ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vinayaka M Bhat Column: ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಅಂದಾಂಗಾಯ್ತು

ವಾಲ್ಮೀಕಿ ಹಗರಣದಲ್ಲಿ ಜೈಲುವಾಸ ಮಾಡಿ ಬಂದು ಈಗ ಜಾಮೀನಿನ ಮೇಲಿರುವ ವ್ಯಕ್ತಿಯನ್ನೂ ಮಂತ್ರಿಮಾಡಿದ್ದು, ಅನೇಕರ ಕೋಪಕ್ಕೆ ಕಾರಣವಾಯಿತು. ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷಬಿಟ್ಟು ಕಾಂಗ್ರೆಸ್ ಸೇರಿದ್ದ ಅರಸಿಕೆರೆಯ ಶಿವಲಿಂಗೇಗೌಡರು ಹಾಗೂ ಲಕ್ಷ್ಮಣ ಸವದಿಯವರ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲಾಯಿತು. ಮೊದಲಬಾರಿ ಶಾಸಕರಾದ ಮಾಯಕೊಂಡದ ಬಸವಂತಪ್ಪನವರಿಗೂ ಸಚಿವ ಸ್ಥಾನ ಒಲಿದುಬಂತು.

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಅಂದಾಂಗಾಯ್ತು

-

ವಿದ್ಯಮಾನ

ಗಜಪ್ರಸವದಂತೆ ಮುಖ್ಯಮಂತ್ರಿಯ ಪದಗ್ರಹಣವಾಗಿ ಎರಡು ತಿಂಗಳ ನಂತರ ಶಿವ ಸಂಪುಟ ವಿಸ್ತಾರವಾ ದಂತಾಯ್ತು. ಕೆಲವು ಅನಿರೀಕ್ಷಿತಗಳನ್ನು ಹೊರತುಪಡಿಸಿ ಉಳಿದದ್ದು ನಿರೀಕ್ಷಿತವೇ ಆಗಿತ್ತು. ಇಷ್ಟನ್ನೇ ಮಾಡುವುದಿದ್ದರೆ ಹೈಕಮಾಂಡ್ ಎರಡು ತಿಂಗಳು ತೆಗೆದುಕೊಂಡಿದ್ದೇಕೆ ಎನ್ನುವುದು ಮಾತ್ರ ಯಾರಿಗೂ ತಿಳಿಯುತ್ತಿಲ್ಲ. ಮೇಲ್ನೋಟಕ್ಕೆ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಕೋಲೆಯನ್ನು ಬಿಡಿಸಿಕೊಂಡು ಸ್ವತಂತ್ರವಾದಂತೆ ಕಂಡುಬಂತು. ಮುಖ್ಯಮಂತ್ರಿಯಾಗುವ ಹಾದಿಯಲ್ಲಿ ತಮ್ಮನ್ನು ಬೆಂಬಲಿಸಿದ ಆಪ್ತರಿಗೆಲ್ಲ ಮಂತ್ರಿಸ್ಥಾನವನ್ನು ಗಿಟ್ಟಿಸಿಕೊಡುವಲ್ಲಿ, ಸಿದ್ದರಾಮಯ್ಯನವರ ಅತ್ಯಾಪ್ತರನ್ನು ಹೊರಗಿಡುವಲ್ಲಿ (ಜಮೀರ ಅವರನ್ನು ಹೊರತುಪಡಿಸಿ) ಸಫಲರಾದರು ಅಂತಲೇ ಹೇಳಬಹುದು.

ಸಿದ್ದರಾಮಯ್ಯನವರು ಪ್ರಮಾಣವಚನ ಕಾರ್ಯಕ್ರಮಕ್ಕೆ ಬರದೇ ತಮ್ಮ ಸಿಟ್ಟನ್ನು ಅತ್ಯಂತ ಸಾತ್ವಿಕವಾಗಿ ಹೊರಹಾಕಿದ್ದೂ ಆಯಿತು. ಮಂತ್ರಿಗಳ ಪಟ್ಟಿಯಿಂದ ಸೀಶಕ್ತಿಯನ್ನು ನಿರ್ಲಕ್ಷ್ಯ ಮಾಡಿರುವುದು ಕಾರಣಾತೀತವಾಗಿತ್ತು, ದೇಶದಲ್ಲಿ ಮಹಿಳೆಯರಿಗೆ 33 ಪ್ರತಿಶತ ಸ್ಥಾನಮಾನ ಕಲ್ಪಿಸುವ ಮೂಲಕ ಮಹಿಳಾ ಸಬಲೀಕಣದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ, ಡಿಕೆ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಮಾನವನ್ನೇ ಕೊಡದಿದ್ದುದು ಸ್ವಲ್ಪ ವಿಚಿತ್ರ ಅಂತ ಅನಿಸಿತು.

