ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prakash Hegde Column: ಜಗತ್ತು ಡಾಲರ್‌ʼನಿಂದ ದೂರ ಸಾಗುತ್ತಿದೆಯೇ ?

ವಿಶ್ವ ಆರ್ಥಿಕತೆಯ ಕೇಂದ್ರಬಿಂದುವಾಗಿ ಅಮೆರಿಕನ್ ಡಾಲರ್ ಕಳೆದ ಏಳು ದಶಕಗಳ ಕಾಲ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಎರಡನೇ ವಿಶ್ವಯುದ್ಧದ ನಂತರ ಅಂತರರಾಷ್ಟ್ರೀಯ ವ್ಯಾಪಾರ, ವಿದೇಶಿ ವಿನಿಮಯ ರಿಸರ್ವ್ ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯ ಬಹುತೇಕ ಚಟುವಟಿಕೆಗಳು ಡಾಲರನ್ನು ಕೇಂದ್ರವಾಗಿಸಿ ಅದರ ಸುತ್ತಲೂ ತನ್ನ ಪರಿಧಿಯ ಪ್ರಭಾವದ ಬಲೆಯನ್ನು ಹೆಣೆದು ಕೊಂಡಿದ್ದವು.

Prakash Hegde Column: ಜಗತ್ತು ಡಾಲರ್‌ʼನಿಂದ ದೂರ ಸಾಗುತ್ತಿದೆಯೇ ?

-

Profile
Ashok Nayak Jun 5, 2026 9:48 AM

ಹಣಪ್ರಪಂಚ

ಪ್ರಕಾಶ ಹೆಗಡೆ

ಭಾರತದ ವ್ಯಾಪಾರಿ, ಜರ್ಮನಿಯಲ್ಲಿರುವ ತನ್ನ ವ್ಯಾಪಾರ ಪೂರೈಕೆದಾರನಿಗೆ ಲಕ್ಷ ಯೂರೋ ಕಳುಹಿಸುವ ಹಿಂದೆ ವಿದೇಶಿ ವಿನಿಮಯ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆಯೆಂದು ಅರಿತು ಕೊಂಡರೆ ಡಿಡಾಲರೀಕರಣದ ಅಡಿಪಾಯ ಅರ್ಥವಾಗುತ್ತದೆ. ಈ ಉದಾಹರಿತ ವ್ಯವಹಾರದಲ್ಲಿ, ಸ್ವಿ- ವಿದೇಶಿ ಹಣಕಾಸು ವ್ಯವಸ್ಥೆ ಯಲ್ಲಿ ರೂಪಾಯಿ ನೇರವಾಗಿ ಯೂರೋ ಆಗುವುದಿಲ್ಲ.

ಇದರ ಹಿಂದೆ ಬ್ಯಾಂಕುಗಳು, ವಿದೇಶಿ ವಿನಿಮಯ ಮಾರುಕಟ್ಟೆ ಮತ್ತು ಕೆಲವೊಮ್ಮೆ ಮಧ್ಯವರ್ತಿ ಬ್ಯಾಂಕುಗಳು ಕೆಲಸ ಮಾಡುತ್ತವೆ. ಮೊದಲಿಗೆ ರೂಪಾಯಿ ಡಾಲರ್ ಆಗಿ, ನಂತರ ಡಾಲರ್ ಯೂರೋವಾಗಿ ಪರಿವರ್ತಿತವಾಗುತ್ತದೆ. ಇಲ್ಲಿ ಅಮೆರಿಕದ ಬ್ಯಾಂಕುಗಳು ಮತ್ತು ಡಾಲರ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತವೆ. ಅಂದರೆ ಭಾರತೀಯ ಬ್ಯಾಂಕ್ ಆಮದುದಾರನ ಖಾತೆಯಲ್ಲಿರುವ ರೂಪಾಯಿಯ ಮೊಬಲಗನ್ನು ಉಪಯೋಗಿಸಿಕೊಂಡು ಅಮೇರಿಕದ ಡಾಲರ್ ಖರೀದಿಸುತ್ತದೆ. ನಂತರ ಈ ಡಾಲರನ್ನು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಯೂರೋ ಖರೀದಿಸಲು ಉಪಯೋಗಿಸಲಾಗುತ್ತದೆ.

