Vinayaka M Bhat Column: ತನುಮನಗಳಿಂದ ದೇವರನ್ನು ಸೇವಿಸಿದರೆ ಸಾಲದೇ ?
ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿಯ ದೇಣಿಗೆ ಎಣಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳೇ ಸಿಸಿಟಿವಿ ಕಣ್ತಪ್ಪಿಸಿ ಕೋಟಿ ಕೋಟಿ ಹಣವನ್ನು ಕದ್ದು, ದುಬಾರಿ ಕಾರು, ಮೊಬೈಲ್ ಹಾಗೂ ಮೋಜು-ಮಸ್ತಿಗೆ ಬಳಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದೇಶ-ವಿದೇಶ ಗಳಿಂದ ಲಕ್ಷಾಂತರ ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ರಾಮಲನಿಗೆ ಅಪಾರ ಪ್ರಮಾಣದ ಕಾಣಿಕೆ, ನಗದು ಹಾಗೂ ಚಿನ್ನಾಭರಣಗಳನ್ನು ಅರ್ಪಿಸುತ್ತಿರುವುದು ನಮಗೆ ತಿಳಿದೇ ಇದೆ.
-
ವಿದ್ಯಮಾನ
ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿದ್ದನ್ನು ನೋಡಿದ್ದೇವೆ, ಮೊದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎನ್ನುವ ಆರೋಪವಿತ್ತಾದರೂ ಕೊನೆಗೆ ಸಿಬಿಐ ನೇತೃತ್ವದ ಎಸ್‌ಐಟಿ ತನಿಖೆಯಿಂದ ಪ್ರಾಣಿಗಳ ಕೊಬ್ಬನ್ನು ಬಳಸಿರುವುದು ಸುಳ್ಳು, ಆದರೆ ಸುಮಾರು ಎರಡು ನೂರು ಕೋಟಿ ರೂಪಾಯಿಗಳ ಕಲಬೆರಕೆ ತುಪ್ಪವನ್ನು ಬಳಸಿದ್ದು ನಿಜ ಎನ್ನುವುದು ಸಾಬೀತಾಗಿತ್ತು.
ಇನ್ನು, ಇನ್ನೊಂದು ಪ್ರಸಿದ್ಧ ತೀರ್ಥ ಕ್ಷೇತ್ರ ಶಬರಿಮಲೆಯ ದೇವಸ್ಥಾನದಿಂದ ಚಿನ್ನವನ್ನು ಆಡಳಿತ ಮಂಡಳಿಯ ಕೆಲವರು ಹಾಗೂ ಕಲವು ಅರ್ಚಕರು ಸೇರಿ ಕಳ್ಳತನ ಮಾಡಿರುವುದನ್ನೂ ನಾವು ಕೇಳಿದ್ದೇವೆ. ದೇವರ ಪ್ರಸಾದಕ್ಕೆ ವಿಷ ಬೆರೆಸಿರುವ ಘಟನೆಯೂ ಕೆಲವು ವರ್ಷಗಳ ಹಿಂದೆ ನಮ್ಮ ಕರ್ನಾಟಕದ ನಡೆದಿದೆ. ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ ಎನ್ನುವ ಮಾತಿದೆ, ಅಂದರೆ, ದೇವರನ್ನು ಪೂಜಿಸುವ ಅರ್ಚಕನು ಸರಿಯಾಗಿದ್ದರೆ, ಆತನ ಪ್ರಭಾವದಿಂದ ಶಿಲೆಯೂ ಶಂಕರನಾಗುತ್ತಾನೆ ಎನ್ನುವ ಮಾತಿದೆ.
