ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ದೇವರಾತರೆಂಬ ಪುರಾಣಪುರುಷರಿಂದ ಬಂತಂತೆ ಆ ಹೆಸರು !

ಕೆಲ ವರ್ಷಗಳ ಹಿಂದೆ ನಾನೊಮ್ಮೆ ಮಂಗಳೂರು ಆಕಾಶವಾಣಿ ನಿಲಯಕ್ಕೆ ಹೋಗಿದ್ದಾಗ ಅಲ್ಲಿ ಮುಖತಃ ಭೇಟಿಯಾಗಿದ್ದೆ. ಅವರು ಮಂಗಳೂರು ಆಕಾಶವಾ ಣಿಯಲ್ಲಿ ಕಾರ್ಯಕ್ರಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಅವರ ನಿರ್ಮಾಣದ ಕೆಲವು ರೇಡಿಯೊ ರೂಪಕಗಳನ್ನೂ ಯುಟ್ಯೂಬ್ ಮೂಲಕ ಕೇಳಿದ್ದೇನೆ. ‘ಹೆಡಿಗೆ ಕೂಸನ ಆಧ್ಯಾತ್ಮಿಕ ಜೀವನ’, ‘ಅತಂತ್ರನೊಬ್ಬನ ಆತ್ಮಚರಿತ್ರ’ ಮುಂತಾದುವು ಯಾರನ್ನೇ ಆದರೂ ಗಾಢವಾಗಿ ತಟ್ಟುವಂಥವು.

ದೇವರಾತರೆಂಬ ಪುರಾಣಪುರುಷರಿಂದ ಬಂತಂತೆ ಆ ಹೆಸರು !

-

ತಿಳಿರು ತೋರಣ

ಪುರಾಣದಲ್ಲಿ ಇಬ್ಬರು ದೇವರಾತರಿದ್ದಾರೆ. ಒಬ್ಬ ಶಿವನಿಂದ ಶಿವಧನುಸ್ಸನ್ನು ಪಡೆದ ದೇವರಾತ. ಇವನ ಮೊಮ್ಮಗನ ಮೊಮ್ಮಗನ ಮೊಮ್ಮಗ- ಅಂದರೆ ಆರನೆಯ ತಲೆಮಾರಿನವನೇ ಮಿಥಿಲೆಯ ಸೀರಧ್ವಜ ಜನಕ ಮಹಾರಾಜ. ಸೀತೆ ಮತ್ತು ಊರ್ಮಿಳೆಯರ ತಂದೆ. ಇನ್ನೊಬ್ಬ ದೇವರಾತನೆಂದರೆ ಅಂಗೀರಸ ಗೋತ್ರದ ಅಜೀಗರ್ತನೆಂಬ ಲಫಂಗ ಬ್ರಾಹ್ಮಣನ ಎರಡನೆಯ ಮಗ- ಶುನಶ್ಶೇಪ. ಈ ಕುಡುಕ ಬ್ರಾಹ್ಮಣನ ಮೂರೂ ಮಕ್ಕಳ ಹೆಸರಿನ ಅರ್ಥ ನಾಯಿಬಾಲ ಎಂದೇ!

ಅಲ್ಪಸ್ವಲ್ಪವಾದರೂ ಅಗೆವ ಬುದ್ಧಿ (ಮತ್ತು ಅದಕ್ಕೆ ತಕ್ಕಷ್ಟು ಆಸಕ್ತಿ ಹಾಗೂ ಆಕರಗಳು) ಇದ್ದರೆ ಅರಿವಿನ ಅಮೂಲ್ಯ ನಿಧಿಗಳು ಸಿಗುತ್ತವೆ- ಎನ್ನುವುದಕ್ಕೆ ಇನ್ನೂ ಒಂದು ಉದಾಹರಣೆಯನ್ನು ಇಂದಿನ ಅಂಕಣದಲ್ಲಿ ನಿಮ್ಮೊಡನೆ ಹಂಚಿಕೊಳ್ಳಬೇಕೆಂದಿದ್ದೇನೆ. ಇನ್ನೂ ಒಂದು ಎಂದಿದ್ದೇಕೆಂದರೆ ಕೆಲ ವಾರಗಳ ಹಿಂದೆಯಷ್ಟೇ ‘ಚರಣಶೃಂಗರಹಿತ ಸ್ತೋತ್ರವೂ ಪತಂಜಲಿಯ ಕಥೆಯೂ’ ಬರೆಯುವಾಗ, ಮತ್ತು ಅದಕ್ಕಿಂತಲೂ ಹಿಂದೆ ಒಂದೆರಡು ಸಲ, ಇದೇ ರೀತಿಯ ಪೀಠಿಕೆ ಬಳಸಿದ್ದೇನೆ. ಈ ಬಾರಿ ಅಗೆವಾಗ ಯಾವ ಹೊಸ ಅರಿವಿನ ನಿಧಿ ತೆರೆದುಕೊಂಡಿತು ಮತ್ತು ಅಗೆತಕ್ಕೆ ಯಾವುದು ನಿಮಿತ್ತವಾಯಿತು ಎಂದು ವಿವರಿಸುತ್ತೇನೆ. ಕೆಲದಿನಗಳ ಹಿಂದೆ-ನಿಖರವಾಗಿ ಹೇಳಬೇಕೆಂದರೆ ಜುಲೈ 7ರಂದು- ವಿಶ್ವವಾಣಿ ಪತ್ರಿಕೆಯಲ್ಲಿ “ಧರೆ ಹೊತ್ತಿ ಉರಿದರೆ ನಿಲಬಹುದೆ?" ಶೀರ್ಷಿಕೆಯ ಒಂದು ಲೇಖನ ಪ್ರಕಟವಾಗಿದ್ದನ್ನು ನೀವು ಓದಿರಲೂಬಹುದು. ಬೆಂಗಳೂರಿನ ಕ್ಯಾಪ್‌ಜೆಮಿನಿ ಸಂಸ್ಥೆ ತನ್ನ ಉದ್ಯೋಗಿಗಳ ಪುಟ್ಟಮಕ್ಕಳಿಗಾಗಿ ನಡೆಸುವ ಶಿಶುಮಂದಿರದಲ್ಲಿ ಅದರ ಸಿಬ್ಬಂದಿ ಆ ಮಕ್ಕಳೊಡನೆ ತೋರಿದ ಅಮಾನುಷ ಕ್ರೌರ್ಯ, ಮತ್ತು ಅಂತಹ ವೈಪರೀತ್ಯಗಳು ಸಂಭವಿಸು ವುದಕ್ಕೆ ಕಾರಣವೇನಿರಬಹುದು ಎಂಬ ಚಿಂತನೆ ಆ ಲೇಖನದಲ್ಲಿದ್ದವು.