ಖರೀದಿಸಿದ ಯೂರೋವನ್ನು ಭಾರತದ ಬ್ಯಾಂಕ್ ಜರ್ಮನಿಯ ರಫ್ತುದಾರನ ಖಾತೆಯಿರುವ ಬ್ಯಾಂಕ್‌ಗೆ ನೀಡುತ್ತದೆ. ಅಂತೆಯೇ ಜರ್ಮನಿಯ ಪೂರೈಕೆದಾರನು ಲಕ್ಷ ಯೂರೋ ತನ್ನ ಬ್ಯಾಂಕ್ ಮೂಲಕ ಪಡೆಯುತ್ತಾನೆ. ಇದು ಅಮೇರಿಕ ತನ್ನ ವ್ಯಾವಹಾರಿಕ ಪ್ರಾಬಲ್ಯದಿಂದ ಡಾಲರ್‌ನ ಮಹತ್ವದಿಂದ ಜಾಗತಿಕ ವ್ಯವಹಾರಗಳ ಮೇಲೆ ಪ್ರಭುತ್ವ ಸಾಧಿಸಿರುವ ವ್ಯವಸ್ಥೆ.

ವಿಶ್ವ ಆರ್ಥಿಕತೆಯ ಕೇಂದ್ರಬಿಂದುವಾಗಿ ಅಮೆರಿಕನ್ ಡಾಲರ್ ಕಳೆದ ಏಳು ದಶಕಗಳ ಕಾಲ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಎರಡನೇ ವಿಶ್ವಯುದ್ಧದ ನಂತರ ಅಂತರರಾಷ್ಟ್ರೀಯ ವ್ಯಾಪಾರ, ವಿದೇಶಿ ವಿನಿಮಯ ರಿಸರ್ವ್ ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯ ಬಹುತೇಕ ಚಟುವಟಿಕೆಗಳು ಡಾಲರನ್ನು ಕೇಂದ್ರವಾಗಿಸಿ ಅದರ ಸುತ್ತಲೂ ತನ್ನ ಪರಿಧಿಯ ಪ್ರಭಾವದ ಬಲೆಯನ್ನು ಹೆಣೆದು ಕೊಂಡಿದ್ದವು. ಈಗೊಂದು ದಶಕದಿಂದ ಅಮೇರಿಕದ ಆರ್ಥಿಕ ನಿಬಂಧನೆಗಳನ್ನು ವಿದೇಶಾಂಗ ನೀತಿಯ ಸಾಧನವಾಗಿ ಬಳಸುತ್ತಿರುವುದು ಹಲವು ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಇದರ ಜೊತೆಗೆ ಡಾಲರ್ ಮೌಲ್ಯದ ಕಡಿವಾಣವಿಲ್ಲದ ಏರಿಳಿತವು ಅಭಿವೃದ್ಧಿಶೀಲ ದೇಶಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ.

ಇದನ್ನೂ ಓದಿ: Prakash Hegde Column: ಇರಾನ್‌ ಯುದ್ಧ ಟ್ರಂಪ್‌ ಪಾಲಿನ ಪವಿತ್ರ ಯುದ್ಧವೇ ?

ಡಾಲರ್ ಮೇಲಿನ ಅವಲಂಬನೆಯನ್ನು ಕಡಿತಗೊ ಳಿಸುವ ಹಾಗೂ ಸ್ಥಳೀಯ ಹಣಕಾಸನ್ನು ಸ್ಥಿರಗೊಳಿಸಲು ಬಹುಧ್ರುವೀಯ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸುವ ತುಡಿತವೂ ಸೇರಿ ಡಾಲರಿನ ಪ್ರಾಬಲ್ಯವನ್ನು ಹತ್ತಿಕ್ಕುವ ಪರಿಸರದ ಅವಶ್ಯಕತೆ ರೂಪುಗೊಳ್ಳುತ್ತಿದೆ. ಈ ಪರಿಸರವೇ ಡಿಡಾಲರೀಕರಣ.

