Vishweshwar Bhat Column: ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್ ಮುಟ್ಟುವುದಿಲ್ಲ !
ಶಬ್ಬತ್ ದಿನದಲ್ಲಿ ಯಹೂದಿಗಳು ಬಹುತೇಕ ಎಲ್ಲ ಕೆಲಸಗಳಿಂದ ದೂರವಿದ್ದು, ವಿಶ್ರಾಂತಿ, ಪ್ರಾರ್ಥನೆ, ಕುಟುಂಬ ಜೀವನಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಕೆಲವರು ಅಂದು ಮೊಬೈಲ್ ಕರೆಗಳನ್ನು ಸಹ ಸ್ವೀಕರಿಸುವುದಿಲ್ಲ. ಇನ್ನು ಕೆಲವರು ವಾಟ್ಸಾಪ್ ಮತ್ತು ಇಮೇಲ್‌ಗೂ ಪ್ರತಿಕ್ರಿಯಿಸುವುದಿಲ್ಲ.

-

ಇದೇ ಅಂತರಂಗ ಸುದ್ದಿ
vbhat@me.com
ಶಬ್ಬತ್ ದಿನದಲ್ಲಿ ಯಹೂದಿಗಳು ಬಹುತೇಕ ಎಲ್ಲ ಕೆಲಸಗಳಿಂದ ದೂರವಿದ್ದು, ವಿಶ್ರಾಂತಿ, ಪ್ರಾರ್ಥನೆ, ಕುಟುಂಬ ಜೀವನಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಕೆಲವರು ಅಂದು ಮೊಬೈಲ್ ಕರೆಗಳನ್ನು ಸಹ ಸ್ವೀಕರಿಸುವುದಿಲ್ಲ.
ನಾನು ಇಸ್ರೇಲಿನಲ್ಲಿ ಕಾಲಿಟ್ಟ ದಿನ ಶನಿವಾರ. ಟೆಲ್ ಅವಿವ್‌ನಲ್ಲಿರುವ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬಿದ್ದು ಹೊರಟರೆ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರವಿರಲಿಲ್ಲ. ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿ.
ನಮ್ಮೊಂದಿಗಿದ್ದ ಗೈಡ್ ಅವಿ ಬಿರನ್, “ಇಂದು ಶಬ್ಬತ್. ಹೀಗಾಗಿ ಇಡೀ ದೇಶಕ್ಕೆ ಒಂಥರಾ ರಜಾ ಇದ್ದಂತೆ. ಶಬ್ಬತ್ ದಿನ ಇಡೀ ಇಸ್ರೇಲ್ ಮಲಗಿದಂತೆ ಭಾಸವಾಗುತ್ತದೆ" ಎಂದ. ಯೋಮ್ ಕಿಪ್ಪೂರ್ ಹೊರತುಪಡಿಸಿ, ಶಬ್ಬತ್ ಅಥವಾ ಸಬ್ಬತ್ ಯಹೂದಿ ಧರ್ಮದಲ್ಲಿ ಅತ್ಯಂತ ಪವಿತ್ರ ದಿನ. ಪ್ರತಿ ಶುಕ್ರವಾರ ಸಂಜೆ ಸೂರ್ಯಾಸ್ತದಿಂದ ಶನಿವಾರ ಸಂಜೆ ಸೂರ್ಯಾಸ್ತದವರೆಗೆ ಶಬ್ಬತ್ ಅನ್ನು ಆಚರಿಸಲಾಗುತ್ತದೆ.
ಪ್ರತಿ ವಾರವೂ ಅತ್ಯಂತ ನಿಷ್ಠೆಯಿಂದ ಶಬ್ಬತ್ ಆಚರಿಸುವ ಯಹೂದಿಯರು, ಈ ವಿಷಯದಲ್ಲಿ ಮಾತ್ರ ಸ್ವಲ್ಪವೂ ರಾಜಿ ಮಾಡಿಕೊಳ್ಳುವುದಿಲ್ಲ. ಇಸ್ರೇಲಿಗಳ ಪಾಲಿಗೆ ಶಬ್ಬತ್ ಸಂಪೂರ್ಣ ‘ವಿಶ್ರಾಂತಿಯ ದಿನ’. ದೇವರು ಜಗತ್ತನ್ನು ಸೃಷ್ಟಿಸಿದ ನಂತರ ದಣಿವಾರಿಸಿಕೊಳ್ಳಲು ವಿಶ್ರಾಂತಿ ಪಡೆದ ದಿನವೇ ಶಬ್ಬತ್. ದೇವರು ವಿಶ್ರಾಂತಿ ತೆಗೆದುಕೊಳ್ಳುವಾಗ ಮನುಷ್ಯರು ಗಲಾಟೆ-ಗೌಜು ಮಾಡಿ ತೊಂದರೆ ಕೊಡಬಾರದಲ್ಲ, ಹೀಗಾಗಿ ದೇವರು ವಿಶ್ರಾಂತಿ ತೆಗೆದುಕೊಳ್ಳುವಾಗ, ಜನರಿಗೆ ಮೌನವಾಗಿ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗಲೆಂದು ಶಬ್ಬತ್ ಆಚರಿಸಲಾಗುತ್ತದೆ.
ಇದನ್ನೂ ಓದಿ: Vishweshwar Bhat Column: ವಿಮಾನ ನಿಲ್ದಾಣ ಕೋಡ್
ಪ್ರಾರ್ಥನೆಯ ನಂತರ ಮನುಷ್ಯರೂ ವಿಶ್ರಾಂತಿ ಪಡೆಯಬೇಕು. ಶಬ್ಬತ್ ಅನ್ನು ಯಹೂದಿಗಳು ಶ್ರೇಷ್ಠ ಕಾಯಕಗಳಂದು ಎಂದು ಪರಿಗಣಿಸುತ್ತಾರೆ. ಜಾತ್ಯತೀತ ಇಸ್ರೇಲಿಗಳು ಸಹ ಅಂದು ‘ಶಬ್ಬತ್ ಶಾಲೋಮ’ ಎಂದು ಪರಸ್ಪರ ಸ್ವಾಗತಿಸುತ್ತಾರೆ. ಅಂದರೆ ‘ಶಬ್ಬತ್‌ನಲ್ಲಿ ಶಾಂತಿ’ ಸಿಗಲಿ ಎಂದರ್ಥ.
