ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Janamejaya Umarji Column: ವಿವಾಹವೆಂಬುದು ಸಂಸ್ಕಾರವೋ, ʼನಿಜಾಚರಣೆʼ ಹೆಸರಿನ ವೈಚಾರಿಕತೆಯೋ ?

‘ಅನುಮಾನವೇಕೆ, ಬಸವಣ್ಣನವರು ಸನಾತನ ಹಿಂದೂ’ ಮತ್ತು ‘ಉದಾತ್ತ ಲಿಂಗಾಯತ ವನ್ನು ಮರಳುಗಾಡಿನ ಮತಗಳೊಂದಿಗೆ ಸಮೀಕರಿಸುವುದು ಸರಿಯೇ?’ ಶೀರ್ಷಿಕೆಯ ಲೇಖನಗಳು ‘ವಿಶ್ವವಾಣಿ’ಯಲ್ಲಿ ಬಂದ ನಂತರ, ಸಹೃದಯಿಯೊಬ್ಬರು ಕರೆ ಮಾಡಿ, “ಭಾರತದ ಸರ್ವೋಚ್ಚ ನ್ಯಾಯಾಲಯವು ವಿವಾಹ ಸಂಸ್ಕಾರದ ಕುರಿತು ಇತ್ತೀಚೆಗೆ ತೀರ್ಪು ನೀಡಿದೆ.

ವಿವಾಹವೆಂಬುದು ಸಂಸ್ಕಾರವೋ, ʼನಿಜಾಚರಣೆʼ ಹೆಸರಿನ ವೈಚಾರಿಕತೆಯೋ ?

-

Ashok Nayak
Ashok Nayak Mar 10, 2026 12:26 PM

ಧರ್ಮ ಜಿಜ್ಞಾಸೆ

ಜನಮೇಜಯ ಉಮರ್ಜಿ

ಸನಾತನ ಸಂಸ್ಕೃತಿಯಲ್ಲಿ ವಿವಾಹ ಸಂಸ್ಕಾರವು ಅನೇಕ ವಿಧಿ-ವಿಧಾನಗಳ ಮೂಲಕ ನಡೆಯುತ್ತದೆ ಮತ್ತು ಪ್ರತಿಯೊಂದು ಹಂತವೂ ದಾಂಪತ್ಯ ಜೀವನದ ಧಾರ್ಮಿಕ ಹಾಗೂ ನೈತಿಕ ಬದ್ಧತೆಯನ್ನು ಸೂಚಿಸುತ್ತದೆ. ನಿಜಾಚರಣೆ ವಿವಾಹದಲ್ಲಿ ಇಂಥ ಯಾವ ಸಾಂಪ್ರ ದಾಯಕ ವಿಧಿಗಳನ್ನು ಪಾಲಿಸಲಾಗುತ್ತಿದೆ? ಅದು ಸುದೀರ್ಘ ಕಾಲ ದಿಂದ ನಿರಂತರವಾಗಿ ಅನುಸರಿಸಲ್ಪಟ್ಟ ಸಂಪ್ರದಾಯವೇ? ಸಮುದಾಯ ದೊಳಗೆ ಅದು ಅಂಗೀಕೃತ ಸಂಸ್ಕಾರವೇ?

ಸನಾತನ ಸಂಸ್ಕೃತಿಯಲ್ಲಿ ವಿವಾಹವೆಂಬುದು ಕೇವಲ ಇಬ್ಬರ ನಡುವೆ ನಡೆಯುವ ಒಪ್ಪಂದವಲ್ಲ. ಅದು ಒಂದು ಸಂಸ್ಕಾರ. ವಿವಾಹ ಸಂಸ್ಕಾರವು ವೈಯಕ್ತಿಕ ಜೀವನವನ್ನು ಧರ್ಮದೊಂದಿಗೆ ಸಂಯೋಜಿಸುವ ಪವಿತ್ರ ಬಂಧನ. ದಾಂಪತ್ಯವೆಂದರೆ ಇಬ್ಬರೂ ಕೇವಲ ಭೌತಿಕವಾಗಿ ಕೂಡಿ ಇರುವುದಲ್ಲ, ಇಬ್ಬರೂ ಸಹಧರ್ಮಿಗಳಾಗಿರುವುದು. ಅದು ಧರ್ಮ-ಕರ್ಮ ಜೀವನದ ಸಹಯಾತ್ರೆ. ಕಳೆದ ಕೆಲವು ವರ್ಷಗಳಲ್ಲಿ ‘ನಿಜಾಚರಣೆ’ ಎಂಬ ಹೆಸರಿ ನಲ್ಲಿ ಪ್ರತ್ಯೇಕ ವಿವಾಹ ವ್ಯವಸ್ಥೆಯನ್ನು ರೂಪಿಸಲು ಕೆಲವರು ಪ್ರಯತ್ನಿಸು ತ್ತಿರುವುದು ಗೋಚರಿಸುತ್ತದೆ.