ಆದರೆ ಕೆಲದಿನಗಳ ಹಿಂದೆ ಕರಾವಳಿಯ ದೇವಸ್ಥಾನ ವೊಂದರಲ್ಲಿ ಅರ್ಚಕರು ಕೈ ಕೈ ಮಿಲಾಯಿಸಿ ಕೊಂಡಿರುವುದನ್ನು ನಾವು ನೆನಪು ಮಾಡಿಕೊಳ್ಳಬಹುದು. ಪ್ರಸಿದ್ಧ ಬದರಿನಾಥನ ದೇವಸ್ಥಾನ ದಲ್ಲೂ ಹುಂಡಿಯ ಹಣ ಕಳ್ಳತನವಾಗಿರುವ ಆರೋಪವಿದ್ದು, ತನಿಖೆ ನಡೆಯತ್ತಿದೆ. ಈಗ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಹುಂಡಿ ಕಳ್ಳತನದ ಸುದ್ದಿ ದೇಶಾದ್ಯಂತ ಸುದ್ದಿ ಮಾಡು ತ್ತಿದೆ. ಈ ಅನಿರೀಕ್ಷಿತ ವರ್ತಮಾನದಿಂದ ಸಮಸ್ತ ಹಿಂದೂ ಸಮಾಜ ಮಾನಸಿಕವಾಗಿ ಜರ್ಜರಿತ ವಾಗಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿಯ ದೇಣಿಗೆ ಎಣಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳೇ ಸಿಸಿಟಿವಿ ಕಣ್ತಪ್ಪಿಸಿ ಕೋಟಿ ಕೋಟಿ ಹಣವನ್ನು ಕದ್ದು, ದುಬಾರಿ ಕಾರು, ಮೊಬೈಲ್ ಹಾಗೂ ಮೋಜು-ಮಸ್ತಿಗೆ ಬಳಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ರಾಮಲನಿಗೆ ಅಪಾರ ಪ್ರಮಾಣದ ಕಾಣಿಕೆ, ನಗದು ಹಾಗೂ ಚಿನ್ನಾಭರಣಗಳನ್ನು ಅರ್ಪಿಸುತ್ತಿರುವುದು ನಮಗೆ ತಿಳಿದೇ ಇದೆ.
ಇದನ್ನೂ ಓದಿ: Vinayaka M Bhat Column: ಗ್ರಂಥಾಲಯಗಳಿಂದ ದೂರವುಳಿದ ಆಧುನಿಕ ಸಮಾಜ
ಇಂತಹ ಪವಿತ್ರ ಕಾಣಿಕೆಗೆ ಮಂದಿರದ ಸಿಬ್ಬಂದಿಯೇ ಕನ್ನ ಹಾಕಿದ್ದಾರೆ. ದೇಣಿಗೆ ಎಣಿಕೆ ಕೇಂದ್ರ ದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಬ್ಲೈಂಡ್ ಸ್ಪಾಟ್ ಗಳನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು, ಪ್ರತಿದಿನ ಕೋಟ್ಯಂತರ ರೂಪಾಯಿಗಳನ್ನು ಎಗರಿಸಿದ್ದಾರೆ. ಎಸ್‌ಐಟಿ ಪರಿಶೀಲಿಸಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಿಬ್ಬಂದಿ ಹಣದ ಬಂಡಲ್ ಗಳನ್ನು ಬಟ್ಟೆ, ಶೂ ಮತ್ತು ಇತರ ಗುಪ್ತ ಜಾಗಗಳಲ್ಲಿ ಮರೆಮಾಚಿ ಹೊರಗೆ ಸಾಗಿಸುತ್ತಿದ್ದ ಸುಮಾರು 70ಕ್ಕೂ ಹೆಚ್ಚು ದೃಶ್ಯಗಳು ದಾಖಲಾಗಿವೆ.
