Ranjith H Ashwath Column: ಬರಪೀಡಿತ ತಾಲೂಕು ಘೋಷಣೆ, ಸಂಭ್ರಮದ ಸರಕೇ ?
ಆರಂಭದಲ್ಲಿ 103 ತಾಲೂಕು ಘೋಷಿಸಿದಾಗ, ಪ್ರತಿಪಕ್ಷದ ಶಾಸಕರಿಂದ ಹೆಚ್ಚಾಗಿ ಕಾಂಗ್ರೆಸ್ ಶಾಸಕರೇ ಸರಕಾರದ ವಿರುದ್ಧ ತಿರುಗಿಬಿದ್ದರು. ತಮ್ಮ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸ ದಿದ್ದರೆ ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಹಿರಿಯ ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ನೀಡಿದರೆ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪೀಕರ್‌ಗೆ ರಾಜೀನಾಮೆಯನ್ನೇ ಸಲ್ಲಿಸಿದರು (ರಾಜೀನಾಮೆ ಪತ್ರ ಸಲ್ಲಿಸುವಾಗಲೇ ಅನೂರ್ಜಿತವಾಗುವಂತೆ ಸಿದ್ಧಪಡಿಸಿದ್ದರು ಎನ್ನುವುದು ಬೇರೆ ಮಾತು). ಈ ಎಲ್ಲದರ ಹೊರತಾಗಿಯೂ ನಾಲ್ಕು ಹಂತದಲ್ಲಿ 198 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದ್ದು, ಅಕ್ಟೋಬರ್ 3ರಂದು ಕೇಂದ್ರದಿಂದಲೂ ಬರಪರಿಶೀಲನೆಗೆ ಕೇಂದ್ರದ ತಂಡ ಆಗಮಿಸಲಿದೆ.
-
ಅಶ್ವತ್ಥಕಟ್ಟೆ
ಈ ಬಾರಿಯ ಎಲ್‌ನಿನೋ ಎಫೆಕ್ಟ್‌ನಿಂದಾಗಿ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಮುಂಗಾರು ಕೊರತೆ, ಬರಗಾಲದ ಸಮಸ್ಯೆ ತಲೆದೋರಿದೆ. ಭಾರತದ ಹೊರತಾಗಿ ಇನ್ನೂ ಅನೇಕ ದೇಶಗಳಲ್ಲಿ ವಾತಾವರಣ ಬುಡಮೇಲಾಗಿರುವ ಉದಾಹರಣೆಗಳಿವೆ. ಮುಂಗಾರಿನ ಸಮಯದಲ್ಲಿ ತೊಯ್ದು ತೊಪ್ಪೆಯಾಗಬೇಕಿದ್ದ ಕರ್ನಾಟಕದ ಹಲವಾರು ಊರುಗಳಲ್ಲಿ ಬೇಸುಗೆಯ ಬಿಸಿಲಿನಿಂದ ನೆತ್ತಿ ಕಾವೇರುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದಿನ ವರ್ಷಗಳಲ್ಲಿ ಅತಿವೃಷ್ಠಿಯಿಂದ ಆಗಿದ್ದ ಸಮಸ್ಯೆಗಳಿಂದ ಹೊರಬರುವ ಮೊದಲೇ, ಈ ಬಾರಿಯ ಬರ ಮುನ್ಸೂಚನೆ ಹಲವು ರೈತರನ್ನು ಕಂಗಾಲು ಮಾಡಿರುವುದು ಸುಳ್ಳಲ್ಲ. ಮುಂಗಾರು ಆರಂಭಕ್ಕೂ ಮೊದಲೇ ಈ ಬಾರಿಯ ‘ಬರ’ವರ್ಷ ಎನ್ನುವ ಮುನ್ಸೂಚನೆಗಳು ಸಿಕ್ಕಿದ್ದರಿಂದ ಆಡಳಿತ ನಡೆಸುವ ಸರಕಾರಗಳು, ರೈತರು