ಎರಡು ಕುಟುಂಬಗಳನ್ನು, 21 ಕುಲಗಳನ್ನು ಕೂಡಿಸುವ ವಿವಾಹವೆಂಬ ಧಾರ್ಮಿಕ ಸಂಸ್ಕಾರವನ್ನು ವೈಚಾರಿಕವಾಗಿಸಿ, ‘ನಿಜಾಚರಣೆ’ ಎಂಬ ಹೆಸರಿನಿಂದ ವಿಭಜನೆಯ ಆಯುಧವನ್ನಾಗಿ ಬಳಸಿಕೊಳ್ಳುತ್ತಿರುವುದು ಸತ್ಯವಿದೆ. ವಿವಾಹವು ಕೇವಲ ಪ್ರಗತಿಪರ ವೈಚಾರಿಕ ವಿಷಯವಲ್ಲ. ಅದು ಸಂಸ್ಕಾರದ ಜತೆಗೆ ಸಂವಿಧಾನಾತ್ಮಕ ಕೂಡ. ಅದು ವಿಚ್ಛೇದನ ಪ್ರಕರಣ, ಜೀವನಾಂಶ, ಆಸ್ತಿ ಹಕ್ಕು, ಮಕ್ಕಳ ಮಾನ್ಯತೆ ಇವುಗಳೊಂದಿಗೆ ನೇರವಾಗಿ ಸಂಬಂಧಿಸಿದೆ.

‘ಅನುಮಾನವೇಕೆ, ಬಸವಣ್ಣನವರು ಸನಾತನ ಹಿಂದೂ’ ಮತ್ತು ‘ಉದಾತ್ತ ಲಿಂಗಾಯತ ವನ್ನು ಮರಳುಗಾಡಿನ ಮತಗಳೊಂದಿಗೆ ಸಮೀಕರಿಸುವುದು ಸರಿಯೇ?’ ಶೀರ್ಷಿಕೆಯ ಲೇಖನಗಳು ‘ವಿಶ್ವವಾಣಿ’ಯಲ್ಲಿ ಬಂದ ನಂತರ, ಸಹೃದಯಿಯೊಬ್ಬರು ಕರೆ ಮಾಡಿ, “ಭಾರತದ ಸರ್ವೋಚ್ಚ ನ್ಯಾಯಾಲಯವು ವಿವಾಹ ಸಂಸ್ಕಾರದ ಕುರಿತು ಇತ್ತೀಚೆಗೆ ತೀರ್ಪು ನೀಡಿದೆ.

ನಿಜಾಚರಣೆ ವಿವಾಹಗಳು ಕಾನೂನು ಬದ್ಧವೇ?" ಎಂದು ಪ್ರಶ್ನಿಸಿದರು. “ನಾನು ಕಾನೂನು ಪಂಡಿತನಂತೂ ಅಲ್ಲ, ನಾನು ಕೂಡ ಆ ವರದಿಯನ್ನು ಪತ್ರಿಕೆಗಳಲ್ಲೇ ನೋಡಿದ್ದು. ಆದರೆ ಈ ಕುರಿತು ಒಂದಿಷ್ಟು ವಿಚಾರವನ್ನಂತೂ ಮಾಡಬಹುದು" ಎಂದೆ.

ಇದನ್ನೂ ಓದಿ: Janamejaya Umarji Column: ಮರಳುಗಾಡಿನ ಮತಗಳೊಂದಿಗೆ ಸಮೀಕರಿಸುವುದೆಷ್ಟು ಸರಿ ?

ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ನೀಡಿದ ಮಹತ್ವದ ತೀರ್ಪಿನಲ್ಲಿ ಹಿಂದೂ ವಿವಾಹದ ಕಾನೂನುಬದ್ಧತೆಯ ಕುರಿತು ಸ್ಪಷ್ಟನೆ ನೀಡಲಾಗಿದೆ. Hindu Marriage Act 1955ರ ಸೆಕ್ಷನ್ 7ರ ಪ್ರಕಾರ, ಹಿಂದೂ ವಿವಾಹವು ಮಾನ್ಯವಾಗಲು ಅದು ಸಂಬಂಧಿಸಿದ ಸಮುದಾಯದ ಪಾರಂಪರಿಕ ಆಚರಣೆಗಳು ಮತ್ತು ಸಂಸ್ಕಾರಗಳ ಪ್ರಕಾರ ವಿಧಿವತ್ತಾಗಿ ನೆರವೇರಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಕೇವಲ ಮದುವೆ ಪ್ರಮಾಣಪತ್ರ ಅಥವಾ ನೋಂದಣಿ ಇದ್ದುದರಿಂದ ಮಾತ್ರ ವಿವಾಹ ಮಾನ್ಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಿಂದೂ ಪರಂಪರೆಯಲ್ಲಿ ವಿವಾಹವು ಕೇವಲ ಒಪ್ಪಂದವಲ್ಲ, ಅದು ಒಂದು ಸಂಸ್ಕಾರ (ಧಾರ್ಮಿಕ ವಿಧಿ) ಎಂಬು ದನ್ನು ನ್ಯಾಯಾಲಯ ಉಲ್ಲೇಖಿಸಿದೆ.

ಆದ್ದರಿಂದ ಯಾವ ಸಮುದಾಯದಲ್ಲಿ ಯಾವ ವಿಧಿಯು ಪ್ರಮುಖವಾಗಿದೆಯೋ, ಅವು ನೆರವೇರಿದಾಗ ಮಾತ್ರ ವಿವಾಹವು ಕಾನೂನುಬದ್ಧವಾಗಿ ಮಾನ್ಯವಾಗುತ್ತದೆ. ಇದೇ ಸಂದರ್ಭದಲ್ಲಿ ಸೆಕ್ಷನ್ 8ರ ಅಡಿಯಲ್ಲಿ ಇರುವ ವಿವಾಹ ನೋಂದಣಿ ವ್ಯವಸ್ಥೆ ಈಗಾಗಲೇ ನಡೆದ ವಿವಾಹಕ್ಕೆ ಸಾಕ್ಷಿ ನೀಡುವ ಆಡಳಿತಾತ್ಮಕ ಪ್ರಕ್ರಿಯೆ ಮಾತ್ರ, ಅದು ಸಾಂಪ್ರದಾಯಿಕ ವಿಧಿಗಳನ್ನು ಬದಲಾಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸನಾತನ ಸಂಸ್ಕೃತಿಯಲ್ಲಿ ಗ್ರಹಸ್ಥಾಶ್ರಮವೇ ಶ್ರೇಷ್ಠ. ವಿವಾಹ ಸಂಸ್ಕಾರವು ಅನೇಕ ವಿಧಿ-ವಿಧಾನಗಳ ಮೂಲಕ ನಡೆಯುತ್ತದೆ ಮತ್ತು ಪ್ರತಿಯೊಂದು ಹಂತವೂ ದಾಂಪತ್ಯ ಜೀವನದ ಧಾರ್ಮಿಕ ಹಾಗೂ ನೈತಿಕ ಬದ್ಧತೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ವರ-ವಧುಗಳ ಸಂಕಲ್ಪ, ವರಪೂಜೆ, ಕನ್ಯಾದಾನ, ಮಂಗಳಸೂತ್ರ ಧಾರಣೆ, ಸಪ್ತಪದಿ (ಏಳು ಹೆಜ್ಜೆಗಳು), ಲಾಜಾಹೋಮ ಅಥವಾ ಅಕ್ಷತಾರೋಪಣೆಯಂಥ ವಿಧಿಗಳು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರೂಪದಲ್ಲಿ ಕಂಡುಬರುತ್ತವೆ. ಈ ವಿಧಿಗಳ ಮೂಲಕ ದಂಪತಿಗಳು ಪರಸ್ಪರ ಸಹಧರ್ಮಚಾರಿಗಳಾಗಿ ಜೀವನ ಸಾಗಿಸುವ ಪ್ರತಿಜ್ಞೆ ಮಾಡುತ್ತಾರೆ.