ಕದ್ದ ಹಣವನ್ನು ಆರೋಪಿಗಳು ತಮ್ಮ ಐಷಾರಾಮಿ ಜೀವನಕ್ಕಾಗಿ, ಸ್ನೇಹಿತರು ಹಾಗೂ ಗೆಳತಿಯ ರಿಗೆ ದುಬಾರಿ ಉಡುಗೊರೆಗಳನ್ನು ಖರೀದಿಸಲು ಬಳಕೆ ಮಾಡಿರುವುದು ತನಿಖೆಯಲ್ಲಿ ಬಹಿರಂಗ ವಾಗಿದೆ. ಅವರ ಮನೆಗಳಿಂದ ಲಕ್ಷಾಂತರ ರೂಪಾಯಿ ನಗದು ಮತ್ತು ವಿದೇಶಿ ಕರೆನ್ಸಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಭಕ್ತರ ನಂಬಿಕೆಯ ಸಂಕೇತವಾದ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಈ ಕಾಣಿಕೆ ಕಳ್ಳತನವು ಧಾರ್ಮಿಕ ಕೇಂದ್ರಗಳ ಭದ್ರತೆ ಮತ್ತು ಆಡಳಿತ ಪಾರದರ್ಶಕತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಭಕ್ತರು ಸದ್ಭಾವನೆಯಿಂದ ನೀಡಿದ ಕಾಣಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವಲ್ಲಿ ಅಗತ್ಯ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅಥವಾ ಈಗಾಗಲೇ ಇರುವ ಕ್ರಿಮಿನಲ್ ಕಾನೂನುಗಳ ಅನ್ವಯ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳುವ ಮೂಲಕ ದೇವಸ್ಥಾನದ ದೇಣಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕಾದ ಅಗತ್ಯವಿದೆ ಎನ್ನುವ ಒತ್ತಾಯ ಸಮಾಜದ ಎಲ್ಲ ವಲಯಗಳಿಂದ ಕೇಳಿ ಬರುತ್ತಿವೆ. ಕಳೆದ ವರ್ಷ ಪ್ರಯಾಗ್ ರಾಜ್ ನ ಮಹಾ ಕುಂಭ ಮೇಳಕ್ಕೆ ದೇಶವಿದೇಶಗಳಿಂದ ಆಗಮಿಸಿದ್ದ ಐವತ್ತು ಅರವತ್ತು ಕೋಟಿ ಭಕ್ತರು, ಹೊಸತಾಗಿ ನಿರ್ಮಾಣವಾಗಿ ಕಂಗೊಳಿಸುತ್ತಿರುವ ಶ್ರೀ ರಾಮಮಂದಿರವನ್ನು ಹಾಗೂ ಶ್ರೀರಾಮಲನ ಮೂರ್ತಿಯನ್ನು ಕಣ್ತುಂಬಿಸಿ ಕೊಂಡು ಕೃತಾರ್ಥರಾಗುವ ಉದ್ದೇಶದಿಂದ ಅಯೋಧ್ಯೆಗೂ ಹೋಗಿರುವುದು ನಮಗೆ ತಿಳಿದೇ ಇದೆ.
ಅಲ್ಲಿನ ನೂಕು ನುಗ್ಗಲನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ, ದಯವಿಟ್ಟು ಸ್ವಲ್ಪ ದಿನ ಯಾರೂ ಅಯೋಧ್ಯೆಗೆ ಬರಬೇಡಿ ಎಂದು ಅಲ್ಲಿನ ಆಡಳಿತ ವ್ಯವಸ್ಥೆ ಮನವಿ ಮಾಡಿಕೊಳ್ಳುವ ಮಟ್ಟಕ್ಕೆ ಮುಟ್ಟಿತ್ತು. ಇಷ್ಟೊಂದು ಸಂಖ್ಯೆಯ ಶ್ರದ್ಧಾಳುಗಳು ಅಯೋಧ್ಯೆಗೆ ಬರಿಕೈಯಿಂದ ಬಂದಾರೆಯೇ? ಕಾಣಿಕೆಗಳ ಮಹಾ ಪ್ರವಾಹವೇ ಅಲ್ಲಿ ಹರಿದಿತ್ತು ಆಗ.
ಪ್ರಾಯಶಃ ಅಲ್ಲಿಂದಲೇ ಈ ದೋಚುವ ಕೆಲಸ ಪ್ರಾರಂಭವಾಗಿತ್ತು ಎಂದು ಈಗ ಅನುಮಾನಿಸ ಲಾಗುತ್ತಿದೆ. ಎಲ್ಲಿ ಶ್ರೀ ರಾಮನಿದ್ದಾನೋ ಅಲ್ಲಿ ಕಾಮ (ದುರಾಸೆ) ಇರುವುದಿಲ್ಲವಂತೆ, ಕಾಮನಿರು ವಲ್ಲಿ ರಾಮನಿರುವು ದಿಲ್ಲವಂತೆ, ಇದು ರಾಮ ಭಕ್ತರ ಪ್ರಾಚೀನ ಅಂಬೋಣ. ಆದರೆ ಇಂದು ರಾಮನ ಮೂಲಸ್ಥಾನವಾದ ಅಯೋಧ್ಯೆಯಲ್ಲಿಯೇ ಕಾಮರೂಪಿ ರಾಕ್ಷಸರು ಮೆರೆಯುತ್ತಿರುವು ದನ್ನು ನೋಡುವಾಗ ನಮ್ಮ ನಂಬಿಕೆಯ ಮೇಲೆ ನಮಗೇ ಸಂಶಯ ಬರುವ ಹಾಗಾಗಿ ಬಿಟ್ಟಿದೆ.
