ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಮಂಗಕ್ಕೇ ಐವತ್ತು ಲಕ್ಷವಾದರೆ- ಮನುಷ್ಯನಿಗೆಷ್ಟು ?

ಮನುಷ್ಯನ ವಂಶವಾಹಿನಿಗೆ ಹೋಲಿಕೆಯಾಗುವ ಇಲಿಗಳ ಮೇಲೆ ಔಷಧಿಯನ್ನು ಅದೆಷ್ಟೇ ಬಾರಿ ಪ್ರಯೋಗಿಸಿ, ದೃಢಪಟ್ಟಿದ್ದರೂ ಮನುಷ್ಯನ ಮೇಲೆ ಅದು ಕೆಲಸವನ್ನೇ ಮಾಡದಿರಬಹುದು. ಔಷಧಿ ದೇಹದೊಳಕ್ಕೆ ಸೇರುತ್ತಿದ್ದಂತೆ ಅದನ್ನು ಮಾನವ ದೇಹ ವಿಷವೆಂದು ಗ್ರಹಿಸಿ ಬಿಡಬಹುದು, ಅಥವಾ ಅದು ಅಂದುಕೊಳ್ಳದ ಅಡ್ಡಪರಿಣಾಮವನ್ನು ಬೀರಬಹುದು.

ಮಂಗಕ್ಕೇ ಐವತ್ತು ಲಕ್ಷವಾದರೆ- ಮನುಷ್ಯನಿಗೆಷ್ಟು ?

ಶಿಶಿರಕಾಲ

shishirh@gmail.com

ಕೆಲವು ಓದುಗರು ಹಿಂದಿನ ವಾರದ ಲೇಖನಕ್ಕೆ ಮನಸ್ಸು ಭಾರವಾಯಿತು, ಓದಿ ಕಷ್ಟವೆನಿಸಿತು ಎಂದು ಅಭಿಪ್ರಾಯ ಹಂಚಿಕೊಂಡಿರಿ. ನನಗೂ ಅಷ್ಟೇ. ಕೆಲವು ಅನುಭವವನ್ನು ಅಕ್ಷರಕ್ಕಿಳಿಸುವಾಗ ಮನಸ್ಸು ಆರ್ದ್ರವಾಗುತ್ತದೆ. ಕೆಲವು ಭಾವ ತೀವ್ರತೆಗಳನ್ನು ಶಬ್ದಗಳಲ್ಲಿ ಅದರಲ್ಲೂ ಬರೆಯುವಾಗ ಪುನರ್‌ಅನುಭವವಾಗಿ ಕಷ್ಟವೆನಿಸುತ್ತದೆ.

ಮನಕಲಕುವ ಸನ್ನಿವೇಶ, ಸತ್ಯ ಕಣ್ಣೆದುರಾದಾಗ, ಅದರ ತೀವ್ರತೆ ಎಷ್ಟಿರುತ್ತದೆಯೆಂದರೆ ಆ ಕ್ಷಣಕ್ಕೆ ನಾವು ಕೇವಲ ನಿರ್ಭಾವುಕ ಸಾಕ್ಷಿಯಾಗಿಬಿಡುತ್ತೇವೆ. ಪ್ರಾಣಿಗಳ ಮೇಲಿನ ಪ್ರಯೋಗವನ್ನು ಕಂಡಾ ಗಲೆಲ್ಲ ನೈತಿಕತೆ ಮತ್ತು ಅಗತ್ಯತೆಗಳೆರಡರ ಪ್ರಶ್ನೋತ್ತರಗಳ ಪೈಕಿ ಯಾವುದು ಸರಿ, ಯಾವುದು ತಪ್ಪು ಎಂಬ ಗೊಂದಲ.

ಇಂತಲ್ಲಿ ಸರಿ ತಪ್ಪು ಪ್ರಶ್ನೆಗಳೇ ಅಪ್ರಸ್ತುತವೇ ಎಂಬ ಪ್ರಶ್ನೆ ಏಳುತ್ತದೆ. ಇಂಥ ಪ್ರಶ್ನೆಗಳನ್ನು ಹಾಗೆಯೇ ಓದುಗರ ಮುಂದೆ ಇರಿಸಿ ವಿವೇಚಿಸುವಂತೆ ಮಾಡಿದರೆ ಮಾತ್ರ ಲೇಖನಕ್ಕೆ, ವಿಚಾರಕ್ಕೆ ನ್ಯಾಯ. ಲೇಖನಕ್ಕೆ ಅಭಿಪ್ರಾಯಿಸಿದ ಎಲ್ಲರಲ್ಲಿಯೂ ಈ ಇಡೀ ವ್ಯವಸ್ಥೆಯ ಬಗ್ಗೆ ಮರುಕದ ಜತೆ ಪ್ರಾಣಿಗಳತ್ತ ಕನಿಕರ ಸ್ಪಷ್ಟವಾಗಿತ್ತು. ಅರಿವು ಮತ್ತು ಸಹಾನುಭೂತಿ ಇದುವೇ ಲೇಖನದ ಆಶಯ ವಾಗಿತ್ತು.

ವೈದ್ಯಕೀಯ ಆವಿಷ್ಕಾರಗಳು ಪ್ರಯೋಗಾಲಯದ ಪಂಜರದೊಳಗೆ ಆರಂಭವಾದರೆ, ಅಲ್ಲಿಂದ ಮುಂದೆ ಸರಕಾರಿ ಒಪ್ಪಿಗೆಗಳು ಇತ್ಯಾದಿ ಮುಗಿಸಿದ ನಂತರ ಮನುಷ್ಯನ ಮೇಲೆ ಪ್ರಯೋಗವಾಗಲು ಅಣಿಯಾಗುತ್ತವೆ. ಅದರಲ್ಲಿ ಒಂದಿಷ್ಟು ಹಂತಗಳಿವೆ.

