Hariram A Column: ಆರೆಸ್ಸೆಸ್ ವರ್ಸಸ್ ಕಾಂಗ್ರೆಸ್ ಸಂಘರ್ಷ ನಿಜವೇ ?
ದಲಿತರು ಮತ್ತು ಶೋಷಿತರ ವಿರೋಧಿ ಮನಸ್ಥಿತಿಯೇ ಕಾರಣ ಎಂದಾಗಿದ್ದರೆ, ಆ ಸಂಘಟನೆಯ ವಿರುದ್ಧ ವಾಗಿ ತಾವು ಹೇಳುವಂಥ ಸಮಾನತೆ, ಸೋದರತೆ, ಭ್ರಾತೃತ್ವ ಮತ್ತು ಏಕತೆಯನ್ನು ಸಾರುವ, ಬೆಳೆಸುವ ಹಾಗೂ ಈ ಸಮುದಾಯಗಳನ್ನು ಸಬಲೀಕರಿಸುವ ಬಲಿಷ್ಠ ಸಂಘಟನೆಯೊಂದನ್ನು ಕಟ್ಟಿ ಅದರ ಮುಖಾಂತರ ತನ್ನ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು.

-

ಎದುರೇಟು
ಹರಿರಾಮ್ ಎ.
ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ತಾನು ಸ್ಥಾಪನೆಗೊಂಡು 100 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿ ರಾಜ್ಯದ ಅನೇಕ ಭಾಗಗಳಲ್ಲಿ ಇತ್ತೀಚೆಗೆ ಪಥಸಂಚಲನವನ್ನು ಆಯೋಜಿಸಿತ್ತು. ಅದರ ಬೆನ್ನಲ್ಲೇ ರಾಜ್ಯದಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸಬೇಕು ಎಂಬ ಕೂಗೂ ಕೇಳಿಬಂತು. ‘ಆರೆಸ್ಸೆಸ್‌ನ ಚಟುವಟಿಕೆಗಳನ್ನು ನಿಯಂತ್ರಿಸಬೇಕು, ಸರಕಾರದ ಅನುಮತಿಯಿಲ್ಲದೆ ಸರಕಾರಿ ಸ್ಥಳಗಳನ್ನು ತನ್ನ ಚಟುವಟಿಕೆಗಳಿಗೆ ಅದು ಬಳಸುವುದನ್ನು ನಿಷೇಧಿಸಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರೂ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದರು.
ಅದರ ಬೆನ್ನಲ್ಲೇ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು, ಎಡಪಂಥೀಯ ವ್ಯಕ್ತಿಗಳು ಮತ್ತು ಸಂಘಟನೆಗಳು ಖರ್ಗೆಯವರ ಹೇಳಿಕೆಯನ್ನು ಬೆಂಬಲಿಸಿ, ‘ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ವಿರೋಧಿಯಾರುವ ಆರೆಸ್ಸೆಸ್‌ಗೆ, ಸಂವಿಧಾನ ಮತ್ತು ಶೋಷಿತ ಸಮುದಾಯಗಳ ಮೇಲೆ ಯಾವುದೇ ಬದ್ಧತೆ ಮತ್ತು ಅನುಕಂಪವಿಲ್ಲ; ಕೇವಲ ಮೇಲ್ಜಾತಿಗಳ ಹಿತಾಸಕ್ತಿಯನ್ನು ಕಾಪಾಡಲಿಕ್ಕೆ ಇರುವಂಥ ಸಂಘಟನೆಯಾಗಿರುವುದರಿಂದ ಆರೆಸ್ಸೆಸ್ ಅನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