‘ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ, ಪುಣ್ಯಕ್ಷೇತ್ರೇ ಕೃತಂ ಪಾಪಂ ವಜ್ರಲೇಪೋ ಭವಿಷ್ಯತಿ’ ಅಂದರೆ, ಅನ್ಯ ಕ್ಷೇತ್ರಗಳಲ್ಲಿ ಪಾಪ ಕಾರ್ಯ ಮಾಡಿದರೆ ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೋಗಿ ನಿವಾರಿಸಿಕೊಳ್ಳ ಬಹುದಂತೆ, ಪಾಪ ಕಾರ್ಯವನ್ನು ಪುಣ್ಯಕ್ಷೇತ್ರದ ಮಾಡಿದರೆ? ಅದನ್ನು ಎಲ್ಲಿ ಹೋದರೂ ತೊಳೆದು ಕೊಳ್ಳಲಿಕ್ಕೆ ಸಾಧ್ಯವಾಗುವುದಿಲ್ಲ, ಆ ಪಾಪ ವಜ್ರಲೇಪವಾಗಿ ಶಾಶ್ವತ ವಾಗಿ ಅಂಟಿಕೊಂಡು ಬಿಡುತ್ತೆ ಎನ್ನುವುದು ಈ ಹಿತವಚನದ ತಾತ್ಪರ್ಯ. ಹಾಗಾಗಿಯೇ, ದೇವಸ್ಠಾನ ದ ನಂದಾದೀಪವನ್ನು ಸರಿಮಾಡು ವಾಗ ಕೈಗೆ ಎಣ್ಣೆ ತಾಕಿದರೆ, ಅದನ್ನೂ ಕೈಗೋ ಕಾಲಿಗೋ ಒರೆಸಿಕೊಳ್ಳುವುದಿಲ್ಲ, ಕಾರಣ ದೇವರ ವಸ್ತು ವನ್ನು ಚೌರ್ಯ ಮಾಡಿದ ಹಾಗಾಗುತ್ತದೆ ಎನ್ನುವ ಸೂಕ್ಷ್ಮ ಸಂವೇದನೆ ನಮ್ಮ ಪ್ರಾಚೀನರದ್ದಾಗಿತ್ತು.
ದೇವಸ್ಥಾನಗಳಲ್ಲಿ ಇತ್ತೀಚೆಗೆ ಪದೇ ಪದೇ ನಡೆಯುತ್ತಿರುವ ಕಾಣಿಕೆಯ ಹಣದ ಕಳ್ಳತನದ ಪ್ರಕರಣ ಗಳನ್ನು ನೋಡುವಾಗ, ನಾವು ಕಾಣಿಕೆ ಹಾಕುವುದನ್ನೇ ನಿಲ್ಲಿಸುವುದೊಳಿತು ಎನ್ನುವ ಭಾವನೆ ಭಕ್ತರಲ್ಲಿ ಬಂದರೆ ತಪ್ಪಲ್ಲ. ದೇವಸ್ಥಾನಗಳಿಗೆ ಹೋದವರು ಕಾಣಿಕೆಯನ್ನು ಹಾಕಲೇಬೇಕಾ? ಆರೀತಿಯ ನಿಯಮಗಳನ್ನು ನಮ್ಮ ಧರ್ಮಶಾಸ್ತ್ರಗಳು ವಿಧಿಸಿವೆಯಾ? ಎಂದರೆ, ಹಾಗೇನಿಲ್ಲ ಎನ್ನುವುದೇ ಉತ್ತರ. ‘ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇಭಕ್ತ್ಯೂ ಪ್ರಯಛ್ಛತಿ, ತದಹಂ ಭಕುಪಹೃತಂ ಅಶ್ನಾಮಿ ಪ್ರಯತಾತ್ಮನಃ’ ಅಂದರೆ, ಲಭ್ಯವಿರುವ ಹಣ್ಣು, ಹೂವು, ಎಲೆ ಅಥವಾ ಕೇವಲ ನೀರನ್ನಾದರೂ ಸರಿ, ಭಕ್ತರು ಭಕ್ತಿಯಿಂದ ಸಮರ್ಪಣೆ ಮಾಡಿದ್ದಾ ದರೆ ನಾನು ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಭಗವಂತ ಭಗವದ್ಗೀತೆಯಲ್ಲಿ ಸ್ವತಃ ಹೇಳಿದ್ದಿದೆ.
