ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಹೋರಾಟ ಆರಂಭಿಸುವ ಮೊದಲು ಸ್ಪಷ್ಟತೆ ಇರಲಿ

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಹಾಗೂ ಮೂಲಸೌಕರ್ಯವನ್ನು ಕೊಡಿಸಬೇಕು ಎನ್ನು ವುದೇ ಈ ಎರಡೂ ಕಾನೂನಿನ ಮೂಲ ಉದ್ದೇಶವಾದರೂ, ವಿವಾದಕ್ಕೆ ಕಾರಣವಾಗಲು ಹಲವು ಆಯಾಮಗಳಿವೆ. ಮೊದಲಿಗೆ ಮಹಾತ್ಮ ಗಾಂಧಿ ಅವರ ಹೆಸರಿನ ಯೋಜನೆಯನ್ನು ಕೈಬಿಟ್ಟು ‘ರಾಮ್’ ಎನ್ನುವ ಶಬ್ದ ಬರುವಂತೆ ಯೋಜನೆಯ ಹೆಸರನ್ನು ಮರುರೂಪಿಸಿರುವುದು. ಎರಡನೆಯದಾಗಿ ಈ ಹಿಂದೆ ನರೇಗಾ ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಗ್ರಾಮ ಪಂಚಾಯಿತಿ ಗಳೇ ಪ್ರಮುಖ ಪಾತ್ರ ವಹಿಸುತ್ತಿದ್ದವು.

ಹೋರಾಟ ಆರಂಭಿಸುವ ಮೊದಲು ಸ್ಪಷ್ಟತೆ ಇರಲಿ

-

ಅಶ್ವತ್ಥಕಟ್ಟೆ

ಕೆಲ ದಿನಗಳ ಹಿಂದೆ ಮುಕ್ತಾಯವಾದ ಚಳಿಗಾಲದ ಅಧಿವೇಶನದಲ್ಲಿ ಕಂಡ ‘ಬಿಸಿ’ ಈವರೆಗೆ ನಿಂತಿಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ-ಗಲಾಟೆಯ ನಡುವೆ ಬಿಜೆಪಿ ಸರಕಾರ ಐತಿಹಾಸಿಕ ಕಾನೂನಿಗೆ ಬದಲಿಗೆ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆಯಿತು.

ಅದೆಂದರೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಬದಲಿಗೆ ಕೇಂದ್ರ ಸರಕಾರ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮತ್ತು ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ವಿಬಿ-ಜಿ ರಾಮ್ ಜಿ) ಯೋಜನೆಯನ್ನು ಜಾರಿಗೊಳಿಸಲು ಈ ವಿಧೇಯಕಕ್ಕೆ ಅನುಮೋದನೆ ಪಡೆದಿದೆ. ಈ ವಿಧೇಯಕ ಅಷ್ಟೇ ವೇಗವಾಗಿ ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದಿದ್ದರಿಂದ ಹೊಸ ಕಾನೂನು ಜಾರಿಗೆ ಬಂದಿದೆ. ಆದರೆ ಈ ಕಾನೂನಿನ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ ನಡೆಸಲು ಕಾಂಗ್ರೆಸ್ ಅಣಿಯಾಗುತ್ತಿದ್ದು, ಬಿಜೆಪಿಗರು ‘ಐತಿಹಾಸಿಕ’ ತೀರ್ಮಾನವೆಂದು ಸಮರ್ಥಿಸಿ ಕೊಳ್ಳುತ್ತಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಹಾಗೂ ಮೂಲಸೌಕರ್ಯವನ್ನು ಕೊಡಿಸಬೇಕು ಎನ್ನುವುದೇ ಈ ಎರಡೂ ಕಾನೂನಿನ ಮೂಲ ಉದ್ದೇಶವಾದರೂ, ವಿವಾದಕ್ಕೆ ಕಾರಣವಾಗಲು ಹಲವು ಆಯಾಮಗಳಿವೆ. ಮೊದಲಿಗೆ ಮಹಾತ್ಮ ಗಾಂಧಿ ಅವರ ಹೆಸರಿನ ಯೋಜನೆಯನ್ನು ಕೈಬಿಟ್ಟು ‘ರಾಮ್’ ಎನ್ನುವ ಶಬ್ದ ಬರುವಂತೆ ಯೋಜನೆಯ ಹೆಸರನ್ನು ಮರುರೂಪಿಸಿರುವುದು. ಎರಡನೆಯದಾಗಿ ಈ ಹಿಂದೆ ನರೇಗಾ ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಗ್ರಾಮ ಪಂಚಾಯಿತಿ ಗಳೇ ಪ್ರಮುಖ ಪಾತ್ರ ವಹಿಸುತ್ತಿದ್ದವು.

