ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Sajangadde Column: ದಯಾಮರಣ: ಸಾವಿನ ನಿರೀಕ್ಷೆಯ ಮೌನ ಆಕ್ರಂದನ !

13 ದೀರ್ಘ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಗಾಜಿಯಾಬಾದ್‌ನ ಹರೀಶ್ ರಾಣಾ ಎಂಬ ವರ ದಯಾಮರಣಕ್ಕೆ ಸುಪ್ರೀಂಕೋರ್ಟ್ ಇತ್ತೀಚೆಗೆ ಅನುಮತಿ ನೀಡಿತು. ಭಾರತದಲ್ಲಿ ಈ ರೀತಿ ದಯಾಮರಣ ಪಡೆದ ಮೊದಲ ಪ್ರಕರಣವಿದು. ಹೀಗೆ ದಯಾ ಮರಣಕ್ಕೆ ಅನುಮತಿ ಪಡೆದು ಮೊನ್ನೆ ಮಂಗಳವಾರ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹರೀಶ್ ರಾಣಾ ಕೊನೆಯುಸಿರೆಳೆ ದರು.

ದಯಾಮರಣ: ಸಾವಿನ ನಿರೀಕ್ಷೆಯ ಮೌನ ಆಕ್ರಂದನ !

-

Ashok Nayak
Ashok Nayak Mar 26, 2026 8:51 AM

ಸಾವು-ನೋವು

ರವೀ ಸಜಂಗದ್ದೆ

ತನ್ನ ಬದುಕಿನ ದಾರಿ ಸುಗಮಗೊಳಿಸುವ ನೆಪ ಮಾಡಿಕೊಂಡು, ಒಬ್ಬ ಮತ್ತೊಬ್ಬನನ್ನು ಸಾಯಿಸಲು ಕಾರಣ-ನೆಪ ಹುಡುಕುವ ಘಟನೆಗಳನ್ನು ಕಾಲಾಂತರದಲ್ಲಿ ಈ ಜಗತ್ತು ನೋಡಿದೆ! ಶಾಂತಿ ಸ್ಥಾಪನೆ, ಸ್ಥಳೀಯ ಜನರ ಸುರಕ್ಷತೆ ಮುಂತಾದ ಹೆಸರಿನಲ್ಲಿ ಅಮೆರಿಕ, ರಷ್ಯಾ ಮುಂತಾದ ದೇಶಗಳು ನಡೆಸುತ್ತಿರುವ ನರಮೇಧಗಳೂ ನಮ್ಮ ಕಣ್ಣೆದುರು ಇವೆ. ಹೀಗೆ ಸಾಯಿಸುವುದಕ್ಕೆ ನೂರಾರು ಕಾರಣಗಳು, ಸಾವಿರಾರು ಸಮರ್ಥನೆಗಳು.

ಇವೆಲ್ಲವೂ ತಂತಮ್ಮ ಮೂಗಿನ ನೇರಕ್ಕೆ ಮಾತ್ರ ಸರಿ ತೋರುವ ವಿಚಾರಗಳು- ಲೋಕದ ದೃಷ್ಟಿಯಲ್ಲಿ ಇಂತಹವೆಲ್ಲವೂ ಜನರ ಮಾರಣ ಹೋಮ, ಮರಣ ಶಾಸನ, ಅಷ್ಟೇ!

ನೇರ ವಿಷಯಕ್ಕೆ ಬರುತ್ತೇನೆ. ಇದೆಲ್ಲದರ ವಿರಹಿತವಾದ, ಕಾನೂನಿನ ಮಾನ್ಯತೆ ಪಡೆದು, ದೀರ್ಘ ಅನಾರೋಗ್ಯದ ಕಾರಣದಿಂದಾಗಿ, ಹಂತಹಂತವಾಗಿ ರೋಗಿಯೊಬ್ಬನ ಜೀವ ತೆಗೆಯುವ ಪ್ರಕ್ರಿಯೆಯ ಹೆಸರು ದಯಾಮರಣ! ಸಂತ್ರಸ್ತರೊಬ್ಬರು ಜೀವಚ್ಛವವಾಗಿ ಬದುಕಿರುವುದಕ್ಕಿಂತ ಸಾವೇ ಸಾವಿರ ಪಾಲು ಲೇಸು ಎಂಬ ತೀರ್ಮಾನಕ್ಕೆ ಅನಾರೋಗ್ಯ ಪೀಡಿತರ ಪರಿವಾರದವರು ಬಂದು, ಅದನ್ನು ಕಾನೂನು ರೀತಿಯಲ್ಲಿ ದೃಢೀಕರಿಸಿ, ಆ ಮೂಲಕ ಅನಾರೋಗ್ಯ ಪೀಡಿತನ ಕಷ್ಟವನ್ನು ಪರಿಹರಿಸುವ ಪ್ರಕ್ರಿಯೆ ಈ ದಯಾಮರಣ.

13 ದೀರ್ಘ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಗಾಜಿಯಾಬಾದ್‌ನ ಹರೀಶ್ ರಾಣಾ ಎಂಬವರ ದಯಾಮರಣಕ್ಕೆ ಸುಪ್ರೀಂಕೋರ್ಟ್ ಇತ್ತೀಚೆಗೆ ಅನುಮತಿ ನೀಡಿತು. ಭಾರತದಲ್ಲಿ ಈ ರೀತಿ ದಯಾಮರಣ ಪಡೆದ ಮೊದಲ ಪ್ರಕರಣವಿದು. ಹೀಗೆ ದಯಾ ಮರಣಕ್ಕೆ ಅನುಮತಿ ಪಡೆದು ಮೊನ್ನೆ ಮಂಗಳವಾರ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹರೀಶ್ ರಾಣಾ ಕೊನೆಯುಸಿರೆಳೆದರು.

ಇದನ್ನೂ ಓದಿ: Ravi Sajangadde Column: ಕ್ರಿಕೆಟ್‌ ಆತಿಥ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೆ ಸಜ್ಜು !

ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿ ಸಂಚಲನ ಮೂಡಿಸಿದ ಈ ವಿಷಯದ ಕುರಿತು ಒಂದಿಷ್ಟು ವಿವರಗಳು ಇಲ್ಲಿವೆ. ಅಂದು ರಕ್ಷಾಬಂಧನ, ತಾರೀಕು ಆಗಸ್ಟ್ 20, 2013. ದೆಹಲಿ ಮೂಲದ ಹರೀಶ್ ರಾಣಾ ಚಂಡೀಗಢದ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ವಾಸವಿದ್ದ ಹಾಸ್ಟೆಲ್‌ನ ನಾಲ್ಕನೆಯ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ, ಕೋಮಾಕ್ಕೆ ಜಾರಿ ಸಂಪೂರ್ಣ ದೈಹಿಕ ಅಂಗವೈಕಲ್ಯಕ್ಕೆ ತುತ್ತಾದರು.

ಕಳೆದ 13 ವರ್ಷಗಳಿಂದ ಹರೀಶ್ ರಾಣಾ ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರ ಸೇವನೆಗಾಗಿ ಗ್ಯಾಸ್ಟ್ರೋಜೆನೊಸ್ಟೊಮಿ ಟ್ಯೂಬನ್ನು ಅವಲಂಬಿಸಿ, ಹಾಸಿಗೆಗೆ ಸೀಮಿತವಾಗಿ ಜೀವಂತ ಶವದಂತೆ ಬದುಕುತ್ತಿದ್ದರು. ಅವರಿಗೆ, ಪೋಷಕರಿಗೆ ಮತ್ತು ಮನೆಯವರಿಗೆ ನಿತ್ಯ ನರಕಯಾತನೆ!

