ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

ನಗು ಎಂದರೆ ಸುಮ್ಮನೆಯ ನಗು ವಲ್ಲ. ಗಹಗಹಿಸುವ ನಗು. ಇದು ಸಹಜ ನಗುವಲ್ಲ. ರೋಗಗ್ರಸ್ತ ನಗು. ನಿರಂತರವಾಗಿ ಗಹಗಹಿಸಿ ನಗುತ್ತಲೇ ಇರುತ್ತಾನೆ. ನಗುವು ನಿಲ್ಲುವುದೇ ಇಲ್ಲ. ಹಗಲೂ ರಾತ್ರಿ ನಗುತ್ತಲೇ ಇರುತ್ತಾನೆ. ದೇಹವು ಸೊರಗಿ ಸೊರಗಿ ಬರೀ ಮೂಳೆಗಳು ಕಾಣುತ್ತಿದ್ದರೂ ನಗು ಮಾತ್ರ ನಿಲ್ಲುವುದಿಲ್ಲ. ಹೀಗೆ ತಿಂಗಳುಗಟ್ಟಲೆ ನಕ್ಕು ನಕ್ಕು ಒಂದು ದಿನ ಸಾಯುತ್ತಾನೆ. ಹಾಗಾಗಿ ಪಾಶ್ಚಾತ್ಯ ಪತ್ರಕರ್ತರು ಈ ಕಾಯಿಲೆಯನ್ನು ‘ಲಾಫಿಂಗ್ ಡಿಸೀಸ್’ ಎಂದು ಕರೆದರು.

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

-

ಹಿಂದಿರುಗಿ ನೋಡಿದಾಗ

ಪಪುವಾ ನ್ಯೂಗಿನಿ ದೇಶವು ಪೆಸಿಫಿಕ್ ಸಾಗರದ ನೈಋತ್ಯ ಭಾಗದಲ್ಲಿದೆ. ಇಲ್ಲಿನ ಪ್ರಸ್ಥಭೂಮಿಯ ಮಂಜು ಮುಸುಕಿದ ಕಾಡುಗಳಲ್ಲಿ ‘ಫೋರ್’ ಎಂಬ ಬುಡಕಟ್ಟಿನ ಜನರು ವಾಸವಾಗಿದ್ದಾರೆ. ಇಂಥ ಒಂದು ಬುಡಕಟ್ಟಿನ ಜನರು ಇದ್ದಾರೆ ಎನ್ನುವ ವಿಚಾರವು 1930ರವರೆಗೆ ಹೊರಗಿನ ಜಗತ್ತಿಗೆ ತಿಳಿದಿರ ಲಿಲ್ಲ.

1950ರ ಹೊತ್ತಿಗೆ ಈ ದ್ವೀಪವಾಸಿಗಳು ಒಂದು ಅಪರೂಪದ ಹಾಗೂ ಅರ್ಥ ವಾಗದ ಕಾಯಿಲೆಗೆ ಸಿಲುಕಿ ಸಾಯಲಾರಂಭಿಸಿದರು. ಫೋರ್ ಭಾಷೆಯಲ್ಲಿ ಇದನ್ನು ‘ಕುರು’ ಎಂದು ಕರೆಯುತ್ತಿದ್ದರು. ಕುರು ಎಂದರೆ ‘ಅದಿರು ಸಾವು’ ಅಥವಾ ‘ನಡುಕ ಸಾವು’ ಎಂದರ್ಥ.

ಲಾಫಿಂಗ್ ಡಿಸೀಸ್: ಪಪುವಾ ನ್ಯೂಗಿನಿ ದ್ವೀಪಕ್ಕೆ ಹೊಸದಾಗಿ ಕಾಲಿಟ್ಟವರಿಗೆ ಈ ಅದಿರು ಸಾವು ಒಂದು ವಿಚಿತ್ರವಾದ ಹಾಗೂ ಅವಾಸ್ತವವಾದ ಸಾವು ಎಂದು ಭಾಸವಾದರೆ ಆಶ್ಚರ್ಯಪಡ ಬೇಕಾಗಿಲ್ಲ. ಮೊದಲು ವ್ಯಕ್ತಿಯಲ್ಲಿ ಸೌಮ್ಯ ಸ್ವರೂಪದ ನಡುಕವು ಕಂಡುಬರುತ್ತದೆ, ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಕೊನೆಗೆ ವ್ಯಕ್ತಿಯು ನಡೆಯಲಾಗದ ಸ್ಥಿತಿಯನ್ನು ತಲುಪುತ್ತಾನೆ. ದೈಹಿಕ ಸಮತೋಲನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ. ಸಾವು ಬರುವ ಕೆಲವು ತಿಂಗಳುಗಳ ಮೊದಲು, ಆ ವ್ಯಕ್ತಿಯು ಇರುವೆಡೆಯಲ್ಲಿಯೇ ನಗಲಾರಂಭಿಸುತ್ತಾನೆ.

