ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kumareshwar Bhat Column: ರಾಜ ನಿರ್ಮಾತೃ ರಾಜಾರಾಮ...

ಪತ್ನೀವಿಹೀನನಾಗಿ, ರಾಜ್ಯ ಕೋಶ ಪರಿವಾರದಿಂದ ವಂಚಿತನಾಗಿ, ನಾರುಡೆಯುಟ್ಟು ಅವಧೂತ ನಂತೆ ತಮ್ಮ ಲಕ್ಷ್ಮಣನೊಂದಿಗೆ ಅಂಡಲೆಯುತ್ತಿದ್ದ ಸಂದರ್ಭ. ಸೀತಾನ್ವೇಷಣೆಯನ್ನು ಮಾಡು ತ್ತಿದ್ದರೂ ವಾಲಿ ಸುಗ್ರೀವರ ವ್ಯಾಜ್ಯಕ್ಕೆ ವಿದಾಯ ಹೇಳುವ ನಿಟ್ಟಿನಲ್ಲಿ, ವಾಲಿಗೆ ಅಪರಾಧಕ್ಕೆ ತಕ್ಕ ದಂಡನೆ ನೀಡಿ ಸುಗ್ರೀವನನ್ನು ಕಪಿ ಸಮೂಹದ ರಾಜನನ್ನಾಗಿ ಸುತ್ತಾನೆ. ತಾನು ಸಾಮ್ರಾಟ ಪಟ್ಟಾಭಿಷೇಕದಿಂದ ವಂಚಿತನಾಗಿದ್ದರೂ ಸುಗ್ರೀವನನ್ನು ಕಿಷ್ಕಿಂಧೆಯ ಅಧಿಪತಿಯಾಗಿಸುತ್ತಾನೆ.

Kumareshwar Bhat Column: ರಾಜ ನಿರ್ಮಾತೃ ರಾಜಾರಾಮ...

-

Ashok Nayak
Ashok Nayak Mar 26, 2026 9:34 AM

ಶ್ರೀರಾಮ ನವಮಿ

ಮುಂಡಾಜೆ ಕುಮಾರೇಶ್ವರ ಭಟ್

ಕಂಜಾಯತ ಪತ್ರಾಯತ ಲೋಚನಾಯ

ಕರ್ಣಾವತಂಸೋಜ್ವಲ ಕುಂಡಲಾಯ |

ಕಾರುಣ್ಯಪಾತ್ರಾಯ ಸುವಂಶಜಾಯ

ನಮೋಸ್ತು ರಾಮಾಯ ಸ ಲಕ್ಷ್ಮಣಾಯ||

ಆದಿಗುರು ಶಂಕರಾಚಾರ್ಯ ವಿರಚಿತ ಸುಪ್ರಸಿದ್ಧ ಶ್ರೀರಾಮ ಪಂಚರತ್ನ ಸ್ತೋತ್ರದ ಆರಂಭದ ಈ ಚರಣದೊಂದಿಗೆ ಚೈತ್ರ ಶುದ್ಧ ನವಮಿಯ ಈ ಸಲದ ಶ್ರೀರಾಮನ ಭೂಮಿಗೆ ಅವತರಣವಾದ ದಿನವನ್ನು ಎದುರುಗೊಳ್ಳೋಣ. ‘ಕಿಂಗ್ ಮೇಕರ್’ ಕೋಸಲಾಧೀಶ!

ಪ್ರಸ್ತುತ ರಾಜಕೀಯ ವಲಯದಲ್ಲಿ ಕಿಂಗ್‌ಗಳಿಗಿಂತಲೂ ಕಿಂಗ್ ಮೇಕರ್‌ಗಳಿಗೆ ಇರುವ ಮಹತ್ವ, ಪ್ರಭಾವ ಗಮನಿಸಿದಾಗ, ಈ ಸಲದ ಶ್ರೀರಾಮ ನವಮಿಯ ಪಾವನ ಪರ್ವದಲ್ಲಿ ರಾಜ ನಿರ್ಮಾತೃವಾಗಿ ರಾಜಾರಾಮನ ವ್ಯಕ್ತಿತ್ವದ ವಿಶಿಷ್ಟ ಮಜಲಿನ ಅವಲೋಕನ ಸಕಾಲಿಕವಾದುದು.