ಯಹೂದಿ ಕ್ಯಾಲೆಂಡರ್‌ನಲ್ಲಿ ದಿನಗಳು ಮಧ್ಯರಾತ್ರಿಯಲ್ಲಿ ಅಲ್ಲ, ಸೂರ್ಯಾಸ್ತದ ನಂತರ ಆರಂಭವಾಗುತ್ತವೆ. ಪ್ರತಿ ವಾರ ಶಬ್ಬತ್ ಶುಕ್ರವಾರ ಸಂಜೆ ಸೂರ್ಯ ಮುಳುಗುತ್ತಿದ್ದಂತೆ ಆರಂಭ ವಾಗಿ ಶನಿವಾರ ಸೂರ್ಯಾಸ್ತವಾದ ಒಂದು ಗಂಟೆಯವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಯಹೂದಿಗಳು ಯಾವ ಕೆಲಸವನ್ನೂ ಮಾಡುವುದಿಲ್ಲ.
ನಾವು ವಿಮಾನ ನಿಲ್ದಾಣದಿಂದ ಜೆರುಸಲೆಮ್‌ನಲ್ಲಿರುವ ಹೋಟೆಲಿಗೆ ಬಂದು ನಮ್ಮ ರೂಮಿಗೆ ಹೋಗೋಣವೆಂದು ಲಿಫ್ಟ್ ಮುಂದೆ ನಿಂತರೆ, “ಈ ಎರಡರ (ಲಿಫ್ಟ್) ಪೈಕಿ ಒಂದನ್ನು ಬಳಸಬೇಡಿ. ಅದು ಇಂದು ಶಬ್ಬತ್‌ಗಾಗಿ ಮೀಸಲು. ನಾಳೆಯಿಂದ ಎರಡೂ ಲಿಫ್ಟನ್ನು ಬಳಸಬಹುದು" ಎಂದು ಅವಿ ಹೇಳಿದ.
ಕಾರಣ ಕಟ್ಟರ್ ಧಾರ್ಮಿಕ ಯಹೂದಿಗಳು ಅಂದು ವಿದ್ಯುತ್ ಸ್ವಿಚ್ ಆನ್ ಅಥವಾ ಆಫ್ ಕೂಡ ಮಾಡುವುದಿಲ್ಲ. ಶಬ್ಬತ್ ದಿನ ಒಂದು ಲಿಫ್ಟ್ ಶಬ್ಬತ್ ಆಚರಿಸುವವರಿಗೇ ಮೀಸಲು. ಅವರು ಲಿಫ್ಟ್ ಪ್ರವೇಶಿಸುತ್ತಿದ್ದಂತೆ, ಅದು ಮೊದಲ ಮಹಡಿಗೆ ಹೋಗಿ ನಿಲ್ಲುತ್ತದೆ, ನಂತರ ಎರಡನೇ ಮಹಡಿ, ಹೀಗೆ ಹತ್ತು ಮಹಡಿ. ಅಂದರೆ ಎಲ್ಲ ಮಹಡಿಗಳಲ್ಲೂ ನಿಲ್ಲುತ್ತಾ ಹೋಗುತ್ತದೆ. ಯಾಕೆಂದರೆ ಯಾರೂ ತಾವು ಹೋಗಬೇಕೆಂದಿರುವ ಮಹಡಿಯ ಬಟನ್ ಒತ್ತುವುದಿಲ್ಲ. ಅಂದು ಯಾರೂ ಇಲೆಕ್ಟ್ರಿಕ್ ಸ್ವಿಚ್ ಮುಟ್ಟುವುದಿಲ್ಲ. ಲಿಫ್ಟ್ ನಲ್ಲಿ ನಿಂತರಾಯಿತು. ನಂತರ ತಾವು ಹೋಗಬೇಕೆಂದಿರುವ ಮಹಡಿ ಬರುತ್ತಿದ್ದಂತೆ ಹೊರಗೆ ಹೋಗುತ್ತಾರೆ.
ಶಬ್ಬತ್ ದಿನ 39 ವಿಧದ ಕೆಲಸಗಳನ್ನು ನಿಷೇಧಿಸಲಾಗಿದೆ. ಅಂದು ಬೀಜ ಬಿತ್ತುವುದು, ಉಳುವುದು, ಕೊಯ್ಯುವುದು, ಬೆಳೆಗಳನ್ನು ರಾಶಿ ಹಾಕುವುದು, ಧಾನ್ಯವನ್ನು ಬಡಿಯುವುದು, ಆರಿಸುವುದು, ಶೋಧಿಸುವುದು, ಅರೆಯುವುದು, ಮಿಶ್ರ ಮಾಡುವುದು, ಬೇಯಿಸುವುದು, ಅಡುಗೆ ಮಾಡುವುದು, ಕೂದಲು ಬಾಚುವುದು, ಬಣ್ಣ ಹಚ್ಚುವುದು, ದಾರಗಳನ್ನು ಕತ್ತರಿಸುವುದು, ಚರ್ಮ ತೆಗೆದು ಶುದ್ಧಗೊಳಿಸುವುದು, ಒಡೆದದ್ದನ್ನು ಸರಿಪಡಿಸುವುದು, ಬೆಂಕಿ ಹಚ್ಚುವುದು, ಆರಿಸುವುದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಸ್ತು ಸಾಗಿಸುವುದು ಸೇರಿದಂತೆ 39 ವಿಧಗಳ ಕೆಲಸಗಳನ್ನು ಮಾಡುವುದಿಲ್ಲ.