‘ಇಂದಲ್ಲ ನಾಳೆ ಮಗನ ಆರೋಗ್ಯ ಸುಧಾರಿಸಬಹುದು’ ಎಂದು ಆಶಾಭಾವನೆ ಹೊತ್ತು ಆತನ ಆರೈಕೆ ಮಾಡಲು ಸರ್ವಸ್ವವನ್ನೂ ತ್ಯಾಗ ಮಾಡಿದ ಆ ಹೆತ್ತವರ ಮಹದಾಸೆ ಪೂರೈಸಲೇ ಇಲ್ಲವಲ್ಲ. ಇಷ್ಟು ವರ್ಷ ಕಳೆದರೂ ಮಗನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ. ಹೀಗೆ ದಿನಾಲೂ ನರಕ ಅನುಭವಿಸಿದ ಹೆತ್ತವರು ಆತನ ಸಂಕಟ ನೋಡ ಲಾಗದೆ ಆತನಿಗೆ ದಯಾ ಮರಣ ಪಾಲಿಸುವಂತೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು.

P

ದಯಾಮರಣದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆ ಅರ್ಜಿಯನ್ನು ವಜಾ ಗೊಳಿಸಿತು. ಈ ಆಘಾತದ ನಂತರ ಹೆತ್ತವರು ಮಗನ ನರಕಸದೃಶ ಜೀವನ ಕೊನೆ ಗೊಳಿಸುವ ಅಂತಿಮ ಪ್ರಯತ್ನವಾಗಿ ಸುಪ್ರೀಂಕೋರ್ಟ್ ಕದ ತಟ್ಟಿದರು. ಹಲವಾರು ತಿಂಗಳುಗಳ ದೀರ್ಘ ವಿಚಾರಣೆ, ವಿವೇಚನೆ ಮತ್ತು ವಿವಿಧ ದೃಷ್ಟಿಕೋನಗಳಿಂದ ಈ ಸೂಕ್ಷ್ಮ ವಿಚಾರವನ್ನು ಪರಿಶೀಲಿಸಿದ ನ್ಯಾಯಾಲಯ ಅಂತಿಮವಾಗಿ ‘ನಿಷ್ಕ್ರಿಯ ದಯಾಮರಣ ಮೂಲಭೂತ ಹಕ್ಕು’ ಎಂದು ಗುರುತಿಸಿತು.

2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ನಿಷ್ಕ್ರಿಯ ದಯಾಮರಣ ತೀರ್ಪನ್ನು ಕಾನೂನುಬದ್ಧಗೊಳಿಸಿ, ಘನತೆ-ಗೌರವದಿಂದ ಸಾಯುವ ಹಕ್ಕು ಉಲ್ಲೇಖಿಸಿ ಈ ಸಂಚಲನ ಭರಿತ ತೀರ್ಪು ನೀಡಿತು. ಹೀಗೆ ಆ ಕಾನೂನಿನಡಿಯಲ್ಲಿ ದಯಾಮರಣ ಪಡೆದ ಮೊದಲ ವ್ಯಕ್ತಿ ಹರೀಶ್ ರಾಣಾ. ನ್ಯಾಯದಾನದ ಇತಿಹಾಸದಲ್ಲಿ ಕಾನೂನಿನ ಚೌಕಟ್ಟು ಮೀರಿ, ಮಾನವೀಯ ಸಂವೇದನೆಗಳ ಪರಾಕಾಷ್ಠೆಯ ದ್ಯೋತಕವಾಗಿ ಈ ಪ್ರಕರಣ ಚರಿತ್ರೆಯಲ್ಲಿ ದಾಖಲಾಯಿತು!

ಮಗನ ಸಾವಿಗಾಗಿ ಹೆತ್ತವರು ಅಂಗಲಾಚುವ ವಿಷಣ್ಣ ಸನ್ನಿವೇಶವನ್ನು ಊಹಿಸಿಕೊಳ್ಳಲೂ ಕಷ್ಟ! ನ್ಯಾಯಮೂರ್ತಿಗಳಾದ ಪಾರ್ದಿವಾಲಾ ಮತ್ತು ವಿಶ್ವನಾಥನ್ ಅವರ ನ್ಯಾಯಪೀಠ ವು ಈ ದಯಾಮರಣ ಕೋರಿಕೆ ಪ್ರಕರಣವನ್ನು ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಿತು.

