಗಾಬರಿಗೊಂಡು ತಲೆ ತಿರುಗಿ ಬಿದ್ದುಬಿಟ್ಟ!
ಅಲ್ಲಿ ಮ್ಯಾಜಿಸ್ಟ್ರೇಟ್, ಪೊಲೀಸ್ ಅಧಿಕಾರಿ ಹೀಗೆ ಹಲವಾರು ಜನರಿದ್ದರು- ಆದರೆ ಯಾರೂ ಆ ಲೆವೆರ್ ಎಳೆಯುವಂತಿಲ್ಲ. ಆಮೇಲೆ ಇನ್ನೊಂದು ದಿನ ಅವನನ್ನು ಗಲ್ಲಿಗೇರಿಸಲಾಯಿತು. ನಮ್ಮಲ್ಲಿ ಮರಣ ದಂಡನೆಯ ಬಗ್ಗೆ ಸುಪ್ರೀಂ ಕೋರ್ಟ್ ‘ಅತ್ಯಂತ ಅಪರೂಪದ’ ಅಪರಾಧಕ್ಕಷ್ಟೇ ಗಲ್ಲಿಗೇರಿಸಬಹುದು ಎಂದು ಹೇಳುತ್ತದೆ. ಭಾರತದಲ್ಲಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ 2020ರಲ್ಲಿ ನೀಡಿದ ಗಲ್ಲುಶಿಕ್ಷೆಯ ನಂತರ ಇಲ್ಲಿಯವರೆಗೆ ಯಾರನ್ನೂ ಕುಣಿಕೆಗೆ ಬಿಗಿದಿಲ್ಲ.
ಸುಪ್ರೀಂ ಕೋರ್ಟ್ ಇತ್ತೀಚೆ- ಗಲ್ಲು ಶಿಕ್ಷೆಗಿಂತ ಅಮೆರಿಕಾದವರ ರೀತಿ ವಿಷದ ಇಂಜೆಕ್ಷನ್ ಕೊಡುವುದು ವಾಸಿ ಎಂದು ಅಭಿಪ್ರಾಯ ನೀಡಿದ್ದರೂ- ಆ ವಿಷ- ವಿಷಯ ಮುಂದುವರಿದಿಲ್ಲ. ಅಮೆರಿಕಾದಲ್ಲಿ ಮರಣದಂಡನೆ ಎಂದರೆ ನಮ್ಮಲ್ಲಿಗಿಂತ ಭಿನ್ನ. ಇಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರು ವುದು ವಿಷದ ಇಂಜೆಕ್ಷನ್. ದೇಹದ ಅಳತೆ ಇತ್ಯಾದಿಯ ಪ್ರಕಾರ ವೈದ್ಯರು ಎಷ್ಟು ಪ್ರಮಾಣದ ವಿಷ ನೀಡಬೇಕೆಂದು ನಿರ್ಧರಿಸುತ್ತಾರೆ, ಮಂಚಕ್ಕೆ ಕೈಕಾಲು ಕಟ್ಟಿ ವಿಷದ ಇಂಜೆಕ್ಷನ್ ನೀಡಲಾಗುತ್ತದೆ. ಮತ್ತು ಬರುವ, ಪ್ಯಾರಾಲಿಸಿಸ್ ಆಗುವ ಮತ್ತು ಹೃದಯ ನಿಲ್ಲುವ ಮೂರು ವಿಷಗಳನ್ನು ಸೇರಿಸಿ ನೀಡಲಾಗುತ್ತದೆ.