ವಾಲ್ಮೀಕಿ ಹಗರಣದಲ್ಲಿ ಜೈಲುವಾಸ ಮಾಡಿ ಬಂದು ಈಗ ಜಾಮೀನಿನ ಮೇಲಿರುವ ವ್ಯಕ್ತಿಯನ್ನೂ ಮಂತ್ರಿಮಾಡಿದ್ದು, ಅನೇಕರ ಕೋಪಕ್ಕೆ ಕಾರಣವಾಯಿತು. ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷಬಿಟ್ಟು ಕಾಂಗ್ರೆಸ್ ಸೇರಿದ್ದ ಅರಸಿಕೆರೆಯ ಶಿವಲಿಂಗೇಗೌಡರು ಹಾಗೂ ಲಕ್ಷ್ಮಣ ಸವದಿಯವರ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲಾಯಿತು. ಮೊದಲಬಾರಿ ಶಾಸಕರಾದ ಮಾಯಕೊಂಡದ ಬಸವಂತಪ್ಪನವರಿಗೂ ಸಚಿವ ಸ್ಥಾನ ಒಲಿದುಬಂತು.

ಇನ್ನು ಮಂತ್ರಿಸ್ಥಾನದ ನಿರೀಕ್ಷೆಯಲ್ಲಿದ್ದು ವಂಚಿತರಾದ ಹಲವರು ಸ್ವಾಭಾವಿಕವಾಗಿ ತಮ್ಮ ನೋವನ್ನು ಮಾಧ್ಯಮಗಳಲ್ಲಿ ಹಂಚಿಕೊಂಡು ಹೈಕಮಾಂಡಿಗೆ ಏನು ಸಂದೇಶ ಕೊಡಬೇಕೋ ಅದನ್ನು ಕೊಡುತ್ತಿzರೆ. ಹೈಕಮಾಂಡ್ ಕೂಡಾ ಮುಖ್ಯಮಂತ್ರಿಗಳ ಮೂಲಕ ಈ ಬಾರಿ ಅತ್ಯಂತ ಗಟ್ಟಿ ಸಂದೇಶವನ್ನೇ ಕೊಟ್ಟಿದ್ದು, ಯಾರಾದರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ನಿಮಿಷಗಳಲ್ಲಿ ಸ್ವೀಕರಿಸಲಾಗುವುದು ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನ ಗಂಡು ನಿರ್ಧಾರ ವನ್ನು ಮೆಚ್ಚಲೇಬೇಕಾದ್ದು. 136 ಶಾಸಕರ ಬಲವಿರುವಾಗ, ಆರೆಂಟು ಶಾಸಕರು ಹೋದರೂ ಸರಕಾರಕ್ಕೇನೂ ತೊಂದರೆ ಇಲ್ಲವಲ್ಲ.

ಇದನ್ನೂ ಓದಿ:Vinayak M Bhat Column: ಇವರು ಭಾರತದ ಯುವಶಕ್ತಿಯ ಪ್ರತಿನಿಧಿಗಳಲ್ಲ...

ಹಾಗಾಗಿ ಈಗಲ್ಲದೇ ಇನ್ನಾವಾಗ ಇಂಥಾ ಧೈರ್ಯದ ಮಾತನ್ನಾಡುವುದು? ಸ್ವತಃ ಮುಖ್ಯಮಂತ್ರಿಗಳೇ ಸುರ್ಜೇವಾಲರನ್ನು ಕಟ್ಟಿಕೊಂಡು ಮಂತ್ರಿಸ್ಥಾನ ವಂಚಿತ ಪ್ರಭಾವಿ ಶಾಸಕರುಗಳ ಮನೆಗೆ ಎಡಬಿಡದೇ ಎಡತಾಕುತ್ತಿದ್ದಾರೆ, ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥಾ ಅಸಮಧಾನಿತರನ್ನು ಮುಖ್ಯಮಂತ್ರಿಗಳು ತಮ್ಮ ಮನೆಗೆ ಕರೆಸಿಕೊಂಡು ಮಾತುಕತೆ ಆಡಿದರೆ ಮುಖ್ಯಮಂತ್ರಿ ಸ್ಥಾನದ ಗೌರವ ಹೆಚ್ಚುತ್ತಿತ್ತೇನೋ! ಅಥವಾ ಮುಖ್ಯಮಂತ್ರಿಗಳ ಬದಲಿಗೆ ಉಪಮುಖ್ಯಮಂತ್ರಿಗಳು ಅಥವಾ ಪಕ್ಷದ ರಾಜ್ಯಾಧ್ಯಕ್ಷರು ಓಡಾಡಬಹುದಿತ್ತೇನೋ!

