ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ

ಆಯುರ್ವೇದವು ಸ್ವಾಸ್ಥ್ಯವನ್ನು ಕೇವಲ ರೋಗವಿಲ್ಲದ ಸ್ಥಿತಿಯಾಗಿ ಅಷ್ಟೇ ಕಾಣದೆ, ಕಾಲಕ್ಕೆ ಹೊಂದಿ ಕೊಂಡ ಜೀವನಶೈಲಿಯ ಫಲವಾಗಿ ನೋಡುತ್ತದೆ. ದಿನಚರ್ಯೆ ಮತ್ತು ಋತುಚರ್ಯೆಯಂತೆ ರಾತ್ರಿ ಚರ್ಯೆ ಕೂಡ ಆಯುರ್ವೇದದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಇಂದಿನ ಜೀವನಶೈಲಿಯಲ್ಲಿ ತಡರಾತ್ರಿ ಊಟ, ನಿದ್ರಾಭಂಗ, ಮೊಬೈಲ-ಟಿವಿ-ಲ್ಯಾಪ್‌ಟಾಪ್ ಬಳಕೆ, ಅಸ್ಥಿರ ಮನಸ್ಥಿತಿ ಇವೆಲ್ಲವೂ ರಾತ್ರಿ ಚರ್ಯೆಯ ಸಹಜ ಕ್ರಮವನ್ನು ಭಂಗಗೊಳಿಸುತ್ತಿವೆ.

ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ

-

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ರಾತ್ರಿಯು ವಿಶ್ರಾಂತಿಯ ಕಾಲ. ಆದರೆ ನಾವು ಅದನ್ನು ಕೆಲಸ, ಮನರಂಜನೆ ಮತ್ತು ಅತಿಯಾದ ಇಂದ್ರಿಯ ಉತ್ತೇಜನೆಗೆ ಮೀಸಲಿಟ್ಟಿದ್ದೇವೆ. ಹಗಲು ಹೊತ್ತಿನಲ್ಲಿ ಚೈತನ್ಯದಿಂದ ಇರಬೇಕಾದ ದೇಹವು ದಣಿದ ಸ್ಥಿತಿಯಲ್ಲಿ ಸಾಗುತ್ತಿದೆ. ಕಾಲದ ಸಹಜ ಲಯದಿಂದ ದೂರವಾದ ಈ ಜೀವನಕ್ರಮವೇ ಅನೇಕ ಆರೋಗ್ಯ ಸಮಸ್ಯೆಗಳ ಮೂಲ. ಈ ಕಾರಣಕ್ಕಾಗಿಯೇ ಆಯುರ್ವೇದವು ದಿನಚರ್ಯೆಯ ಜತೆಗೆ ರಾತ್ರಿ ಚರ್ಯೆಗೂ ವಿಶೇಷ ಮಹತ್ವ ನೀಡಿದೆ.

ಆಯುರ್ವೇದದ ದೃಷ್ಟಿಯಲ್ಲಿ ರಾತ್ರಿ ಕೇವಲ ದಿನದ ಅಂತ್ಯವಲ್ಲ; ಅದು ಮುಂದಿನ ದಿನದ ಸಮಗ್ರ ಆರೋಗ್ಯವನ್ನು ರೂಪಿಸುವ ಪ್ರಾರಂಭ. ಈ ಹಿನ್ನೆಲೆಯಲ್ಲಿ, ರಾತ್ರಿಚರ್ಯೆಯ ತತ್ವಗಳನ್ನು ತಿಳಿದು ಕೊಳ್ಳುವುದು ಮತ್ತು ಅಳವಡಿಸಿಕೊಳ್ಳುವುದು ಇಂದಿನ ಜೀವನಶೈಲಿಗೆ ಅತ್ಯಂತ ಅಗತ್ಯವಾಗಿದೆ.

ಆಯುರ್ವೇದವು ಸ್ವಾಸ್ಥ್ಯವನ್ನು ಕೇವಲ ರೋಗವಿಲ್ಲದ ಸ್ಥಿತಿಯಾಗಿ ಅಷ್ಟೇ ಕಾಣದೆ, ಕಾಲಕ್ಕೆ ಹೊಂದಿಕೊಂಡ ಜೀವನಶೈಲಿಯ ಫಲವಾಗಿ ನೋಡುತ್ತದೆ. ದಿನಚರ್ಯೆ ಮತ್ತು ಋತುಚರ್ಯೆ ಯಂತೆ ರಾತ್ರಿಚರ್ಯೆ ಕೂಡ ಆಯುರ್ವೇದದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಇಂದಿನ ಜೀವನಶೈಲಿಯಲ್ಲಿ ತಡರಾತ್ರಿ ಊಟ, ನಿದ್ರಾಭಂಗ, ಮೊಬೈಲ-ಟಿವಿ-ಲ್ಯಾಪ್‌ಟಾಪ್ ಬಳಕೆ, ಅಸ್ಥಿರ ಮನಸ್ಥಿತಿ ಇವೆಲ್ಲವೂ ರಾತ್ರಿಚರ್ಯೆಯ ಸಹಜ ಕ್ರಮವನ್ನು ಭಂಗಗೊಳಿಸುತ್ತಿವೆ.

