ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mirley Chandrashekher Column: ವಿಶ್ರಾಂತ ಬದುಕಿನಲ್ಲಿ ಸುಖವಿದೆ, ಅದನ್ನು ಸವಿಯಿರಿ

“ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ, ಗುರುಃಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರ ವೇ ನಮಃ.", ಗುರುವೇ ಬ್ರಹ್ಮವಿಷ್ಣುಮಹೇಶ್ವರನು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವವನು. ವಿದ್ಯೆ ಕಲಿಯಲು ಶಾಲೆಗೆ ಸೇರುವಾಗ ಪ್ರತೀ ಮಗುವು ಅಜ್ಞಾನದ ಕೂಸೇ ಆಗಿರುತ್ತದೆ. ಒಂದೊಂದೇ ಅಕ್ಷರಗಳನ್ನು ತಿದ್ದಿತೀಡಿ ತುಂಬುವ ಮೊದಲ ಗುರುವೇ ನಮ್ಮೆಲ್ಲರ ಮಹಾಗುರು.

ವಿಶ್ರಾಂತ ಬದುಕಿನಲ್ಲಿ ಸುಖವಿದೆ, ಅದನ್ನು ಸವಿಯಿರಿ

-

Profile
Ashok Nayak Jul 12, 2026 6:00 AM

ನಿʼವೃತ್ತಿʼ

ಮಿರ್ಲೆ ಚಂದ್ರಶೇಖರ

ಬದುಕಿನ ಬಂಡಿ ಬಾಳ ದಾರಿಯಲ್ಲಿ ಸಾಗುತ್ತಾ ಇಳಿವಯಸ್ಸಿಗೆ ತಲುಪಿತು ಅಂದ್ರೆ ಜೀವನಶೈಲಿ ತನ್ನಿಂತಾನೆ ಬದಲಾಗಿ ಬಿಡುತ್ತದೆ, ನಿದ್ರೆಯಲ್ಲಿ ಬೀಳುವ ಕನಸುಗಳು ಕೂಡ ಬದಲಾವಣೆ ಪಡೆದು ಕೊಳ್ಳುತ್ತವೆ. ಒಳ್ಳೆಯ ಕನಸುಗಳಿಗಿಂತ ಕೆಟ್ಟವುಗಳೇ ಹೆಚ್ಚು ಪ್ರಾಮುಖ್ಯತೆ ಪಡೆದಿರುತ್ತವೆ. ಗೆಳೆಯ ರೊಟ್ಟಿಗೆ ಸೇರಿ ಹರಟೆ ಹೊಡೆಯುವಾಗ ಬಾಲ್ಯದ ನೆನಪುಗಳು ದಂಡಿಯಾಗಿ ಲಗ್ಗೆ ಇಡುತ್ತವೆ, ಕಳೆದುಹೋದ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುವಾಗ ಏನೋ ಒಂಥರಾ ಖುಷಿ, ಆ ಸಂದರ್ಭ ಕ್ಕೆ ಕೊನೆಗಾಲಕ್ಕೆ ತಲುಪಿರುವ ಮುದುಕರು ಸಹ ಮಕ್ಕಳಾಗಿ ಬಿಡುತ್ತಾರೆ. ಎಂಥಹ ಉನ್ನತ ಪದವಿ ಗಳನ್ನು ಪಡೆದಿರಲಿ ಅಥವಾ ಹುದ್ದೆಯಲ್ಲಿರಲಿ ಮೊದಲು ಅ, ಆ, ಇ, ಈ.... ಅಕ್ಷರಗಳನ್ನು ಕಲಿಸಿದ ಗುರುಗಳು ನೆನಪಿಗೆ ಬರುವುದು, ಕಾಲೇಜಿನಲ್ಲಿ ದೊಡ್ಡದೊಡ್ಡ ವಿಷಯಾಧಾರಿತ ಪಾಠ ಗಳನ್ನು ಬೋಧಿಸಿದ ಪ್ರೊಫೆಸರ್‌ಗಳು ಕೆಲವೇ ವರ್ಷಗಳಲ್ಲಿ ಮರೆತು ಹೋಗುತ್ತಾರೆ.