ಅದನ್ನು ಬರೆದವರು ಮಂಗಳೂರಿನ ದೇವು ಹನೆಹಳ್ಳಿ. ಅವರು ಆಗೊಮ್ಮೆ ಈಗೊಮ್ಮೆ ಹೀಗೆ ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಸಮಸ್ಯೆಗಳು, ಪರಿಸರ ಇತ್ಯಾದಿ ಕುರಿತು ಆಳವಾದ ಚಿಂತನೆಗಳನ್ನು ಬರೆಯು ತ್ತಿರುತ್ತಾರೆ. ಸಂಸ್ಕೃತಿ ಮತ್ತು ಜಾನಪದದ ಉಳಿವಿನ ಬಗ್ಗೆಯೂ ಅವರದು ವಿಶೇಷ ಕಾಳಜಿ. ಎಷ್ಟೆಂದರೂ ಶಿವರಾಮ ಕಾರಂತರನ್ನು ಅಭ್ಯಸಿಸಿದವರು ಮತ್ತು ಅವರಿಂದ ಪ್ರೇರಣೆ ಪಡೆದವರು. ದೇವು ಹನೆಹಳ್ಳಿ ಯವರ ಅಷ್ಟಿಷ್ಟು ಪರಿಚಯ ನನಗಿದೆ.

ಇದನ್ನೂ ಓದಿ: Srivathsa Joshi Column: ಚೆಂಡಿನ ಮೈತುಂಬ ಕೂದಲಿದ್ದರೆ ಬಾಚುವುದು ಸಾಧ್ಯವೇ ?

ಕೆಲ ವರ್ಷಗಳ ಹಿಂದೆ ನಾನೊಮ್ಮೆ ಮಂಗಳೂರು ಆಕಾಶವಾಣಿ ನಿಲಯಕ್ಕೆ ಹೋಗಿದ್ದಾಗ ಅಲ್ಲಿ ಮುಖತಃ ಭೇಟಿಯಾಗಿದ್ದೆ. ಅವರು ಮಂಗಳೂರು ಆಕಾಶವಾ ಣಿಯಲ್ಲಿ ಕಾರ್ಯಕ್ರಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಅವರ ನಿರ್ಮಾಣದ ಕೆಲವು ರೇಡಿಯೊ ರೂಪಕಗಳನ್ನೂ ಯುಟ್ಯೂಬ್ ಮೂಲಕ ಕೇಳಿದ್ದೇನೆ. ‘ಹೆಡಿಗೆ ಕೂಸನ ಆಧ್ಯಾತ್ಮಿಕ ಜೀವನ’, ‘ಅತಂತ್ರನೊಬ್ಬನ ಆತ್ಮಚರಿತ್ರ’ ಮುಂತಾದುವು ಯಾರನ್ನೇ ಆದರೂ ಗಾಢವಾಗಿ ತಟ್ಟುವಂಥವು.

ಪಿ.ಕಾಳಿಂಗ ರಾಯರ ಬಗೆಗಿನ ‘ತುಂಬಿದ ಕೆರೆ’ ಸಹ ಉತ್ಕೃಷ್ಟವೇ. ಮಂಗಳೂರು ಆಕಾಶವಾಣಿಯ ಕೋಗಿಲೆಕಂಠ ನಾರಾಯಣಿ ದಾಮೋದರ್ ನಿರೂಪಣೆ ಯಿಂದಾಗಿ ಆ ರೂಪಕಗಳಿಗೆ ಮತ್ತಷ್ಟು ಮೆರುಗು. ಇದಲ್ಲದೆ ಭಾಷಾಶುದ್ಧಿ, ಈಗಿನ ಮಾಧ್ಯಮಗಳಲ್ಲಿ ಪದಬಳಕೆಯ ವೈಚಿತ್ರ್ಯ ಮುಂತಾದುವುಗಳ ಬಗ್ಗೆಯೂ ಸಮಾನಾ ಸಕ್ತಿಯಿಂದಾಗಿ ದೇವು ಅವರೊಡನೆ ನನ್ನ ವಿಚಾರವಿನಿಮಯ ಆಗಾಗ ನಡೆಯುತ್ತಿರುತ್ತದೆ.

