Ranjith H Ashwath Column: ಹೈಕಮಾಂಡ್ ಅನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಕರ್ನಾಟಕ
‘ನಾನೇ ಸಿಎಂ’ ಎಂದಿದ್ದ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೂತು ಸುದ್ದಿಗೋಷ್ಠಿ ನಡೆಸುವ ಮೂಲಕ ಇದೇ ಸಂದೇಶವನ್ನು ರವಾನಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ದರು. ರಾಜಸ್ಥಾನದ ಅನುಭವವನ್ನು ನೋಡಿದ್ದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಬಣಕ್ಕೆ ‘ಡೋಂಟ್ ರಿಯಾಕ್ಟ್’ ಎನ್ನುವ ಸಂದೇಶವನ್ನು ರವಾನಿಸಿದೆ ಎನ್ನುವುದು ಸ್ಪಷ್ಟ.


ಅಶ್ವತ್ಥಕಟ್ಟೆ
ranjith.hoskere@gmail.com
ಕರ್ನಾಟಕದಲ್ಲಿ ಕಾಂಗ್ರೆಸ್ ಭಾರಿ ಗೆಲುವು ಸಾಧಿಸುವುದರೊಂದಿಗೆ ಗದ್ದುಗೆ ಹಿಡಿಯುವಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ಪಾತ್ರವೂ ‘ಸಮ’ ನಾಗಿದೆ. ಆ ಕಾರಣಕ್ಕಾಗಿಯೇ ಈ ಇಬ್ಬರೂ ‘ಮುಖ್ಯಮಂತ್ರಿ’ ಗಾದಿಯ ಮೇಲೆ ಕಣ್ಣಿಟ್ಟಿದ್ದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎನ್ನುವ ಹಣೆಪಟ್ಟಿಯಲ್ಲಿಯೇ ದೇಶದ ಬಹುಪಾಲು ರಾಜ್ಯಗಳನ್ನು ದಶಕಗಳ ಕಾಲ ಆಳಿದ ಕಾಂಗ್ರೆಸ್ ಕಳೆದ ಒಂದೂವರೆ ದಶಕದವರೆಗೂ ಅದೇ ‘ಟ್ರೆಂಡ್’ನಲ್ಲಿತ್ತು. ಸೋನಿಯಾ ಗಾಂಧಿ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿದು ರಾಹುಲ್ ಗಾಂಧಿಯವರಿಗೆ ಪಟ್ಟಕಟ್ಟಿದ ದಿನದಿಂದ ಕಾಂಗ್ರೆಸ್‌ನ ಪರಿಸ್ಥಿತಿ ಭಿನ್ನವಾಗಿದೆ. ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡರೆ ಆಡಳಿತ ಪಕ್ಷದ ಸಾಲಿನಲ್ಲಿ ಕೂರು ತ್ತೇವೆ ಎನ್ನುವ ಸ್ಥಿತಿಯಲ್ಲಿ ಬಹುತೇಕ ಪ್ರಾದೇಶಿಕ ಪಕ್ಷಗಳಿದ್ದವು.
ಆದರಿಂದು, ಕಾಂಗ್ರೆಸ್ ಪಕ್ಷವೇ ಪ್ರಾದೇಶಿಕ ಪಕ್ಷಗಳನ್ನು ‘ನಿಮ್ಮೊಂದಿಗೆ ನಮ್ಮನ್ನು ಸೇರಿಸಿ ಕೊಳ್ಳಿ’ ಎಂದು ಹೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಗತವೈಭವವನ್ನು ನೋಡಿದ್ದ ಕಾಂಗ್ರೆಸ್ ಹೈಕಮಾಂಡ್ ಇಂದು ಹೇಗಾದರೂ ಸರಿ ಪಕ್ಷದ ಅಸ್ತಿತ್ವ ಉಳಿದರೆ ಸಾಕೆಂಬ ಮನಸ್ಥಿತಿಗೆ ಬಂದಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇಂದಿಗೂ ಪಕ್ಷ ಬಲಿಷ್ಠ ಎನಿಸಿಕೊಂಡಿದೆ. ಈ ಕಾರಣಕ್ಕಾಗಿಯೇ ರಾಷ್ಟ್ರೀಯ ಕಾಂಗ್ರೆಸ್ ಪಾಲಿಗೆ ಇಂದಿಗೂ ಕರ್ನಾಟಕವೇ ಆಶಾದಾಯಕ ರಾಜ್ಯ ಎನ್ನುವುರಲ್ಲಿ ಅನುಮಾನವಿಲ್ಲ.