ಇದರ ಪರಿಣಾಮವಾಗಿ ಅನೇಕ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳು ಉದ್ಭವಿಸುತ್ತಿವೆ. ಈ ಹಿನ್ನೆಲೆಯ ರಾತ್ರಿಚರ್ಯೆಯ ಆಯುರ್ವೇದೀಯ ತತ್ವಗಳು ಅತ್ಯಂತ ಪ್ರಾಸಂಗಿಕವಾಗಿವೆ.

ರಾತ್ರಿ ಚರ್ಯೆಯ ಅರ್ಥ ಮತ್ತು ಉದ್ದೇಶ: ಆಯುರ್ವೇದದ ಪ್ರಕಾರ, ರಾತ್ರಿ ಕಾಲವು ದೋಷ ಶಮನ, ಧಾತು ಪುನರ್ ನಿರ್ಮಾಣ, ಓಜಸ್ಸಿನ ಸಂರಕ್ಷಣೆ ಮತ್ತು ಮನಃಶಾಂತಿ- ಇವೆಲ್ಲಕ್ಕೆ ಅತ್ಯಂತ ಸೂಕ್ತವಾದ ಕಾಲವಾಗಿದೆ. ರಾತ್ರಿಚರ್ಯೆ ಎಂದರೆ ಸೂರ್ಯಾಸ್ತದಿಂದ ಪೂರ್ತಿ ರಾತ್ರಿಯ ಆಹಾರ, ವಿಹಾರ, ಆಚಾರ ಮತ್ತು ಮನೋಭಾವನೆಗಳ ಸಮಗ್ರ ಕ್ರಮ.

ಇದನ್ನೂ ಓದಿ: Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು

ಸಂಜೆ ನಂತರದ ಆಹಾರ ಪದ್ಧತಿ, ನಿದ್ರೆಯ ವಿಧಾನ, ಮನಃಶಾಂತಿ, ಸಂಭೋಗದ ಶಿಸ್ತು- ಇವೆಲ್ಲ ವನ್ನೂ ಒಳಗೊಂಡ ಆರೋಗ್ಯಕರ ಜೀವನ ಕ್ರಮ. ರಾತ್ರಿಚರ್ಯೆ ಸರಿಯಾಗಿದ್ದರೆ ದೇಹವು ಸಹಜವಾಗಿ ಸಮತೋಲನಕ್ಕೆ ಬರುತ್ತದೆ; ತಪ್ಪಾದರೆ ಅದೇ ರಾತ್ರಿ ಅನೇಕ ರೋಗಗಳ ಬೀಜವಾ ಗುತ್ತದೆ.

೧. ಸಂಧ್ಯಾಕಾಲದ ಆಚರಣೆ: ಸೂರ್ಯಾಸ್ತದ ನಂತರ ಮನಸ್ಸನ್ನು ಶಾಂತಗೊಳಿಸುವುದು ರಾತ್ರಿಚರ್ಯೆಯ ಮೊದಲ ಹಂತ. ಈ ಸಮಯದಲ್ಲಿ ಅತಿಯಾದ ವ್ಯಾಯಾಮ, ಜೋರಾದ ಸಂಗೀತ, ಅತಿಯಾದ ಮೊಬೈಲ್ ಬಳಕೆಯನ್ನು ತಪ್ಪಿಸಬೇಕು. ದೀಪ ಪ್ರಜ್ವಲನ, ಪ್ರಾರ್ಥನೆ, ಮಂತ್ರ ಜಪ ಅಥವಾ ಮೌನ ಪಾಲನೆ ಒಳಿತು.