ಅಂದರೆ ಶಬ್ಬತ್ ದಿನದಲ್ಲಿ ಯಹೂದಿಗಳು ಬಹುತೇಕ ಎಲ್ಲ ಕೆಲಸಗಳಿಂದ ದೂರವಿದ್ದು, ವಿಶ್ರಾಂತಿ, ಪ್ರಾರ್ಥನೆ, ಕುಟುಂಬ ಜೀವನಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಕೆಲವರು ಅಂದು ಮೊಬೈಲ್ ಕರೆ ಗಳನ್ನು ಸಹ ಸ್ವೀಕರಿಸುವುದಿಲ್ಲ. ಇನ್ನು ಕೆಲವರು ವಾಟ್ಸಾಪ್ ಮತ್ತು ಇಮೇಲ್‌ಗೂ ಪ್ರತಿಕ್ರಿಯಿಸುವು ದಿಲ್ಲ.
ಅನೇಕರು ಅಂದು ತಮ್ಮ ಕಾರನ್ನು ಹೊರ ತೆಗೆಯುವುದಿಲ್ಲ. ಶಬ್ಬತ್ ನಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವುದು ಮುಖ್ಯ. ಶುಕ್ರವಾರ ಸಂಜೆಯಾಗುತ್ತಿದ್ದಂತೆ, ಸೂರ್ಯಾಸ್ತಕ್ಕೂ ಮುಂಚೆ ಮನೆಯಲ್ಲಿ ಮಹಿಳೆಯರು ವಿಶೇಷ ದೀಪಗಳನ್ನು ಹಚ್ಚುತ್ತಾರೆ. ಇದು ಮನೆಯೊಳಗೆ ಬೆಳಕು, ಶಾಂತಿ ಹಾಗೂ ಪವಿತ್ರ ಭಾವವನ್ನು ತರಲಿದೆ ಎಂಬುದು ನಂಬಿಕೆ. ಶಬ್ಬತ್ ಸಮಯದಲ್ಲಿ ಯಹೂದಿಗಳು ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಾರೆ.
‘ಕಬ್ಬಲತ್ ಶಬ್ಬತ್’ (ಶಬ್ಬತ್ ಸ್ವಾಗತ ಪ್ರಾರ್ಥನೆ) ಶುಕ್ರವಾರ ರಾತ್ರಿ ನಡೆಯುತ್ತದೆ. ಶನಿವಾರ ಬೆಳಗ್ಗೆ ಪವಿತ್ರ ತೋರಾ ಪಠಣ ಕಡ್ಡಾಯ. ಶಬ್ಬತ್ ಯಹೂದಿಯರ ಆತ್ಮವಿದ್ದಂತೆ. ಅವರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಶಬ್ಬತ್ ಆಚರಿಸದೇ ಹೋಗುವುದಿಲ್ಲ. ಅವರ ಪಾಲಿಗೆ ಇದು ಕುಟುಂಬ, ಧರ್ಮ ಮತ್ತು ಸಮುದಾಯವನ್ನು ಒಟ್ಟುಗೂಡಿಸುವ ಒಂದು ಪವಿತ್ರವಾದ ಸಮಯ.
ಶಬ್ಬತ್ ಮೂಲಕ ಮನುಷ್ಯರು ತಮ್ಮ ದೈನಂದಿನ ಜೀವನದ ಗಡಿಬಿಡಿಯಿಂದ ದೂರವಾಗಿ ಆಧ್ಯಾತ್ಮಿಕ ಯೋಚನೆಗೆ ಹೊರಳಲು ಅನುವಾಗುವ ಅವಕಾಶ ಎಂಬ ನಂಬಿಕೆ ಯಹೂದಿ ಯರಲ್ಲಿದೆ. ಇಂದಿನ ಒತ್ತಡದ ದಿನಗಳಲ್ಲಿ ಶಬ್ಬತ್ ಆಚರಣೆ ಇಸ್ರೇಲಿಗಳಿಗೆ ವರದಾನವಾಗಿ ಪರಿಣಮಿಸಿದೆ. ಕಾರಣ ಶಬ್ಬತ್ ಸಮಯದಲ್ಲಿ ಇಡೀ ಕುಟುಂಬ ಒಟ್ಟಾಗಿ ಸೇರುತ್ತದೆ.
ಮನೆ-ಮಂದಿಯೆಲ್ಲ ಸೇರಿ ಸುತ್ತಲಿನ ಸಮುದಾಯದವರೊಂದಿಗೆ ಪ್ರಾರ್ಥನೆ, ಹಾಡು ಮತ್ತು ಕೊಡು-ಕೊಳ್ಳುವ ಸಂಪ್ರದಾಯದಲ್ಲಿ ನಿರತರಾಗುತ್ತಾರೆ. ಹೀಗಾಗಿ ಇದು ಈ ದಿನಗಳಲ್ಲೂ ಕುಟುಂಬ ವ್ಯವಸ್ಥೆಯು ಮತ್ತಷ್ಟು ಗಟ್ಟಿಗೊಳ್ಳಲು ನೆರವಾಗಿದೆ.
ಶಬ್ಬತ್ ಸಂದರ್ಭದಲ್ಲಿ ಹೆಚ್ಚಿನವರು ಪ್ರಾರ್ಥನೆಯಲ್ಲಿ ಕಳೆದರೆ, ಜಾತ್ಯತೀತರು ಅಥವಾ ಪ್ರಗತಿ ಪರರು ಎಂದು ಕರೆಯಿಸಿಕೊಳ್ಳುವವರು ಅಂದು ಎಂದಿನಂತೆ ಇರುತ್ತಾರೆ. ಇಸ್ರೇಲ್‌ನಲ್ಲಿ ಬಹಳಷ್ಟು ಜನ ಕಟ್ಟರ್ ಧಾರ್ಮಿಕರೇನೂ ಅಲ್ಲ. ಅವರು ಶಬ್ಬತ್ ಅನ್ನು ‘ಕುಟುಂಬ ದಿನ’ ಅಥವಾ ‘ವಿಶ್ರಾಂತಿ ಯ ದಿನ’ ಎಂದು ನೋಡುತ್ತಾರೆ. ಅಂಥವರು ಬೀಚ್‌ಗೆ ಹೋಗುವುದು, ಕಾಫಿ ಶಾಪ್ ಅಥವಾ ಸಿನಿಮಾ ನೋಡುವುದು ಸಾಮಾನ್ಯ.