ಆದರೀಗ ಇದಕ್ಕಾಗಿ ಕೇಂದ್ರೀಕೃತ ಮಂಡಳಿಯನ್ನು ರಚಿಸಿ, ಅದರಿಂದ ಅನುಮೋದನೆ ಪಡೆದ ಬಳಿಕ ಯೋಜನೆಗಳನ್ನು ಮಾಡಿಸಬೇಕು ಎನ್ನುವುದಾಗಿದೆ. ಇದರೊಂದಿಗೆ ಬಿಜೆಪಿ ಸರಕಾರ ಜಾರಿ ಗೊಳಿಸಿರುವ ಯೋಜನೆಯಲ್ಲಿ, ಗ್ರಾಮೀಣ ಭಾಗದಲ್ಲಿ ನೀರು, ಮೂಲಸೌಕರ್ಯ, ಹವಾಮಾನ ವೈಪರೀತ್ಯ ಹಾಗೂ ಬದುಕಲು ಉತ್ತಮ ವಾತಾವರಣ ಸೃಷ್ಟಿಸುವುದಕ್ಕೆ ಮಾತ್ರ ಅವಕಾಶ ನೀಡ ಲಾಗುತ್ತಿದೆ. ಆದರೆ ಈ ಹಿಂದೆ ನರೇಗಾ ಯೋಜನೆಯಲ್ಲಿ ಕೃಷಿಹೊಂಡ, ಹೊಲಗಳಿಗೆ ಬದುವು ಸೇರಿದಂತೆ ಹಲವು ಆಯಾಮದ ಕಾರ್ಯಗಳಿಗೆ ಅವಕಾಶವಿತ್ತು.

ಇದನ್ನೂ ಓದಿ: Ranjith H Ashwath Column: ದಶಕದಿಂದ ನಡೆಯುತ್ತಿರುವ ಚರ್ಚೆಯ ಫಲವೇನು ?

ಈ ಎಲ್ಲಕ್ಕಿಂತ ಮುಖ್ಯವಾಗಿ ಅನುದಾನಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ನರೇಗಾ ಯೋಜನೆಯಲ್ಲಿ ಯಾವುದೇ ಯೋಜನೆಗೆ ಹೆಚ್ಚುವರಿ ಅನುದಾನ ನೀಡುವುದಕ್ಕೆ ಅವಕಾಶವಿತ್ತು. ಆದರೆ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಕೇಂದ್ರ ಸರಕಾರ ವರ್ಷದ ಆರಂಭದಲ್ಲಿಯೇ ಯೋಜನೆ ಗಳಿಗೆ ಅನುದಾನವನ್ನು ನಿಗದಿಪಡಿಸುತ್ತದೆ.

ಆ ಅನುದಾನದಲ್ಲಿ ಯೋಜನೆಯನ್ನು ಮುಗಿಸಬೇಕು. ಒಂದು ವೇಳೆ ಮುಗಿಯದಿದ್ದರೆ, ಉಳಿದ ಹಣವನ್ನು ರಾಜ್ಯ ಸರಕಾರಗಳು ಭರಿಸಬೇಕು ಎನ್ನುವುದಾಗಿದೆ. ಇವುಗಳೊಂದಿಗೆ ರಾಜ್ಯ ಸರಕಾರ ಗಳಿಗೆ ಬಹುದೊಡ್ಡ ಹೊರೆ ಎನಿಸುವ ಬದಲಾವಣೆ ಎಂದರೆ ಈ ಹಿಂದೆ ಶೇ.90ರಷ್ಟು ಅನುದಾನ ವನ್ನು ಕೇಂದ್ರ ಸರಕಾರ ಭರಿಸಿದರೆ, ರಾಜ್ಯ ಸರಕಾರಗಳು ಶೇ.10ರಷ್ಟು ಮಾತ್ರ ಭರಿಸುತ್ತಿದ್ದವು.