ಇಲ್ಲಿ ಗಲ್ಲುಗಾರನ ಕೆಲಸ ಜೀವ ಉಳಿಸಲು ಪ್ರಮಾಣ ಮಾಡಿದ ವೈದ್ಯರಿಗೆ. ಎರಡನೆಯದು ಎಲೆಕ್ಟ್ರಿಕ್ ಚೇರ್. ಲೋಹದ ಕುರ್ಚಿಯಲ್ಲಿ ಕೂರಿಸಿ, ಲೋಹದ ಶಿರಸಾಣ ಹಾಕಿ ಎರಡೂವರೆ ಸಾವಿರ ವೋಲ್ಟೇಜ್ ವಿದ್ಯುತ್ ಹರಿಸುವುದು. ಇಲ್ಲಿ ಗಲ್ಲುಗಾರ ಇಲೆಕ್ಟ್ರೀಷಿಯನ್! ಕೆಲವು ರಾಜ್ಯಗಳಲ್ಲಿ ಗ್ಯಾಸ್ ಚೇಂಬರ್ ಪದ್ಧತಿಯೂ ಇದೆ. ವ್ಯಕ್ತಿಯನ್ನು ಚಿಕ್ಕ ಕೊನೆಯಲ್ಲಿ ಕೂರಿಸಿ ಸೈನೈಡ್ ಗ್ಯಾಸ್ ಬಿಡುವುದು. ನಾಲ್ಕನೆಯದು -ಸಿ. ಐದನೆಯದು ಫೈರಿಂಗ್ ಸ್ಕ್ವಾಡ್. ಅಪರಾಧಿ ಯನ್ನು ನಿಲ್ಲಿಸಿ ಮೂರು ಅಥವಾ ಐದು ಜನರು ಗುಂಡಿಕ್ಕಿ ಕೊಲ್ಲುವ ಪದ್ಧತಿ. ಸೈನ್ಯದಲ್ಲಿ ಅಪರಾಧ ಎಸಗಿದವರಿಗೆ ಯೂರೋಪಿಯನ್ನರು ಯುದ್ಧ ನೆಲದಲ್ಲಿ ಈ ರೀತಿ ಮರಣ ದಂಡನೆ ನೀಡುತ್ತಿದ್ದರು. ಅದು ವಿಶ್ವಯುದ್ಧದ ನಂತರ ಕೂಡ ಅಮೆರಿಕಾದಲ್ಲಿ ಮುಂದುವರಿದುಕೊಂಡು ಬಂದಿದೆ.
ಬಂದೀಖಾನೆಯ ಪೊಲೀಸರೇ ಇಲ್ಲಿ ಈ ಕೆಲಸ ಪೂರೈಸಬೇಕು! ಅಮೆರಿಕಾದ ಹೆಚ್ಚಿನ ರಾಜ್ಯಗಳಲ್ಲಿ ಮರಣದಂಡನೆಗೆ ಒಳಗಾಗುವ ಅಪರಾಧಿ ಈ ನಾಲ್ಕೈದರಲ್ಲಿ ಯಾವುದು ಉತ್ತಮವೆನಿಸುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು! ಎಲೆಕ್ಟ್ರಿಕ್, ಫಾಸಿ, ವಿಷದ ಇಂಜೆಕ್ಷನ್ ಇವೆಲ್ಲ ಎಡವಟ್ಟಾ ಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಕೆಲವರು ಫೈರಿಂಗ್ ಸ್ಕ್ವಾಡ್ ಆಯ್ಕೆ ಮಾಡಿಕೊಳ್ಳುವವರಿ ದ್ದಾರೆ.
ಯಾವ ಆಯ್ಕೆ ಉತ್ತಮ- ಯಾವುದು ಹೇಗೆ ಎಂಬೆ ವಿವರಣೆ ನೀಡಿ ಮಾಡುವ, ಉತ್ತಮ ಆಯ್ಕೆಯಲ್ಲಿ ಸಹಾಯ ಕೌನ್ಸೆಲಿಂಗ್ ವ್ಯವಸ್ಥೆ ಕೂಡ ಇಲ್ಲಿದೆ. ಮೆಕ್ಕಾದಲ್ಲಿಯೇ ಇನ್ನೊಂದು ಘಟನೆ ಹಿಂದೆ ನಡೆದಿತ್ತು. 1979ರಲ್ಲಿ ಭಯೋತ್ಪಾದಕ ಗುಂಪೊಂದು ಮೆಕ್ಕಾವನ್ನು, ಮಸೀದಿಯನ್ನು ವಶಪಡಿಸಿ ಕೊಂಡುಬಿಟ್ಟಿತ್ತು!