ಡಿ.ಕೆ.ಶಿವಕುಮಾರ ಉಪಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರಾಗಿದ್ದಾಗ ಹಾಗೆಯೇ ತಾನೆ ಮಾಡಿದ್ದು? ಆಗ ಹೀಗೆ ಸಿದ್ದಮಯ್ಯನವರನ್ನು ಮನೆಮನೆಗೆ ಓಡಾಡಿಸಿ ರಲಿಲ್ಲವಲ್ಲ! ಹೀಗೆ ಮುಖ್ಯ ಮಂತ್ರಿಗಳೇ ಎಲ್ಲದಕ್ಕೂ ಓಡಾಡಲು ಶುರುವಿಟ್ಟುಕೊಂಡರೆ, ಸರಕಾರದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕೆಲಸ ಮಾಡುವವರು ಯಾರೂ ಇಲ್ಲ ಎನ್ನುವ ಸಂದೇಶ ಹೋಗಿಬಿಡುತ್ತದೆಯಷ್ಟೇ. ಮಂತ್ರಿಸ್ಥಾನ ಸಿಗದ ಹಿರಿಯ ಶಾಸಕರ ನೋವು ಹೇಳತೀರಲಾರದ್ದು, ಈಗ ಮಂತ್ರಿಸ್ಥಾನಕ್ಕೆ ಸಂಚಕಾರವೆಂದರೆ, ನೀವು ಪಕ್ಷಕ್ಕೆ ಸಾಕು ಎನ್ನುವ ಸಂದೇಶ ಕೊಟ್ಟಂತೆ ಎನ್ನುವುದು ಅವರಿಗೆ ತಿಳಿದೇ ಇದೆ, ಅವರಿಗೆ 2028ರ ಚುನಾವಣೆಯಲ್ಲಿ ಸೀಟು ಸಿಗುವುದೂ ಕಷ್ಟವೆನ್ನುವುದು ಅರ್ಥವಾಗುತ್ತದೆ.

ಒಂದೋ ನೇಪಥ್ಯಕ್ಕೆ ಸರಿಯಬೇಕು, ಇಲ್ಲೇ ಬೇರೇ ದಾರಿ ನೋಡಿಕೊಳ್ಳಬೇಕು ಎನ್ನುವ ಸ್ಥಿತಿ ಅವರದ್ದು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾಲದದರೆ ಇಂಥವರನ್ನೆಲ್ಲ ಯಾವುದೋ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ ಸ್ವಲ್ಪ ಸಮಾಧಾನ ಮಾಡಿಬಿಡುತ್ತಿದ್ದರು. ಈಗ ಹಾಗೆ ಮಾಡುವ ಪರಿಸ್ಥಿತಿಯೂ ಇಲ್ಲ. ಕೇಂದ್ರದಿಂದ ಹಿರಿಯರಿಗೆ ಪುನರ್ವಸತಿ ಕಲ್ಪಿಸುವ ಸಂದರ್ಭ ಕಾಂಗ್ರೆಸ್ಸಿಗೆ ಸದ್ಯೋ ಭವಿಷ್ಯದಲ್ಲಿ ಬರುವ ಸೂಚನೆಯಂತೂ ಕಾಣುತ್ತಿಲ್ಲ.

ಯಾರು ತಮ್ಮ ಕುಟುಂಬದ ಹಿನ್ನೆಲೆಯ ಕಾರಣದಿಂದ ಮೊದಲ ಪಟ್ಟಿಯ ಮಂತ್ರಿಗಳಾಗಿದ್ದಾರೋ ಅವರೆಲ್ಲ ಈಗ ಮಂತ್ರಿಸ್ಥಾನ ತಪ್ಪಿದವರಿಗೆ ವೇದಾಂತದ ಪಾಠ ಮಾಡುತ್ತಾ ಉಪದೇಶ, ಉಪಚಾರದ ಮಾತನಾಡುತ್ತ ಒಡಾಡುತ್ತಿರುವುದು ವಿಸ್ಮಯವೇ ಸರಿ. ಯಾರಿಗೆ ಏನಾದರೇನಂತೆ ಇವರು ಮಂತ್ರಿ ಯಾಗಿ ಆಗಿದೆಯಲ್ಲ, ಇನ್ನೊಂದೆರಡು ದಿನಗಳಲ್ಲಿ ಖಾತೆ ಹಂಚಿಕೆಯಾಗುವುದಿದೆ, ಮತ್ತೊಂದು ಸುತ್ತಿನ ಅಸಮಧಾನ ಸೋಟ ಮತ್ತು ಅದರ ಸಮಾಧಾನ ಮಾಡುವ ಕಾರ್ಯಕ್ಕೆ ಪಕ್ಷ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗ ತಾನೆ ಪ್ರಮಾಣವಚನ ಸ್ವೀಕರಿಸಿ ಸೂಕ್ತ ಖಾತೆಗಾಗಿ ಕಾಯುತ್ತಿರುವ ಕೆಲವು ಸಚಿವರ ರಾಜೀನಾಮೆ ಕೊಡಿಸಿ, ಅಸಮಧಾನಿಗಳಲ್ಲಿ ಕೆಲವು ಪ್ರಮುಖರಿಗೆ ಸಚಿವ ಸ್ಥಾನ ಕೊಡಮಾಡುವ ಆಲೋಚನೆಯೂ ಪಕ್ಷಕ್ಕಿದೆ ಎನ್ನುವ ಸುದ್ದಿಯಿದೆ.