ನಗು ಎಂದರೆ ಸುಮ್ಮನೆಯ ನಗು ವಲ್ಲ. ಗಹಗಹಿಸುವ ನಗು. ಇದು ಸಹಜ ನಗುವಲ್ಲ. ರೋಗಗ್ರಸ್ತ ನಗು. ನಿರಂತರವಾಗಿ ಗಹಗಹಿಸಿ ನಗುತ್ತಲೇ ಇರುತ್ತಾನೆ. ನಗುವು ನಿಲ್ಲುವುದೇ ಇಲ್ಲ. ಹಗಲೂ ರಾತ್ರಿ ನಗುತ್ತಲೇ ಇರುತ್ತಾನೆ. ದೇಹವು ಸೊರಗಿ ಸೊರಗಿ ಬರೀ ಮೂಳೆಗಳು ಕಾಣುತ್ತಿದ್ದರೂ ನಗು ಮಾತ್ರ ನಿಲ್ಲುವುದಿಲ್ಲ. ಹೀಗೆ ತಿಂಗಳುಗಟ್ಟಲೆ ನಕ್ಕು ನಕ್ಕು ಒಂದು ದಿನ ಸಾಯುತ್ತಾನೆ. ಹಾಗಾಗಿ ಪಾಶ್ಚಾತ್ಯ ಪತ್ರಕರ್ತರು ಈ ಕಾಯಿಲೆಯನ್ನು ‘ಲಾಫಿಂಗ್ ಡಿಸೀಸ್’ ಎಂದು ಕರೆದರು.

ಮಾಟ: ಫೋರ್ ಬುಡಕಟ್ಟಿನವರು ಕುರುವನ್ನು ಒಂದು ಕಾಯಿಲೆ ಎಂದು ಪರಿಗಣಿಸಿರಲಿಲ್ಲ, ಅದು ‘ಮಾಟದ ಪ್ರತಿಫಲ’ ಎಂದೇ ಭಾವಿಸಿದ್ದರು. ಮಾಟವನ್ನು ಮಾಡುವ ಮಾಂತ್ರಿಕನು, ಯಾರ ಮೇಲೆ ಮಾಟವನ್ನು ಮಾಡಬೇಕಾಗಿದೆಯೋ ಅವನ ಕೂದಲನ್ನು, ಅವನು ಧರಿಸಿರುವ ಬಟ್ಟೆ ಚೂರನ್ನು, ಅವನು ತಿಂದು ಬಿಟ್ಟ ಎಂಜಲನ್ನವನ್ನು ಸಂಗ್ರಹಿಸಿ, ಎಲ್ಲವನ್ನು ಸೇರಿಸಿ ಒಂದು ಮೂಟೆ ಕಟ್ಟುತ್ತಾನೆ. ಅದನ್ನು ಮಂತ್ರಿಸಿ, ಮಂತ್ರ ಹಾಕಿದ ಬಟ್ಟೆಯ ಗಂಟನ್ನು ಕಿಲೋ ಮೀಟರುಗಟ್ಟಲೆ ವ್ಯಾಪಿಸಿರುವ ಜೌಗುಪ್ರದೇಶದಲ್ಲಿ ಹೂಳುತ್ತಾನೆ.

ಹೀಗೆ ಹೂತ ಬಟ್ಟೆಯಗಂಟು ಕಾಲಕ್ರಮೇಣ ಕೊಳೆಯಲಾರಂಭಿಸುತ್ತದೆ. ಬಟ್ಟೆಯ ಗಂಟು ಕೊಳೆಯಲಾರಂಭಿಸಿದಂತೆ ವ್ಯಕ್ತಿಯಲ್ಲಿ ಕುರು ಕಾಯಿಲೆಯ ಒಂದೊಂದು ಲಕ್ಷಣಗಳು ಕಾಣಿಸಲಾ ರಂಭಿಸುತ್ತವೆ.

ಆಗ ಫೋರ್ ಬುಡಕಟ್ಟಿನ ನಾಯಕನು, ತಮ್ಮ ಗುಂಪಿನಲ್ಲಿಯೇ ಯಾರೋ ಮಂತ್ರವಾದಿ ಇದ್ದಾನೆಂದು ಭಾವಿಸಿ, ಎಲ್ಲರನ್ನು ಕರೆಯಿಸಿ, ವಿಚಾರಣೆಯನ್ನು ನಡೆಸಿ ಮಾಟವನ್ನು ತೆಗೆದು ಹಾಕುವಂತೆ ಪ್ರಾರ್ಥಿಸುತ್ತಾನೆ.

ಪುರುಷ ಪಕ್ಷಪಾತಿ: ಕುರು ರೋಗದ ವಿಶೇಷವೆಂದರೆ, ಇದು ಪುರುಷ ಪಕ್ಷಪಾತಿಯಂತೆ ತೋರುತ್ತದೆ. ಈ ಕಾಯಿಲೆಯು ಗಂಡಸರಿಗೆ ಬಂದ ಉದಾಹರಣೆಯು ಕಡಿಮೆ. ಹೆಚ್ಚಿಗೆ ಹೆಣ್ಣು ಮಕ್ಕಳನ್ನು ಹಾಗೂ ಪುಟ್ಟ ಪುಟ್ಟ ಮಕ್ಕಳನ್ನು ಮಾತ್ರ ಬಲಿ ತೆಗೆದುಕೊಳ್ಳುತ್ತಿತ್ತು. ಕೆಲವು ಹಳ್ಳಿಗಳಲ್ಲಂತೂ ಒಬ್ಬ ವಯಸ್ಕ ಹೆಂಗಸೂ ಉಳಿದಿರಲಿಲ್ಲ. ಹಳ್ಳಿಯ ತುಂಬಾ ತಾಯಿಯಿಲ್ಲದ ತಬ್ಬಲಿ ಮಕ್ಕಳು ತುಂಬಿ ತುಳುಕುತ್ತಿದ್ದರು. ತಾಯಿಯ ಸ್ಥಾನವನ್ನು ತುಂಬಲು ಗಂಡಸರು ಹೆಣಗುತ್ತಿದ್ದರು.

