52 ಎಸೆತಗಳಲ್ಲಿ ದ್ವಿಶತಕ ಬಾರಿಸಿದ ವೈಭವ್ ಸೂರ್ಯವಂಶಿಗೆ ಯುವರಾಜ್ ಸಿಂಗ್ ವಿಶೇಷ ಸಂದೇಶ
ಯುಎಇ ವಿರುದ್ಧ 53 ಎಸೆತಗಳಲ್ಲಿ 204 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ ಆಟಕ್ಕೆ ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಭವ್ ವಿಶೇಷ ಪ್ರತಿಭೆಯಾಗಿದ್ದು, ಅವರ ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ ಎಂದು ಯುವರಾಜ್ ಸಾಮಾಜಿಕ ಜಾಲತಾಣದಲ್ಲಿ ಗುಣಗಾನ ಮಾಡಿದ್ದಾರೆ.
ವೈಭವ್ ಬ್ಯಾಟಿಂಗ್ಗೆ ಮನಸೋತ ಯುವರಾಜ್ ಸಿಂಗ್. -
ನವದೆಹಲಿ: ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryanshi) ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಮನಸೋತಿದ್ದಾರೆ. ನವೆಂಬರ್ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ (Rising Stars Asian Cup 2026) ಟೂರ್ನಿಯಲ್ಲಿ ಯುಎಇ ವಿರುದ್ಧ ಭಾರತ ಎ ತಂಡದ ಪರ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿದ 15 ವರ್ಷದ ವೈಭವ್, ಹಲವು ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಅದ್ಭುತ ಇನಿಂಗ್ಸ್ಗೆ ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೈಭವ್ ಅವರನ್ನು ವಿಶೇಷ ಪ್ರತಿಭೆ ಎಂದು ಕರೆದಿದ್ದಾರೆ.
ಯುಎಇ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ವೈಭವ್, ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಲಿಸ್ಟ್ ಎ ಕ್ರಿಕೆಟ್ನ ಅತ್ಯಂತ ವೇಗದ ಶತಕದ ದಾಖಲೆ ಬರೆದರು. ಬಳಿಕ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಇನಿಂಗ್ಸ್ನಲ್ಲಿ ಬರೋಬ್ಬರಿ 28 ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಆಧುನಿಕ ಕ್ರಿಕೆಟ್ನ ಅತ್ಯಂತ ಪ್ರತಿಭಾವಂತ ಯುವ ಆಟಗಾರರಲ್ಲಿ ತಾವೂ ಒಬ್ಬರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ʻವೈಭವ್ ಸೂರ್ಯವಂಶಿಯನ್ನು ಬೆಂಚ್ ಕಾಯಿಸಬೇಡಿʼ: ಗೌತಮ್ ಗಂಭೀರ್ಗೆ ಬಾಲ್ಯದ ಕೋಚ್ ಮನವಿ!
ವೈಭವ್ ಅವರ ಬ್ಯಾಟಿಂಗ್ ವೈಭವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ವಿಶೇಷ ಪ್ರತಿಭೆ ಮತ್ತು ಅದ್ಭುತ ಇನಿಂಗ್ಸ್! ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸಿರುವುದು ನಿಜಕ್ಕೂ ನಿರ್ಭೀತ ಬ್ಯಾಟಿಂಗ್ಗೆ ಸಾಕ್ಷಿ. ಕಠಿಣ ಪರಿಶ್ರಮ ಮುಂದುವರಿಸಿ ಮತ್ತು ಈ ಪ್ರಯಾಣವನ್ನು ಆನಂದಿಸಿ. ನಿಮ್ಮ ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ," ಎಂದು ಯುವರಾಜ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ ವೈಭವ್ ಸೂರ್ಯವಂಶಿ, ನ್ಯೂಜಿಲೆಂಡ್ನ ಚಾಡ್ ಬೋವ್ಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 2024ರಲ್ಲಿ ಫೋರ್ಡ್ ಟ್ರೋಫಿ ಟೂರ್ನಿಯಲ್ಲಿ ಒಟಾಗೊ ವಿರುದ್ಧ ಕ್ಯಾಂಟರ್ಬರಿ ತಂಡದ ಪರ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು. ಇದೀಗ ವೈಭವ್ ಕೇವಲ 52 ಎಸೆತಗಳಲ್ಲಿ ಈ ಸಾಧನೆ ಮಾಡುವ ಮೂಲಕ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
15ರ ವಯಸ್ಸಿನ ಎಡಗೈ ಬ್ಯಾಟರ್ ವೈಭವ್ ಅಂತಿಮವಾಗಿ 53 ಎಸೆತಗಳಲ್ಲಿ 204 ರನ್ ಗಳಿಸಿ ಔಟಾದರು. ಅವರ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ ಬರೋಬ್ಬರಿ 28 ಸಿಕ್ಸರ್ಗಳಿದ್ದವು. 384.90ರ ಅದ್ಭುತ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ ಅವರು ಯುಎಇ ಬೌಲರ್ಗಳಿಗೆ ದುಃಸ್ವಪ್ನವಾದರು. ಈ ಪಂದ್ಯದಲ್ಲಿ ಭಾರತ ಎ ತಂಡ ಯುಎಇ ನೀಡಿದ್ದ 250 ರನ್ಗಳ ಗುರಿಯನ್ನು ಕೇವಲ 14.2 ಓವರ್ಗಳಲ್ಲಿ ಬೆನ್ನಟ್ಟಿ ಏಳು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ಗೆ ಪ್ರವೇಶಿಸಿತು.
ಲಿಸ್ಟ್ ಎ ಕ್ರಿಕೆಟ್ನಲ್ಲಿ ವೇಗವಾಗಿ ದ್ವಿಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಹಾಗೂ ತಮಿಳುನಾಡಿನ ಬ್ಯಾಟರ್ ನಾರಾಯಣ್ ಜಗದೀಸನ್ ಕೂಡ ಇದ್ದಾರೆ. ಈ ಮೂವರು ತಲಾ 114 ಎಸೆತಗಳಲ್ಲಿ ದ್ವಿಶತಕದ ಗಡಿ ತಲುಪಿದ್ದರು.
ಇನ್ನು ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕದ ದಾಖಲೆಯನ್ನೂ ವೈಭವ್ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಗರ್ಕ್ 2023ರಲ್ಲಿ 29 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ವೈಭವ್ 28 ಎಸೆತಗಳಲ್ಲಿ ಶತಕ ಪೂರೈಸಿ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.