ಮಾನಸಿಕವಾಗಿ ಕ್ಷಾಮ ಎದುರಿಸಲು ಸಿದ್ಧತೆ ನಡೆಸಿಕೊಂಡಿದ್ದರು. ಇನ್ನೊಂದೆಡೆ ಸರಕಾ ರಗಳು ಬರ ನಿರ್ವಹಣೆ ಕೋಟ್ಯಂತರ ರುಪಾಯಿ ಅನುದಾನ ಮೀಸಲಿಟ್ಟಿರುವುದಾಗಿ ಹೇಳಿ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಅಗತ್ಯವಿರುವಷ್ಟು ಅನುದಾನವನ್ನು ಮೀಸಲಿಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಜನ-ಜಾನುವಾರುಗಳಿಗೆ ನೀರಿಗೆ ಸಮಸ್ಯೆಯಾಗದಂತೆ ‘ಕ್ರಮ’ ತೆಗೆದುಕೊಂಡಿದ್ದೇವೆ ಎನ್ನುವ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಈ ಎಲ್ಲ ಕ್ರಮಗಳು ರಾಜ್ಯದ ಅನೇಕ ಗ್ರಾಮಗಳಿಗೆ ಮುಟ್ಟಿಲ್ಲ ಎನ್ನುವುದು ವಾಸ್ತವ. ಈ ನಡುವೆ ಪ್ರತಿವರ್ಷದ ಸಂಪ್ರದಾಯದಂತೆ ಈಗಾಗಲೇ ರಾಜ್ಯ ಸರಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸುವ ಆಡಳಿತಾತ್ಮಕ ಪ್ರಕ್ರಿಯೆಯನ್ನು ಆರಂಭಿಸಿದೆ.
ಆರಂಭದಲ್ಲಿ 103 ತಾಲೂಕು ಘೋಷಿಸಿದಾಗ, ಪ್ರತಿಪಕ್ಷದ ಶಾಸಕರಿಂದ ಹೆಚ್ಚಾಗಿ ಕಾಂಗ್ರೆಸ್ ಶಾಸಕರೇ ಸರಕಾರದ ವಿರುದ್ಧ ತಿರುಗಿಬಿದ್ದರು. ತಮ್ಮ ತಾಲೂಕುಗಳನ್ನು ಬರಪೀಡಿತ ಪ್ರದೇಶ ವೆಂದು ಘೋಷಿಸದಿದ್ದರೆ ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಹಿರಿಯ ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ನೀಡಿದರೆ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪೀಕರ್‌ಗೆ ರಾಜೀನಾಮೆಯನ್ನೇ ಸಲ್ಲಿಸಿದರು (ರಾಜೀನಾಮೆ ಪತ್ರ ಸಲ್ಲಿಸುವಾಗಲೇ ಅನೂರ್ಜಿತವಾಗುವಂತೆ ಸಿದ್ಧಪಡಿಸಿದ್ದರು ಎನ್ನುವುದು ಬೇರೆ ಮಾತು). ಈ ಎಲ್ಲದರ ಹೊರತಾಗಿಯೂ ನಾಲ್ಕು ಹಂತದಲ್ಲಿ 198 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದ್ದು, ಅಕ್ಟೋಬರ್ 3ರಂದು ಕೇಂದ್ರದಿಂದಲೂ ಬರಪರಿಶೀಲನೆಗೆ ಕೇಂದ್ರದ ತಂಡ ಆಗಮಿಸಲಿದೆ.
ಇದನ್ನೂ ಓದಿ: Ranjith H Ashwath Column: ತಳಮಟ್ಟದಲ್ಲಿ ಬಿಜೆಪಿಗೆ ಲಾಭ ತಂದ ಪಾದಯಾತ್ರೆ !