ಆದರೆ ಪ್ರೌಡಶಾಲೆಯವರೆಗಿನ ಗುರುಗಳು ಮತ್ತೆ ಮತ್ತೆ ಕಾಡುತ್ತಾರೆ ಹಾಗೂ ಅವರ ಹಾವಭಾವಗಳು ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತುಬಿಟ್ಟಿರುತ್ತವೆ, ಕೆಲವರು ಜೀವನದುದ್ದಕ್ಕೂ ಅಕ್ಷರ ಕಲಿಸಿದ ಗುರುಗಳ ಮ್ಯಾನರಿಸಂ ಅನ್ನು ಅನುಕರಿಸುವುದನ್ನು ಕಂಡಿದ್ದೇವೆ.

“ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ, ಗುರುಃಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ.", ಗುರುವೇ ಬ್ರಹ್ಮವಿಷ್ಣುಮಹೇಶ್ವರನು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವವನು. ವಿದ್ಯೆ ಕಲಿಯಲು ಶಾಲೆಗೆ ಸೇರುವಾಗ ಪ್ರತೀ ಮಗುವು ಅಜ್ಞಾನದ ಕೂಸೇ ಆಗಿರುತ್ತದೆ. ಒಂದೊಂದೇ ಅಕ್ಷರಗಳನ್ನು ತಿದ್ದಿತೀಡಿ ತುಂಬುವ ಮೊದಲ ಗುರುವೇ ನಮ್ಮೆಲ್ಲರ ಮಹಾಗುರು. ಎಲ್ಲಾ ಹಂತಗಳನ್ನು ದಾಟಿ ನಿವೃತ್ತನಾಗಿರುವ ನನಗೆ ಇಂದಿಗೂ ಬದುಕಿರುವ ಅಂಥಹ ಮಹಾಗುರುಗಳ ಸಂಪರ್ಕ ಇದೆಯೆಂದರೆ ಅದಕ್ಕಿಂತ ಸಂತೋಷ ಬೇರೆ ಏನಿದೆ?, ಅವರಲ್ಲಿ ಇದ್ದವರಿಗಿಂತ ಇಹಲೋಕ ತ್ಯಜಿಸಿದವರೇ ಹೆಚ್ಚು ಎನ್ನುವುದಕ್ಕೆ ದುಃಖವಿದೆ.

ಇದನ್ನೂ ಓದಿ: Mirley Chandrashekher Column: ಬೇಕಿರುವುದು ತಂತ್ರ ಕುತಂತ್ರ, ಹಿರೋಯಿಸಂ ಅಲ್ಲ !

ಒಬ್ಬ ನೌಕರ ತನ್ನ ಅರವತ್ತನೇ ವಯಸ್ಸಿನಲ್ಲಿ ವಯೋನಿವೃತ್ತಿ ಹೊಂದಿ ದುಡಿಮೆಯಿಂದ ಮುಕ್ತಿಗೊಳ್ಳುತ್ತಾನೆ. ಆತನಿಗೆ ನಿವೃತ್ತಿ ನಂತರ ಹೇಗಪ್ಪ ಬದುಕು ಎನ್ನುವುದೇ ಬಹಳ ದಿನಗಳಿಂದ ಲೂ ಕಾಡುವ ಯೋಚನೆ, ಹಾರತುರಾಯಿಗಳನ್ನು ಹಾಕಿಸಿಕೊಂಡು ಸದೋದ್ಯೋಗಿಗಳು ನೀಡಿದ ಉಡುಗೊರೆ, ಶಾಲು ಮತ್ತು ಹಣ್ಣಿನ ಬುಟ್ಟಿಯೊಂದಿಗೆ ಮನೆಗೆ ಬರುವಾಗ ಒಳಗೊಳಗೆ ನೋವಿದ್ದರೂ ನಗುಮುಖದಿಂದಲೇ ಇರುವುದು ಸಹಜ. ನಿವೃತ್ತಿಯಿಂದಾಗಿ ನಿತ್ಯದ ಜೀವನಶೈಲಿ ಯೇ ಬದಲಾಗಿಬಿಡುತ್ತದೆ, ಅನಿವಾರ್ಯವೂ ಕೂಡ. ನಿವೃತ್ತಿಯ ಪ್ರಾರಂಭದಲ್ಲಿ ಅಭಿನಂದನೆ ಗಳನ್ನು ಹೇಳುವುದಕ್ಕಾಗಿ ಮೊಬೈಲ್‌ಗೆ ಕರೆಗಳು ಬರುತ್ತಿರುತ್ತವೆ, ಕ್ರಮೇಣ ಒಳಬರುವ ಕರೆಗಳು ಪೂರ್ಣವಾಗಿ ನಿಂತೇ ಹೋಗುತ್ತವೆ.

