Raghava Sharma Nidle Column: ನ್ಯಾ.ವರ್ಮಾ ರಾಜೀನಾಮೆ: ಆರೋಪಗಳೂ ಸಮಾಧಿ ಸೇರುವವೇ ?
ನ್ಯಾ.ವರ್ಮಾ ವಿರುದ್ಧದ ತನಿಖೆಯನ್ನು ಸಮಿತಿ ಇನ್ನೇನು ಪೂರ್ಣಗೊಳಿಸುವ ಹಂತದಲ್ಲಿತ್ತು. ಆದರೆ, ಅವರು ಏಪ್ರಿಲ್ 9ರಂದು ರಾಜೀನಾಮೆ ಸಲ್ಲಿಸಿದರು. ಇದರಿಂದಾಗಿ, ಸಮಿತಿಯ ಅಸ್ತಿತ್ವವೇ ಬಹುತೇಕ ಅಪ್ರಸ್ತುತ ಎನಿಸಿಕೊಳ್ಳಲಿದೆ. ನ್ಯಾ. ವರ್ಮಾ 2031ಕ್ಕೆ ನಿವೃತ್ತಿಯಾಗಬೇಕಿತ್ತು. ಆದರೆ, ರಾಜೀನಾಮೆ ಯಿಂದ ನ್ಯಾಯಾಂಗ ವೃತ್ತಿಜೀವನ ಅಕಾಲಿಕವಾಗಿ ಮುಕ್ತಾಯಗೊಂಡಿದೆ.
-
ಜನಪಥ
ಸಂಸತ್ತಿನಿಂದ ಪದಚ್ಯುತರಾಗದ ಕಾರಣ ನ್ಯಾ.ಯಶವಂತ್ ವರ್ಮಾ ಹೈಕೋರ್ಟುಗಳ ಇತರೆ ನಿವೃತ್ತ ನ್ಯಾಯಾಧೀಶರಂತೆ ಪಿಂಚಣಿ ಮತ್ತು ಎಲ್ಲ ನಿವೃತ್ತಿ ಸೌಲಭ್ಯಗಳನ್ನು ಪಡೆಯ ಲಿದ್ದಾರೆ..! ಎಲ್ಲಿಯ ವರೆಗೆ ಎಂದರೆ, ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಔಪಚಾರಿಕ ವಾಗಿ ಅಂಗೀಕರಿಸಿದರೆ, ಅವರ ಮೇಲೆ ಯಾವುದೇ ಪ್ರಕರಣ ಇರಲೇ ಇಲ್ಲವೇನೋ ಎಂಬಂತೆ ಭಾಸವಾಗಿ ಬಿಡುತ್ತದೆ.!
ದಿಲ್ಲಿಯ ತಮ್ಮ ಅಧಿಕೃತ ಸರಕಾರಿ ಬಂಗಲೆಯ ಸ್ಟೋರ್‌ರೂಮ್‌ನಲ್ಲಿ ಅರ್ಧ ಸುಟ್ಟಿದ್ದ ಕಂತೆ-ಕಂತೆ ನೋಟುಗಳು ಪತ್ತೆಯಾದ ಪ್ರಕರಣದಲ್ಲಿ ಸಂಸತ್ತಿನಿಂದ ಪದಚ್ಯುತ ಪ್ರಕ್ರಿಯೆ (impeachment) ಎದುರಿಸುತ್ತಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರು ಏಪ್ರಿಲ್ 9ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಮೂಲಕ ಸಂಸತ್ತಿನಿಂದ ಪದಚ್ಯುತಗೊಳ್ಳುವ ಪ್ರಕ್ರಿಯೆಯಿಂದ ಅವರು ಪಾರಾಗಿದ್ದಾರೆ. ನನ್ನನ್ನು ಪಿತೂರಿಯಲ್ಲಿ ಸಿಲುಕಿಸಲಾಗಿದೆ ಮತ್ತು ಮನೆಯಲ್ಲಿ ಪತ್ತೆಯಾದ ನೋಟಿನ ಕಂತೆಗಳಿಗೂ ನನಗೂ ಸಂಬಂಧವಿಲ್ಲ ಎಂದು ನ್ಯಾ.