ಅದು ನಿಜವಾದರೆ, ಅತ್ಯಂತ ಹಿರಿಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿನ ಹೈಕಮಾಂಡಿನ ಮರ್ಯಾದೆ ಮೂರಾಬಟ್ಟೆ ಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು, ಈಬಾರಿ ಹೈಕಮಾಂಡ್ ಸಂಭಾವ್ಯ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿಗಳ, ಅಥವಾ ಪಕ್ಷಾಧ್ಯಕ್ಷರ ಜೊತೆಗೆ ಕಳುಹಿಸದೇ, ತನ್ನ ಪ್ರತಿನಿಽಯ ಜೊತೆಗೆ ಕಳುಹಿಸಿರುವುದು, ಬೆಂಗಳೂರಿಗೆ ಬಂದಮೇಲೆ ಆ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿ ಬಂದಿರುವುದು ಇಂದಿನ ರಾಜಕೀಯದ ವಿಕ್ಷಿಪ್ತ ಪರಿಸ್ಥಿತಿಗೆ ಸಂಕೀರ್ಣತೆಗೆ ಸಾಕ್ಷಿ ಎನ್ನುವಂತಿತ್ತು.

71

ಜೊತೆಗೆ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಸಂಭಾವ್ಯ ಸಚಿವರ ಪಟ್ಟಿಯ ಜೊತೆಗೆ ವಿಧಾನಸಭೆ ಹಾಗೂ ಪರಿಷತ್ತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರನ್ನೂ ಅಖೈರುಗೊಳಿಸಿ ಕಳುಹಿಸಿರುವುದು ಶಿಷ್ಟಾಚಾರಕ್ಕೆ ವಿರೋಧಿಯೆಂದೂ, ಪಕ್ಷಾತೀತವಾಗಬೇಕಾಗಿದ್ದ ಹುದ್ದೆಗಳ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಮೂಗು ತೂರಿಸುತ್ತಿದೆಯೆಂದು ಚರ್ಚಿಸಲಾಗುತ್ತಿದೆ. ಬಹು ದೀರ್ಘಕಾಲ ಮೇಲ್ಮನೆಯ ಸಭಾಪತಿಗಳಾಗಿ ಸೇವೆ ಸಲ್ಲಿಸಿದ್ದ ಸಜ್ಜನ ರಾಜಕಾರಣಿ ಬಸವರಾಜ ಹೊರಟ್ಟಿಯವರಿಗೆ ಮುಖ್ಯ ಮಂತ್ರಿಗಳು ರಾಜೀನಾಮೆ ನೀಡುವಂತೆ ತಿಳಿಸಿದ್ದರಿಂದ, ಇಷ್ಟೆ ಆದಮೇಲೆ ತಾನು ಮುಂದುವರಿ ಯುವುದು ಮರ್ಯಾದೆಯಲ್ಲ ಎಂದು ಭಾವಿಸಿದ ಹೊರಟ್ಟಿಯವರು ತಿಕ್ಕಾಟಕ್ಕೆ ಆಸ್ಪದ ಕೊಡದೇ ರಾಜೀನಾಮೆ ಕೊಡುವ ಮನಸ್ಸು ಮಾಡಿ ಸಜ್ಜನಿಕೆಯನ್ನು ಮೆರೆದಿದ್ದಾರೆ.