ಅರ್ಜಿ ವಿಚಾರಣೆ ಸಂದರ್ಭದಲ್ಲಿ ‘ಇಲ್ಲಿ ಪ್ರಶ್ನೆ ಇರುವುದು ರೋಗಿಯ ಸಾವಿನಲ್ಲಿ ಯಾರಿಗಾ ದರೂ ಹಿತಾಸಕ್ತಿ ಇದೆಯೇ ಎಂಬುದಾಗಿ ಅಲ್ಲ. ಬದಲಿಗೆ ರೋಗಿಯ ಜೀವ ಉಳಿಸುವ ಚಿಕಿತ್ಸೆಯನ್ನು ಇನ್ನೂ ಮುಂದುವರಿಸುವುದರಿಂದ ರೋಗಿಗೆ ಏನಾದರೂ ಪ್ರಯೋಜನ ಇದೆಯೇ?’ ಎಂದು ಪೀಠ ಪ್ರಶ್ನಿಸಿತು. ಅದಕ್ಕೆ ಯಾರ ಬಳಿಯೂ ಸಮರ್ಪಕ-ನಿಖರ ಉತ್ತರ ಇಲ್ಲದಿದ್ದರೂ ವೈದ್ಯಕೀಯ ವರದಿಗಳ ಪ್ರಕಾರ ರಾಣಾ ಚೇತರಿಕೆಯ ಸಾಧ್ಯತೆ ಶೂನ್ಯ ವಾಗಿತ್ತು - ‘ಇಂದಲ್ಲ ನಾಳೆ ಮಗ ಹುಷಾರಾಗುತ್ತಾನೆ’ ಎನ್ನುವ ಹರೀಶ್ ರಾಣಾ ಹೆತ್ತವರ ಆಶಾಭಾವನೆಯ ಹಾಗೆ!

ಉಜ್ವಲ ಭವಿಷ್ಯ ಇರುವ ಹುಡುಗ 13 ವರ್ಷಗಳಿಂದ ಹಾಸಿಗೆ ಹಿಡಿದು ವೃದ್ಧ ಪೋಷಕರ ಮೇಲೆ ಅವಲಂಬಿತನಾಗಿದ್ದಾನೆ. ಅವರು ಸುದೀರ್ಘ ಕಾಲ ನಡೆಸಿದ ಹೋರಾಟ ಬೆಲೆಕ ಟ್ಟಲಾಗದ್ದು. ವೈದ್ಯಕೀಯ ಮಂಡಳಿಯ ವಿಸ್ತೃತ ವರದಿ ಮತ್ತು ಶಿಫಾರಸಿನ ಮೇರೆಗೆ ಜೀವರಕ್ಷಕ ಸಾಧನಗಳನ್ನು ಹಿಂಪಡೆಯಲು ಅನುಮತಿ ನೀಡಲಾಯಿತು.

ತೀರ್ಪು ಓದಿದ ನ್ಯಾಯಮೂರ್ತಿ ಪಾರ್ದಿವಾಲಾ ಅವರು ‘ಈ ಪ್ರಕರಣವು ನಮ್ಮೆಲ್ಲರನ್ನೂ ತೀವ್ರ ದುಃಖಕ್ಕೆ ದೂಡಿದೆ’ ಎಂದು ಹೇಳಿ ಭಾವುಕರಾದರು! ತೀವ್ರ ನೋವಿನಲ್ಲಿದ್ದ ಪೋಷಕರ ಸ್ಥಿತಿ ಮತ್ತು ಹರೀಶ್ ರಾಣಾರ ದುರಂತಮಯ ಬದುಕನ್ನು ನೆನೆದು ಪಾರ್ದಿ ವಾಲಾ ಕಂಗಳು ತೇವಗೊಂಡವು. ತೀರ್ಪು ಓದುವಾಗ ನ್ಯಾಯಾಧೀಶರು ಬಹಿರಂಗವಾಗಿ ಕಣ್ಣೀರು ಹಾಕಿದ ಹೃದಯಸ್ಪರ್ಶಿ ಘಟನೆಯೊಂದು ಭಾರತದ ನ್ಯಾಯಾಂಗದಲ್ಲಿ ದಾಖಲಿಸ ಲ್ಪಟ್ಟಿತು!