ಪತ್ನೀವಿಹೀನನಾಗಿ, ರಾಜ್ಯ ಕೋಶ ಪರಿವಾರದಿಂದ ವಂಚಿತನಾಗಿ, ನಾರುಡೆಯುಟ್ಟು ಅವಧೂತನಂತೆ ತಮ್ಮ ಲಕ್ಷ್ಮಣನೊಂದಿಗೆ ಅಂಡಲೆಯುತ್ತಿದ್ದ ಸಂದರ್ಭ. ಸೀತಾನ್ವೇಷಣೆ ಯನ್ನು ಮಾಡುತ್ತಿದ್ದರೂ ವಾಲಿ ಸುಗ್ರೀವರ ವ್ಯಾಜ್ಯಕ್ಕೆ ವಿದಾಯ ಹೇಳುವ ನಿಟ್ಟಿನಲ್ಲಿ, ವಾಲಿಗೆ ಅಪರಾಧಕ್ಕೆ ತಕ್ಕ ದಂಡನೆ ನೀಡಿ ಸುಗ್ರೀವನನ್ನು ಕಪಿ ಸಮೂಹದ ರಾಜನನ್ನಾಗಿ ಸುತ್ತಾನೆ. ತಾನು ಸಾಮ್ರಾಟ ಪಟ್ಟಾಭಿಷೇಕದಿಂದ ವಂಚಿತನಾಗಿದ್ದರೂ ಸುಗ್ರೀವನನ್ನು ಕಿಷ್ಕಿಂಧೆಯ ಅಽಪತಿಯಾಗಿಸುತ್ತಾನೆ.

ವಯೋವೃದ್ಧ ಸಾಮ್ರಾಟನ ದೌರ್ಬಲ್ಯಕ್ಕೆ ತಾನು ಬಲಿಪಶುವಾದೆನೆಂದು ಅರೆಕ್ಷಣವೂ ಯೋಚಿಸದೆ, ತದನಂತರದ ಸರಣಿ ಆಘಾತಗಳ ಮಧ್ಯೆಯೂ ನೈತಿಕ ಸ್ಥೈರ್ಯ ಕಳೆದು ಕೊಳ್ಳದೆ ಈ ಸಂದರ್ಭ ರಾಮ ನಡೆದ ಪರಿ ವಿಸ್ಮಯ ಮೂಡಿಸುತ್ತದೆ !

ಮಾತ್ರ ಅಲ್ಲ, ತನ್ನ ತಪ್ಪಿನ ಅರಿವಾದ ಮಹಾವೀರ ವಾಲಿ ಮರಣಶಯ್ಯೆಯಲ್ಲಿ ತನ್ನ ಮಗ ಅಂಗದನನ್ನು ತೋರಿಸುತ್ತಾ, ಈ ಹುಡುಗನನ್ನು ನಿನ್ನ ಕೈಗೊಪ್ಪಿಸುತ್ತಿದ್ದೇನೆ, ರಘುಕುಲಾಧೀಶ ಎಂದಾಗ ; ತಕ್ಷಣ ಸುಗ್ರೀವ ಸಹಿತ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಪಿ ನಾಯಕರನ್ನು ನೋಡುತ್ತಾ, ಕಿಷ್ಕಿಂಧೆಯ ಯುವರಾಜನಾಗಿ ಕುಮಾರ ಅಂಗದನ ಸರ್ವಾಂಗೀಣ ಜವಾಬ್ದಾರಿ ನಮ್ಮೆಲ್ಲರದು ಎಂದು ಘೋಷಿಸಿದ ಪ್ರಸಂಗಾವಧಾನಿ ಶ್ರೀರಾಮ! ಹೀಗೆ ಮೊತ್ತ ಮೊದಲು ತನ್ನ ಅತ್ಯಂತ ಸಂಕಷ್ಟದ ಸನ್ನಿವೇಶದ ರಾಘವನು ರಾಜ ನಿರ್ಮಾತೃ ಮಾತ್ರವಲ್ಲದೇ ಯುವರಾಜ ನಿರ್ಮಾತೃವಾಗಿಯೂ ನಮ್ಮ ಕಣ್ಣ ಮುಂದಿ ದ್ದಾನೆ.

ಇದನ್ನೂ ಓದಿ: Ram Navami 2026: ಇಂದು ನೀವು ಈ ಕೆಲಸ ಮಾಡಿದ್ರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ!