ಆದರೀಗ ಬದಲಾದ ಸನ್ನಿವೇಶದಲ್ಲಿ ಕೇಂದ್ರ ಶೇ.60ರಷ್ಟು ಅನುದಾನವನ್ನು ಮಾತ್ರ ನೀಡುತ್ತಿದ್ದು, ರಾಜ್ಯ ಸರಕಾರಗಳು ಶೇ.40ರಷ್ಟು ಹೊರೆಯನ್ನು ಹೊರಬೇಕಿದೆ. ದೇಶದ ಎಲ್ಲ ರಾಜ್ಯಗಳ ಆರ್ಥಿಕ ಪರಿಸ್ಥಿತಿಯಲ್ಲಿ ಈ ಪ್ರಮಾಣದ ಅನುದಾನ ಹೋರುವುದು ತೀರಾ ಕಷ್ಟ ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿದೆ.

ಹಾಗೆಂದ ಮಾತ್ರಕ್ಕೆ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಒಳ್ಳೆಯ ವಿಷಯಗಳಿಲ್ಲ ಎಂದಲ್ಲ. ಉದಾಹರಣೆಗೆ ಈ ಹಿಂದೆ ನರೇಗಾ ಯೋಜನೆಯಲ್ಲಿ 100 ಕೂಲಿದಿನಗಳಿಗೆ ಅವಕಾಶ ನೀಡಲಾಗಿತ್ತು. ಆದರೀಗ ಅದನ್ನು 125 ದಿನಗಳಿಗೆ ಏರಿಕೆ ಮಾಡಲಾಗಿದೆ. ಈ ಹಿಂದೆ ಕೂಲಿ ಮಾಡಿದ ತಿಂಗಳುಗಳ ಬಳಿಕ ಬ್ಯಾಂಕ್ ಖಾತೆಗೆ ಹಣ ಬರುತ್ತಿತ್ತು. ಆದರೀಗ ಕೂಲಿ ಕೆಲಸಕ್ಕೆ ಬರುವವರಿಗೆ ಪ್ರತಿವಾರ ಬಟವಾಡೆಯನ್ನು ಬ್ಯಾಂಕಿನ ಖಾತೆಗೆ ಮಾಡಬೇಕು ಎನ್ನುವ ನಿಯಮವನ್ನು ಸೇರಿಸಲಾಗಿದ್ದು, 15 ದಿನಗಳು ಮೀರಿದ ಬಳಿಕ ಬಟವಾಡೆ ಹಾಕದಿದ್ದರೆ ‘ಸಣ್ಣ’ ಪ್ರಮಾಣದ ದಂಡ ಸಹಿತ ಪಾವತಿಗೆ ಅವಕಾಶ ನೀಡಲಾಗಿದೆ.

VB

ಇದರೊಂದಿಗೆ ಈ ಹಿಂದೆ ಅನೇಕ ರಾಜ್ಯಗಳಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಗಮನದಲ್ಲಿರಿಸಿ ಕೊಂಡು ಹೆಚ್ಚು ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ. ಇಷ್ಟೆಲ್ಲ ಇದ್ದರೂ ಕೇಂದ್ರದ ತೀರ್ಮಾನ ವನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವಿರೋಧಿಸುತ್ತಿರುವುದಕ್ಕೆ ಹಲವು ಆಯಾಮಗಳಿವೆ.

ಮೊದಲನೆಯದಾಗಿ ಮಹಾತ್ಮ ಗಾಂಧಿ ಅವರ ಹೆಸರನ್ನು ಬದಲಾಯಿಸಲಾಗಿದೆ ಎನ್ನುವ ಕಾರಣವಾದರೆ, ಎರಡನೆಯದಾಗಿ ಗ್ರಾಮ ಪಂಚಾಯಿತಿಗಳ ಸ್ವಾಯತ್ತತೆಯನ್ನು ಕಡಿಯುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ.

ಇದರೊಂದಿಗೆ ಈ ಹಿಂದೆ ನರೇಗಾದಲ್ಲಿ ಇಡೀ ವರ್ಷ ಯೋಜನೆಯನ್ನು ಮಾಡಿಸಲು ಅವಕಾಶ ವಿತ್ತು. ಆದರೀಗ ಕೃಷಿ ಚಟುವಟಿಕೆಯ ಸಮಯದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲವೂ ಈ ಯೋಜನೆಯ ‘ಮರಣಶಾಸನ’ವಾಗಲಿದೆ ಎನ್ನುವುದು ಕಾಂಗ್ರೆಸ್‌ನ ವಾದವಾಗಿದೆ. ಇದರೊಂದಿಗೆ ಅನುದಾನ ಹಂಚಿಕೆಯನ್ನು 60:40ರ ಅನುಪಾತದಲ್ಲಿ ಮಾಡಲು ಮುಂದಾಗಿರುವುದು ರಾಜ್ಯಗಳ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಲಿದೆ.