ಅಲ್ಲಿ ರಕ್ತಪಾತವೇ ಅಂದು ಹರಿದಿತ್ತು. ಸುಮಾರು ಒಂದು ಸಾವಿರ ಹೆಣ ಬಿದ್ದಿತ್ತು. ಆ ಪ್ರತ್ಯೇಕತಾ ವಾದಿಗಳ ಗುಂಪಿನ ಮುಖ್ಯಸ್ಥ ಮತ್ತು ಹಿಡಿದ 63 ಮಂದಿಯನ್ನು ಸೌದಿಯ ನಗರಗಳ ಮಧ್ಯಭಾಗ ದಲ್ಲಿ, ಅದರಲ್ಲಿ ಸುಮಾರು ಹದಿನೈದು ಮಂದಿಯನ್ನು ಮೆಕ್ಕಾದ ಬೀದಿಯಲ್ಲಿ, ಸಾರ್ವಜನಿಕರ ಎದುರೇ ಖಡ್ಗದಿಂದ ತಲೆ ಕಡಿದು ಮರಣದಂಡನೆ ನೀಡಲಾಯಿತು. ಕಲ್ಲು ಹೊಡೆದು ಕೊಲ್ಲುವುದು, ಖಡ್ಗದಲ್ಲಿ, ಗುಂಡು ಹೊಡೆದು ಇತ್ಯಾದಿ ಸಾರ್ವಜನಿಕ ಮರಣದಂಡನೆ ಭಾರತೀಯರ ಮಟ್ಟಿಗೆ ಅನ್ಯಗ್ರಹದವರ ಕೆಲಸವೆಂದೆನಿಸಿದರೂ ಅದೇ ಮನುಷ್ಯ ಕಟ್ಟಿಕೊಂಡ ವ್ಯವಸ್ಥೆಯಲ್ಲಿ- ಇನ್ನೊಂದು ಜಾಗದಲ್ಲಿ ಅದು ಪ್ರಶ್ನಾರ್ಹವೇ ಅಲ್ಲ.
2009. ಅಮೆರಿಕಾದ ಟೆಕ್ಸಾಸ್ನ ಮಿಲಿಟರಿ ಕೇಂದ್ರದಿಂದ ಸೈನಿಕರು ಇರಾಕ್ ಮತ್ತು ಅಫ್ಘಾನಿಸ್ತಾನದ ಯುದ್ಧನೆಲಕ್ಕೆ ವರ್ಗಾವಣೆಯಾಗುವವರಿದ್ದರು. ಕೊನೆಯ ಹಂತವಾಗಿ ಅವರ ದೈಹಿಕ ಮತ್ತು ಮಾನಸಿಕ ಪರೀಕ್ಷೆ ಬಾಕಿಯಿತ್ತು. ಆಗ ಅಲ್ಲಿ ವೈದ್ಯ ನಡಾಲ್ ಹಸನ್ ಮನಶಾಸ್ತ್ರಜ್ಞನಾಗಿ ಕೆಲಸ ಮಾಡುತ್ತಿದ್ದ. ಅಷ್ಟರೊಳಗೇ ಅವನು ಇಸ್ಲಾಂ ಭಯೋತ್ಪಾದಕನಾಗಿಬಿಟ್ಟಿದ್ದ ಎಂದು ಯಾರಿಗೂ ಅಂದಾಜಿರಲಿಲ್ಲ. ಆತ ಅಂದು ಹನ್ನೆರಡು ಸೈನಿಕರು ಮತ್ತು ಒಬ್ಬ ಸಹಾಯಕಿ, 13 ಜನರನ್ನು ಗುಂಡು ಹಾರಿಸಿ ಕೊಂದ. ಸುಮಾರು 30 ಮಂದಿ ತೀವ್ರ ಗಾಯಗೊಂಡರು. ಅವನ ಮರಣದಂಡನೆ ಇನ್ನೇನು ಕೆಲವು ದಿನಗಳಲ್ಲಿ ನಡೆಯಲಿದೆ.