ಡಿಡಾಲರೀಕರಣವನ್ನು ಸಂಕ್ಷಿಪ್ತವಾಗಿ ಅಥವಾ ಸಾರಾಂಶವಾಗಿ ತಿಳಿಸಬೇಕೆಂದರೆ - ಜಗತ್ತು ಡಾಲರ್ ಕೇಂದ್ರಿತ ಆರ್ಥಿಕ ವ್ಯವಸ್ಥೆಯಿಂದ ನಿಧಾನವಾಗಿ ಬಹುಕರೆನ್ಸಿ ಆಧಾರಿತ ಹೊಸ ಜಾಗತಿಕ ಹಣಕಾಸು ವ್ಯವಸ್ಥೆಯತ್ತ ಸಾಗುತ್ತಿರುವ ಪ್ರಕ್ರಿಯೆ. ಪಳಯುಳಿಕೆ ಇಂಧನ ಮಾರುಕಟ್ಟೆಯಲ್ಲಿಯೂ ಈ ಕರೆನ್ಸಿ ಪೆಟ್ರೋಡಾಲರ್ ಎಂಬ ಹೆಸರಿನಲ್ಲಿ ತನ್ನ ಕಬಂಧ ಬಾಹುವಿನ ಹಿಡಿತ ಸಾಧಿಸಿದೆ.

1970ರ ದಶಕದ ಆರಂಭದಲ್ಲಿ ಅಮೆರಿಕವು ಚಿನ್ನದ ಮಾನದಂಡವನ್ನು ತ್ಯಜಿಸಿತು. ಇದರಿಂದ ಡಾಲರ್‌ನ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಯಿತು. ಜಾಗತಿಕ ಮಟ್ಟದಲ್ಲಿ ಡಾಲರ್‌ಗೆ ಬೇಡಿಕೆಯನ್ನು ಉಳಿಸಿಕೊಳ್ಳಲು ಅಮೇರಿಕಾ, ಸೌದಿ ಅರೇಬಿಯಾ ಜೊತೆ ತಂತ್ರಾತ್ಮಕ ಪಾಲು ದಾರಿಕೆಯನ್ನು ರೂಪಿಸಿತು.

ಈ ಒಪ್ಪಂದದ ಪ್ರಕಾರ ಸೌದಿ ತೈಲವನ್ನು ಅಮೆರಿಕನ್ ಡಾಲರ್‌ನಲ್ಲಿ ಬೆಲೆ ನಿಗದಿ ಪಡಿಸಿ ವ್ಯಾಪಾರ ಮಾಡಬೇಕಾಗಿತ್ತು. ಪ್ರತಿಯಾಗಿ ಅಮೆರಿಕವು ಸೌದಿ ಅರೇಬಿಯಾಗೆ ಭದ್ರತಾ ಭರವಸೆ ಮತ್ತು ಸೈನಿಕ ಬೆಂಬಲ ಒದಗಿಸಿತು. ಕಾಲಕ್ರಮೇಣ ಈ ವ್ಯವಸ್ಥೆ ಒಪೆಕ್ ದೇಶಗಳಾದ್ಯಂತ ವಿಸ್ತರಿಸಿತು. ಪರಿಣಾಮ ವಾಗಿ ಅಮೆರಿಕವು ಡಾಲರನ್ನು ಜಾಗತಿಕ ಮೀಸಲು ಕರೆನ್ಸಿಯಾಗಿ ಉಳಿಸಿಕೊಂಡು ಸಾರ್ವಭೌಮತ್ವ ಮೆರೆಯಲು ಸಾಧ್ಯವಾಯಿತು. ಆದರೆ, ಈಗಿನ 2026ರ ಇರಾನ್ ಯುದ್ಧ ಈ ಸಂಪೂರ್ಣ ವ್ಯವಸ್ಥೆ ಯಲ್ಲಿ ಬಿರುಕು ಮೂಡಿಸಿದೆ.

