ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಕರ್ನಾಟಕದಲ್ಲಿ ಕನ್ನಡವೇ ಸತ್ಯ, ನಿತ್ಯ: ಆತಂಕ ಅನಗತ್ಯ

ಭಾಷೆ ಎಂದಿಗೂ ಸಾಯುವುದಿಲ್ಲ. ಅದರಲ್ಲೂ ಕನ್ನಡ ಎಂದೆಂದೂ ಸಾಯುವುದಿಲ್ಲ. ಲಿಪಿಗಳಿಲ್ಲದ ಭಾಷೆ ಅಳಿಯುವ ಸಾಧ್ಯತೆಗಳಿವೆ. ಆದರೆ ಕನ್ನಡದಂಥ ಗಟ್ಟು-ಮುಟ್ಟಾದ ಭಾಷೆಗೆ ಏನೇ ಬಂದರೂ, ಏನೂ ಆಗುವುದಿಲ್ಲ. ಕಾರಣ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಿಶ್ವದ ಅಮೂಲ್ಯ ಸಾಹಿತ್ಯಗಳೆಲ್ಲ ಕನ್ನಡದಲ್ಲೂ ಹರಳುಗಟ್ಟಿವೆ.

ಕರ್ನಾಟಕದಲ್ಲಿ ಕನ್ನಡವೇ ಸತ್ಯ, ನಿತ್ಯ: ಆತಂಕ ಅನಗತ್ಯ

-

ನೂರೆಂಟು ವಿಶ್ವ

ನವೆಂಬರ್ ಬಂದರೆ ಸಾಕು, ನನಗೆ ಕಾಡುವ ಒಂದು ಸಂದೇಹವೆಂದರೆ, ಇದು ಕನ್ನಡದ ಉತ್ಸವವೋ, ಶೋಕಾಚರಣೆಯೋ? ಕಾರಣ ನವೆಂಬರ್ ಬಂದರೆ ಎಲ್ಲರೂ ಸೂತಕ ಅಥವಾ ಶೋಕಾಚರಣೆ ರೀತಿಯಲ್ಲಿ ವರ್ತಿಸುತ್ತಾರೆ. ಕನ್ನಡ ರಾಜ್ಯೋತ್ಸವ ಎಂದ ಮೇಲೆ ಅಲ್ಲಿ ಅಲ್ಲಿ ಉತ್ಸವವಿರಬೇಕು, ಉತ್ಸವ ಎಂದ ಮೇಲೆ ಅಲ್ಲಿ ಸಂಭ್ರಮ, ಸಡಗರ, ಉಲ್ಲಾಸ ಇರಬೇಕು.

ಹಬ್ಬದ ವಾತಾವರಣ ಇರಬೇಕು. ಆದರೆ, ಎಲ್ಲರೂ ಶೋಕಾಚರಣೆಗೆ ಸಿದ್ಧರಾದವರಂತೆ ವರ್ತಿಸು ತ್ತಾರೆ. ಇದು ಕೇವಲ ಇಂದು ನಿನ್ನೆಯ ಮಾತಲ್ಲ. ಕಳೆದ ಎರಡು ದಶಕಗಳಿಂದ, ನವೆಂಬರ್ ಬಂದರೆ ಇದೇ ರೀತಿಯ ವಾತಾವರಣ ಮುಸುಕುವುದನ್ನು ನೋಡಿದ್ದೇನೆ.

ನವೆಂಬರಿನಲ್ಲಿ ಕನ್ನಡದ ಭವಿಷ್ಯದ ಬಗ್ಗೆ ಬಹಳ ನಿರುತ್ಸಾಹದಿಂದ ಮಾತಾಡುವುದನ್ನು ನಾವೆಲ್ಲ ಗಮನಿಸಿದ್ದೇವೆ. ಬೆಂಗಳೂರಿನಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ, ಕನ್ನಡ ಮಾತಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಕನ್ನಡಿಗರ ನಾಲಗೆಯ ಮೇಲೆ ಇಂಗ್ಲಿಷ್ ಬಂದು ಕುಳಿತಿದೆ, ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ, ಸರಕಾರ ಇಂಗ್ಲಿಷ್ ಶಾಲೆಗಳಿಗೆ ಮಣೆ ಹಾಕುತ್ತಿದೆ, ಬೆಂಗಳೂರಿನ ಕನ್ನಡಿಗರು ಕನ್ನಡ ಮಾತಾಡಲು ಹಿಂದೇಟು ಹಾಕುತ್ತಾರೆ, ರಾಜ್ಯ ಇಂಗ್ಲಿಷಮಯ ಆಗುತ್ತಿದೆ, ಕನ್ನಡ ಪುಸ್ತಕ ಗಳಿಗೆ ಬೇಡಿಕೆ ಕಡಿಮೆ ಆಗುತ್ತಿವೆ, ಕನ್ನಡದ ಭವಿಷ್ಯ ಆತಂಕಕಾರಿಯಾಗಿದೆ, ಕನ್ನಡದಲ್ಲಿ ಕಲಿತವರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗುತ್ತಿಲ್ಲ, ಎಲ್ಲರೂ ಇಂಗ್ಲಿಷಿನಲ್ಲಿ ಟಸ್ಸು ಪುಸ್ಸು ಅಂತಾರೆ, ಇಂಗ್ಲಿಷಿ ನಲ್ಲಿ ಮಾತಾಡಿಸುವುದು ಫ್ಯಾಷನ್ ಆಗಿದೆ... ಇತ್ಯಾದಿ, ಇತ್ಯಾದಿ.