ಒಟ್ಟಾರೆಯಾಗಿ ಇವರೆಲ್ಲ, ಆರೆಸ್ಸೆಸ್ ಅನ್ನು ದಲಿತ ವಿರೋಧಿ ಸಂಘಟನೆ ಎಂಬಂತೆ ಬಿಂಬಿಸುತ್ತ, ತಾವು ದಲಿತರ ಪರ ಎಂಬುದನ್ನು ಸಾಬೀತುಪಡಿಸಲು ಹೊರಟಿರುವುದು ಎದ್ದು ಕಾಣುತ್ತದೆ. ಹಾಗೆಯೇ, ಇವರು ಹೇಳುವುದು ಕೂಡ ಸತ್ಯವೆನ್ನುವ ರೀತಿಯಲ್ಲಿ ಆರೆಸ್ಸೆಸ್ ತನ್ನ ಅನೇಕ ಚಟುವಟಿಕೆಗಳು ಮತ್ತು ತೀರ್ಮಾನಗಳ ಮುಖಾಂತರ ಸಾಕ್ಷೀಕರಿಸಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: RSS 100th Anniversary: RSS 100ನೇ ವಾರ್ಷಿಕೋತ್ಸವ ಸ್ಮರಣಾರ್ಥ ವಿಶೇಷ ನಾಣ್ಯ, ಅಂಚೆ ಚೀಟಿ ರಿಲೀಸ್
ಯಾವುದೇ ಸಂಘಟನೆಯನ್ನು ನಿಷೇಧಿಸುವ ಮುಖಾಂತರ ಅದು ಪ್ರತಿಪಾದಿಸುವ ಸಿದ್ಧಾಂತ ಮತ್ತು ಆಲೋಚನೆಗಳನ್ನು ನಾವು ಮುಗಿಸಲು ಸಾಧ್ಯವಾಗದು. ಒಂದು ಸಂಘಟನೆ/ಸಿದ್ಧಾಂತವನ್ನು ಕೊನೆಗಾಣಿಸಲು ಅದಕ್ಕೆ ತದ್ವಿರುದ್ಧವಾದ ಸಂಘಟನೆ/ಸಿದ್ಧಾಂತದಿಂದ ಮಾತ್ರ ಸಾಧ್ಯ. ಆರೆಸ್ಸೆಸ್ ಮೇಲೆ ಕಾಂಗ್ರೆಸ್‌ಗಿರುವ ಸಿಟ್ಟಿಗೆ, ಆರೆಸ್ಸೆಸ್‌ನ ಸಿದ್ಧಾಂತವೇ ಕಾರಣ,
ದಲಿತರು ಮತ್ತು ಶೋಷಿತರ ವಿರೋಧಿ ಮನಸ್ಥಿತಿಯೇ ಕಾರಣ ಎಂದಾಗಿದ್ದರೆ, ಆ ಸಂಘಟನೆಯ ವಿರುದ್ಧವಾಗಿ ತಾವು ಹೇಳುವಂಥ ಸಮಾನತೆ, ಸೋದರತೆ, ಭ್ರಾತೃತ್ವ ಮತ್ತು ಏಕತೆಯನ್ನು ಸಾರುವ, ಬೆಳೆಸುವ ಹಾಗೂ ಈ ಸಮುದಾಯಗಳನ್ನು ಸಬಲೀಕರಿಸುವ ಬಲಿಷ್ಠ ಸಂಘಟನೆಯೊಂದನ್ನು ಕಟ್ಟಿ ಅದರ ಮುಖಾಂತರ ತನ್ನ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು.
ಆದರೆ, 1885ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಆರೆಸ್ಸೆಸ್‌ಗಿಂತಲೂ ಹಳೆಯದಾಗಿದ್ದರೂ (ಸ್ಥಾಪನೆ: 1925), ಸಾಕಷ್ಟು ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿದ್ದರೂ ಆ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಲಿಲ್ಲ. ಬದಲಿಗೆ, ತನ್ನದು ಕೂಡ ಆರೆಸ್ಸೆಸ್‌ನ ಸಿದ್ಧಾಂತ ಮತ್ತು ಮನಸ್ಥಿತಿಯೇ ಎಂಬಂತೆ ಕಾಂಗ್ರೆಸ್ ನಡೆದುಕೊಂಡು ಬಂದಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿನ ಅನೇಕ ಘಟನೆಗಳು, ಕಾಂಗ್ರೆಸ್ ಮತ್ತು ಅದರ ನಾಯಕತ್ವದ ತೀರ್ಮಾನಗಳು/ನಡವಳಿಕೆಗಳು ಇದನ್ನು ಸಾಬೀತುಪಡಿಸುತ್ತವೆ.