ಹಾಗಾಗಿ ಕಾಣಿಕೆಯಾಗಿ ಹಣವನ್ನೇ ನೀಡಬೇಕು ಎಂದು ಭಗವಂತ ಬಯಸುವುದಿಲ್ಲ. ತನು, ಮನ, ಧನಗಳಿಂದ ಭಗವಂತನ ಸೇವೆ ಮಾಡಬೇಕೆಂದಿರುವುದು. ಇಲ್ಲಿ ಶಾರೀರಿಕ ಹಾಗೂ ಮಾನಸಿಕ ಸೇವೆಯ ನಂತರ ಧನದ ವಿಷಯವನ್ನು ತರಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ, ದೇವರನ್ನು, ಗುರುಗಳನ್ನು, ರೋಗಿಗಳನ್ನು ಹಾಗೂ ಸಣ್ಣ ಮಕ್ಕಳನ್ನು ನೋಡಲು ಹೋಗುವಾಗ, ಖಾಲಿ ಕೈಯಿಂದ ಹೋಗಬಾರದು ಎನ್ನುವ ಶಿಷ್ಟಾಚಾರವಿದೆ. ಹಾಗಾಗಿಯೇ, ದೇವರನ್ನು ಹಾಗೂ ಗುರು ಗಳನ್ನು ಸಂದರ್ಶನ ಮಾಡುವಾಗ ಹಣ್ಣು ಹಂಪಲು ತೆಂಗಿನಕಾಯಿ, ಜೊತೆಗೆ ಕಾಣಿಕೆಯನ್ನು, ರೋಗಿಗಳನ್ನು ಸಂದರ್ಶಿಸುವಾಗ, ಬ್ರೆಡ್ಡು ಹಣ್ಣು ಹಾಗೂ ಹಸುಗೂಸುಗಳನ್ನು ನೋಡಲು ಹೋಗುವಾಗ ಚಾಕಲೇಟನ್ನಾದರೂ ಒಯ್ಯುವ ಪದ್ಧತಿ ಇದೆ. ಇನ್ನು, ದಿವ್ಯಧಾಮಗಳಿಗೆ ಯಾತ್ರೆ ಹೋದಾಗ ಕಾಣಿಕೆಯಾಗಿ ಹಣವನ್ನು ಸಮರ್ಪಣೆ ಮಾಡುವುದು ಒಂದು ರೀತಿಯ ತ್ಯಾಗಬುದ್ಧಿ ಯೂ ಹೌದು.
ನಾವು ನ್ಯಾಯವಾಗಿ ದುಡಿದ ಸಂಪತ್ತಿನಲ್ಲಿ ಭಗವಂತಿನಿಗಾಗಿ ಒಂದು ಭಾಗವನ್ನು ತ್ಯಾಗ ಮಾಡಬೇಕು ಎನ್ನುವ ಪರಿಕಲ್ಪನೆಯಿಂದ ಭಕ್ತಜನ ಕಾಣಿಕೆಯಾಗಿ ಹಣವನ್ನು ಸಮರ್ಪಣೆ ಮಾಡು ವುದು. ದೇವಸ್ಥಾನ ಗಳಿಗೆ ಕಾಣಿಕೆ ಸಮರ್ಪಣೆ ಮಾಡಿದರೆ ಅಲ್ಲಿ ನಡೆಯುವ ಪೂಜಾದಿಗಳು ಅನ್ನದಾನ ಹಾಗೂ ಭಕ್ತರ ಸೌಲಭ್ಯ ಗಳಿಗೆ ಅದು ಸದ್ಬಳಕೆಯಾಗುತ್ತದೆ ಎನ್ನುವ ನಂಬಿಕೆಯೂ ಜನ ಕಾಣಿಕೆ ನೀಡಲು ಒಂದು ಕಾರಣ. ಎಲ್ಲರೂ ಕಾಣಿಕೆ ಹಾಕುವಾಗ ನಾವೊಬ್ಬರು ಹಾಕದಿದ್ದರೆ ನಮ್ಮನ್ನು ‘ಜುಗ್ಗ’ ಎಂದು ಬಿಟ್ಟಾರು ಎನ್ನುವ ಸಂವೇದನೆಯೂ ಧನ ಸಮರ್ಪಣೆಗೆ ಒಂದು ಕಾರಣ ವಿರಬೇಕು.
