Roopa Gururaj Column: ಕಥಾಸರಿತ್ಸಾಗರ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯ ಕಥೆ
ನನ್ನ ಪಾಲಿನ ಸಂಪತ್ತನ್ನೂ ನೀನೇ ಕದ್ದು ಈಗ ಮುಗ್ಧನಂತೆ ನಾಟಕವಾಡುತ್ತಿದ್ದೀಯಾ ಎಂದು ಸಾರ್ವಜನಿಕ ವಾಗಿ ಆತನ ಮೇಲೆ ಗೂಬೆ ಕೂರಿಸಿ, ನ್ಯಾಯಾಧೀಶರ ಬಳಿಗೆ ಎಳೆದೊಯ್ದನು. ನ್ಯಾಯ ಸಭೆಯಲ್ಲಿ ಧರ್ಮಬುದ್ಧಿಯು ತಾನು ನಿರಪರಾಧಿ ಎಂದು ಗೋಗರೆದರೂ, ದುಷ್ಟ ಬುದ್ಧಿಯು, ಆ ಕಾಡಿನ ಆಲದ ಮರವೇ ಸಾಕ್ಷಿ! ಆ ವೃಕ್ಷದೇವತೆಯೇ ಯಾರು ಕಳ್ಳನೆಂದು ತೀರ್ಪು ನೀಡಲಿ ಎಂದು ಸವಾಲು ಹಾಕಿದನು.
-
ಒಂದೊಳ್ಳೆ ಮಾತು
ಬಿತ್ತಿದ ಬೆಳೆಯನ್ನೇ ಕೊಯ್ಯಬೇಕು ಎಂಬ ಕರ್ಮಸಿದ್ಧಾಂತಕ್ಕೆ ಪಂಚತಂತ್ರ ಹಾಗೂ ಕಥಾ ಸರಿತ್ಸಾಗರದಲ್ಲಿ ಬರುವ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯ ಕಥೆ ಒಳ್ಳೆಯ ನಿದರ್ಶನ. ಒಂದು ಊರಿನಲ್ಲಿ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಎಂಬ ಇಬ್ಬರು ವ್ಯಾಪಾರಿ ಮಿತ್ರರಿದ್ದರು. ಹೆಸರಿಗೆ ತಕ್ಕಂತೆ ಧರ್ಮಬುದ್ಧಿಯು ಸರಳ, ಸತ್ಯವಂತ ಮತ್ತು ನ್ಯಾಯನಿಷ್ಠನಾಗಿದ್ದರೆ, ದುಷ್ಟ ಬುದ್ಧಿಯು ಕಪಟತನ, ದುರಾಶೆ ಮತ್ತು ಕುತಂತ್ರಗಳಿಂದ ಕೂಡಿದವನಾಗಿದ್ದನು.
ಒಮ್ಮೆ ಇಬ್ಬರೂ ವಿದೇಶಕ್ಕೆ ತೆರಳಿ ಪರಿಶ್ರಮದಿಂದ ವ್ಯಾಪಾರ ಮಾಡಿ ಅಪಾರ ಬಂಗಾರದ ನಾಣ್ಯ ಗಳನ್ನು ಸಂಪಾದಿಸಿಕೊಂಡು ಊರಿಗೆ ಮರಳಿದರು. ಊರಿನ ಗಡಿ ತಲುಪಿದಾಗ ದುಷ್ಟಬುದ್ಧಿಯು ಒಂದು ಸಂಚು ಹೂಡಿದನು: ಗೆಳೆಯ, ಇಷ್ಟೊಂದು ಸಂಪತ್ತನ್ನು ಮನೆಗೆ ಕೊಂಡೊಯ್ದರೆ ದಾಯಾದಿಗಳು ಅಥವಾ ಕಳ್ಳರ ಕಣ್ಣು ಬೀಳಬಹುದು.
ನಾವಿಬ್ಬರೂ ತಲಾ ನೂರು ನಾಣ್ಯ ಗಳನ್ನು ತೆಗೆದುಕೊಂಡು, ಉಳಿದದ್ದನ್ನೆಲ್ಲ ಈ ಕಾಡಿನ ದೊಡ್ಡ ಆಲದ ಮರದ ಬುಡದಲ್ಲಿ ಹೂತಿಡೋಣ; ಅಗತ್ಯವಿzಗ ಬಂದು ಒಟ್ಟಿಗೆ ತೆಗೆದುಕೊಂಡರಾಯಿತು ಎಂದ. ಧರ್ಮ ಬುದ್ಧಿಯು ಮಿತ್ರನ ಮಾತನ್ನು ಕಣ್ಮುಚ್ಚಿ ನಂಬಿ ಒಪ್ಪಿಕೊಂಡನು. ಆದರೆ ಕೆಲವೇ ದಿನಗಳಲ್ಲಿ ದುಷ್ಟಬುದ್ಧಿಯು ಕತ್ತಲಲ್ಲಿ ಒಬ್ಬನೇ ಬಂದು, ಮರದ ಬುಡದಲ್ಲಿದ್ದ ಎಲ್ಲಾ ಚಿನ್ನದ ರಾಶಿಯನ್ನು ಕದ್ದು ತನ್ನ ಮನೆಯಲ್ಲಿ ಬಚ್ಚಿಟ್ಟುಕೊಂಡನು.