ಕೆಲವರು ಧಾರ್ಮಿಕ ವಿಽ ಪಾಲಿಸದೆ ಕೇವಲ ಸಾಂಸ್ಕೃತಿಕವಾಗಿ ಶಬ್ಬತ್ ಭಾವನೆ ಇಟ್ಟುಕೊಳ್ಳುತ್ತಾರೆ. ಸಾರ್ವಜನಿಕ ಮತ್ತು ದೈನಂದಿನ ಜೀವನದಲ್ಲೂ ಶಬ್ಬತ್‌ಗೆ ಎಲ್ಲಿಲ್ಲದ ಮಹತ್ವ. ಇಸ್ರೇಲ್‌ನಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ಅಂಗಡಿಗಳು, ಕಚೇರಿಗಳು ಮುಚ್ಚುತ್ತವೆ. ಬಸ್, ರೈಲು, ಸಾರ್ವಜನಿಕ ಸಾರಿಗೆ ಶನಿವಾರ ಸಾಮಾನ್ಯವಾಗಿ ನಿಲ್ಲುತ್ತದೆ (ಟೆಲ್ ಅವಿವ್‌ನಂಥ ಆಧುನಿಕ ಮತ್ತು ಲಿಬರಲ್ ಎಂದು ಕರೆಯಿಸಿಕೊಂಡಿರುವ ನಗರಗಳಲ್ಲಿ ಕೆಲವು ಬದಲಾವಣೆಗಳಿರಬಹುದು).
ಧಾರ್ಮಿಕ ಪ್ರದೇಶಗಳಲ್ಲಿ (ಜೆರುಸಲೆಮ್, ಬೆನಿ ಬ್ರಾಕ್) ಶಬ್ಬತ್ ಅನ್ನು ತುಂಬಾ ಕಟ್ಟುನಿಟ್ಟಾಗಿ ಆಚರಿಸಲಾಗುತ್ತದೆ. ಅಂದರೆ ಇಸ್ರೇಲ್‌ನಲ್ಲಿ ಎಲ್ಲರೂ ಶಬ್ಬತ್ ಆಚರಿಸಿದರೂ, ಆಚರಣೆಯ ಮಟ್ಟ ಹಾಗೂ ವಿಧಾನ ಬೇರೆ ಬೇರೆ. ಕೆಲವರು ಕಟ್ಟುನಿಟ್ಟಾಗಿ ಧಾರ್ಮಿಕ ವಿಧಿಗಳನ್ನು ಪಾಲಿಸಿದರೆ, ಇನ್ನು ಕೆಲವರು ಕೇವಲ ಸಾಂಸ್ಕೃತಿಕವಾಗಿ ಆಚರಿಸುತ್ತಾರೆ. ಕೆಲವರಿಗೆ ಇದು ಕೇವಲ ರಜೆ ದಿನ. ಶಬ್ಬತ್ ದಿನ ಜೆರುಸಲೆಮ್ ನಗರವಂತೂ ಹೆಚ್ಚು-ಕಮ್ಮಿ ಬಂದ್. ಶಬ್ಬತ್ ಆಚರಿಸದ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಇದ್ದರೂ, ಅಂದು ಗ್ರಾಹಕರು ಕಮ್ಮಿ. ಅರಬ್ ಸಮುದಾಯಗಳಲ್ಲಿ, ಜೀವನವು ಸಾಮಾನ್ಯದಂತೆ ಮುಂದುವರಿಯುತ್ತದೆ.
ಮುಸ್ಲಿಮರಿಗೂ ಶುಕ್ರವಾರ ಪವಿತ್ರ ದಿನ ಬೇರೆ. One can say without exaggeration that more than the Jewish People have kept the Sabbath, the Sabbath has kept the Jews ಎಂಬ ಮಾತು ಯಹೂದಿಯರಲ್ಲಿ ಜನಜನಿತ. ಪ್ರತಿವಾರದ ಹಬ್ಬ ಎಂದೇ ಕರೆಯಿಸಿಕೊಂಡಿರುವ ಶಬ್ಬತ್‌ನ ಧಾರ್ಮಿಕ ಆಚರಣೆಯ ಮಹತ್ವ ಏನೇ ಇರಲಿ, ಈ ಒತ್ತಡ ಮತ್ತು ಸಮಯವಿಲ್ಲದ ಧಾವಂತದ ಬದುಕಿನಲ್ಲಿ ಅದು ಕುಟುಂಬ ವ್ಯವಸ್ಥೆ ಮತ್ತು ಮಾನವೀಯ ಸಂಬಂಧಗಳನ್ನು ಸದೃಢಗೊಳಿಸಲು ನೆರವಾಗಿರುವುದಂತೂ ಸತ್ಯ.
ಇದು ಶಬ್ಬತ್‌ನ ಶಬ್ಬತ್
ಇಸ್ರೇಲಿಗಳಲ್ಲಿ ಇನ್ನೊಂದು ಪವಿತ್ರ ರಜಾದಿನವಿದೆ. ಅದಕ್ಕೆ ಅವರು ’ಯೋಮ್ ಕಿಪ್ಪೂರ್’ ( Yom Kippur) ಅಂತ ಕರೆಯುತ್ತಾರೆ. ಇದನ್ನು ‘ಪ್ರಾಯಶ್ಚಿತ್ತದ ದಿನ’ ಎಂದೂ ಕರೆಯಲಾಗುತ್ತದೆ. ಇದನ್ನು ಯಹೂದಿ ಕ್ಯಾಲೆಂಡರ್‌ನ ತಿಶ್ರೇ ತಿಂಗಳ 10ನೇ ದಿನದಂದು ಆಚರಿಸಲಾಗುತ್ತದೆ (ಹೀಬ್ರೂ ಕ್ಯಾಲೆಂಡರ್‌ನಲ್ಲಿ ತಿಶ್ರೇ ಏಳನೇ ತಿಂಗಳು,
ಆದರೆ ನಾಗರಿಕ (ಸಾಮಾನ್ಯ) ವರ್ಷದಲ್ಲಿ ಇದನ್ನು ಮೊದಲ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಇದು ಸೆಪ್ಟೆಂಬರ್ -ಅಕ್ಟೋಬರ್ ಅವಧಿಯಲ್ಲಿ ಬರುತ್ತದೆ. ಈ ವರ್ಷ ಯೋಮ್ ಕಿಪ್ಪೂರ್ ಅನ್ನು ಸೆಪ್ಟೆಂಬರ್ 15-16ರಂದು ಆಚರಿಸಲಾಗುತ್ತದೆ. ತಿಶ್ರೇ ತಿಂಗಳು ಯಹೂದಿಗಳಿಗೆ ಅತ್ಯಂತ ಪವಿತ್ರ ಕಾಲ). ಯಹೂದಿಯರು ಯೋಮ್ ಕಿಪ್ಪೂರ್‌ಗೆ ಅತೀವ ಮಹತ್ವ ನೀಡುತ್ತಾರೆ. ಇದು ಯಹೂದಿಗಳಿಗೆ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುವ ಮತ್ತು ದೇವರೊಂದಿಗಿನ ಸಂಬಂಧ ವನ್ನು ನವೀಕರಿಸುವ ದಿನವಾಗಿದೆ.