ಟೆನ್ಶನ್ ಕೊಡುವ ಕರೆಗಳು ಇಲ್ಲವೇ ಇಲ್ಲ, ಅಪರೂಪಕ್ಕೆ ಒಮ್ಮೆ ಕರೆ ಬಂದಾಗ ಯಾವುದೇ ಭಯ ವಿಲ್ಲದೆ ಸ್ವೀಕರಿಸುತ್ತೇವೆ ಏಕೆಂದರೆ ಕಚೇರಿಯ ಸಮಸ್ಯೆಗಳು ಅದರಲ್ಲಿ ಇರುವುದಿಲ್ಲ, ಮೇಲಧಿ ಕಾರಿಗಳ ದರ್ಪದ ಮಾತುಗಳಿಗೆ ಅವಕಾಶವಿಲ್ಲ, ಸಾರ್ವಜನಿಕರ ದೂರುಗಳಿರುವುದಿಲ್ಲ, ಮುಂಜಾನೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಕಚೇರಿಗೆ ದೌಡಾಯಿಸಬೇಕೆಂಬ ಕಾತುರ ಇರುವುದಿಲ್ಲ. ಹೆಂಡತಿಗೆ ಊಟತಿಂಡಿ ಗಳನ್ನು ಲಘುಬಗೆಯಿಂದ ಮಾಡುವ ಗೋಜಿಲ್ಲ.

ಸಾವಕಾಶವಾಗಿ ಎದ್ದು ಸಮಯದ ಮಿತಿ ಇಲ್ಲದೆ ಅಡುಗೆ ಕೆಲಸ ಮಾಡುವಳು, ಗಂಡನಾದವನು ಸಹ ಸಣ್ಣಪುಟ್ಟ ಮನೆಕೆಲಸಗಳಿಗೆ ಕೈಜೋಡಿಸುವುದರಿಂದ ಜೀವನಪೂರ ದುಡಿದು ಸೆವೆಯುವ ಹೆಂಡತಿಗೆ ಖುಷಿಯೋ ಖುಷಿ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ವರವೇ ನಿವೃತ್ತ ಬದುಕು, ಹಾಗಾಗಿ ಈ ಹಂತವು ನಿಶ್ಚಿಂತೆಯಿಂದ ಆನಂದಿಸುವ ಕಾಲಘಟ್ಟ. ಸೇವೆಯಲ್ಲಿದ್ದಾಗ ಹೆಂಡತಿಮಕ್ಕಳೊಂದಿಗೆ ಇರುವುದಕ್ಕಿಂತ ಹೆಚ್ಚುಕಾಲ ಕಚೇರಿಯಲ್ಲಿ ಕಳೆಯುತ್ತಿದ್ದದ್ದು, ಬಾಸ್ ಆದವನು ಕಿರಿಕಿರಿ ಮನುಷ್ಯನಾಗಿದ್ದರೆ ಮುಗಿಯಿತು, ಮನೆಯಲ್ಲೂ ನೆಮ್ಮದಿ ಹಾಳಾಗಿ ಬಿಡುತ್ತಿತ್ತು, ಈ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ, ಜೀವನ ಸುಖವಾಗಿ ಇರಲು ಇದಕ್ಕಿಂತ ಬೇರೆ ಏನು ಬೇಕು?.