ವಿಶ್ವವಾಣಿಯೂ ಸೇರಿದಂತೆ ಕನ್ನಡದ ಬಹಳಷ್ಟು ಪತ್ರಿಕೆಗಳಲ್ಲಿ ಹಲವು ವರ್ಷಗಳಿಂದಲೂ ಬರೆಯು ತ್ತಿರುವ ಇನ್ನೊಬ್ಬ ಸಹೃದಯಿ ಕನ್ನಡಿಗ ಆನಂದರಾಮ ಶಾಸ್ತ್ರಿಯವರೂ ನನಗೆ ಪರಿಚಿತರು ಮತ್ತು ಆತ್ಮೀಯರೇ. ಈಗವರು ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವವರಾದರೂ ಮೂಲತಃ ದಾವಣಗೆರೆಯವರು. ನಾನೂ ಎಂಜಿನಿಯರಿಂಗ್ ಓದಿನ ನಾಲ್ಕು ವರ್ಷಗಳ ಮಟ್ಟಿಗೆ ದಾವಣಗೆರೆಯ ಮಣ್ಣಿನ ವಾಸನೆ (ಮತ್ತು ಬೆಣ್ಣೆದೋಸೆ, ಮಿರ್ಚಿಬಜ್ಜಿ ನರ್ಗಿಸ್ ಮಂಡಕ್ಕಿಯ ಘಮ) ಹೀರಿದವನೇ ಎಂಬ ಅಂಶ ಇತರ ಸಮಾನಾಭಿರುಚಿ ಸಮಾನ ಧೋರಣೆಗಳ ಜೊತೆ ಸೇರಿ ನಮ್ಮಿಬ್ಬರ ಸ್ನೇಹವನ್ನು ಹೆಚ್ಚು ಬಲಪಡಿಸಿದೆ. ಆನಂದರಾಮ ಶಾಸ್ತ್ರಿಯವರನ್ನೂ ನಾನು ಸುಮಾರು 15 ವರ್ಷಗಳ ಹಿಂದೆಯೇ ಒಮ್ಮೆ ಬೆಂಗಳೂರಿನಲ್ಲಿ ಮುಖತಃ ಭೇಟಿಯಾಗಿದ್ದೇನೆ. ಈಗಲೂ ಸಾಮಾನ್ಯವಾಗಿ ಪ್ರತಿದಿನವೂ ಏನಾದರೊಂದು ಪನ್ನು-ಫನ್ನು ಚೊಗರು-ಚೋದ್ಯದ ನೆಪದಲ್ಲಿ ವಾಟ್ಸ್‌ಆಪ್‌ನಲ್ಲಿ ನಮ್ಮಿಬ್ಬರ ಮುಖಾಮುಖಿ ನಡೆದಿರುತ್ತದೆ.

62 ok

ಹಾಗೆ ಮೊನ್ನೆ ಇದೇ “ಧರೆ ಹೊತ್ತಿ ಉರಿದರೆ ನಿಲಬಹುದೆ?" ಶೀರ್ಷಿಕೆಯ ಲೇಖನದ ಪ್ರಸ್ತಾವ ಬಂತು. ಇಂತಹ ಸಕಾಲಿಕ ಲೇಖನಗಳು ಹೆಚ್ಚುಹೆಚ್ಚು ಜನರ ಓದಿಗೆ, ಮಂಥನಕ್ಕೆ ಒದಗಬೇಕು ಎಂದು ನಾವಿಬ್ಬರೂ ಮಾತಾಡಿಕೊಂಡೆವು. ಆ ಸಂದರ್ಭದಲ್ಲೇ ಶಾಸ್ತ್ರಿಯವರೆಂದರು “ದೇವು ನನ್ನ ಸೋದರತ್ತೆಯ ಮೊಮ್ಮಗ. ಆತನ ಪ್ರತಿಭೆಯ ಬಗ್ಗೆ ಇನ್ನಷ್ಟು ಹೇಳುವುದಿದೆ" ಎಂದು. ಅರೆರೆ! ಪ್ರತ್ಯೇಕವಾಗಿ ಇಬ್ಬರನ್ನೂ ಬಲ್ಲ, ಆತ್ಮೀಯತೆ ಬೆಳೆಸಿಕೊಂಡಿರುವ ನನಗೆ ಅವರಿಬ್ಬರ ರಕ್ತಸಂಬಂಧದ ಮಾಹಿತಿ ಹೊಸತು! ಆದ್ದರಿಂದಲೇ ಒಂದು ವಿಶೇಷ ಖುಷಿ ಕೊಟ್ಟ ವಿಚಾರವೂ ಹೌದು. ನನ್ನ ಖುಷಿಯನ್ನು ದೇವು ಅವರಿಗೆ ತಿಳಿಸಿದೆ. “ನಿಮ್ಮ ಲೇಖನವನ್ನು ಆನಂದರಾಮ ಶಾಸ್ತ್ರಿಯವರೂ ಮೆಚ್ಚಿದ್ದಾರೆ. ಅಲ್ಲದೇ ನೀವಿಬ್ಬರೂ ರಕ್ತಸಂಬಂಧವುಳ್ಳ ವರು ಎಂಬ ವಿಚಾರವನ್ನೂ ತಿಳಿಸಿದ್ದಾರೆ!" ಎಂದೆ. ಅದಕ್ಕೆ ದೇವು “ಹೌದು. ಅವರು ಸೂರಾಲು ಅರಮನೆಯ ಶಾನುಭಾಗರ ಕುಟುಂಬದವರು. ಮೂಲತಃ ಸೋಮಯಾಜಿ ಮನೆತನ. ಅವರ ತಂದೆ ಭುಜಂಗ ಸೋಮ ಯಾಜಿಯವರು ಮಾತ್ರ ದಾವಣಗೆರೆಗೆ ಹೋದ ಮೇಲೆ ಶಾಸ್ತ್ರಿಯಾದರು. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಪಾಂಡೇಶ್ವರ ಕಾಳಿಂಗರಾಯರು ಹುಟ್ಟಿದ್ದು ಇವರ ಮನೆಯಲ್ಲಿಯೇ!

