Leena Joshi Column: ಸದ್ದಾಂ ಹುಸೇನ್ ನೇಣಿನ ಹಿಂದಿನ ದಿನಗಳು
ಗಲ್ಲಿಗೇರಿಸುವ ಮುನ್ನ ಸದ್ದಾಂ ಕಾವಲು ಕಾಯುತ್ತಿದ್ದ ಹನ್ನೆರಡು ಅಮೆರಿಕನ್ ಸೈನಿಕರ ಅನುಭವ ಗಳನ್ನು ಈ ಕೃತಿ ದಾಖಲಿಸುತ್ತದೆ. ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ರನ್ನು ಅಮೆರಿಕ ನೇತೃತ್ವದ ಪಡೆಗಳು 2003ರ ಡಿಸೆಂಬರ್‌ನಲ್ಲಿ ಬಂಧಿಸಿದವು. ಹಲವು ವರ್ಷಗಳ ಕಾಲ ಅಮೆರಿಕದ ವಶದಲ್ಲಿದ್ದ ಸದ್ದಾಂರ ವಿಚಾರಣೆ ನಡೆಯುತ್ತಿದ್ದ ಅಂತಿಮ ಹಂತದಲ್ಲಿ, 2006ರ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ 12 ಮಂದಿ ಅಮೆರಿಕನ್ ಸೈನಿಕರು ಅವರನ್ನು 24 ಗಂಟೆಯೂ ಕಾವಲು ಕಾಯುತ್ತಿದ್ದರು
-
ಅಮೃತಕಾಲ
ಲೀನಾ ಜೋಶಿ
ಇತಿಹಾಸ ಕೆಲವು ವ್ಯಕ್ತಿಗಳನ್ನು ಒಂದೇ ಪದದಲ್ಲಿ ನೆನಪಿಟ್ಟುಕೊಳ್ಳುತ್ತದೆ. ಸದ್ದಾಂ ಹುಸೇನ್ ಎಂದರೆ ಸರ್ವಾಧಿಕಾರಿ, ಕ್ರೂರ ಆಡಳಿತಗಾರ, ಲಕ್ಷಾಂತರ ಜನರ ಸಾವಿಗೆ ಕಾರಣನಾದ ದುಷ್ಟ, ದುರುಳ. ಅಮೆರಿಕದ ನೇತೃತ್ವದ ಇರಾಕ್ ಯುದ್ಧದ ಪ್ರಮುಖ ಖಳನಾಯಕ. ಆದರೆ ಒಬ್ಬ ವ್ಯಕ್ತಿಯನ್ನು ಇತಿಹಾಸದ ಒಂದು ದೊಡ್ಡ ಪಾತ್ರದಿಂದ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಯನ್ನು ಬಹಳ ಅಸಾಮಾನ್ಯವಾಗಿ ನನ್ನ ಮುಂದಿಟ್ಟ ಪುಸ್ತಕವೆಂದರೆ ಅಮೆರಿಕದ ಮಾಜಿ ಸೈನಿಕ, ಸದ್ದಾಂ ಕಾವಲುಗಾರ ವಿಲ್ ಬಾರ್ಡೆನ್ ವರ್ಪರ್ ಬರೆದ The Prisoner in His Palace: Saddam Hussein, His American Guards, and What History Leaves Unsaid.
ಗಲ್ಲಿಗೇರಿಸುವ ಮುನ್ನ ಸದ್ದಾಂ ಕಾವಲು ಕಾಯುತ್ತಿದ್ದ ಹನ್ನೆರಡು ಅಮೆರಿಕನ್ ಸೈನಿಕರ ಅನುಭವಗಳನ್ನು ಈ ಕೃತಿ ದಾಖಲಿಸುತ್ತದೆ. ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್‌ರನ್ನು ಅಮೆರಿಕ ನೇತೃತ್ವದ ಪಡೆಗಳು 2003ರ ಡಿಸೆಂಬರ್‌ನಲ್ಲಿ ಬಂಧಿಸಿದವು. ಹಲವು ವರ್ಷಗಳ ಕಾಲ ಅಮೆರಿಕದ ವಶದಲ್ಲಿದ್ದ ಸದ್ದಾಂರ ವಿಚಾರಣೆ ನಡೆಯುತ್ತಿದ್ದ ಅಂತಿಮ ಹಂತದಲ್ಲಿ, 2006ರ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ 12 ಮಂದಿ ಅಮೆರಿಕನ್ ಸೈನಿಕರು ಅವರನ್ನು 24 ಗಂಟೆಯೂ ಕಾವಲು ಕಾಯುತ್ತಿದ್ದರು. ಈ ಸೈನಿಕರ ತಂಡವನ್ನು ನಂತರ ಸೂಪರ್ ಟ್ವೆಲ್ವ್ ಎಂದು ಕರೆಯಲಾಯಿತು. ಅವರ ಕೆಲಸ ಯುದ್ಧಭೂಮಿಯಲ್ಲಿ ಶತ್ರುವಿನ ವಿರುದ್ಧ ಹೋರಾಡುವುದಲ್ಲ, ಕಾವಲು ಕಾಯುವುದು.