ಇದನ್ನೂ ಓದಿ: Shishir Hegde Column: ಬ್ರಹ್ಮಾಂಡ ಗುರುವಿಗೂ ಉತ್ತರ ಗೊತ್ತಿಲ್ಲದ ಪ್ರಶ್ನೆಗಳು !

ಮೊದಲನೇ ಹಂತದಲ್ಲಿ ಮೊಟ್ಟಮೊದಲ ಬಾರಿ ಔಷಧಿ ಮನುಷ್ಯನ ಮೇಲೆ ಪ್ರಯೋಗವಾಗುತ್ತದೆ. ವಿಜ್ಞಾನ ಮನುಷ್ಯನನ್ನು ಸಂಧಿಸುವುದು ಈಗ, ಈ ಹಂತದಲ್ಲಿ. ಆದರೆ ಈ ಪ್ರಯೋಗವಾಗುವುದು ಮಾತ್ರ ರೋಗಿಗಳ ಮೇಲಲ್ಲ. ಬದಲಿಗೆ ಸುಮಾರು 20-100 ಮಂದಿ ಆರೋಗ್ಯವಂತ, ದೃಢಕಾಯ ದವರ ಮೇಲೆ. ಔಷಧಿ ಇರುವುದು ರೋಗಿಗಳಿಗೆ, ರೋಗಕ್ಕೆ. ಹಾಗಾದರೆ ಆರೋಗ್ಯಕರ ಜನರ ಮೇಲೇಕೆ ಮೊದಲ ಪ್ರಯೋಗ? ಪ್ರಾಣಿಗಳು, ಇಲಿ, ಮಂಗ ಇತ್ಯಾದಿಗಳ ಮೇಲಿನ ಪ್ರಯೋಗವೇ ಬೇರೆ, ಮನುಷ್ಯನ ಮೇಲಿನ ಪ್ರಯೋಗವೇ ಬೇರೆ.

ಮನುಷ್ಯನ ವಂಶವಾಹಿನಿಗೆ ಹೋಲಿಕೆಯಾಗುವ ಇಲಿಗಳ ಮೇಲೆ ಔಷಧಿಯನ್ನು ಅದೆಷ್ಟೇ ಬಾರಿ ಪ್ರಯೋಗಿಸಿ, ದೃಢಪಟ್ಟಿದ್ದರೂ ಮನುಷ್ಯನ ಮೇಲೆ ಅದು ಕೆಲಸವನ್ನೇ ಮಾಡದಿರಬಹುದು. ಔಷಧಿ ದೇಹದೊಳಕ್ಕೆ ಸೇರುತ್ತಿದ್ದಂತೆ ಅದನ್ನು ಮಾನವ ದೇಹ ವಿಷವೆಂದು ಗ್ರಹಿಸಿ ಬಿಡಬಹುದು, ಅಥವಾ ಅದು ಅಂದುಕೊಳ್ಳದ ಅಡ್ಡಪರಿಣಾಮವನ್ನು ಬೀರಬಹುದು.

ಆವಿಷ್ಕಾರದ ಗ್ರಹಿಕೆಯಲ್ಲಿ ಕಣ್ಣು ತಪ್ಪಿದ ಏನೋ ಒಂದು ಇಲ್ಲಿ ಪ್ರತ್ಯಕ್ಷವಾಗಬಹುದು ಇತ್ಯಾದಿ. ಸುರಕ್ಷಿತ ಡೋಸೇಜ್ ಎಂದರೆ ಎಷ್ಟು, ಎಷ್ಟುಕೊಟ್ಟರೆ ಔಷಧಿ, ಎಷ್ಟು ಕೊಟ್ಟರೆ ವಿಷ, ಅಲರ್ಜಿ, ಅಡ್ಡಪರಿಣಾಮ ಇವೆಲ್ಲವನ್ನೂ ಆರೋಗ್ಯವಂತರಲ್ಲಿ ಹೆಚ್ಚು ನಿಖರವಾಗಿ ತಿಳಿಯಬಹುದು. ಹಾಗಾ ದರೆ ಇಂಥ ಪ್ರಯೋಗಕ್ಕೆ ಮುಂದೆ ಬರುವ ಆಸಾಮಿಗಳಾದರೂ ಯಾರು? ಔಷಧಿ ಕಂಪನಿಗಳ ಹತ್ತಿರ ಈ ಪ್ರಶ್ನೆ ಕೇಳಿದರೆ ಇವರು ‘ಆರೋಗ್ಯ ಸೈನಿಕರು’ ಎಂದೆಲ್ಲ ಬುರುಡೆ ಬಿಡುತ್ತವೆ.

ಅಸಲಿಗೆ ಬಡ ವಿದ್ಯಾರ್ಥಿಗಳು, ಕಡು ಬಡವರು ಇದಕ್ಕೆ ತಮ್ಮನ್ನು ನೋಂದಾಯಿಸಿಕೊಳ್ಳುತ್ತಾರೆ. ಅಮೆರಿಕದಲ್ಲಿ ಅವರಿಗೆ ದಿನಕ್ಕೆ ಇಂತಿಷ್ಟು ಎಂದು ಸಂಬಳ. ಸಾಮಾನ್ಯವಾಗಿ ಔಷಧಿಯ ಗುಣ ಲಕ್ಷಣಕ್ಕೆ ಅನುಗುಣ ವಾಗಿ ದಿನಕ್ಕೆ ಐದರಿಂದ ಇಪ್ಪತ್ತು ಸಾವಿರ ರುಪಾಯಿ. ಇದೆಲ್ಲ ಚಿಕ್ಕಪುಟ್ಟ ತಲೆನೋವು ಮೊದಲಾದ ಔಷಧಿಗೆ.

