Thimmanna Bhagwat Column: ಧಾರ್ಮಿಕ ಆಚರಣೆ, ನಂಬಿಕೆಗಳಲ್ಲಿ ಹಸ್ತಕ್ಷೇಪ
ಹಿಂದೂ ಸಮಾಜದಲ್ಲಿ ಬೇರು ಬಿಟ್ಟಿದ್ದ ಅನಿಷ್ಟಗಳಾದ ಸತಿ ಪದ್ಧತಿ, ಅಸ್ಪಶ್ಯತೆ, ದೇವದಾಸಿ ಪದ್ಧತಿ, ಬಾಲ್ಯವಿವಾಹ, ಮಡೆಸ್ನಾನ ಮುಂತಾದವುಗಳನ್ನು ನಿಷೇಧಿಸಲು ತಂದ ಕಾನೂನು/ಆದೇಶಗಳನ್ನು ಜನರು ವಿರೋಧಿಸಲಿಲ್ಲ. ಆದರೆ ಕೇವಲ ಹಿಂದೂಗಳ ಸಂಪ್ರದಾಯಗಳ ವಿಷಯದಲ್ಲಿ ಮಾತ್ರ ನಿಷೇಧ ಮತ್ತು ಸುಧಾರಣೆಗಳು ಜಾರಿಯಾಗುತ್ತಿವೆ ಮತ್ತು ಇತರರು ಸುಧಾರಣಾ ಕ್ರಮಗಳಿಗೆ ತೆರೆದುಕೊಳ್ಳುತ್ತಿಲ್ಲ ಎಂಬ ಅಭಿಪ್ರಾಯವಿದೆ.
-
ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗವತ್
‘ಶಾಸ್ತ್ರಾತ್ ರೂಢಿಃ ಬಲೀಯಸಿ’- ಅನಾದಿಯಿಂದ ಬಂದ ನಿರ್ದಿಷ್ಟ ಆಚರಣೆಗಳು ಶಾಸ್ತ್ರದ ಲಿಖಿತ ನಿಯಮಗಳಿಗಿಂತ ಹೆಚ್ಚಿನ ಮಾನ್ಯತೆ ಪಡೆಯುತ್ತವೆ. ಆಧುನಿಕ ನ್ಯಾಯಶಾಸ್ತ್ರದಲ್ಲಿ ಕೂಡಾ ಆಚರಣೆಗಳು (Customs) ಕಾನೂನುಗಳ ಪ್ರಮುಖ ಮೂಲ ಅಥವಾ ಆಧಾರ ಎಂದು ಪರಿಗಣಿಸಲ್ಪಡುತ್ತವೆ. ಕೆಲವು ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳು ಸಮಾಜದಲ್ಲಿ ಅನಾದಿ ಕಾಲದಿಂದ ಭಕ್ತರ ಶ್ರದ್ಧೆ ಮತ್ತು ಭಕ್ತಿಯ ಹಿನ್ನೆಲೆಯಲ್ಲಿ ಬೆಳೆದು ಬಂದಿರುತ್ತವೆ.
ಹಿಂದೂ ಸಮಾಜದಲ್ಲಿ ಬೇರು ಬಿಟ್ಟಿದ್ದ ಅನಿಷ್ಟಗಳಾದ ಸತಿ ಪದ್ಧತಿ, ಅಸ್ಪಶ್ಯತೆ, ದೇವದಾಸಿ ಪದ್ಧತಿ, ಬಾಲ್ಯವಿವಾಹ, ಮಡೆಸ್ನಾನ ಮುಂತಾದವುಗಳನ್ನು ನಿಷೇಧಿಸಲು ತಂದ ಕಾನೂನು/ ಆದೇಶಗಳನ್ನು ಜನರು ವಿರೋಧಿಸಲಿಲ್ಲ. ಆದರೆ ಕೇವಲ ಹಿಂದೂಗಳ ಸಂಪ್ರದಾಯಗಳ ವಿಷಯದಲ್ಲಿ ಮಾತ್ರ ನಿಷೇಧ ಮತ್ತು ಸುಧಾರಣೆಗಳು ಜಾರಿಯಾಗುತ್ತಿವೆ ಮತ್ತು ಇತರರು ಸುಧಾರಣಾ ಕ್ರಮಗಳಿಗೆ ತೆರೆದುಕೊಳ್ಳುತ್ತಿಲ್ಲ ಎಂಬ ಅಭಿಪ್ರಾಯವಿದೆ.