ಕಾಣಿಕೆ ನೀಡಿ ತ್ಯಾಗಬುದ್ಧಿಯನ್ನು ಪ್ರದರ್ಶನ ಮಾಡುವುದು ತಪ್ಪಲ್ಲ, ಆದರೆ ಭಕ್ತಜನರೂ ಸ್ವಲ್ಪ ಬುದ್ಧಿವಂತರಾಗಬೇಕಿದೆ. ಪಾವತಿಗೆ ರಶೀತಿ ಸಿಗುವಲ್ಲಿ ಮಾತ್ರ ಕಾಣಿಕೆ ಹಾಕುವುದು, ಕ್ಯೂಅರ್ ಕೋಡ್ ಬಳಸುವುದು ಮುಂತಾದ ಹೊಸ ಉಪಾ ಯಗಳನ್ನು ಬಳಸಬಹುದಾಗಿದೆ. ಮೊನ್ನೆ ಮೊನ್ನೆ ಅನಂತ್ ಅಂಬಾನಿಯವರು ತಿರುಪತಿಗೆ ಭೇಟಿ ನೀಡಿದಾಗ ಸುಮಾರು 27 ಕೋಟಿ ರೂಪಾಯಿಗಳ ಮೊತ್ತದ 25 ಇಲೆಕ್ಟ್ರಿಕ್ ಬಸ್ಸುಗಳನ್ನು ಯಾತ್ರಿಕರ ಅನುಕೂಲಕ್ಕಾಗಿ ದಾನ ಮಾಡಿರುವುದನ್ನು ಗಮನಿಸಬಹುದು.
ಅವರು ನೇರವಾಗಿ ದೇವಸ್ಥಾನಕ್ಕೆ 27ಕೋಟಿ ರೂಪಾಯಿಗಳನ್ನು ಸಂದಾಯ ಮಾಡಬಹು ದಾಗಿತ್ತು. ಆದರೆ ಹಾಗೆ ಮಾಡದೇ ಬುದ್ಧಿವಂತಿಕೆಯಿಂದ ಭಕ್ತರ ಅನುಕೂಲಕ್ಕೆ ಏನು ಬೇಕೋ ಅದನ್ನು ನೇರವಾಗಿ ತಾವೇ ಮಾಡಿzರೆ. ರಾಮ ಮಂದಿರ ನಿರ್ಮಾಣವಾಯಿತು, ರಾಮನ ಪ್ರತಿಷ್ಠಾಪನೆ ಯಾಯಿತು ಅಲ್ಲಿಗೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಬಿಜೆಪಿಗರು ಕೈಕಟ್ಟಿ ಕುಳಿತು ಕೊಂಡಿರುವಂತೆ ಕಾಣುತ್ತದೆ.
ಅನಾದಿಯಿಂದ ಭಾರತೀಯರ ಶ್ರದ್ಧಾ ಕೇಂದ್ರವಾದ ಶ್ರೀ ರಾಮನ ಜನ್ಮಸ್ಥಳದಲ್ಲಿ ಅವ್ಯವಹಾರಕ್ಕೆ ಆಸ್ಪದವಾಗಿ ಶ್ರದ್ಧಾಳುಗಳ ಭಾವನೆಗೆ ಘಾಸಿಯುಂಟಾಗದಂತೆ ಸಮರ್ಪಕವಾದ ಹಾಗೂ ಶಾಶ್ವತ ವಾದ ವ್ಯವಸ್ಥೆ ಮಾಡಬೇಕು ಎನ್ನುವುದು ಉತ್ತರ ಪ್ರದೇಶ ಸರಕಾರ, ಬಿಜೆಪಿ ಪಕ್ಷವನ್ನೂ ಸೇರಿ, ವಿಶ್ವ ಹಿಂದು ಪರಿಷತ್, ಆರೆಸ್ಸೆಸ್ ಮುಂತಾದ ರಾಮ ಮಂದಿರಕ್ಕಾಗಿ ಹೋರಾಡಿದ್ದ ಸಂಘಟನೆಗಳ ನೈತಿಕ ಕರ್ತವ್ಯವಾಗಿತ್ತು. ಆದರೆ ಅವರು ಈ ವಿಷಯದಲ್ಲಿ ಸ್ವಲ್ಪ ಉಪೇಕ್ಷೆ ಮಾಡಿದಂತೆ ಕಾಣುತ್ತದೆ. ಅದಲ್ಲದಿದ್ದರೆ, ಇಷ್ಟು ದೊಡ್ಡ ಹಾಗೂ ಅತಿಸೂಕ್ಷ್ಮ ತೀರ್ಥಕ್ಷೇತ್ರದ ನಿರ್ವಹಣೆ ಮಾಡುತ್ತಿರುವ ವಿಶ್ವಸ್ಥ ಮಂಡಳಿಯಲ್ಲಿ ಅನುಭವಸ್ಥ ಹಾಗೂ ದಕ್ಷ ಆಡಳಿತಗಾರರನ್ನು ಮಾತ್ರ ನೇಮಿಸಬೇಕಾಗಿತ್ತು ತಾನೆ? ಕಾನೂನಿನ ಅನ್ವಯ ಬಿಜೆಪಿ ಪಕ್ಷ ಹೊಣೆ ಹೊರಬೇಕಾದ ಅಗತ್ಯವಿಲ್ಲದಿದ್ದರೂ, ರಾಮ ಮಂದಿರದ ಚಳುವಳಿಯಿಂದ ರಾಜಕೀಯ ಲಾಭ ಪಡೆದದ್ದರಿಂದ ಶೃದ್ಧಾವಂತ ಶ್ರೀರಾಮ ಭಕ್ತರಿಗೆ ಉತ್ತರಿಸಬೇಕಾದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಂತೂ ಆಗದು. ರಾಮ ಮಂದಿರ ನಿರ್ಮಾಣ ವನ್ನು ವಿರೋಧಿಸುತ್ತಿರು ವವರ ಸಂಖ್ಯೆ ಮಂದಿರ ನಿರ್ಮಾಣವಾದ ಮೇಲೂ ಕಡಿಮೆಯೇನಾಗ ಲಿಲ್ಲ, ಮಂದಿರದ ಮೇಲೆ ಬಾಂಬ್ ಸಿಡಿಸುತ್ತೇವೆ ಎನ್ನುವವರನ್ನು ನಾವು ನೋಡುತ್ತಿದ್ದೇವೆ.
ಹೇಗಾದರೂ ಆಗಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಅಪರಾತಪರಾ ಆಗುವುದನ್ನು ಕೆಲವು ಹಿತಾಸಕ್ತಿಗಳು ಕಾತರದಿಂದ ಕಾಯುತ್ತಿದ್ದರು ಕೂಡ. ಶ್ರೀರಾಮನ ಜೊತೆಗೆ ಸೀತಾಮಾತೆಯ ಮೂರ್ತಿ ಯನ್ನು ಏಕೆ ಸ್ಥಾಪಿಸಲಿಲ್ಲ? ಇನ್ನೂ ಒಂದು ಅಂತಸ್ತಿನ ನಿರ್ಮಾಣ ಬಾಕಿ ಇರುವಾಗಲೇ ಉದ್ಘಾಟನೆ ನೆರವೇರಿಸುವ ತರಾತುರಿ ಏನಿತ್ತು? ಎಂದು ಕ್ಯಾತೆ ಎತ್ತಿದವರೂ ಇದ್ದರು ಎನ್ನುವುದು ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರಿಗೆ ತಿಳಿದೇ ಇತ್ತು.