ಅದು ಬಿಟ್ಟು ಪೂರ್ಣ ಪ್ರಮಾಣದ ಪ್ರಯೋಗಕ್ಕಾದರೆ ಅಥವಾ ಔಷಧಿಯನ್ನು ಆರೋಗ್ಯಕರ ವ್ಯಕ್ತಿ ಪಡೆಯುವುದರಿಂದ ಹೆಚ್ಚಿನ ಅಪಾಯ ಸಾಧ್ಯತೆಯಿದ್ದರೆ 10 ಸಾವಿರ ಡಾಲರ್ ತನಕ, ಹೆಚ್ಚು ಕಡಿಮೆ 8 ಲಕ್ಷ ರುಪಾಯಿ. ಇಷ್ಟಾದರೂ ಇದು ಪಂಜರದೊಳಗಿನ ಮಂಗಕ್ಕಿಂತ ಅಗ್ಗ!!

ಏಡ್ಸ್, ಕ್ಯಾನ್ಸರ್ ಮೊದಲಾದ ಕೆಲವೊಂದಿಷ್ಟು ರೋಗಗಳ ಔಷಧಿಗಳನ್ನು ಹೊರತುಪಡಿಸಿ ಉಳಿದೆಲ್ಲ ಔಷಧಿಗಳು ಈ ರೀತಿ ಆರೋಗ್ಯಕರ ವ್ಯಕ್ತಿಗಳ ಮೇಲೆಯೇ ಮೊದಲು ಪ್ರಯೋಗಿಸಲ್ಪಡು ವುದು. ಈ ರೀತಿ ಹಣಕ್ಕಾಗಿ ದೇಹವನ್ನು ಪಣವಿಡುವವರು, ಪ್ರಯೋಗದಲ್ಲಿ ಭಾಗವಹಿಸುವುದಕ್ಕಿಂತ ಮೊದಲು ಯಾವುದೇ ಅಡ್ಡಪರಿಣಾಮವಾದರೂ ಫಾರ್ಮಾ ಕಂಪನಿ ಜವಾಬ್ದಾರಿಯಲ್ಲ ಎಂದು ಸಹಿ ಹಾಕಿಕೊಡಬೇಕಾಗುತ್ತದೆ.

ಈಗ ಎರಡನೇ ಹಂತ. ಈಗ ರೋಗಿಗಳ ಮೇಲಿನ ಪ್ರಯೋಗ, 100-300 ರೋಗಿಗಳ ಮೇಲೆ. ಔಷಧಿ ಮನುಷ್ಯನ ರೋಗದ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಎನ್ನುವುದು ಇಲ್ಲಿ ಈಗ ಮೊದಲಬಾರಿ ಪರೀಕ್ಷೆಗೊಳಗಾಗುವುದು. ಇದು ಅತ್ಯಂತ ಜಾಗರೂಕತೆಯ ಹಂತ. ಇಲ್ಲಿಯೇ ಅಸಲಿ ರೋಗಿಗಳ ಮೇಲಿನ ಅಡ್ಡಪರಿಣಾಮ ಇತ್ಯಾದಿ ವ್ಯಕ್ತವಾಗುವುದು. ಹಿಂದಿನ ಹಂತದಲ್ಲಿ, ಆರೋಗ್ಯ ಕರ ವ್ಯಕ್ತಿಗಳ ಮೇಲಿನ ಪ್ರಯೋಗದಲ್ಲಿ ಕಾಣಿಸಿಕೊಳ್ಳದ್ದು ಈ ಹಂತದಲ್ಲಿ ಕಾಣಿಸಿಕೊಳ್ಳಬಹುದು.

ಈ ಹಂತದಲ್ಲಿ ಪ್ರಯೋಗಕ್ಕೊಳಗಾಗುವ ರೋಗಿಗಳನ್ನು ಯಾದೃಚ್ಛಿಕ ಆಯ್ಕೆ ಮಾಡಲಾಗುತ್ತದೆ. ಏನೆಂದರೆ ಈ 300 ಮಂದಿಯಲ್ಲಿ ಕೆಲವರಿಗೆ ನಿಜವಾದ ಔಷಧಿ ಕೊಟ್ಟರೆ ಇನ್ನು ಕೆಲವರಿಗೆ ಆ ರೋಗಕ್ಕೆ ಈಗಾಗಾಲೇ ಇರುವ ಹಳೆಯ ಔಷಧಿ ನೀಡಲಾಗುತ್ತದೆ. ಇಲ್ಲವೇ ಔಷಧಿಯನ್ನೇ ಹೋಲುವ ಆದರೆ ಔಷಧಿಯ ಗುಣವಿಶೇಷವನ್ನು ತೆಗೆದು ಸಲೈನ್ ಇತ್ಯಾದಿ ನೀಡಲಾಗುತ್ತದೆ.

‘ಪ್ಲೇಸಿಬೋ ಎಫೆಕ್ಟ್‌’ ಬಗ್ಗೆ ನೀವು ಕೇಳಿರಬಹುದು. ಔಷಧ ತೆಗೆದುಕೊಂಡಿದ್ದೇನೆ ಎಂಬುದೇ ಕೆಲವರಲ್ಲಿ ರೋಗವನ್ನು ಗುಣಪಡಿಸಬಲ್ಲದು. ಇದು ಹೇಗೆ ಸಾಧ್ಯ ಎಂಬುದು ವಿಜ್ಞಾನಕ್ಕೆ ಇನ್ನೂ ತಿಳಿದಿಲ್ಲ. ಆದರೆ ಮನುಷ್ಯ ದೇಹವೆಂಬ ವಂಡರ್‌ನಲ್ಲಿ ಇದು ನಡೆಯುತ್ತದೆ. ಹಾಗಾಗಿ ಇಂಥ ಸಾಧ್ಯತೆ ಔಷಧಿಯನ್ನು ಮೀರಿ ಕೆಲಸ ಮಾಡಬಹುದು. ಆದ್ದರಿಂದ ಪರಿಣಾಮ ಔಷಧಿಯದೋ ಅಥವಾ ಪ್ಲೇಸಿಬೋ ಪರಿಣಾಮವೋ ಎಂಬುದನ್ನು ಪ್ರತ್ಯೇಕಿಸಲು ಈ ರೀತಿ ಪ್ರಯೋಗ. ಬಹುತೇಕ ಔಷಧಿಗಳು ಈ ಎರಡನೇ ಹಂತವನ್ನು ದಾಟುವುದಿಲ್ಲ.