ಇದನ್ನೂ ಓದಿ: Roopa Gururaj Column: ಮಂತ್ರಿ ಯೌಗಂಧರಾಯಣನ ಸ್ವಾಮಿನಿಷ್ಠೆ ಮತ್ತು ರಾಣಿ ವಾಸವದತ್ತೆಯ ತ್ಯಾಗ
ಕೆಲವು ತಿಂಗಳ ನಂತರ, ಧರ್ಮಬುದ್ಧಿಯ ಬಳಿಗೆ ನಟಿಸುತ್ತಾ ಬಂದು, ಗೆಳೆಯ, ಖರ್ಚಿಗೆ ಹಣ ಬೇಕಾಗಿದೆ, ಬಾ ಮರದ ಬಳಿ ಹೋಗಿ ನಾಣ್ಯಗಳನ್ನು ತರೋಣ ಎಂದನು. ಇಬ್ಬರೂ ಹೋಗಿ ಗುಂಡಿ ತೋಡಿದಾಗ ಅಲ್ಲಿ ನಾಣ್ಯಗಳೇ ಇರಲಿಲ್ಲ! ತಕ್ಷಣವೇ ದುಷ್ಟಬುದ್ಧಿಯು ಕಣ್ಣೀರು ಹಾಕುತ್ತಾ, ಧರ್ಮಬುದ್ಧಿ, ನೀನು ಹೆಸರಿಗೆ ಮಾತ್ರ ಧರ್ಮವಂತ!
ನನ್ನ ಪಾಲಿನ ಸಂಪತ್ತನ್ನೂ ನೀನೇ ಕದ್ದು ಈಗ ಮುಗ್ಧನಂತೆ ನಾಟಕವಾಡುತ್ತಿದ್ದೀಯಾ ಎಂದು ಸಾರ್ವಜನಿಕ ವಾಗಿ ಆತನ ಮೇಲೆ ಗೂಬೆ ಕೂರಿಸಿ, ನ್ಯಾಯಾಧೀಶರ ಬಳಿಗೆ ಎಳೆದೊಯ್ದನು. ನ್ಯಾಯ ಸಭೆಯಲ್ಲಿ ಧರ್ಮಬುದ್ಧಿಯು ತಾನು ನಿರಪರಾಧಿ ಎಂದು ಗೋಗರೆದರೂ, ದುಷ್ಟ ಬುದ್ಧಿಯು, ಆ ಕಾಡಿನ ಆಲದ ಮರವೇ ಸಾಕ್ಷಿ! ಆ ವೃಕ್ಷದೇವತೆಯೇ ಯಾರು ಕಳ್ಳನೆಂದು ತೀರ್ಪು ನೀಡಲಿ ಎಂದು ಸವಾಲು ಹಾಕಿದನು.
ವಾಸ್ತವವಾಗಿ, ಹಿಂದಿನ ರಾತ್ರಿಯೇ ದುಷ್ಟಬುದ್ಧಿಯು ತನ್ನ ವೃದ್ಧ ತಂದೆಯನ್ನು ಆ ಮರದ ಬೃಹತ್ ಪೊಟರೆಯೊಳಗೆ ಅಡಗಿಸಿ, ಮರುದಿನ ಮರ ದೊಳಗಿಂದ ಧರ್ಮಬುದ್ಧಿಯೇ ಕಳ್ಳ ಎಂದು ಕೂಗು ವಂತೆ ಕಲಿಸಿಟ್ಟಿದ್ದನು! ಮರುದಿನ ನ್ಯಾಯಾಧೀಶರ ಎದುರು ಮರದ ಪೊಟರೆಯಿಂದ, ಧರ್ಮಬುದ್ಧಿಯೇ ಕಳ್ಳ! ಎಂಬ ಅಶರೀರವಾಣಿ ಕೇಳಿಬಂದಾಗ ಎಲ್ಲರೂ ದಂಗಾದರು. ಆದರೆ ಸತ್ಯವಂತನಾದ ಧರ್ಮಬುದ್ಧಿಗೆ ಆಶ್ಚರ್ಯ ಮತ್ತು ಅನುಮಾನ ಒಟ್ಟಿಗೇ ಮೂಡಿತು. ಮರಗಳು ಎಂದಿಗೂ ಸುಳ್ಳು ಸಾಕ್ಷಿ ಹೇಳಲಾರವು ಎಂದು ಗ್ರಹಿಸಿದ ಆತ, ತಕ್ಷಣವೇ ಮರದ ಬುಡಕ್ಕೆ ಒಣಗಿದ ಕಡ್ಡಿ-ಸೊಪ್ಪುಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿದನು.