ಯಶವಂತ್ ವರ್ಮಾ ಪ್ರತಿಪಾದಿಸಿ, ನ್ಯಾಯಾಧೀಶ ಹುದ್ದೆಯಲ್ಲಿ ಮುಂದುವರಿಯುವ ಪ್ರಯತ್ನಗಳು ಫಲ ಕೊಟ್ಟಿಲ್ಲ. ಆದರೆ, ಇಲ್ಲಿ ಎದುರಾಗುವ ಪ್ರಶ್ನೆಗಳೇನೆಂದರೆ - ರಾಜೀನಾಮೆ ಸಲ್ಲಿಕೆಯಿಂದ ಲೋಕಸಭೆ ಸ್ಪೀಕರ್ ರಚಿಸಿದ ಕಾನೂನು ತಜ್ಞರನ್ನೊಳಗೊಂಡ ಸಂಸತ್ತಿನ ತಜ್ಞರ ಸಮಿತಿಯ ತನಿಖಾ ಪ್ರಕ್ರಿಯೆ ಏನಾಗುತ್ತದೆ? ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಈ ನ್ಯಾಯಾಂಗ ಸಮಿತಿಯನ್ನು ಬರ್ಖಾಸ್ತುಗೊಳಿಸುವುದು ಅನಿವಾರ್ಯವೇ? ಅವರ ಮೇಲಿದ್ದ ಆರೋಪಗಳು ಬರೀ ಆರೋಪಗಳಾಗಿಯೇ ಉಳಿದುಕೊಳ್ಳುತ್ತವೆಯೇ? ತನಿಖಾ ಸಮಿತಿ ರzದರೆ, ನ್ಯಾ.ವರ್ಮಾ ಮನೆಯಲ್ಲಿ ಸಿಕ್ಕ ಸುಟ್ಟ ನೋಟುಗಳ ಸತ್ಯಾಂಶ ಪತ್ತೆಯಾಗುವುದು ಹೇಗೆ? ಆ ಹಣ ಯಾರದ್ದೆಂದು ಗೊತ್ತಾಗುವುದು ಹೇಗೆ? 2025ರ ಮಾರ್ಚ್ ತಿಂಗಳಲ್ಲಿ ಪ್ರಕರಣ ಬೆಳಕಿಗೆ ಬಂದ ಸುಟ್ಟ ನೋಟುಗಳ ಪ್ರಕರಣ ನ್ಯಾಯಾಂಗ ವಲಯದಲ್ಲಿ ಭಾರೀ ಸಂಚಲನ ಎಬ್ಬಿಸಿತ್ತು ಮತ್ತು ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾಯಾಂಗ ತಜ್ಞರನ್ನೊಳಗೊಂಡ ಆಂತರಿಕ ತನಿಖಾ ಸಮಿತಿಯೊಂದನ್ನು ರಚನೆ ಮಾಡಿ, ನ್ಯಾ.ವರ್ಮಾ ಮೇಲಿನ ಆರೋಪಗಳು ಹಾಗೂ ಸುಟ್ಟ ನೋಟುಗಳ ಬಗ್ಗೆ ತನಿಖೆ ಮಾಡುವಂತೆ ಸೂಚಿಸಿದ್ದರು. ಈ ತನಿಖಾ ವರದಿಯಲ್ಲಿ - ನವದೆಹಲಿಯ ತುಘಲಕ್ ಕ್ರೆಸೆಂಟ್ ರಸ್ತೆಯಲ್ಲಿರುವ ನಿವಾಸದ ಸ್ಟೋರ್ ರೂಮ್ ಕೂಡ ನ್ಯಾ.ವರ್ಮಾರಿಗೆ ಸೇರಿದ್ದು, ನಗದು ಹಣ ಕಂಡುಬಂದಿದೆ.
ಈ ಸ್ಟೋರ್ ರೂಮ್ ನ್ಯಾ.ವರ್ಮಾ ಮತ್ತು ಅವರ ಕುಟುಂಬ ಸದಸ್ಯರ ನಿಯಂತ್ರಣದಲ್ಲಿದೆ ಎನ್ನುವುದು ಕೆಲ ಪುರಾವೆಗಳ ಮೂಲಕ ಕಂಡುಬಂದಿದೆ. ಸುಟ್ಟ ನಗದನ್ನು 15-03-2025ರ ಬೆಳಗಿನ ಜಾವ ಹೊರತೆಗೆಯಲಾಗಿದೆ. ಘಟನಾ ಸ್ಥಳದ ಪರಿಶೀಲನೆ ಅಥವಾ ಸಂಬಂಧಪಟ್ಟವರಿಗೆ ವರದಿ ಮಾಡಲು ನ್ಯಾ.ವರ್ಮಾ ಹಿಂದೇಟು ಹಾಕಿರುವುದು ಸಂಶಯಾಸ್ಪದವಾಗಿದೆ ಎಂದು ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: Raghava Sharma Nidle Column: ಕಮಲ ಮುಡಿಗೇರಿಸಲು ಸಜ್ಜಾಗಿದ್ದಾರಾ ರಾಘವ್ ಛಡ್ಡಾ ?