ಈ ಅವಧಿಯಲ್ಲಿ ಇಂಥ ಹಳ್ಳಿಗಳಿಗೆ ಭೇಟಿ ನೀಡಿದ ವಿದೇಶಿ ಪತ್ರಕರ್ತನೊಬ್ಬ ‘ಇದು ದೆವ್ವಗಳ ಸಾಮ್ರಾಜ್ಯ. ಗುಡಿಸಲ ಮುಂದೆ ವಿಷಣ್ಣ ಗಂಡಸರು ತಲೆಯ ಮೆಲೆ ಕೈಹೊತ್ತು ಕುಳಿತಿದ್ದರೆ, ಗುಡಿಸಲ ಒಳಗಿನಿಂದ ಬೆಚ್ಚಿಬೀಳಿಸುವ ವಿಕಟಾಟ್ಟಹಾಸದ ಅಲೆಗಳು ತೇಲಿಬರುತ್ತಿವೆ’ ಎಂದು ದಾಖಲಿಸಿದ.

ವೈದ್ಯರು: 1950ರ ದಶಕ. ಆಸ್ಟ್ರೇಲಿಯಾದಲ್ಲಿದ್ದ ವಸಾಹತುಶಾಹಿ ಆಡಳಿತವು ಈ ವಿಚಿತ್ರ ಕಾಯಿಲೆ ಯನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಲ್ಲಿಗೆ ವೈದ್ಯಾಧಿಕಾರಿಗಳನ್ನು ಕಳುಹಿಸಿತು. ಆ ತಂಡದಲ್ಲಿ ವಿನ್ಸೆಂಟ್ ಜ಼ಿಗಾಸ್ ಎಂಬ ವೈದ್ಯನಿದ್ದ. ಆತ ಜಿಲ್ಲಾ ವೈದ್ಯಾಧಿಕಾರಿಯಾಗಿದ್ದ. ನಂತರ, ಅಮೆರಿಕದಲ್ಲಿ ವೈದ್ಯರಾಗಿದ್ದ ಡೇನಿಯಲ್ ಕಾರ್ಲ್ಟನ್ ಗಡ್ಜೂಸೆಕ್ (1923-2008) ಈ ತಂಡದಲ್ಲಿ ಸೇರ್ಪಡೆಯಾದರು. ಇವರು ಕೆಲವು ಸಲ ಅತ್ಯಂತ ಪ್ರತಿಭಾವಂತ ವೈದ್ಯರಾಗಿ, ಕೆಲವು ಸಲ ಮಾತ್ರ ವಿಲಕ್ಷಣವಾಗಿ (ಎಕ್ಸೆಂಟ್ರಿಕ್) ವರ್ತಿಸುತ್ತಿದ್ದರು.

ಗಡ್ಜೂಸೆಕ್, ಫೋರ್ ದ್ವೀಪದಲ್ಲಿ ನೆಲೆಸಿದರು. ಅವರೊಡನೆ ಒಂದಾಗಿ ಬಾಳಲಾರಂಭಿಸಿದರು. ಅವರ ಸಂಸ್ಕೃತಿಯನ್ನು ಅಭ್ಯಾಸ ಮಾಡಿದರು. ಅವರ ಭಾಷೆಯನ್ನು ಕಲಿತರು. ಅವರ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ಅವರಲ್ಲಿ ಒಬ್ಬರಾಗಿ ಹೋದರು. ಕುರು ಕಾಯಿಲೆಯಿಂದ ನರಳುವವರ ಶವಪರೀಕ್ಷೆಯನ್ನು ಮಾಡಲಾರಂಭಿಸಿದರು.

ಫೋರ್ ದ್ವೀಪದಲ್ಲಿ ಯಾವುದೇ ರೀತಿಯ ಅನುಕೂಲತೆಗಳಿರಲಿಲ್ಲ. ಅಡುಗೆ ಮನೆಯ ಮೇಜಿನ ಮೇಲೆ ಶವವನ್ನು ಮಲಗಿಸಿ, ಸೀಮೆಣ್ಣೆ ಬುಡ್ಡಿಯ ಬೆಳಕಿನಲ್ಲಿ ಶವ ವಿಚ್ಛೇದನವನ್ನು ಮಾಡು ತ್ತಿದ್ದರು. ಈ ಅಧ್ಯಯನದಲ್ಲಿ ಅವರು ಹಿಂದೆ ಎಂದೂ ಕಂಡು ಕೇಳರಿಯದಂಥ ಒಂದು ವಿಚಿತ್ರ ವನ್ನು ಗಮನಿಸಿದರು. ಕುರು ರೋಗಿಗಳ ಮಿದುಳಿನ ತುಂಬಾ ಸಣ್ಣ ಸಣ್ಣ ರಂಧ್ರಗಳು ಮೂಡಿದ್ದವು. ಇಡೀ ಮಿದುಳು ಒಂದು ಸ್ಪಂಜಿನಂತೆ ಕಾಣುತ್ತಿತ್ತು. ಗಡ್ಜೂಸೆಕ್ ಅವರಿಗೆ ಆಶ್ಚರ್ಯಕ್ಕಿಂತ ಕುತೂಹಲವು ತೀವ್ರವಾಯಿತು.