ರಾಜ್ಯೋತ್ಸವ ಕಾರ್ಯಕ್ರಮಗಳ ವರದಿಗಳನ್ನು ಓದಿ ಈ ವಿಷಯಗಳೇ ಪ್ರಧಾನವಾಗಿ ಚರ್ಚಿತವಾಗು ತ್ತವೆ. ಭಾಷಣಕಾರರೆಲ್ಲ ಕನ್ನಡಕ್ಕೆ ಆತಂಕ ಕಾದಿದೆ, ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ ಎಂದೇ ಕಳವಳದಿಂದ ಮಾತಾಡುತ್ತಾರೆ. ಕನ್ನಡದ ಬಗ್ಗೆ ಯಾರೂ ಆಶಾದಾಯಕವಾಗಿ ಮಾತಾಡು ವುದಿಲ್ಲ.

ಇದನ್ನೂ ಓದಿ: Vishweshwar Bhat Column: ವಿಮಾನದ ರೆಕ್ಕೆಗಳು ಮುರಿಯಬಹುದೇ ?

ಅದಕ್ಕೇ ಹೇಳಿದ್ದು ನವೆಂಬರ್ ಬಂತೆಂದರೆ ಹಬ್ಬದ ಬದಲು ಎಲ್ಲರೂ ಸೂತಕ ಆಚರಣೆ ಮಾಡು ತ್ತಿದ್ದೇವೋ ಎನ್ನುವ ಮನಸ್ಥಿತಿಯಲ್ಲಿ ಇರುತ್ತಾರೆ. 1976ರಲ್ಲಿ ‘ಸುಧಾ’ ವಾರಪತ್ರಿಯಲ್ಲಿ ಅ.ನ. ಕೃಷ್ಣರಾಯರು ಒಂದು ಲೇಖನ ಬರೆದಿದ್ದರು. ‘ಕನ್ನಡಕ್ಕೆ ಒದಗಿ ಬಂದ ಆತಂಕಗಳು’ ಎಂಬ ಶೀರ್ಷಿಕೆಯಲ್ಲಿ ಎರಡು ಕಂತುಗಳಲ್ಲಿ ಲೇಖನ ಬರೆದಿದ್ದರು.

ಅದೇ ಸಂಚಿಕೆಯಲ್ಲಿ ಬಸವರಾಜ್ ಕಟ್ಟೀಮನಿ ಅವರೂ ‘ಕನ್ನಡಕ್ಕೆ ಎದುರಾದ ಸವಾಲುಗಳು’ ಎಂಬ ಲೇಖನ ಬರೆದಿದ್ದರು. ಅಂದು ಇವರಿಬ್ಬರ ಲೇಖನಗಳನ್ನು ಓದಿದವರಿಗೆ, ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ಬೆಂಗಳೂರಿನಿಂದ ಕಣ್ಮರೆಯಾಗಲಿದೆ ಎಂಬ ಸಂದೇಹ ಬರುವಂತಿತ್ತು. ಆ ಲೇಖನದಲ್ಲಿ ಅವರಿಬ್ಬರೂ ಬೆಂಗಳೂರಿನಲ್ಲಿ ಕನ್ನಡ ಭಾಷಿಕರಲ್ಲಿ ತಮ್ಮ ಮಾತೃಭಾಷೆಯ ಬಗ್ಗೆ ಕಡಿಮೆಯಾಗುತ್ತಿರುವ ಅಭಿಮಾನದ ಬಗ್ಗೆ ಬರೆದಿದ್ದರು.