ಸುಪ್ರೀಂ ಕೋರ್ಟ್ ದಯಾಮರಣ ಕರುಣಿಸಿದ ಸುದ್ದಿಯು ಹರೀಶ್ ರಾಣಾ ಮತ್ತವರ ಕುಟುಂಬ ವಾಸಿಸುವ ಗಾಜಿಯಾಬಾದ್ ನ ರಾಜ್ ಎಂಪೈರ್ ಸೊಸೈಟಿ ಪರಿಸರದಲ್ಲಿ ಭಾರೀ ಭಾವನಾತ್ಮಕ ವಾತಾವರಣ, ಸನ್ನಿವೇಶ ಸೃಷ್ಟಿಸಿತು. ದಯಾಮರಣದ ಕೋರಿಕೆ ಸಲ್ಲಿಸಿ ಅದು ಪ್ರಾಪ್ತಿಯಾದಾಗ ಸಂಭ್ರಮಿಸಬೇಕೋ, ಮಗನನ್ನು ಕಳೆದುಕೊಳ್ಳುವ ವಿಚಾರದಲ್ಲಿ ಸಂಕಟಪಡಬೇಕೋ ಎಂದು ತಿಳಿಯದಂತಾದ ವಿಷಣ್ಣ ಪರಿಸ್ಥಿತಿ ಪೋಷಕರು ಮತ್ತು ಈ ವಿಷಯ ಕೇಳಿಸಿಕೊಂಡ ಪ್ರತಿಯೊಬ್ಬರದ್ದೂ!

ವರ್ಷಗಳಿಂದಲೂ ಹರೀಶ್ ರಾಣಾ ಆರೋಗ್ಯಕ್ಕಾಗಿ ಪ್ರಯತ್ನಿಸಿದ ಮತ್ತು ಪ್ರಾರ್ಥಿಸಿದ ಮನೆಯವರು, ನೆರೆಹೊರೆಯವರು, ಸ್ನೇಹಿತರು, ಹಿತೈಷಿಗಳು, ಸಂಬಂಧಿಕರು ಈ ಸುದ್ದಿ ಕೇಳಿ ಮೌನವಾದರು. ಆ ಕ್ಷಣಕ್ಕೆ ಅವರೆಲ್ಲರ ಪರಿಸ್ಥಿತಿ ಹರೀಶ್ ಆರೋಗ್ಯ ಸ್ಥಿತಿಗಿಂತ ಭಿನ್ನವಾಗಿರಲಿಲ್ಲ!

ತಂದೆ ಅಶೋಕ್ ರಾಣಾ ಅವರು ತಮ್ಮ ನೋವನ್ನು ಮರೆಮಾಚಲು ಯತ್ನಿಸಿದರೂ ಅವರ ಮುಖದಲ್ಲಿ ದುಗುಡ, ದುಃಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ‘ನಮ್ಮ ಮನೆ ಮಗ ನಮ್ಮೆಲ್ಲರ ನ್ನೂ ಬಿಟ್ಟು ಹೋಗುತ್ತಿದ್ದಾನೆ. ಅವನಿಗೆ ಗೌರವಯುತ ಸಾವು ದೊರಕಿಸಲು ಸಾಧ್ಯ ವಾಗಿರುವುದು ಮಾತ್ರ ನಮಗೆ ಸ್ವಲ್ಪ ಸಮಾಧಾನ ನೀಡುತ್ತಿದೆ’ ಎನ್ನುವಾಗ ಕಣ್ಣೀರು ಗಲ್ಲದ ಮೇಲಿನಿಂದ ಜಾರುತ್ತಿತ್ತು.