Screenshot_3 R

ಸಪ್ತಪದಿಯಲ್ಲಿನ ಏಳು ಹೆಜ್ಜೆಗಳು ಆಹಾರ, ಶಕ್ತಿ, ಧನ, ಸಂತಾನ, ಧರ್ಮಾಚರಣೆ, ಸ್ನೇಹ ಮತ್ತು ಪರಸ್ಪರ ನಿಷ್ಠೆಯಂಥ ಜೀವನದ ಪ್ರಮುಖ ಕರ್ತವ್ಯಗಳಿಗೆ ಬದ್ಧತೆಯನ್ನು ಸೂಚಿಸು ತ್ತವೆ. ನಿಜಾಚರಣೆ ವಿವಾಹದಲ್ಲಿ ಯಾವ customary rite ಪಾಲಿಸಲಾಗುತ್ತಿದೆ? ಅದು ಸುದೀರ್ಘ ಕಾಲದಿಂದ ನಿರಂತರವಾಗಿ ಅನುಸರಿಸಲ್ಪಟ್ಟ ಸಂಪ್ರದಾಯವೇ? ಸಮುದಾಯ ದೊಳಗೆ ಅದು ಅಂಗೀಕೃತ ಸಂಸ್ಕಾರವೇ? ಎಂಬೆಲ್ಲ ಪ್ರಶ್ನೆಗಳು ಏಳಬಹುದು.

ಈ ಹಿನ್ನೆಲೆಯಲ್ಲಿ ನಿಜಾಚರಣೆಯ ವಿವಾಹಗಳನ್ನು ನೋಡುವುದಾದರೆ, ಹಿಂದೂ ವಿವಾಹ ಪದ್ಧತಿಯ ಹೊರತಾಗಿ ಹೊಸದಾಗಿ ಅಲ್ಲಿ ಏನು ಇಲ್ಲ? ಆದರೆ ಪ್ರತ್ಯೇಕ ಎಂದು ಲೇಬಲ್ ಮಾಡಲಾಗುತ್ತಿದೆ ಅಷ್ಟೇ. ಪ್ರತ್ಯೇಕ ವಿವಾಹ ಪದ್ಧತಿ ಇದ್ದರೆ ಮಾತ್ರ ಪ್ರತ್ಯೇಕ ರಿಲಿಜನ್ ಅಂತ ಇರಬಹುದು.

ಹಿಂದೂಗಳಲ್ಲಿ ವಿವಾಹವನ್ನು ಕಡ್ಡಾಯ ಮಾಡಲಾಗಿದ್ದರೂ ಅದನ್ನು ಹೀಗೆ ಮಾತ್ರ ಮಾಡಬೇಕು ಎಂದು ಬರೆದಿಟ್ಟಿಲ್ಲ. ಬರೆದಿಟ್ಟರೂ ಪ್ರತಿಯೊಬ್ಬರೂ ಅವರ ಸಂಪ್ರದಾಯ ಗಳಿಗನುಗುಣವಾಗಿ ಬದಲಾಯಿಸುವ ಸ್ವಾತಂತ್ರ್ಯ ಇಲ್ಲಿ ಮಾತ್ರ ಇದೆ.

Hindu Marriage Act ನ Section 7ರ ಪ್ರಕಾರ, ಹಿಂದೂ ವಿವಾಹವು customary rites and ceremonies ಅಂದರೆ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ solemnize ಆಗಿರಬೇಕು. ಅರ್ಥಾತ್, ವಿವಾಹ ಮಾನ್ಯವಾಗಲು ಯಾವುದೋ ಒಂದು ಸ್ಥಾಪಿತ ಸಂಪ್ರದಾಯದ ಆಚರಣೆ ಅನಿವಾರ್ಯ.

ಕೇವಲ ಘೋಷಣೆ, ಫೋಟೋ ಅಥವಾ ನೋಂದಣಿ ಮಾತ್ರ ಸಾಕಾಗುವುದಿಲ್ಲ. ನಿಜಾಚರಣೆ ಯಲ್ಲಿ ಅಗ್ನಿಸಾಕ್ಷಿ ಇಲ್ಲ, ಆದ್ದರಿಂದ ಇದು ಹಿಂದೂ ಅಲ್ಲ ಎಂದು ಹೇಳಲಾಗುತ್ತದೆ. Hindu Marriage Act ನ Section7(2) ಪ್ರಕಾರ, ಯಾವ ಸಂಪ್ರದಾಯದಲ್ಲಿ ಸಪ್ತಪದಿ (ಅಗ್ನಿಯ ಮುಂದೆ ಏಳು ಹೆಜ್ಜೆ) ಇದ್ದುದೋ, ಆ ಸಂಪ್ರದಾಯದಲ್ಲಿ ಏಳನೇ ಹೆಜ್ಜೆ ಇಟ್ಟಾಗ ವಿವಾಹ ಸಂಪೂರ್ಣವಾಗುತ್ತದೆ.