ಆಯುರ್ವೇದದ ದೃಷ್ಟಿಯಲ್ಲಿ ಸಂಧ್ಯಾಕಾಲವೆಂದರೆ ಹಗಲು ಮತ್ತು ರಾತ್ರಿ ಸೇರುವ ಸಮಯ- ದೇಹ ಮತ್ತು ಮನಸ್ಸಿಗೆ ಅತ್ಯಂತ ಸೂಕ್ಷ್ಮವಾದ ಕಾಲ. ಈ ಸಮಯದಲ್ಲಿ ದೋಷಗಳು ಚಲಿಸುವ ಸ್ವಭಾವ ಹೊಂದಿದ್ದು, ಮನಸ್ಸು ಸಹ ಅಸ್ಥಿರವಾಗಿರುತ್ತದೆ. ಇಂಥ ಸಂಧಿಕಾಲದಲ್ಲಿ ಮನಸ್ಸನ್ನು ಶಾಂತ ಗೊಳಿಸಿ, ಇಂದ್ರಿಯಗಳನ್ನು ನಿಯಂತ್ರಿಸಿ, ದಿನದ ಚಟುವಟಿಕೆಯಿಂದ ವಿಶ್ರಾಂತಿಯ ಕಡೆಗೆ ಕರೆದೊ ಯ್ಯುವ ಆಚರಣೆಯೇ ಸಂಧ್ಯಾವಂದನೆ.

ಸಂಧ್ಯಾವಂದನೆಯನ್ನು ಆಯುರ್ವೇದೀಯವಾಗಿ ನೋಡಿದರೆ, ಅದು ಕೇವಲ ಧಾರ್ಮಿಕ ಕರ್ಮ ವಲ್ಲ; ಅದು ಮಾನಸಿಕ ಶುದ್ಧೀಕರಣದ ಮತ್ತು ದೈನಂದಿನ ಜೀವನದ ‘ರೀಸೆಟ್’ ಕ್ರಮವಾಗಿದೆ. ಸಂಧ್ಯಾಕಾಲದಲ್ಲಿ ಮಾಡುವ ಮಂತ್ರ ಜಪ, ಪ್ರಾಣಾಯಾಮ, ಧ್ಯಾನ, ಉಸಿರಾಟವನ್ನು ನಿಯಂತ್ರಿ ಸುತ್ತವೆ. ಮನಸ್ಸನ್ನು ಒಂದೇ ಬಿಂದುವಿಗೆ ತರುತ್ತವೆ, ಅತಿಯಾದ ಚಿಂತನೆ ಮತ್ತು ವಿಕಲ್ಪಗಳನ್ನು ಕಡಿಮೆ ಮಾಡುತ್ತವೆ. ಸಂಧ್ಯಾ ಸಮಯದಲ್ಲಿ ನಾವು ಮಾಡುವ ಸಾತ್ವಿಕ ಚರ್ಯೆಗಳು ದಿನಚರ್ಯೆ ಯಿಂದ ರಾತ್ರಿಚರ್ಯೆಗೆ ಸಾಗುವ ಮೃದುವಾದ ಸೇತುವೆಯಾಗುತ್ತವೆ.

ಇದು ಹೊರಮುಖ ಚಟುವಟಿಕೆಯಿಂದ ಒಳಮುಖದ ಶಾಂತಿಯ ಕಡೆಗೆ ಸಾಗುವ ಸಮಯ. ಸಂಧ್ಯಾ ವಂದನೆಯ ನಂತರ ಅತಿಯಾದ ಚಟುವಟಿಕೆಗಳು ಕಡಿಮೆಯಾಗಬೇಕು. ಆಹಾರ, ಮಾತು, ಮನರಂಜನೆ ಮಿತವಾಗಿರಬೇಕು. ಇದು ರಾತ್ರಿ ನಿದ್ರೆಗೆ ದೇಹ-ಮನಸ್ಸನ್ನು ಸಹಜವಾಗಿ ಸಿದ್ಧಗೊಳಿಸು ತ್ತದೆ.

ಇಂದಿನ ಕಾಲದಲ್ಲಿ ಎಲ್ಲರೂ ಸಂಧ್ಯಾವಂದನೆಯನ್ನು ಶಾಸ್ತ್ರೀಯ ರೂಪದ ಪಾಲಿಸಲು ಸಾಧ್ಯ ವಿಲ್ಲ. ಆದರೂ ಅದರ ತತ್ವವನ್ನು ಅಳವಡಿಸಿಕೊಳ್ಳಬಹುದು: ಅದೆಂದರೆ, ಸೂರ್ಯಾಸ್ತದ ಸಮಯ ದಲ್ಲಿ ಕೆಲಸ ನಿಲ್ಲಿಸುವುದು, ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆಯಿಂದ ದೂರವಾಗುವುದು, ಕೆಲವು ನಿಮಿಷ ಮೌನ, ಪ್ರಾಣಾಯಾಮ ಅಥವಾ ಧ್ಯಾನ, ದೀಪ ಪ್ರಜ್ವಲನ ಅಥವಾ ಶಾಂತ ಪ್ರಾರ್ಥನೆ. ಇದು ಸಂಧ್ಯಾವಂದನೆಯ ಆಧುನಿಕ ಆಯುರ್ವೇದೀಯ ರೂಪ.