ಒಂದು ಕಾಲದಲ್ಲಿ ಅಮೆರಿಕದ ಮಿತ್ರನಾಗಿದ್ದ, ಕೊನೆಗೆ ಶತ್ರುವಾಗಿ ಬಂಧಿತನಾಗಿದ್ದ ವ್ಯಕ್ತಿಯನ್ನು ಇಡೀ ದಿನ ಕಣ್ಣಲ್ಲಿ ಕಣ್ಣಿಟ್ಟು ಕಾಯುವುದು. ಅವರ ಕೈಯಲ್ಲಿ ಶಸ್ತ್ರವಿತ್ತು; ಎದುರಿಗಿದ್ದ ವ್ಯಕ್ತಿ ಬಂಧಿಯಾಗಿದ್ದ. ಆದರೆ ದಿನಗಳೆದಂತೆ ಅವರ ಎದುರಿಗಿದ್ದ, ದಿ ರಾಕ್‌ನಲ್ಲಿ ಬಂಧಿಯಾಗಿದ್ದ ಸರ್ವಾಧಿಕಾರಿ ನಿಧಾನವಾಗಿ ಒಬ್ಬ ವಯಸ್ಸಾದ ಮನುಷ್ಯನಾಗಿ ಕಾಣಿಸಿಕೊಳ್ಳತೊಡಗಿದ. ಇದೇ ಈ ಪುಸ್ತಕದ ಅತ್ಯಂತ ಗೊಂದಲಕಾರಿ, ಮಾನವೀಯ ಮುಖ. ಸದ್ದಾಂ ಹುಸೇನ್‌ನ ಕೊನೆಯ ದಿನಗಳು ಕಳೆದ ಸ್ಥಳವೂ ಒಂದು ರೀತಿಯ ವ್ಯಂಗ್ಯವನ್ನು ಹೊಂದಿತ್ತು. ತನ್ನ ಅಧಿಕಾರ ಮತ್ತು ವೈಭವವನ್ನು ಪ್ರದರ್ಶಿಸಲು ಕಟ್ಟಿಸಿಕೊಂಡಿದ್ದ ಅರಮನೆಯ ಅವನ ಕೊನೆಗಾಲವಾಯಿತು.
ಇದನ್ನೂ ಓದಿ: Leena Joshi Column: ಬದಲಾಗಿರುವುದು ಮಕ್ಕಳಲ್ಲ, ಸುತ್ತಲಿನ ಜಗತ್ತು!
ಒಂದು ಕಾಲದಲ್ಲಿ ದೇಶದ ಸಂಪೂರ್ಣ ಅಧಿಕಾರ ಕೈಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ, ಈಗ ಕೆಲವೇ ಕೊಠಡಿಗಳೊಳಗೆ ಸೀಮಿತನಾಗಿದ್ದ. ಅವನ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದವರು ಅವನ ದೇಶದ ಸೈನಿಕರಲ್ಲ; ಅವನನ್ನು ಸೋಲಿಸಿದ ಅಮೆರಿಕನ್ ಸೈನಿಕರು. ಆದರೆ ವಿಚಿತ್ರವೆಂದರೆ, ಈ ಸೈನಿಕರಿಗೆ ಸದ್ದಾಂನನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಂತೆ ಅವರ ಮನಸ್ಸಿನಲ್ಲಿದ್ದ ಅವನ ಚಿತ್ರಣವೂ ಬದಲಾಗತೊಡಗಿತು. ಅವರು ನಿರೀಕ್ಷಿಸಿದ್ದ ವ್ಯಕ್ತಿ ಸದಾ ಕೋಪದಿಂದ, ಕ್ರೂರವಾಗಿ, ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸುವ ದೈತ್ಯನಾಗಿರಲಿಲ್ಲ.