ಈ ವರದಿ ಆಧರಿಸಿ, ತಾವು ರಾಜೀನಾಮೆ ನೀಡಬೇಕು ಇಲ್ಲವೇ ಸ್ವಯಂ ನಿವೃತ್ತಿ ಪಡೆದುಕೊಳ್ಳಬೇಕು ಎಂದು ನ್ಯಾ.ಯಶವಂತ್ ವರ್ಮಾಗೆ ಸುಪ್ರೀಂಕೋರ್ಟ್ ಸಿಜೆಐ ಸಂಜೀವ್ ಖನ್ನಾ ಸಲಹೆ ನೀಡಿ ದ್ದರು. ಆದರೆ, ನ್ಯಾ.ವರ್ಮಾ ಅದಕ್ಕೊಪ್ಪಲಿಲ್ಲ. ಹೀಗಾಗಿ, ಅವರನ್ನು ದೆಹಲಿ ಹೈಕೋರ್ಟ್‌ನಿಂದ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಯಿತು.
ಅಲ್ಲಿ ನ್ಯಾ.ವರ್ಮಾಗೆ ನ್ಯಾಯಾಂಗ ಕಲಾಪ ನಡೆಸುವ ಯಾವುದೇ ಜವಾಬ್ದಾರಿಗಳನ್ನು ಕೊಲಿಜಿ ಯಂ ನೀಡಲಿಲ್ಲ. ಏತನ್ಮಧ್ಯೆ, ಸಂಸತ್ತಿನಲ್ಲಿ ನ್ಯಾ.ವರ್ಮಾ ಪದಚ್ಯುತಕ್ಕೆ ಪ್ರಕ್ರಿಯೆ ಆರಂಭ ಗೊಂಡಿದ್ದರಿಂದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು 2025ರ ಆಗ 12ರಂದು ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968ರ ಅಡಿಯಲ್ಲಿ ಮೂವರು ಸದಸ್ಯರ ತನಿಖಾ ಸಮಿತಿ ರಚಿಸಿದರು.
ಇದರಲ್ಲಿ ನ್ಯಾ.ಅರವಿಂದ್ ಕುಮಾರ್ (ಸುಪ್ರೀಂಕೋರ್ಟ್), ನ್ಯಾ.ಮಣೀಂದ್ರ ಮೋಹನ್ ಶ್ರೀವಾಸ್ತವ (ಮುಖ್ಯ ನ್ಯಾಯಮೂರ್ತಿ, ಮದ್ರಾಸ್ ಹೈಕೋರ್ಟ್) ಮತ್ತು ಬಿ.ವಿ.ಆಚಾರ್ಯ (ಹಿರಿಯ ವಕೀಲ, ಕರ್ನಾಟಕ ಹೈಕೋರ್ಟ್) ಇದ್ದರು. ನ್ಯಾ. ಶ್ರೀವಾಸ್ತವ ನಿವೃತಿಯಾದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಅವರನ್ನು ಸಮಿತಿಗೆ ನೇಮಿಸ ಲಾಯಿತು.
ನ್ಯಾ.ವರ್ಮಾ ವಿರುದ್ಧದ ತನಿಖೆಯನ್ನು ಸಮಿತಿ ಇನ್ನೇನು ಪೂರ್ಣಗೊಳಿಸುವ ಹಂತದಲ್ಲಿತ್ತು. ಆದರೆ, ಅವರು ಏಪ್ರಿಲ್ 9ರಂದು ರಾಜೀನಾಮೆ ಸಲ್ಲಿಸಿದರು. ಇದರಿಂದಾಗಿ, ಸಮಿತಿಯ ಅಸ್ತಿತ್ವವೇ ಬಹುತೇಕ ಅಪ್ರಸ್ತುತ ಎನಿಸಿಕೊಳ್ಳಲಿದೆ. ನ್ಯಾ. ವರ್ಮಾ 2031ಕ್ಕೆ ನಿವೃತ್ತಿಯಾಗಬೇಕಿತ್ತು. ಆದರೆ, ರಾಜೀನಾಮೆಯಿಂದ ನ್ಯಾಯಾಂಗ ವೃತ್ತಿಜೀವನ ಅಕಾಲಿಕವಾಗಿ ಮುಕ್ತಾಯಗೊಂಡಿದೆ.