ಪರಿಸ್ಥಿತಿ ಹೀಗೆ ಮುಂದುವರಿದಂತೆ, ಇನ್ನು ಹತ್ತು-ಇಪ್ಪತ್ತು ವರ್ಷಗಳಲ್ಲಿ ಕನ್ನಡ ಭಾಷೆ ರಾಜಧಾನಿ ಯಿಂದ ಕಣ್ಮರೆಯಾಗಬಹುದು ಎಂಬುದು ಅವರ ಆತಂಕವಾಗಿತ್ತು. ಅದರಲ್ಲೂ ಅನಕೃ ಅವರು ತಮ್ಮ ಲೇಖನದಲ್ಲಿ ಬೆಂಗಳೂರಿನ ಕೆಲವು ಸಿನಿಮಾ ಥಿಯೇಟರ್‌ಗಳ ಮೇಲೆ ತಾವು ಇನ್ನಿತರ ಕನ್ನಡ ಹೋರಾಟಗಾರರ ಜತೆ ಸೇರಿ ಕಸೆದಿದ್ದು ಏಕೆ ಎಂಬುದನ್ನು ಬರೆದಿದ್ದರು.

kannada Flag

ಕನ್ನಡ ಸಿನಿಮಾ ಬದಲಿಗೆ ತಮಿಳು ಸಿನಿಮಾ ಪ್ರದರ್ಶನಕ್ಕೆ ಆ ಥಿಯೇಟರ್‌ಗಳ ಮಾಲೀಕರು ನಿರ್ಧರಿಸಿದ್ದೇ, ಕಲ್ಲೆಸೆಯಲು ಕಾರಣವಾಗಿತ್ತು. ಅನಕೃ ಮತ್ತು ಕಟ್ಟೀಮನಿ ಅವರು ಹೇಳಿದಂತೆ ಬೆಂಗಳೂರಿನಲ್ಲಿ ಕನ್ನಡ ನಶಿಸಲು ಆರಂಭಿಸಿದ್ದರೆ, ಈ 53 ವರ್ಷಗಳಲ್ಲಿ ಕನ್ನಡ ಸಂಪೂರ್ಣ ಅಳಿದು ಹೋಗಬೇಕಿತ್ತು. ಆದರೆ, ಅಂದು ಅವರಿಬ್ಬರೂ ವ್ಯಕ್ತಪಡಿಸಿದ ಆತಂಕ, ಕಾಳಜಿ ಇಂದಿಗೂ ವ್ಯಕ್ತವಾಗುತ್ತಿದೆ.

ಅವರು ಹೇಳಿದ್ದೇ ನಿಜವಾಗಿದ್ದರೆ, ಬೆಂಗಳೂರಿನಲ್ಲಿ ಕನ್ನಡ ಕಾಲ್ಕಿತ್ತಿರಬೇಕಿತ್ತು. ಆದರೆ ಪರಿಸ್ಥಿತಿ ಹಾಗೇನೂ ಇಲ್ಲ. ಕನ್ನಡ ಬಹಳ ಸುಸ್ಥಿತಿಯಲ್ಲಿ ಇಲ್ಲದಿದ್ದರೂ ಕನ್ನಡಕ್ಕಂತೂ ಯಾವ ಆತಂಕವೂ ಇಲ್ಲ. ಇನ್ನು 50 ವರ್ಷಗಳಾದರೂ ಕನ್ನಡ ಸುರಕ್ಷಿತವಾಗಿಯೇ ಇರುತ್ತದೆ.

ಭಾಷೆ ಎಂದಿಗೂ ಸಾಯುವುದಿಲ್ಲ. ಅದರಲ್ಲೂ ಕನ್ನಡ ಎಂದೆಂದೂ ಸಾಯುವುದಿಲ್ಲ. ಲಿಪಿಗಳಿಲ್ಲದ ಭಾಷೆ ಅಳಿಯುವ ಸಾಧ್ಯತೆಗಳಿವೆ. ಆದರೆ ಕನ್ನಡದಂಥ ಗಟ್ಟು-ಮುಟ್ಟಾದ ಭಾಷೆಗೆ ಏನೇ ಬಂದರೂ, ಏನೂ ಆಗುವುದಿಲ್ಲ. ಕಾರಣ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಿಶ್ವದ ಅಮೂಲ್ಯ ಸಾಹಿತ್ಯಗಳೆಲ್ಲ ಕನ್ನಡದಲ್ಲೂ ಹರಳುಗಟ್ಟಿವೆ.