ಈ ದಿನದಂದು ವೈಯಕ್ತಿಕ ಮತ್ತು ಸಾಮೂಹಿಕ ಪಾಪಗಳಿಗಾಗಿ ಪ್ರಾಯಶ್ಚಿತ ಮಾಡಲಾಗುತ್ತದೆ. ಈ ದಿನವನ್ನು ಕಟ್ಟುನಿಟ್ಟಾದ ಉಪವಾಸದೊಂದಿಗೆ ಆಚರಿಸಲಾಗುತ್ತದೆ. ಅಂದು 25 ಗಂಟೆಗಳ ಕಾಲ ಯಾವುದೇ ಆಹಾರ ಅಥವಾ ಪಾನೀಯವನ್ನು ಸೇವಿಸುವುದಿಲ್ಲ (ಸೂರ್ಯಾಸ್ತದಿಂದ ಮುಂದಿನ ಸೂರ್ಯಾಸ್ತದವರೆಗೆ). ಈ ದಿನವನ್ನು ಸಿನಗಾಗ್ (ಯಹೂದಿಯರ ಪೂಜಾ ಸ್ಥಳ) ನಲ್ಲಿ ದೀರ್ಘವಾದ ಪ್ರಾರ್ಥನೆಗಳು, ಪಾಪ ಒಪ್ಪಿಕೊಳ್ಳುವಿಕೆ ಮತ್ತು ಧಾರ್ಮಿಕ ಆಚರಣೆಗಳೊಂದಿಗೆ ಕಳೆಯಲಾಗುತ್ತದೆ.
ಸಾಮಾನ್ಯವಾಗಿ 13 ವರ್ಷಕ್ಕಿಂತ ಮೇಲ್ಪಟ್ಟ ಯಹೂದಿಗಳು ಅಂದು ಉಪವಾಸವನ್ನು ಆಚರಿಸು ತ್ತಾರೆ. ಆದರೆ ಆರೋಗ್ಯ ಸಮಸ್ಯೆ ಇರುವವರು ಇದರಿಂದ ವಿನಾಯಿತಿ ಪಡೆಯಬಹುದು. ಅಂದು ದೇವರ ಮುಂದೆ ‘ಅಲ್ ಚೇತ್’ ಎಂಬ ಪ್ರಾರ್ಥನೆಯ ಮೂಲಕ ತಾವು ಮಾಡಿದ ಪಾಪಗಳನ್ನು ಮುಕ್ತಭಾವದಿಂದ ಒಪ್ಪಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕೆಲವರು ಕಣ್ಣೀರುಗರೆಯುತ್ತಾ ರೋಧಿಸುವುದುಂಟು.
ಯೋಮ್ ಕಿಪ್ಪೂರ್‌ನ ಕೊನೆಯ ಭಾಗವಾದ ‘ನೀಲ’ ಸೇವೆಯು ದಿನದ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ, ಇದು ‘ಗೇಟ್ಸ್ ಆಫ್ ರಿಪೆಂಟೆನ್ಸ್’ ಮುಚ್ಚುವ ಸಂಕೇತ. ದಿನದ ಕೊನೆಯಲ್ಲಿ ಶೋಫರ್ (ಕೊಂಬಿನಂಥ ವಾದ್ಯ) ಬಾರಿಸುವ ಮೂಲಕ ಆಚರಣೆಯನ್ನು ಮುಕ್ತಾಯಗೊಳಿಸಲಾಗುತ್ತದೆ. ಯೋಮ್ ಕಿಪ್ಪೂರ್‌ನಂದು ಕೆಲಸ ಮಾಡುವುದು, ಸ್ನಾನ ಮಾಡುವುದು, ಚರ್ಮದ ಬೂಟುಗಳನ್ನು ಧರಿಸುವುದು, ಸೌಂದರ್ಯವರ್ಧಕಗಳನ್ನು ಬಳಸುವುದು ಮತ್ತು ದೈಹಿಕ ಸಂಬಂಧಗಳನ್ನು ಹೊಂದುವುದು ಸಂಪೂರ್ಣ ನಿಷಿದ್ಧ.
ಈ ದಿನವನ್ನು ‘ಶಬ್ಬತ್‌ನ ಶಬ್ಬತ್’ ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ಯಹೂದಿ ಧರ್ಮ ದಲ್ಲಿ ಅತ್ಯಂತ ಶ್ರೇಷ್ಠ ಮತ್ತು ಗಂಭೀರವಾದ ದಿನವಾಗಿದೆ. ಯೋಮ್ ಕಿಪ್ಪೂರ್ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಇದು ಆತ್ಮಾವಲೋಕನ, ಕ್ಷಮೆಯಾಚನೆ ಮತ್ತು ಒಬ್ಬರ ಜೀವನದಲ್ಲಿ ಸುಧಾರಣೆ ಮಾಡಿಕೊಳ್ಳುವ ಸುಸಂದರ್ಭ. ತಾನು ಮಾಡಿದ ಪಾಪಕಾರ್ಯಗಳಿಂದ ಮುಕ್ತನಾಗಿ ಮನುಷ್ಯತ್ವದ ಕಡೆಗೆ ಹೊರಳುವ, ಜೀವನವನ್ನು ಪಾವನ ಮಾಡಿಕೊಳ್ಳುವ ಸಂದರ್ಭವಿದು.