ಅಂಕಿ-ಸಂಖ್ಯೆಗಳ ಪ್ರಕಾರ ಮೂರರಲ್ಲಿ ಒಂದು ಔಷಧಿ ಮಾತ್ರ ಇಲ್ಲಿ ಪಾಸ್ ಆಗುವುದು! ಒಂದು ಔಷಧಿ ಈ ಹಂತಕ್ಕೆ ತಲುಪುವಲ್ಲಿಯವರೆಗೆ ಅದೆಷ್ಟೋ ಹಣ, ಶ್ರಮ, ಕೆಲವೊಮ್ಮೆ ಎಂಟು-ಹದಿನೈದು ವರ್ಷವೇ ದಾಟಿರುತ್ತದೆ. ಅದಾಗಿಯೂ ಇಲ್ಲಿನ ಯಶಸ್ಸಿನ ಪ್ರಮಾಣ ಶೇ.33 ಮಾತ್ರ. ಪಾಸಿಂಗ್ ಪರ್ಸೆಂಟೇಜ್‌ಗಿಂತ ಕಡಿಮೆ!!

ಇಷ್ಟಾಗಿ ಮೂರನೇ ಹಂತದಲ್ಲಿ ಸಾವಿರಾರು ರೋಗಿಗಳಿಗೆ ಔಷಧಿ ನೀಡಿ ಪ್ರಯೋಗ. ಈ ಹಂತವನ್ನು ತಲುಪುವಾಗ ಫಾರ್ಮಾ ಕಂಪನಿ ಕೋಟಿ ಕೋಟಿ ಹಣ ವ್ಯಯಿಸಿರುತ್ತದೆ. ಅಲ್ಲಿಯವರೆಗೆ ಇದೆಲ್ಲ ದರಿಂದ ನಾಲ್ಕಾಣೆಯೂ ಹುಟ್ಟಿರುವುದಿಲ್ಲ. ಹಾಗಾಗಿ ಈ ಹಂತದಲ್ಲಿ ಔಷಧಿ ಸೋತರೆ- ಚಿಕ್ಕಪುಟ್ಟ ಕಂಪನಿಯಾದರೆ ಅದು ದಿವಾಳಿಯೆದ್ದು ಮುಳುಗಿಹೋಗಬಹುದು. ಸಾವಿರಾರು ಮಂದಿಗೆ ನೀಡಿರುವುದರಿಂದ ಔಷಧಿ ಸೋತರೆ ಅದು ಆರ್ಥಿಕ ದುರಂತವೂ ಹೌದು,

ಮನುಷ್ಯನ ದೊಡ್ಡ ದುರಂತವೂ ಆಗಬಹುದು. ಇದೆಲ್ಲ ಹಂತವನ್ನು ಅತ್ಯಂತ ವೇಗದಲ್ಲಿ ದಾಟಿದ್ದು ಕೋವಿಡ್ ಲಸಿಕೆ (MRNA ತಂತ್ರಜ್ಞಾನದ ಬಗ್ಗೆ ಹಿಂದೆ ಬರೆದಿದ್ದೆ). ಸುಮ್ಮನೆ ಊಹಿಸಿ ಕೊಳ್ಳಿ, ಒಂದು ವೇಳೆ ಫೈಜರ್, ಜಾನ್ಸನ್ ಆಂಡ್ ಜಾನ್ಸನ್, ಮಾಡರ್ನಾ ಲಸಿಕೆಗಳೇನಾದರೂ ಹತ್ತು ವರ್ಷದ ನಂತರ ಏನೋ ಒಂದು ದೊಡ್ಡ ಅಡ್ಡಪರಿಣಾಮಕ್ಕೆ ಕಾರಣವಾದದ್ದು ಗೊತ್ತಾದರೆ ಏನಾಗ ಬಹುದು ಕಥೆ? ಅಂಥ ಪರಿಣಾಮ ಇಡೀ ಮನುಷ್ಯಕುಲಕ್ಕೆ ಘಾತುಕವಾಗಬಹುದು!

ಇರಲಿ, ಇದೆಲ್ಲ ಕಥೆ, ಸವಾಲು ದಾಟಿದರೆ ಆಗ ಔಷಧಿ ಮಾರುಕಟ್ಟೆಗೆ- ಜನಬಳಕೆಗೆ. ಅದಾಗಿಯೂ ಔಷಽಯ ಪರಿಣಾಮವನ್ನು ಅಳೆದು ತೂಗುವ ಕೆಲಸ ನಿಲ್ಲುವುದಿಲ್ಲ. ಅದು ನಿರಂತರ, ಏಕೆಂದರೆ ಮನುಷ್ಯ ಮತ್ತು ರೋಗವೂ ಬದಲಾಗುತ್ತಿರುತ್ತದೆಯಲ್ಲ!