ಇನ್ನು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಶಾಸಕ ದೇವೇಂದ್ರಪ್ಪನವರ ಬಾಹ್ಯಬೆಂಬಲ ಬಂದ್ ಅನ್ನು ನಡೆಸಲಾಯಿತು. ಇದಕ್ಕೂ ಮೊದಲು ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಸುದ್ದಿಗೋಷ್ಠಿಯಲ್ಲಿಯೂ ಮಾತನಾಡಿ ತಮ್ಮ ಕ್ಷೇತ್ರದ ‘ಒಳಿತಿಗೆ’ ಧ್ವನಿ ಎತ್ತಿದ್ದರು.
ಇದಿಷ್ಟೇ ಆಗಿದ್ದರೆ ಶಾಸಕರ ವಿರುದ್ಧ ಬಹುದೊಡ್ಡ ಮಟ್ಟದ ವಿರೋಧವೇನು ವ್ಯಕ್ತವಾಗುತ್ತಿರಲಿಲ್ಲ. ಸಾಮಾನ್ಯವಾಗಿ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರು ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಬರಪೀಡಿತ ತಾಲೂಕು ಪಟ್ಟಿ ಘೋಷಣೆಯಾದ ತಿಂಗಳ ಬಳಿಕ ಅಂದರೆ ಮೂರನೇ ಹಂತದಲ್ಲಿ ಜಗಳೂರು ಬರಪೀಡಿತ ತಾಲೂಕು ಪಟ್ಟಿಗೆ ಸೇರಿತ್ತು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಈಗಾಗಲೇ ಹೇಳಿರುವಂತೆ, ಬರಪೀಡಿತ ತಾಲೂಕುಗಳ ಪಟ್ಟಿ ಪಡೆಯಲು ಯಾವುದೇ ‘ರಾಜಕೀಯ ಒತ್ತಡ’ ನಡೆಯುವುದಿಲ್ಲ. ಮಾರ್ಗಸೂಚಿಗೆ ಹೊಂದಾಣಿಕೆಯಾದರೆ ಸಹಜವಾಗಿಯೇ ಪಟ್ಟಿಯಲ್ಲಿ ತಾಲೂಕು ಸೇರಿಕೊಳ್ಳುತ್ತದೆ. ಆದರೆ ಜಗಳೂರಿನ ಶಾಸಕ ದೇವೇಂದ್ರಪ್ಪ ಅವರು ಮಾತ್ರ, ಈ ಪಟ್ಟಿಯಲ್ಲಿ ಜಗಳೂರನ್ನು ಸೇರಿಸಿದ್ದೇ ಬಹುದೊಡ್ಡ ಸಾಧನೆ ಎನ್ನುವ ರೀತಿಯಲ್ಲಿ ಸಿಹಿ ಹಂಚಿ, ಪಟಾಕಿ ಹೊಡೆಯಲು ಮುಂದಾಗಿದ್ದು ಮಾತ್ರ ತೀರಾ ಕೆಟ್ಟ ಪರಂಪರೆಗೆ ನಾಂದಿ ಎಂದರೆ ತಪ್ಪಾಗುವುದಿಲ್ಲ.
ಬರ ಪೀಡಿತ ತಾಲೂಕಿನ ಪಟ್ಟಿಯಲ್ಲಿ ಸ್ಥಾನ ಪಡೆಯುವುದೇ ಆ ತಾಲೂಕಿನಲ್ಲಿರುವ ಭೀಕರತೆ ಯನ್ನು ತೋರಿಸುತ್ತದೆ. ಅಂತಹದರಲ್ಲಿ ಪಟ್ಟಿಗೆ ಸೇರಿದೆ ಎನ್ನುವ ಕಾರಣಕ್ಕೆ ಶಾಸಕರ ಪುತ್ರ, ಕೆಪಿಸಿಸಿ ಎಸ್‌ಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಹಾಕಿಕೊಳ್ಳುವುದಷ್ಟೇ ಅಲ್ಲದೇ, ಬರಪಟ್ಟಿಗೆ ಸೇರಿದ ಹಿನ್ನಲೆಯಲ್ಲಿ ಪಕ್ಷದ ವತಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ‘ಸಂಭ್ರಮೋತ್ಸವ’ ಮಾಡಲಾಗುವುದು.