1895ರಲ್ಲಿ, ಸಾಮಾಜಿಕ ಸಮಸ್ಯೆಗಳ ಕುರಿತು, ಅದರಲ್ಲೂ ಅಸ್ಪೃಶ್ಯತೆಯ ಕುರಿತು ಚರ್ಚಿಸಿ ಅದರ ನಿವಾರಣೆಗಾಗಿ ತೀರ್ಮಾನಿಸಲು ಒಂದು ಸಭೆಯನ್ನು ಕರೆಯಲು ಕಾಂಗ್ರೆಸ್ ತೀರ್ಮಾನಿಸಿದಾಗ, ಅದೇ ಪಕ್ಷದ ಬಾಲಗಂಗಾಧರ ತಿಲಕರ ಅನುಯಾಯಿಗಳು, ‘ಕಾಂಗ್ರೆಸ್ ಈ ಕೆಲಸಕ್ಕೆ ಮುಂದಾದರೆ, ಆ ಕಾರ್ಯಕ್ರಮಕ್ಕೆಂದು ನಿರ್ಮಿಸುವ ಪೆಂಡಾಲನ್ನು ಸುಟ್ಟುಹಾಕುತ್ತೇವೆ’ ಎನ್ನುತ್ತಾರೆ.
1902ರಲ್ಲಿ ಶಾಹು ಮಹಾರಾಜರು ಹಿಂದುಳಿದ ವರ್ಗಗಳಿಗೆ ಶೇ.50ರ ಮೀಸಲಾತಿ ನೀಡಿದಾಗ ಅದನ್ನು ವಿರೋಧಿಸಿದವರು ಅಂದಿನ ಕಾಂಗ್ರೆಸ್‌ನ ಅಧ್ಯಕ್ಷ ತಿಲಕರು. ಜಸ್ಟಿಸ್ ಮಿಲ್ಲರ್ ಕಮಿಷನ್ 1918ರಲ್ಲಿ ರಚನೆಯಾಗಿ, ನಾಲ್ವಡಿ ಕೃಷ್ಣರಾಜರ ಮುಖಾಂತರ 1921ರಲ್ಲಿ ಜಾರಿಗೆ ಬರುತ್ತದೆ.
ಆಗಿನ್ನೂ ಆರೆಸ್ಸೆಸ್ ಹುಟ್ಟೇ ಇರಲಿಲ್ಲ. ಆದರೆ ಈ ಕಮಿಷನ್ ಅನ್ನು ವಿರೋಧಿಸಿದ್ದು ಸರ್ ಎಂ. ವಿಶ್ವೇಶ್ವರಯ್ಯನವರು ಹಾಗೂ ಕಾಂಗ್ರೆಸ್ಸಿಗರು. ಮುಖ್ಯವಾಗಿ ಶೇ.75ರ ಮೀಸಲಾತಿಯನ್ನು ವಿರೋಧಿಸಿದ್ದೂ ಕಾಂಗ್ರೆಸ್ಸಿಗರೇ. 1923ರ ಮೇ ತಿಂಗಳಲ್ಲಿ, ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯು, ಅಸ್ಪೃಶ್ಯರ ಸಮಸ್ಯೆಗಳನ್ನಾಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ಮೂಲ ಭೂತವಾದಿ ‘ಹಿಂದೂ ಮಹಾಸಭಾ’ಗೆ ನೀಡುತ್ತದೆ.