ಅಷ್ಟರಮಟ್ಟಿಗೆ ಆ ಹುದ್ದೆಯ ಮರ್ಯಾದೆ ಉಳಿಸಿzರೆ ಎನ್ನಬಹುದು. ಹೀಗೆ ಎಲ್ಲವನ್ನೂ ಹೈಕಮಾಂಡೇ ಮಾಡುವುದಾದರೆ ಶಾಸಕಾಂಗ ಪಕ್ಷದ ನಾಯಕನಾದ ಮುಖ್ಯಮಂತ್ರಿಗೆ ಏನು ಕೆಲಸ ಹೇಳಿ? ಇನ್ನು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೋಲೀಸ್ ಮಹಾನಿರ್ದೇಶಕರ ಹೆಸರನ್ನೂ ಕಾಂಗ್ರೆಸ್ ಹೈಕಮಾಂಡ್ ಮುಚ್ಚಿದ ಲಕೋಟೆಯಲ್ಲಿ ಕಳುಹಿಸುವುದೊಂದು ಬಾಕಿಯಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಯಾವುದೋ ಒಬ್ಬ ವ್ಯಕ್ತಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು, ನಿರ್ಧಾರವು ಹೆಚ್ಚು ಸಮರ್ಪಕವಾಗಲು ಸಾಂಕವಾಗಿ ತೀರ್ಮಾನಿಸಬೇಕು ಎನ್ನುವ ಕಾರಣಕ್ಕೆ ಕೆಲವು ವಿಷಯಗಳಲ್ಲಿ ಹೈಕಮಾಂಡಿನ ಭಾಗವಹಿಸುವಿಕೆ ಸರಿಯೇ. ಆದರೆ, ಎಲ್ಲವನ್ನೂ ಹೈಕಮಾಂಡೇ ತೀರ್ಮಾನ ಮಾಡುವುದಾದರೆ ಮುಖ್ಯಮಂತ್ರಿಗಳಿಗೆ ಗೌರವ ಕೊಡುವವರಾದರೂ ಯಾರು ಹೇಳಿ? ಹಾಗಂತ ಇದು ಬರೇ ಕಾಂಗ್ರೆಸ್ಸಿನ ಕತೆಯಲ್ಲ, ಬಿಜೆಪಿಯದ್ದೂ ಇದೇ ಕತೆ, ಕುಮಾರಸ್ವಾಮಿಯವರನ್ನು ಕೇಳಿದರೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ದೇವೇಗೌಡರ ಜೊತೆಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಅಂತಲೇ ಹೇಳುತ್ತಾರೆ. ಅವರ ಪಕ್ಷದ ‘ಹೈ’, ‘ಲೋ’ ಎಲ್ಲ ಕಮಾಂಡುಗಳೂ ಮನೆಯ ಇದ್ದರೂ ಹಾಗೆ ಮಾತಾಡಬೇಕಾಗುತ್ತದೆ.

ಹೈಕಮಾಂಡಿನ ಮಹಿಮೆಯೇ ಹಾಗೆ. ಬಹುಶಃ ರಾಮಕೃಷ್ಣ ಹೆಗಡೆಯವರ ಕಾಲದವರೆಗೆ ರಾಜ್ಯದ ವಿಚಾರದಲ್ಲಿ ಯಾವುದೇ ಪಕ್ಷದ ಹೈಕಮಾಂಡ್ ಇಷ್ಟು ತಲೆಹಾಕುತ್ತಿರಲಿಲ್ಲ. ಮುಖ್ಯಮಂತ್ರಿಗೇ ಸರ್ವಾಧಿಕಾರ ಇರುತ್ತಿತ್ತು. ಹಾಗಾಗಿಯೇ ಅವರಿಗೆ ಗೌರವವೂ ಅಷ್ಟೇ ಇರುತ್ತಿತ್ತು. ಈಗ ಹಾಗಲ್ಲ, ಮುಖ್ಯಮಂತ್ರಿಗಳ ಅಥವಾ ರಾಜ್ಯಾಧ್ಯಕ್ಷರ ಕೈಯ್ಯಲ್ಲಿ ಏನೂ ಇಲ್ಲ ಅಥವಾ ಎಲ್ಲವೂ ಇಲ್ಲ ಎನ್ನುವುದು ಶಾಸಕರಿಗೆ ಗೊತ್ತಾಗಿಬಿಟ್ಟಿದೆ, ನಾವೇ ಹೋಗಿ ಹೈ ಕಮಾಂಡಿನವರನ್ನು ಭೇಟಿಯಾಗಿ ಬರೋಣ ಎನ್ನುವ ಮನಸ್ಥಿತಿ ಎಲ್ಲ ಪಕ್ಷದ ಶಾಸಕರಿಗೆ ಬಂದುಬಿಟ್ಟಿದೆ.