ತಾಂತ್ರಿಕ ವಿಷಯವನ್ನೂ ಕನ್ನಡದಲ್ಲಿಯೇ ಅಭಿವ್ಯಕ್ತಪಡಿಸಬಹುದಾಗಿದೆ. ವಿಶ್ವದ ಗಟ್ಟಿ ಭಾಷೆಯ ಎಲ್ಲಾ ಲಕ್ಷಣಗಳು ಕನ್ನಡಕ್ಕೂ ಇದೆ. ಕನ್ನಡದಲ್ಲಿ ಎಂಥ ಕಠಿಣ ವಿಷಯವನ್ನಾದರೂ ಹೇಳಲು ಪದಗಳಿವೆ, ವಾಕ್ಯ ಸಂರಚನೆಗಳಿವೆ. ಇನ್ನು ಕನ್ನಡ ಲಿಪಿಯಂತೂ ವಿಶ್ವದಲ್ಲಿಯೇ ಅತ್ಯಂತ ಸುಂದರ ಲಿಪಿಗಳಲ್ಲಿ ಒಂದು ಎಂಬ ಅಭಿದಾನಕ್ಕೆ ಪಾತ್ರವಾಗಿದೆ.

ಇಂಗ್ಲಿಷಿಗೆ ಸರಿಸಮಾನವಾಗಿ ವ್ಯವಹಾರ ಸುಲಭವಾದ ನುಡಿಗಟ್ಟುಗಳು ಕನ್ನಡದಲ್ಲಿವೆ. ನಮ್ಮ ಸಾಹಿತ್ಯವೇನೂ ಬರಡಲ್ಲ. ವಿಶ್ವದ ಶ್ರೇಷ್ಠ ಸಾಹಿತ್ಯಗಳೆಲ್ಲ ಕನ್ನಡದಲ್ಲಿ ಲಭ್ಯ. ಕನ್ನಡಕ್ಕೆ ಮತ್ತು ಸಂಸ್ಕೃತಕ್ಕೆ ಉತ್ತಮವಾದ ತಾಳ-ಮೇಳವಾಗುವುದರಿಂದ ಕಠಿಣ ವಿಷಯಗಳ ಸಂವಹನ ಸಹ ಅಸಾಧ್ಯವೇನಲ್ಲ.

‘ನಂಗೆ ಕನ್ನಡ ಸುಲಲಿತವಾಗಿ ಬರೊಲ್ಲ, ನಾನು ಕನ್ನಡದ ಬದಲು ಇಂಗ್ಲಿಷಿನಲ್ಲಿ ಹೆಚ್ಚು ಪರಿಣಾಮ ಕಾರಿಯಾಗಿ ಮಾತಾಡಬಲ್ಲೆ’ ಎಂದು ಕೆಲವರು ಹೇಳಬಹುದು. ಆದರೆ ಬಹಳ ಜನ ಇಂದಿಗೂ ಕನ್ನಡದಲ್ಲಿಯೇ ಮಾತಾಡಲು ಇಷ್ಟಪಡುತ್ತಾರೆ. ಕರ್ನಾಟಕದ ಅನೇಕ ರಾಜಕಾರಣಿಗಳಿಗೆ ಇಂಗ್ಲಿಷಿ ನಲ್ಲಿಯೇ ಮಾತಾಡಿ ಅಂದರೆ ಇಂದಿಗೂ ಕೀಳರಿಮೆ ಕಾಡುತ್ತದೆ. ಅವರು ಕನ್ನಡದಲ್ಲಿ ಹೆಚ್ಚು ಲೀಲಾಜಾಲವಾಗಿ ಮಾತಾಡಬಲ್ಲರು.

‘ನನಗೆ ಇಂಗ್ಲಿಷ್ ಅಂದರೆ ಅರ್ಥವಾಗೊಲ್ಲ, ಇಂಗ್ಲಿಷಿನಲ್ಲಿ ಮಾತಾಡಿ ಅಂದ್ರೆ ಬೆವರು ಸುರಿಯುತ್ತದೆ’ ಎಂದು ಹೇಳುವ ವಿದ್ಯಾವಂತರಿದ್ದಾರೆ. ಯಾವುದಾದರೂ ಪಾರ್ಟಿಯಲ್ಲಿ ಇಂಗ್ಲಿಷ್ ಮಾತಾಡುವ ಜನರ ಜತೆ ಕನ್ನಡ ಮಾತಾಡುವವರು ಸರಿಯಾಗಿ ಬೆರೆಯುವುದಿಲ್ಲ. ಇಂಗ್ಲಿಷನ್ನು ಚೆನ್ನಾಗಿ ಮಾತಾಡು ವವರೂ ಕನ್ನಡ ಮಾತಾಡುವವರ ಸಖ್ಯ ಬಯಸುತ್ತಾರೆ. ಅಂಥವರ ದೊಡ್ಡ ವರ್ಗವಿದೆ.