ಸದ್ದಾಂ ಮಾತನಾಡುತ್ತಿದ್ದ, ಹಾಸ್ಯ ಮಾಡುತ್ತಿದ್ದ, ತನ್ನ ಕುಟುಂಬದ ಬಗ್ಗೆ ಹೇಳುತ್ತಿದ್ದ, ಸೈನಿಕರ ಕುಟುಂಬಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದ, ಅವರೊಂದಿಗೆ ಚಹಾ ಕುಡಿಯುತ್ತಿದ್ದ, ಚೆಸ್ ಆಡುತ್ತಿದ್ದ. ಅವನ ವರ್ತನೆಯಲ್ಲಿ ಆತ್ಮೀಯತೆಯ ಕ್ಷಣಗಳೂ ಕಾಣಿಸುತ್ತಿದ್ದವು. ಸದ್ದಾಂನ ವ್ಯಕ್ತಿತ್ವದ ಮತ್ತೊಂದು ಕುತೂಹಲಕಾರಿ ಅಂಶವನ್ನು ಪುಸ್ತಕ ದಾಖಲಿಸುತ್ತದೆ. ನ್ಯಾಯಾಲಯದಲ್ಲಿ ಆತ ಅಮೆರಿಕವನ್ನು ಟೀಕಿಸುತ್ತಿದ್ದ, ತನ್ನ ಮೇಲಿನ ಆರೋಪಗಳನ್ನು ತಿರಸ್ಕರಿಸುತ್ತಿದ್ದ, ತನ್ನನ್ನು ರಾಜಕೀಯವಾಗಿ ಹಿಂಸಿಸಲಾಗುತ್ತಿದೆ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದ. ಆದರೆ ವಿಚಾರಣೆ ಮುಗಿಸಿ ಮತ್ತೆ ತನ್ನ ಕಾವಲುಗಾರರ ಬಳಿಗೆ ಬಂದಾಗ ಅವನ ವರ್ತನೆ ಸಂಪೂರ್ಣ ಬದಲಾಗುತ್ತಿತ್ತು. ಒಮ್ಮೆ ನ್ಯಾಯಾಲಯ ದಲ್ಲಿ ಅಮೆರಿಕನ್ ಸೈನಿಕರ ವಿರುದ್ಧ ದೂರು ನೀಡಿದ ಬಳಿಕ, ಅದೇ ಸೈನಿಕರೊಂದಿಗೆ ಲಿಫ್ಟ್ʼನಲ್ಲಿ ಆತ ಸಹಜವಾಗಿ ಮಾತನಾಡುತ್ತಿದ್ದನೆಂದು ಬಾರ್ಡೆನ್‌ವರ್ಪರ್ ವಿವರಿಸುತ್ತಾರೆ. ನ್ಯಾಯಾಲಯದ ವರ್ತನೆ ಒಂದು ರೀತಿಯ ರಾಜಕೀಯ ನಾಟಕವಾಗಿತ್ತು ಎಂಬುದನ್ನು ಸೈನಿಕರೂ ಅರ್ಥ ಮಾಡಿಕೊಂಡಿದ್ದರು. ಇಲ್ಲಿ ಸದ್ದಾಂನ ರಾಜಕೀಯ ಬುದ್ಧಿವಂತಿಕೆ ಯ ಮತ್ತೊಂದು ಮುಖ ಕಾಣಿಸುತ್ತದೆ. ಅಧಿಕಾರ ಕಳೆದುಕೊಂಡಿದ್ದರೂ, ಪ್ರೇಕ್ಷಕರ ಮುಂದೆ ತನ್ನ ಪಾತ್ರವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಆತ ಮರೆತಿರಲಿಲ್ಲ. ಸದ್ದಾಂ ತನ್ನ ಕುಟುಂಬದ ಬಗ್ಗೆಯೂ ಕಾವಲುಗಾರರೊಂದಿಗೆ ಮಾತನಾಡುತ್ತಿದ್ದ. ವಿಶೇಷವಾಗಿ ತನ್ನ ಮಗ ಉದಯ್‌ನ ವರ್ತನೆಗಳ ಬಗ್ಗೆ ಮಾತನಾಡಿದ ಸಂದರ್ಭಗಳು ಈ ಪುಸ್ತಕದ ಗಮನಾರ್ಹ ಭಾಗಗಳಾಗಿವೆ. ಉದಯ್‌ನ ಹಿಂಸಾತ್ಮಕ ಸ್ವಭಾವ ಮತ್ತು ಕೆಲವು ಘಟನೆಗಳ ಬಗ್ಗೆ ಸದ್ದಾಂ ಹೇಳಿದ್ದಾನೆ.