೨. ರಾತ್ರಿಚರ್ಯೆಯಲ್ಲಿ ಆಹಾರ: ಲಘು, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸ‌ ಬೇಕು. ಸೂರ್ಯಾಸ್ತದ 2 ಗಂಟೆಗಳ ಒಳಗೆ ಆಹಾರ ಸೇವಿಸಬೇಕು. ಬಿಸಿಯಾದ ಆಹಾರ ಸೇವಿಸಬೇಕು. ಅತಿಯಾದ, ಜೀರ್ಣಕ್ಕೆ ಜಡವಾದ, ಎಣ್ಣೆ ಮತ್ತು ಮಸಾಲೆಯುಕ್ತ ಆಹಾರ, ತಡರಾತ್ರಿ ಊಟ, ಮೊಸರು, ಚೀಸ್, ಪನೀರ್, ಮದ್ಯ ಸೇವನೆ ಇವೆಲ್ಲವೂ ವರ್ಜ್ಯ. ಭೋಜನದ ನಂತರ ಸ್ವಲ್ಪ ನಿಧಾನ ವಾಗಿ ಸುಮಾರು 100 ಹೆಜ್ಜೆ ನಡೆಯಬೇಕು, ತಕ್ಷಣ ಮಲಗ ಬಾರದು. ಅತಿಯಾದ ಮಾತು, ವಾದ, ಶ್ರಮವಾಗುವ ಕೆಲಸವನ್ನು ತಪ್ಪಿಸಬೇಕು.

೩. ಇಂದ್ರಿಯಗಳ ವಿಶ್ರಾಂತಿ: ‘ಇಂದ್ರಿಯಗಳ ಅತಿಯಾದ ಉಪಯೋಗವೇ ಅನೇಕ ರೋಗಗಳ ಮೂಲ’. ಇದು ಶಾಸ್ತ್ರವಾಕ್ಯ. ಸೂರ್ಯಾಸ್ತದ ನಂತರ ಮೊಬೈಲ್, ಟಿ.ವಿ ಮತ್ತು ಲ್ಯಾಪ್‌ಟಾಪ್‌ಗಳ ಬಳಕೆಯು ವಾತ ದೋಷವನ್ನು ಹೆಚ್ಚಿಸುತ್ತದೆ. ಇದರಿಂದ ಚಂಚಲತೆ, ಆತಂಕ, ನಿದ್ರಾಭಂಗ‌ ವಾಗುತ್ತದೆ. ಪಿತ್ತ ದೋಷ ಉದ್ರೇಕಗೊಳ್ಳುತ್ತದೆ. ಇದರ ಪರಿಣಾಮವಾಗಿ ಕೋಪ, ಅಸಹನೆ, ಉಷ್ಣತೆ ಹೆಚ್ಚುತ್ತವೆ. ಇದು ಮನಸ್ಸನ್ನು ನಿರಂತರ ಉದ್ರೇಕ ಸ್ಥಿತಿಯಲ್ಲಿ ಇಡುತ್ತದೆ. ಇದರ ಪರಿಣಾಮವಾಗಿ ನಿದ್ರೆ ಆಳವಾಗುವುದಿಲ್ಲ, ಧಾತು ಪೋಷಣೆ ಕುಂದುತ್ತದೆ, ಲೈಂಗಿಕ ಆಸಕ್ತಿ ಅಸ್ಥಿರವಾಗುತ್ತದೆ.

ಹಾಗಾಗಿ, ಸೂರ್ಯಾಸ್ತದ ನಂತರ ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆಯನ್ನು ಕನಿಷ್ಠ ಗೊಳಿಸ ಬೇಕು. ಮಲಗುವ ಮೊದಲು ಕನಿಷ್ಠ 1-2 ಗಂಟೆಗಳ ಕಾಲ ಸಂಪೂರ್ಣ ದೂರವಿರಬೇಕು. ಮೃದು ವಾದ ಬೆಳಕು, ದೀಪದ ಬೆಳಕು ಉತ್ತಮ. ಪುಸ್ತಕದ ಓದು, ಮೌನ, ಧ್ಯಾನ, ಪ್ರಾರ್ಥನೆ, ಕುಟುಂಬ ದೊಂದಿಗೆ ಸಂವಾದ ಒಳಿತು.