ಆದರೆ ಕಾನೂನು ಅಗ್ನಿಸಾಕ್ಷಿ ಕಡ್ಡಾಯ ಎಂದು ಹೇಳುವುದಿಲ್ಲ. ಅದು ಹೇಳುವುದೇನೆಂದರೆ, ಆ ಸಮುದಾಯದ essential ceremony ಯಾವುದು ಆಗಿದೆಯೋ ಅದು ಪಾಲನೆ ಯಾಗಬೇಕು. ಹಿಂದೂ ವಿವಾಹ ಪದ್ಧತಿಯಲ್ಲಿ ಅಗ್ನಿಸಾಕ್ಷಿ ಮಾತ್ರ ಪ್ರಮಾಣ ಎಂದು ಹೇಳಿಲ್ಲ.

ಹಿಂದೂ ಧರ್ಮಶಾಸ್ತ್ರಗಳು ಎಂಟು ವಿಧದ ವಿವಾಹಗಳನ್ನು ಹೇಳುತ್ತವೆ- ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಗಾಂಧರ್ವ, ರಾಕ್ಷಸ, ಅಸುರ, ಪೈಶಾಚ. ಗಾಂಧರ್ವ ವಿವಾಹ ಎಂದರೆ ಪರಸ್ಪರ ಒಪ್ಪಿಗೆಯ ಮದುವೆ. ಸ್ವಯಂವರ ಎಂದರೆ ಮಹಿಳೆಯ ಆಯ್ಕೆಯ ಸ್ವಾತಂತ್ರ್ಯ. ಸಾತ್ವಿಕ, ರಾಜಸ, ತಾಮಸವಾಗಿ ಈ ರೀತಿ ಆಯ್ಕೆಗಳಿವೆ. ಅಂದರೆ ಅಗ್ನಿಸಾಕ್ಷಿಯೇ ಏಕೈಕ ಮಾರ್ಗವಲ್ಲ.

ಹಲವೆಡೆ ಖಡ್ಗ ಸಾಕ್ಷಿ, ದೇವತೆ ಸಾಕ್ಷಿ, ಕುಲದೇವತಾ ಸಾಕ್ಷಿ, ಗುರು ಹಿರಿಯರ ಸಾಕ್ಷಿ ಪದ್ಧತಿ ಗಳಿವೆ. ಹೀಗಿರುವಾಗ ಅಗ್ನಿಸಾಕ್ಷಿಯಿಲ್ಲದಿರೆ ಅದು ಹಿಂದೂ ಅಲ್ಲ ಎಂಬ ವಾದವೇ ಪೇಲವ. ಲಿಂಗಾಯತ ಸಂಪ್ರದಾಯದಲ್ಲಿ ಅಗ್ನಿಸಾಕ್ಷಿಯ ಬದಲು ಐದು ಧಾನ್ಯಗಳ ರಾಶಿ ಹಾಕಿ ಅವುಗಳಲ್ಲಿ ದೇವತೆಗಳನ್ನು ಆಹ್ವಾನಿಸಿ ಅವುಗಳ ಸಾಕ್ಷಿಯಾಗಿ ಮದುವೆ ಮಾಡಿಕೊಳ್ಳುವ ಸಂಪ್ರದಾಯ ಮೊದಲಿನಿಂದ ಇದೆ.

ಇನ್ನು, ‘ನಿಜಾಚರಣೆಯಲ್ಲಿ ಮಂತ್ರವಿಲ್ಲ, ಆದ್ದರಿಂದ ಅದು ಹಿಂದೂ ಅಲ್ಲ’ ಎಂಬ ವಾದ ವಿದೆ. ದೇವರೆಡೆಗೆ ಮನಸ್ಸು ಸೆಳೆಯುವಂತೆ ಮಾಡುವುದು ಮಂತ್ರ. ಮಂತ್ರಗಳಿಗೆ ದೃಷ್ಟಾರ ರಿದ್ದಾರೆ. ವಿವಾಹ ಮಂತ್ರಗಳಲ್ಲಿ ಏನಿದೆ. ಸುಖಜೀವನ, ಸಹಜೀವನಕ್ಕಾಗಿ ಬೋಧೆಗಳಿವೆ. ವಚನಗಳೂ ಮಂತ್ರಗಳೇ, ಅವುಗಳಿಗೆ ಅನುಭಾವಿಗಳಿದ್ದಾರೆ.