ಕಾಳಿಂಗರಾಯರಿಗೆ ಸಂಗೀತದೀಕ್ಷೆ ಕೊಡಿಸಿದವರೂ ಭುಜಂಗರಾಯರೇ. ಇಬ್ಬರೂ ಜತೆಯಾಗಿ ಸೂರಾಲು ಅರಮನೆಯ ಪದ್ಮನಾಭಯ್ಯನವರಲ್ಲಿ ಸಂಗೀತ ಕಲಿತವರು. ಕಾಳಿಂಗರಾಯರು ಅದರಲ್ಲಿಯೇ ಮುಂದುವರಿದರು. ಕಾಳಿಂಗರಾಯರ ಉಚ್ಛೃಂ ಖಲ ನಡವಳಿಕೆಗಾಗಿ ಅವರನ್ನು ಆಕ್ಷೇಪಿಸುವ ಸ್ವಾತಂತ್ರ್ಯ, ಧೈರ್ಯ ಇದ್ದದ್ದು ಭುಜಂಗರಾಯರಿಗೆ ಮಾತ್ರ!

ಸೋಮಯಾಜಿ ಕುಟುಂಬದ ಬಹುತೇಕ ಎಲ್ಲ ಕುಡಿಗಳು ಕಲಾವಿದರು, ಬರಹ ಗಾರರು, ಬುದ್ಧಿಜೀವಿಗಳು. ತದ್ವಿರುದ್ಧವಾಗಿ ಅವರ ಬಂಧುಗಳಾದ ನಾವು ಕೂರಾಡಿ ಕಲ್ಕೂರರು ಶುದ್ಧ ಕಿರಾತರು!" ಎಂದು ಉತ್ತರಿಸಿ ಒಂದು ಮಂದಹಾಸಮುದ್ರೆಯನ್ನೂ ಸೇರಿಸಿದರು. ಅದನ್ನು ಯಥಾವತ್ತಾಗಿ ಆನಂದರಾಮ ಶಾಸ್ತ್ರಿ ಯವರಿಗೆ ವರದಿಯೊಪ್ಪಿಸಿದೆ. ಆಗ ಅವರ ಉವಾಚ: “ಕೆಟ್ಟದ್ದನ್ನು ಬೇಟೆಯಾಡಿ ಕೊಲ್ಲುವ ‘ಕಿರಾತ’ರ ಆವಶ್ಯಕತೆ ಇಂದು ಸಮಾಜದಲ್ಲಿ ತುಂಬ ಇದೆ. ಆದ್ದರಿಂದ, ದೇವು ಎಂಬ ಕಿರಾತನು ಇಂದಿನ ಸಮಾಜಕ್ಕೆ ಒಂದು ಬಗೆಯಲ್ಲಿ ದೇವ. ಈ ವಿಷಯದಲ್ಲಿ ನಾನೂ ಕಿರಾತನೇ. ನನ್ನ ಇಬ್ಬರು ತಮ್ಮಂದಿರು ಮಾತ್ರ ‘ಅಂದರಿಕಿ ಮಂಚಿವಾಡು’ ಗಳು. ಇನ್ನು, ಒಳ್ಳೆಯದನ್ನು ಮನದಲ್ಲಿ ತುಂಬಿ ಹೊರಗೆಲ್ಲ ಹರಿಸಲು ಶ್ರೀವತ್ಸ ಜೋಶಿ ಇದ್ದಾರೆ.

ದೇವುನ ತಂದೆ (ನನ್ನ ಭಾವ) ಕೂರಾಡಿ ಸದಾಶಿವ ಕಲ್ಕೂರರು ‘ತಾಳಮದ್ದಳೆ ಕಲ್ಕೂರರು’ ಎಂದು ಹೆಸರುವಾಸಿ ಆಗಿದ್ದ ವಿದ್ವಾಂಸರು. ನಿಜಾರ್ಥದಲ್ಲಿ ‘ದೇವಾನಾಂಪ್ರಿಯ’ರು. ಸಕಲಜೀವಿಗಳ ಲೇಸನ್ನೇ ಬಯಸುವ, ದೇರ್ ಫೋರ್ ದೇವರು ಮೆಚ್ಚುವ ಜೀವ ಅವರದಾಗಿತ್ತು. ಅವರ ರಚನೆಯೊಂದು ಸ್ನಾತಕೋತ್ತರ ಪಠ್ಯವಾಗಿ ಆಯ್ಕೆಯಾಗಿತ್ತು. ಅವರು ಸ್ನಾತಕೋತ್ತರ ವಿದ್ಯಾರ್ಥಿ ಆಗಿದ್ದಾಗ

ಆ ಪಠ್ಯಪುಸ್ತಕದಲ್ಲಿಯ ತಮ್ಮದೇ ರಚನೆಯನ್ನು ಅಭ್ಯಸಿಸಬೇಕಾಗಿ ಬಂತು." ಇವೆಲ್ಲ ನನಗೆ ಗೊತ್ತೇ ಇರದಿದ್ದ ವಿಚಾರಗಳು! ಕಾರಣ ಭಾಗಶಃ ನನ್ನ ಸ್ವಭಾವವೂ ಇರಬಹುದು. ಎಂಥದೇ ಆತ್ಮೀಯತೆ ಸ್ನೇಹ ಸಲುಗೆ ಬೆಳೆಸಿಕೊಂಡರೂ ಯಾರಲ್ಲೂ ನಾನು ಜಾತಿಮತ ಕುಲಗೋತ್ರ ವಂಶವಾಹಿನಿ ಗಳನ್ನೆಲ್ಲ ಕೇಳುವ ಪರಿಪಾಟವೇ ಇಲ್ಲ.

ಅನಗತ್ಯವಾಗಿ ಊಹಿಸುವ ಅಂದಾಜಿಸುವ ಗೋಜಿಗೂ ಹೋಗುವುದಿಲ್ಲ. ಆದರೆ ಆವತ್ತು ಬೇರೆಯೇ ಒಂದು ಕುತೂಹಲ ಚಿಗುರೊಡೆಯಿತು. “ದೇವು ಅವರ ಪೂರ್ಣ ಹೆಸರೇನು? ದೇವಾನಂದ? ದೇವಾನಾಂಪ್ರಿಯ?" ಎಂದು- ದೇವು ಹನೆಹಳ್ಳಿಯವರನ್ನಲ್ಲ, ಆನಂದಶಾಸ್ತ್ರಿಯವರನ್ನು ಕೇಳಿದೆ!