7

ಒಪೆಕ್ ದೇಶಗಳ ಮೇಲೆ ಇರಾನ್‌ನ ದಾಳಿ, ಹೊರ್ಮುಜ್ ದಿಗ್ಬಂಧನ ಹಾಗೂ ಇರಾನ್ ಯುದ್ಧದ ಮೇಲಿನ ಅಮೆರಿಕದ ಹಿಡಿತವಿಲ್ಲದ, ದಿಕ್ಕು ದಸೆಯಿಲ್ಲದ ನಡವಳಿಕೆ ಈ ಎಲ್ಲ ರಾಷ್ಟ್ರಗಳಲ್ಲೂ ಆತಂಕ ಮೂಡಿಸಿ ಅಮೆರಿಕದ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗಿದೆ. ಇದೇ ವೇಳೆ, ಇರಾನ್‌ನೊಂದಿಗೆ ವ್ಯಾಪಾರ ನಡೆಸುವ ದೇಶಗಳ ಮೇಲೆ ದ್ವಿತೀಯ ಹಂತದ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ನೀಡಿರುವ ಎಚ್ಚರಿಕೆ, ಅಮೆರಿಕವು ಡಾಲರ್ ಅನ್ನು ರಾಜಕೀಯ ಮತ್ತು ಆರ್ಥಿಕ ಆಯುಧ ವಾಗಿ ಬಳಸುತ್ತಿರುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಪ್ರಮುಖ ಪರಿಣಾಮವೆಂಬಂತೆ ಯುಎಈ ಮೇ 1, 2026ರಂದು ಅಧಿಕೃತವಾಗಿ ಒಪೆಕ್‌ನಿಂದ ಬೇರ್ಪಟ್ಟಿತು. ಅಮೆರಿಕಾದ ಜಾಗತಿಕ ಹಣಕಾಸು ಪ್ರಾಬಲ್ಯಕ್ಕೆ ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಆಧಾರವಾಗಿದ್ದ ಪೆಟ್ರೋಡಾಲರ್ ವ್ಯವಸ್ಥೆಯ ನಿಧಾನ ಕುಸಿತದ ಮತ್ತೊಂದು ಮಹತ್ವದ ಹಂತ ವಾಗಿ ಈ ನಿರ್ಗಮನ ಜಗತ್ತು ಕಂಡಿತು. 1973ರಲ್ಲಿ ತೈಲವು ಜಾಗತಿಕ ಆರ್ಥಿಕತೆಯನ್ನು ನಡುಗಿಸಿದ ರಾಜಕೀಯ ಆಯುಧವಾಗಿತ್ತು.

ಐವತ್ತು ವರ್ಷಗಳ ನಂತರ ಈ ಆಯುಧ ನಿಷ್ಪ್ರಯೋಜಕವಾಗುವ ಸಂಭಾವ್ಯತೆ ಗೋಚರಿಸುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾದ ಸರಕಾರಿ ಮತ್ತು ಖಾಸಗಿ ಆಸ್ತಿಗಳನ್ನು ಜಗತ್ತಿ ನಾದ್ಯಂತ ಸ್ಥಗಿತಗೊಳಿಸಿದ ಆರ್ಥಿಕ ನಿರ್ಬಂಧಗಳು, ಡಾಲರ್ ಆಧಾರಿತ ಹಣಕಾಸು ವ್ಯವಸ್ಥೆಯ ಮೇಲಿನ ಅತಿಯಾದ ಅವಲಂಬನೆಯ ಅಪಾಯಗಳನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಈ ನಡುವೆ ಜಗತ್ತಿನ ಕೇಂದ್ರ ಬ್ಯಾಂಕುಗಳು ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿದ್ದು, ಅಮೆರಿಕದ ಖಜಾನೆ ಬಾಂಡ್‌ಗಳಲ್ಲಿನ ಹೂಡಿಕೆಯನ್ನು ಕ್ರಮೇಣ ಕಡಿಮೆ ಮಾಡುತ್ತಿವೆ.

ಭಾರತವು ತನ್ನ ವಿದೇಶಿ ವಿನಿಮಯ ಮೀಸಲು ನಿರ್ವಹಣೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಕೈಗೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ಭಂಡಾರಗಳಲ್ಲಿ ಸಂಗ್ರಹವಾಗಿದ್ದ ಸುಮಾರು ೩೦೦ ಟನ್‌ಗಳಷ್ಟು ಚಿನ್ನವನ್ನು ಮಾರ್ಚ್ 2023ರಿಂದ ಭಾರತಕ್ಕೆ ಮರಳಿ ತರುವುದರ ಜೊತೆಗೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಗಣನೀಯ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸಿದೆ.