ವ್ಯವಹಾರಕ್ಕೆ ಮಾತ್ರ ಇಂಗ್ಲಿಷ್, ಕೊರಳ ಭಾಷೆಯಾಗಿ ಕನ್ನಡವನ್ನೇ ಬಯಸುವ ದೊಡ್ಡ ವರ್ಗವೂ ಇದೆ. ಅಂದರೆ ಕನ್ನಡದಲ್ಲಿ ತಾನು ಎಲ್ಲಾ ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಬಲ್ಲೆ ಎಂದು ಹೇಳುವವರ ಸಂಖ್ಯೆಯೂ ದೊಡ್ಡದೇ. ಇಂಗ್ಲಿಷ್ ಅಂದ್ರೆ ಗಣಿತ ಅಥವಾ ಗ್ರೀಕ್ ಎಂದು ಭಾವಿಸುವವರಿಗೇನೂ ಕಮ್ಮಿಯಿಲ್ಲ. ಅವರಿಗೆ ಇಂದಿಗೂ ಕನ್ನಡವೇ ನನ್ನಮ್ಮ. ಅವರು ನೂರು ಜನ್ಮವೂ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೇ ಕನ್ನಡ ಮಣ್ಣ ಮೆಟ್ಟಬೇಕು...’ ಎಂದು ಹಾಡುವುದಷ್ಟೇ ಅಲ್ಲ, ಅಕ್ಷರಶಃ ಅದನ್ನೇ ಉಸಿರಾಗಿ ಸ್ವೀಕರಿಸಿದವರು.

ಇಂದಿಗೂ ಬಹುತೇಕ ಕನ್ನಡಗರಿಗೆ ಇಂಗ್ಲಿಷ್ ಅಂದ್ರೆ ಕಬ್ಬಿಣದ ಕಡಲೆಯೇ. ಇಂಗ್ಲಿಷ್ ಕೂಡಿಸುವ ಭಾಷೆ ಅಲ್ಲವೇ ಅಲ್ಲ. ಅದು ಅನಿವಾರ್ಯದ ಭಾಷೆ, ಒತ್ತಾಯದ ಭಾಷೆ. ಅಮೆರಿಕದಲ್ಲಿನ ಕನ್ನಡಿಗ ನಿಗೂ ಇಂಗ್ಲಿಷ್ ಅನಿವಾರ್ಯದ ಭಾಷೆಯೇ. ಆತ ಖುಷಿಯಿಂದ ಆ ಭಾಷೆಯನ್ನೂ ಮಾತಾಡುವು ದಿಲ್ಲ. ಆತ ಹೆಜ್ಜೆ ಹೆಜ್ಜೆಗೆ ಈ ಮಂದಿಗೆ ಕನ್ನಡ ಗೊತ್ತಿದ್ದರೆ, ತಾನು ಎಷ್ಟು ಚೆಂದವಾಗಿ ನನ್ನೆಲ್ಲ ಜ್ಞಾನದಿಂದ ಅವನನ್ನು ಗೆಲ್ಲುತ್ತಿದ್ದೆ ಎಂದು ಮನಸ್ಸಿನ ಮೂಲೆಯಲ್ಲಿ ಅನಿಸದಿರದು.

ಅತ್ತ ಕನ್ನಡವೂ ಅಲ್ಲ, ಇತ್ತ ಇಂಗ್ಲಿಷೂ ಅಲ್ಲ ಎಂಬ ಬೆರಕಿ ಜಾತಿಯವರು ಕೆಲವರಿರಬಹುದು. ಆದರೆ ಕನ್ನಡದಲ್ಲಿಯೇ ಹೆಚ್ಚು ಆಪ್ತತೆ ಕಾಣುವ ಬಹಳ ದೊಡ್ಡ ವರ್ಗ ನಮ್ಮ ಮಧ್ಯ ಇದೆ. ನಮ್ಮ ಸೋಗಲಾಡಿತನಕ್ಕೆ, ಒಣ ಜಂಭ ಮೆರೆಯುವುದಕ್ಕೆ, ಡೌಲು ಹಾರಿಸುವುದಕ್ಕೆ ನಮಗೆ ಇಂಗ್ಲಿಷ್ ಬೇಕು. ಆದರೆ ಕನ್ನಡದಷ್ಟು ಆತ್ಮವಿಶ್ವಾಸದ ಭಾಷೆ ಮತ್ತೊಂದಿಲ್ಲ ಎಂದು ಭಾವಿಸುವವರ ಗುಂಪು ದೊಡ್ಡದಿದೆ.