ಒಬ್ಬ ನೌಕರನಿಗೆ ನಿಜವಾದ ಸ್ವಾತಂತ್ರ್ಯ ದೊರಕುವುದು ಆತ ನಿವೃತ್ತಿ ಆದಾಗ ಮಾತ್ರ, ಕರ್ತವ್ಯದಲ್ಲಿ ಇರುವಾಗ ಆತ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅವನು ಮತ್ತೊಬ್ಬರ ಅಡಿಯಾಳೆ, ಇತ್ತೀಚಿನ ದಿನಗಳಲ್ಲಂತೂ ಹೇಳುವವರು ಕೇಳುವವರಿಗೆ ಲೆಕ್ಕವಿಲ್ಲ, ವೃತ್ತಿಯಲ್ಲಿ ಮರ್ಯಾದೆಯನ್ನು ಹುಡುಕಬೇಕಾಗಿದೆ. ದಿನದ ಇಪ್ಪತ್ತನಾಲ್ಕು ಗಂಟೆಗಳು ಕಚೇರಿ ಕೆಲಸಗಳ ಕಡೆಗೆ ಗಮನ, ಮೊಬೈಲ್ ಬಳಕೆಗೆ ಬಂದ ನಂತರವಂತು ಬೆನ್ನಿಗೆ ಅಂಟಿಕೊಂಡ ಬೇತಾಳದಂತೆ, ಯಾವಾಗ ಯಾರು ಕರೆ ಮಾಡಿ ಸಮಸ್ಯೆ ಹೇಳುತ್ತಾರೋ ಎಂಬ ಭಯ, ಒಟ್ಟಿನಲ್ಲಿ ನೆಮ್ಮದಿಗೆ ಅವಕಾಶವೇ ಇಲ್ಲದ ವೃತ್ತಿಜೀವನ. ಇತೀಚಿನ ಪತ್ರಿಕೆಗಳಲ್ಲಿ ಸರ್ಕಾರಿ ನೌಕರರು ಒತ್ತಡಗಳನ್ನು ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳನ್ನು ನೋಡು ತ್ತಿದ್ದರೆ, ಸಾವನ್ನು ಬಯಸುವ ನೌಕರಿ ಯಾದರೂ ಏಕೆ ಬೇಕು ಎನಿಸಿಬಿಡುತ್ತದೆ.

morning walk

ಹಂಗಿನ ಅರಮನೆಗಿಂತ, ಇಂಗಡದ ಗುಡಿ ಲೇಸು, ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ ತಂಗುಳವೇ ಲೇಸು ಸರ್ವಜ್ಞ ಎನ್ನುವ ಹಾಗೆ ಯುವಕರು ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಜೀತದ ಆಳಾಗಿ ದುಡಿಯುವುದಕ್ಕಿಂತ ಸ್ವತಂತ್ರ ಉದ್ಯೋಗ ಹುಡುಕಿಕೊಳ್ಳುವುದು ಉತ್ತಮ. ಕ್ಯಾಥರೀನ್ ಪಲ್ಸಿಫರ್ ಎಂಬ ಲೇಖಕಿ ನಿವೃತ್ತಿಯ ಕುರಿತಾಗಿ ಉಲ್ಲೇಖಿಸಿರುವಂತೆ “ನಿವೃತ್ತಿ ಆದ ತರುವಾಯದ ಬದುಕು, ನೀವು ಕೆಲಸ ಮಾಡುವಾಗ ನೀವು ಆನಂದಿಸಲು ಎಂದಿಗೂ ಸಮಯವಿಲ್ಲದ ಎಲ್ಲಾ ವಿಷಯಗಳನ್ನು ಆನಂದಿಸುವ ಸುಸಮಯ" Retirement, a time to enjoy all the things you never had time to do when you worked.

ವೃತ್ತಿಯು ಸ್ವಂತದ್ದು, ಖಾಸಗಿ ಕಂಪನಿ ಅಥವಾ ಸರ್ಕಾರಿ ಇರಬಹುದು ಜೀವನವನ್ನು ಅಳುಕು ಆತಂಕಗಳು ಇಲ್ಲದೆ ಆನಂದಿಸಲು ಸಾಧ್ಯವೇ ಇಲ್ಲ. ಮನುಷ್ಯನ ಜೀವಿತಾವಧಿ ಎಷ್ಟು ಎಂಬುದು ನಿಖರವಾಗಿ ತಿಳಿಯದು, ಹಾಗಿರುವಾಗ ಅರವತ್ತು ದಾಟಿದ ನಂತರವೂ ಬದುಕಿದ್ದರೆ ದುಡಿದು ಬಸವಳಿಯುತ್ತಾನೆ. ಎಷ್ಟು ದಿನ ಬದುಕಿರುತ್ತಾನೋ ಇದ್ದಷ್ಟು ಸಮಯ ಸುಖ ಪಡಲಿ ಎಂಬುವ ಕಾರಣಕ್ಕೆ ನಾವೇ ವಿದಿಸಿಕೊಂಡ ನಿಯಮ, ಪ್ರಾರಂಭದಲ್ಲಿ ಇದು 55 ವರ್ಷಗಳಿದ್ದದ್ದು, 58 ಆಯಿತು ಈಗ 60ಕ್ಕೆ ನಿಂತಿದೆ.