ತನ್ನ ಮಗ ಮಾಡಿದ ಗಂಭೀರ ತಪ್ಪಿಗೆ ಶಿಕ್ಷೆಯಾಗಿ ಅವನ ದುಬಾರಿ ಕಾರುಗಳ ಸಂಗ್ರಹವನ್ನು ಸುಟ್ಟು ಹಾಕಿಸಿದ್ದಾಗಿ ಹೇಳಿದ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ. ಇಂತಹ ಮಾತುಗಳನ್ನು ಕೇಳುವಾಗ ಕಾವಲುಗಾರರಿಗೆ ಎದುರಿಗಿದ್ದ ವ್ಯಕ್ತಿ ಸದ್ದಾಂ ಹುಸೇನ್ ಎಂಬ ರಾಜಕೀಯ ಹೆಸರು ಮಾತ್ರವಾಗಿರ ಲಿಲ್ಲ, ಆತ ತನ್ನ ಮಕ್ಕಳ ಬಗ್ಗೆ ಮಾತನಾಡುವ ತಂದೆಯೂ ಆಗಿದ್ದ. ಸದ್ದಾಂ ತನ್ನ ಪರಿಸ್ಥಿತಿ ಶಾಶ್ವತವಲ್ಲ ಎಂಬ ನಂಬಿಕೆಯನ್ನು ಕೊನೆಯವರೆಗೂ ವ್ಯಕ್ತಪಡಿಸುತ್ತಿದ್ದ. ಕೆಲವೊಮ್ಮೆ ನಗುತ್ತಾ, ನಾನು ಇಲ್ಲಿಂದ ಹೊರಬರುತ್ತೇನೆ; ಅವರು ನನ್ನನ್ನು ಕರೆದುಕೊಂಡು ಹೋಗಲು ಬರುತ್ತಿದ್ದಾರೆ ಎಂದು ಸೈನಿಕರೊಂದಿಗೆ ಹಾಸ್ಯ ಮಾಡುತ್ತಿದ್ದ. ಒಬ್ಬ ಸೈನಿಕನಿಗೆ, ತನ್ನ ಹಣವನ್ನು ಬಳಸಲು ಅವಕಾಶ ಸಿಕ್ಕರೆ ಆತನ ಮಗನ ಕಾಲೇಜು ಶಿಕ್ಷಣದ ವೆಚ್ಚವನ್ನು ತಾನೇ ಭರಿಸುವುದಾಗಿ ಹೇಳಿದ್ದ ನೆಂದು ಕೃತಿಯಲ್ಲಿ ದಾಖಲಿಸಲಾಗಿದೆ. ಸೈನಿಕನೊಬ್ಬ ತನ್ನ ಸಹೋದರನ ಸಾವಿನ ಬಗ್ಗೆ ದುಃಖ ಹಂಚಿಕೊಂಡಾಗ, ಸದ್ದಾಂ ಆತನನ್ನು ಅಪ್ಪಿಕೊಂಡು ಇನ್ನು ಮುಂದೆ ನಾನು ನಿನ್ನ ಸಹೋದರ ನಾಗಿರುತ್ತೇನೆ ಎಂದು ಸಮಾಧಾನ ಮಾಡಿದ್ದನಂತೆ. ಇವು ನಿಜವಾದ ಕಾಳಜಿಯ ಮಾತುಗಳೋ ಅಥವಾ ಸದ್ದಾಂನ ರಾಜಕೀಯ ಮತ್ತು ಮಾನಸಿಕ ಪ್ರಭಾವ ಬೀರುವ ಸ್ವಭಾವದ ಭಾಗವೋ ಎಂಬ ಪ್ರಶ್ನೆಗೆ ಸೈನಿಕರ ಬಳಿ ಖಚಿತ ಉತ್ತರ ವಿರಲಿಲ್ಲ.