ಅವರೇ ಕನ್ನಡವನ್ನು ರಕ್ಷಿಸುವವರು ಮತ್ತು ಅದಕ್ಕೆ ಏನೂ ಆಗದಂತೆ ಕಾಪಾಡುವವರು. ಇಂಗ್ಲಿಷಿ ನಲ್ಲಿ ಎಷ್ಟೇ ಚೆನ್ನಾಗಿ ಮಾತಾಡುವ ಕನ್ನಡಿಗನಿಗೂ ತನ್ನ ಕನ್ನಡದ ಬಗ್ಗೆ ಕೀಳು ಅಭಿಪ್ರಾಯ ಇರಲು ಸಾಧ್ಯವೇ ಇಲ್ಲ. ಮಾತೃಭಾಷೆಯಾಗಿ ಕನ್ನಡ ಒಮ್ಮೆ ಹೊಕ್ಕರೆ ಅದನ್ನು ಓಡಿಸುವುದು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ.

ಅಮೆರಿಕದ ಸ್ಟ್ಯಾನ್ ಫೋರ್ಡ್ ವಿವಿಯ ಡಾ. ಶಾಂತು ಶಾಂತಾರಾಮ, ಶ್ರೀವತ್ಸ ಜೋಶಿ, ಬೆಲ್ಜಿಯಂ ನ ಗೆಂಟ್ ವಿವಿಯಲ್ಲಿರುವ ಡಾ.ಎನ್.ಎಸ್. ಬಾಲಗಂಗಾಧರ, ಹಾರ್ವರ್ಡ್ ವಿವಿಯ ಡಾ. ಅಶ್ವತ್, ಬಾಥ್ ವಿವಿಯ ಡಾ.ರಘುರಾಮ, ಬರ್ಮಿಂಗ್ ಹ್ಯಾಮ್ ವಿವಿಯ ಪ್ರೊ.ವಸಂತ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕಳೆದ ಎರಡು ದಶಕಗಳಿಂದ ಇರುವ ಡಾ.ವಿನೋದ ಸುಂದರ ಮುಂತಾದ ನೂರಾರು ಜನ ತಾಯ್ನಾಡನ್ನು ಬಿಟ್ಟು ಮೂರ್ನಾಲ್ಕು ದಶಕಗಳಾದರೂ ಇಂದಿಗೂ ಕನ್ನಡದಲ್ಲಿ ಚೆಂದವಾಗಿ ಬರೆಯುತ್ತಾರೆ, ಅಸ್ಖಲಿತವಾಗಿ ಮಾತಾಡುತ್ತಾರೆ. ‌

ಅಮೆರಿಕದಲ್ಲಿದ್ದು ನಾಲ್ಕು ದಶಕಗಳಾದರೂ ಮೈಸೂರು ನಟರಾಜ ಅವರ ಕನ್ನಡ ಸ್ವಲ್ಪವೂ ಮುಕ್ಕಾಗಿಲ್ಲ. ಕರ್ನಾಟಕದ ಯಾವ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರಿಗಿಂತ ಅವರ ಕನ್ನಡ ಮಸ್ತ್ ಇದೆ. ಅವರು ಕನ್ನಡಕ್ಕೆ ಅನುವಾದಿಸಿದ ಇಂಗ್ಲಿಷ್ ಕವನಗಳು ಕನ್ನಡಕ್ಕೆ ಸಂದ ಕಾಣಿಕೆಗಳೇ.

ನಮ್ಮ ಕಣ್ಮುಂದೆಯೇ ಟೆಕ್ಕಿಗಳೆಂಬ ಹೊಸ ಕನ್ನಡ ಸಂತತಿ ಉದಯವಾಗಿದೆ. ಇವರು ಕನ್ನಡದ ಹಿತ ಕಾಯುವ ಯೋಧರೂ ಹೌದು. ಇವರು ಕನ್ನಡ ಭಾಷೆಯ ಬಳಕೆ ಮತ್ತು ಉಳಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇವರಿಗೆ ಸಂಘ-ಸಂಸ್ಥೆ, ಸದಸ್ಯತ್ಯದ ಹಂಗಿಲ್ಲ. ತಾವು ಕುಳಿತ ಲ್ಲಿಂದಲೇ ಕನ್ನಡದ ಕೆಲಸ ಮಾಡುತ್ತಿದ್ದಾರೆ. ಇಂಟರ್ನೆಟ್ ಬಳಕೆ ವ್ಯಾಪಕವಾಗುತ್ತಿರುವ ಈ ದಿನಗಳಲ್ಲಿ, ಸೋಷಿಯಲ್ ಮೀಡಿಯಾ ಬಳಕೆದಾರರು ಅಥವಾ ನೆಟ್ಟಿಗರು ಕನ್ನಡದ ಕೆಲಸವನ್ನು ಆಸ್ಥೆಯಿಂದ ಮಾಡುತ್ತಿದ್ದಾರೆ.