ಹಾಗೆಯೇ ತನ್ನಲ್ಲಿದ್ದ ಸುಮಾರು 21%ರಷ್ಟು (50 ಬಿಲಿಯನ್) ಅಮೆರಿಕದ ಟ್ರೆಷರಿ ಬಾಂಡ್‌ಗಳನ್ನು ಮಾರಾಟ ಮಾಡಿ ಮೀಸಲು ಆಸ್ತಿಗಳನ್ನು ಹೆಚ್ಚು ವೈವಿಧ್ಯಮಯಗೊಳಿಸುವ ಪ್ರಯತ್ನ ನಡೆಸಿದೆ. ಈ ಕ್ರಮಗಳು ಡಿಡಾಲರೀಕರಣದ ನೇರ ಘೋಷಣೆಯಾಗದಿದ್ದರೂ, ಜಾಗತಿಕ ಆರ್ಥಿಕ ಅನಿಶ್ಚಿತತೆ, ಭೂರಾಜಕೀಯ ಉದ್ವಿಗ್ನತೆ ಮತ್ತು ಸಂಭವನೀಯ ಆರ್ಥಿಕ ನಿರ್ಬಂಧಗಳ ಅಪಾಯದ ನಡುವೆ ಭಾರತದ ವಿದೇಶಿ ವಿನಿಮಯ ಮೀಸಲುಗಳನ್ನು ಹೆಚ್ಚು ಸುರಕ್ಷಿತ, ಸ್ವಾಯತ್ತ ಮತ್ತು ಸ್ಥಿರವಾಗಿಡುವ ಕಾರ್ಯತಂತ್ರ. ಚಿನ್ನವನ್ನು ಯಾವುದೇ ವಿದೇಶಿ ಸರಕಾರ ಏಕಪಕ್ಷೀಯವಾಗಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದ, ಅದು ಕೇಂದ್ರ ಬ್ಯಾಂಕುಗಳಿಗೆ ಮತ್ತೊಮ್ಮೆ ವಿಶ್ವಾಸಾರ್ಹ ಮೀಸಲು ಆಸ್ತಿಯಾಗಿ ಹೊರಹೊಮ್ಮುತ್ತಿದೆ.

ಚೀನಾ ಹಾಗೂ ಜಪಾನ್ ದೇಶಗಳೂ ಇದೇ ರೀತಿಯ ಕ್ರಮಗಳನ್ನು ಇನ್ನೂ ಬೃಹತ್ ಪ್ರಮಾಣದಲ್ಲಿ ಕೈಗೊಂಡಿವೆ.ಡಿಡಾಲರೀಕರಣವು ವೇಗ ಪಡೆಯಬೇಕಾದರೆ ರಾಷ್ಟ್ರಗಳು ಪರ್ಯಾಯ ಪಾವತಿ ವ್ಯವಸ್ಥೆಗಳನ್ನು ನಿರ್ಮಿಸಲೇಬೇಕಾಗಿದೆ. ಪ್ರಭಾವೀ ರಾಷ್ಟ್ರಗಳ ಸದಸ್ಯತ್ವ ಹೊಂದಿರುವ ಬ್ರಿಕ್ಸ್‌ ಒಕ್ಕೂಟ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದ.ಆಫ್ರಿಕಾ ಮತ್ತಿತರ ಆರು ರಾಷ್ಟ್ರಗಳು) ಅತ್ಯಂತ ಆಶಾದಾಯಕವಾದ ತಮ್ಮದೇ ಕರೆನ್ಸಿಯನ್ನು ಪ್ರಸ್ತುತಪಡಿಸುವ ಹಂತದಲ್ಲಿದೆ.

ಬ್ರಿಕ್ಸ್ ಪರಿಗಣಿಸುತ್ತಿರುವ ಭವಿಷ್ಯದ ಕರೆನ್ಸಿಯ ಪ್ರಮುಖ ವೈಶಿಷ್ಟ್ಯವೆಂದರೆ ಅದು ಕೇವಲ ಸರಕಾರದ ಭರವಸೆಯ ಮೇಲೆ ಅವಲಂಬಿತ ಫಿಯಾಟ್ ಕರೆನ್ಸಿಯಲ್ಲ. ಚಿನ್ನ, ತೈಲ, ಅನಿಲ, ಅಪರೂಪದ ಖನಿಜಗಳು ಮತ್ತು ಇತರ ನೈಜ ಆಸ್ತಿಗಳಿಂದ ಬೆಂಬಲಿತವಾಗಿರುವ ಹಣದ ವ್ಯವಸ್ಥೆ. ಅಮೆರಿಕನ್ ಡಾಲರ್‌ನ ಮೌಲ್ಯವು ಮುಖ್ಯವಾಗಿ ಅಮೆರಿಕದ ಆರ್ಥಿಕ ಶಕ್ತಿ ಮತ್ತು ಜಾಗತಿಕ ವಿಶ್ವಾಸದ ಮೇಲೆ ಅವಲಂಬಿತವಾಗಿದ್ದರೆ, ಬ್ರಿಕ್ಸ್ ಕರೆನ್ಸಿಯು ವಾಸ್ತವಿಕ ಸಂಪತ್ತಿನ ಆಧಾರವನ್ನು ಹೊಂದಿರುವುದರಿಂದ ಹೆಚ್ಚಿನ ಸ್ಥಿರತೆಯನ್ನು ಒದಗಿಸುವುದರಲ್ಲಿ ಸಂಶಯವಿಲ್ಲ.