2020ರಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡರೂ, ಕರ್ನಾಟಕದಲ್ಲಿ ಕಾಂಗ್ರೆಸ್ ಸದ್ದು ಮಾತ್ರ ಕಮ್ಮಿಯಾಗಿರಲಿಲ್ಲ. 2023ರ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಅಂದಿನ ಬಿಜೆಪಿ ಸರಕಾರದ ವಿರುದ್ಧದ ನಿರಂತರ ಹೋರಾಟ ಹಾಗೂ ದೇಶಕ್ಕೆ ‘ಮಾದರಿ’ ಎನಿಸುವ ಗ್ಯಾರಂಟಿ ಘೋಷಣೆಗಳಿಂದ ಅಧಿಕಾರದ ಗದ್ದುಗೆ ಏರಲು ಹೈಕಮಾಂಡ್‌ನ ಸಹಕಾರಕ್ಕಿಂತ ಹೆಚ್ಚಾಗಿ ರಾಜ್ಯ ನಾಯಕತ್ವವೇ ಕಾರಣ ಎನ್ನುವುದು ಸ್ವತಃ ದಿಲ್ಲಿ ನಾಯಕರಿಗೂ ಗೊತ್ತಿರುವ ಅಂಶ.
ಇದನ್ನೂ ಓದಿ: Ranjith H Ashwath Column: ಕೈ ಶಾಸಕರಿಗೆ ಲಗಾಮು ಹಾಕೋದ್ಯಾರು ?
ರಾಜ್ಯದಲ್ಲಿ 132 ಶಾಸಕರ (ಉಪಚುನಾವಣೆ ಬಳಿಕ 140) ಬಲದೊಂದಿಗೆ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಈ ಪ್ರಮಾಣದಲ್ಲಿ ಗೆಲುವು ಸಾಧಿಸುವುದರ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವಿರುವುದು ಸ್ಪಷ್ಟ. ಈ ಇಬ್ಬರ ಬಲಿಷ್ಠ ನಾಯಕತ್ವದಿಂದಾಗಿಯೇ ಕರ್ನಾಟಕದಲ್ಲಿ ಸುಭದ್ರ ಸರಕಾರ ರಚಿಸುವಲ್ಲಿ ಪಕ್ಷ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಈ ಇಬ್ಬರು ನಾಯಕರೇ ಇಂದು ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ.
ಸಂಕಷ್ಟದ ಬಗ್ಗೆ ಮಾತನಾಡುವ ಮೊದಲು, 2023ರಲ್ಲಿ ನಡೆದ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ನೀಡಿದ್ದ ‘ಪಂಚ ಗ್ಯಾರಂಟಿ’ಗಳ ಹೊರತಾಗಿಯೂ 123ರ ಸಂಖ್ಯಾಬಲ ವನ್ನು ಕಾಂಗ್ರೆಸ್ ಏಕಾಂಗಿಯಾಗಿ ದಾಟಲಿದೆ ಎನ್ನುವ ಯಾವ ವಿಶ್ವಾಸವೂ ಸ್ವತಃ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲ.
ಸರಳ ಬಹುಮತ ಬಂದರೂ, ಬಿಜೆಪಿ ಬಳಿಯಿರುವ ‘ಆಪರೇಷನ್ ಕಮಲ’ ಎನ್ನುವ ಅಸ್ತ್ರದಿಂದ ಪಾರಾಗುವುದು ಹೇಗೆ ಎನ್ನುವ ಆತಂಕದಲ್ಲಿಯೇ ದೆಹಲಿ ನಾಯಕರಿದ್ದರು. ಬಲಿಷ್ಠ ರಾಜ್ಯಗಳಲ್ಲಿ ಈಗಾಗಲೇ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಕುಸಿದಿರುವ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರುವುದು ಅನಿವಾರ್ಯವಾಗಿತ್ತು.