ಪಶ್ಚಿಮ ಬಂಗಾಳದ ಹೊಸ ಸರಕಾರ ಮೊನ್ನೆ ಅಂದರೆ ಮೇ 13ಕ್ಕೆ ಒಂದು ಆದೇಶ ಹೊರಡಿಸಿ, ಮುಂಬರುವ ಬಕ್ರೀದ್ ಸಮಯದಲ್ಲಿ ಆಕಳು, ಗೂಳಿ, ಎತ್ತು, ಎಮ್ಮೆಗಳನ್ನು ಕಡಿಯುವದಕ್ಕೆ ಪರವಾನಿಗೆ ಪಡೆಯಬೇಕೆಂಬ ನಿಯಮ ಜಾರಿ ಮಾಡಿತು. ದನ ಕಡಿಯು ವದು ಬಕ್ರೀದ್‌ನ ಆಚರಣೆಯ ಭಾಗವಲ್ಲವಾದರೂ, ಆ ಆದೇಶದ ವಿರುದ್ಧ ಕೊಲ್ಕತ್ತಾ ಹೈಕೋರ್ಟಿನಲ್ಲಿ ದಾವೆ ಹೂಡಲಾಯಿತು.
ಮೇ 21 2026ರ ಆದೇಶದಲ್ಲಿ ಕೊಲ್ಕತ್ತಾ ಹೈಕೋರ್ಟ್, ದನ, ಎಮ್ಮೆಗಳನ್ನು ಕಡಿಯುವದು ಬಕ್ರೀದ್ ಹಬ್ಬದ ಅಗತ್ಯ ಧಾರ್ಮಿಕ ಆಚರಣೆಯಲ್ಲವೆಂಬ ಕಾರಣಕ್ಕೆ ಸರಕಾರದ ಆದೇಶಕ್ಕೆ ತಡೆನೀಡಲು ನಿರಾಕರಿಸಿತು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬಕ್ರೀದ್‌ನಲ್ಲಿ ಅಗತ್ಯ ಧಾರ್ಮಿಕ ಆಚರಣೆ (Essential Relegious Practice) ಎಂದು ಪರಿಗಣಿಸಲಾದ ಆಡಿನ ಬಲಿಗೆ ಯಾವ ಸರಕಾರ ಅಥವಾ ಕೋರ್ಟಿನಿಂದಲೂ ತಡೆ ಅಥವಾ ನಿಷೇಧವಿಲ್ಲ.
ಇದನ್ನೂ ಓದಿ: Thimmanna Bhagwat Column: ಮಂತ್ರಿಗಳ ಆಡಳಿತಾವಧಿ: ರಾಜ್ಯಪಾಲರ ಅಧಿಕಾರ ಔಪಚಾರಿಕವೇ ?