ರಾಮ ಮಂದಿರದ ನಿರ್ಮಾಣವಾದ ನಂತರ ನಡೆದ ಚುನಾವಣೆಯಲ್ಲಿ ಅಯೋಧ್ಯೆಯನ್ನೊಳ ಗೊಂಡ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ, ರಾಮ ಮಂದಿರ ಪರ ಹೋರಾಟಗಾರರ ಮೇಲೆ ಗುಂಡು ಹಾರಿಸಿದ್ದ ಪಕ್ಷದವರು ಗೆzಗಲೇ ಅಯೋಧ್ಯೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಿಜೆಪಿ ಕೇಂದ್ರ ಹಾಗೂ ಉತ್ತರ ಪ್ರದೇಶದ ನಾಯಕತ್ವ ಮನಗಂಡು ಎಚ್ಚರಗೊಳ್ಳಬೇಕಿತ್ತು. ಆದರೆ ಆ ಸೋಲನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಬಿಜೆಪಿಯನ್ನು ಪಕ್ಕಕ್ಕಿಟ್ಟು, ದೇವರೂ ಇದನ್ನೆ ನೋಡುತ್ತಾ ಸುಮ್ಮನಿದ್ದಾನಾ? ದುರಳರಿಗೆ ಶಿಕ್ಷೆ ಕೊಡಬಾರದಿತ್ತೇ ಎಂದು ಶ್ರದ್ಧಾವಂತ ಭಕ್ತರುಗಳಿಗೆ ಅನಿಸುವುದು ಸ್ವಾಭಾವಿಕ. ಸನಾತನಿಗಳಾದ ನಾವು ಪುನರ್ಜನ್ಮದಲ್ಲಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿರಬೇಕಾಗುತ್ತದೆ. ಸಾಲ ಮಾಡಿಯಾದರೂ ಇದೇ ಜನ್ಮದಲ್ಲಿ ತುಪ್ಪವನ್ನು ತಿಂದು ಬಿಡಬೇಕು ಎನ್ನುವ ಸಿದ್ಧಾಂತದವರಲ್ಲ ನಾವು. ಹಾಗಾಗಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ಕುಡಿಯುತ್ತಾರೆ ಕೂಡಾ ಅದಕ್ಕೆ ಸಂಶಯ ಬೇಡ. ಆದರೆ ಕಾಯಬೇಕಷ್ಟೆ.
ಭಗವಂತನ ನ್ಯಾಯಾಲಯದಲ್ಲಿ ತೀರ್ಪುಬರುವುದಕ್ಕೆ ತಡವಾಗಬಹುದು ಆದರೆ ಜನ್ಮಾಂತರದಲ್ಲಾ ದರೂ ಸೂಕ್ತವಾದ ತೀರ್ಪು ಬಂದೇ ಬರುತ್ತೆ. ಶಿಶುಪಾಲನಂಥವರಿಗೇ ಶಿಕ್ಷೆ ವಿಧಿಸುವುದಕ್ಕಿಂತ ಮುಂಚೆ ನೂರು ತಪ್ಪುಗಳನ್ನು ಮಾಡಲು ಭಗವಂತ ಬಿಟ್ಟಿದ್ದನಂತೆ, ಅವನ ನ್ಯಾಯದಾನದ ರೀತಿ ನೀತಿ ನಮ್ಮ ಪದ್ಧತಿಗಿಂತ ಬೇರೆಯದೇ ಇರುತ್ತೆ.
ಒಂದು ದೇವಾಲಯವನ್ನು ನಿರ್ಮಾಣ ಮಾಡಿ ದೇವತಾ ಪ್ರತಿಷ್ಠೆ ಮಾಡಿಸಿದರೆ ಆತನ ಇಪ್ಪತ್ತೊಂದು ತಲೆಮಾರು ಉದ್ಧಾರವಾಗುವುದಂತೆ. ಅದೇ ದೇವರ ವಾಸಸ್ಥಾನದಲ್ಲಿ ಈ ರೀತಿಯ ಅನಾಚಾರವೆಸಗಿದರೆ ಕುಲನಾಶವೂ ಆಗುತ್ತದೆ. ಭಗವಂತ ಕೊಡುತ್ತಾನೋ ಅಥವಾ ಈ ನೆಲದ ಕಾನೂನು ಕೊಡುತ್ತದೆಯೋ ಗೊತ್ತಿಲ್ಲ, ಭಕ್ತರು ಭಕ್ತಿಯಿಂದ ನೀಡಿದ ಕಾಣಿಕೆಗಳನ್ನು ನಿರ್ಲಜ್ಜರಾಗಿ ದೋಚಿ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಖೂಳರಿಗೆ ಕಠಿಣಾತಿ ಕಠಿಣ ಶಿಕ್ಷೆಯಂತೂ ಆಗಲೇ ಬೇಕು. ಶಿಕ್ಷೆ ಹೇಗಿರಬೇಕೆಂದರೆ ಮುಂದೆ ಇಂಥಾ ದುಷ್ಕೃತ್ಯ ಮಾಡುವವರು ನೂರು ಬಾರಿ ಯೋಚನೆ ಮಾಡುವಂತಿರಬೇಕು.