ಬದುಕು ಕ್ರೂರ ಅನ್ನಿಸುವುದು ಇಂಥಾ ಸಂದರ್ಭಗಳ! ದಯಾಮರಣ ವಿಚಾರದಲ್ಲಿ ಅರುಣಾ ಶಾನುಭಾಗ್ ಹೆಸರಿನ ಹುಡುಗಿ/ಮಹಿಳೆಯ ದುರಂತ ಕತೆಯನ್ನು ಹೇಳಲೇಬೇಕು! ಮುಂಬೈನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ ಅರುಣಾ ಮೇಲೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದವನೊಬ್ಬ 1973ರ ನವೆಂಬರ್ 27ರಂದು ಹ-ಅತ್ಯಾಚಾರ ಮಾಡಿದ ಪರಿಣಾಮ ಮೆದುಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡು ಅರುಣಾ ಕೋಮಾಗೆ ಜಾರಿದರು.

ಅರುಣಾ ಸೇವೆ ಸಲ್ಲಿಸಿದ ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿ ಬರೋಬ್ಬರಿ ನಾಲ್ಕು ದಶಕಗಳ ಕಾಲ ಅರುಣಾರ ಆರೈಕೆ, ಶುಶ್ರೂಷೆ ಮಾಡಿದರು. 2009ರಲ್ಲಿ ಪತ್ರಕರ್ತೆ ಪಿಂಕಿ ಇರಾನಿಯವರು ಅರುಣಾರ ದಯನೀಯ ಸ್ಥಿತಿ ಕಂಡು ದಯಾಮರಣ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದರು.

ವರ್ಷಗಳ ಕಾಲ ಅರುಣಾ ಅವರನ್ನು ಆರೈಕೆ ಮಾಡಿದ ಆಸ್ಪತ್ರೆಯ ಸಿಬ್ಬಂದಿ ಅರುಣಾ ಇನ್ನಷ್ಟು ದಿನ ಬದುಕಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದುದರಿಂದ ಈ ದಯಾಮರಣ ಅರ್ಜಿಯನ್ನು 2011ರ ಮಾರ್ಚ್ 7ರಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಜೊತೆಗೆ ದಯಾಮರಣಕ್ಕೆ ಸಂಬಂಧಿಸಿದಂತೆ ವಿವರವಾದ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಫರ್ಮಾನು ಹೊರಡಿಸಿತು.

42 ವರ್ಷಗಳ ಕಾಲ ಕೋಮಾದಲ್ಲಿದ್ದ ಅರುಣಾ ಶಾನುಭಾಗ್ ನ್ಯುಮೋನಿಯಾ ರೋಗಕ್ಕೆ ತುತ್ತಾಗಿ 2015ರ ಮೇ 08ರಂದು ಕೊನೆಗೂ ನಿಧನರಾಗಿ, ಹೇಳಿಕೊಳ್ಳಲಾಗದ ತಮ್ಮ ನೋವಿನಿಂದ ಮುಕ್ತಿ ಪಡೆದರು!