ನಮ್ಮ ರಾಜ್ಯದಲ್ಲಿ ಕರ್ನಾಟಕ ಪ್ರಾಣಿಬಲಿ ನಿಷೇಧ ಕಾಯಿದೆ 1959 (1975ರ ತಿದ್ದುಪಡಿ) ಅಡಿಯಲ್ಲಿ ಪ್ರಾಣಿಬಲಿಗೆ ಸಂಪೂರ್ಣ ನಿಷೇಧವಿದೆ. ಅಲ್ಲದೆ ಜಾತ್ರೆಗಳಲ್ಲಿ ಅಂಥ ಬಲಿಗಳು ನಡೆಯದಂತೆ ಪೋಲೀಸ್ ಮತ್ತು ಜಿಲ್ಲಾಡಳಿತ ಪೂರ್ತಿ ಎಚ್ಚರಿಕೆ ವಹಿಸುತ್ತವೆ. ಆದರೆ ಬಕ್ರೀದ್ ಹಬ್ಬದ ಸಮಯದಲ್ಲಿ ನಡೆಯುವ ಸಾವಿರಾರು ಕುರಿ/ಆಡುಗಳ ಬಲಿಗೆ ಯಾವದೇ ಅಡ್ಡಿ ಆಗುವದಿಲ್ಲ. ಹಲಾಲ್ ಮಾಡಿ ಹಿಂಸಿಸಲು ನಿಷೇಧವಿಲ್ಲ. ತಿನ್ನುವ ಸಲುವಾಗಿ ದಿನಕ್ಕೆ ಲಕ್ಷಗಟ್ಟಲೆ ಕೋಳಿ/ಕುರಿಗಳನ್ನು ಕೊಲ್ಲಲಾಗುತ್ತದೆ.
ಹಿಂದೂ ಭಕ್ತರು ತಮ್ಮ ಕಷ್ಟದ ಸಂದರ್ಭಗಳಲ್ಲಿ ಮಾಡಿಕೊಂಡ ಹರಕೆ ತೀರಿಸಲು ಬಲಿ ನೀಡುವದಕ್ಕೆ ಮಾತ್ರ ಯಾಕೆ ನಿಷೇಧ ಎಂಬುದು ಜನರನ್ನು ಕಾಡುವ ಪ್ರಶ್ನೆ. ಕರ್ನಾಟಕ ಹೈಕೋರ್ಟು ಕೂಡಾ ಅನೇಕ ಪ್ರಕರಣಗಳಲ್ಲಿ ಪ್ರಾಣಿಬಲಿಯನ್ನು ನಿರ್ಬಂಽಸುವ ಆದೇಶ ನೀಡಿದೆ (ಬಿಸಿಲು ಮಾರಮ್ಮ ದೇವಸ್ಥಾನದ ಪ್ರಕರಣ, ಹೊನ್ನೇಶ್ವರ ಸ್ವಾಮಿ ದೇವಾಲಯ, ವಿಶ್ವ ಪ್ರಾಣಿ ಕಲ್ಯಾಣ ಮಂಡಲ ವರ್ಸಸ್ ಕರ್ನಾಟಕ ಸರಕಾರ ಮುಂತಾದ ಪ್ರಕರಣಗಳು).
ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿಷಯ ಅಂಥದ್ದೇ ಇನ್ನೊಂದು ವಿವಾದ. ಸಂವಿಧಾನದ 14, 15, 25 ಮತ್ತು 26ನೇ ವಿಧಿಗಳನ್ವಯ ಮಹಿಳೆಯರಿಗೂ ಪುರುಷ ರಷ್ಟೇ ಸಮಾನ ಪೂಜಾ ಸ್ವಾತಂತ್ರ್ಯ ಮತ್ತು ತಾರತಮ್ಯದ ವಿರುದ್ಧದ ಹಕ್ಕಿರುವದು ನಿರ್ವಿ ವಾದ. ಆದರೆ ಶಬರಿಮಲೈ ದೇವಾಲಯದ ಪ್ರಕರಣ ತುಂಬಾ ಸೂಕ್ಷ್ಮವಾದದ್ದು.
ಅಯ್ಯಪ್ಪ ಸ್ವಾಮಿ ನೈಷ್ಟಿಕ ಬ್ರಹ್ಮಚಾರಿ ಮತ್ತು ಆ ಕಾರಣಕ್ಕೆ 10 ರಿಂದ 50 ವಯಸ್ಸಿನ ಮಹಿಳೆಯರ ಸಂಪರ್ಕವಾದರೆ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂಬುದು ಅಲ್ಲಿನ ಭಕ್ತರ ಧೃಢವಾದ ನಂಬಿಕೆ. ಆ ದೇವಾಲಯ ಪ್ರವೇಶಿಸಿ ದೇವರ ದರ್ಶನ ಪಡೆಯಲು 41 ದಿನಗಳ ಸಸ್ಯಾಹಾರ ಮತ್ತು ಸ್ತ್ರೀ ಸಂಪರ್ಕವಿಲ್ಲದ ಕಠಿಣ ವ್ರತ ಕಡ್ಢಾಯ.