ಇವೆಲ್ಲ ಮೇಲೆ ಹೇಳಿದ ರೀತಿಯ ಅಚ್ಚುಕಟ್ಟಾಗಿ ನಡೆಯುತ್ತವೆಯೇ? ಹೌದು ಮತ್ತು ಇಲ್ಲ. ಪ್ರಯೋಗ ಎಲ್ಲಿ ನಡೆಯುತ್ತಿದೆ, ಅಲ್ಲಿನ ರಾಜಕೀಯ ಸ್ಥಿತಿ-ಗತಿ ಏನು, ಕಾನೂನು ಎಷ್ಟು ಕಟ್ಟುನಿಟ್ಟು, ಅಲ್ಲಿನ ಕಾನೂನಿನ ದಂಡದ ಪ್ರಮಾಣ ಎಷ್ಟು ಎಂಬಿತ್ಯಾದಿ ನೂರೆಂಟು ವಿಚಾರಗಳ ಮೇಲೆ ಫಾರ್ಮಾ ಕಂಪನಿಗಳು ವ್ಯವಹರಿಸುವುದು ಅಷ್ಟೇ ಸತ್ಯ. ಪ್ರಯೋಗಗಳು ಅತ್ಯಂತ ತುಟ್ಟಿ ವ್ಯವಹಾರ. ಯಶಸ್ಸಿನ ಸಾಧ್ಯತೆಯೂ ಕಡಿಮೆ.

ಹೀಗಾಗಿ ಒಂದು ಔಷಧಿಯನ್ನು ಮಾರುಕಟ್ಟೆಯಲ್ಲಿ ಮಾರಬೇಕೆಂದರೆ ಅದೆಷ್ಟೋ ಖರ್ಚಾಗಿರುತ್ತದೆ, ಅದೆಲ್ಲ ವಸೂಲಿಯಾಗಬೇಕು. ಹಾಗಾಗಿ ಎಲ್ಲ ಕಂಪನಿಗಳಂತೆಯೇ ವ್ಯವಹರಿಸುವ ಔಷಧಿ ‘ಕಂಪನಿ’ ಗಳು ಕೂಡ ಲಾಭಕ್ಕಾಗಿ ಅಡ್ಡದಾರಿ ಹಿಡಿಯುವುದು ಇದೆ. ಆಗೀಗ ಕೆಲವು ಬಡದೇಶಗಳಲ್ಲಿ ಇವು ಎಸಗುವ ಅನಾಚಾರಗಳು ಸುದ್ದಿಯಾಗುತ್ತವೆ. ಯಾರು ಏನೇ ಹೇಳಿದರೂ ಫಾರ್ಮಾ ಕಂಪನಿಗಳು ನಮ್ಮ ವ್ಯವಸ್ಥೆಯಲ್ಲಿ ಲಾಭಮಾಡಲೇಬೇಕು.

ಔಷಧಿಗೆ ವ್ಯಯಿಸಿದ ಖರ್ಚನ್ನು ಮೀರಿದ ಲಾಭವನ್ನು ಆದಷ್ಟು ಬೇಗ ಪಡೆಯಲೇಬೇಕು. ಪೇಟೆಂಟ್ ಅವಧಿ ಮುಗಿಯುವುದರೊಳಗೆ ಲೆಕ್ಕಾಚಾರ, ಲಾಭ ಎಲ್ಲವೂ ಚುಕ್ತಾ ಆಗಬೇಕು. ಪೇಟೆಂಟ್ ಇರುವುದು 20 ವರ್ಷಕ್ಕೆ. ಆದರೆ ಬಹುತೇಕ ಕಂಪನಿಗಳು ಚಿಕಿತ್ಸಾಪೂರ್ವ ಹಂತದಲ್ಲಿಯೇ ಪೇಟೆಂಟ್ ಪಡೆದುಬಿಡುತ್ತವೆ.

ಏಕೆಂದರೆ ಆವಿಷ್ಕಾರದ ಮಾಹಿತಿ ಸೋರಿಕೆಯಾದರೆ, ಇನ್ನೊಂದು ಕಂಪನಿ ಅದನ್ನೇ ತಯಾರಿಸಿ ಬಿಡಬಹುದು. ಹಾಗಾಗಿದ್ದೂ ಇದೆ. ಹಾಗಾಗಿ ಔಷಧಿ ಮಾರುಕಟ್ಟೆಗೆ ಬರುವಾಗ ಸಾಮಾನ್ಯವಾಗಿ ಪೇಟೆಂಟ್ ಅವಧಿ 10-12 ವರ್ಷ ಮಾತ್ರ ಉಳಿದಿರುತ್ತದೆ. ಕ್ಲಿನಿಕಲ್ ಟ್ರಯಲ್‌ ನಲ್ಲಿಯೇ ಆರೆಂಟು ವರ್ಷ ವ್ಯಯವಾಗಿರುತ್ತದೆ.

ಈ ಕಾರಣಕ್ಕೇ ಔಷಧಿ ತುಟ್ಟಿಯಾಗುವುದು- ಅಥವಾ ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವು ದಾದರೆ ಫಾರ್ಮಾ ಕಂಪನಿಗಳು ಗಡಿಬಿಡಿಯಲ್ಲಿ ಸುಲಿಗೆಗೆ ಮುಂದಾಗುವುದು. ಎಂಟಾಣೆ ಖರ್ಚಿನ ಔಷಈಯನ್ನು ಎಂಟು ಸಾವಿರ ರೂಪಾಯಿಗೆ ಮಾರುವುದು. ಹೀಗಿರುವ ಮನುಷ್ಯಕೃತ ವ್ಯವಸ್ಥೆ ಯಲ್ಲಿ ಫಾರ್ಮಾ ಕಂಪನಿಗಳು ಅನಾಚಾರಕ್ಕೆ ಇಳಿದ ಕರಾಳ ಇತಿಹಾಸ ಸಾಕಷ್ಟಿದೆ.