ಉದಾಹರಣೆಗೆ, ಕಳೆದ ಎರಡೂವರೆ ವರ್ಷದಲ್ಲಿ 17 ಲಕ್ಷ ಹಳ್ಳಿ ಮಟ್ಟದಲ್ಲಿ ಆಸ್ತಿ ಸೃಜನೆ ಮಾಡಲಾ ಗಿದ್ದು, ಇದಕ್ಕಾಗಿ 21,144 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಆದರೀಗ ಇಷ್ಟೇ ಪ್ರಮಾಣದ ಆಸ್ತಿ ಸೃಜಿಸಲು ರಾಜ್ಯದಿಂದ ಸುಮಾರು 80 ಸಾವಿರ ಕೋಟಿ ರು. ನೀಡಬೇಕಿದೆ! ಈ ಕಾರಣಕ್ಕಾಗಿಯೇ ಅನುದಾನದ ವಿಷಯದಲ್ಲಿ ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು.

ಕೇಂದ್ರ ಸರಕಾರ ಜಾರಿಗೊಳಿಸಿರುವ ಈ ನೂತನ ಕಾನೂನಿನಲ್ಲಿ ಸಾಧಕ-ಬಾಧಕಗಳಿವೆ. ಯಾವುದೇ ಕಾನೂನು ಜಾರಿಗೊಳಿಸಿದರೂ, ಈ ರೀತಿಯ ಪರ-ವಿರೋಧ ಚರ್ಚೆ ಸಾಮಾನ್ಯ. ಆದರೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕು, ಉದ್ಯೋಗ ಎಲ್ಲರ ಹಕ್ಕು ಎನ್ನುವ ಕಾರಣಕ್ಕೆ ಈ ಹಿಂದಿನ ಯುಪಿಎ ಸರಕಾರ ಜಾರಿಗೊಳಿಸಿದ್ದ ಮನರೇಗಾ ಯೋಜನೆಯಲ್ಲಿ ‘ಫಲಾನುಭವಿ’ಗಳು ಯಾರಾಗಿ ದ್ದರು? ಎಷ್ಟು ಜನರಿಗೆ ಈ ಯೋಜನೆ ಪೂರ್ಣ ದೊರಕಿದೆ ಎನ್ನುವುದನ್ನು ಗಮನಿಸಬೇಕಿದೆ.

ಕೇಂದ್ರ ಸರಕಾರ ಈಗ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಕೂಲಿಯನ್ನು ಹಾಕುವುದಾಗಿ ಹೇಳಿದೆ. ಈ ಹಿಂದೆಯೂ ಕೆಲಸ ಮಾಡಿದವರಿಗೆ ‘ಡಿಬಿಟಿ’ ಕ್ರಮದ ಮೂಲಕವೇ ವೇತನ ಪಾವತಿ ಯಾಗುತ್ತಿತ್ತು. ಆದರೆ ಈ ರೀತಿ ಪಾವತಿಯಾದ ಬಳಿಕ ಎಷ್ಟು ಮಂದಿ ವಾಪಸು ಅದನ್ನು ಗುತ್ತಿಗೆ ದಾರನಿಗೆ ನೀಡಬೇಕಿತ್ತು ಎನ್ನುವುದನ್ನು ನೋಡಬೇಕಿದೆ.

ಈ ವಿಷಯದಲ್ಲಿ ಯಾವುದೋ ಒಂದು ಸರಕಾರ ಅಥವಾ ಪಕ್ಷದ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದಲ್ಲ ಅಥವಾ ಯಾವುದೋ ಒಬ್ಬ ವ್ಯಕ್ತಿ ಭ್ರಷ್ಟಾಚಾರ ಎಸಗಿದ್ದಾನೆ ಎಂದಲ್ಲ. ಬದಲಿಗೆ ಇಡೀ ವ್ಯವಸ್ಥೆ ಭ್ರಷ್ಟಾಚಾರದಲ್ಲಿರುವಾಗ ಯಾವುದೇ ಸರಕಾರ ಅದೆಷ್ಟೇ ಪಾರದರ್ಶಕ ಯೋಜನೆ ರೂಪಿ ಸಲು ಪ್ರಯತ್ನಿಸಿದರೂ, ಅದರಲ್ಲಿ ಒಂದು ಕಳ್ಳದಾರಿ ಹುಡುಕುವವರು ಇರುತ್ತಾರೆ ಎನ್ನುವುದು ವಾಸ್ತವ.