ದಟ್ಟವಾದ ಹೊಗೆ ಮತ್ತು ಜ್ವಾಲೆ ಮರದ ಪೊಟರೆಯನ್ನು ಆವರಿಸಿದಾಗ, ಉಸಿರುಗಟ್ಟಿದ ದುಷ್ಟಬುದ್ಧಿಯ ತಂದೆ ನೆಲಕ್ಕೆ ಬಿದ್ದು ಹೊರಳಾಡಿದನು. ಆತ ನ್ಯಾಯಾಧೀಶರೆದುರು ತನ್ನ ಮಗನ ಕಪಟತನ ಮತ್ತು ಕುತಂತ್ರದ ಸಂಪೂರ್ಣ ಸತ್ಯವನ್ನು ಬಾಯಿಬಿಟ್ಟನು. ಸತ್ಯ ತಿಳಿಯುತ್ತಿದ್ದಂತೆ ನ್ಯಾಯಾಧೀಶರು ದುಷ್ಟಬುದ್ಧಿಯನ್ನು ಶೂಲಕ್ಕೇರಿಸಲು ಆಜ್ಞಾಪಿಸಿ, ಸಮಸ್ತ ಧನವನ್ನು ಧರ್ಮಬುದ್ಧಿಗೆ ಒಪ್ಪಿಸಿದರು.
ಜೀವನದಲ್ಲಿ ಕೆಲವೊಮ್ಮೆ ನಾವು ಯಾರನ್ನು ಬಹಳಷ್ಟು ನಂಬಿರುತ್ತೇವೋ ಅವರೇ ನಮಗೆ ದ್ರೋಹ ಉಂಟುಮಾಡುವ ಪ್ರಯತ್ನ ಮಾಡುತ್ತಾರೆ. ನಮ್ಮ ಬಗ್ಗೆ ಅತಿಯಾಗಿ ತಿಳಿದವರೇ ನಮ್ಮನ್ನು ನಮ್ಮ ವಿಶ್ವಾಸವನ್ನು ದುರುಪಯೋ ಗಪಡಿಸಿಕೊಳ್ಳುವ ಸಂಭವ ಹೆಚ್ಚು. ಆದ್ದರಿಂದಲೇ ಯಾರನ್ನೂ ಅತಿಯಾಗಿ ನಂಬಬಾರದು. ಸ್ನೇಹ ಇರುವಲ್ಲಿ ವ್ಯವಹಾರ ಖಂಡಿತ ಇರಬಾರದು. ವ್ಯವಹಾರದಲ್ಲಿ ಆಗುವ ಏರುಪೇರುಗಳು ಸ್ನೇಹವನ್ನು ಕೂಡ ಹಾಳು ಮಾಡಿಬಿಡುತ್ತದೆ.
ಎಷ್ಟು ಬಾರಿ ಸ್ನೇಹದಲ್ಲಿ ನುಸುಳಿದ ದುಡ್ಡಿನ ಲೆಕ್ಕಾಚಾರ ವರ್ಷಾನುಗಟ್ಟಲೆಯ ಸ್ನೇಹವನ್ನು ಒಂದೇ ವಾದ ವಿವಾದದಲ್ಲಿ ಹಾಳು ಮಾಡಿಬಿಡುತ್ತದೆ. ಅಷ್ಟೇ ಅಲ್ಲ ಇನ್ನೊಬ್ಬರಿಗೆ ಮೋಸ ಮಾಡಿ ಗಳಿಸಿದ ಸಂಪತ್ತು ಎಂದಿಗೂ ನಮ್ಮ ಕಷ್ಟಕಾಲಕ್ಕೆ ಆಗುವುದಿಲ್ಲ. ನ್ಯಾಯವಾಗಿ ದುಡಿದದ್ದನ್ನೇ ನಾವು ಜೋಪಾನ ಮಾಡಿಕೊಳ್ಳುವುದು ಕಷ್ಟ. ಅಂತದ್ದರಲ್ಲಿ ಅನ್ಯಾಯದ ಮೂಲದಿಂದ ಬಂದ ಹಣ ಆಸ್ತಿ ಸಂತೋಷಕ್ಕಿಂತ ಹೆಚ್ಚಾಗಿ ಒಂದಲ್ಲ ಒಂದು ರೀತಿಯ ಮನು ಕ್ಷೋಭೆಯನ್ನು ನಮಗೆ ತರುತ್ತದೆ.
ಎಷ್ಟೇ ದುಡ್ಡಿದ್ದರೂ ಪರಿಹಾರವಾಗ ಲಾರದಂತ ಸಮಸ್ಯೆಗಳು ಉದ್ಭವಿಸಬಹುದು. ಇದನ್ನೇ ಕರ್ಮಫಲ ಎನ್ನುತ್ತಾರೆ. ಕಪಟ ಬುದ್ಧಿಯಿಂದ ಸಂಪಾದಿಸಿದ ಆಸ್ತಿ ನಾಶವನ್ನಷ್ಟೇ ತರುತ್ತದೆ. ನಿರ್ಮಲವಾದ ಅಂತರಂಗ ಮತ್ತು ಸತ್ಯದ ನಡತೆಯೇ ನಮಗೆ ಶಾಶ್ವತ ರಕ್ಷಾಕವಚ.