ಇವರಿಂದಾಗಿ ಕನ್ನಡದ ಭಾಷೆಯ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿದೆ. ಓದುಗರೆಲ್ಲ ಬರೆಯಲಾರಂಭಿಸಿದ್ದಾರೆ. ಇಷ್ಟು ದಿನಗಳ ಕಾಲ ಇವರ ಎದೆಯಲ್ಲಿದ್ದ ಭಾವನೆಗಳೆಲ್ಲ ಅಕ್ಷರಗಳಾಗಿ ಹರಳುಗಟ್ಟುತ್ತಿವೆ. ಕನ್ನಡ ಪತ್ರಿಕೋದ್ಯಮ ಮತ್ತು ಕನ್ನಡ ಪುಸ್ತಕೋದ್ಯಮ ಕ್ರಿಯಾಶೀಲ ಆಗಿರುವ ತನಕ ಕನ್ನಡಕ್ಕೆ ಯಾವ ಕುತ್ತು ಇಲ್ಲ. ಕನ್ನಡ ಪತ್ರಿಕೆಗಳ ಪ್ರಸಾರ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಏರುತ್ತಿವೆ. ಇಂಟರ್‌ನೆಟ್ ಭರಾಟೆಯ ನಡುವೆಯೂ ಯಾವ ಪತ್ರಿಕೆಯೂ ಮತ್ತೊಂದು ಪತ್ರಿಕೆಯ ಪ್ರಸಾರವನ್ನು ಕಿತ್ತು ತಿಂದಿಲ್ಲ.

ಕನ್ನಡ ಸುರಕ್ಷಿತವಾಗಿವೆ ಎಂಬುದನ್ನು ತಿಳಿಯಲು ಕನ್ನಡ ಪತ್ರಿಕೆಗಳು ದೈನಂದಿನ ಮಾಪಕಗಳಿ ದ್ದಂತೆ. ಕನ್ನಡಮ್ಮನ ಮೈಮೇಲೆ ಒಂದು ಸಣ್ಣ ಸೊಳ್ಳೆ ಬಂದು ಕುಳಿತು ರಕ್ತ ಹೀರಲಾರಂಭಿಸಿದರೂ ಪತ್ರಿಕೆಗಳು ಸುಮ್ಮನಿರುವುದಿಲ್ಲ. ಕನ್ನಡದ ವಿರುದ್ಧ ಒಂದು ಕೀರಲು ದನಿ ಕೇಳಿ ಬಂದರೂ ಪತ್ರಿಕೆಗಳು ಬೊಬ್ಬೆ ಹಾಕದೇ ಬಿಡುವುದಿಲ್ಲ.

ಇನ್ನು ಕನ್ನಡ ಸುದ್ದಿ ಚಾನಲ್ಲುಗಳಂತೂ ಬ್ರೇಕಿಂಗ್ ನ್ಯೂಸ್ ಮೂಲಕವೇ ಎಲ್ಲರನ್ನೂ ‘ಉಫ್’ ಎಂದು ಹಾರಿಸಿ ನಿವಾಳಿಸಿ ಹಾಕುತ್ತವೆ. ಕನ್ನಡದ ಮಾಧ್ಯಮಗಳು ಕನ್ನಡದ ಕಟ್ಟಾಳುಗಳಿದ್ದಂತೆ. ಭಾಷೆಯ ವಿಷಯಕ್ಕೆ ಬಂದರೆ ಇವರು ಯಾವ ಶಕ್ತಿಗಳಿಗೂ ಮಣಿಯುವವರಲ್ಲ. ಕನ್ನಡದ ಸುರಕ್ಷತೆ ಬಗ್ಗೆ ಇನ್ನೊಂದು ಮಜಕೂರು ಇದೆ.

ಅದು ನಮ್ಮ ವಿಧಾನ ಸೌಧದಲ್ಲಿದೆ. ಇಲ್ಲಿ ತನಕ ಬಂದ ಸರಕಾರಗಳೆಲ್ಲ ಕನ್ನಡ ಪರ ಸರಕಾರಗಳೇ. ಕಾರಣ ಎಲ್ಲಾ ಮುಖ್ಯಮಂತ್ರಿಗಳೂ ಕನ್ನಡ ಮಾಧ್ಯಮದಲ್ಲಿ ಓದಿದವರೇ. ಯಾರಿಗೂ ಪೂರ್ತಿ ವಾಕ್ಯ ಇಂಗ್ಲಿಷಿನಲ್ಲಿ ಮಾತಾಡಲು ಬರೊಲ್ಲ. ಅಷ್ಟಮಟ್ಟಿಗೆ ಅವರೆಲ್ಲರೂ ಕನ್ನಡ ಕಲಿಗಳೇ. ಇಷ್ಟು ವರ್ಷ ಆಳಿದ್ದು ಈ ಕನ್ನಡ ಸರಕಾರಗಳೇ.