ಇಷ್ಟುದಿನ ನಾನು ಆ ಬಗ್ಗೆ ಯೋಚಿಸಿರಲಿಲ್ಲ. ದೇವಾನಂದ, ದೇವರಾಯ, ದೇವೇಂದ್ರ, ದೇವರಾಜ ಇತ್ಯಾದಿ ಸಾಮಾನ್ಯವಾಗಿ ಮನುಷ್ಯರಿಗೂ ಇಡುವ ಹೆಸರುಗಳ ಪೈಕಿಯೇ ಯಾವುದೋ ಒಂದು ಇರಬಹುದು; ಅಥವಾ ಯಕ್ಷಗಾನ ಸಾಂಸ್ಕೃತಿಕ ರಂಗದಲ್ಲಿ ಪ್ರಸಿದ್ಧರಾಗಿದ್ದ ಒಬ್ಬರು ‘ದೇವರು ಹೆಗಡೆ’ ಅವರಂತೆ ದೇವರು ಎಂದೇ ಹೆಸರಿರಬಹುದು; ಅದರ ಹ್ರಸ್ವ ರೂಪವೇ ದೇವು ಇರಬಹುದು ಎಂದುಕೊಂಡಿದ್ದೆ. ದೇವಾನಾಂಪ್ರಿಯ ಅಂತಿರಲಿಕ್ಕಿಲ್ಲವೆಂದು ಗೊತ್ತಿತ್ತು, ಆದರೂ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿ ಸಾಮ್ರಾಟ ಅಶೋಕನನ್ನು ಕುರಿತ ಪಾಠದಲ್ಲಿ ಓದಿದ್ದ “ಅಶೋಕನು ಶಾಸನಗಳಲ್ಲಿ ತನ್ನನ್ನು ದೇವಾನಾಂಪ್ರಿಯ ಪ್ರಿಯದರ್ಶಿ ಎಂದು ಕರೆದುಕೊಂಡಿದ್ದಾನೆ" ವಾಕ್ಯವನ್ನು ನೆನಪಿಸಿಕೊಂಡು, ಶಾಸ್ತ್ರಿಯವರ ಬಳಿ ಹಾಗೆ ಕೇಳಿದ್ದೆ. ಅವರು ಕೊಟ್ಟ ಉತ್ತರ ಬೇರೆಯೇ ಇತ್ತು: “ದೇವರಾತ. ದೇವರಾತನು ದೇವು ಆದದ್ದು ಒಂದು ಬಗೆಯಲ್ಲಿ ಅವಧೂತ ಪದದೆಡೆಗೆ ಪ್ರಥಮ ಹೆಜ್ಜೆ." ಅದೂ ನನಗೆ ಹೊಸ ವಿಚಾರವೇ. ದೇವರಾತ ಇದುವರೆಗೆ ನಾನು ಕೇಳರಿಯದ ಹೆಸರು!

ಈಗ ಧೈರ್ಯದಿಂದ ದೇವು ಅವರನ್ನೇ ಕೇಳಿದೆ. ವಿವರವಾಗಿ ಉತ್ತರಿಸಿದರು: “ಪುರಾಣದಲ್ಲಿ ಇಬ್ಬರು ದೇವರಾತರಿದ್ದಾರೆ. ಒಬ್ಬ ಶಿವನಿಂದ ಶಿವಧನುಸ್ಸನ್ನು ಪಡೆದ ದೇವರಾತ. ಇವನ ಮೊಮ್ಮಗನ ಮೊಮ್ಮಗನ ಮೊಮ್ಮಗ- ಅಂದರೆ ಆರನೆಯ ತಲೆಮಾರಿನವನೇ ಮಿಥಿಲೆಯ ಸೀರಧ್ವಜ ಜನಕ ಮಹಾರಾಜ. ಸೀತೆ ಮತ್ತು ಊರ್ಮಿಳೆಯರ ತಂದೆ. ಇನ್ನೊಬ್ಬ ದೇವರಾತನೆಂದರೆ ಅಂಗೀರಸ ಗೋತ್ರದ ಅಜೀಗರ್ತನೆಂಬ ಲಫಂಗ ಬ್ರಾಹ್ಮಣನ ಎರಡನೆಯ ಮಗ- ಶುನಶ್ಶೇಪ. ಈ ಕುಡುಕ ಬ್ರಾಹ್ಮಣನ ಮೂರೂ ಮಕ್ಕಳ ಹೆಸರಿನ ಅರ್ಥ ನಾಯಿಬಾಲ ಎಂದೇ!

ಶುನಪುಚ್ಛ, ಶುನಶ್ಶೇಪ ಮತ್ತು ಶುನಲಾಂಗೂಲ. ಬಡ ಅಜೀಗರ್ತನು ದನ ಮತ್ತು ಧನಕ್ಕಾಗಿ ಮಧ್ಯಮನನ್ನು ಸತ್ಯಹರಿಶ್ಚಂದ್ರನಿಗೆ ಮಾರುತ್ತಾನೆ. ಯಜ್ಞದ ಬಲಿಪಶುವಾದ ಈ ಬಾಲಕನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ವರುಣ ಅವನನ್ನು ತ್ಯಜಿಸಿಹೋದಾಗ ಹುಡುಗ ಲಫಂಗ ಅಪ್ಪನ ಬಳಿ ಹೋಗಲು ನಿರಾಕರಿಸುತ್ತಾನೆ. ಯಜ್ಞದ ಅಧ್ವರ್ಯುವಾದ ವಿಶ್ವಾಮಿತ್ರನೇ ಅವನನ್ನು ದತ್ತು ಸ್ವೀಕಾರ ಮಾಡುತ್ತಾನೆ. ಆದ್ದರಿಂದ ನಾವು ಕೂರಾಡಿಯ (ಮುದ್ರಾಡಿ, ನರಸೀಪುರ, ನೀಲಾವರ, ಉಪ್ಪೂರು, ತೆಂಕನಿಡಿಯೂರು) ಕಲ್ಕೂರರು ವಿಶ್ವಾಮಿತ್ರ ಗೋತ್ರ ದೇವರಾತ ಪ್ರವರ. ಆದ್ದರಿಂದಲೇ ವಿಶ್ವಾಮಿತ್ರ ಮತ್ತು ಅಂಗೀರಸ ಗೋತ್ರಗಳೆರಡೂ ವೈವಾಹಿಕ ಸಂಬಂಧಕ್ಕೆ ಆಗದು.