ಸುಖಜೀವನ, ಸಹಜೀವನಕ್ಕಾಗಿ ವಚನಗಳನ್ನು ಬೋಧಿಸಿದರೂ ಅದು ಹಿಂದುವೇ. ಭಾಷೆಯ ಕಾರಣಕ್ಕಾಗಿ ಭಾವ ಬದಲಾಗುತ್ತದೆಯೇ? ಸಾಧ್ಯವಿಲ್ಲ. ಮೂರನೆಯದು ಅಕ್ಷತೆ. ‘ಅಕ್ಕಿ ಕಾಳು ಹಾಕಬಾರದು, ಅದು ಅನ್ನವನ್ನು ಚೆಲ್ಲಿದಂತೆ, ತುಳಿದಂತೆ; ಅದರ ಬದಲು ಹೂವನ್ನು ಹಾಕಿ’ ಎನ್ನುವುದು ನಿಜಾಚರಣೆಯ ವಾದ.

ಹೀಗಾದಾಗ ಅದು ಹಿಂದೂ ಆಗುವುದಿಲ್ಲ. ಅಕ್ಕಿ ಕಾಳು ಮಾತ್ರ ಹಾಕಬೇಕು ಅಂತ ಎಲ್ಲಿದೆ? ಜೋಳ ಸಮೃದ್ಧಿ ಹೊಂದಿದ ಪ್ರದೇಶಗಳಲ್ಲಿ ಜೋಳವನ್ನು, ರಾಗಿ ಬೆಳೆಯುವ ಪ್ರದೇಶದಲ್ಲಿ ರಾಗಿಯನ್ನು ಆಯಾ ಪ್ರದೇಶ ಲಭ್ಯತೆ ಆಹಾರಕ್ಕನುಗುಣವಾಗಿ ಅವುಗಳನ್ನು ಹಾಕುವ ಪದ್ಧತಿ ಬಂದಿದೆ. ಇನ್ನು ಧಾನ್ಯ ಹಾಕುವುದನ್ನು ಆಹಾರದ ಅವಮಾನ, ಪೋಲು ಅಂತ ಅಂದುಕೊಳ್ಳುವುದೇ ಕಮ್ಯುನಿಸ್ಟರ ಅರ್ಥಮೂಲ ವಾದ.

ಆದರೆ ಭಾರತದ ದಾರ್ಶನಿಕರು ಹೇಳುವಂತೆ, ಧಾನ್ಯವು ಸಮೃದ್ಧಿಯ ಸಂಕೇತ. ಅವುಗಳು ಬೀಜ. ವಿವಾಹದ ಉದ್ದೇಶದಲ್ಲಿ ವಂಶಾಭಿವೃಽಯೂ ಒಂದು. ಬೀಜ ಹಾಕಿದರೆ ಬೆಳೆಯು ತ್ತವೆ. ಇಂದಿನ ದಿನಮಾನಗಳಲ್ಲಿ ಅಕ್ಕಿ ಹೂವಿಗಿಂತ ಅಗ್ಗ. ಹೂವು ಸೌಂದರ್ಯದ ಸಂಕೇತ. ಅವುಗಳನ್ನು ತುಳಿಯುವುದು ಕ್ರೌರ್ಯ ಅಂತ ಯಾರಾದರೂ ವಾದ ಮಾಡಿದರೆ ಏನು ಗತಿ.

ಒಟ್ಟಿನಲ್ಲಿ ಹಿಂದೂ ವಿವಾಹ ಪದ್ಧತಿಯಲ್ಲಿ ರೋಪಣವಂತೂ ಇದೆ, ನಿಜಾಚರಣೆಯೂ ಇದಕ್ಕೆ ಹೊರತಾಗಿಲ್ಲ. ಇನ್ನು ಮಾಂಗಲ್ಯ, ಸಿಂದೂರ, ಕಾಲುಂಗುರ ಇವು ಭಾರತದಲ್ಲಿ ಕಡ್ಡಾಯ, ಇದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ‘ಸಾವಿತ್ರಿ-ಸದೃಶ’ ಮಹಿಳೆಯರು ಇದರ ವಿಷಯಕ್ಕೆ ಬಂದರೆ ಯಾರನ್ನೂ ಬಿಡುವುದಿಲ್ಲ. ಹೀಗಾಗಿ ನಿಜಾಚರಣೆಯಲ್ಲಿ ಇವುಗಳನ್ನು ಅಷ್ಟೇ ಬಿಟ್ಟಿದ್ದಾರೆ.