4.ನಿದ್ರೆಯು ಶುಕ್ರ ಮತ್ತು ಓಜಸ್ಸಿನ ಮೂಲ: ಆಯುರ್ವೇದದಲ್ಲಿ ನಿದ್ರೆಯನ್ನು ತ್ರಯೋಪ ಸ್ಥಂಭಗಳಲ್ಲಿ ಒಂದಾಗಿ ಗುರುತಿಸಲಾಗಿದೆ. ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ನಿದ್ರೆಯು ಧಾತುಪೋಷಣೆ ಮಾಡುತ್ತದೆ, ಲೈಂಗಿಕ ಶಕ್ತಿಯನ್ನು ಉಳಿಸುತ್ತದೆ ಮತ್ತು ಮಾನಸಿಕ ಸ್ಥಿರತೆ ನೀಡುತ್ತದೆ. ರಾತ್ರಿ ಜಾಗರಣೆಯು ವಾತವನ್ನು ಹೆಚ್ಚಿಸುತ್ತದೆ, ಶುಕ್ರ ಕ್ಷಯ ಮಾಡುತ್ತದೆ. ಅತಿನಿದ್ರೆ ಕೂಡ ಕಫ ವೃದ್ಧಿ ಮಾಡಿ ಆಲಸ್ಯವನ್ನು ಹೆಚ್ಚಿಸುತ್ತದೆ ಮತ್ತು ಆಸಕ್ತಿಯನ್ನು ಕುಂದಿಸುತ್ತದೆ.

5. ಸಂಭೋಗ ಮತ್ತು ರಾತ್ರಿಚರ್ಯೆ: ಆಯುರ್ವೇದದಲ್ಲಿ ಸಂಭೋಗವನ್ನು ಧರ್ಮ, ಅರ್ಥ, ಕಾಮಗಳ ಭಾಗವಾಗಿ ಗೌರವಿಸಲಾಗಿದೆ. ಆದರೆ ಅದು ಸಂಯಮಿತ ಮತ್ತು ಶಿಸ್ತುಬದ್ಧವಾಗಿರಬೇಕು. ರಾತ್ರಿಯ ಸಂಭೋಗದ ನಿಯಮಗಳನ್ನು ನೋಡುವುದಾದೆ, ಸಂಭೋಗವು ಹಸಿವು ಇಲ್ಲದ, ದಣಿವು ಇಲ್ಲದ ಸ್ಥಿತಿಯಲ್ಲಿ ಇರಬೇಕು, ಮನಸ್ಸು ಶಾಂತವಾಗಿರಬೇಕು, ಬಲವಂತವಾಗಿ ವೇಗ ಉದೀರಣೆ ಅಥವಾ ಅತಿಯಾದ ಸಂಭೋಗವನ್ನು ತಪ್ಪಿಸಬೇಕು. ಆಯುರ್ವೇದದಲ್ಲಿ ಲೈಂಗಿಕ ಜೀವನವನ್ನು ಕೇವಲ ವೈಯಕ್ತಿಕ ಇಚ್ಛೆಯ ವಿಷಯವೆಂದು ಪರಿಗಣಿಸಿಲ್ಲ. ಅದು ಋತು, ಶಕ್ತಿ, ಅಗ್ನಿ ಮತ್ತು ದೋಷ ಸ್ಥಿತಿಗೆ ಅನುಗುಣವಾಗಿರಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಋತುಗಳಿಗೆ ವಿರುದ್ಧವಾಗಿ ಸಂಭೋಗ ನಡೆಸಿದರೆ ಶುಕ್ರ ಧಾತು ಕ್ಷಯ, ದೌರ್ಬಲ್ಯ ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ರಾತ್ರಿಚರ್ಯೆಯ ಪ್ರಮುಖ ಅಂಶವಾಗಿ ಋತುಸಮ್ಮತ ಸಂಭೋಗವನ್ನು ಆಯು ರ್ವೇದ ಬೋಧಿಸುತ್ತದೆ.

ಹೇಮಂತ ಋತು(ನವೆಂಬರ್-ಡಿಸೆಂಬರ್) ದೇಹದ ಸ್ಥಿತಿ: ಅಗ್ನಿ ಅತ್ಯಂತ ಬಲಿಷ್ಠ, ಶುಕ್ರ ಧಾತು ಪೋಷಿತ, ದೇಹಬಲ ಮತ್ತು ಉತ್ಸಾಹ ಹೆಚ್ಚು.