ಜಾತೀಯತೆ ಹೆಚ್ಚಿರುವ ಜಾಗದಲ್ಲಿ ಕಾಂಗ್ರೆಸ್‌ನ ನಿಧಿಯನ್ನು ಬಳಸಿ ಅಸ್ಪೃಶ್ಯರಿಗೆ ಪ್ರತ್ಯೇಕ ಶಾಲೆಗ ಳನ್ನು-ಬಾವಿಗಳನ್ನು ನಿರ್ಮಿಸಬೇಕು ಎನ್ನುವ ಮೂಲಕ ಸಮಿತಿಯು, ಜಾತೀಯತೆ-ಅಸ್ಪೃಶ್ಯತೆ ಯನ್ನು ಪ್ರೋತ್ಸಾಹಿಸುವ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ; ಕಾಂಗ್ರೆಸ್ಸನ್ನು ಸೇರುವವರಿಗೆ ಖಾದಿ ಧಾರಣೆಯನ್ನು ಕಡ್ಡಾಯಗೊಳಿಸಿದಂತೆ, ಅಸ್ಪೃಶ್ಯತೆಯ ನಿರಾಕರಣೆಯನ್ನೇಕೆ ಕಡ್ಡಾಯಗೊಳಿಸ ಲಾಗಲಿಲ್ಲ? ಅಂಬೇಡ್ಕರರು ಪ್ರತಿಪಾದಿಸಿದ ಪ್ರತ್ಯೇಕ ಚುನಾಯಕಗಳನ್ನು ಹಾಗೂ ಪ್ರಾರಂಭದಲ್ಲಿ ದಲಿತರಿಗೆ ಮತದಾನದ ಹಕ್ಕನ್ನು ನಿರಾಕರಿಸಿದ್ದು ಇದೇ ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧಿ.
ಅಂಬೇಡ್ಕರರನ್ನು ‘ಬ್ರಿಟಿಷರ ಏಜೆಂಟ್’, ‘ದೇಶದ್ರೋಹಿ’ ಎಂದು ಕರೆದು, ಸಂವಿಧಾನ ಸಮಿತಿಗೆ ಹೋಗದಂತೆ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ನಂತರದಲ್ಲಿ ಅವರು ಬಂಗಾಳದ ಚಾಂಡಾಳರು ಮತ್ತು ಮುಸಲ್ಮಾನರ ಬೆಂಬಲದಿಂದ ಜೈಸೂರ್ ಮತ್ತು ಕುಲ್ನಾ ಕ್ಷೇತ್ರದಿಂದ ಸಂವಿಧಾನ ಸಭೆಗೆ ಆಯ್ಕೆಯಾದಾಗ, ಅವರು ಆಯ್ಕೆಯಾಗಿದ್ದ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮೇತರರಿದ್ದರೂ ಅದನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟು, ಅಂಬೇಡ್ಕರ್‌ರ ಸದಸ್ಯತ್ವ ರದ್ದಾಗುವಂತೆ ಮಾಡಿದ್ದೂ, 1952 ಮತ್ತು 1954ರ ಲೋಕಸಭಾ ಚುನಾವಣೆಗಳಲ್ಲಿ ಅಂಬೇಡ್ಕರ ರನ್ನು ಸೋಲಿಸಿದ್ದೂ ಇದೇ ಕಾಂಗ್ರೆಸ್.
‘ಬುದ್ಧ ಆಂಡ್ ಹಿಸ್ ಧಮ್ಮ’ ಎಂಬ ಅಂಬೇಡ್ಕರರ ಅಂತಿಮ ಕೃತಿಯನ್ನು ಪ್ರಕಟಿಸಲು ಸರಕಾರದ ನೆರವನ್ನು ಕೋರಿದಾಗ, ಇದೇ ಕಾಂಗ್ರೆಸ್ ವತಿಯಿಂದ ಪ್ರಧಾನಿಯಾಗಿದ್ದ ನೆಹರುರವರು ಅದನ್ನು ತಿರಸ್ಕರಿಸಿದ್ದರು. ಸ್ವತಂತ್ರ ಭಾರತದಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಮತ್ತು ಇತರೆ ಹಕ್ಕುಗಳನ್ನು ನೀಡುವ ‘ಹಿಂದೂ ಕೋಡ್ ಬಿಲ್’ ಅನ್ನು ವಿರೋಧಿಸಿದ್ದೂ, 1956ರ ಡಿಸೆಂಬರ್ 6ರಂದು ಅಂಬೇಡ್ಕರ್ ತೀರಿಕೊಂಡಾಗ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಬಾಂಬೆಗೆ ತರಲು ವಿಮಾನದ ವ್ಯವಸ್ಥೆ ಮಾಡಲು ತಿರಸ್ಕರಿಸಿದ್ದೂ, ಅವರಿಗೆ ‘ಭಾರತ ರತ್ನ’ವನ್ನು ನೀಡದೆ ಅವಮಾನಿಸಿದ್ದೂ ಕಾಂಗ್ರೆಸ್ಸೇ.