ಸದ್ದಾಂ ಹಾಗೂ ಸೈನಿಕರ ನಡುವೆ ವಿಚಿತ್ರವಾದ ಮಾನವೀಯ ಸಂಬಂಧ ಬೆಳೆದಿತ್ತು. ಸೈನಿಕರು ತಮ್ಮ ಕುಟುಂಬಗಳಿಂದ ಬಂದ ವಸ್ತುಗಳನ್ನು ಅವನಿಗೆ ನೀಡುತ್ತಿದ್ದರು. ಒಮ್ಮೆ ರೋಜರ್ಸನ್ ಎಂಬ ಸೈನಿಕ ಸುಗಂಧದ ಮೇಣದ ಬತ್ತಿಯನ್ನು ಸದ್ದಾಂಗೆ ನೀಡಿದ. ಸದ್ದಾಂ ಆ ಮೇಣದ ಬತ್ತಿಯ ಮೇಲೆ ಅರೇಬಿಕ್ ಭಾಷೆಯಲ್ಲಿ ಕವಿತೆಯೊಂದನ್ನು ಕೆತ್ತಿ ಅದನ್ನು ತನ್ನ ಮಗಳಿಗೆ ಉಡುಗೊರೆಯಾಗಿ ಕಳುಹಿಸಿದ್ದನಂತೆ. ತನಗೆ ಸಿಗಾರ್ ಸೇದುವುದನ್ನು ಕಲಿಸಿದ್ದು ಫಿಡೆಲ್ ಕ್ಯಾಸ್ಟ್ರೋ ಎಂದು ಹೇಳಿದ್ದ. ಕುಟುಂಬದ ಬಗ್ಗೆ ಪ್ರೀತಿಯಿಂದ ಮಾತನಾಡುವ ವ್ಯಕ್ತಿ ಎಂಬುದರಿಂದ ಆತ ಒಳ್ಳೆಯ ಆಡಳಿತಗಾರ ನಾಗುವುದಿಲ್ಲ. ತನ್ನ ಕಾವಲುಗಾರರೊಂದಿಗೆ ಆತ್ಮೀಯವಾಗಿ ವರ್ತಿಸಿದ ಎಂಬ ಕಾರಣಕ್ಕೆ ಆತನ ಆಡಳಿತದ ಹಿಂಸೆ, ಹತ್ಯೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳು ಅಳಿದುಹೋಗುವುದಿಲ್ಲ. ಈ ಪುಸ್ತಕದ ಶಕ್ತಿ ಸದ್ದಾಂನನ್ನು ನಿರಪರಾಧಿಯನ್ನಾಗಿ ಮಾಡುವುದರಲ್ಲಿಲ್ಲ. ಬದಲಾಗಿ, ಕೆಟ್ಟ ವ್ಯಕ್ತಿ ಎಂದರೆ ಅವನಲ್ಲಿರುವ ಪ್ರತಿಯೊಂದು ಮಾನವೀಯ ಗುಣವೂ ಸುಳ್ಳೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಬಾರ್ಡೆನ್‌ವರ್ಪರ್‌ರ ಪುಸ್ತಕದಲ್ಲಿ ಸದ್ದಾಂನಲ್ಲಿ ಎರಡು ವಿಭಿನ್ನ ಮುಖಗಳು ಕಾಣಿಸುತ್ತವೆ- ಒಂದೆಡೆ ಅಧಿಕಾರಕ್ಕಾಗಿ ಹಿಂಸೆ ಮತ್ತು ಹತ್ಯೆಯನ್ನು