ಋತುಚಕ್ರದ ವಯೋಮಿತಿಯ ಒಳಗಿರುವ ಮಹಿಳೆಯರಿಗೆ 41 ದಿನದ ವ್ರತಾಚರಣೆ ಸಾಧ್ಯವಿಲ್ಲದ ಕಾರಣ ಅಂಥ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧವಿದೆ. ಇದೇ ವಿಷಯವನ್ನು ಅಲ್ಲಿನ ಮುಖ್ಯ ತಂತ್ರಿ ಶ್ರೀ ನಾರಾಯಣ ನಂಬೂದಿರಿಯವರು ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೆ ಈ ವಿಷಯದಲ್ಲಿ ದೇವಪ್ರಶ್ನೆ ನಡೆದಿದ್ದು ಅಲ್ಲಿ ಕೂಡಾ ಇದೇ ನಿರ್ಣಯವಾಗಿದೆ ಎಂಬುದನ್ನೂ ಅವರು ತಮ್ಮ ಸಾಕ್ಷ್ಯದಲ್ಲಿ ಹೇಳಿದ್ದಾರೆ.
ಈ ಕಾರಣಗಳಿಗಾಗಿ ಮತ್ತು 1965ರ ಕೇರಳ ಹಿಂದೂ ಪೂಜಾ ಸ್ಥಳಗಳ (ಪ್ರವೇಶ ಅಧಿಕಾರ) ನಿಯಮಗಳ, 3(ಬಿ) ನಿಯಮದ ಆಧಾರದಲ್ಲಿ ಅಂಥ ಸಂಪ್ರದಾಯವನ್ನು ನಿಷೇಧಿಸಲು ಕೇರಳ ಹೈಕೋರ್ಟು ನಿರಾಕರಿಸಿತ್ತು. ಆದರೆ 2006ರಲ್ಲಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್ ಎಂಬ ಎನ್‌ಜಿಓ, ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಪಿಐಎಲ್ ದಾಖಲಿಸಿತು. ಯುವ ನ್ಯಾಯವಾದಿಗಳ ಹಿತರಕ್ಷಣೆಗಾಗಿ ಹೋರಾಡಬೇಕಾಗಿರುವ ಈ ಎನ್‌ಜಿಓ, ಮಹಿಳಾ ಹಕ್ಕುಗಳ ಆಧಾರದಲ್ಲಿ ಈ ಅರ್ಜಿಯನ್ನು ಸಲ್ಲಿಸಿತು.
ಅಯ್ಯಪ್ಪ ಶಿವ-ವಿಷ್ಣು ಸಂಜಾತ, ನೈಷ್ಟಿಕ ಬ್ರಹ್ಮಚಾರಿ, 41 ದಿನಗಳ ವ್ರತ ಎಂಬುದೆಲ್ಲ ಪುರುಷ ಪ್ರಧಾನ ವ್ಯವಸ್ಥೆ ಕಟ್ಟಿಕೊಂಡಿರುವ ಸುಳ್ಳು ಕಥೆಗಳು ಎಂದೆಲ್ಲ ಈ ಅರ್ಜಿಯಲ್ಲಿ ವಾದಿಸಲಾಗಿತ್ತು. ಬರ್ಕಾ ದತ್, ಶ್ರಾವಣಿ ಪಂಡಿತ್, ವೀರ್ ಸಾಂಘ್ವಿ ಮುಂತಾದವರು ಈ ಕುರಿತು ಲೇಖನಗಳನ್ನು ಬರೆಯುತ್ತಾರೆ, ಅಭಿನೇತ್ರಿ ಜಯಮಾಲಾ ಅವರು ತಾನು ದೇಗುಲ ಪ್ರವೇಶಿಸಿ ಅಯ್ಯಪ್ಪನ ಪಾದ ಸ್ಪರ್ಶಿಸಿದ್ದೆ ಎಂದು 20 ವರ್ಷಗಳ ನಂತರ ಹೇಳಿಕೆ ನೀಡು ತ್ತಾರೆ ಹಾಗೂ ಈ ಪಿಐಎಲ್‌ನಲ್ಲಿ ಅವುಗಳನ್ನು ಉಲ್ಲೇಖಿಸಲಾಗುತ್ತದೆ - ಇವೆಲ್ಲವುಗಳನ್ನು ಅನುಕ್ರಮವಾಗಿ ಗಮನಿಸಿದರೆ ಅವು ಕೇವಲ ಕಾಕತಾಳೀಯವೆಂದೆನಿಸದು.