ವೈದ್ಯಕೀಯ ವಿಜ್ಞಾನಕ್ಕೆ ತಿಳಿದಿದ್ದ ಯಾವುದೇ ಬ್ಯಾಕ್ಟೀರಿಯವಾಗಲಿ, ವೈರಸ್ಸಾಗಲಿ ಇಲ್ಲವೇ ಶಿಲೀಂಧ್ರವಾಗಲಿ ಈ ರೀತಿಯ ಲಕ್ಷಣವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಕುರು ಕಾಯಿಲೆಯು ಒಂದು ಸೋಂಕು ಕಾಯಿಲೆಯಾಗಿದ್ದರೆ ರೋಗಿಗಳಿಗೆ ಜ್ವರ ಬರಬೇಕಿತ್ತು.

ಉರಿಯೂತದ (ಇನ್ ಫ್ಲಮೇಶನ್) ಲಕ್ಷಣಗಳು ಕಾಣಬೇಕಿತ್ತು. ರೋಗಲಕ್ಷಣಗಳು ಕೆಲವೇ ದಿನ ಗಳಲ್ಲಿ ಅಥವಾ ವಾರಗಳಲ್ಲಿ ಪ್ರಕಟವಾಗಬೇಕಿತ್ತು. ಆದರೆ ಕುರುವಿನ ಲಕ್ಷಣಗಳು ವರ್ಷಾ ನುಗಟ್ಟಲೆಯ ಅವಧಿಯಲ್ಲಿ ಸಾವಕಾಶವಾಗಿ ಕಂಡುಬರುತ್ತಿದ್ದವು. ಈ ಅಂಶವು ಗಡ್ಜೂಸೆಕ್ ಅವರ ಗಮನವನ್ನು ಅತೀವವಾಗಿ ಸೆಳೆಯಿತು.

ಗಡ್ಜೂಸೆಕ್, ಸ್ಪಂಜಿನಂಥ ಮಿದುಳಿನ ಚಿತ್ರಗಳನ್ನು ತೆಗೆದು, ಅವನ್ನು ಲಂಡನ್‌ಗೆ ಕಳುಹಿಸಿದರು. ಲಂಡನ್‌ನ ಗ್ರಂಥಾಲಯದಲ್ಲಿದ್ದ ತಜ್ಞರು ಈ ಚಿತ್ರಗಳನ್ನು ಅಧ್ಯಯನ ಮಾಡುತ್ತಿದ್ದರು. ಆಗ ವಿಲಿಯಂ ಹ್ಯಾಡ್ಲೋ ಎಂಬ ಪಶು ರೋಗಶಾಸ್ತ್ರಜ್ಞನು ಇದು ಕುರಿಗಳಿಗೆ ಬರುವ ‘ಸ್ಕ್ರೇಪಿ’ ಎಂಬ ರೋಗದಂತಿದೆ ಎಂದರಿತನು. ಕುರಿಗಳಿಗೆ ಬರುತ್ತಿದ್ದ ‘ಸ್ಕ್ರೇಪಿ’ ಕಾಯಿಲೆಯಲ್ಲಿ ರೋಗಗ್ರಸ್ತ ಕುರಿಯ ಮಿದುಳಿನಲ್ಲೂ ಹೀಗೆ ಸ್ಪಂಜಿನಂಥ ಅಸಂಖ್ಯ ರಂಧ್ರಗಳು ಮೂಡುತ್ತಿದ್ದವು.

ಕೂಡಲೇ ಅಲ್ಲಿದ್ದ ವೈದ್ಯರು ಈ ಸ್ಪಂಜಿನಂಥ ಮಿದುಳನ್ನು ಉಂಟುಮಾಡುವ ರೋಗಗಳನ್ನು ಕುರಿತು ಲಭ್ಯ ಸಾಹಿತ್ಯವನ್ನೆಲ್ಲ ಜಾಲಾಡಿದರು. ಆಗ ಅವರ ಗಮನಕ್ಕೆ ಕ್ರೂಟ್ಜ್ ಫೆಲ್ಡ್- ಹಾಕೋಬ್ ಡಿಸೀಸ್ (ಸಿಜೆಡಿ) ಗಮನಕ್ಕೆ ಬಂದಿತು.

ಹ್ಯಾನ್ಸ್ ಗೆರ್ಹಾರ್ಡ್ ಕ್ರೂಟ್ಜ್ ಫೆಲ್ಡ್ (1885-1964) ಜರ್ಮನಿಯ ನರವೈದ್ಯರಾಗಿದ್ದರು. ಕ್ರೂಟ್ಜ್ ಫೆಲ್ಡ್ ಅವರು 1920ರಲ್ಲಿ ಬರ್ಲಿನ್ನಿನ 22 ವರ್ಷದ ಬರ್ತಾ ಎಂಬ ಯುವತಿಯನ್ನು ಪರೀಕ್ಷಿಸಿದ್ದರು. ಆಕೆಯ ನೆನಪಿನ ಶಕ್ತಿ ಕುಂದಿತ್ತು. ವಿಚಿತ್ರವಾಗಿ ವರ್ತಿಸುತ್ತಿದ್ದಳು. ಆಕೆಯು ತನ್ನ ಶರೀರದ ಸ್ನಾಯು ಗಳ ಮೇಲೆ ನಿಯಂತ್ರಣವನ್ನು ಕಳೆದು ಕೊಳ್ಳುತ್ತಿದ್ದಳು.