ದಯಾಮರಣ ಕಾನೂನು: ದಯಾ ಮರಣದಲ್ಲಿ ಎರಡು ವಿಧ. ವೆಂಟಿಲೇಟರ್ ಬೆಂಬಲ, ಡಯಾಲಿಸಿಸ್ ಅಥವಾ ಕ್ಲಿನಿಕಲಿ ಅಸಿಸ್ಟೆಡ್ ನ್ಯೂಟ್ರಿಷನ್ ಮತ್ತು ಹೈಡ್ರೇಷನ್ ತರಹದ ಜೀವ ಉಳಿಸುವ ವೈದ್ಯಕೀಯ ಚಿಕಿತ್ಸೆ ತಡೆಯುವ/ಹಿಂತೆಗೆಯುವ ಮೂಲಕ ರೋಗಿಯ ಸ್ವಾಭಾವಿಕ ಸಾವಿಗೆ ಅನುಮತಿ ನೀಡುವ ವಿಧಾನ ‘ನಿಷ್ಕ್ರಿಯ ದಯಾಮರಣ’. ಹರೀಶ್ ರಾಣಾ ವಿಚಾರದಲ್ಲಿ ಈ ವಿಧಾನವನ್ನು ಬಳಸಲಾಗಿದೆ. ವೈದ್ಯರು ಮಾರಕ ಔಷಧಿಗಳನ್ನು ನೀಡಿ, ತೀವ್ರ ರೋಗಗಳಿಂದ ಬಳಲುವ ರೋಗಿಯ ಜೀವ ತೆಗೆಯುವ, ಒಂದಷ್ಟು ಕ್ರೂರ ಅನಿಸುವ ವಿಧಾನ ‘ಸಕ್ರಿಯ ದಯಾಮರಣ’. ಭಾರತದಲ್ಲಿ ಇದಕ್ಕೆ ಮಾನ್ಯತೆ ಇಲ್ಲ.

ನೆದರ್ಲೆಂಡ್ ಮತ್ತು ಬೆಲ್ಜಿಯಂ ದೇಶಗಳಲ್ಲಿ ಇದು ಜಾರಿಯಲ್ಲಿದೆ. ನಿಷ್ಕ್ರಿಯ ದಯಾ ಮರಣದಲ್ಲಿ ರೋಗಿಯ ಕುಟುಂಬದ ಜೊತೆ ಅನುಭವಿ ವೈದ್ಯರ ತಂಡ ಚರ್ಚಿಸಿ ಒಮ್ಮತ ವನ್ನು ದಾಖಲಿಸಲಾಗುತ್ತದೆ. ನಂತರ ಸ್ಥಳೀಯ ಮುಖ್ಯ ವೈದ್ಯಾಧಿಕಾರಿಯವರು ನೇಮಿಸಿದ ವೈದ್ಯರು ಮತ್ತೊಮ್ಮೆ ಈ ವಿಚಾರವನ್ನು ಪರಿಶೀಲಿಸಿ, ರೋಗಿಯ ಕುಟುಂಬ ದೊಡನೆ ಮಾತುಕತೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.

ರೋಗಿಯು ಸ್ವತಃ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿರದ, ಹರೀಶ್ ರಾಣಾ ತರಹದ ಪ್ರಕರಣಗಳಲ್ಲಿ ಕುಟುಂಬ ಸದಸ್ಯರ ಮನವಿಯನ್ನು ಪರಿಶೀಲಿಸಿ, ‘ಉತ್ತಮ ಹಿತಾಸಕ್ತಿ ತತ್ವ’ದ ಆಧಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಹರೀಶ್ ರಾಣಾ ಪ್ರಕರಣ ದಲ್ಲಿ ಮೇಲೆ ಉಲ್ಲೇಖಿಸಿದ ಎರಡೂ ವೈದ್ಯತಂಡಗಳು ಮತ್ತು ಕುಟುಂಬವು ಸರ್ವಾನು ಮತದಿಂದ ಚೇತರಿಕೆ ಅಸಾಧ್ಯವೆಂದು ಒಪ್ಪಿಕೊಂಡ ಕಾರಣ ನ್ಯಾಯಾಲಯವು ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತು!

ಅರುಣಾ ಶಾನುಭಾಗ್ ಅವರಿಗೆ ಸಿಗದ ನಿಷ್ಕ್ರಿಯ ದಯಾಮರಣದ ಅವಕಾಶ ಹರೀಶ್ ರಾಣಾಗೆ ಸಿಕ್ಕಿತು. ಹಾಗೆ ನೋಡಿದರೆ ದಯೆ ಮತ್ತು ಮರಣ ಒಟ್ಟಿಗೆ ಸಾಗುವುದಾದರೂ ಹೇಗೆ!? ದಯೆಯು ಯಾವಾಗಲೂ ಬದುಕಿನ ಒಟ್ಟಿಗೆ ಜೊತೆಯಾಗಬೇಕಾದದ್ದು ಮತ್ತು ಮರಣದ ಜೊತೆಯಲ್ಲಿ ಅಲ್ಲ ಎನ್ನುವುದು ನಿರ್ವಿವಾದ!