ಐವರು ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟಿನ ಪೀಠ 4:1ರ ಬಹುಮತದ ತೀರ್ಪಿನಲ್ಲಿ ಈ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಪರಿಗಣಿಸಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುಮತಿಸಿ ಆದೇಶಿಸಿತು. ತಮ್ಮ ಅಸಮ್ಮತಿಯನ್ನು ಸೂಚಿಸಿ ಬರೆದ ತೀರ್ಪಿನಲ್ಲಿ, ನ್ಯಾಯಮೂರ್ತಿ ಶ್ರೀಮತಿ ಇಂದು ಮಲ್ಹೋತ್ರಾ ಅವರು, ಸತಿ ಪದ್ಧತಿಯಂಥ ಅಮಾನುಷ ಪಿಡುಗುಗಳನ್ನು ರದ್ದುಪಡಿಸಲು ಮಾತ್ರ ಕೋರ್ಟುಗಳು ಮಧ್ಯಪ್ರವೇಶಿಸ ಬಹುದು ಹೊರತು ಉಳಿದ ಧಾರ್ಮಿಕ ವಿಷಯಗಳ ಕುರಿತಲ್ಲ ಎಂದು ತೀರ್ಪು ನೀಡಿದ್ದಾರೆ. ಈ ಆದೇಶದ ನಂತರ ನಡೆದ ಪ್ರತಿಭಟನೆಗಳು ಮತ್ತು ಅನೇಕ ಮರುಪರಿಶೀಲನೆ ಅರ್ಜಿಗಳ ಹಿನ್ನೆಲೆಯಲ್ಲಿ ಈ ಪ್ರಕರಣ ವಿಸ್ತೃತ ಸಂವಿಧಾನ ಪೀಠದಲ್ಲಿದ್ದು ವಿಚಾರಣೆ ನಡೆಯುತ್ತಿದೆ.
ಮಹಿಳೆಯರೂ ಸೇರಿದಂತೆ ಅಸಂಖ್ಯಾತ ಭಕ್ತರ ಶ್ರದ್ಧೆ ಮತ್ತು ಭಕ್ತಿಯ ಕೇಂದ್ರವಾದ ಶಬರಿ ಮಲೈ ದೇಗುಲದ ಪಾವಿತ್ರ್ಯದ ವಿಷಯದಲ್ಲಿ ಅಲ್ಲಿನ ಮುಖ್ಯತಂತ್ರಿಗಳ ಅಭಿಮತ ಮತ್ತು ಅದಕ್ಕಿಂತ ಮುಖ್ಯವಾಗಿದೇವ ಪ್ರಶ್ನೆಯಲ್ಲಿ ಬಂದ ನಿರ್ಣಯವನ್ನು ಭಕ್ತರು ಹೆಚ್ಚು ನಂಬು ತ್ತಾರೆ ಮತ್ತು ಅಂಥ ನಿರ್ಣಯದ ವಿರುದ್ಧ ಕೈಗೊಳ್ಳುವ ಪ್ರಕ್ರಿಯೆ ಭಕ್ತರಿಗೆ ಖಂಡಿತ ಅಸಮಾ ಧಾನ ತರುತ್ತದೆ.