ಈ ಕಾರಣಕ್ಕಾಗಿಯೇ 120ರ ಗಡಿ ದಾಟುತ್ತಿದ್ದಂತೆ ಕೈ ಶಾಸಕರು ಬಿಜೆಪಿಗೆ ಸಿಗದಿರಲಿ ಎಂದು ‘ರೆಸಾರ್ಟ್’ಗಳನ್ನು ಬುಕ್ ಮಾಡುವಂತೆ ರಾಜ್ಯ ಉಸ್ತುವಾರಿ ಸೂಚನೆ ನೀಡಲಾಗಿತ್ತು. ಆದರೆ ಅಂತಿಮ ಫಲಿತಾಂಶ 137 ಆಗುತ್ತಿದ್ದಂತೆ ಈ ಎಲ್ಲ ಆತಂಕ ದೂರಾಗಿ ಕರ್ನಾಟಕ ದಲ್ಲಿ ಐದು ವರ್ಷ ಸುಭದ್ರ ಸರಕಾರ ಎನ್ನುವ ವಿಶ್ವಾಸ ದಿಲ್ಲಿ ನಾಯಕರಿಗೆ ಮೂಡಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಈ ಪ್ರಮಾಣದಲ್ಲಿ ಗೆಲುವು ಸಾಧಿಸುವುದರೊಂದಿಗೆ ಅಧಿಕಾರಯುತವಾಗಿ ಗದ್ದುಗೆ ಹಿಡಿಯುವಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ಪಾತ್ರವೂ ‘ಸಮ’ನಾಗಿದೆ. ಆ ಕಾರಣಕ್ಕಾಗಿಯೇ ಈ ಇಬ್ಬರೂ ‘ಮುಖ್ಯಮಂತ್ರಿ’ ಗಾದಿಯ ಮೇಲೆ ಕಣ್ಣಿಟ್ಟಿದ್ದರು.
ಫಲಿತಾಂಶದ ಬಳಿಕ ಈ ಇಬ್ಬರ ಹಗ್ಗಜಗ್ಗಾಟದಿಂದಲೇ ಕರ್ನಾಟಕದಲ್ಲಿ ಸರಕಾರದ ರಚನೆ ತುಸು ತಡವಾಯಿತು. ಆದರೆ ಪಕ್ಷದ ಹೈಕಮಾಂಡ್‌ಗೆ ಇಬ್ಬರೂ ಬೇಕಿರುವುದರಿಂದ, ಕರ್ನಾಟಕ ರಾಜ್ಯವು ದೆಹಲಿ ನಾಯಕರ ಪಾಲಿಗೆ ‘ಹಗ್ಗದ ಮೇಲಿನ ನಡಿಗೆ’ಯಾಗಿ ಪರಿಣಮಿಸಿದೆ.
ಇಬ್ಬರನ್ನೂ ಬ್ಯಾಲೆನ್ಸ್ ಮಾಡುವುದಷ್ಟೇ ಅಲ್ಲದೇ, ಸಿದ್ದು-ಡಿಕೆ ವಿಷಯವಾಗಿಯೇ ಹೈಕಮಾಂಡ್‌ನಲ್ಲಿಯೂ ಸ್ಪಷ್ಟತೆ ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ಲ್ಲಿರುವ ಅಹಿಂದ ಮತಬ್ಯಾಂಕ್, ಮಾಸ್ ಲೀಡರ್ ಹಣೆಪಟ್ಟಿ ಹಾಗೂ ಶಾಸಕರ ಸಂಖ್ಯಾ ಬಲದ ಕಾರಣಕ್ಕೆ ಅವರ ಪರವಾಗಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ‘ಮೃಧು ಧೋರಣೆ’ ತಾಳಿದ್ದಾರೆ.
ಆದರೆ ಸೋನಿಯಾ ಗಾಂಧಿ ಅತ್ಯಾಪ್ತರಾಗಿದ್ದ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಮಯದಲ್ಲಿ ಡಿ.ಕೆ.ಶಿವಕುಮಾರ್ ತೆಗೆದುಕೊಂಡಿರುವ ರಿಸ್ಕ್, ಅದಾದ ಬಳಿಕ ಇ.ಡಿ., ಸಿಬಿಐ, ಐಟಿಯ ನೆಪದಲ್ಲಿ ತಿಹಾರ್ ಜೈಲಿನಲ್ಲಿ ಎದುರಿಸಿದ ಸಂಕಷ್ಟದ ಕಾರಣಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ‘ಡಿಕೆ’ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ.
ಇನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುಜೇವಾಲ ಅವರೂ ಡಿಕೆಶಿ ಯವರನ್ನು ಪರೋಕ್ಷವಾಗಿ ಬೆಂಬಲಿಸಿಕೊಂಡೇ ಬಂದಿದ್ದಾರೆ. ಈ ಎಲ್ಲದರ ನಡುವೆ, ಎಐಸಿಸಿ ಅಧ್ಯಕ್ಷರಾಗಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು ‘ಅವಕಾಶ ಸಿಕ್ಕರೆ ತಾವ್ಯಾಕೆ ಮುಖ್ಯಮಂತ್ರಿ ಗಾದಿ ಮೇಲೆ ಒಮ್ಮೆ ಕೂರಬಾರದು’ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
ಹಾಗೆ ನೋಡಿದರೆ, ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಗುದ್ದಾಟ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಇದೇ ಮೊದಲಲ್ಲ. ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಅಧಿಕಾರ ಗದ್ದುಗೆ ಹಿಡಿದಿದ್ದ ಸಮಯದಲ್ಲಿಯೂ ಇದೇ ರೀತಿಯ ‘ಪವರ್ ಶೇರಿಂಗ್’ ಒಪ್ಪಂದದ ಮಾತುಗಳು ಕೇಳಿ ಬಂದಿದ್ದವು.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ 50-50 ಶೇರಿಂಗ್ ಮಾಡುವುದಾಗಿ ಹೇಳಿ, ಗೆಹ್ಲೋಟ್ ಅವರಿಗೆ ‘ಹಿರಿತನ’ದ ಆಧಾರದಲ್ಲಿ ಮೊದಲ ಅವಧಿಗೆ ಅವಕಾಶ ನೀಡಲಾಗಿತ್ತು. ಆದರೆ ಅವಧಿ ಮುಗಿಯುವ ವೇಳೆಗೆ ಹಸ್ತಾಂತರ ಮಾಡಲು ಒಲ್ಲೆ ಯೆಂದ ಅವರನ್ನು ಕೆಳಗಿಳಿಸಲು ಎಲ್ಲಿಲ್ಲದ ಪ್ರಯತ್ನವನ್ನು ಪಕ್ಷದ ಹೈಕಮಾಂಡ್ ಮಾಡಿದರೂ, ಯಾವುದು ವರ್ಕ್ ಔಟ್ ಆಗದೇ ಪಕ್ಷವೇ ಹೋಳಾಗುವ ಹಂತಕ್ಕೆ ತಲುಪಿತು.
ಕೊನೆಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಚಿನ್ ಪೈಲಟ್‌ಗೆ ಕೊಟ್ಟಿದ್ದ ‘ಮಾತು’ ಉಳಿಸಿಕೊಳ್ಳಲು ಸಾಧ್ಯವಾಗದೇ ‘ಸೋಲು’ ಒಪ್ಪಿಕೊಂಡಿದ್ದರು. ರಾಜಸ್ಥಾನದಲ್ಲಿ ಅಧಿಕಾರ ಹಸ್ತಾಂತರ ಎನ್ನುವ ವಿಷಯ ಮುನ್ನೆಲೆಗೆ ಬಂದಾಗ ಗೆಹ್ಲೋಟ್ ಅವರು ಯಾವ ವಿಷಯವನ್ನು ಮುಂದಿಟ್ಟಿದ್ದರೋ ಈಗ ಸಿದ್ದರಾಮಯ್ಯ ಅವರೂ ಅದೇ ವಿಷಯವನ್ನು ಮುಂದಿಟ್ಟಿದ್ದಾರೆ.
‘ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ಬೇಕಿರುವುದು ಶಾಸಕರ ಸಂಖ್ಯಾಬಲ’ ಎಂಬುದು ರಾಜಸ್ಥಾನದ ಗೆಹ್ಲೋಟ್ ಹಾಗೂ ಕರ್ನಾಟಕದ ಸಿದ್ದರಾಮಯ್ಯ ಅವರ ವಾದವಾಗಿದೆ. ಈ ಕಾರಣಕ್ಕೆ ಯಾರಿಗೆ ಸಂಖ್ಯೆಯ ಬಲವಿದೆಯೋ ಅವರಿಗೆ ಅಧಿಕಾರ ನೀಡಿ ಎನ್ನುವ ಥಿಯರಿಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.
‘ನಾನೇ ಸಿಎಂ’ ಎಂದಿದ್ದ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೂತು ಸುದ್ದಿಗೋಷ್ಠಿ ನಡೆಸುವ ಮೂಲಕ ಇದೇ ಸಂದೇಶವನ್ನು ರವಾನಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು. ರಾಜಸ್ಥಾನದ ಅನುಭವವನ್ನು ನೋಡಿದ್ದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಬಣಕ್ಕೆ ‘ಡೋಂಟ್ ರಿಯಾಕ್ಟ್’ ಎನ್ನುವ ಸಂದೇಶವನ್ನು ರವಾನಿಸಿದೆ ಎನ್ನುವುದು ಸ್ಪಷ್ಟ.
ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಮತ್ತು ಕೆಲ ವರ್ಷದ ಹಿಂದೆ ರಾಜಸ್ಥಾನದಲ್ಲಿ ನಡೆದ, ‘ಪವರ್ ಶೇರಿಂಗ್’ ಹೋರಾಟ ಕಾಂಗ್ರೆಸ್ ಪಾಲಿಗೆ ಹೊಸದೇನಲ್ಲ. ಆದರೆ ಅದನ್ನು ನಿಭಾಯಿಸಬೇಕಿದ್ದ ಹೈಕಮಾಂಡ್ ತನ್ನ ಶಕ್ತಿಯನ್ನು ಕಳೆದುಕೊಂಡಿರುವುದು ಈ ತಿಕ್ಕಾಟವನ್ನು ಹೆಚ್ಚಾಗುವಂತೆ ಮಾಡಿದೆ.
ಕರ್ನಾಟಕದ ವಿಷಯದಲ್ಲೇ, ‘ಲಕೋಟೆ’ಯಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿ, ಆ ಆಯ್ಕೆಯನ್ನೇ ‘ಶಾಸಕಾಂಗ ಪಕ್ಷದ ಒಮ್ಮತದ ತೀರ್ಮಾನ’ ಎಂದು ಘೋಷಿಸಿದ ಉದಾ ಹರಣೆಯಿದೆ. ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿರುವ ತನಕ ಈ ಪ್ರಭಾವವನ್ನು ಉಳಿಸಿಕೊಂಡೇ ಬಂದಿದ್ದರು. ಆದರೆ ರಾಹುಲ್ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದ ಬಳಿಕ ಈ ಹಿಡಿತ ದಿನದಿಂದ ದಿನಕ್ಕೆ ಸಡಿಲವಾಗುತ್ತಾ ಬಂದಿರುವುದು ಪಕ್ಷದೊಳಗಿರುವ ಕಟುಸತ್ಯ.
ಆದರೆ ಇಂಥ ಸಂದಿಗ್ಧ ಸನ್ನಿವೇಶದಲ್ಲಿರುವ ರಾಷ್ಟ್ರೀಯ ಕಾಂಗ್ರೆಸ್‌ಗೆ ಕರ್ನಾಟಕ ಎನ್ನುವುದು ಅತ್ಯಂತ ಪ್ರಮುಖ ರಾಜ್ಯ ಎನಿಸಿದೆ. ಸಂಪನ್ಮೂಲ ಕ್ರೋಢೀಕರಣ ಮಾತ್ರವಲ್ಲದೇ, ‘ಮಾದರಿ’ ಆಡಳಿತ ನೀಡುವ ವಿಷಯದಲ್ಲಿ ಕರ್ನಾಟವು ಇಡೀ ದೇಶಕ್ಕೆ ಮಾಡೆಲ್ ಎನಿಸಿಕೊಂಡಿರುವುದರಿಂದ ಈ ಸರಕಾರದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಹೈಕಮಾಂಡ್ ನಾಯಕರಿಗಿದೆ.
ಪಕ್ಷಕ್ಕಾಗಿ ಹಾಗೂ ಪಕ್ಷದ ನಾಯಕರಿಗಾಗಿ ವೈಯಕ್ತಿಕವಾಗಿ ಡಿಕೆ ‘ರಿಸ್ಕ್’ ತೆಗೆದುಕೊಂಡಿದ್ದರೂ, ಶಾಸಕರ ಬಲಾಬಲ ಹಾಗೂ ಅಹಿಂದ ಮತಗಳಿಕೆಯಲ್ಲಿ ಸಿದ್ದರಾಮಯ್ಯ ಅವರ ಕೊಡುಗೆಯನ್ನೂ ಮರೆತು ಯಾವುದೇ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ದಿಲ್ಲಿಯ ಹೈಕಮಾಂಡ್ ಉಳಿದಿಲ್ಲ.
ಈ ಪರಿಸ್ಥಿತಿಯಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ತನಗೇ ನಷ್ಟ ಎನ್ನುವುದನ್ನು ಅರಿತು ಪಕ್ಷವು ಮೌನಕ್ಕೆ ಶರಣಾಗಿದೆ. ಆದರೆ ಇನ್ನಾದರೂ ಮೌನ ಮುರಿಯದೇ, ಸ್ಪಷ್ಟ ತೀರ್ಮಾನಕ್ಕೆ ಬಾರದೇ ಹೋದರೆ, ಕಾಂಗ್ರೆಸ್ ಪಾಲಿಗೆ ಉಳಿದಿರುವ ಏಕೈಕ ಬಲಿಷ್ಠ ರಾಜ್ಯ ಎನಿಸಿರುವ ಕರ್ನಾಟಕ ಕೈ ತಪ್ಪಿದರೂ ಅಚ್ಚರಿಯಿಲ್ಲ!