ಹಲವು ಕಡೆ ಪ್ರಗತಿಪರರು, ‘ಗಂಡು ತಾಳಿ ಕಟ್ಟದರೆ, ಹೆಣ್ಣು ಅವನಿಗೆ ರುದ್ರಾಕ್ಷಿ ಕಟ್ಟಬೇಕು. ಅಲ್ಲಿಯೂ ಮೂರು ಗಂಟೇ ಇರಬೇಕು’ ಎಂಬುದನ್ನು ಮಾಡಿದ್ದಾರಂತೆ. ಇದು ಇಲ್ಲದ್ದನ್ನು ಹುಡುಕುವುದಲ್ಲದೇ ಮತ್ತೇನೂ ಅಲ್ಲ. ಬಹುಮುಖ್ಯವಾಗಿ ಪ್ರತಿಜ್ಞೆ ಮತ್ತು ಸಪ್ತಪದಿ.

‘ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ’, ಅಂದರೆ ಧರ್ಮ, ಅರ್ಥ ಮತ್ತು ಕಾಮ ವೆಂಬ ಪುರುಷಾರ್ಥಗಳಲ್ಲಿ ಪರಸ್ಪರ ವಿಶ್ವಾಸ, ಪ್ರಾಮಾಣಿಕತೆ, ಅಖಂಡತೆಯಿಂದ ಇರುತ್ತೇವೆ ಎಂಬ ಪ್ರತಿಜ್ಞೆ ನಿಜಾಚರಣೆಯೂ ಈ ಪ್ರತಿeಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಇನ್ನು ಪುರೋಹಿತರಿಲ್ಲದ ಮದುವೆ, ನಿಜಾಚರಣೆ ಅದು ಹಿಂದೂ ಅಲ್ಲ ಎಂಬುದು ಇನ್ನೊಂದು ‘ಸೆಲ್ಲಿಂಗ್ ಪಾಯಿಂಟ್’. ವಿಧಿ ವಿಧಾನಗಳು ಇವೆ ಎಂದರೆ ಹೇಳಿ ಮಾಡಿಸು ವವರು ಬೇಕು. ಅವರಿಗೆ ಬೇಕಾದ ಹೆಸರಿಂದ ಕರೆಯಬಹುದು. ಇನ್ನು ದಕ್ಷಿಣೆ ಇಲ್ಲದ ಮದುವೆ ಎಂಬುದು ಮತ್ತೊಂದು ಸೆಲ್ಲಿಂಗ್ ಪಾಯಿಂಟ್. ‌

ಹಿಂದೂ ಧರ್ಮದಲ್ಲಿ ಪುರೋಹಿತರಿಗೆ ದಕ್ಷಿಣೆ ಕೊಡಬೇಕು ಅಂತ ಇದೆ. ಇಂತಿಷ್ಟೇ ಕೊಡಲೇಬೇಕು ಎಂದು ಡಿಮ್ಯಾಂಡ್ ಮಾಡುವುದು ಆಯಾ ವ್ಯಕ್ತಿಯ ತಪ್ಪೇ ಹೊರತು, ಸಂಸ್ಕಾರದ್ದಲ್ಲ. ಸಂಕಲ್ಪದ ‘ಯಥಾಶಕ್ತಿ, ಯಥಾಮತಿ’ ಅಂತ ಇದೆ. ನಿಜಾಚರಣೆಯಲ್ಲಿ ಬರುವವರು ಈಗ ಪ್ಯಾಕೇಜ್ ಮಾಡಿದ್ದಾರೆ ಅಂತ ಸುದ್ದಿ ಇದೆ.

ಆಶೀರ್ವಾದಕ್ಕೆ ಬರುವವರು ಸಹ ಕೊಟ್ಟಿದ್ದನ್ನು ಇಟ್ಟು ಹೋಗುವುದಿಲ್ಲ. ಅಂದರೆ ಇದನ್ನು ವ್ಯಕ್ತಿಗತವಾಗಿ ನೋಡಬೇಕೇ ಹೊರತು, ಅದು ಸಂಸ್ಕಾರದ ತಪ್ಪಲ್ಲ. ನಿಜಾ ಚರಣೆಯಲ್ಲಿ ಮದುವೆಗೆ ಮೊದಲು ದೀಕ್ಷೆ ಆಗಿರದಿದ್ದರೆ ಲಿಂಗದೀಕ್ಷೆ, ನಂತರ ಲಿಂಗಪೂಜೆ.