ಮರಣದ ನಂತರ ಆಕೆಯ ಮಿದುಳನ್ನು ಪರೀಕ್ಷಿಸಿದಾಗ, ಅಲ್ಲಿನ ನರಕೋಶಗಳು ನಾಶವಾಗಿರು ವುದು ಕಂಡುಬಂದಿತು. ಆಲೋನ್ಸ್ ಮರಿಯ ಜಾಕೋಬ್ (1884-1931) ಕೂಡ ಜರ್ಮನಿಯ ಓರ್ವ ನರ ವಿಜ್ಞಾನಿ. ಇವರು 1921ರಲ್ಲಿ ಜರ್ಮನಿಯ ಹ್ಯಾಂಬರ್ಗಿನಲ್ಲಿ ಇದೇ ರೀತಿಯ ಲಕ್ಷಣಗಳಿದ್ದ ಐದು ರೋಗಿಗಳನ್ನು ಗಮನಿಸಿದರು. ಆ ಐದೂ ಜನರ ಮಿದುಳು ಸ್ಪಂಜಿನಂತೆ ರಂಧ್ರಮಯ ವಾಗಿರುವುದನ್ನು ದಾಖಲಿಸಿದರು. ಇದನ್ನು ಸ್ಪಂಜುರೂಪಿ ಮಿದುಳಬೇನೆ (ಸ್ಪಾಂಜಿಫಾರಂ ಎನ್ಸೆ-ಲೋಪಥಿ) ಎಂದು ಕರೆದರು. ಈ ಇಬ್ಬರು ವಿಜ್ಞಾನಿಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದರೂ, ಅವರು ವಿವರಿಸಿದ ರೋಗ ಲಕ್ಷಣಗಳು ಮತ್ತು ಮಿದುಳಿನ ಹಾನಿಯು ಒಂದೇ ರೀತಿಯದ್ದಾಗಿತ್ತು.

ಹಾಗಾಗಿ, 1922ರಲ್ಲಿ ನರವಿಜ್ಞಾನಿ ವಾಲ್ಟರ್ ಸ್ಪೀಲ್‌ಮೇಯರ್ ಎಂಬುವವರು ಈ ರೋಗಕ್ಕೆ ‘ಕ್ರೂಟ್ಜ್ ಫೆಲ್ಡ್-ಜಾಕೋಬ್ ಕಾಯಿಲೆ’ ಎಂದು ಹೆಸರಿಟ್ಟರು. ಗಡ್ಜೂಸೆಕ್ ಕಳುಹಿಸಿರುವ ಮಿದುಳಿನ ಚಿತ್ರವು ಕ್ರೂಟ್ಜ್ ಫೆಲ್ಡ್-ಹಾಕೋಬ್ ಕಾಯಿಲೆಯ ಹಾಗೆ ಕಾಣುತ್ತದೆ ಎಂದು ಲಂಡನ್‌ನ ವಿಜ್ಞಾನಿಗಳು ತೀರ್ಮಾನಕ್ಕೆ ಬಂದರು ಹಾಗೂ ಆ ಬಗ್ಗೆ ಗಡ್ಜೂಸೆಕ್ ಅವರಿಗೆ ಮಾಹಿತಿಯನ್ನು ನೀಡಿದರು.

ಕರಾಳ ರಹಸ್ಯ: ಗಡ್ಜೂಸೆಕ್ ಹಾಗೂ ಅವರ ತಂಡದವರು ಫೋರ್ ಬುಡಕಟ್ಟಿನವರ ಎಲ್ಲ ಸಾಂಸ್ಕೃತಿಕ ಆಯಾಮಗಳನ್ನು ಆಳವಾಗಿ ಅಧ್ಯಯನ ಮಾಡಲಾರಂಭಿಸಿದರು. ಆಗ ಅವರಿಗೆ ಕುರು ಕಾಯಿಲೆಯು ಹೇಗೆ ಒಬ್ಬರಿಂದ ಒಬ್ಬರಿಗೆ ಬರುತ್ತಿರಬಹುದು ಎನ್ನುವುದರ ಬಗ್ಗೆ ಒಂದು ಸುಳಿವು ದೊರೆಯಿತು. ಇದುವೇ ವಂಶಪಾರಂಪರ್ಯ ಶವಭಕ್ಷಣೆ ಅಥವಾ ಪೀಳಿಗೆಯಿಂದ ಪೀಳಿಗೆಗೆ ಹರಡುವ ನರಭಕ್ಷಣೆಯಾಗಿತ್ತು (ಟ್ರಾನ್ಸ್‌ಜೆನೆರೇಷನಲ್ ಕ್ಯಾನಿ ಬಾಲಿಸಮ್).