ಆದ್ದರಿಂದಲೇ ಗೋತ್ರದ ರಗಳೆಯೇ ಬೇಡವೆಂದು ‘ಬಳಿ’ಯ ಬಳಿ ಸಾರಿ ಒಬ್ಬಾಕೆ ಚೆಂದುಳ್ಳಿ ಚೆಲುವೆ ಯನ್ನು ಥೇಟ್ ಕಿರಾತನಂತೆಯೇ ಅಪಹರಿಸಿ ವಿವಾಹವಾದೆ! ಯಾವುದೋ ವಿಷಾದ, ವಿಷಣ್ಣ, ತಿರಸ್ಕಾರದ ಕ್ಷಣದಲ್ಲಿ ಆ ಎಲ್ಲ ತಂತುಗಳು ಬೇಡವೆನ್ನಿಸಿ ಎಲ್ಲವನ್ನೂ ತ್ಯಜಿಸಿ ದೇವು ಆದೆ. ಸರಿಯೋ ತಪ್ಪೋ ಎಂಬ ಜಿಜ್ಞಾಸೆ ಇದ್ದೇ ಇದೆ; ಖೇದವೇನೂ ಇಲ್ಲ." ನನಗೆ ಭಗವದ್ಗೀತೆಯಲ್ಲಿ ಕಲಿತ “ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ..." ಶ್ಲೋಕ ನೆನಪಾಯಿತು.

ತಿಳಿವನ್ನು ನಿಜ ಕಂಡು ತಿಳಿದವರು ನಿನಗೆ ತಿಳಿಹೇಳುತ್ತಾರೆ, ಪರಿಪರಿಯಿಂದ ಕೇಳಿ ಅದನ್ನು ತಿಳಿದುಕೋ ಎಂದು ಕೃಷ್ಣಪರಮಾತ್ಮ ಅರ್ಜುನನಿಗೆ ಹೇಳಿದ್ದು. ಮತ್ತೆ ನೋಡಿದರೆ ನನ್ನಲ್ಲಿರುವ ‘ಪುರಾಣನಾಮ ಚೂಡಾಮಣಿ’ಗ್ರಂಥದಲ್ಲೂ ಅಜೀಗರ್ತ, ದೇವರಾತ, ಶುನಶ್ಶೇಪ... ಮುಂತಾದ ಎಲ್ಲ ಹೆಸರುಗಳೂ ಅವುಗಳ ಹಿಂದಿನ ಕಥೆಗಳೂ ಇವೆ!

ನಿರ್ದಿಷ್ಟವಾಗಿ ‘ದೇವರಾತ’ ಹೆಸರನ್ನು ಕುರಿತು ಹೀಗೆ ಕೊಡಲಾಗಿದೆ: “ಸೀತೆಯ ಪಾಲಕ ಪಿತನಾದ ಸೀರಧ್ವಜ ಜನಕನ ಹಿಂದಣ ಆರನೆಯ ತಲೆಯ ಅರಸು. ಪರಮೇಶ್ವರನು ದಕ್ಷಯಜ್ಞ ಸಂಹಾರಾನಂತರ, ತನ್ನ ಬಿಲ್ಲಿಗೆ ಹೆದೆಯನ್ನು ಬಿಗಿದು ದೇವತೆಗಳನ್ನು ಕಂಡು, ‘ಎಲೈ ಮೂಢರಾದ ದೇವತೆಗಳಿರಾ, ನೀವು ದಕ್ಷ ಮಾಡಿದ ಯಜ್ಞದಲ್ಲಿ ನನಗೆ ಸಲ್ಲಬೇಕಾದ ಭಾಗವನ್ನು ಸಲ್ಲಿಸದೆ ನೀವೇ ತೆಗೆದುಕೊಂಡಿದ್ದರಿಂದ ನಿಮ್ಮ ತಲೆಗಳನ್ನೆಲ್ಲ ಈ ಬಿಲ್ಲಿನಿಂದ ಉರುಳಿಸುವೆ ಎಂದು ಹೆದರಿಸಿದನು.

ಬಳಿಕ ದೇವತೆಗಳೆಲ್ಲರೂ ಕಂಗೆಟ್ಟು ‘ಮಹಾ ಪ್ರಭೋ, ಕರುಣಾನಿಧೇ, ತ್ರಾಹಿ ತ್ರಾಹಿ ಎಂದು ಮೊರೆಯಿಟ್ಟು ಆತನನ್ನೇ ಮರೆ ಹೊಕ್ಕರು. ಆಗ ಪರಮೇಶ್ವರ ಪ್ರಸನ್ನನಾಗಿ, ತನ್ನ ಬಿಲ್ಲನ್ನು ದೇವತೆಗಳ ವಶಕ್ಕೆ ಕೊಟ್ಟನು. ದೇವತೆಗಳು ಆ ಬಿಲ್ಲನ್ನು ದೇವರಾತನಲ್ಲಿ ನ್ಯಾಸವಾಗಿರಿಸಿದ್ದರು. ದೇವರಾತ ಆ ಬಿಲ್ಲನ್ನು ಮಂತ್ರಿಸಿ ತನ್ನ ಮನೆಯಲ್ಲಿಟ್ಟುಕೊಂಡಿದ್ದನು. ಸೀತಾಸ್ವಯಂವರ ಸಮಯದಲ್ಲಿ ಸೀರಧ್ವಜ ಜನಕನು ಅದೇ ಬಿಲ್ಲನ್ನೇ ಪಣವಾಗಿಟ್ಟನು. ಶ್ರೀರಾಮಚಂದ್ರನು ಅದನ್ನು ಮುರಿದು ಸೀತೆಯನ್ನು ಮದುವೆಯಾದನು."