ಇನ್ನು ರಾವಣನೊಂದಿಗೆ ಯುದ್ಧಸಿದ್ದತೆಯಾಗುತ್ತಿದ್ದ ಸಂದರ್ಭ. ಬುದ್ಧಿವಾದದ ಮಾತಿಗೆ ಅಸಮಾಧಾನಗೊಂಡ ಅಣ್ಣ ರಾವಣನಿಂದ ಅವಮಾನವನ್ನೂ ಅನುಭವಿಸಿದ ತಮ್ಮ ವಿಭೀಷಣ ನೇರ ಬಂದು ಶರಣಾಗಿದ್ದು ಸಮುದ್ರದಂಡೆಯಲ್ಲಿ ಡೇರೆ ಹಾಕಿದ್ದ ಶತ್ರು ಪಾಳೆಯದ ಪ್ರಮುಖ ಶ್ರೀರಾಮನಿಗೆ! ಶರಣಾಗತ ರಕ್ಷಕನೂ ಆಶ್ರಿತವತ್ಸಲನೂ ಆದ ರಾಮ; ಕಪಿಗಳ ಒಡೆಯ ದಂಡನಾಯಕ ಸುಗ್ರೀವನ ಅಸಮ್ಮತಿಯ ಮಧ್ಯೆಯೂ ರಾಕ್ಷಸನಾದ ವಿಭೀಷಣನಿಗೆ ಆಶ್ರಯ ನೀಡಿದನು.

ಅಷ್ಟೇ ಅಲ್ಲ, ವಿಭೀಷಣನ ಇತ್ಯೋಪರಿಯನ್ನು ಹನುಮಂತನಿಂದ ತಿಳಿದ ರಾಮ ಅ ಶರಧಿಯ ಜಲವನ್ನು ತರಿಸಿ ಶಿಬಿರದ ಕಿರೀಟಧಾರಣೆ ಮಾಡಿಸಿ ಲಂಕೆಯ ಮುಂದಿನ ರಾಜ ಎಂದು ಸಾರುತ್ತಾನೆ! ತನ್ಮೂಲಕ ರಾಜನೀತಿಜ್ಞನಾಗಿ ರಾವಣನಿಗೆ ಸರಿಯಾದ ಸಂದೇಶವನ್ನೇ ರವಾನೆ ಮಾಡುತ್ತಾನೆ! ಹೀಗೆ ಶತ್ರುವಿನ ನೈತಿಕ ಸ್ಥೈರ್ಯ ಉಡುಗಿಸುವುದರೊಂದಿಗೆ ಅಸುರ ರಾದರೂ ಉತ್ತಮರಾದರೆ ಸ್ವೀಕಾರಾರ್ಹರು ಎಂಬ ಮಹಾನ್ ತತ್ವವನ್ನು ಜಗಕೆ ತೋರಿಸಿ ಕೊಟ್ಟಿದ್ದಾನೆ.

ರಾವಣವಧೆಯ ನಂತರ ವಿಭೀಷಣನನ್ನು ಲಂಕೆಯ ನೂತನ ರಾಜನಾಗಿಸಿ, ಸೀತಾದೇವಿ ಸಂಗಡ ಅಯೋಧ್ಯೆಗೆ ಹಿಂತಿರುಗಿ ತಮ್ಮಂದಿರ ಹಾಗೂ ಪುರಜನರ ಅಪೇಕ್ಷೆಯ ಮೇರೆಗೆ ಸಾಮ್ರಾಟನಾಗಿ ಪಟ್ಟಾಭಿಷಕ್ತನಾದ ಮೇಲೂ ರಾಮನು ತನ್ನ ವೈಶಿಷ್ಟ್ಯಪೂರ್ಣ ರಾಜ ನಿರ್ಮಾತೃ ಕೈಂಕರ್ಯವನ್ನು ಮುಂದುವರಿಸುತ್ತಾನೆ.

ಪ್ರಜಾಕಂಟಕನಾದ ಲವಣಾಸುರನನ್ನು ಸಂಹರಿಸಿದ ಸಹೋದರ ಶತ್ರುಘ್ನನನ್ನು ಲವಣಪುರಿಗೇ ಅರಸನಾಗಿಸುತ್ತಾನೆ ಶ್ರೀರಾಮ. ತನ್ನ ರಾಮಾವತಾರ ಸಮಾಪ್ತಿಯ ಸಮಯ ಹತ್ತಿರವಾಗುತ್ತಿರಲು, ತನ್ನ ಅವಳಿ ಮಕ್ಕಳಲ್ಲಿ ಹಿರಿಯನಾದ ಕುಶನನ್ನು ಕುಶಾವತಿಗೂ, ಲವನನ್ನು ಶ್ರಾವಸ್ಥಿಗೂ ದೊರೆಗಳನ್ನಾಗಿಸುತ್ತಾನೆ.