ಆ ಅನಾಚಾರಗಳೇ ಇದೆಲ್ಲದರ ಸುತ್ತ ಬಿಗಿ ಕಾನೂನು ರೂಪುಗೊಳ್ಳುವುದಕ್ಕೆ ಕಾರಣವಾಗಿದೆ. 1950ರಲ್ಲಿ ಜರ್ಮನಿಯ ಫಾರ್ಮಾ ಕಂಪನಿ Thalidomide ಎನ್ನುವ ಔಷಧಿಯನ್ನು ಹೆಚ್ಚಿನ ಪ್ರಯೋಗವಿಲ್ಲದೆ ಮಾರುಕಟ್ಟೆಗೆ ಬಿಟ್ಟಿತು. ಹೆಣ್ಣು ಗರ್ಭವತಿಯಾದಾಗ ಬೆಳಗಿನ ಸಮಯದಲ್ಲಿ ಆಗುವ ದೈಹಿಕ ಕಸಿವಿಸಿ ( Morning Sickness)ಗೆ ಇದು ಔಷಧಿಯಾಗಿತ್ತು.

ಇದನ್ನು ಸುಮಾರು 46 ದೇಶಗಳಲ್ಲಿ ಮಾರಾಟಮಾಡಲಾಯಿತು. ಆದದ್ದೇನೆಂದರೆ ಯಾರು ಗರ್ಭಧಾರಣೆಯ 20-36ನೇ ದಿನ ಇದನ್ನು ತೆಗೆದುಕೊಂಡಿದ್ದರೋ ಅವರಿಗೆಲ್ಲ ಎಲ್ಲಿಲ್ಲದ ಅಡ್ಡ ಪರಿಣಾಮವಾಯಿತು. ತರುವಾಯ ಆ ದಶಕದಲ್ಲಿ- ಹುಟ್ಟಿದ ಕನಿಷ್ಠ 20 ಸಾವಿರ ಮಕ್ಕಳಿಗೆ ಹುಟ್ಟು ವಾಗಲೇ ಒಂದಿಂದು ದೊಡ್ಡ ಅಂಗವೈಕಲ್ಯ!

ಅದರಲ್ಲಿ ಸುಮಾರು 3 ಸಾವಿರದಷ್ಟು ಸಂತ್ರಸ್ತರು ಇಂದಿಗೂ ಜೀವಂತವಾಗಿದ್ದಾರೆ, Thalidomide ದುರಂತಕ್ಕೆ ಸಾಕ್ಷಿಯಾಗಿ. ಆದರೆ ಅಮೆರಿಕಾದ FDA (Food and Drug Administration)ನ ವಿಜ್ಞಾನಿ ಡಾ.ಫ್ರಾನ್ಸಿಸ್ ಕೆಸ್ಲಿ ಮಾತ್ರ ಈ ಔಷಧಿಗೆ ಒಪ್ಪಿಗೆ ಸೂಚಿಸಿರಲಿಲ್ಲ.

ಹಾಗಾಗಿ ಅಮೆರಿಕ ಬಚಾವಾಯಿತು. ಇವತ್ತಿಗೂ ಅಮೆರಿಕದ FDA ಅನುಮತಿ ಪಡೆಯುವುದು ಕಬ್ಬಿಣದ ಕಡಲೆ. ಇಂದಿಗೂ ಭಾರತದಲ್ಲಿ ಸಿಗುವ ಅದೆಷ್ಟೋ ಔಷಧಿಗಳಿಗೆ ಅಮೆರಿಕದಲ್ಲಿ ಜಾಗ ವಿಲ್ಲ. ಉದಾಹರಣೆಗೆ Analgin, Baralgan, Nimesulide, Disprin ಇತ್ಯಾದಿ. ಇವುಗಳ ಹೆಸರು ನೀವೆಲ್ಲ ಕೇಳಿರುತ್ತೀರಿ, ಅಥವಾ ನುಂಗಿರುತ್ತೀರಿ.

ಹೊಟ್ಟೆನೋವು ಬಂದಾಗ ಬೆರಲ್ಗಾನ್! ಇದನ್ನು ಬಹುತೇಕ ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಭಾರತದಲ್ಲಿ 1996ರಲ್ಲಿ ನಿಷೇಧಕ್ಕೊಳಗಾಗಿದ್ದು ಕ್ರಮೇಣ ಮತ್ತೆ ಅನುಮತಿ ಪಡೆಯಿತು. ಅದಾದ ನಂತರ 2013ರಲ್ಲಿ ಮತ್ತೆ ಸಂಪೂರ್ಣ ನಿಷೇಧಕ್ಕೊಳಗಾಯಿತು. ಈಗ ಅತ್ಯಂತ ಹೆಚ್ಚಿನ ನೋವಿ ಗಷ್ಟೇ ಅನಾಲ್ಜಿನ್ ಬಳಸಲು ಭಾರತದಲ್ಲಿ ಅನುಮತಿಯಿದೆ. ಈ ರೀತಿ ವ್ಯವಸ್ಥೆ, ರಾಜಕಾರಣದ ಜತೆ ಕೈಜೋಡಿಸಿ ಫಾರ್ಮಾ ಕಂಪನಿಗಳು ವಶೀಲಿಗಿಳಿಯುವುದು, ಸರಕಾರವನ್ನು ಒತ್ತಾಯಿಸಿ, ಅಥವಾ ಹಿಂಬಾಗಿಲಿನಿಂದ ಅನುಮತಿ ಪಡೆಯುವುದು ಸಾಮಾನ್ಯ.