ಈ ದಿನದಂದು ಯಹೂದಿಗಳು ತಾವು ಇತರರಿಗೆ ಮಾಡಿದ ತಪ್ಪುಗಳಿಗಾಗಿ ಕ್ಷಮೆ ಕೇಳುತ್ತಾರೆ ಮತ್ತು ಆ ಮೂಲಕ ಸಂಬಂಧಗಳನ್ನು ಬಲಪಡಿಸುತ್ತಾರೆ. ಯೋಮ್ ಕಿಪ್ಪೂರ್ ಯಹೂದಿ ಸಮುದಾಯಕ್ಕೆ ಆಧ್ಯಾತ್ಮಿಕ ಶುದ್ಧೀಕರಣದ ಮತ್ತು ನೈತಿಕ ನವೀಕರಣದ ಧಾರ್ಮಿಕ ಸಿಂಚನ.
ಅಂಚೆ ಚೀಟಿಯೂ ಕೋಷರ್
ಇಸ್ರೇಲಿನಲ್ಲಿ ಸಂಚರಿಸುವಾಗ ಎಲ್ಲ ಕಡೆಯ ಹೋಟೆಲುಗಳಲ್ಲಿ ‘ಇಲ್ಲಿ ಕೋಷರ್ ಆಹಾರ ನೀಡಲಾಗುವುದು’ ಎಂಬ -ಲಕಗಳನ್ನು ಕಾಣಬಹುದು. ಕೋಷರ್ ಅಂದ್ರೆ ಯಹೂದಿ ಧರ್ಮದ ಪವಿತ್ರ ಗ್ರಂಥ ‘ತೋರಾ’ ( Torah) ದಲ್ಲಿ ಹೇಳಿರುವ ಆಹಾರ ನಿಯಮಗಳಿಗೆ ಅನುಗುಣವಾಗಿರುವ ಆಹಾರ ಪದ್ಧತಿ. ಇದು ಕೇವಲ ಆಹಾರ ತಯಾರಿಸುವ ವಿಧಾನ ಮಾತ್ರವಲ್ಲ, ಒಂದು ಆಹಾರ ಪದಾರ್ಥವನ್ನು ಯಾವ ರೀತಿ ಸೇವಿಸಬೇಕು ಎಂಬುದನ್ನು ಸಹ ಒಳಗೊಂಡಿದೆ. ಕೋಷರ್ ಆಗಿರ ಬೇಕಾದರೆ ಆಹಾರವು ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಹಂದಿ, ಮೊಲ, ಗೂಬೆ ಮತ್ತು ಕೆಲವು ಸಮುದ್ರ ಜೀವಿಗಳನ್ನು (ಉದಾಹರಣೆಗೆ ಸಿಂಪಿ, ಸೀಗಡಿ) ತಿನ್ನುವುದು ಸಂಪೂರ್ಣ ವಾಗಿ ನಿಷಿದ್ಧ.
ದನ, ಕುರಿ, ಮೇಕೆ, ಕೋಳಿ, ಟರ್ಕಿ ಮತ್ತು ಕೆಲವು ಬಗೆಯ ಮೀನುಗಳನ್ನು ತಿನ್ನಲು ಅನುಮತಿ ಇದೆ. ಆದರೆ ಈ ಪ್ರಾಣಿಗಳನ್ನು ನಿರ್ದಿಷ್ಟ ವಿಧಾನದಲ್ಲಿ ಕತ್ತರಿಸಿರಬೇಕು ಮತ್ತು ಅವುಗಳ ಮಾಂಸದಲ್ಲಿ ರಕ್ತ ಇರಬಾರದು. ಮಾಂಸ ಮತ್ತು ಹಾಲಿನ ಉತ್ಪನ್ನಗಳನ್ನು ಒಂದೇ ಊಟದಲ್ಲಿ ಅಥವಾ ಒಂದೇ ಸಮಯದಲ್ಲಿ ಸೇವಿಸುವುದು ಸಂಪೂರ್ಣವಾಗಿ ನಿಷಿದ್ಧ.
ಅಲ್ಲದೇ, ಇವೆರಡನ್ನು ಬೇರೆ ಬೇರೆ ಪಾತ್ರೆಗಳಲ್ಲಿ ಬೇಯಿಸಬೇಕು ಮತ್ತು ಇವೆರಡಕ್ಕೂ ಬೇರೆ ಬೇರೆ ಪಾತ್ರೆಗಳನ್ನು ಬಳಸಬೇಕು. ಮಾಂಸ ಅಥವಾ ಹಾಲಿನ ಉತ್ಪನ್ನಗಳಿಗೆ ಸೇರದ ಆಹಾರಗಳನ್ನು ‘ಪಾರ್ವೆ’ ಎಂದು ಕರೆಯುತ್ತಾರೆ. ಇವುಗಳನ್ನು ಮಾಂಸ ಅಥವಾ ಹಾಲಿನ ಜತೆ ಸೇವಿಸಬಹುದು. ಉದಾಹರಣೆಗೆ, ಹಣ್ಣು, ತರಕಾರಿ, ಮೊಟ್ಟೆ ಮತ್ತು ಧಾನ್ಯಗಳು. ಕೋಷರ್ ಕೇವಲ ಆಹಾರ ಪದ್ಧತಿ ಮಾತ್ರವಲ್ಲ,
ಯಹೂದಿ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಒಂದು ಅವಿಭಾಜ್ಯ ಅಂಗ. ಇದು ಯಹೂದಿ ಜನರ ನಂಬಿಕೆಗಳಿಗೆ ಮತ್ತು ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಅನೇಕ ಯಹೂದಿ ಸಮುದಾಯಗಳು ತಮ್ಮ ಮನೆಗಳಲ್ಲಿ, ಹೋಟೆಲ್ ಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೋಷರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
ಇಸ್ರೇಲಿಗಳು ಕೋಷರ್ ವಿಷಯದಲ್ಲಿ ಅದೆಂಥ ಕಟ್ಟುನಿಟ್ಟರು ಅಂದ್ರೆ ಅಲ್ಲಿನ ಅಂಚೆ ಇಲಾಖೆ ಹೊರಡಿಸುವ ಅಂಚೆ ಚೀಟಿಗಳ ಮೇಲಿನ ಅಂಟು ಕೂಡ ಕೋಷರ್ ( Kosher ) ಆಗಿರುತ್ತದೆ. ಅಂಚೆ ಚೀಟಿಗಳ ಮೇಲಿನ ಅಂಟನ್ನು ಸಾಮಾನ್ಯವಾಗಿ ಪ್ರಾಣಿಗಳ ಕೊಬ್ಬು ಅಥವಾ ಇತರ ಪದಾರ್ಥ ಗಳಿಂದ ತಯಾರಿಸುತ್ತಾರೆ. ಆದರೆ, ಯಹೂದಿ ಕಾನೂನಿನ ಪ್ರಕಾರ, ಅಂಥ ಅಂಟನ್ನು ಬಳಸು ವಂತಿಲ್ಲ.