ಇನ್ನು ಹೈಕಮಾಂಡಿನಲ್ಲಿರುವವರಿಗೆ ಅಗತ್ಯ ಅನುಭವ ಯೋಗ್ಯತೆಯಾದರೂ ಇದೆಯಾ ಎಂದರೆ, ಅದೂ ಇಲ್ಲ. ಹೈಕಮಾಂಡು ಎನಿಸಿಕೊಳ್ಳುವವರಲ್ಲಿ ಯಾರೂ ಒಂದೇ ಒಂದು ಚುನಾವಣೆ ಗೆದ್ದವರಲ್ಲ, ಮಂತ್ರಿಯಾಗಿ ಅನುಭವ ಇರುವವರಲ್ಲ, ಮುಖ್ಯಮಂತ್ರಿಯಾದವರಲ್ಲ, ಸರಕಾರವನ್ನು ಹೇಗೆ ನಡೆಸುತ್ತಾರೆ ಎನ್ನುವ ಕನಿಷ್ಠ ಜ್ಞಾನವೂ ಅವರಿಗಿಲ್ಲ, ಆದರೂ ರಾಜಕೀಯದಲ್ಲಿ ಏಳು ಕೆರೆಯ ನೀರು ಕುಡಿದು ಪಳಗಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಂಥಾ ಮಾಗಿದ ನಾಯಕರಿಗೆ ಸಲಹೆ ಸೂಚನೆ ಕೊಡುತ್ತಾರೆ. ಈಗಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರನ್ನೇ ನೋಡಿ, ಅವರಿಗೆ ಸ್ವಂತ ಕ್ಷೇತ್ರವನ್ನು ಉಳಿಸಿಕೊಳ್ಳಲಾಗಲಿಲ್ಲ, ಆದರೆ ಬಿಜೆಪಿ ಸರಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ಹಿರಿಯ ನಾಯಕರಿಗೆ ಚುನಾವಣೆಯನ್ನು ಹೇಗೆ ಗೆಲ್ಲಬೇಕು ಎಂದು ಅವರು ಸಲಹೆ ಕೊಡುತ್ತಾರೆ.

ಎಷ್ಟು ವಿಚಿತ್ರ ಇದು? ಇನ್ನು ಜಿವಾರು ಪ್ರಾತಿನಿಧ್ಯ ಸಿಗಲಿಲ್ಲ ಎನ್ನುವುದು ಒಂದಷ್ಟು ಜಿಗಳವರ ಗೋಳು, ಹಾಗಂತ ಆ ಜಿಗಳಿಂದ ಕಾಂಗ್ರೆಸ್ಸಿನ ಶಾಸಕರಿಲ್ಲ ಅಂತಲ್ಲ ಅಥವಾ ಅವರು ಸಮರ್ಥರ ಅಂತನೂ ಅಲ್ಲ, ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರ ಗಮನ ಸೆಳೆಯುವಲ್ಲಿ ವಿ-ಲರಾಗಿzರೆ ಎಂದಷ್ಟೇ ಅರ್ಥ. ಈ ಪಕ್ಷ ಅಥವಾ ಸರಕಾರಕ್ಕೆ ತಮ್ಮ ಜಿಲ್ಲೆ ಲೆಕ್ಕಕ್ಕಿಲ್ಲ ಎನ್ನುವುದನ್ನು ಅಲ್ಲಿನ ಜನರು ಮೊದಲು ತಿಳಿದುಕೊಳ್ಳಬೇಕು. ಉದಾಹರಣೆಗೆ ಹೇಳುವುದಾದರೆ, ಉತ್ತರಕನ್ನಡ ಜಿಯ ಹಣೆಬರಹ ನೋಡಿ. ಆರರಲ್ಲಿ ಹೆಬ್ಬಾರರನ್ನೂ ಸೇರಿಸಿದರೆ ಐದು ಸ್ಥಾನಗಳಲ್ಲಿ ಕಾಂಗ್ರೆಸ್ಸಿನ ಶಾಸಕರಿದ್ದಾರೆ, ಅದರಲ್ಲಿ ಅತ್ಯಂತ ಹಿರಿಯರಾದ ಆರ್ .ವಿ.ದೇಶಪಾಂಡೆಯವರೂ ಇದ್ದಾರೆ. ಆದರೆ ಕಾಂಗ್ರೆಸ್ಸಿಗೆ ಈ ಜಿಯಲ್ಲಿ ಯಾರೂ ಕಾಣಲೇ ಇಲ್ಲ. ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿಯನ್ನು ಕೊಟ್ಟ ಜಿಗೆ ಇಂದು ಒಂದು ಮಂತ್ರಿಯ ಭಾಗ್ಯವೂ ಇಲ್ಲವಾದಂತಾಗಿದೆ. ಇನ್ನು ಕೊನೆಯದಾಗಿ, ಯಾರನ್ನು ಸಂತೋಷಗೊಳಿಸುವುದಕ್ಕೋ ಏನೋ, ಈ ಬಾರಿಯ ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಸ್ಥಾನಮಾನ ಕಲ್ಪಿಸಿಲ್ಲ. ಈ ಕೊರಗು ಇಡೀ ಬ್ರಾಹ್ಮಣ ಸಮುದಾಯ ಕ್ಕಿದೆ ಅಂತಲ್ಲ.

