ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ; ಸೈಬರ್ ಕ್ರೈಮ್ ಪೊಲೀಸರಿಗೆ ದೂರು
Lavanya Tripathi Cyber Case: ಟಾಲಿವುಡ್ ನಟಿ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರ ಕುಟುಂಬದ ಸೊಸೆ ಲಾವಣ್ಯ ತ್ರಿಪಾಠಿ ಅವರು ಸೈಬರ್ ಕಿರುಕುಳದ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತೆ ಅಸಭ್ಯ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
-
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಮೇಲೆ ವಿಪರೀತ ಟ್ರೋಲಿಂಗ್ ನಡೆಯುತ್ತಿರುವುದು ಗೊತ್ತೇ ಇದೆ. ಕೆಲವರು ನಕಲಿ ಖಾತೆಗಳನ್ನು ಸೃಷ್ಟಿಸಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ನಿಂದನೆ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಕೆಲ ತಾರೆಯರು ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವುದು ಗೊತ್ತೇ ಇದೆ. ಇದೀಗ ಟಾಲಿವುಡ್ ನಟಿ, ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿ ಅವರಿಗೂ ಇಂತಹದ್ದೇ ಕಹಿ ಅನುಭವವಾಗಿದೆ. ಇದೀಗ ಅವರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ನೀಡಿದ ಲಾವಣ್ಯ ತ್ರಿಪಾಠಿ
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಗೌರವಕ್ಕೆ ಧಕ್ಕೆ ತರುವಂತೆ ಕೆಲವರು ಅಸಭ್ಯವಾಗಿ ಪೋಸ್ಟ್ ಹಾಕುತ್ತಿದ್ದಾರೆ, ಕಾಮೆಂಟ್ ಮಾಡುತ್ತಿದ್ದಾರೆ ಎಂದು ಲಾವಣ್ಯ ತ್ರಿಪಾಠಿ ಅವರು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಮುಖ್ಯವಾಗಿ Purplecrayon00 ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮನ್ನು ಮತ್ತು ತಮ್ಮ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ನಿಂದಿಸಲಾಗುತ್ತಿದೆ ಎಂದು ಲಾವಣ್ಯ ತಿಳಿಸಿದ್ದಾರೆ. "ಈ ಕಿರುಕುಳ ಕಳೆದ ಕೆಲವು ಸಮಯದಿಂದ ನಡೆಯುತ್ತಿದ್ದು, ತಮ್ಮ ವೈಯಕ್ತಿಕ ಜೀವನ ಮತ್ತು ಘನತೆಗೆ ಹಾನಿ ಮಾಡುವ ಉದ್ದೇಶದಿಂದ ಸುಳ್ಳು ಪ್ರಚಾರ ಮಾಡಲಾಗುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.
ಪ್ರಕರಣ ದಾಖಲು ಮಾಡಿದ ಪೊಲೀಸರು
ಲಾವಣ್ಯ ತ್ರಿಪಾಠಿ ಅವರ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಐಟಿ ಕಾಯ್ದೆ ಸೆಕ್ಷನ್ 67 ರ ಜೊತೆಗೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 79 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಆ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಂಡಲ್ ಮಾಡುತ್ತಿರುವ ವ್ಯಕ್ತಿಯನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಆ ಖಾತೆಯ ಮೂಲಕ ಮಾಡಲಾಗಿರುವ ಅವಮಾನಕರ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಪೊಲೀಸರಿಗೆ ಲಾವಣ್ಯ ಮನವಿ ಮಾಡಿಕೊಂಡಿದ್ದಾರೆ.
ಈಚೆಗಷ್ಟೇ ಮಾವ ಚಿರಂಜೀವಿ ಪರ ಮಾತಾಡಿದ್ದ ನಟಿ
ಇತ್ತೀಚೆಗೆ ʻಮೆಗಾ ಸ್ಟಾರ್ʼ ಚಿರಂಜೀವಿ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಂದ ಕೆಲವು ಟ್ರೋಲ್‌ಗಳ ಬಗ್ಗೆಯೂ ಲಾವಣ್ಯ ತ್ರಿಪಾಠಿ ಪ್ರತಿಕ್ರಿಯಿಸಿದ್ದರು. "ಕುಟುಂಬದ ಸಂತೋಷದ ಕ್ಷಣಗಳನ್ನು ಅಸಹ್ಯಕರ ಕಾಮೆಂಟ್‌ಗಳ ಮೂಲಕ ವಿಕೃತವಾಗಿ ಬಿಂಬಿಸುವುದು ಸರಿಯಲ್ಲ. ಚಿರಂಜೀವಿ ಅವರು ತಮ್ಮ ಕುಟುಂಬದ ಮಹಿಳೆಯರನ್ನು ಮತ್ತು ಮೊಮ್ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರ ವ್ಯಕ್ತಿತ್ವದ ಬಗ್ಗೆ ತಿಳಿಯದೆ ಟೀಕೆ ಮಾಡುವುದು ಸರಿಯಲ್ಲ. ಅವರು ಮಾಡುವ ಕೆಲಸಗಳಲ್ಲಿ ಶೇ. 1 ರಷ್ಟು ಮಾಡಲು ಕೂಡ ಅನೇಕರಿಗೆ ಸಾಧ್ಯವಿಲ್ಲ" ಎಂದು ಲಾವಣ್ಯ ತಿರುಗೇಟು ನೀಡಿದ್ದರು.
ಅಂದಹಾಗೆ, ಚಿರಂಜೀವಿ ಅವರ ಸಹೋದರ ನಾಗ ಬಾಬು ಅವರ ಪುತ್ರ ವರುಣ್ ತೇಜ್ ಅವರನ್ನು ನಟಿ ಲಾವಣ್ಯ ತ್ರಿಪಾಠಿ ಅವರು ವಿವಾಹವಾಗಿದ್ದಾರೆ. ಇಟಲಿಯ ಟಸ್ಕಾನಿಯಲ್ಲಿ ಇವರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ವಾಯುವ್ ತೇಜ್ ಕೊನಿಡೆಲಾ ಎಂಬ ಗಂಡು ಮಗುವಿಗೆ ಲಾವಣ್ಯ ಜನ್ಮ ನೀಡಿದ್ದಾರೆ.