ಜಗತ್ತಿನ ಚಿನ್ನದ ಸಂಗ್ರಹ, ತೈಲ ಉತ್ಪಾದನೆ, ಅಪರೂಪದ ಖನಿಜಗಳು ಮತ್ತು ಕೃಷಿ ಉತ್ಪನ್ನಗಳ ಮಹತ್ತರ ಭಾಗ ಬ್ರಿಕ್ಸ್ ರಾಷ್ಟ್ರಗಳಲ್ಲಿಯೇ ಇರುವುದರಿಂದ, ಈ ಸಂಪನ್ಮೂಲಗಳ ಬೆಂಬಲದೊಂದಿಗೆ ರೂಪುಗೊಳ್ಳುವ ಕರೆನ್ಸಿಯು ಡಾಲರ್ ಪ್ರಾಬಲ್ಯಕ್ಕೆ ಪರ್ಯಾಯವಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ ಜಾಗತಿಕ ಪಾವತಿ ವ್ಯವಸ್ಥೆಯ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಬ್ರೆಜಿಲ್ ದೇಶವು, ಬ್ರಿಕ್ಸ್ ಬ್ರಿಡ್ಜ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ವ್ಯವಸ್ಥೆಯ ಮೂಲಕ ಅಮೆರಿಕದ ಬ್ಯಾಂಕುಗಳ ಪಾಲ್ಗೊಳ್ಳುವಿಕೆ ಇಲ್ಲದೆ ಗಡಿ ದಾಟಿ ವ್ಯಾಪಾರ ಪಾವತಿಗಳನ್ನು ನಡೆಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಬ್ರಿಕ್ಸ್ ಪೇ ಎಂಬ ವ್ಯವಸ್ಥೆಯು ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ ವಿಕೇಂದ್ರೀಕೃತ ಗಡಿದಾಟಿ ಸಂದೇಶ ವಿನಿಮಯ ವ್ಯವಸ್ಥೆ ಯನ್ನು ಒಳಗೊಂಡಿರುತ್ತದೆ.

ಪರಿಣಾಮವಾಗಿ ಪಶ್ಚಿಮ ರಾಷ್ಟ್ರಗಳ ನಿಯಂತ್ರಣದಲ್ಲಿರುವ ಸ್ವಿಫ್ಟ್ ವ್ಯವಸ್ಥೆಯನ್ನು ಸಂಪೂರ್ಣ‌ ವಾಗಿ ಬದಿಗೊತ್ತುವ ದಿನಗಳು ದೂರವಿಲ್ಲವೆನ್ನಬಹುದು. ಇನ್ನೊಂದೆಡೆ, ಯೂರೋ-ರಿಯಾಲ್ ಮತ್ತು ಯುವಾನ್-ರೂಬಲ್ ವ್ಯಾಪಾರ ಮಾರ್ಗಗಳು ಪ್ರಯೋಗಾತ್ಮಕ ಹಂತವನ್ನು ದಾಟಿ ಮುಖ್ಯ ವಾಹಿನಿ ವ್ಯಾಪಾರ ವ್ಯವಸ್ಥೆಗಳಾಗಿ ರೂಪುಗೊಳ್ಳುತ್ತಿವೆ.