ಶಬರಿಮಲೈ, ಶನಿ ಸಿಂಗಣಾಪುರದಂಥ ದೇವಾಲಯಗಳ ಪ್ರವೇಶಕ್ಕೆ ಯತ್ನಿಸುವ ಶ್ರೀಮತಿ ತೃಪ್ತಿ ದೇಸಾಯಿಯವರಂಥ ಮಹಿಳಾ ಹೋರಾಟಗಾರರ ಉದ್ದೇಶ, ಭಕ್ತಿ ಅಥವಾ ಶ್ರದ್ಧೆ ಎಂದು ಜನಸಾಮಾನ್ಯರಿಗೆ ಅನಿಸುವದಿಲ್ಲ. ಭಕ್ತಿ ಶ್ರದ್ಧೆ ಇಲ್ಲದವರ ದೇವಾಲಯ ಪ್ರವೇಶ ಖಂಡಿತ ಪ್ರಶ್ನಾರ್ಹ.
ಇಂತಹುದೆ ಇತರ ಪ್ರಕರಣಗಳಾದ ತಿರುವನಂತಪುರದ ನಿಧಿ ಕೋಠಿಗಳ ಪ್ರಕರಣ (ಮಾರ್ತಾಂಡ ವರ್ಮಾ ವರ್ಸಸ್ ಕೇರಳ ಸರಕಾರ), ದೀಪಾವಳಿಯಲ್ಲಿ ಪಟಾಕಿ ಹೊಡೆಯುವ ಪ್ರಕರಣ (ಎಮ್ .ಸಿ.ಮೆಹ್ತಾ ವರ್ಸಸ್ ಭಾರತ ಸರಕಾರ) ಮುಂತಾದವುಗಳಲ್ಲಿ ಕೂಡಾ ಕೋರ್ಟುಗಳು ಜನರ ಭಾವನೆಗಳಿಗಿಂತ ಸಂವಿಧಾನ ಮತ್ತು ಕಾನೂನಿನ ಆಧಾರ ದಲ್ಲಿ ಮಾತ್ರ ತೀರ್ಪು ನೀಡಿರುವದನ್ನು ಗಮನಿಸಬಹುದಾಗಿದೆ.
ಆಂತರಿಕ ಧಾರ್ಮಿಕ ಆಚರಣೆಯ ವಿಷಯದಲ್ಲಿ ಮಾತ್ರ ಅಯಾ ಪಂಗಡಗಳಿಗೆ ಅವರ ಸಂಪ್ರದಾಯದ ಪಾಲನೆಗೆ ಸ್ವಾತಂತ್ರ್ಯವಿದೆ. ಆದರೆ ಹಿಂದೂ ಧಾರ್ಮಿಕ ಕೇಂದ್ರಗಳ ಇತರ ಜಾತ್ಯತೀತ (ಸೆಕ್ಯುಲರ್) ವಿಷಯಗಳಲ್ಲಿ ಕೋರ್ಟುಗಳು ಮಧ್ಯಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟು ಆದೇಶಿಸಿದೆ (ಶಿರೂರು ಮಠ ವರ್ಸಸ್ ಭಾರತ ಸರಕಾರ). ಆದರೆ ಆಶ್ಚರ್ಯವೆಂದರೆ ಇತರ ಧರ್ಮದವರ ನಂಬಿಕೆಗಳಾದ ಹಿಜಾಬ್, ತ್ರಿವಳಿ ತಲಾಖ್, ವಿವಾಹದ ವಯೋಮಿತಿ, ಮುಸ್ಲಿಮ್ ವಿಚ್ಛೇದಿತ ಮಹಿಳೆಯರ ಜೀವನಾಂಶದಂಥ ವಿಷಯಗಳಲ್ಲಿ ಮಹಿಳಾ ಸಂಘಟನೆಗಳಾಗಲೀ, ತಥಾಕಥಿತ ಮಹಿಳಾ ಹಕ್ಕುಗಳ ಸಂರಕ್ಷಕ ರಾಗಲಿ ಕಾನೂನು ಅಥವಾ ಇತರ ಬಗೆಯ ಹೋರಾಟಗಳನ್ನು ಕೈಗೊಳ್ಳದೆ ಮೌನಕ್ಕೆ ಜಾರಿರುವದು. ಕೋರ್ಟುಗಳು ಆಚರಣೆಗಳ ವಿಷಯದಲ್ಲಿ ತೀರ್ಪು ನೀಡುವಾಗ ಭಕ್ತರ ಶ್ರದ್ಧಾ ಭಕ್ತಿಗಳನ್ನೂ ಪರಿಗಣಿಸಬೇಕು ಎಂಬ ಭಾವನೆ ಅನೇಕರಲ್ಲಿದೆ. ಮುಸ್ಲಿಮರಲ್ಲಿ ತಮ್ಮ ಧರ್ಮದ ಕುರಿತಾಗಿರುವ ಶ್ರದ್ಧೆ ಖಂಡಿತ ಶ್ಲಾಘನೀಯ.