ಸಂಭೋಗ ಆವೃತ್ತಿ: ಪ್ರತಿದಿನವೂ ( Daily) ಸಹನೀಯ. ಈ ಋತುವಿನಲ್ಲಿ ಸಂಭೋಗದಿಂದ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಕಡಿಮೆ. ಆದರೂ ಅತಿಸಂಭೋಗ ಯಾವ ಋತುವಿನಲ್ಲಿಯೂ ವರ್ಜ್ಯ.

ಶಿಶಿರ ಋತು (ಜನವರಿ-ಫೆಬ್ರವರಿ)ದೇಹದ ಸ್ಥಿತಿ: ಶೀತ ಹೆಚ್ಚಿದರೂ ಅಗ್ನಿ ಬಲಿಷ್ಠ, ಶುಕ್ರ ಸ್ಥಿರ, ವಾತ ನಿಯಂತ್ರಿತ.

ಸಂಭೋಗ ಆವೃತ್ತಿ: ಪ್ರತಿದಿನ ಅಥವಾ ದಿನ ಬಿಟ್ಟು ದಿನ. ದೇಹಬಲ ಇರುವವರಿಗೆ ಹೆಚ್ಚು ಸಹನೀಯ. ಹೇಮಂತದಂತೆಯೇ, ಶಿಶಿರವೂ ಸಂಭೋಗಕ್ಕೆ ಅನುಕೂಲಕರ ಋತು.

ವಸಂತ ಋತು (ಮಾರ್ಚ್-ಏಪ್ರಿಲ್)ದೇಹದ ಸ್ಥಿತಿ: ಕಫ ಪ್ರಕೋಪ, ಆಲಸ್ಯ, ಮಧ್ಯಮ ದೇಹ ಬಲ. ಸಂಭೋಗ ಆವೃತ್ತಿ: 3 ದಿನಕ್ಕೆ ಒಮ್ಮೆ ಅಥವಾ ವಾರಕ್ಕೆ 2 ಬಾರಿ.

ಗ್ರೀಷ್ಮ ಋತು (ಮೇ-ಜೂನ್)ದೇಹದ ಸ್ಥಿತಿ: ದೇಹದ ದ್ರವಾಂಶ ಕ್ಷಯ, ಅಗ್ನಿ ದುರ್ಬಲ, ಓಜಸ್ಸು ಕಡಿಮೆ.

ಸಂಭೋಗ ಆವೃತ್ತಿ: 15 ದಿನಕ್ಕೆ ಒಮ್ಮೆ ಮಾತ್ರ ಅಥವಾ ತೀವ್ರ ಅವಶ್ಯಕತೆಯಿದ್ದರೆ ಮಾತ್ರ. ವಾರಕ್ಕೆ ಹಲವಾರು ಬಾರಿ ತೊಡಗುವುದು ಶುಕ್ರಧಾತು ಕ್ಷಯಕ್ಕೆ ಕಾರಣವಾಗುತ್ತದೆ.

ವರ್ಷ ಋತು (ಜುಲೈ-ಆಗ)ದೇಹದ ಸ್ಥಿತಿ: ಅಗ್ನಿ ಅಸ್ಥಿರ, ವಾತ ಪ್ರಕೋಪ, ಜೀರ್ಣಶಕ್ತಿ ಕಡಿಮೆ.

ಸಂಭೋಗ ಆವೃತ್ತಿ: 10-15 ದಿನಕ್ಕೆ ಒಮ್ಮೆ. ಸಂಪೂರ್ಣ ಆರೋಗ್ಯ ಮತ್ತು ಬಲ ಇದ್ದರೆ ಮಾತ್ರ. ಅತಿ ಸಂಭೋಗದಿಂದ ವಾತ ವೃದ್ಧಿ, ಸಂಧಿ ನೋವು, ಲೈಂಗಿಕ ದೌರ್ಬಲ್ಯ, ದೇಹಬಲ ಕುಗ್ಗುವಿಕೆ ಕಾಣಬರುತ್ತವೆ.

ಶರದ್ ಋತು (ಸೆಪ್ಟೆಂಬರ್-ಅಕ್ಟೋಬರ್)ದೇಹದ ಸ್ಥಿತಿ: ಪಿತ್ತ ಪ್ರಕೋಪ, ಉಷ್ಣತೆ, ಕೋಪ, ಅಸಹನೆ.