ಹಾಗಂತ, ಸಂಸತ್ತಿನಿಂದ ಪದಚ್ಯುತರಾಗದ ಕಾರಣ ಅವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ರಂತೆ ಪಿಂಚಣಿ ಮತ್ತು ಎಲ್ಲ ನಿವೃತ್ತಿ ಸೌಲಭ್ಯಗಳನ್ನು ಪಡೆಯಲಿದ್ದಾರೆ..! ಎಲ್ಲಿಯವರೆಗೆ ಎಂದರೆ, ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಔಪಚಾರಿಕವಾಗಿ ಅಂಗೀಕರಿಸಿದ ನಂತರ, ಅವರ ಮೇಲೆ ಯಾವುದೇ ಪ್ರಕರಣ ಇರಲೇ ಇಲ್ಲವೇನೋ ಎಂಬಂತೆ ಭಾಸವಾಗಿ ಬಿಡುತ್ತದೆ.!
ಒಂದೊಮ್ಮೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ.ದಿನಕರನ್ ಕೂಡ 2011ರಲ್ಲಿ ಇದೇ ರೀತಿಯಾಗಿ ಸಂಸತ್ತಿನಿಂದ ಪದಚ್ಯುತ ಪ್ರಕ್ರಿಯೆ ಎದುರಿಸಿದ್ದರು. ಆದರೆ, ಸಂಸತ್ತು ಪದಚ್ಯುತಗೊಳಿಸುವ ಮೊದಲೇ ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ 2011ರಲ್ಲಿ ರಾಜೀನಾಮೆ ಸಲ್ಲಿಸಿದ ಅವರು, ಸಮಿತಿಯ ತನಿಖೆಗಳಿಂದ ಮುಕ್ತವಾದರು.
ನ್ಯಾ.ವರ್ಮಾ ಪ್ರಕರಣದ ಹಠಾತ್ ಅಂತ್ಯ 2011ರ ನ್ಯಾ.ಪಿ.ಡಿ. ದಿನಕರನ್ ಪ್ರಕರಣವನ್ನೇ ನೆನಪಿಸು ತ್ತಿದೆ. ಪಿ.ಡಿ. ದಿನಕರನ್ ಕರ್ನಾಟಕ ಹೈಕೋರ್ಟ್ ಸಿಜೆಯಾಗಿದ್ದಾಗ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಆದರೆ, ದಿನಕರನ್ ವಿರುದ್ಧ ಅಕ್ರಮಗಳ ಆರೋಪ ಬಲವಾಗಿ ಕೇಳಿದ್ದರಿಂದ ಕೊಲಿಜಿಯಂ ತನ್ನ ಶಿಫಾರಸನ್ನು ಹಿಂಪಡೆದುಕೊಂಡು, ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಿತು.
ಸಿಕ್ಕಿಂ ಬಾರ್ ಅಸೋಸಿಯೇಷನ್ ಕೂಡ ಅವರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಆದರೂ, ನ್ಯಾ. ಪಿ.ಡಿ. ದಿನಕರನ್ ರಾಜೀನಾಮೆ ನೀಡಿರಲಿಲ್ಲ. 2009ರಲ್ಲಿ ಅವರ ವಿರುದ್ಧ ಸಂಸತ್ತಿ ನಲ್ಲಿ ಪದಚ್ಯುತ ಪ್ರಕ್ರಿಯೆ ಆರಂಭಗೊಂಡು, ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ಅವರು ನ್ಯಾ.ಅಫ್ಥಾಬ್ ಆಲಂ ನೇತೃತ್ವದ ತನಿಖಾ ಸಮಿತಿ ರಚನೆ ಮಾಡಿದರು.