ಇನ್ನೊಬ್ಬ ದೇವರಾತ(ಶುನಶ್ಶೇಪ)ನ ಕಥೆಯೂ ಕುತೂಹಲಕಾರಿಯೇ. ಇಕ್ಷ್ವಾಕು ವಂಶದ ರಾಜ ಹರಿಶ್ಚಂದ್ರ ನಿಗೆ ಮಕ್ಕಳಿರಲಿಲ್ಲ. ಆತ ಸಂತಾನಕ್ಕಾಗಿ ವರುಣ ದೇವನನ್ನು ಪ್ರಾರ್ಥಿಸುತ್ತಾನೆ. ವರುಣನು “ಮಗನು ಹುಟ್ಟಿದ ತಕ್ಷಣ ಅವನನ್ನೇ ನನಗೆ ಬಲಿ ಕೊಡಬೇಕು" ಎಂಬ ನಿಬಂಧನೆ ಯೊಂದಿಗೆ ವರ ನೀಡುತ್ತಾನೆ. ಅದರಂತೆ ಹರಿಶ್ಚಂದ್ರ-ಚಂದ್ರಮತಿ ದಂಪತಿಗೆ ರೋಹಿತ ಎಂಬ ಮಗ ಜನಿಸುತ್ತಾನೆ. ಆದರೆ ಪುತ್ರ ವ್ಯಾಮೋಹದಿಂದ ಹರಿಶ್ಚಂದ್ರನು ಬಲಿ ಕೊಡುವುದನ್ನು ಮುಂದೂಡುತ್ತಾ ಹೋಗುತ್ತಾನೆ. ರೋಹಿತನು ದೊಡ್ಡವನಾದಾಗ ತಂದೆಯ ಪ್ರತಿಜ್ಞೆಯ ವಿಷಯ ತಿಳಿದು, ಬಲಿಯಾಗಲು ಒಪ್ಪದೆ ಅರಮನೆ ಬಿಟ್ಟು ಕಾಡಿಗೆ ಓಡಿಹೋಗುತ್ತಾನೆ. ಇದರಿಂದ ಕೋಪಗೊಂಡ ವರುಣನು ಹರಿಶ್ಚಂದ್ರನಿಗೆ ಜಲೋದರ ವ್ಯಾಧಿ ಬರುವಂತೆ ಶಪಿಸುತ್ತಾನೆ.

ತಂದೆಯ ಕಾಯಿಲೆಯ ವಿಷಯ ತಿಳಿದ ರೋಹಿತನು, ತನಗೆ ಬದಲಾಗಿ ಬೇರೊಬ್ಬರನ್ನು ಬಲಿ ಕೊಡಲು ಕಾಡಿನಲ್ಲಿ ಹುಡುಕಾಡುತ್ತಾನೆ. ಆಗ ಆತನಿಗೆ, ತೀವ್ರ ಬಡತನ ಮತ್ತು ಹಸಿವಿನಿಂದ ಬಳಲುತ್ತಿದ್ದ ಅಜೀಗರ್ತ ಎಂಬ ಬ್ರಾಹ್ಮಣನ ಕುಟುಂಬ ಸಿಗುತ್ತದೆ. ಆಗ ಕ್ಷಾಮ ಬೇರೆ ಆವರಿಸಿ ಕೊಂಡಿದ್ದರಿಂದ ಅಜೀಗರ್ತನು ಕುಟುಂಬವನ್ನು ಕಾಪಾಡಲಾರದೆ ತುಂಬ ಕಷ್ಟದಲ್ಲಿದ್ದನು. ತನ್ನ ಸಂಸಾರದ ಅವಸ್ಥೆ ನಾಯಿಪಾಡಿ ನಂತಾಯಿತು ಎಂದುಕೊಂಡೇ ಆತ ತನ್ನ ಮೂವರು ಮಕ್ಕಳಿಗೆ ಶುನಪುಚ್ಛ, ಶುನಶ್ಶೇಪ, ಮತ್ತು ಶುನಲಾಂಗೂಲ ಎಂದು ಹೆಸರಿಟ್ಟದ್ದಾಗಿತ್ತು.

ರೋಹಿತನು ತನಗೆ ಪ್ರತಿಯಾಗಿ ಯಜ್ಞ ಪಶುವಾಗಲು ಒಬ್ಬ ಮಗನನ್ನು ನೀಡಿದರೆ ನೂರು ಹಸುಗಳನ್ನು ಕೊಡುವುದಾಗಿ ಅಜೀಗರ್ತನಿಗೆ ಆಮಿಷ ಒಡ್ಡುತ್ತಾನೆ. ಅಜೀಗರ್ತನು ತನ್ನ ಹಿರಿಯ ಮಗನನ್ನು ಕೊಡಲು ಒಪ್ಪುವುದಿಲ್ಲ. ಮರಣಾನಂತರ ತನಗೆ ತರ್ಪಣ ಕೊಡಲಿಕ್ಕಾದರೂ ಬೇಕೇಬೇಕಲ್ವಾ ಎಂದು ಅವನ ಲೆಕ್ಕಾಚಾರ. ಆತನ ಪತ್ನಿಯಾದರೋ ಕಿರಿಯ ಮಗ ತುಂಬ ಪ್ರೀತಿಪಾತ್ರನು ಆದ್ದರಿಂದ ಅವನನ್ನು ಬಿಟ್ಟುಕೊಡಲು ನಿರಾಕರಿಸುತ್ತಾಳೆ. ಕೊನೆಗೆ, ಅತಿಯಾದ ಬಡತನ ಮತ್ತು ಹಣದ ಆಸೆಯಿಂದಾಗಿ ಅಜೀಗರ್ತನು ತನ್ನ ಮಧ್ಯಮಪುತ್ರ ಶುನಶ್ಶೇಪನನ್ನು ರಾಜನಿಗೆ ಮಾರಾಟ ಮಾಡುತ್ತಾನೆ.

ಯಜ್ಞದ ದಿನದಂದು ಶುನಶ್ಶೇಪನನ್ನು ಬಲಿಪೀಠಕ್ಕೆ ಕಟ್ಟಲಾಗುತ್ತದೆ. ಯಜ್ಞ ಪಶುವನ್ನು ಕತ್ತರಿಸಲು ಯಾರೂ ಮುಂದೆ ಬಾರದಿದ್ದಾಗ, ಅಜೀಗರ್ತನು ಮತ್ತಷ್ಟು ಹಸುಗಳಾಸೆಗೆ ತಾನೇ ಸ್ವತಃ ತನ್ನ ಮಗನನ್ನು ಕೊಲ್ಲಲು ಕತ್ತಿ ಹಿಡಿದು ಸಿದ್ಧನಾಗುತ್ತಾನೆ. ಅಷ್ಟರಲ್ಲಿ ಈ ವಿಶಿಷ್ಟವಾದ ನರಬಲಿ ಕೊಡುವ ಯಾಗದ ವಿಚಾರವು ಮಹರ್ಷಿ ವಿಶ್ವಾಮಿತ್ರನಿಗೆ ತಿಳಿಯುತ್ತದೆ. ಆತನು ಯಾಗಶಾಲೆಗೆ ಆಗಮಿಸುತ್ತಾನೆ, ವಿಷಯಗಳನ್ನೆಲ್ಲ ಕೇಳಿ ಕೋಪಾವಿಷ್ಟನಾಗುತ್ತಾನೆ. ಈ ಘೋರ ಅನ್ಯಾಯದಿಂದ ಭಯಭೀತನಾದ ಶುನಶ್ಶೇಪನು ವಿಶ್ವಾಮಿತ್ರನ ಮಾರ್ಗದರ್ಶನದಂತೆ ವರುಣ ಮತ್ತು ಇತರ ದೇವತೆಗಳನ್ನು ಕುರಿತು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತಾನೆ. ಶುನಶ್ಶೇಪನ ಪ್ರಾರ್ಥನೆಗೆ ಒಲಿದ ದೇವತೆಗಳು ಪ್ರತ್ಯಕ್ಷರಾಗಿ ಅವನನ್ನು ಬಂಧನದಿಂದ ಮುಕ್ತಗೊಳಿಸಿ, ಹರಿಶ್ಚಂದ್ರನ ರೋಗವನ್ನೂ ಗುಣಪಡಿಸುತ್ತಾರೆ. ತನ್ನನ್ನು ಕೊಲ್ಲಲೆತ್ನಿಸಿದ ತಂದೆ ಅಜೀಗರ್ತನ ಬಳಿಗೆ ಹಿಂದಿರುಗದ ಶುನಶ್ಶೇಪನನ್ನು, ವಿಶ್ವಾಮಿತ್ರ ತನ್ನ ಮಗನನ್ನಾಗಿ ಸ್ವೀಕರಿಸಿ ‘ದೇವರಾತ’ ಎಂದು ನಾಮಕರಣ ಮಾಡುತ್ತಾನೆ.

ಸಂಸ್ಕೃತದಲ್ಲೊಂದು ಸುಭಾಷಿತವಿದೆ- “ಕಾವ್ಯಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧಿಮತಾಮ್| ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ||" ಎಂದು. ಬುದ್ಧಿವಂತರು ಕಾವ್ಯ ಮತ್ತು ಶಾಸಗಳನ್ನು ಓದುವುದರಲ್ಲಿ ಮತ್ತು ಅರ್ಥೈಸುವುದರಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ; ಮೂರ್ಖರು ಜೂಜು, ವ್ಯಸನ, ನಿದ್ರೆ ಅಥವಾ ಜಗಳವಾಡುವುದರಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ ಎಂದು ಈ ಸುಭಾಷಿತದ ಭಾವಾರ್ಥ. ನಾವು ಹೇಳಿಕೊಳ್ಳುವಷ್ಟೆಲ್ಲ ಬುದ್ಧಿವಂತರಿರ ಲಿಕ್ಕಿಲ್ಲ, ಆದರೆ ತೀರ ನಾಲಾಯಕ್ ಎನಿಸುವ ಮೂರ್ಖರೂ ಆಗಿರಲಿಕ್ಕಿಲ್ಲ. ಒಂಥರದ ನಡುಪಂಥ ದವರು, ಹಗ್ಗದ ಮೇಲೆ ನಡೆಯಬೇಕಾದವರು. ಹಾಗಿರುವಾಗ ನಮಗೆ ಸಿಗುವ ಕಿಂಚಿತ್ ಬಿಡುವಿನ ವೇಳೆಯನ್ನು ಈ ರೀತಿ ಪುರಾಣ ಕಾವ್ಯ ಶಾಸ್ತ್ರ ವಿನೋದಗಳಿಂದ ಸದುಪಯೋಗ ಮಾಡುವುದು ಬುದ್ಧಿವರ್ಧನೆಗೆ ದಾರಿಯಂತೂ ಹೌದೇ ಹೌದು.