ಅರವತ್ತಾದ ಮೇಲೂ ಕೆಲಸ ಮಾಡುತ್ತೇನೆಂದರೆ ಜೀವನದ ಅರ್ಥ ತಿಳಿಯದವನು ಎಂಬುದಾಗಿ ನಿರ್ಧರಿಸಬಹುದು. ನಿವೃತ್ತಿಯ ನಂತರ ಸುಖವಾಗಿರುತ್ತೀರಿ ಅನುಮಾನವೇ ಇಲ್ಲ, ಆದರೆ ನೀವು ನಿವೃತ್ತಿಯ ಸಮಯದ ಜೀವನಕ್ಕೆ ಆಗುವಷ್ಟು ಸಂಪಾದಿಸಿ ಇಟ್ಟಿರಬೇಕು (ವಯಸ್ಸು ನಲವತ್ತು ಇರುವಾಗಲೇ ಭವಿಷ್ಯದ ಬದುಕಿಗೆ ಉಳಿತಾಯ ಯೋಜನೆ ಮಾಡಿಕೊಂಡಿರಬೇಕು) ಅಥವಾ ವೆಚ್ಚಕ್ಕೆ ಆಗುವಷ್ಟು ಪಿಂಚಣಿ ಬರುತ್ತಿರಬೇಕು, ಇಲ್ಲದಿದ್ದರೆ ಉಸಿರು ನಿಲ್ಲುವವರೆಗೂ ಸುಖ, ಶಾಂತಿ, ನೆಮ್ಮದಿ ಗಳು ಕನಸಿನ ಮಾತು. ಮತ್ತೂ ಒಂದು ಸಮಸ್ಯೆ ಇದೆ, ಕುಟುಂಬದಲ್ಲಿ ಸಾಮರಸ್ಯ ಇಲ್ಲವಾದಲ್ಲಿ ಮಕ್ಕಳು ಹೆತ್ತವರನ್ನು ಕಡೆಗಣಿಸಿದರೆ ಅಥವಾ ಆರೋಗ್ಯ ಕೆಟ್ಟು ನರಳುತ್ತಿದ್ದರೆ ಹಣ, ಆಸ್ತಿ, ಅಂತಸ್ತು ಎಷ್ಟೇ ಇದ್ದರೂ ಉಪಯೋಗಕ್ಕೆ ಬರುವುದಿಲ್ಲ.