ಮಹಿಳೆಯರು: ಫೋರ್ ಜನಾಂಗದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯವಿತ್ತು. ಶವಸಂಸ್ಕಾರದ ವಿಧಿವಿಧಾನಗಳಲ್ಲಿ ಮಹಿಳೆಯರದ್ದೇ ಮೇಲುಗೈ. ಕುಟುಂಬದ ಹಿರಿಯರು ಮರಣ ಹೊಂದಿದಾಗ, ಅವರ ದೇಹವನ್ನು ಹೂಳುತ್ತಿರಲಿಲ್ಲ ಅಥವಾ ಸುಡುತ್ತಿರಲಿಲ್ಲ. ಬದಲಿಗೆ ಅವರ ದೇಹವನ್ನು ತುಂಡುತುಂಡಾಗಿ ಮಾಡಿ ತಿನ್ನುತ್ತಿದ್ದರು. ಈ ವಿಧಿವಿಧಾನವನ್ನು ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಮಹಿಳೆಯರು ಹೊರುತ್ತಿದ್ದರು. ಸತ್ತವರ ಮಾಂಸ ಸೇವನೆಯು ಅಸಹ್ಯಕರವಾಗಿ ಕಾಣುತ್ತಿರಲಿಲ್ಲ. ಬದಲಿಗೆ, ಮೃತಪಟ್ಟ ವ್ಯಕ್ತಿಯ ಮೇಲಿನ ಅತ್ಯಂತ ಉನ್ನತ ಮಟ್ಟದ ಪ್ರೀತಿ ಮತ್ತು ಗೌರವದ ಸಂಕೇತವಾಗಿತ್ತು. ಮಣ್ಣಿನಲ್ಲಿ ಹೂತುಹಾಕಿ ಹುಳುಗಳಿಗೆ ಆಹಾರವಾಗಿಸುವ ಬದಲು, ತಮ್ಮ ಹೊಟ್ಟೆಯೊಳಗೆ ಸೇರಿಸಿಕೊಳ್ಳುವುದು ಶ್ರೇಷ್ಠ ಎಂಬುದು ಅವರ ನಂಬಿಕೆಯಾಗಿತ್ತು.

ಫೋರ್ ಜನಾಂಗದವರ ನಂಬಿಕೆಯಂತೆ, ಶರೀರದ ಸ್ನಾಯುಗಳಿಗಿಂತ ಮಿದುಳು ಶ್ರೇಷ್ಠವಾಗಿತ್ತು. ಮಿದುಳು ‘ಬುದ್ಧಿವಂತಿಕೆ ಮತ್ತು ಜ್ಞಾನದ ಕೇಂದ್ರ’ ಎಂದು ಅವರು ನಂಬಿದ್ದರು. ಹಾಗಾಗಿ ಸತ್ತವರ ಮಿದುಳನ್ನು ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ತಿನ್ನುತ್ತಿದ್ದರು. ಇದರಿಂದ ‘ಹಿರಿಯರ ಜ್ಞಾನ ಮಕ್ಕಳಿಗೆ ಸಿಗುತ್ತದೆ’ ಎಂಬುದು ಅವರ ಆಶಯವಾಗಿತ್ತು. ಪುರುಷರು ಯುದ್ಧ ಮತ್ತು ಬೇಟೆ ಯಾಡುವುದರಲ್ಲಿ ತೊಡಗಿಕೊಳ್ಳುತ್ತಿದ್ದರು.

ಈ ಸಂಸ್ಕಾರದಲ್ಲಿ ಭಾಗವಹಿಸಿದರೆ ತಮ್ಮ ಶಕ್ತಿ ಕ್ಷೀಣಿಸುತ್ತದೆ ಎಂದು ಅವರು ನಂಬಿದ್ದರಿಂದ, ಈ ಪದ್ಧತಿಯಿಂದ ಹೆಚ್ಚಿನ ಗಂಡಸರು ದೂರ ಉಳಿದರು. ಇದರಿಂದಾಗಿ ‘ಕುರು’ ಕಾಯಿಲೆಯು ಗಂಡಸ ರಿಗೆ ಹೆಚ್ಚು ಬರುತ್ತಿರಲಿಲ್ಲ. ಹೆಂಗಸರು ಮತ್ತು ಮಕ್ಕಳಿಗೆ ಮಾತ್ರ ಬರುತ್ತಿತ್ತು.

ಪ್ರಿಯಾನ್: ನಮಗೆ ತಿಳಿದಿರುವ ರೋಗಜನಕಗಳೆಂದರೆ ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರ ಹಾಗೂ ಕೆಲವು ಆದಿಜೀವಿಗಳು (ಪ್ರೋಟೋ ಜ಼ೋವನ್ಸ್). ಇವುಗಳಲ್ಲಿ ಡಿಎನ್‌ಎ ಅಥವಾ ಆರ್‌ಎನ್‌ಎ ತಳಿವಸ್ತುವಿರುತ್ತದೆ. ಹಾಗಾಗಿ ಇವು ಪುನರುತ್ಪಾದನೆಯ (ರಿ-ಪ್ರೊಡಕ್ಷನ್) ಮೂಲಕ ಸಂತಾನವನ್ನು ವಽಸಿಕೊಳ್ಳುತ್ತವೆ. ಆದರೆ ಪ್ರಿಯಾನಿನಲ್ಲಿ ಜೀವಕೋಶವಿರುವುದಿಲ್ಲ. ತಳಿ ವಸ್ತುವಿರುವುದಿಲ್ಲ. ಅದು ಕೇವಲ ಒಂದು ರಾಸಾಯನಿಕ ವಸ್ತು. ಒಂದು ಪ್ರೊಟೀನ್ ಮಾತ್ರವಾಗಿದ್ದು, ಜೀವವಿಲ್ಲದ ವಸ್ತು ವೊಂದು ಸೋಂಕನ್ನು ಹರಡುವ ವಿಚಾರವು ವಿಜ್ಞಾನಕ್ಕೆ ಹೊಸದಾಗಿತ್ತು.