ಪೆಟ್ರೋಡಾಲರ್ ವ್ಯವಸ್ಥೆಯ ಸ್ತಂಭಗಳೆಂದು ಪರಿಗಣಿಸಲ್ಪಟ್ಟ ಕೆಲವು ಕೊಲ್ಲಿ ರಾಷ್ಟ್ರಗಳೂ ಸಹ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳ ಮೂಲಕ ಇಂಧನ ವ್ಯಾಪಾರವನ್ನು ಇತ್ಯರ್ಥಗೊಳಿಸುವ ‘ಎಮ್‌ಬ್ರಿಡ್ಜ್’ ಮಾದರಿಗಳನ್ನು ಅನ್ವೇಷಿಸುತ್ತಿವೆ.

ಡಾಲರ್‌ನ ಪ್ರಾಬಲ್ಯ ನಾಳೆಯೇ ಅಂತ್ಯಗೊಳ್ಳುವುದಿಲ್ಲ. ಆದರೆ ವಿಶ್ವ ಆರ್ಥಿಕತೆಯು ನಿಧಾನವಾಗಿ ಒಂದೇ ಕರೆನ್ಸಿ ಕೇಂದ್ರಿತ ವ್ಯವಸ್ಥೆ ಯಿಂದ ಬಹುಕರೆನ್ಸಿ ವ್ಯವಸ್ಥೆಯತ್ತ ಸಾಗುತ್ತಿರುವುದು ಸ್ಪಷ್ಟ ವಾಗಿದೆ. ಡಿಡಾಲರೀಕರಣದ ಚಳವಳಿ ಒಂದು ಮಹತ್ತರ ಆರ್ಥಿಕ ಬೆಳವಣಿಗೆ ಹಾಗೂ ಜಾಗತಿಕ ರಾಜಕೀಯ, ವ್ಯಾಪಾರ ಮತ್ತು ಶಕ್ತಿ ಸಮತೋಲನದ ಹೊಸ ಅಧ್ಯಾಯ.

ಡಿಡಾಲರೀಕರಣದ ಪ್ರಭಾವನ್ನು ಲೇಖನದ ಮೊದಲ ಭಾಗದಲ್ಲಿ ತಿಳಿಸಿದ ಭಾರತ ಮತ್ತು ಜರ್ಮನಿ‌ ಯ ಪೂರೈಕೆದಾರನ ವ್ಯಾಪಾರದ ಉದಾಹರಣೆಯ ಮೂಲಕ ಪುನಃ ಗಮನಿಸೋಣ. ಈಗ ಡಾಲರ್ ಮಧ್ಯಸ್ಥಿಕೆಯಿಲ್ಲದೇ ಡೈರೆಕ್ಟಾಗಿ ರೂಪಾಯಿಯಿಂದ ಯೂರೋ ಖರೀದಿಸಬಹುದು.

ಡಾಲರ್ ಮಧ್ಯವರ್ತಿಯ ಅವಶ್ಯಕತೆಯಿಲ್ಲದಿರುವುದರಿಂದ ವ್ಯವಹಾರದಲ್ಲಿ ಉಳಿತಾಯ ವಾಗುತ್ತದೆ. ಇನ್ನೂ ಮುಂದುವರಿದು, ಭಾರತದ ರೂಪಾಯಿಯನ್ನೇ ಮೂಲ ಕರೆನ್ಸಿಯನ್ನಾಗಿಯೂ ಜರ್ಮನಿಯು ಒಪ್ಪಿಕೊಳ್ಳಬಹುದು. ಭಾರತ ರಶ್ಯಾ ನಡುವೆ ಈ ವ್ಯವಸ್ಧೆ ಈಗಾಗಲೇ ರೂಢಿಯಲ್ಲಿದೆ.

ಇತಿಹಾಸವು ಅನೇಕ ಬಾರಿ ನಿಧಾನವಾಗಿ ಮಗ್ಗುಲಾಗುತ್ತದೆ. ನಂತರ ಪ್ರಚೋದಿತ ಘಟನೆ ಯೊಂದರಿಂದ ಹಠಾತ್ತನೆ ತಿರುವು ಪಡೆಯುತ್ತದೆ. ಇದು ಐತಿಹಾಸಿಕ ತಿರುವು ಬಿಂದುವಾಗುವುದೋ ಅಥವಾ ದೀರ್ಘ ಪರಿವರ್ತನೆಯ ಮತ್ತೊಂದು ಅಧ್ಯಾಯವಾಗುವುದೋ ಎಂಬುದನ್ನು ಕಾಲವೇ ನಿರ್ಧರಿಸಬೇಕು.