ಎಲ್ಲವೂ ಸರಿ ಇದ್ದಾಗ ವಿಶ್ರಾಂತ ಜೀವನದ ಸುಖ ಅನುಭವಿಸಲು ಬಹು ಸೊಗಸು. ದುಡಿಯಬೇಕು ನಿಜ, ಕುಳಿತು ತುಕ್ಕು ಹಿಡಿಯುವುದಕ್ಕಿಂತ ದುಡಿದು ಸವೆಯುವುದೇ ಲೇಸು. ಹಾಗಂತ ದುಡಿಯು ತ್ತಲೇ ಇರಿ ಎಂದರ್ಥವಲ್ಲ, ನಿವೃತ್ತಿಯ ತರುವಾಯ ಹೊಸಜೀವನ ಪ್ರಾರಂಭವಾಗುತ್ತದೆ, ಅದು ಹೇಗಿರುತ್ತದೆ ಎಂಬುದನ್ನು ನಾನೇ ಸ್ವತಃ ಅನುಭವಿಸುತ್ತಿರುವ ಬದುಕಿನ ಚಿತ್ರಣವನ್ನು ಇಡಬಯ ಸುವೆ. ಬಹುಶಃ ಇದು ಅಯ್ಯೋ ನಿವೃತ್ತಿ ಆಗಿಬಿಟ್ಟನಲ್ಲ, ನನಗೆ ವಯಸ್ಸು ಆಯಿತು ನನಗೆ ಯಾರು ಬೆಲೆ ಕೊಡುತ್ತಾರೆ, ಸೆಲ್ಯೂಟ್ ಹೊಡೆಯುತ್ತಿದ್ದವರಲ್ಲ ದೂರವಾಗಿದ್ದಾರೆ, ಪೊರ್ಟಿಕೋನಲ್ಲಿ ನನ್ನ ಕಾರು ನಿಲ್ಲುತಿದ್ದಂತೆ ಬಾಗಿಲು ತೆಗೆಯುವ ಜವಾನನಿಲ್ಲ, ಎಂಬ ಇತ್ಯಾದಿ ಯೋಚನೆಗಳನ್ನು ತಲೆ ಒಳಗೆ ತುಂಬಿಕೊಂಡಿರುವ ಹಲವರ ಮನಸ್ಸು ಹಗುರವಾಗಬಹುದು.

ಸರ್ವೀಸ್‌ನಲ್ಲಿ ಇದ್ದಾಗ ಟೆನ್ಶನ್.. ಟೆನ್ಶನ್.. ಈಗ ಸಮಯದ ಹಂಗಿಲ್ಲ, ಇಂತಿಷ್ಟೇ ಗಂಟೆಗೆ ಮಾಡಿ ಮುಗಿಸಬೇಕೆನ್ನುವ ಕಾಲಮಿತಿ ಇಲ್ಲ, ಹಾಗಾಗಿ ಅರವತ್ತರ ಗಡಿ ದಾಟಿದ ನನ್ನ ಮನಸ್ಸು ಒತ್ತಡಕ್ಕೆ ಒಳಗಾಗುವುದೇ ಇಲ್ಲ. ಬೆಳಗ್ಗೆ ನಿತ್ಯಕರ್ಮಗಳನ್ನು ಮುಗಿಸಿ ಬೇಗೆಬೇಗ ಹೊರಡ ಬೇಕೆಂಬ ಪ್ರಮೇಯ ವಿಲ್ಲ, ಹರಿಬಿರಿ ಇಲ್ಲದೆ ಸಾವಕಾಶವಾಗಿ ವಾಕಿಂಗ್ ಮುಗಿಸಿ ಬಂದೆನೆಂದರೆ ಬಿಸಿಬಿಸಿ ಕಾಫಿ ಹೀರುತ್ತಾ ಪತ್ರಿಕೆಗಳನ್ನು ಓದಿ ಮುಗಿಸಿ ಸ್ನಾನವೂ ಆಗಿಬಿಡುತ್ತದೆ. ಈಗ ಗಂಟೆ ಒಂಬತ್ತಾದರೂ ಮೊಬೈಲ್‌ಗೆ ಒಂದೂ ಕರೆ ಬರುವುದಿಲ್ಲ, ಮೊದಲು ರಿಂಗ್ ಕೇಳಿದರೆ ಸಾಕು ಆತಂಕ ಆಗಿಬಿಡುತ್ತಿತ್ತು.