ಸಮಿತಿಯ ಮೊದಲ ಸಭೆಗೆ 1 ದಿನ ಮುನ್ನ, 2011ರ ಜುಲೈ 29ರಂದು ದಿನಕರನ್ ರಾಜೀನಾಮೆ ಸಲ್ಲಿಸಿದ್ದರು. ತನಿಖಾ ಸಮಿತಿ ವಿಚಾರಣೆ ಸ್ಥಗಿತಗೊಂಡಿತು. ತಜ್ಞರ ತನಿಖಾ ಸಮಿತಿಯಲ್ಲಿದ್ದ ಸದಸ್ಯ, ನ್ಯಾಯಶಾಸಜ್ಞ ಮದನ್ ಗೋಪಾಲ್ ಅವರು ಸಮಿತಿಯ ಮತ್ತಿಬ್ಬರು ಸದಸ್ಯರಿಗೆ ಪತ್ರ ಬರೆದು, ದಿನಕರನ್ ರಾಜೀನಾಮೆ ಸಲ್ಲಿಸಿದ ಮಾತ್ರಕ್ಕೆ ಅವರ ವಿರುದ್ಧದ ತನಿಖೆ ನಿಲ್ಲಬಾರದು.
ನ್ಯಾಯಾಧೀಶರಿಗೆ ನ್ಯಾಯಾಂಗ ಹೊಣೆಗಾರಿಕೆ ಇರಬೇಕು ಎನ್ನುವುದು ಸಂವಿಧಾನದ ಆಶಯವೂ ಹೌದು ಎಂದರು. ಆಗ, ಸಮಿತಿ ಸದಸ್ಯರಾಗಿದ್ದ ನ್ಯಾ. ಜೆ.ಎಸ್.ಖೇಹರ್ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರಿಂದ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಒಬ್ಬರನ್ನು ನೇಮಕ ಮಾಡಬೇಕೆಂದು ನ್ಯಾ.ಅಫ್ತಾಬ್ ಆಲಂ ಅವರು ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ಅವರಿಗೆ ಪತ್ರ ಬರೆದರು.
ಆದರೆ, ದಿನಕರನ್ ರಾಜೀನಾಮೆ ಸಲ್ಲಿಸಿದ್ದರಿಂದ ಸಮಿತಿಗೆ ಹೊಸ ಸದಸ್ಯರನ್ನು ನೇಮಕ ಮಾಡಿ ಏನು ಮಾಡುವುದು ಎಂದು ಯೋಚಿಸಿದ ಹಮೀದ್ ಅನ್ಸಾರಿ, ಹೊಸ ಸದಸ್ಯರ ನೇಮಕಕ್ಕೆ ಮುಂದಾಗಲಿಲ್ಲ ಮತ್ತು ಸಮಿತಿ ಅಲ್ಲಿಗೇ ರದ್ದುಗೊಂಡಿತ್ತು. ಇದರಿಂದಾಗಿ, ನ್ಯಾ.ಪಿ.ಡಿ. ದಿನಕರನ್ ಮೇಲೆ ಮಾಡಲಾಗಿದ್ದ ಆರೋಪಗಳು, ಅಕ್ರಮ ಆಸ್ತಿ ಸಂಪಾದನೆ ಬಗೆಗಿನ ಅನುಮಾನಗಳು ಹಾಗೇ ಉಳಿದುಕೊಂಡವು..!
ಕಲ್ಕತ್ತಾ ಹೈಕೋರ್ಟ್‌ನ ಸೌಮಿತ್ರ ಸೇನ್ ಅವರು 1993ರಲ್ಲಿ ಸುಪ್ರೀಂಕೋರ್ಟ್‌ನ ಜಸ್ಟಿಸ್-ದಿವಂಗತ ವಿ.ರಾಮಸ್ವಾಮಿ ನಂತರ ಸಂಸತ್ತಿನಿಂದ ಪದಚ್ಯುತಿ ಪ್ರಕ್ರಿಯೆ ಎದುರಿಸಿದ್ದ ಎರಡನೇ ನ್ಯಾಯಾಧೀಶ. ಅವರು 1983ರ ಹಣಕಾಸು ಅವ್ಯವಹಾರದ ಮಾಹಿತಿಯೊಂದನ್ನು ಮರೆಮಾಚಿದ್ದರೆನ್ನುವುದು ಗೊತ್ತಾದ ನಂತರ ರಾಜೀನಾಮೆಗೆ ಒತ್ತಡ ಹೇರಲಾಯಿತು. ಆದರೆ, ಸೇನ್ ರಾಜೀನಾಮೆಗೆ ಹಿಂದೇಟು ಹಾಕಿದ್ದರಿಂದ 2009ರಲ್ಲಿ 58 ರಾಜ್ಯಸಭಾ ಸದಸ್ಯರು ಅವರನ್ನು ಸಂಸತ್ ಮೂಲಕ ಪದಚ್ಯುತಿ ಗೊಳಿಸುವ ಪ್ರಸ್ತಾವನೆ ಮಂಡಿಸಿದರು.