ತೀರಾ ಇತ್ತೀಚೆಗೆ 2006ರಲ್ಲಿ TGN 1412 ಎಂಬ ಔಷಧಿಯನ್ನು ಪ್ರಾಣಿಪ್ರಯೋಗದ ನಂತರದ ಮೊದಲನೇ ಹಂತವಾಗಿ ಆರೋಗ್ಯಕರ ವ್ಯಕ್ತಿಗಳಿಗೆ ನೀಡಿದಾಗ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಿತು. ಪರಿಣಾಮವೆಂದರೆ ಏನು? ಔಷಧಿ ಪ್ರಯೋಗಕ್ಕೆ ಪಡೆದ ಹತ್ತಾರು ಮಂದಿ ಬಹು ಅಂಗಗಳ ವೈಫಲ್ಯದಿಂದ ತಕ್ಷಣ ಜೀವ ಕಳೆದುಕೊಂಡರು. ಇದೆಲ್ಲ ಉದಾಹರಣೆಗಳಲ್ಲಿ ಕೆಲವು ತೀರಾ ಅಮಾನವೀಯ.

ಫೈಜರ್ ಕಂಪನಿ 1996ರಲ್ಲಿ ನೈಜೀರಿಯಾದಲ್ಲಿ meningitis ಎಂಬ ರೋಗಕ್ಕೆ ಔಷಧಿ ಪ್ರಯೋಗ ನಡೆಸುತ್ತಿತ್ತು. ಈ ಔಷಧಿಯನ್ನು ನೀಡಲು ಎಫ್‌ ಡಿಎ ಅನುಮತಿ ನೀಡಿದ್ದು ವಯಸ್ಕರಿಗೆ ಮಾತ್ರ. ಆದರೆ ಅಲ್ಲಿನ ತಂದೆ-ತಾಯಂದಿರ ಅನುಮತಿಯನ್ನು ಪಡೆಯದೆ ಪೈಜರ್ ತನ್ನ ಔಷಧಿ ಯನ್ನು ಸುಮಾರು 200 ಮಕ್ಕಳ ಮೇಲೆ ಪ್ರಯೋಗಿಸಿಬಿಟ್ಟಿತು. ಪರಿಣಾಮ ಕೆಲವು ಮಕ್ಕಳು ಅಸ್ವಸ್ಥ ಗೊಂಡರು,

ಹಲವು ಮಕ್ಕಳು ಸತ್ತರು. ಕಳೆದ ಐದಾರು ದಶಕದಲ್ಲಿ ಅಮೆರಿಕ, ಗ್ವಾಟೆಮಾಲಾ ಮೊದಲಾದ ದೇಶಗಳ ಜೈಲಿನಲ್ಲಿ ರೋಗಿಗಳ ಪೂರ್ವಾನುಮತಿ ಇಲ್ಲದೆ, ಅವರ ಅರಿವಿಗೆ ಬಾರದಂತೆ ಔಷಧಿ ಯನ್ನು ಪ್ರಯೋಗಿಸಿದ ಹತ್ತಾರು ಉದಾಹರಣೆಗಳಿವೆ. ಇಂದಿಗೂ ಫಾರ್ಮಾ ಕಂಪನಿಗಳು ಕ್ಲಿನಿಕಲ್ ಟ್ರಯಲ್‌ಗಳನ್ನು ಬಡದೇಶಗಳಲ್ಲಿ ಅಲ್ಲಿನ ‘ಅರಾಜಕೀಯ’ ವ್ಯವಸ್ಥೆಯನ್ನು ಬಳಸಿ ನಡೆಸುವುದು ಸಾಮಾನ್ಯ ಈ ಕ್ಲಿನಿಕಲ್ ಟ್ರಯಲ್ (ಚಿಕಿತ್ಸಾ ಪ್ರಯೋಗ) ಹಂತದಲ್ಲಿ ಆಗುವ ಕೆಲವೊಂದಿಷ್ಟು ಎಡವಟ್ಟಿನಿಂದಾಗಿ ಪ್ರಯೋಗಿಸುವ ಔಷಧಿಯೇ ಇನ್ನೊಂದು ರೋಗಕ್ಕೆ ಪರಿಹಾರವಾಗುವುದು ಅಥವಾ ಇನ್ನೊಂದು ಹೊಸ ಆವಿಷ್ಕಾರವೇ ಆಗುವುದೂ ಇದೆ.

ನಿಮಗೆ ಗೊತ್ತಿರಬಹುದು, ‘ವಯಾಗ್ರ’ ಆವಿಷ್ಕಾರವಾಗಿದ್ದು ಹಾಗೆ. Sildenafil ಎಂಬ ಔಷಧಿಯನ್ನು ಎದೆನೋವು, ಹೃದಯಸಂಬಂಧಿ ಚಿಕಿತ್ಸೆಗೆ ಪ್ರಯೋಗ ನಡೆಸಲಾಗುತ್ತಿತ್ತು. ಆದರೆ ಗಂಡಸರಲ್ಲಿ ಅದರ ಸೈಡ್ ಎಫೆಕ್ಸ್ ಕಾಣಿಸಿಕೊಂಡಿತು. ಉದ್ದವೋ, ಅಡ್ಡವೋ, ಪರಿಣಾಮ ಮಾತ್ರ ಮನುಷ್ಯನ ಅವಶ್ಯಕತೆಗೊಂದು ಪರಿಹಾರವಾಯಿತು.

ಅಷ್ಟೇ ಅಲ್ಲ, ಇದು ಎಲ್ಲಿಲ್ಲದ ಮಾರಾಟ ಕಂಡು, ಫೈಜರ್ ಕಂಪನಿಯ ದಿಕ್ಕೆ- ದೆಸೆಯನ್ನೇ ಬದಲಿಸಿತು. -ಜರ್ ಕಂಪನಿಯು ವಯಾಗ್ರಾ ಆವಿಷ್ಕಾರದಿಂದ ಮಾಡಿದ ಹಣ ಎಷ್ಟಿರಬಹುದು ಅಂದಾಜಿಸಿ? ಬರೋಬ್ಬರಿ ಎರಡೂವರೆ ಲಕ್ಷ ಕೋಟಿ ರೂಪಾಯಿ!!