ಬ್ರಾಹ್ಮಣ ಕೋಟಾದಲ್ಲಿ ಇಲ್ಲಿಯವರೆಗೆ ಮಂತ್ರಿಗಳಾಗುತ್ತಿದ್ದ ದೇಶಪಾಂಡೆ, ದಿನೇಶ್ ಗುಂಡೂರಾವ್ ಅವರಿಗಿದೆ ಅಷ್ಟೇ. ಬ್ರಾಹ್ಮಣರೇ ಹಾಗೆ, ಕೊಟ್ಟರೆ ಸಂತೋಷವೂ ಇಲ್ಲ, ಕೊಡದಿದ್ದರೆ ಬೇಸರವೂ ಇಲ್ಲ. ಇಲ್ಲವಾದರೆ, ಯಾವುದಾದರೂ ಬ್ರಾಹ್ಮಣ ಸಂಘಟನೆಗಳು ಈ ಸಂದರ್ಭದಲ್ಲಿ ಧ್ವನಿ ಎತ್ತಿದ್ದನ್ನು ನೀವೇನಾದರೂ ನೋಡಿದ್ದೀರಾ? ರಸ್ತೆಯ ಮೇಲೆ ಟಯರ್ ಸುಟ್ಟಿದ್ದನ್ನು ಕಂಡಿದ್ದೀರಾ? ಸಮುದಾಯದ ನಾಯಕರ ಹೇಳಿಕೆಗಳನ್ನು ಎದರೂ ಓದಿದ್ದೀರಾ? ಸಮುದಾಯದ ಸ್ವಾಮೀಜಿಗಳು ಪೀಠಾಧಿಪತಿಗಳು ಯಾರಾದರೂ ಪ್ರತಿಕ್ರಿಯಸಿದ್ದನ್ನು ಕಂಡಿದ್ದೀರಾ? ಇಲ್ಲವೇ ಇಲ್ಲ.

ಸಮುದಾಯದ ಜನ ಇಂತಹ ಸಣ್ಣ ವಿಚಾರಗಳ ಕಡೆಗೆ ತಲೆ ಕೂಡಾ ಹಾಕುವುದಿಲ್ಲ, ಅಷ್ಟು ಸಂಭಾವಿತ ಜನಾಂಗ ಅದು. ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯ ವರೂ ಬ್ರಾಹ್ಮಣರೇ ಆಗಿದ್ದರು. ಅವರು ರಾಜ್ಯಕ್ಕೆ ಮಾಡಿದ್ದೇನು ಅಲ್ವಾ? ಅಧಿಕಾರ ವಿಕೇಂದ್ರೀಕರಣ, ದೇಶಾದ್ಯಂತ ಹೆಸರುಮಾಡಿದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದದ್ದು, ಜಾತಿಯನ್ನು ನೋಡದೇ ಹೊಸ ನಾಯಕರನ್ನು ಬೆಳೆಸಿದ್ದು, ಸುಧಾರಿತ ಆಡಳಿತ ವ್ಯವಸ್ಥೆಯ ಭಾಗವಾಗಿ ಲೋಕಾಯುಕ್ತವನ್ನು ಪರಿಚಯಿಸಿದ್ದು, ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿಸಿದ್ದು ಮುಂತಾದ ಸಣ್ಣಪುಟ್ಟ ಕೆಲಸ ಮಾಡಿರುವುದನ್ನು ಬಿಟ್ಟರೆ ರಾಮಕೃಷ್ಣ ಹೆಗಡೆಯವರು ಏನು ಮಾಡಿದ್ದಾರೆ ಹೇಳಿ? ಜಾತಿಜಾತಿಗಳ ಮಧ್ಯೆ ಜಗಳ ಹುಟ್ಟಿಸಲಿಲ್ಲ, ಪ್ರತ್ಯೇಕ ಧರ್ಮದ ಚಿಂತನೆ ಮಾಡಲಿಲ್ಲ, ಅರ್ಹತೆಯಿದ್ದರೂ ತನ್ನ ಜಾತಿಯ ಜನರನ್ನು ಅಧಿಕಾರದ ಪಡಸಾಲೆಯ ಹತ್ತಿರ ಬಿಡಲಿಲ್ಲ.