ಹಿಂದೂಗಳಲ್ಲಿರುವ ಬಹು ಸಂಪ್ರದಾಯ ವ್ಯವಸ್ಥೆ, ಒಗ್ಗಟ್ಟಿನ ಕೊರತೆ ಅಥವಾ ತಮ್ಮದೇ ನಂಬಿಕೆಗಳ ಕುರಿತಾಗಿರುವ ಅಸಡ್ಡೆಗಳೂ ಇಂಥ ಪರಿಸ್ಥಿತಿಗೆ ಕಾರಣವಾಗಿರಬಹುದು. ಸ್ವಾತಂತ್ರ್ಯಾನಂತರ ಬಹುಸಂಖ್ಯಾತ ಹಿಂದೂಗಳಿಗೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ಮಾಡುವಾಗ, ಹಿಂದೂ ಯತಿಗಳ ಅಥವಾ ಶಂಕರಾಚಾರ್ಯರ ಅಭಿಮತ ಕೇಳಿದಂತೆ ಕಾಣುವದಿಲ್ಲ.
ಯಾವುದೇ ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸದೆ ಕೇವಲ ವಿಚಾರವಾದಿ ಗಳೆನಿಸಿ ಕೊಂಡವರ ಸಲಹೆಗಳನ್ನೇ ತರ್ಕಬದ್ಧ ಮತ್ತು ಆಧುನಿಕ ಎಂದು ಪರಿಗಣಿಸಿ ಸಮಾಜದ ಮೇಲೆ ಹೇರಲಾಗಿದೆ ಎಂಬ ಅಭಿಪ್ರಾಯವಿದೆ.
ದೇವಾಲಯಗಳಿಗೆ ಆಡಳಿತಾಧಿಕಾರಿಗಳು, ಆಡಳಿತ ಮಂಡಳಿಗಳ ನೇಮಕ ಕೂಡಾ ಹಲವು ಸಲ ವಿವಾದಕ್ಕೆ ಒಳಗಾಗಿದೆ. ಹಿಂದೆ ಪಾರಂಪರಿಕ ಧರ್ಮದರ್ಶಿಗಳು ದೇವಾಲಯಗಳಲ್ಲಿ ಕಾಲಕಾಲಕ್ಕೆ ಆಗಬೇಕಾದ ಪೂಜೆ, ನೇಮ, ಕೋಲ, ಕರಗ, ಉತ್ಸವ, ಬಲಿ, ಜಾತ್ರೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ತಿಥಿ, ವಾರ, ನಕ್ಷತ್ರ, ಮುಹೂರ್ತ ಎಂಬೆಲ್ಲ ವಿಷಯಗಳನ್ನು ಲಕ್ಷಿಸಿ ಚಾಚೂ ತಪ್ಪದೆ ನೆರವೇರಿಸುತ್ತಿದ್ದರು.