ಬಳಸಿದ ನಿರ್ದಯ ಆಡಳಿತಗಾರ; ಮತ್ತೊಂದೆಡೆ ತನ್ನ ಕೊನೆಯ ದಿನಗಳಲ್ಲಿ ಕಾವಲುಗಾರರೊಂದಿಗೆ ಮಾತನಾಡುವ, ಅವರ ಕುಟುಂಬಗಳ ಬಗ್ಗೆ ಕೇಳುವ, ಕೆಲವೊಮ್ಮೆ ಹಾಸ್ಯ ಮಾಡುವ, ಮರಣವನ್ನು ಎದುರಿಸುವ ವೃದ್ಧ ಬಂಧಿ. ಇದು ಸದ್ದಾಂನ ಪರವಾದ ವಾದವಲ್ಲ, ಇದು ಮಾನವ ಸ್ವಭಾವದ ಸಂಕೀರ್ಣತೆಯ ಅನುಭವ. ಸದ್ದಾಂನ ಕೊನೆಯ ದಿನಗಳಲ್ಲಿ ಅತ್ಯಂತ ಭಾವನಾತ್ಮಕ ಕ್ಷಣ ಅವನ ಗಲ್ಲು ಶಿಕ್ಷೆಯ ಮುನ್ನದ ದಿನ. ತಿಂಗಳುಗಳ ಕಾಲ ಅವನನ್ನು ನೋಡಿಕೊಂಡಿದ್ದ ಸೈನಿಕರಿಗೆ ಆತ ಈಗ ಕೇವಲ High Value Detainee ಆಗಿರಲಿಲ್ಲ. ಅವರೊಂದಿಗೆ ಪ್ರತಿದಿನ ಮಾತನಾಡಿದ್ದ ವ್ಯಕ್ತಿಯಾಗಿದ್ದ. ಗಲ್ಲಿಗೇರಿಸುವ ಮೊದಲು ಸದ್ದಾಂ ತನ್ನ ಕಾವಲುಗಾರರಿಗೆ ಧನ್ಯವಾದ ಹೇಳಿದ. ನೀವು ನನ್ನ ಕುಟುಂಬದಂತಿದ್ದೀರಿ ಎಂದ, ತನ್ನ ಕೈಯಲ್ಲಿದ್ದ ಗಡಿಯಾರವನ್ನು ಒಬ್ಬ ಸೈನಿಕನಿಗೆ ಕೊಟ್ಟ. 30 ಡಿಸೆಂಬರ್, 2006ರಂದು ಬಾಗ್ದಾದ್‌ನಲ್ಲಿ ಅವನನ್ನು ಗಲ್ಲಿಗೇರಿಸಲಾಯಿತು. ಆ ದಿನ ಕಾವಲು ಕಾಯುತ್ತಿದ್ದ ಸೈನಿಕರಿಗೆ ಅದು ಸಾಮಾನ್ಯ ಕರ್ತವ್ಯದ ದಿನವಾಗಿರಲಿಲ್ಲ. ರೋಜರ್ಸನ್ ಪ್ರಕಾರ, ಸದ್ದಾಂ ತಮ್ಮ ಕೂದಲನ್ನು ಸರಿಪಡಿಸಿಕೊಂಡು, ಕೋಣೆಯಲ್ಲಿ ಅತ್ತಿತ್ತ ನಡೆಯುತ್ತಿದ್ದ, ಅವನಿಗೆ ಏನಾಗಲಿದೆ ಎಂಬುದು ತಿಳಿದಿತ್ತು. ಅವನನ್ನು ಸಾವಿನತ್ತ ಕರೆದೊಯ್ಯುವುದನ್ನು ನೋಡುತ್ತಿದ್ದಾಗ ಸೈನಿಕರಿಗೂ ದುಃಖವಾಗಿತ್ತು.