ಇದರಲ್ಲಿ ‘ಶಾಸಕರೇ’ ಭಾಗವಹಿಸಲಿರುವುದರಿಂದ ಎಲ್ಲರೂ ಈ ಬರಪಟ್ಟಿಗೆ ಸೇರಿದ ಸಂಭ್ರಮದಲ್ಲಿ ಭಾಗವಹಿಸಬೇಕು ಎನ್ನುವ ಬಹಿರಂಗ ಆಹ್ವಾನವನ್ನು ನೀಡಿದರು! ಬರಪರಿಸ್ಥಿತಿ ಅಂತಹ ಸೂಕ್ಷ್ಮ ವಿಷಯಗಳನ್ನು ಎದುರಿಸುವಾಗ ಜನಪ್ರತಿನಿಧಿಗಳು ವಿವೇಚನೆ ಬಳಸಬೇಕು. ಈ ಪೋಸ್ಟರ್‌ಗಳನ್ನು ಮಾಡಿ, ಸಂಭ್ರಮಿಸಿ ಎಂದು ಶಾಸಕರು ಹೇಳದೇ ಇರಬಹುದು. ಆದರೆ ಅವರ ಸುತ್ತಲಿರುವವರು ಎಲ್ಲದಕ್ಕೂ ರಾಜಕೀಯ ಬೆರೆಸುವ ಬದಲು, ಪರಿಸ್ಥಿತಿಯನ್ನು ಅವಲೋಕಿಸುವ ‘ಸಣ್ಣ’ ಪ್ರಯತ್ನ ಮಾಡಿದ್ದರೂ ಜನರ ಮುಂದೆ ಸಣ್ಣವರಾಗುವುದು ತಪ್ಪಿಸಬಹುದು.
ಶಾಸಕರ ಇಂತಹ ವರ್ತನೆಗಳನ್ನು ನೋಡಿದಾಗ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ’ Eeverybody loves good drought’ ಪುಸ್ತಕ ನೆನಪಾಗುತ್ತದೆ. ಹಾಗೆ ನೋಡಿದರೆ, ಮೊದಲೇ ಹೇಳಿದಂತೆ ಬರಪೀಡಿತ ಪ್ರದೇಶಗಳನ್ನು ಘೋಷಿಸುವುದು ಪ್ರತಿವರ್ಷ ನಡೆಯುವ ಆಡಳಿತ ಪ್ರಕ್ರಿಯೆ. ಬರಪೀಡಿತ ಎಂದ ಕೂಡಲೇ ಅದರ ಭೀಕರತೆಗೆ ಆತಂಕಪಡುವ ಬದಲು ಬಹುತೇಕ ಶಾಸಕರು ತಮ್ಮ ಕ್ಷೇತ್ರವೂ ಈ ಪಟ್ಟಿಗೆ ಸೇರಿದರೆ ಒಳಿತು ಎಂದೇ ಆಲೋಚಿಸುತ್ತಾರೆ.
ಬರಪೀಡಿತವೆಂದು ಘೋಷಣೆಯಾದರೆ ಪ್ರಮುಖ ಆ ತಾಲೂಕಿನ ರೈತರು ಬೆಳೆದ ಬೆಳೆಗಳು ಬೆಳೆನಷ್ಟ ಪರಿಹಾರಕ್ಕೆ ಅರ್ಹವಾಗುತ್ತದೆ. ಇದರೊಂದಿಗೆ ಕೃಷಿ ಸಾಲಗಳ ಮರುಪಾವತಿಗೆ ವಿನಾಯಿತಿ ಅಥವಾ ಹೆಚ್ಚುವರಿ ಸಮಯ ನೀಡಲು ಅವಕಾಶವಿರುತ್ತದೆ. ಇದನ್ನು ಹೊರತುಪಡಿಸಿ, ಜನ-ಜಾನುವಾರು ಗಳಿಗೆ ಕುಡಿಯುವ ನೀರನ್ನು ಒದಗಿಸಲು ವಿಶೇಷ ಅನುದಾನ, ಜಾನುವಾರುಗಳಿಗೆ ಮೇವು, ಗೋಶಾಲೆ ಆರಂಭಿಸಲು ಅನುದಾನ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚುವರಿ ಮಾನವ ದಿನಗಳ ಸೃಷ್ಟಿಗೆ ಅವಕಾಶ ಸೇರಿದಂತೆ ಹಲವು ರೀತಿಯ ನೆರವು ಆ ತಾಲೂಕಿಗೆ ಸಿಗುತ್ತದೆ.