ಅನುಚ್ಛೇದ 340ರಂತೆ ಹಿಂದುಳಿದ ಜಾತಿಗಳ ಮೀಸಲಾತಿಗಾಗಿ ಅಂಬೇಡ್ಕರರ ಆಗ್ರಹದ ಮೇರೆಗೆ 1953ರಲ್ಲಿ ಕಾಕಾ ಕಾಲೇಲ್ಕರ್ ಆಯೋಗವನ್ನು ರಚಿಸಿದ ಕಾಂಗ್ರೆಸ್, 1957ರಲ್ಲಿ ಬಂದ ಅದರ ವರದಿಯನ್ನು ತಿರಸ್ಕರಿಸಿ ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡಿತು.
1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರು ‘ಮಂಡಲ್ ಆಯೋ ಗ’ವನ್ನು ರಚಿಸಿದರು. ಆದರೆ 1957ರಿಂದ 1977ರ ತನಕ ಅಧಿಕಾರದಲ್ಲಿದ್ದ ಕಾಂಗ್ರೆಸ್, ಹಿಂದುಳಿದ ಜಾತಿಗಳ ಮೀಸಲಾತಿಯ ಬಗ್ಗೆ ಕಾಳಜಿಯನ್ನೇ ತೋರಲಿಲ್ಲ. 1981ರಿಂದ 1989ರವರೆಗಿನ ಇಂದಿರಾ ಮತ್ತು ರಾಜೀವ್ ಗಾಂಧಿಯವರ ಆಡಳಿತಾವಧಿಯಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿ ಮೂಲೆ ಗುಂಪಾಗಿತ್ತು.
ಇದನ್ನು ಮತ್ತೆ ಬೆಳಕಿಗೆ ತರುವ ಯತ್ನವಾಗಿದ್ದು ಕಾನ್ಷಿರಾಂರಿಂದ. ಹಾಗಾಗಿ ವಿ.ಪಿ.ಸಿಂಗ್ ಅಧಿಕಾರಕ್ಕೆ ಬರಲು ಕೂಡ, ಮಂಡಲ್ ವರದಿ ಜಾರಿಮಾಡುವ ಭರವಸೆ ನೀಡಿದ್ದೇ ಕಾರಣವಾಗಿತ್ತು. 1991ರಲ್ಲಿ ಪಿ.ವಿ.ನರಸಿಂಹರಾವ್ ಪ್ರಧಾನಿಯಾದಾಗ, ಮಂಡಲ್ ವರದಿಯನ್ನು ಅಪ್ರಯೋಜಕ ವಾಗಿಸಲು, ಹೊಸ ಆರ್ಥಿಕ ನೀತಿಯ ಹೆಸರಲ್ಲಿ ‘ಉದಾರೀಕರಣ, ಖಾಸಗೀಕರಣ, ಜಾಗತೀಕರಣ’ ನೀತಿಗೆ ಸಹಿಮಾಡಿ, ಸರಕಾರಿ ಸ್ವಾಮ್ಯವನ್ನು ಖಾಸಗೀಕರಣ ಮಾಡಲು ಮುಂದಾದರು.