ಆದ್ದರಿಂದ, ಇಸ್ರೇಲ್ ಅಂಚೆ ಇಲಾಖೆಯು ತನ್ನ ಅಂಚೆ ಚೀಟಿಗಳಿಗಾಗಿ ವಿಶೇಷವಾದ, ಕೋಷರ್ ನಿಯಮಗಳಿಗೆ ಅನುಗುಣವಾದ ಅಂಟನ್ನು ಬಳಸುತ್ತದೆ. ಅನೇಕ ಯಹೂದಿಗಳು ಅಂಚೆ ಚೀಟಿ ಗಳನ್ನು ಕೊಂಡುಕೊಂಡು ತಮ್ಮ ಪತ್ರಗಳಿಗೆ ಅಂಟಿಸುವಾಗ, ಅವುಗಳನ್ನು ಬಾಯಿಯಿಂದ ನೆಕ್ಕಿ ಒz ಮಾಡುತ್ತಾರೆ.
ಅಂಥ ಸಂದರ್ಭಗಳಲ್ಲಿ, ಕೋಷರ್ ನಿಯಮಗಳು ಉಲ್ಲಂಘನೆ ಯಾಗಬಾರದು ಎಂಬುದು ಅವರ ನಂಬಿಕೆ. ಆದ್ದರಿಂದ, ಅಂಚೆ ಚೀಟಿಗಳ ಮೇಲಿನ ಅಂಟು ಕೋಷರ್ ಆಗಿರಬೇಕು. ಇಸ್ರೇಲ್‌ನ ಅಂಚೆ ಚೀಟಿಗಳ ಮೇಲಿನ ಅಂಟು ಕೋಷರ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಪ್ರಮುಖ ರಬ್ಬಿಗಳು (ಯಹೂದಿ ಧರ್ಮಗುರುಗಳು. ಇವರನ್ನು ರಬ್ಬಾಯಿ ಅಂತಾನೂ ಹೇಳುವುದುಂಟು) ಅದನ್ನು ಪರಿಶೀಲಿಸಿ ಅನುಮೋದಿಸುತ್ತಾರೆ.
ಅವರ ಶಿಫಾ ರಸು ಸಿಕ್ಕ ನಂತರವೇ ಅಂಚೆಚೀಟಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಇಸ್ರೇಲ್ ಒಂದು ಯಹೂದಿ ರಾಷ್ಟ್ರ. ಇಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ನಿಯಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ಕಾರಣದಿಂದಾಗಿ, ಅಂಚೆ ಚೀಟಿಗಳಂಥ ಸಣ್ಣ ವಸ್ತುಗಳ ಮೇಲೂ ಧಾರ್ಮಿಕ ನಿಯಮಗಳನ್ನು ಪಾಲಿಸಲಾಗುತ್ತದೆ.
ಇದು ಯಹೂದಿ ಜನರ ಧಾರ್ಮಿಕ ನಂಬಿಕೆಗಳಿಗೆ ಮತ್ತು ಸಂಸ್ಕೃತಿಗೆ ಗೌರವ ಸೂಚಿಸುತ್ತದೆ. ಈ ನಿಯಮವು ಯಹೂದಿಗಳಿಗಾಗಿ ಮಾತ್ರವಲ್ಲದೇ, ಇಸ್ರೇಲ್‌ಗೆ ಭೇಟಿ ನೀಡುವ ಅಥವಾ ಅಲ್ಲಿಂದ ಪತ್ರಗಳನ್ನು ಕಳುಹಿಸುವ ಯಾರಿಗಾದರೂ ಅನ್ವಯಿಸುತ್ತದೆ. ಇದರಿಂದ ಯಹೂದಿಗಳು ಯಾವುದೇ ಧಾರ್ಮಿಕ ಉಲ್ಲಂಘನೆಯಿಲ್ಲದೇ ಅಂಚೆ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ.