ಈ ಎಲ್ಲವನ್ನು ನಿರ್ವಹಿಸಲು ಹಾಗೂ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಲು ಸ್ಥಳೀಯ ‘ಶಾಸಕರ’ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ತುರ್ತು ನಿರ್ವಹಣೆಗೆ ಅನುದಾನವನ್ನು ನೀಡಲಾಗುತ್ತದೆ. ಇದರೊಂದಿಗೆ ಜಿಲ್ಲಾಧಿಕಾರಿಗಳ ಬಳಿಯಿರುವ ಪಿಡಿ ಖಾತೆಯಿಂದಲೂ ಅನುದಾನ ಪಡೆಯಲು ‘ಶಾಸಕರ’ ನೇತೃತ್ವದ ಸಮಿತಿಗೆ ಅವಕಾಶವಿರುತ್ತದೆ.
ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಸರಕಾರದ ಮೇಲೆ ಯಾವುದೇ ಶಾಸಕರು ಒತ್ತಡ ಹೇರಿದರೂ, ರಾಜಕೀಯ ಒತ್ತಡದ ಆಧಾರದಲ್ಲಿ ಬರಪೀಡಿತ ತಾಲೂಕು ಘೋಷಣೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಒಂದು ವೇಳೆ ಅದನ್ನು ಮೀರಿಯೂ ಘೋಷಣೆ ಮಾಡಿದರೆ, ಕೇಂದ್ರದಿಂದ ಬರಪೀಡಿತ ತಾಲೂಕುಗಳಿಗೆ ಸಿಗುವ ‘ನೆರವು’, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಬೆಳೆ ವಿಮೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳು ಸಿಗುವುದಿಲ್ಲ.
ಕಾಂಗ್ರೆಸ್‌ನ ಹಲವು ಶಾಸಕರು ರಾಜೀನಾಮೆಯ ಎಚ್ಚರಿಕೆ ನೀಡಿದಾಗ, ವಿಧಾನಸಭೆಯಲ್ಲಿಯೇ ಮಾತನಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ನಾವು(ರಾಜ್ಯ ಸರಕಾರ) ಇಲ್ಲಿಂದ ಏನೇ ವರದಿ ಕಳುಹಿಸಿದರೂ ಅದು ತಲುಪುವುದು ಕೇಂದ್ರಕ್ಕೆ . ನೀವು ಸ್ಪೀಕರ್ ಎನ್ನುವ ಕಾರಣಕ್ಕೆ ನಿಮ್ಮ ಕ್ಷೇತ್ರವನ್ನು ಬರ ಪ್ರದೇಶ ಎಂದು ಘೋಷಣೆ ಮಾಡುವ ಅಧಿಕಾರವಿಲ್ಲ.
ಬರ ಘೋಷಣೆ ಮಾಡಬೇಕು ಎಂದರೆ ಅದಕ್ಕೆ ಅದರದೇ ಆದ ಮಾನದಂಡಗಳಿವೆ. 21 ದಿನಗಳ ಕಾಲ ಮಳೆ ಬೀಳಬಾರದು. ಇಂತಿಷ್ಟು ಪ್ರಮಾಣದ ಮಳೆ ಕೊರತೆ ಇರಬೇಕು ಎಂಬ ಮಾರ್ಗಸೂಚಿಗಳಿವೆ. ನಮ್ಮ ಶಾಸಕರು ಸೇರಿದಂತೆ ಅನೇಕರು ನಮ್ಮ ತಾಲೂಕನ್ನು ಬರ ಪಟ್ಟಿಗೆ ಸೇರಿಸಿ ಎಂದು ಮನವಿ ಪತ್ರ ನೀಡಿದ್ದಾರೆ.