ಆದರೆ ಈಗ ಸರಕಾರ ನೇಮಿಸುವ ಆಡಳಿತ ಮಂಡಳಿಯ ಸದಸ್ಯರು ರಾಜಕಾರಣಿಗಳೋ, ಪ್ರಭಾವೀ ವ್ಯಕ್ತಿಗಳೋ ಆಗಿರುವದರಿಂದ ಅವರಿಗೆ ಇಂಥದ್ದೆಲ್ಲ ವಿಷಯಗಳ ಅರಿವು ಇರದೆ ಧಾರ್ಮಿಕ ಕಾರ್ಯಗಳಿಗಿಂತ ದೇವಾಲಯದ ಆರ್ಥಿಕ ಹಾಗೂ ಆಡಳಿತ ವಿಷಯಗಳಿಗೇ ಹೆಚ್ಚಿನ ಮಹತ್ವ ನೀಡುತ್ತಾರೆ ಎಂಬ ಭಾವನೆ ಇದೆ.
ಸರಕಾರೀ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿದಾಗ ಅವರಿಗೆ ಸ್ಥಳೀಯ ಸಂಪ್ರದಾಯಗಳ ಅರಿವಿನ ಕೊರತೆ ಅಥವಾ ಸಮಯದ ಅಭಾವದಿಂದ ಅನೇಕ ಎಡವಟ್ಟುಗಳಾದ ಉದಾಹರಣೆಗಳಿವೆ.
ಆಡಳಿತಾಧಿಕಾರಿಗಳನ್ನು ನೇಮಿಸುವ ಸಂದರ್ಭ ಬಂದಾಗ ಸರಕಾರೀ ಅಧಿಕಾರಿಗಳ ಬದಲು ಯತಿಗಳಿಗೆ ಅಥವಾ ಮಠಗಳಿಗೆ ದೇವಾಲಯದ ಆಡಳಿತವನ್ನು ವಹಿಸುವದು ಸೂಕ್ತ ಎಂಬ ಭಾವನೆ ಅನೇಕರಲ್ಲಿದೆ. ಧರ್ಮದರ್ಶಿ ಮಂಡಳಿಯ ಸದಸ್ಯರು ಕಡ್ಢಾಯವಾಗಿ ಧಾರ್ಮಿಕ ಹಿನ್ನೆಲೆಯಿರುವ ವ್ಯಕ್ತಿಗಳಾಗಿರಬೇಕು.
ಭಕ್ತರ ಭಾವನೆ ಮತ್ತು ಶ್ರದ್ಧೆಗಳ ವಿಷಯ ಅತ್ಯಂತ ಸಂಕೀರ್ಣವಾಗಿದ್ದು ಕೋರ್ಟುಗಳ ಮುಂದೆ ಅದನ್ನು ತರ್ಕ ಮತ್ತು ಸಾಕ್ಷ್ಯಾಧಾರಗಳಿಗೆ ಒಳಪಡಿಸಿ ಸಾಬೀತುಪಡಿಸುವದು ಬಹುತೇಕ ಪ್ರಕರಣಗಳಲ್ಲಿ ಕಷ್ಟಕರ. ನ್ಯಾಯಾಲಯದ ಆದೇಶಗಳನ್ನು ಒಪ್ಪುವದು ಅನಿವಾರ್ಯವಾದರೂ ನಿಷೇಧ ಮತ್ತು ನಿರ್ಬಂಧಗಳ ಆದೇಶ ನೀಡುವಾಗ ಸರಕಾರಗಳು ಭಕ್ತರ ಭಾವನೆಗಳನ್ನು ಗೌರವಿಸಬೇಕು. ಇಲ್ಲವಾದರೆ ಚುನಾಯಿತ ಸರಕಾರಕ್ಕೂ ದಾಳಿ ಕೋರರ ಆಡಳಿತಕ್ಕೂ ವ್ಯತ್ಯಾಸವಿರುವದಿಲ್ಲ.