2017ರಲ್ಲಿ ಪೇಟೆಂಟ್ ಮುಗಿಯುತ್ತಿದ್ದಂತೆ ಉಳಿದ ಕಂಪನಿಗಳು ಇದನ್ನು ತಯಾರಿಸಲೂ ಶುರು ಮಾಡಿದ ನಂತರವೇ ವಯಾಗ್ರಾ ಅಗ್ಗವಾಗಿದ್ದು, ಫೈಜರ್ ಕಂಪನಿಯ ಲಾಭ ಕುಸಿದದ್ದು.

ಕ್ಲಿನಿಕಲ್ ಟ್ರಯಲ್ ಅನ್ನು ನಾವು ಔಷಧ ಕಂಪನಿಯ ಮಸೂರದಲ್ಲಿಯೇ ನೋಡುವುದು ಸಾಮಾನ್ಯ. ಆದರೆ ಖುದ್ದು ಇದೇ ಒಂದು ಪ್ರತ್ಯೇಕ ವ್ಯವಹಾರ ಸಾಮ್ರಾಜ್ಯ. ಪ್ರತಿ ವರ್ಷ ಏನಿಲ್ಲವೆಂದರೂ 3 ಲಕ್ಷ ಔಷಧಿಗಳು ಚಿಕಿತ್ಸಕ ಪ್ರಯೋಗಕ್ಕೆ ನೋಂದಾಯಿಸಲ್ಪಡುತ್ತವೆ. ಅತ್ಯಂತ ಹೆಚ್ಚು ಯುರೋಪ್ ಮತ್ತು ಅಮೆರಿಕದಲ್ಲಿ- ಶೇ.70. ಹಿಂದಿನ ವರ್ಷದ ಲೆಕ್ಕಾಚಾರದ ಪ್ರಕಾರ ಇದು 60 ಬಿಲಿಯನ್ ಡಾಲರ್- ಐದೂವರೆ ಲಕ್ಷ ಕೋಟಿ ರುಪಾಯಿ ವ್ಯವಹಾರ.

ಇನ್ನೊಂದು ಹತ್ತು ವರ್ಷದಲ್ಲಿ ಈ ವ್ಯವಹಾರ ದುಪ್ಪಟ್ಟಾಗಲಿದೆ. ಕ್ಲಿನಿಕಲ್ ಟ್ರಯಲ್‌ನಲ್ಲಿ ಈ ಪ್ರಯೋಗಕ್ಕೆ ಜನರನ್ನು ಪಡೆಯುವುದೇ ಕಷ್ಟದ ಕೆಲಸ. ಅಮೆರಿಕದಲ್ಲಿ ಕೆಲವು ವೆಬ್ ಸೈಟ್‌ಗಳಿವೆ. ಹಣ ಬೇಕೆಂದರೆ ಅದಕ್ಕೆ ಹೋಗಿ ನಮೂದಿಸಿದರೆ ಪ್ರಯೋಗಕ್ಕೆ ಕರೆಯುತ್ತಾರೆ, ಹಣ ಸಿಗುತ್ತದೆ. ನಿರ್ಗತಿಕ ಸ್ಥಿತಿಯಲ್ಲಿ ಇದನ್ನೇ ಬದುಕುವ ಆಸರೆಯಾಗಿ ಮಾಡಿಕೊಳ್ಳುವವರು ಇದ್ದಾರೆ.

ಹಾಗಾಗಿ ಈಗೀಗ ಹೆಚ್ಚು ಹೆಚ್ಚು ಕಂಪನಿಗಳು ಭಾರತ, ಆಫ್ರಿಕಾ ದೇಶಗಳು, ಪೂರ್ವ ಯುರೋಪ್ ದೇಶಗಳತ್ತ ಮುಖಮಾಡಿವೆ. ಭಾರತ ಕ್ಲಿನಿಕಲ್ ಟ್ರಯಲ್ ಮಟ್ಟಿಗೆ ಉದಯೋನ್ಮುಖ ಮಾರುಕಟ್ಟೆ. ಖುದ್ದು ಭಾರತವೂ ಆವಿಷ್ಕರಿಸಿ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಹಿಂದಿನ ವರ್ಷ ಭಾರತದಲ್ಲಿ ದೇಶೀಯವಾಗಿ ಆವಿಷ್ಕಾರಗೊಂಡ ಏಳೂವರೆ ಸಾವಿರ ಔಷಧಿಗಳು ಕ್ಲಿನಿಕಲ್ ಟ್ರಯಲ್ ಹಂತ ತಲುಪಿವೆ. ಅಮೆರಿಕ (ಶೇ.25) ಮತ್ತು ಚೀನಾ (ಶೇ.29)ದ ನಂತರ ಅತ್ಯಂತ ಹೆಚ್ಚಿನ ಔಷಧಿ ಪ್ರಯೋಗ ಕ್ಕೊಳಗಾಗುವುದು ಭಾರತದಲ್ಲಿ- ಶೇ.8. ಸದ್ಯ ಕ್ಲಿನಿಕಲ್ ಟ್ರಯಲ್‌ನ ಮೊದಲನೇ ಹಂತ- ಆರೋಗ್ಯ ಕರ ವ್ಯಕ್ತಿಗಳ ಮೇಲಿನ ಪ್ರಯೋಗಕ್ಕೆ ಫಾರ್ಮಾ ಕಂಪನಿಗಳ ನೆಚ್ಚಿನ ಮಾರುಕಟ್ಟೆ- ಪ್ರಯೋಗಶಾಲೆ ಭಾರತ. ಇದಕ್ಕೆ ಖುಷಿಪಡಬೇಕೋ, ದುಃಖಿಸಬೇಕೋ? ಕಾರಣವೇನು? ಅದು ನಿಮ್ಮ ವಿವೇಚನೆಗೆ ಬಿಟ್ಟದ್ದು!