ನನ್ನ ಕ್ಷೇತ್ರದ ಒಂದು ಭಾಗದಲ್ಲಿ ಮಾತ್ರ ಮಳೆಯಾಗಿದೆ. ಉಳಿದ ಭಾಗದಲ್ಲಿ ಮಳೆಯಾಗಿಲ್ಲ. ಆದರೂ ನಾನು ಬರದ ಪಟ್ಟಿಗೆ ಸೇರಿಸುವಂತೆ ಹೇಳಿಲ್ಲ. ಹೇಳಿದರೂ ಅದರಿಂದ ಪ್ರಯೋಜನವಿಲ್ಲ. ಏಕೆಂದರೆ ಎಲ್ಲವೂ ಕೇಂದ್ರ ಸರಕಾರದ ಬರಪೀಡಿತ ಪ್ರದೇಶ ಘೋಷಣೆಗೆ ಇರುವ ಮಾರ್ಗಸೂಚಿ ಅನ್ವಯವೇ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಬರಪೀಡಿತ ಪ್ರದೇಶ ಘೋಷಣೆಗೆ ಕೇಂದ್ರ ಸರಕಾರ ದೇಶಾದ್ಯಂತ ಒಂದೇ ರೀತಿಯ ಮಾರ್ಗಸೂಚಿಯನ್ನು ರೂಪಿಸಿದೆ.
2016ರಲ್ಲಿ ರೂಪಿಸಿದ ಈ ಮಾರ್ಗಸೂಚಿಯ ಅನ್ವಯ, ಮುಂಗಾರು ಅಥವಾ ಹಿಂಗಾರಿನಲ್ಲಿ ವಾಡಿಕೆ ಗಿಂತ ಶೇ.60ರಷ್ಟು ಕಡಿಮೆ ಮಳೆಯಾಗಿರಬೇಕು. ಇದರೊಂದಿಗೆ ಸತತ 21 ದಿನ(ಮೂರು ವಾರ)ಗಳ ಕಾಲ ಶುಷ್ಕ ಹವಾಮಾನ ಅಂದರೆ ಮಳೆಯಾಗಿರಬಾರದು ಎನ್ನುವ ಪ್ರಮುಖ ಅಂಶಗಳಿವೆ. ಇದರೊಂದಿಗೆ ಕೃಷಿ ಸೂಚಕದಲ್ಲಿ ಒಟ್ಟು ಕೃಷಿ ಪ್ರದೇಶದಲ್ಲಿ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಅಥವಾ ಶೇ.33ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗಿರಬೇಕು.
ಮಣ್ಣಿನ ತೇವಾಂಶ ನಿಗದಿತ ಪ್ರಮಾಣಕ್ಕಿಂತ ತೀರಾ ಕಡಿಮೆಯಿರಬೇಕು. ಉಪಗ್ರಹಗಳ ಮೂಲಕ ತೆಗೆದ ಚಿತ್ರಗಳಲ್ಲಿ ಹಸಿರು ಪ್ರಮಾಣ ಮತ್ತು ಭೂಮಿಯ ತೇವಾಂಶ ತೀವ್ರವಾಗಿ ಕುಸಿದಿರುವುದು ವೈಜ್ಞಾನಿಕವಾಗಿ ದೃಢಪಡಬೇಕು. ಈ ಎಲ್ಲ ಪ್ರಕ್ರಿಯೆ ಬಳಿಕ ಕ್ಷೇತ್ರ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗುತ್ತದೆ. ಆಗ ಆಯಾ ತಾಲೂಕಿನ ಕನಿಷ್ಠ ಶೇ.10ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ, ಬೆಳೆ ಕಟಾವು ಪ್ರಯೋಗ ಸಮೀಕ್ಷೆ ನಡೆಸಿ ಬೆಳೆ ನಷ್ಟವು ಶೇ. 33ಕ್ಕಿಂತ ಹೆಚ್ಚಿದೆ ಎಂದು ಅಧಿಕೃತವಾಗಿ ದೃಢಪಡಿಸಬೇಕು.