ಸಂಭೋಗ ಆವೃತ್ತಿ: 7-10 ದಿನಕ್ಕೆ ಒಮ್ಮೆ. ಮಿತ, ಶಾಂತ ಮತ್ತು ಸಂಯಮಿತವಾಗಿ ಆಯುರ್ವೇದ ದ ಪ್ರಕಾರ ಶುಕ್ರಧಾತು ಆಹಾರ ದಿಂದಲೇ ನಿರ್ಮಾಣವಾಗುತ್ತದೆ. ‘ಯಥಾ ಆಹಾರ, ತಥಾ ಶುಕ್ರ’ ಎಂಬ ತತ್ವದಂತೆ, ಆಹಾರ ಶುದ್ಧವಾಗಿದ್ದಷ್ಟೂ ಶುಕ್ರಧಾತು ಗುಣಮಟ್ಟದಾಗಿರುತ್ತದೆ. ರಾತ್ರಿಚರ್ಯೆ, ಸಂಭೋಗ ನಿಯಮಗಳು ಎಷ್ಟು ಮುಖ್ಯವೋ, ಸರಿಯಾದ ಆಹಾರವೂ ಅಷ್ಟೇ ಮುಖ್ಯ. ಶುಕ್ರ ವರ್ಧಕ ಆಹಾರಗಳನ್ನು ಆಯುರ್ವೇದವು ಮುಖ್ಯವಾಗಿ ಮಧುರ, ಸ್ನಿಗ್ಧ, ಶೀತ ಮತ್ತು ಬಲವರ್ಧಕ ಗುಣಗಳುಳ್ಳವು ಎಂದು ವಿವರಿಸುತ್ತದೆ.

ಹಾಲು ಮತ್ತು ಹಾಲಿನಿಂದ ತಯಾರಿಸಿದ ಆಹಾರಗಳು: ಬಿಸಿಯಾದ ಹಾಲು, ಪಾಯಸ; ಹಾಲಿಗೆ ತುಪ್ಪ ಸೇರಿಸಿ ಸೇವಿಸುವುದು; ಕ್ಷೀರಪಾಕ ರೂಪದಲ್ಲಿ ಔಷಧಗಳೊಂದಿಗೆ.

ತುಪ್ಪ (ಘೃತ): ತುಪ್ಪವನ್ನು ಆಯುರ್ವೇದದಲ್ಲಿ ಬಲ್ಯ, ವೃಷ್ಯ ಮತ್ತು ರಸಾಯನ ಎಂದು ವರ್ಣಿಸ ಲಾಗಿದೆ. ಶುದ್ಧ ಹಸುವಿನ ತುಪ್ಪ; ಬಿಸಿ ಆಹಾರದಲ್ಲಿ ಜೀರ್ಣಶಕ್ತಿಗೆ ತಕ್ಕಂತೆ ನಿತ್ಯವೂ ಸೇವಿಸುವುದು.

ಧಾನ್ಯಗಳು: ಶುಕ್ರಧಾತು ನಿರ್ಮಾಣಕ್ಕೆ ಸರಿಯಾದ ಧಾನ್ಯಗಳು ಅತ್ಯಂತ ಮುಖ್ಯ. ಹಳೆಯ ಅಕ್ಕಿ, ಗೋಧಿ, ಹೆಸರು ಬೇಳೆ, ಉದ್ದಿನ ಬೇಳೆ.

ಒಣಹಣ್ಣುಗಳು ಮತ್ತು ಬೀಜಗಳು: ಖರ್ಜೂರ, ದ್ರಾಕ್ಷಿ, ಬಾದಾಮಿ (ನೆನೆಸಿದ್ದು), ಅಂಜೂರ.

ಹಣ್ಣುಗಳು: ಹಣ್ಣುಗಳು ರಸಧಾತುವನ್ನು ಪೋಷಿಸಿ, ನಂತರ ಶುಕ್ರಧಾತು ನಿರ್ಮಾಣಕ್ಕೆ ಸಹಕಾರಿ ಯಾಗುತ್ತವೆ. ದ್ರಾಕ್ಷಿ, ದಾಳಿಂಬೆ, ಬಾಳೆಹಣ್ಣು (ಮಿತ ಪ್ರಮಾಣದಲ್ಲಿ), ಎಲ್ಲಾ ಸಿಹಿಯಾದ ಹಣ್ಣು ಗಳು. ತಪ್ಪಿಸಬೇಕಾದ ಆಹಾರಗಳು: ಮದ್ಯ, ಅತಿಯಾದ ಖಾರ, ಉಪ್ಪು, ಹುಳಿ, ಜಂಕ್ ಫುಡ್, ಪ್ರೋಸೆಸ್ಡ್‌ ಫುಡ್, ರೆಫ್ರಿಜಿರೇಟೆಡ್ ಫುಡ್, ತಣ್ಣನೆಯ ಪಾನೀಯಗಳು, ತಡರಾತ್ರಿ ಊಟ. ಇವು ಶುಕ್ರ ಕ್ಷಯ ಮತ್ತು ಲೈಂಗಿಕ ದೌರ್ಬಲ್ಯಕ್ಕೆ ಕಾರಣವಾಗುತ್ತವೆ.