ಗಲ್ಲಿಗೇರಿಸಿದ ನಂತರ ಸದ್ದಾಂನ ದೇಹವನ್ನು ಹೊರಗೆ ತರಲಾಯಿತು. ಅಲ್ಲಿ ಕೆಲವರು ಮೃತ ದೇಹವನ್ನು ಅವಮಾನಿಸುತ್ತಾ ಹೊಡೆದು, ಉಗುಳಿದರು. ಈ ದೃಶ್ಯವನ್ನು ನೋಡಿದ ಅಮೆರಿಕನ್ ಕಾವಲುಗಾರರು ಆಕ್ರೋಶ ಮತ್ತು ದುಃಖಕ್ಕೆ ಒಳಗಾದರು. ಒಬ್ಬ ಸೈನಿಕ ಜನರತ್ತ ಧಾವಿಸಲು ಮುಂದಾದರೂ, ಸಹೋದ್ಯೋಗಿಗಳು ಅವರನ್ನು ತಡೆದರು ಎಂದು ಬಾರ್ಡನ್‌ವರ್ಪರ್ ದಾಖಲಿಸಿ ದ್ದಾರೆ. ಒಬ್ಬ ಅನಾಮಧೇಯ ಶತ್ರುವನ್ನು ದೂರದಿಂದ ಗುಂಡಿಕ್ಕುವುದು ಒಂದು ವಿಷಯ. ನಾಲ್ಕು- ಐದು ತಿಂಗಳುಗಳ ಕಾಲ ಪ್ರತಿದಿನ ಮಾತನಾಡಿದ, ಚಹಾ ಕುಡಿದ, ಕುಟುಂಬದ ವಿಚಾರ ಕೇಳಿದ ವ್ಯಕ್ತಿಯನ್ನು ಮರಣದ ಕಡೆಗೆ ಕರೆದೊಯ್ಯುವುದು ಮತ್ತೊಂದು ವಿಷಯ. ಕೆಲವು ಸೈನಿಕರು ಅತ್ತರು. ಅವರಿಗೆ ಸದ್ದಾಂ ಸಾವಿಗೆ ತಾನೇ ಕಾರಣನಾದವನಂತೆ ಭಾಸವಾಯಿತು. ಹಲವು ತಿಂಗಳುಗಳ ಕಾಲ ಒಬ್ಬ ವ್ಯಕ್ತಿಯ ಹತ್ತಿರವೇ ಇದ್ದು, ಆತನ ದಿನನಿತ್ಯದ ಜೀವನ, ಮಾತು, ಹಾಸ್ಯ, ದುಃಖ ಮತ್ತು ಅಭ್ಯಾಸಗಳನ್ನು ಕಂಡಾಗ ಸೈನಿಕರಲ್ಲಿ ಉಂಟಾದ ಮಾನವೀಯ ಬಾಂಧವ್ಯದ ಪ್ರತಿಫಲವಾಗಿತ್ತು. ಸದ್ದಾಂನ ಕಾವಲುಗಾರರಲ್ಲಿ ಪ್ರಮುಖವಾಗಿ ಉಲ್ಲೇಖವಾಗುವ ಆಡಂ ರೋಜರ್ಸನ್ ನಂತರ ಅಮೆರಿಕನ್ ಸೇನೆಯನ್ನು ತೊರೆದರು.
ಸದ್ದಾಂನ ಕಾವಲು ಮತ್ತು ಅವರ ಗಲ್ಲಿಗೇರಿಸುವಿಕೆಯ ಅನುಭವ ತಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರಿದೆ ಎಂದು ರೋಜರ್ಸನ್ ಹೇಳಿದ್ದಾರೆ. ಕೊನೆಯ ದಿನಗಳಲ್ಲಿ ಕಾವಲು ಕಾಯುತ್ತಿದ್ದ ಹನ್ನೆರಡು ಸೈನಿಕರಿಗೆ ಸಿಕ್ಕ ಸದ್ದಾಂ, ಜಗತ್ತು ಕಂಡ ಸದ್ದಾಂಗಿಂತ ಭಿನ್ನವಾಗಿದ್ದ. ಆದರೆ ಆ ಎರಡು ಮುಖಗಳೂ ಒಂದೇ ವ್ಯಕ್ತಿಯದ್ದಾಗಿದ್ದವು. ಅದಕ್ಕಾಗಿಯೇ The Prisoner in His Palace ಕೃತಿ ಕೇವಲ ಸದ್ದಾಂ ಹುಸೇನ್‌ನ ಕೊನೆಯ ದಿನಗಳ ಕಥೆಯಲ್ಲ. ಅದು ಅಧಿಕಾರ, ಕ್ರೌರ್ಯ, ಮಾನವೀಯತೆ, ಯುದ್ಧ ಮತ್ತು ನಮ್ಮದೇ ಪೂರ್ವಗ್ರಹಗಳ ಬಗ್ಗೆ ಕೇಳುವ ಉತ್ತರವಿಲ್ಲದ ಪ್ರಶ್ನೆಗಳ ಸರಮಾಲೆಯಾಗಿದೆ.