ಇಂಥಾ ಸೂಕ್ಷ್ಮ ಮತ್ತು ಗಂಭೀರ ವಿಚಾರಗಳನ್ನು ಬೇರೆ ರೀತಿಯಲ್ಲಿ ನಿಭಾಯಿಸಲು, ಮರಣದ ಹೊರತಾದ ದಾರಿ ಕಂಡುಕೊಳ್ಳಲು ಸಾಧ್ಯವಿತ್ತೇ? ಎನ್ನುವ ಪ್ರಶ್ನೆ ಬಾರದಿರದು! ಅಐಐIಖನಲ್ಲಿನ ಕೊನೆಯ ಕ್ಷಣದ ವಿಡಿಯೋದಲ್ಲಿ ಬ್ರಹ್ಮಕುಮಾರಿಯೊಬ್ಬರು ಹರೀಶ್ ರಾಣಾ ಹಣೆಗೆ ಏನೋ ಹಚ್ಚಿ ‘ಹೊರಡುವ ಸಮಯ ಬಂದಿದೆ, ಎಲ್ಲರನ್ನೂ ಕ್ಷಮಿಸು, ಶಾಂತಿ ಪ್ರಾಪ್ತಿಯಾಗಲಿ’ ಎಂದು ಹೇಳುವಾಗ ಕರುಳು ಕಿತ್ತು ಬರುವ ಅಸಹಾಯಕ ಸ್ಥಿತಿ.

ಕೊನೆಗೂ ಹರೀಶ್ ರಾಣಾ ಜೀವ ಕಳಕೊಂಡು ನಿಸ್ತೇಜವಾದರು; ಪ್ರತಿದಿನ ಸತ್ತು ಬದುಕು ತ್ತಿದ್ದ ಅವರ ಹೆತ್ತವರು ಮನದ ಭಾರ ಕಳೆದುಕೊಂಡು ಹಗುರಾಗಿರಬಹುದೇನೋ!? ಈ ದುಃಖದ ಸಂದರ್ಭದಲ್ಲೂ ಹರೀಶ್ ರಾಣಾ ಅವರ ಕಣ್ಣುಗಳು ಸೇರಿದಂತೆ ವಿವಿಧ ಅಂಗಾಂಗಗಳನ್ನು ದಾನ ಮಾಡುವ ಸರ್ವಶ್ರೇಷ್ಠ ನಿರ್ಧಾರಕ್ಕೆ ಆತನ ತಂದೆತಾಯಿಗೆ ದೊಡ್ಡ ಸಲಾಂ. ಯಾರಿಗೂ ಹರೀಶ್ ರಾಣಾ ಮತ್ತು ಅವರ ಕುಟುಂಬ ಅನುಭವಿಸಿದ ನೋವು, ದುಗುಡ, ನರಕಯಾತನೆ ಬಾರದಿರಲಿ. ಈ ದಯಾಮರಣಕ್ಕಾಗಿ ಕೋರ್ಟಿಗೆ ಎಡತಾಗುವ, ಅರ್ಜಿ ಸಲ್ಲಿಸುವ ಹತಾಶೆ-ಅಸಹಾಯಕ ಸ್ಥಿತಿ ಯಾರೊಬ್ಬರಿಗೂ ಒದಗದಿರಲಿ. ‘ದಯೆಯೇ ಧರ್ಮದ ಮೂಲವಯ್ಯಾ...’ ಎಂದು ಸಾರುವ ಶ್ರೇಷ್ಠ ಪರಂಪರೆ ನಮ್ಮದು.

-(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)