ತನ್ಮೂಲಕ, ಹಿಂದುಳಿದ ಜಾತಿಗಳ ಮೀಸಲಾತಿಗೆ ಕೊಡಲಿಪೆಟ್ಟು ಕೊಟ್ಟಿದ್ದೂ ಇದೇ ಕಾಂಗ್ರೆಸ್. ಇನ್ನು ಕರ್ನಾಟಕದಲ್ಲಿ ದಲಿತರಿಗಾಗಿ ಮೀಸಲಿಟ್ಟಿರುವ ಸಾವಿರಾರು ಕೋಟಿಯಷ್ಟು ಎಸ್.ಸಿ.ಎಸ್.ಪಿ /ಟಿ.ಎಸ್.ಪಿ. ಹಣವನ್ನು ‘ಗ್ಯಾರಂಟಿ’ ಮತ್ತಿತರ ಯೋಜನೆಗಳಿಗೆ ಡೈವರ್ಟ್ ಮಾಡಿದ್ದೂ ಇದೇ ಕಾಂಗ್ರೆಸ್.
ಇಷ್ಟು ಮಾತ್ರವಲ್ಲದೆ, ದಲಿತರ ಅಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟ ನಿಗಮಗಳಿಗೆ ಧನಸಹಾಯ ಮಾಡದೆ, ಒಂದು ಕಾರ್ಯಕ್ರಮವನ್ನು ಜಾರಿಮಾಡದೆ ದಲಿತರ ಬದುಕಿಗೆ ಕೊಳ್ಳಿಯಿಟ್ಟಿದ್ದು, ದಲಿತರ ಭೂಮಿಯನ್ನು ಉಳಿಸಲು ನೆರವಾಗಬೇಕಿದ್ದ ಪಿಟಿಸಿಎಲ್ ಕಾಯಿದೆಯನ್ನು ದುರ್ಬಲ ಗೊಳಿಸಿದ್ದು, ಸೂಕ್ತ ಸೌಲಭ್ಯಗಳಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿಗಳು ಪರದಾಡುತ್ತಿದ್ದರೂ ಗಮನಕ್ಕೆ ಬಂದಿಲ್ಲವೆಂಬಂತೆ ನಾಟಕವಾಡುತ್ತಿರುವುದು ಇದೇ ಕಾಂಗ್ರೆಸ್.
ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಆದರೂ, ತಾನು ಮಾತ್ರ ದಲಿತರು-ಜಾತ್ಯತೀತರು-ಶೋಷಿತರ ಧ್ವನಿ, ಆರೆಸ್ಸೆಸ್ ಮಾತ್ರ ಈ ವರ್ಗದವರ ವಿರೋಧಿ ಎಂದು ಹೇಳಿ ಕೊಳ್ಳುತ್ತದೆ ಕಾಂಗ್ರೆಸ್. ಇನ್ನೊಬ್ಬರನ್ನು ದೂಷಿಸುವ ಮೊದಲು ನಾವೆಷ್ಟು ಸರಿಯಿದ್ದೇವೆ ಎಂಬು ದನ್ನೂ ನೋಡಿಕೊಳ್ಳುವುದು ಮುಖ್ಯ.
ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೆಲವೇ ಕಾಂಗ್ರೆಸ್ಸಿಗರನ್ನು ಬಿಟ್ಟರೆ, ಬಹುತೇಕ ನಾಯಕರಾಗಲೀ, ಶಾಸಕ-ಸಚಿವರಾಗಲೀ ಆರೆಸ್ಸೆಸ್ ಅನ್ನು ಟೀಕಿಸುತ್ತಿಲ್ಲ ಅಥವಾ ಅದರ ವಿರುದ್ಧ ಹೇಳಿಕೆ ನೀಡು ತ್ತಿಲ್ಲ. ಕಾಂಗ್ರೆಸ್‌ಗೆ ಆರೆಸ್ಸೆಸ್ ಅನ್ನು ಟೀಕಿಸುವ ಯಾವ ನೈತಿಕತೆಯೂ ಇಲ್ಲ, ಏಕೆಂದರೆ ಬಹುಪಾಲು ಕಾಂಗ್ರೆಸ್ಸಿಗರು ಆರೆಸ್ಸೆಸ್‌ನ ಮನಸ್ಥಿತಿ ಮತ್ತು ಉದ್ದೇಶವಿರುವಂಥವರೇ,
ಒಳಗೊಳಗೇ ಆರೆಸ್ಸೆಸ್ ಪರವಾಗಿ ನಿಲ್ಲುವಂಥವರೇ ಎಂಬುದು ಜಗಜ್ಜಾಹೀರು. ಈಗ ಸಾಮಾಜಿಕ ಜಾಲತಾಣಗಳಲ್ಲೂ ಆರೆಸ್ಸೆಸ್ ಅನ್ನು ಟೀಕಿಸುತ್ತಾ, ಅದನ್ನು ನಿಷೇಧಿಸಬೇಕು ಎನ್ನುತ್ತಿರುವ ಬಹುತೇಕರು ದಲಿತರೇ; ಆರೆಸ್ಸೆಸ್ ಮತ್ತು ದಲಿತರ ನಡುವೆ ಬೆಂಕಿ ಹಚ್ಚಿ ಅದರ ಕಾವಿನಲ್ಲಿ ಮೈಕಾಯಿಸಿಕೊಳ್ಳುವ ಸಾಹಸಕ್ಕೆ ಕೈಹಾಕುತ್ತಿದೆ ಕಾಂಗ್ರೆಸ್.
ದಲಿತರು ಆರೆಸ್ಸೆಸ್‌ನಲ್ಲಿ ಇಲ್ಲ ಹಾಗೂ ಅದು ಪ್ರತಿಪಾದಿಸುವ ಯಾವ ಸಿದ್ಧಾಂತವನ್ನೂ ಒಪ್ಪುವು ದಿಲ್ಲ; ತಾತ್ವಿಕವಾಗಿಯೂ, ಸಂಘಟನಾತ್ಮಕವಾಗಿಯೂ ದಲಿತರು ಆರೆಸ್ಸೆಸ್ ಜತೆಗೆ ಹೋಗಲು ಸಾಧ್ಯವೇ ಇಲ್ಲ. ಹಾಗಾಗಿ ದಲಿತರು ತಮಗೆ ಬೇಡದಿರುವ ವಿಷಯಗಳಲ್ಲಿ ತಲೆ ಹಾಕಿ, ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ಆಗಿ, ಯಾವುದೋ ಪಕ್ಷದ ಮೋಸದಾಟಕ್ಕೆ ಬಲಿಯಾಗುವ ಬದಲು, ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಗಮನ ಕೊಡುವುದು ಒಳಿತು.
ಆರೆಸ್ಸೆಸ್ ಮೇಲಿನ ಸಂಘರ್ಷವು ಕಾಂಗ್ರೆಸ್ ಸೃಷ್ಟಿಸಿರುವಂಥ ‘ರಾಜಕೀಯ ನಾಟಕ’ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಇಂಥ ನಾಟಕಗಳ ಮೂಲಕ ದಲಿತರನ್ನು ಸೆಳೆಯುವ ಬದಲಿಗೆ, ಅವರ ಬದುಕನ್ನು ಉತ್ತಮಗೊಳಿಸುವಂಥ ನೀತಿ ಮತ್ತು ಕಾನೂನುಗಳನ್ನು ರೂಪಿಸಿ, ಜತೆಗೆ ಅಧಿಕಾರದಲ್ಲಿ ದಲಿತರಿಗೆ ಸಿಗಬೇಕಿರುವ ಪಾಲನ್ನು ನೀಡಿ, ಅವರ ಬದುಕುಗಳನ್ನು ಅವರೇ ಸುಧಾರಿಸಿಕೊಳ್ಳುವಂತೆ ಮಾಡಲಿ. ಇದು ನಿಜವಾದ ಪರಿವರ್ತನೆ ಮತ್ತು ಕಾಳಜಿ ಎನಿಸಿಕೊಳ್ಳುತ್ತದೆ.
(ಲೇಖಕರು ವಕೀಲರು)