ಆದರೆ ತಿಂಗಳ ಹಿಂದೆ ಅಮೆರಿಕಾದ ಸೇನಾ ಕಾರ್ಯದರ್ಶಿ- ಈ ವ್ಯಕ್ತಿಗೆ ಸಾರ್ವಜನಿಕವಾಗಿ ಗುಂಡಿಕ್ಕಿ ಮರಣದಂಡನೆ ನೀಡಲಾಗುವುದು, ಮತ್ತು ಅದನ್ನು ಲೈವ್ ಸ್ಟ್ರೀಮ್ ಮಾಡಲಾಗುವುದು ಎಂದದ್ದು ಸಾಕಷ್ಟು ಸಂಚಲನ ಮೂಡಿಸಿತ್ತು. ಇಲ್ಲಿ ಈಗ ಮಧ್ಯಾವಧಿ ಚುನಾವಣೆ. ಡೊನಾಲ್ಡ್ ಟ್ರಂಪ್ ಕೂಡ, ‘ಹಾಗೆ ಮಾಡುವುದೇ ಸರಿ, ಅದುವೆ ಸಮಾಜಕ್ಕೆ ಸರಿಯಾದ ಸಂದೇಶ’ ಎಂದದ್ದೂ ಆಯ್ತು. ಆಮೇಲೆ ಈ ಭಯೋತ್ಪಾದಕ ವ್ಯಕ್ತಿ ವೀಲ್ ಚೇರ್ನಲ್ಲಿದ್ದಾನೆ- ಅವನ ಕಾಲುಗಳಿಗೆ ಸ್ವಾಮ್ಯವಿಲ್ಲ ಎನ್ನುವುದು ತಿಳಿಯಿತು. ಆಗ ಈ ಫೈರಿಂಗ್ ಸ್ಕ್ವಾಡ್- ಗುಂಡು ಹೊಡೆದು ಕೊಲ್ಲುವುದನ್ನು ಲೈವ್ ಬಿತ್ತರಿಸುವು ದಿಲ್ಲ ಎಂದು ಟ್ರಂಪ್ ಹೇಳಿದ್ದಾನೆ.
ಅವನ ಮುಹೂರ್ತ ಇನ್ನೂ ಫಿಕ್ಸ್ ಆಗಬೇಕಿದೆ. ಜಪಾನಿನಲ್ಲಿ ಮರಣದಂಡನೆ ಇಂತಹ ದಿನ ಎಂದು ಅದೇ ದಿನ ಬೆಳಿಗ್ಗೆ ಜೈಲಿಗೆ ಮತ್ತು ವ್ಯಕ್ತಿಗೆ ತಿಳಿಸಲಾಗುತ್ತದೆಯಂತೆ. ಅದಾಗಿ ಕೆಲವೇ ಗಂಟೆಗಳಲ್ಲಿ ಎಲ್ಲವೂ ನಡೆದುಹೋಗುತ್ತದೆ. ಆಮೇಲೆ ವಿಷಯ ಬಹಿರಂಗವಾಗುತ್ತದೆ. ಇದಕ್ಕೊಂದು ಸೂಕ್ಷ್ಮ ಕಾರಣವಿದೆ. ಏನೆಂದರೆ ವ್ಯಕ್ತಿಗೆ ಮರಣವೇ ದಂಡ- ಶಿಕ್ಷೆ. ನಾಳೆ ಸಾಯುತ್ತೇನೆ ಎಂಬ ಜೀವ ಭಯ ಶಿಕ್ಷೆಯ ಭಾಗವಲ್ಲ. ಅದನ್ನು ಆದಷ್ಟು ತಗ್ಗಿಸಬೇಕು ಎನ್ನುವ ದ್ವಂದ್ವ ಜೀವಪ್ರೇಮ. ಅಷ್ಟಾದರೂ ಜೀವಪರ.