ಬಂಕರ್ ಸೇರಿದ ಅಮೂಲ್ಯ ಸಂಗ್ರಹ
ಇದನ್ನು ನಾನು ಕೇಳಿದ್ದು. ಇದು ಎಷ್ಟು ಸತ್ಯವೋ ಗೊತ್ತಿಲ್ಲ. ಒಂದು ವೇಳೆ ವೈರಿ ರಾಷ್ಟ್ರಗಳೆಲ್ಲ ಒಂದಾಗಿ ಇಡೀ ಇಸ್ರೇಲನ್ನು ಧ್ವಂಸ ಮಾಡಿದರೆ, ತಮ್ಮ ಸಂಸ್ಕೃತಿ, ಸಂಪ್ರದಾಯ, ಸಂಶೋ ಧನೆ, ಆವಿಷ್ಕಾರ, ಪುಸ್ತಕ... ಇತ್ಯಾದಿಗಳು ಸರ್ವನಾಶವಾಗುವುದರಿಂದ ತಡೆಯಲು, ಎಲ್ಲವನ್ನೂ ಇಸ್ರೇಲಿ ಗಳು ಮೈಕ್ರೋಚಿಪ್‌ಗಳಲ್ಲಿ ಹುದುಗಿಸಿಟ್ಟು, ಆ ಚಿಪ್‌ಗಳನ್ನು ಬೇರೆ ಗ್ರಹಗಳಲ್ಲಿ ಜೋಪಾನವಾಗಿ ಇಟ್ಟಿದ್ದಾರಂತೆ. ತಮ್ಮ ದೇಶ ನಾಶವಾದರೂ ತಾವು ಈ ಮನುಕುಲಕ್ಕೆ ನೀಡಿದ ಕೊಡುಗೆಗಳು ಶಾಶ್ವತ ವಾಗಿ ಇರಬೇಕು ಮತ್ತು ಅದು ಇತರರಿಗೆ ಉಪಯೋಗವಾಗಬೇಕು ಎಂಬುದು ಇದರ ಉದ್ದೇಶವಂತೆ.
ಅದೇನೇ ಇರಲಿ. ನಾನು ಮೊನ್ನೆ ಇಸ್ರೇಲಿಗೆ ಹೋದ ಸಂದರ್ಭದಲ್ಲಿ ಮೂರು ಮ್ಯೂಸಿಯಂಗಳಿಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಅಮೂಲ್ಯವಾದ ವಸ್ತುಗಳು, ಬೆಲೆ ಕಟ್ಟಲಾಗದ ಕಲಾಕೃತಿಗಳು, ಸಾವಿರಾರು ವರ್ಷಗಳ ಕಡತಗಳು, ಧಾರ್ಮಿಕ ಗ್ರಂಥಗಳು ಅವು ಇಟ್ಟ ಜಾಗದಲ್ಲಿ ಇರಲಿಲ್ಲ. ಅಲ್ಲಿ ‘ಇಲ್ಲಿರುವ ವಸ್ತುಗಳನ್ನು ತಾತ್ಕಾಲಿಕವಾಗಿ ಬೇರೆ ಕಡೆಗೆ ಸಾಗಿಸಲಾಗಿದೆ’ ಎಂದು ಬರೆಯಲಾಗಿತ್ತು.
ಒಂದೆರಡು ಕಡೆಗಳಲ್ಲಿ ಹಾಗೆ ಬರೆದಿದ್ದರೆ, ನಾನು ಅದನ್ನು ಗಂಭೀರವಾಗಿ ಪರಿಗಣಿಸು ತ್ತಿರಲಿಲ್ಲವೇನೋ? ಆದರೆ ಹಲವೆಡೆ ಆ ರೀತಿ ಬರೆದಿರುವುದು ಸೋಜಿಗವನ್ನುಂಟುಮಾಡಿತು. ಪ್ರದರ್ಶನಾಲಯದಲ್ಲಿ ಇಟ್ಟ ವಸ್ತುಗಳನ್ನು ಪ್ರದರ್ಶಿಸದೇ ಮತ್ತೆ ಮುಚ್ಚಿಟ್ಟಿರುವುದು ಸಣ್ಣ ಸಂದೇಹಕ್ಕೆ ಕಾರಣವಾಗಿತ್ತು.
ಈ ಕುರಿತು ನಮ್ಮ ಟೂರ್ ಗೈಡ್ ಅವಿ ಬಿರನ್‌ನನ್ನು ಕೇಳಿದೆ. ಅದಕ್ಕೆ ಆತ ಹೇಳಿದ- “ಈಗ ಇಸ್ರೇಲಿ ನಲ್ಲಿ ಯುದ್ಧ ನಡೆಯುತ್ತಿರುವುದರಿಂದ, ಎಲ್ಲಿ ಬೇಕಾದರೂ ದಾಳಿಯಾಗಬಹುದು. ಅದಕ್ಕೆ ಈ ಮ್ಯೂಸಿಯಂಗಳೂ ಹೊರತಲ್ಲ. ಹೀಗಾಗಿ ನಮ್ಮ ಅಮೂಲ್ಯ ಧಾರ್ಮಿಕ ಗ್ರಂಥ, ಕಡತ, ಸಾವಿರಾರು ವರ್ಷಗಳ ಪುಸ್ತಕಗಳನ್ನು ನಾವು ಸುರಕ್ಷಿತ ಪ್ರದೇಶಗಳಲ್ಲಿ ಇಟ್ಟಿದ್ದೇವೆ.
ಬಹುತೇಕ ಮ್ಯೂಸಿಯಂಗಳು ನೆಲಮಾಳಿಗೆಗಳಲ್ಲಿ ಬಂಕರ್ ವ್ಯವಸ್ಥೆಯನ್ನು ಹೊಂದಿವೆ. ಎಂಥ ಬಾಂಬ್, ರಾಕೆಟ್, ಕ್ಷಿಪಣಿ ದಾಳಿಗಳಾದರೂ ಅವೆಲ್ಲವುಗಳಿಂದ ಈ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಡುವ ವ್ಯವಸ್ಥೆಯದು. ಹೀಗಾಗಿ ಇಲ್ಲಿ ಎಷ್ಟೋ ವಸ್ತುಗಳನ್ನು ಕಾಣಲು ಸಾಧ್ಯವಿಲ್ಲ. ಯುದ್ಧ ಮುಗಿದ ನಂತರ ಅವುಗಳನ್ನು ಸ್ವಸ್ಥಾನಗಳಲ್ಲಿ ನೋಡಬಹುದೇನೋ. ಯುದ್ಧದಲ್ಲಿ ಸೋಲು-ಗೆಲುವು ಬೇರೆ. ಆದರೆ ಈ ವಸ್ತುಗಳನ್ನು ಮಾತ್ರ ನಾವು ಎಂದೆಂದೂ ಕಳೆದುಕೊಳ್ಳು ವಂತಿಲ್ಲ".
ತಮ್ಮದೆನ್ನುವುದನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳುವುದನ್ನು ಇಸ್ರೇಲಿಗಳಿಂದ ಕಲಿಯಬೇಕು.