ಅದೇ ರೀತಿ ಭರತನ ಮಕ್ಕಳಾದ ತಕ್ಷ ಮತ್ತು ಪುಷ್ಕಳರು ಅನುಕ್ರಮವಾಗಿ ತಕ್ಷಶಿಲಾ ಮತ್ತು ಪುಷ್ಕಳಾವತಿಯನ್ನು ಆಳಿದರೆ, ಶತ್ರುಘ್ನನ ಸುತರಾದ ಸುಬಾಹು ಮಥುರಾವನ್ನೂ, ಶತ್ರುಘ್ನಾತಿ ವಿದಿಶಾಕ್ಕೂ ನೇತಾರರಾಗುತ್ತಾರೆ. ಅಂತೆಯೇ ಲಕ್ಷ್ಮಣ ಕುವರರಾದ ಅಂಗದ ಕುರುಪಾದವನ್ನೂ, ಚಂದ್ರಕೇತು ಚಂದ್ರಕಾಂತವನ್ನೂ ನೋಡಿಕೊಳ್ಳುವಂತೆ ರಾಮನೇ ವ್ಯವಸ್ಥೆ ಮಾಡುತ್ತಾನೆ. ಈ ರೀತಿಯಲ್ಲಿ ಕೋಸಲದ ಉತ್ತರಾಧಿಕಾರಿಗಳ ಶಕೆ ಆರಂಭ ವಾಗುತ್ತದೆ.

ಮರ್ಯಾದಾ ಪುರುಷೋತ್ತಮನಾಗಿ ನೆಗಳ್ತೆಯನ್ನು ಹೊಂದಿದ ರಾಜಾರಾಮನಷ್ಟು ಯುವರಾಜರನ್ನು ನೇಮಿಸಿದವರು ತ್ರೇತೆ ಹಾಗೂ ದ್ವಾಪರ ಯುಗಗಳೆರಡರಲ್ಲೂ ಬೇರೆ ಯವರನ್ನು ಕಾಣುವುದು ಅಸಂಭವ. ರಾಜನೀತಿ ವಿಶಾರದನಾಗಿ ರಾಮನಷ್ಟು ಪ್ರಖ್ಯಾತಿ ಗಳಿಸಿದವರು ಅನ್ಯತ್ರ ಅಲಭ್ಯ. ರಾಜ್ಯವಿಹೀನನಾಗಿದ್ದಾಗಲೂ ರಾಜ್ಯವಾಳುತ್ತಿದ್ದಾಗಲೂ ತನ್ನ ರಾಜನೀತಿಜ್ಞತೆಯನ್ನು ಏಕಪ್ರಕಾರವಾಗಿ ಮೆರೆದ ಶಕಪುರುಷ ಶ್ರೀರಾಮ ಸ್ಥಿತಪ್ರಜ್ಞತ್ವದ ಸಾಕಾರ ಮೂರ್ತಿಯೂ ಹೌದು !

ಯುವಪೀಳಿಗೆಯ 8 ಉತ್ತರಾಧಿಕಾರಿಗಳಿಗೆ ಸಾಮ್ರಾಜ್ಯವನ್ನು ಸಮನಾಗಿ ವಿಭಾಗಿಸಿ ಕೊಡುವುದೆಂದರೆ ಸರಳ ಮಾತಲ್ಲ. ಇನ್ನೊಂದು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಶ್ರೀರಾಮನ ನಂತರದ ಪೀಳಿಗೆಯ ರಾಜಕುಮಾರರು ಯಾವುದೇ ದೈವತ್ವದ ಅಂಶವನ್ನು ಹೊಂದಿರದೆ ಕೇವಲ ಸೂರ್ಯವಂಶಜರಾಗಿ ಮಾತ್ರ ಉಳಿದಿದ್ದರು!