ಜಗತ್ತಿನಲ್ಲಿ ಪ್ರಸ್ತುತ 195 ದೇಶಗಳಿವೆ. ಅದರಲ್ಲಿ 145 ದೇಶಗಳು ಈಗಾಗಲೇ ಮರಣದಂಡನೆ ಕೈಬಿಟ್ಟು ಕಾಲವೇ ಆಗಿದೆ. ಕೆಲವು ದೇಶಗಳಲ್ಲಿ ಕಾನೂನಿನಲ್ಲಿ ಅಂಥದ್ದೊಂದು ಅವಕಾಶವಿದ್ದರೂ ಅಲ್ಲಿನ ಕಾನೂನು ಇದನ್ನು ಬಳಸುವುದಿಲ್ಲ. ವಕೀಲರು ಅದೆಷ್ಟೇ ವಾದಮಾಡಲಿ, ಅಪರಾಧ ಎಂಥದ್ದೇ ಇರಲಿ. ಇನ್ನೂರು, ಮುನ್ನೂರು, ಐದುನೂರು ವರ್ಷ ಹೀಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಅಷ್ಟು ವರ್ಷ ಅಕಸ್ಮಾತ್ ಬದುಕಿದರೆ ಎಂದಲ್ಲ. ಯಾರು ಅಷ್ಟು ವರ್ಷ ಬದುಕುತ್ತಾರೆ? ಸಾಮಾನ್ಯ ವಾಗಿ ಮರಣವಾದ ಕೂಡಲೇ ಶಿಕ್ಷೆ ಅಲ್ಲಿಗೆ ನಿಲ್ಲುತ್ತದೆ- ಕಾಗದಪತ್ರದಲ್ಲಿ ಮಾತ್ರ ಮುಂದಿನ ಶಿಕ್ಷೆ ಮುಂದುವರಿಯುತ್ತದೆ.
ಒಟ್ಟಾರೆ ಬದುಕಿರುವಲ್ಲಿಯವರೆಗೂ ಶಿಕ್ಷೆ. ಅದುವೆ ಮರಣದಂಡನೆಗಿಂತ ದೊಡ್ಡದೆಂಬ ನಿಲುವೇ? ಮರಣ ದಂಡನೆ ಉಳಿಸಿಕೊಂಡ 50 ದೇಶಗಳಲ್ಲಿ- ಮರಣ ದಂಡನೆ ಹಿಂದಿನ ವರ್ಷ ನೀಡಿದ ದೇಶ ಕೇವಲ 17. ದಿನಗಳೆದಂತೆ ಒಂದೊಂದೇ ದೇಶ ಇಂಥದ್ದೊಂದನ್ನು ಕೈಬಿಡುತ್ತಿದೆ. ಇರಾನ್, ಸೌದಿ ಮೊದಲಾದ ಇಸ್ಲಾಮಿಕ್ ಕಾನೂನುಗಳಿರುವ ಕೆಲವೇ ದೇಶಗಳಲ್ಲಿ ಕ್ರೂರ ಮರಣದಂಡನೆಗಳು ಚಾಲ್ತಿಯಲ್ಲಿವೆ.
ಉಳಿದಂತೆ ಮರಣದಂಡನೆ ಉಳಿಸಿಕೊಂಡ ಹೆಚ್ಚಿನ ದೇಶಗಳು ಮರಣದಂಡನೆ ಮಾನವೀಯ ವಾಗಿರಬೇಕು, ನೋವಾಗಬಾರದು- ಇಲ್ಲಿ ಸಾವು ಮಾತ್ರ ಉದ್ದೇಶ ಎನ್ನುವಂತೆ ದ್ವಂದ್ವಗಳ ಜೊತೆಯೇ ವ್ಯವಹರಿಸುತ್ತವೆ. ಮರಣ ದಂಡನೆಯ ವಿಚಾರ ಬಂದಾಗ ಕೆಲವೊಂದಿಷ್ಟು ಪ್ರಶ್ನೆಗಳು ಸಹಜ. ಮರಣದಂಡನೆ ಆ ವ್ಯಕ್ತಿಗೆ ಶಿಕ್ಷೆಯೋ? ಶಿಕ್ಷೆ ಬದುಕುಳಿದವರಿಗೆ ಪಾಠವೋ? ಈ ವ್ಯಕ್ತಿ ಸಮಾಜದಲ್ಲಿ ಬದುಕುಳಿಯಲು ಅನರ್ಹ, ಸಮಾಜಕ್ಕೆ ಹಿಂದಿರುಗಿದರೆ ಇನ್ನಷ್ಟು ಹಾನಿಯಾಗ ಬಹುದು ಎಂಬ ಕಾರಣಕ್ಕೆ ಮರಣ ದಂಡನೆಯೋ? ಅಥವಾ ಉಳಿದವರು ಹೀಗೊಂದು ಕೆಲಸ ಮಾಡಲು ಹಿಂಜರಿಕೆ ಹುಟ್ಟಿಸಲು ಇಂಥದ್ದೊಂದು ಶಿಕ್ಷೆಯೋ? ಅಪರಾಧಕ್ಕೆ ಕಾನೂನು, ಸಭ್ಯ ವ್ಯವಸ್ಥೆ ಮಾಡುವ ಪ್ರತೀಕಾರ ಈ ಶಿಕ್ಷೆಯೋ? ಅಥವಾ ಎಲ್ಲಾ ಕಾರಣವನ್ನೂ ಸೇರಿಸಿ ಈ ದಂಡನೆಯೋ? ಅಥವಾ ಕಾನೂನಿನ ಭಯ ಜೀವಂತವಾಗಿಡಲು, ಎಚ್ಚರ ಹಿಗ್ಗಿಸಲು ಈ ವ್ಯವಸ್ಥೆ ಯೋ? ಮೆಕ್ಕಾದಲ್ಲಿ ನಡೆದ ಘಟನೆಯನ್ನೇ ತೆಗೆದುಕೊಂಡಾಗ ಈ ಪ್ರಶ್ನೆಗಳೇ ನಮ್ಮೊಳಗಿನ ಮಾನವೀಯತೆಯನ್ನು ಕೆಣಕುತ್ತವೆ. ಅದುವೆ ನಿರ್ಭಯಾ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆಯಾ ದರೆ ಅದೇ ಮಾನವೀಯತೆ ಸಮಾಧಾನವನ್ನು ಅನುಭವಿಸುತ್ತದೆ. ಮೆಕ್ಕಾದಲ್ಲಿ ಅವನು ಅವಳಿಗೆ ಯಃಕಶ್ಚಿತ್ ಮುತ್ತು ಕೊಟ್ಟದ್ದೋ- ಅಥವಾ ಅದಕ್ಕಿಂತ ಮುಂದಿನದು ನಡೆಯಿತೋ, ಏನೋ ಒಂದು. ಅವರಿಬ್ಬರೂ ಯಾರನ್ನೂ ಕೊಂದಿಲ್ಲವಲ್ಲ.
ತನಿಖೆ, ಇತ್ಯರ್ಥ ಎರಡೇ ತಿಂಗಳೊಳಗೆ ಎಲ್ಲವನ್ನೂ ನಿರ್ಧರಿಸಿ ಜೀವ ತೆಗೆಯುವ ಇದು ದೊಡ್ಡ ಅಪರಾಧವೇ? ಅವರನ್ನು ಹೇಗೆ ಕೊಲ್ಲಲಾಯಿತು ಎನ್ನುವುದು ಇಂದಿಗೂ ನಿಗೂಢ- ಗೌಪ್ಯ. ಅಕ್ಷಮ್ಯ ಅಪರಾಧ ಮಾಡಿzರೆ ಎನ್ನುತ್ತಾರೆ- ಏನೆಂದು ಹೇಳುವುದಿಲ್ಲ. ಆದರೆ ಶಿಕ್ಷಿಸಿದ್ದು ಹೌದೆನ್ನುವುದು ಮಾತ್ರ ಬಹಿರಂಗ. ಹಾಗಾದರೆ ಇಲ್ಲಿಯ ಉದ್ದೇಶ ಅಪರಾಧಕ್ಕೆ ಶಿಕ್ಷೆಯೋ ಅಥವಾ..? ಪಾಠ ಕಲಿಸಲು ಸರಕಾರ, ವ್ಯವಸ್ಥೆ ಜೀವ ತೆಗೆಯಬಹುದೇ? ಯಾವತ್ತೂ ಪ್ರಶ್ನೆಯಾಗಿಯೇ ಉಳಿಯುವ ಪ್ರಶ್ನೆಗಳು.