ಈ ಎಲ್ಲ ಮಾನದಂಡಗಳು ಪೂರೈಸಿದ ಬಳಿಕವೇ ಆಯಾ ತಾಲೂಕುಗಳನ್ನು ತೀವ್ರ ಬರ ಅಥವಾ ಸಾಧಾರಣ ಬರ ಎಂದು ಘೋಷಿಸಿ ಕೇಂದ್ರಕ್ಕೆ ಶಿಫಾರಸು ಮಾಡಬಹುದಾಗಿದೆ. ಕೇಂದ್ರ ಸರಕಾರದ ಈ ಕಠಿಣ ಮಾರ್ಗಸೂಚಿಗಳೇ ಅನೇಕ ಬಾರಿ ಬರಪೀಡಿತ ತಾಲೂಕು ಎಂದು ಘೋಷಿಸಲು ಅಡ್ಡಲಾಗುತ್ತದೆ. ಅದರಲ್ಲಿಯೂ ಕರ್ನಾಟಕದ ಮಲೆನಾಡು, ಕರಾವಳಿ ಭಾಗದ ಪ್ರದೇಶದ ತಾಲೂಕುಗಳಲ್ಲಿ 21 ದಿನಗಳ ಮಳೆ ರಹಿತ ಮಾನದಂಡವೇ ಬಹುದೊಡ್ಡ ಸಮಸ್ಯೆಯಾಗುತ್ತದೆ. ಆ ಭಾಗದಲ್ಲಿ ಸರಾಸರಿ ಮಳೆಗಿಂತ ಶೇ.30ರಷ್ಟು ಮಳೆ ಕೊರತೆಯಾದರೂ ಅದು ದೊಡ್ಡ ಹೊಡೆತ ವೆಂದು ವಿಶ್ಲೇಷಿಸಲಾಗುತ್ತದೆ. ಆದರೆ ಶೇ.60ಕ್ಕಿಂತ ಕಡಿಮೆ ಎನ್ನುವ ಮಾನದಂಡ ಕರಾವಳಿ ಹಾಗೂ ಮಳೆನಾಡ ಭಾಗದ ಜಿಲ್ಲೆಗಳು ಪೂರೈಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದೆ.
ಇದೇ ಕಾರಣಕ್ಕೆ ಬರಪೀಡಿತ ಪ್ರದೇಶವನ್ನು ಘೋಷಿಸುವ ಮಾನದಂಡ ಸ್ಥಳೀಯ ವಾತಾವರಣದ ಮೇಲೆ ನಿರ್ಣಯವಾಗಬೇಕೇ ಹೊರತು, ದೇಶಾದ್ಯಂತ ಸಾರ್ವತ್ರಿಕವಾಗಿರಬಾರದು ಎನ್ನುವುದು ಆ ಭಾಗದ ಸ್ಥಳೀಯ ಶಾಸಕರ ಅಭಿಪ್ರಾಯವಾಗಿದೆ. ಕರ್ನಾಟಕದ ಕರಾವಳಿ, ಮಲೆನಾಡ ಭಾಗದ ತಾಲೂಕುಗಳಿಗೆ ಹೋಲಿಸಿದರೆ, ಉಳಿದ ಕಡೆ ಬರಪೀಡಿತ ಪ್ರದೇಶ ಘೋಷಣೆ ಇರುವ ಮಾನದಂಡ ವನ್ನು ಸುಲಭವಾಗಿ ಪೂರೈಸಬಹುದಾಗಿದೆ. ಆದರೆ ಮಲೆನಾಡು, ಕರಾವಳಿ ನಿರಂತರ 21 ದಿನಗಳ ಕಾಲ ಮಳೆಯಿಲ್ಲದೇ ಇರುವುದು ತೀರಾ ಕಷ್ಟಸಾಧ್ಯ.