ನನ್ನ ಗೆಳೆಯರ ಜೊತೆ ಮಾತನಾಡಬೇಕೆಂದರೆ ನಾನೇ ಕರೆ ಮಾಡಬೇಕು, ಇಲ್ಲದಿದ್ದರೆ ಬಹಳ ದಿನಗಳಿ ಗೊಮ್ಮೆ ಅವರ ಕರೆ ಬರುವುದನ್ನು ಕಾಯಬೇಕಾಗುತ್ತದೆ, ಇದಕ್ಕಿಂತ ನೆಮ್ಮದಿ ಎನಿದೆ?. ಹೋದೆಡೆಯೆಲ್ಲ ಹಿರಿಯ ನಾಗರಿಕನೆಂಬ ಗೌರವ ಹಾಗೂ ವಿಶೇಷ ರಿಯಾಯಿತಿ, ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಗೋಜಿಲ್ಲ, ಅಷ್ಟೇಕೆ ತಿರುಪತಿಯಲ್ಲೂ ದೇವರ ದರ್ಶನಕ್ಕೆ ವಿಶೇಷ ಪ್ರವೇಶ, ಕೆಲವು ಕಡೆಗಳಲ್ಲಿ ಮುದುಕನೆಂಬ ತಾತ್ಸಾರವು ಎದುರಾಗಬಹುದು, ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ, ಮುಂದೆ ಅವರಿಗೂ ವಯಸ್ಸಾಗುವುದಿಲ್ಲವೇ? ಮುಪ್ಪಾಯಿತೆಂದು ನಾನು ಸುಮ್ಮನೆ ಕೂರದೆ ವಯಸ್ಸಿಗೆ ಅನುಗುಣವಾಗಿ ಹಾಗೂ ದೇಹಕ್ಕೆ ಶ್ರಮವಾಗದ ಬುದ್ಧಿಗೆ ಚುರುಕತನ ಕೊಡುವ ಬರವಣಿಗೆಯ ಹವ್ಯಾಸವನ್ನು ಇಟ್ಟುಕೊಂಡಿದ್ದೇನೆ.

ಇದರಿಂದ ದಿನ ಕಳೆದಿದ್ದು ಗೊತ್ತಾಗುವುದೇ ಇಲ್ಲ, ಇಷ್ಟು ಬೇಗ ದಿನ ಕಳೆದುಹೋಯಿತಲ್ಲ ಎಂದು ಅನಿಸುವುದುಂಟು. ನನಗಿರುವ ಸದುದ್ದೇಶಗಳ ಹವ್ಯಾಸಗಳಿಂದಾಗಿ ಸಮಯವು ಸಾಕಾಗುತ್ತಿಲ್ಲ, ಇನ್ನು ಸಮಾನ ಮನಸ್ಸುಳ್ಳ ಸ್ನೇಹ ಬಳಗವಿದೆ, ಅವರೊಂದಿಗೆ ಕಳೆದ ದಿನಗಳನ್ನು ಮತ್ತೆಮತ್ತೇ ಹಂಚಿಕೊಳ್ಳುವುದರಿಂದ ಸಿಗುವ ಸುಖಕ್ಕೆ ಮಿತಿ ಎಲ್ಲಿದೆ?, ಮತ್ತೆ ಸಂಪಾದಿಸುವೆನೆಂದು ದುಡಿಯಲು ಪ್ರಾರಂಭಿಸಿದರೆ ಅದಕ್ಕಿಂತ ಮುರ್ಖತನ ಬೇರೊಂದಿಲ್ಲ. ವಯೋನಿವೃತ್ತಿ ಆದ ಕೆಲವೇ ವರ್ಷಗಳಲ್ಲಿ ಚಿಂತಾಕ್ರಾಂತರಾಗಿ ಬದುಕಿಗೆ ವಿದಾಯ ಹೇಳಿದವರ ಸಂಖ್ಯೆಯು ಕಡಿಮೆ ಇಲ್ಲ. ವಯೋಗೆಳೆಯರೇ ವಿಶ್ರಾಂತ ಬದುಕಿನಲ್ಲಿ ಸುಖವಿದೆ, ಅದನ್ನು ಕಂಡುಕೊಳ್ಳುವ ಜಾಣ್ಮೆಯನ್ನು ನಮ್ಮಲ್ಲಿ ನಾವು ಕಂಡು ಕೊಳ್ಳಬೇಕು, ಸಮಯ ಕಡಿಮೆ ಇದೆ ವಿಳಂಬ ಮಾಡದೆ ಆ ಸುಖದ ದಾರಿಯನ್ನು ನಿಮ್ಮ ಜೀವನದಲ್ಲಿ ಕಂಡುಕೊಳ್ಳಿ. ಅದಕ್ಕಿಂತ ಮೊದಲು ನನಗೆ ವಯಸ್ಸಾಗಿದೆ ಎಂಬುದನ್ನು ಮನಸ್ಸಿನಿಂದ ಕಿತ್ತು ಬಿಸಾಡಿ.