  1. ವಾಗ್ಭಟ ಮಹರ್ಷಿಗಳು ಹೇಳಿರುವ ಆತ್ಮಾವಲೋಕನೆ: ಇದು ರಾತ್ರಿಚರ್ಯೆಯ ಬಹಳ ಮುಖ್ಯ ಭಾಗ. ಮಲಗುವ ಮುನ್ನ “ನಾನು ನನ್ನ ಹಗಲು ಮತ್ತು ರಾತ್ರಿಗಳನ್ನು ಹೇಗೆ ಕಳೆಯು ತ್ತಿದ್ದೇನೆ ಎಂಬುದನ್ನು ನಿತ್ಯವೂ ಅವಲೋಕಿಸುವವನು, ಕಾಲಕ್ಕೆ ತಕ್ಕಂತೆ ತನ್ನ ಜೀವನ ಕ್ರಮವನ್ನು ಸರಿಪಡಿಸಿಕೊಳ್ಳುವವನು, ಎಂದಿಗೂ ರೋಗಕ್ಕೆ ಮತ್ತು ದುಃಖಕ್ಕೆ ಒಳಗಾಗುವುದಿಲ್ಲ" ಎಂದು ಹೇಳಿಕೊಳ್ಳಬೇಕು.

ಈ ಮಾತು ಆಯುರ್ವೇದದ ಜೀವಾಳವನ್ನು ವ್ಯಕ್ತಪಡಿಸುತ್ತದೆ. ರಾತ್ರಿಚರ್ಯೆ ಎಂದರೆ ಕೇವಲ ಕೆಲವು ನಿಯಮಗಳ ಪಟ್ಟಿ ಅಲ್ಲ; ಅದು ಕಾಲಜ್ಞಾನ, ಆತ್ಮಪರಿಶೀಲನೆ ಮತ್ತು ಪ್ರಕೃತಿಯ ಲಯಕ್ಕೆ ಹೊಂದಿಕೊಂಡ ಬದುಕಿನ ಅಭ್ಯಾಸ. ಸೂರ್ಯಾಸ್ತದ ನಂತರ ಮನಸ್ಸು ಮತ್ತು ಇಂದ್ರಿಯಗಳಿಗೆ ವಿಶ್ರಾಂತಿ ನೀಡುವುದು, ಆಹಾರ-ವಿಹಾರದಲ್ಲಿ ಸಂಯಮ ಪಾಲಿಸುವುದು, ನಿದ್ರೆಗೆ ಆದ್ಯತೆ ನೀಡು ವುದು- ಇವೆಲ್ಲವೂ ರಾತ್ರಿಚರ್ಯೆಯ ಮೂಲ ಆತ್ಮವಾಗಿವೆ.

ನಾವು ನಮ್ಮ ದಿನ ಮತ್ತು ರಾತ್ರಿಗಳನ್ನು ಹೇಗೆ ಕಳೆಯುತ್ತೇವೆ ಎಂಬುದನ್ನು ಅತ್ಯಂತ ವಿವೇಚನೆ ಯಿಂದ ಗಮನಿಸಿದಾಗ, ದೇಹ ಮತ್ತು ಮನಸ್ಸು ಸಹಜವಾಗಿ ಸಮತೋಲನಕ್ಕೆ ಬರುತ್ತವೆ. ರಾತ್ರಿಯ ಶಾಂತಿ ಮುಂದಿನ ದಿನದ ಆರೋಗ್ಯಕ್ಕೆ ಬುನಾದಿಯಾಗುತ್ತದೆ. ಕಾಲದೊಂದಿಗೆ ಸುಂದರವಾಗಿ ಹೆಜ್ಜೆ ಹಾಕುವ ಜೀವನವೇ ಆಯುರ್ವೇದ; ಆ ಜೀವನವೇ ಸುಖ, ಶಾಂತಿ ಮತ್ತು ಸಮತೋಲನಕ್ಕೆ ದಾರಿ.