ನಮ್ಮ ಮಿದುಳಿನಲ್ಲಿ ನೈಸರ್ಗಿಕವಾಗಿ ‘ಪ್ರಿಯಾನ್ ಪ್ರೋಟೀನ್’ (ಪಿಆರ್‌ಪಿ) ಎಂಬ ಪ್ರೋಟೀನ್‌ ಗಳಿರುತ್ತವೆ. ಇವು ಸಾಮಾನ್ಯವಾಗಿ ಹಾನಿಕಾರಕವಲ್ಲ. ಆದರೆ, ಯಾವುದೋ ನಮಗೆ ತಿಳಿಯದ ಕಾರಣದಿಂದ ಈ ಪ್ರೋಟೀನ್ ರಚನೆಯು ತಪ್ಪು ತಪ್ಪಾದ ರೀತಿಯಲ್ಲಿ ಮಡಚಿ ಕೊಂಡಾಗ (ಮಿಸ್-ಲ್ಡಿಂಗ್) ಅದು ಮಾರಕ ಪ್ರಿಯಾನ್ ಆಗಿ ಬದಲಾಗುತ್ತದೆ. ಪ್ರಿಯಾನ್ ಗಳು ಹರಡುವ ರೀತಿ ತುಂಬಾ ವಿಭಿನ್ನ. ಒಂದು ವಿರೂಪಗೊಂಡ ಪ್ರಿಯಾನ್ ಮಿದುಳನ್ನು ಪ್ರವೇಶಿಸಿದರೆ, ಅದು ತನ್ನ ಪಕ್ಕದಲ್ಲಿ ರುವ ಆರೋಗ್ಯವಂತ ಪ್ರೋಟೀನ್‌ಗಳನ್ನು ಕೂಡ ತನ್ನಂತೆಯೇ ತಪ್ಪು ರೀತಿಯಲ್ಲಿ ಮಡಚಿ ಕೊಳ್ಳುವಂತೆ ಪ್ರೇರೇಪಿಸುತ್ತದೆ.

ಇದು ಒಂದು ಸರಪಳಿ ಕ್ರಿಯೆಯಂತೆ (ಚೈನ್ ರಿಯಾಕ್ಷನ್) ಮುಂದುವರಿಯುತ್ತದೆ. ಕೊನೆಗೆ ಮಿದುಳಿನ ಸಹಜ ರಚನೆಯು ನಾಶವಾಗಿ ಅಲ್ಲಿ ಸ್ಪಂಜಿನಂಥ ತೂತುಗಳು ರೂಪುಗೊಳ್ಳುತ್ತವೆ.

ಪ್ರಿಯಾನುಗಳನ್ನು ನಾಶಪಡಿಸುವುದು ಅಸಾಧ್ಯ. ಬಿಸಿಲು, ಬಿಸಿನೀರು, ಆಲ್ಕೋಹಾಲ್ ಅಥವಾ ವಿಕಿರಣಗಳನ್ನು ಅವು ಎದುರಿಸಿ ನಿಲ್ಲಬಲ್ಲವು. ಪ್ರಿಯಾನ್ ನಮ್ಮ ದೇಹದ್ದೇ ಒಂದುಷಪ್ರೊಟೀನ್. ಹಾಗಾಗಿ ಅದನ್ನು ‘ಪರವಸ್ತು’ ಎಂದು ಗುರುತಿಸಿ ಮಾನವ ದೇಹದ ಮಿಲಿಟರಿ ಪಡೆಯೆಂದೇ ಖ್ಯಾತವಾದ ನಮ್ಮ ದೇಹದ ರೋಗರಕ್ಷಣಾ ವ್ಯವಸ್ಥೆಯು (ಇಮ್ಯೂನ್ ಸಿಸ್ಟಮ್) ಇವನ್ನು ನಾಶ ಪಡಿಸಲು ಮುಂದಾಗುವುದಿಲ್ಲ. ಇವುಗಳನ್ನು ನಾಶಪಡಿಸುವಂಥ ಔಷಧಗಳೂ ಇಲ್ಲ.

ಮೂಲ: ಕುರು ಕಾಯಿಲೆಗೆ ಕಾರಣ ಪ್ರಿಯಾನ್ ಎಂಬ ವಿರೂಪಗೊಂಡ ಪ್ರೋಟೀನ್ ಎನ್ನುವುದು ಖಚಿತವಾಯಿತು. ಫೋರ್ ಬುಡಕಟ್ಟಿನಲ್ಲಿ ಕುರು ಕಂಡುಬಂದ ಮೊದಲ ವ್ಯಕ್ತಿಯನ್ನು ಗುರುತಿಸುವ ಪ್ರಯತ್ನವು ನಡೆಯಿತು.

ಸುಮಾರು 1900ರ ಆಸುಪಾಸಿನಲ್ಲಿ ಪ್ರಿಯಾನ್ ಕಾಯಿಲೆಯು ಫೋರ್ ಬುಡಕಟ್ಟಿನಲ್ಲಿ ಯಾರಿಗೋ ಒಬ್ಬರಿಗೆ ಕಂಡುಬಂದಿರಬೇಕು ಎಂದು ತೀರ್ಮಾನಿಸಿದರು. ಹತ್ತು ಲಕ್ಷ ಆರೋಗ್ಯವಂತರಲ್ಲಿ ಒಬ್ಬರ ಮಿದುಳಿನಲ್ಲಿನಲ್ಲಿ ಪಿಆರ್‌ಪಿ ಪ್ರೋಟೀನ್ ಸಹಜವಾಗಿ ವಿರೂಪಗೊಳ್ಳುವ ಸಾಧ್ಯತೆಯಿದೆ. ಆ ಒಬ್ಬ ವ್ಯಕ್ತಿಯ ಮಿದುಳನ್ನು ತಿಂದ ಮಹಿಳೆಯರಲ್ಲಿ ಕುರು ಕಾಯಿಲೆಯು ಕಾಣಿಸಿಕೊಂಡು, ಫೋರ್ ಜನಾಂಗದಲ್ಲಿ ಮುಂದುವರಿಯಿತು ಎನ್ನುವ ತೀರ್ಮಾನಕ್ಕೆ ಬಂದರು.