ತಾನು ಬ್ರಾಹ್ಮಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎನ್ನುತ್ತಿದ್ದ ಗುಂಡೂರಾವ್ ಅವರೂ ಅಽಕಾರದಲ್ಲಿzಗ ಜಾತ್ಯತೀತತೆಯ ಪರಾಕಾಷ್ಠತೆಯನ್ನು ಮೆರೆದವರೇ ವಿನಃ ಯಾವ ಬ್ರಾಹ್ಮಣರನ್ನು ಮುಂದೆ ತರಲಿಲ್ಲ. ಇನ್ನು ಅವರ ಮಗ ದಿನೇಶ್ ಅವರ ಬಗ್ಗೆ ಹೇಳದಿರುವುದೇ ಲೇಸು. ಬ್ರಾಹ್ಮಣ ಕೋಟಾದಲ್ಲಿ ಈ ಬಾರಿ ಮಂತ್ರಿಗಿರಿ ಸಿಗದಿದ್ದಾಗ ಪಾಪ ಅವರಿಗೆ ತಾನು ಬ್ರಾಹ್ಮಣ ಎನ್ನುವುದು ನೆನಪಾಯಿತು. ಅಂತೂ ಕಾಂಗ್ರೆಸ್ ಸರಕಾರದಲ್ಲಿ ಬ್ರಾಹ್ಮಣರು ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಅಂತಾಯಿತು.

ಅಷ್ಟಾಗಿ ಬ್ರಾಹ್ಮಣರಿಗೆ, ಮಹಿಳೆಯರಿಗೆ ಸಚಿವಸಂಪುಟದಲ್ಲಿ ಏಕೆ ಸ್ಥಾನ ಕೊಡಬೇಕು ಹೇಳಿ? ಆ ರೀತಿ ಕಾಯಿದೆ ಏನಾದರೂ ಇದೆಯಾ? ಇಲ್ಲವಲ್ಲ. ನನ್ನ ಪ್ರಕಾರ ಮುಂದಿನ ಚುನಾವಣೆಯಲ್ಲಿ ಮಹಿಳೆ ಯರಿಗೆ ಹಾಗೂ ಬ್ರಾಹ್ಮಣರಿಗೆ ಟಿಕೆಟ್ಟನ್ನೇ ಕೊಡಕೂಡದು. ಅದರಿಂದ ರಾಜ್ಯಕ್ಕೆ ಏನೂ ತೊಂದರೆ ಯಾಗುವುದಿಲ್ಲ, ಪಕ್ಷಕ್ಕೂ ನಷ್ಟವಿಲ್ಲ ಹಾಗೂ ಅದು ಸಂವಿಧಾನ ವಿರೋಧಿಯೂ ಆಗುವುದಿಲ್ಲ. ಬ್ರಾಹ್ಮಣರಿಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ತರಬೇತಿ ಕೊಡಲು ಸರಕಾರ ಹಣಕಾಸಿನ ಸಹಾಯ ಮಾಡಲು ಸಿದ್ಧವಿದೆ ಎಂದು ಮೊನ್ನೆ ಅರ್ಚಕರಿಂದ ಸನ್ಮಾನ ಸ್ವೀಕರಿಸಿದ ಮುಖ್ಯಮಂತ್ರಿಗಳು ಹೇಳಿ, ನಿಮ್ಮ ಜಾಗ ಯಾವುದು ಎನ್ನುವುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಹಾಗಾಗಿ ಇಡೀ ಬ್ರಾಹ್ಮಣ ಸಮುದಾಯ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದ ಹೇಳಬೇಕು.

ಮಹಿಳೆಯರಿಗೂ ಅಡುಗೆ ಮಾಡುವ ತರಬೇತಿ ನೀಡಲು ಸರಕಾರ ಹಣಕಾಸು ನೆರವು ನೀಡಿದರೆ ಅಷ್ಟೇ ಸಾಕು, ಸಂಪುಟದಲ್ಲ ಸ್ಥಾನಮಾನ ನೀಡಬೇಕಾಗಲಿಕ್ಕಿಲ್ಲ ಅಲ್ವಾ? ಅರ್ಹತೆ ಇದ್ದರೂ ಬ್ರಾಹ್ಮಣರು ಮಹಿಳೆಯರು ಹಾಗೂ ಸಣ್ಣ ಸಣ್ಣ ಸಮುದಾಯದವರಿಗೆ ಡಿ.ಕೆ.ಶಿವಕುಮಾರ್ ಸರಕಾರದ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದಿರುವುದನ್ನು ನೋಡುವಾಗ ‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎನ್ನುವ ಗಾದೆ ಮಾತು ನೆನಪಾಯಿತು. ಇಲ್ಲಿ ಕುಂತಿಯ ಮಕ್ಕಳು ಯಾರು ಎನ್ನುವ ಜಿಜ್ಞಾಸೆಯನ್ನು ಓದುಗರ ಭಾವಕ್ಕೆ ಬಿಡೋಣ!