ತನಿಖೆಗಾಗಿ ಸಂಸತ್ತು ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ನೇತೃತ್ವದ ತನಿಖಾ ಸಮಿತಿ ರಚಿಸಿತು. 2000ರ ಆಗಸ್ಟ್‌ನಲ್ಲಿ ಅವರ ಪದಚ್ಯುತಿಗೆ ರಾಜ್ಯಸಭೆ ಅನುಮೋದನೆ ನೀಡಿತು. ಸದನವೊಂದು ನ್ಯಾಯಾಧೀಶರನ್ನು ವಜಾಗೊಳಿಸಲು ಮತ ಚಲಾಯಿಸಿದ್ದು ಇದೇ ಮೊದಲಾಗಿತ್ತು. ಸೆಪ್ಟಂಬರ್ 5-6ರಂದು ಲೋಕಸಭೆಯಲ್ಲಿ ಮತದಾನಕ್ಕೆ ಸಮಯ ನಿಗದಿಯಾಗಿತ್ತು. ಆದರೆ, ಸೆ.1ರಂದು ಸೇನ್ ರಾಜೀನಾಮೆ ಸಲ್ಲಿಸಿದರು.
ಇದರಿಂದಾಗಿ ಸಂಸತ್ತಿನಿಂದ ಅವರನ್ನು ಪದಚ್ಯುತಗೊಳಿಸಲು ಸಾಧ್ಯವಾಗಲಿಲ್ಲ. ತನಿಖಾ ಸಮಿತಿ ಯ ವಿಚಾರಣೆ ಎದುರಿಸಲು ಸೇನ್ ಸಿದ್ಧರಿದ್ದರಾದರೂ, ಸಂಸತ್ತಿನಿಂದ ಪದಚ್ಯುತಗೊಳ್ಳಲು ಬಯಸಿರಲಿಲ್ಲ. ಅದರಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಿದ್ದರು.
1993ರಲ್ಲಿ ಮೊದಲ ಬಾರಿಗೆ ಪದಚ್ಯುತಿ ಪ್ರಕ್ರಿಯೆ ಎದುರಿಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ.ರಾಮಸ್ವಾಮಿ ಅವರ ನೆರವಿಗೆ ಕಾಂಗ್ರೆಸ್ ಧಾವಿಸಿತ್ತು. ಲೋಕಸಭೆಯಲ್ಲಿ ಹಾಜರಿದ್ದ 401 ಸದಸ್ಯರಲ್ಲಿ 196 ಮಂದಿ ಪದಚ್ಯುತಿ ಪರ ಮತ ಹಾಕಿದ್ದರು. ಪದಚ್ಯುತಿ ವಿರುದ್ಧ ಯಾರೂ ಮತ ಹಾಕಲಿಲ್ಲ. ಆದರೆ, ಆಡಳಿತಾರೂಢ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ 205 ಸಂಸದರು ಗೈರಾದ್ದರಿಂದ ಮತದಾನದ ವೇಳೆ ಹಾಜರಿದ್ದ ಸದಸ್ಯರಲ್ಲಿ ಮೂರನೇ ಎರಡರಷ್ಟು ಬಹುಮತ ಬರಲಿಲ್ಲ.