ಹಾಗೆಂದ ಮಾತ್ರಕ್ಕೆ ಈ ತಾಲೂಕುಗಳು ಬರಪೀಡಿತ ಎಂದು ಘೋಷಿಸದೇ ಹೋದರೆ, ಮಳೆ ಕೊರತೆಯಿಂದ ಆಗುವ ಅನಾಹುತಕ್ಕೆ ಪರಿಹಾರ ಸಿಗುವುದಿಲ್ಲ ಎನ್ನುವುದು ಸ್ಥಳೀಯರ ಅಳಲಾಗಿದೆ. ಯಾವುದೇ ಒಂದು ರಾಜ್ಯಕ್ಕೆ ‘ಬರಗಾಲ’ ಎನ್ನುವುದು ಸಂಕಷ್ಟ ಪರಿಸ್ಥಿತಿ. ಈ ಸಂಕಷ್ಟ ಪರಿಸ್ಥಿತಿ ಕೇಂದ್ರ, ರಾಜ್ಯ ಸರಕಾರಗಳೆಷ್ಟೇ ಪರಿಹಾರ, ಅನುದಾನ, ಸಹಾಯಧನ ನೀಡಿದರೂ ಅದು ಸಮೃದ್ಧ ವರ್ಷ ರೈತರಿಗೆ ಸಿಗುವಷ್ಟು ಆರ್ಥಿಕ ಬಲ ನೀಡಲು ಸಾಧ್ಯವೇ ಇಲ್ಲ.
ಇನ್ನು ಸರಕಾರಗಳು ಅದೆಷ್ಟೇ ಅನುದಾನ ಬಿಡುಗಡೆ ಮಾಡಿದರೂ, ಬರಗಾಲ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವೇ ಇಲ್ಲ ಎನ್ನುವುದು ಸಹ ವಾಸ್ತವ. ಆದರೆ ಇಂತಹ ಪರಿಸ್ಥಿತಿಯಲ್ಲಿ, ಆಡಳಿತ ನಡೆಸುವ ಸರಕಾರಗಳು ನಡೆದುಕೊಳ್ಳುವ ರೀತಿ, ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳ ಜನ-ಜಾನುವಾರುಗಳ ರಕ್ಷಣೆ ಹಾಗೂ ಇಡೀ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಆ ಸರಕಾರ ಹಾಗೂ ಜನಪ್ರತಿ ನಿಧಿಯ ಕಾರ್ಯಕ್ಷಮತೆ ರೇಟಿಂಗ್ ತಿಳಿಯುತ್ತದೆ.
ಕೊನೆಯದಾಗಿ, ‘ಬರಪೀಡಿತ ತಾಲೂಕು’ ಎಂದು ಘೋಷಣೆಯಾಗಿದ್ದ ಬಹುದೊಡ್ಡ ಸಾಧನೆ ಎನ್ನು ವಂತೆ ಪಟಾಕಿ ಹೊಡೆಯುವುದಕ್ಕಿಂತ, ಬರದ ‘ಕಾವು’ ಪೂರ್ಣಪ್ರಮಾಣದಲ್ಲಿ ಜನರಿಗೆ ತಟ್ಟದಂತೆ ನೋಡಿಕೊಂಡ ಬಳಿಕ ಪಟಾಕಿ ಹೊಡೆದು, ಸಿಹಿ ಹಚ್ಚಿದ್ದರೆ ಆ ಸಂಭ್ರಮಾಚರಣೆಗೊಂದು ‘ಬೆಲೆ’ ಬರುತ್ತದೆ.