ಲಿಂಗಾಯತೇತರ ಹಿಂದೂ ವಿವಾಹಗಳಲ್ಲಿಯೂ ಇದು ಇದೆ. ಕ್ಷತ್ರಿಯ ವೈಶ್ಯರಲ್ಲಿ ತತ್ಕಾಲ ಮುಂಜಿವೆ ಮಾಡಿ, ಮದುವೆ ಮಾಡುವುದೂ ಇದೆ. ವಿವಾಹಗಳು ಸರಳವಾಗಬೇಕು, ಸಂಪ್ರದಾಯಬದ್ಧವಾಗಬೇಕು ಎಂಬುದೇನೋ ಸರಿ; ಆದರೆ ‘ನಿಜಾಚರಣೆ’ ಅಂತ ಹೆಸರಿಟ್ಟ ಮಾತ್ರಕ್ಕೆ ಹಾಗಾಗಿದೆಯೇ? ಈ ವಿಷಯದಲ್ಲಿ ಸಂಶಯವಿದೆ.

ನಿಜಾಚರಣೆಯನ್ನು ‘ಹಿಂದೂ ಅಲ್ಲ’ ಎಂದು ಬ್ರ್ಯಾಂಡ್ ಮಾಡಿದ್ದಾರೆ. ಇದು ಮೌಢ್ಯವೇ ಹೊರತು ಅಂಥ ಹೇಳಿಕೊಳ್ಳುವ ಯಾವ ಬದಲಾವಣೆಗಳೂ ಇಲ್ಲ. ಬದಲಾವಣೆ ಏನಾದರು ಇದ್ದರೆ ಸತಿಪತಿಗಳು ಒಂದಾಗುವ ಶುಭ ಸಂದರ್ಭವನ್ನು ನಿಜಾಚರಣೆಯನ್ನು ಒಪ್ಪುವ ಮತ್ತು ಒಪ್ಪದಿರುವ ಎರಡು ಪಂಗಡಗಳಾಗಿ ಒಡೆಯುವುದು, ಅಲ್ಲಿ ಬಂದ ಪ್ರತ್ಯೇಕಿಗಳ ಹಿಂದೂ ದ್ವೇಷ ಭಾಷಣ.

ಇವೆರಡು ನಿಜಾಚರಣೆಯ ಮದುವೆಗಳಲ್ಲಿ ಹೊಸದು. ಹಿಂದೂ ವಿವಾಹ ಪದ್ಧತಿಯಲ್ಲಿ ಪ್ರದೇಶ, ಸಮುದಾಯ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ವಿಧಿ-ವಿಧಾನಗಳಲ್ಲಿ ವೈವಿಧ್ಯ ಇದ್ದರೂ, ಅದರ ಮೂಲಭೂತ ಉದ್ದೇಶ ದಾಂಪತ್ಯ ಧರ್ಮ, ಕುಟುಂಬ ಸಮನ್ವಯ ಮತ್ತು ಗೃಹಸ್ಥಾಶ್ರಮದ ಸ್ಥಾಪನೆ.

ಇತ್ತೀಚೆಗೆ ನಿಜಾಚರಣೆ ಎಂಬ ಹೆಸರಿನಲ್ಲಿ ಪ್ರತ್ಯೇಕ ವಿವಾಹ ಪದ್ಧತಿಯನ್ನು ರೂಪಿಸಿದ್ದೇವೆ ಎಂದು ಸೇಲ್ ಮಾಡುತ್ತಾ ಅದನ್ನು ಹಿಂದೂ ಸಂಸ್ಕಾರದಿಂದ ಭಿನ್ನ ಎಂದು ತೋರಿಸ ಲಾಗುತ್ತಿದೆ. ಇದು ಪ್ರಶ್ನಾರ್ಹ. ಬಸವ ತತ್ವದ ಮೂಲ ಸ್ವಭಾವವೇ ಸಾಮರಸ್ಯ ಮತ್ತು ಸಮನ್ವಯವಾಗಿರುವಾಗ, ವಿವಾಹವನ್ನು ವಿಭಜನೆಯ ಸಾಧನವಾಗಿಸುವುದು ಶರಣ ಪರಂಪರೆಯ ಆಶಯದ ವಿರುದ್ಧ...

(ಲೇಖಕರು ಸಂಸ್ಕೃತಿ ಚಿಂತಕರು)