ಚಿನ್ಮಯನಾದ ಶ್ರೀರಾಮನ ಲೆಕ್ಕ ಬೇರೆ! ಲಕ್ಷ್ಮಣ- ಭರತಾದಿಗಳು ಕೇವಲ ಅಗ್ರಜನ ಚರಣ ಸೇವೆಯ ಸರ್ವವನ್ನೂ ಕಾಣುತ್ತಿದ್ದರು. ಮಾತ್ರವಲ್ಲ, ಅಣ್ಣನಂತೆ ಸ್ವಯಂ ಅವತಾರ ಪುರುಷರೂ ಆಗಿದ್ದರು. ರಾಜಾರಾಮನಲ್ಲಿ ಹನುಮಂತನ ಬಗೆಯ ನಡೆಗೆ ಯಾರಿಗಾದರೂ ಅನುಮಾನವಿದ್ದಲ್ಲಿ ಅದನ್ನು ಪರಿಹರಿಸಲೇಬೇಕು. ವಂಶಜರನ್ನೂ ರಕ್ಕಸರನ್ನೂ ಕಾಲ-ಸಂದರ್ಭ-ಪ್ರದೇಶಕ್ಕನುಸಾರ ರಾಜರನ್ನಾಗಿಸಿದ ರಾಘವ, ತನ್ನ ಶರೀರದ ಕಣಕಣದಲ್ಲೂ, ಸಮಯದ ಕ್ಷಣ ಕ್ಷಣದಲ್ಲೂ (ಅದೂ ಅನಂತ ಕಾಲ! ಹನುಮನು ಚಿರಂಜೀವಿ ಎಂಬುದನ್ನು ಗಮನಿಸಬೇಕು) ತನ್ನನ್ನೇ ಧ್ಯಾನಿಸುವ ಆಂಜನೇಯನನ್ನೇಕೆ ಯಾವುದೇ ರಾಜ್ಯದ ರಾಜನನ್ನಾಗಿಸಲಿಲ್ಲ ?! ಎಂಬುದು. ಆದರೆ ಮುದ್ದಾಂ ತನ್ನ ಮಕ್ಕಳೂ ಸೇರಿದಂತೆ ಯಾರಿಗೂ ಶ್ರೀರಾಮನು ದೈವತ್ವವನ್ನು ಕರುಣಿಸದೆ ಕೇವಲ ಭೌತಿಕವಾದ ಹುದ್ದೆಯನ್ನು ಮಾತ್ರ ದೊರಕಿಸಿದ್ದ ಎಂಬುದು ಗಮನಾರ್ಹ!

ಆದರೆ ಮಾರುತಿಯ ಸಂಗತಿ ಬೇರೆ. ತನ್ನ ನೆಚ್ಚಿನ ಭಕ್ತನಾದ ಹನುಮನಿಗೆ ದೈವತ್ವವನ್ನೇ ಅನುಗ್ರಹಿಸಿ ಯಕಶ್ಚಿತ್ ಪ್ರಾಪಂಚಿಕ ಭೋಗಗಳಿಂದ ಬಹಳ ಎತ್ತರದ ಸ್ಥಾನಕ್ಕೇರಿಸಿದ್ದಾನೆ ಎಂಬುದನ್ನು ಮರೆಯುವಂತಿಲ್ಲ. ರಾಮನವಮಿಯ ನಂತರ ಕೆಲವೇ ದಿನಗಳಲ್ಲಿ ಬರುವ ಹುಣ್ಣಿಮೆಗೆ ಆಚರಿಸಲ್ಪಡುವ ‘ಹನುಮ ಜಯಂತಿ’ಗೆ ಇದರ ಕುರಿತು ಸ್ಥೂಲವಾಗಿ ನೋಡೋಣ.

ಹಾಗೆ ನೋಡಿದರೆ, ಶ್ರೀರಾಮಾವತಾರದ ಒಂದು ಉದ್ದೇಶವೇ ಲೋಕಕಂಟಕ ರಾವಣನನ್ನು ಸಂಹರಿಸಿ, ನ್ಯಾಯ ಸ್ಥಾಪಿಸಿ ದೇವತೆಗಳನ್ನು ಮತ್ತೆ ಸ್ವರ್ಗದಲ್ಲಿ ಪ್ರತಿಷ್ಠಾಪಿಸಲು! ಈ ನಿಟ್ಟಿನಲ್ಲೂ ದೇವತೆಗಳನ್ನು ಮತ್ತೆ ರಾಜರಾಗಿಸಿದ ದೇವ ದೇವೋತ್ತಮ ರಾಜಾಧಿರಾಜ ರಾಜಾರಾಮ ಸ್ತುತ್ಯರ್ಹ. ಶ್ರೀರಾಮ ನವಮಿ ಬ್ರಹ್ಮಾಂಡದ ಸಮಸ್ತ ಚರಾಚರರಿಗೆ ಶುಭ ತರಲಿ.