ಮೂರ್ನಾಲ್ಕು ಮಂದಿಯನ್ನು ಬಿಟ್ಟರೆ ಉಳಿದೆಲ್ಲ ಮುಖ್ಯಮಂತ್ರಿಗಳ ಇಂಗ್ಲಿಷ್ ಅಷ್ಟಕ್ಕಷ್ಟೇ. I cant understand Kannada, I cant speak Kannada ಎಂದು ಹೇಳುವ ರಾಜಕಾರಣಿಗಳಿಲ್ಲ. ಹಾಗೆ ಹೇಳು‌ ವವರು ವಿಧಾನ ಸೌಧ ಮೆಟ್ಟಿಲು ಹತ್ತಲಾರರು. ಕಾಲು ಶತಮಾನ ಕಳೆದರೂ ಥೇಮ್ಸ್ ನದಿಯಲ್ಲಿ ಅಂಡು ತೊಳೆದು, ಪೋಟೋಮಕ್ ನದಿ ನೀರು ಕುಡಿದು ಬಂದವರು ಕರ್ನಾಟಕದ ಮುಖ್ಯಮಂತ್ರಿ ಆಗಲಾರರು. ‌ಯಾವುದೇ ಸರಕಾರ ಬಂದರೂ ಅಲ್ಲಿ ರೇಣುಕಾಚಾರ್ಯ, ಶಿವಲಿಂಗೇ ಗೌಡ ಅವರಂಥ ವರು ಇದ್ದೇ ಇರುತ್ತಾರೆ. ಅವರು ಕನ್ನಡಕ್ಕೆ ಸಣ್ಣ ತರಚಿದ ಗಾಯವಾದರೂ ಕುಂಯೋ ಅಂತ ಅರಚುತ್ತಾರೆ. ಇನ್ನು ಪ್ರತಿಭಟನೆಯ ವಿಷಯ ಬಂದರೆ, ನೆಟ್ಟಿಗರೆಲ್ಲ ವಾಟಾಳ ನಾಗರಾಜರೇ!

ಭಾಷೆ ಹಿತದ ವಿಷಯ ಬಂದಾಗ ನಮ್ಮ ರಾಜಕಾರಣಿಗಳು ಬಿಟ್ಟುಕೊಟ್ಟವರಲ್ಲ. ಕಾರಣ ಕನ್ನಡ ದಲ್ಲಿಯೇ ಅವರ ಅಸ್ತಿತ್ವ. ಪುಣ್ಯವಶಾತ್ ಕನ್ನಡ ಬಿಟ್ಟು ಇವರಿಗೆ ಬೇರೆ ಭಾಷೆ ಬರುವುದಿಲ್ಲ. ಇಂಗ್ಲಿಷ್ ಇನ್ನೂ ಕಬ್ಬಿಣದ ಕಡಲೆಯೇ. ಇವರಲ್ಲಿ ಹೆಚ್ಚಿನವರು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಬಂದಿದ್ದರೆ ಕತೆ ಬೇರೆ ಇತ್ತು.

ಹೀಗಾಗಿ ಕನ್ನಡ ವಿಧಾನಸೌಧದಲ್ಲಿ ತಂಬು ಊರಿ ಶಾಶ್ವತವಾಗಿ ಇರುವುದು ಗ್ಯಾರಂಟಿ. ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆ ಕುತ್ತು ಇಲ್ಲ. ಇಂಗು ಹಾಗಿದ ಒಗ್ಗರಣೆಯಂತೆ ಘಮ ಘಮ ಎನ್ನುತ್ತಿರುತ್ತವೆ. ಹೀಗಿರುವಾಗ ಯೋಚನೆ ಏಕೆ? ಚಿಂತೆ ಏಕೆ? ಚೆನ್ನಾಗಿ, ಅದ್ಧೂರಿಯಾಗಿ, ಖುಷಿ ಖುಷಿಯಿಂದ ಕನ್ನಡ ಹಬ್ಬವನ್ನು ಈ ತಿಂಗಳಿಡೀ ಆಚರಿಸೋಣ.