ಹೀಗಾಗಿ, ಪದಚ್ಯುತಿ ನಿರ್ಣಯ ಅಂಗೀಕಾರಗೊಳ್ಳಲು ವಿಫಲವಾಗಿತ್ತು. ನ್ಯಾ.ವರ್ಮಾ ಮನೆಯಲ್ಲಿ ಸುಟ್ಟ ನೋಟುಗಳ ಕಂತೆ ಪತ್ತೆಯಾಗಿ 400 ದಿನಗಳಾಗುತ್ತಾ ಬಂದಿದೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ. 1991ರ ಜಸ್ಟಿಸ್ ವೀರಸ್ವಾಮಿ ಪ್ರಕರಣದ ತೀರ್ಪಿನ ಪ್ರಕಾರ ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಿಜೆಐ ಅನುಮತಿ ಅತ್ಯಗತ್ಯ. ಈಗ ನ್ಯಾ.ಯಶವಂತ್ ವರ್ಮಾ ರಾಜೀನಾಮೆ ನೀಡಿರುವು ದರಿಂದ ಕಂತೆ-ಕಂತೆ ನೋಟುಗಳ ಸತ್ಯಾಂಶ ಪತ್ತೆ ಹಚ್ಚಲು ಸರಕಾರ ಅಥವಾ ನ್ಯಾಯಾಂಗ ವ್ಯವಸ್ಥೆ ಮುಂದಾಗುತ್ತದೆಯೇ ಎನ್ನುವುದು ಪ್ರಶ್ನೆ.
ನ್ಯಾ.ವರ್ಮಾ ಮನೆಯಲ್ಲಿ ಹಣ ಪತ್ತೆಯಾಗಿ, ಕೆಲ ದಿನಗಳ ಕಾಲ ನ್ಯಾಯಾಂಗ ಭ್ರಷ್ಟಾಚಾರದ ಬಗ್ಗೆ ಅಬ್ಬರಿಸಿ ಬೊಬ್ಬಿರಿದು, ಈಗ ರಾಜೀನಾಮೆ ನಂತರ ಎಲ್ಲವೂ ಮುಗಿದು ಹೋಯಿತು ಎಂದರೆ ಅದನ್ನು ಖಂಡಿತ ಒಪ್ಪಲಾಗದು. ಸಾಮಾನ್ಯ ನಾಗರಿಕನೊಬ್ಬನಿಗೆ ಇಲ್ಲದ ಅವಕಾಶ, ಸೌಲಭ್ಯಗಳು ಉಳ್ಳವರಿಗೆ, ಪ್ರಭಾವಿಗಳಿಗೆ ಏಕಿರಬೇಕು? ನ್ಯಾ.ವರ್ಮಾ ಸರಕಾರಿ ಬಂಗಲೆಯ ಔಟ್‌ಹೌಸ್‌ನಲ್ಲಿ ಸಿಕ್ಕ ಸುಟ್ಟ ನೋಟುಗಳು ಅವರದ್ದಲ್ಲದಿದ್ದರೆ ಮತ್ಯಾರದ್ದು? ಅವರ ಕುಟುಂಬದವರದ್ದಿರಬಹುದೇ? ಅಥವಾ ಸಿಬ್ಬಂದಿ ವರ್ಗಕ್ಕೆ ಸೇರಿದ್ದಿರಬಹುದೇ? ಸಿಬ್ಬಂದಿಗೆ ಸೇರಿದ್ದರೆ ಈ ಹಣದ ಮೂಲ ಯಾವುದು? ಹಣ ಸ್ಟೋರ್ ರೂಮ್ ಸೇರಿಕೊಂಡಿದ್ದು ಹೇಗೆ? ಇದು ನ್ಯಾ.ವರ್ಮಾ ವಿರೋಧಿಗಳ ಕುಕೃತ್ಯ ಇರಬಹುದೇ..? ಈ ಎಲ್ಲ ಸತ್ಯಾಂಶಗಳು ಸಾರ್ವಜನಿಕರಿಗೆ ಗೊತ್ತಾಗಬೇಡವೇ? ದೇಶದ ನ್ಯಾಯಾಂಗ ವ್ಯವಸ್ಥೆಯ ಲೋಪಗಳಿಂದ ಜನ ಬೇಸತ್ತಿರುವ ಮಧ್ಯೆ, ತಪ್ಪಿತಸ್ಥರನ್ನು ಹೊಣೆಗಾರ ರನ್ನಾಗಿ ಮಾಡುವುದನ್ನೇ ನಾಗರಿಕರು ನಿರೀಕ್ಷಿಸುತ್ತಾರೆ.