ಆಸ್ಟ್ರೇಲಿಯ ಸರಕಾರವು ಶವಭಕ್ಷಣೆಯನ್ನು ನಿಷೇಧಿಸಿತು. 2005ರಲ್ಲಿ ಕೊಟ್ಟ ಕೊನೆಯ ಕುರು ರೋಗಿ ಮರಣಿಸಿದ. ಕುರು ಕಾಯಿಲೆಯನ್ನು ಕಂಡುಹಿಡಿದ ಡೇನಿಯಲ್ ಕಾರ್ಲ್ಟನ್ ಗಡ್ಜೂಸೆಕ್ (1976) ಹಾಗೂ ಪ್ರಿಯಾನ್ ಅನ್ನು ಕಂಡು ಹಿಡಿದ ಸ್ಟಾನ್ಲೆ ಪ್ರುಸಿನರ್ (1997) ಅವರಿಗೆ ನೊಬೆಲ್ ಪಾರಿತೋಷಕವು ದೊರೆಯಿತು.

ಉತ್ಪರಿವರ್ತನೆ: 1950ರ ದಶಕದಲ್ಲಿ ಸಾವಿರಾರು ಜನರು ಕುರು ಕಾಯಿಲೆಯಿಂದ ಸತ್ತರು. ಆದರೆ ಮಿದುಳನ್ನು ತಿಂದ ಕೆಲವು ಮಹಿಳೆಯರಲ್ಲಿ ಕುರು ಕಂಡುಬರಲಿಲ್ಲ. ಇದಕ್ಕೆ ಕಾರಣವೇನಿರ ಬಹುದೆಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ ಸಂಶೋಧಕರು ಈ ಬದುಕುಳಿದವರ ವಂಶ ವಾಹಿಗಳನ್ನು (ಜೀನ್ಸ್) ಅಧ್ಯಯನ ಮಾಡಿದರು. ಆಗ ಅವರಿಗೆ ‘ಜಿ 127 ವಿ’ ಎಂಬ ಹೆಸರಿನ ಒಂದು ವಿಶಿಷ್ಟವಾದ ಜೀನ್ ಉತ್ಪರಿವರ್ತನೆ (ಮ್ಯುಟೇಶನ್) ಕಂಡುಬಂದಿತು.

ಯಾರಲ್ಲಿ ಈ ‘ಜಿ 127 ವಿ’ ಉತ್ಪರಿವರ್ತನೆಯಾಗಿತ್ತೋ, ಅಂಥವರ ದೇಹದಲ್ಲಿ ಪ್ರಿಯಾನ್ ಪ್ರೋಟೀನ್‌ಗಳು ವಿರೂಪಗೊಳ್ಳುತ್ತಿರಲಿಲ್ಲ. ಈ ಉತ್ಪರಿವರ್ತನೆಯು ಕುರು ಕಾಯಿಲೆಯನ್ನು ತಡೆಯುತ್ತಿತ್ತು.

ಸಾಮಾನ್ಯವಾಗಿ ಇಂಥ ಜೀವವಿಕಾಸದ ಉತ್ಪರಿವರ್ತನಾ ಪ್ರಕ್ರಿಯೆಯು ನಡೆಯಲು ಸಾವಿರಾರು ವರ್ಷಗಳು ಬೇಕು. ಆದರೆ ಫೋರ್ ಜನಾಂಗದಲ್ಲಿ ಈ ಬದಲಾವಣೆಯು ಕೇವಲ 100ರಿಂದ 200 ವರ್ಷಗಳ ಅವಧಿಯಲ್ಲಿ ಸಂಭವಿಸಿತು. ಕುರು ಕಾಯಿಲೆ ಹರಡಲು ಶುರುವಾದಾಗ, ಈ ಬದಲಾವಣೆ ಹೊಂದಿದ್ದ ವ್ಯಕ್ತಿಗಳು ಬದುಕುಳಿದರು ಮತ್ತು ಅವರ ಸಂತತಿಗೆ ಈ ರೋಗನಿರೋಧಕ ಶಕ್ತಿ ವರ್ಗಾವಣೆಯಾಯಿತು.

ಈ ಅಧ್ಯಯನವು ಆಧುನಿಕ ವೈದ್ಯಕೀಯ ಜಗತ್ತಿಗೆ ದೊಡ್ಡ ವರದಾನವಾಗಿದೆ. ಅಲ್ಜೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳಲ್ಲೂ ಪ್ರೋಟೀನ್‌ಗಳು ತಪ್ಪು ರೀತಿಯಲ್ಲಿ ಮಡಚಿಕೊಳ್ಳುತ್ತವೆ. ಫೋರ್ ಜನಾಂಗದ ಈ ‘ರೋಗ ನಿರೋಧಕ ಪ್ರೋಟೀನ್’ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದರೆ, ಅಲ್ಜೈಮರ್‌ನಂಥ ಕಾಯಿಲೆಗಳಿಗೆ ಮದ್ದು ಕಂಡುಹಿಡಿಯಲು ಸಹಾಯವಾಗುತ್ತದೆ.