ರಾಜೀನಾಮೆ ಕೊಟ್ಟು ತನಿಖೆ, ಶಿಕ್ಷೆಯಿಂದ ಪಾರಾಗಿ, ನಂತರ ಸದ್ದಿಲ್ಲದೆ ವ್ಯವಸ್ಥೆಯಲ್ಲಿ ಲೀನರಾಗು ವುದು ನಮ್ಮಲ್ಲಿ ಹೊಸದೇ ನಲ್ಲ. ಸೌಮಿತ್ರ ಸೇನ್, ಪಿ.ಡಿ.ದಿನಕರನ್ ಅಂತವರು ಹೇಗೆ ಪಾರಾದರು ಎನ್ನುವುದನ್ನು ಈ ದೇಶ ನೋಡಿದೆ. ನ್ಯಾ ಎಸ್.ಎನ್.ಶುಕ್ಲಾ ವಿರುದ್ಧ ನ್ಯಾಯಾಲಯದ ಆಂತರಿಕ ತನಿಖೆಯಲ್ಲಿ ದೋಷಾರೋಪಣೆ ಹೊರಿಸಲಾಯಿತು.
ಅವರ ಪದಚ್ಯುತಕ್ಕೆ ಶಿಫಾರಸು ಮಾಡಲಾದರೂ, ನಂತರ ಸೇವೆಯಿಂದ ನಿವೃತ್ತರಾದರು. ರಾಜೀ ನಾಮೆ ಎನ್ನುವುದು ಪ್ರಕರಣದ ಅಂತ್ಯಕ್ಕೆ ಕಾರಣವಾದರೆ, ಈ ನೆಲದ ಕಾನೂನಿನ ಮೇಲೆ ನಂಬಿಕೆ ಮೂಡುವುದಾದರೂ ಹೇಗೆ? ಸಮಸ್ಯೆ ಇರುವುದು ಆರೋಪಿ ಸ್ಥಾನದಲ್ಲಿರುವ ನ್ಯಾಯಾಧೀಶರದ್ದಲ್ಲ.
ಇಂಥದ್ದೊಂದು ಆರೋಪ ಕೇಳಿಬಂದ ಮೇಲೂ ಅವರು ಪಾರಾಗುತ್ತಿರುವ ಮಾದರಿಯ ಬಗ್ಗೆ ಮತ್ತು ಅದಕ್ಕೆ ಪೂರಕವಾಗಿರುವ ವ್ಯವಸ್ಥೆಯ ಬಗ್ಗೆ.ಸಾಮಾನ್ಯ ನಾಗರಿಕರ ಮೇಲೆ ಆರೋಪ ಬಂದಾಗ ಪೊಲೀಸರಿಂದ ಹಿಡಿದು ಎಲ್ಲ ಹಂತದ ವ್ಯವಸ್ಥೆಗಳು ಬಿಗಿಯಾಗಿ ಬಿಡುತ್ತವೆ. ಆದರೆ, ಪ್ರಭಾವಿಗಳ ಮೇಲೆ ಆರೋಪ, ಅನುಮಾನಗಳು ಮೂಡಿದಾಗ ವ್ಯವಸ್ಥೆ ಇದ್ದಕ್ಕಿದ್ದಂತೆ ಎಚ್ಚರಿಕೆಯಿಂದ, ವಿಳಂಬ ಕಾರ್ಯವಿಧಾನ ಅಳವಡಿಸಿಕೊಂಡು, ನಂತರ ಪ್ರಕ್ರಿಯೆಗಳೇ ದುರ್ಬಲಗೊಳ್ಳುತ್ತವೆ.
ನ್ಯಾಯಾಂಗ ಸುಧಾರಣೆ ಬಗ್ಗೆ ಭಾಷಣ, ಪ್ರಬಂಧ ಮಂಡನೆಗಳನ್ನಷ್ಟೇ ಮಾಡಿದರೆ ಸಾಲದು. ನ್ಯಾಯಾಧೀಶರ ತಪ್ಪುಗಳನ್ನು ರಕ್ಷಿಸುವ ವ್ಯವಸ್ಥೆಗಳನ್ನು ಕೊನೆಗೊಳಿಸಿದರೆ ಮಾತ್ರ ಜನರಲ್ಲಿ ಭರವಸೆ ಮೂಡಬಲ್ಲದು. ಅಲ್ಲಿಯವರೆಗೆ, ಪ್ರತಿ ಹೊಸ ಹಗರಣವೂ ಹಳೆಯ ಹಗರಣಗಳನ್ನು ನೆನಪಿಸುವ ಒಂದು ಘಟನೆ ಯಾಗಬಹುದು ಅಷ್ಟೇ.