ಉದಾಹರಣೆಗೆ, ಇಷ್ಟು ದಿನ ನಡೆಯುತ್ತಿದ್ದ ನರೇಗಾ ಯೋಜನೆಯಲ್ಲಿ ಕೆರೆ ಹೂಳು ತೆರವು, ಕೃಷಿ ಹೊಂಡ, ಮೂಲಸೌಕರ್ಯ ವ್ಯವಸ್ಥೆ, ಹೊಲಗಳಿಗೆ ಬದವು ಹಾಕುವುದು ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು. ಈ ಯಾವುದೇ ಕೆಲಸವನ್ನು ಮಾಡುವ ಮುನ್ನ ಗ್ರಾಮ ಪಂಚಾಯಿತಿಗಳ ಅನುಮತಿ ಪಡೆದುಕೊಂಡು ಗುತ್ತಿಗೆದಾರ, ಕೂಲಿ ಆಳುಗಳನ್ನು ಕರೆದುಕೊಂಡು ಬಂದು ಕೆಲಸ ಮುಗಿಸಿ, ಅವರ ಖಾತೆಗಳಿಗೆ ಹಣ ಪಾವತಿಯಾಗುವಂತೆ ನೋಡಿಕೊಳ್ಳುತ್ತಿದ್ದ.

ಆದರೆ ಅನೇಕ ಸಮಯದಲ್ಲಿ ಸ್ಥಳೀಯ ಅಧಿಕಾರಿಗಳ ‘ಹೊಂದಾಣಿಕೆ’ಯೊಂದಿಗೆ ಕೂಲಿಗಳಿಂದ ಕೆಲಸ ಮಾಡಿಸುವ ಬದಲು ಜೆಸಿಬಿ ಮೂಲಕ ಕೆಲಸ ಮಾಡಿಸಿ ಹಣ ಉಳಿಸಿಕೊಂಡಿರುವ ಉದಾ ಹರಣೆಗಳಿವೆ. ಈ ರೀತಿ ಮಾಡಿ ಕೂಲಿ ಆಳುಗಳೆಂದು ಕೆಲವೊಂದಷ್ಟು ‘ಜಾಬ್ ಕಾರ್ಡ್’ಗಳನ್ನು ತೋರಿಸಿ, ಆ ಕಾರ್ಡ್ ಲಿಂಕ್ ಆಗಿರುವ ಖಾತೆಗಳಿಗೆ ಹಣ ಹಾಕಿಸಲಾಗುತ್ತದೆ. ಆದರೆ ಹಣ ವರ್ಗಾವಣೆ ಯಾದ ಬಳಿಕ ಆ ವ್ಯಕ್ತಿಗೆ ಇಂತಿಷ್ಟು ‘ಕಮಿಷನ್’ ಕೊಟ್ಟು ಇನ್ನುಳಿದ ಹಣವನ್ನು ಕಾಮಗಾರಿ ಗುತ್ತಿಗೆ ಪಡೆದ ವ್ಯಕ್ತಿ ಜೇಬಿಗೆ ಇಳಿಸಿಕೊಂಡಿರುವ ಉದಾಹರಣೆಯಿದೆ.

10 ಜನ ಕೂಲಿಗಳು 10 ದಿನ ಮಾಡುವ ಕೆಲಸವನ್ನು ಜೆಸಿಬಿಯ ಮೂಲಕ ಒಂದೆರಡು ದಿನದಲ್ಲಿ ಮುಗಿಸಬಹುದು. ಅಧಿಕಾರಿಗಳ ಶಾಮೀಲಿನಲ್ಲಿ ಇದೇ ರೀತಿ ನರೇಗಾ ಹೆಸರಲ್ಲಿ ಹಣ ಹೊಡೆದಿರುವ ಉದಾಹರಣೆಗಳು ಸರಕಾರ ಅಥವಾ ಪ್ರತಿಪಕ್ಷ ಸ್ಥಾನದಲ್ಲಿರುವ ನಾಯಕರುಗಳಿಗೆ ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ‘ನಮಗ್ಯಾಕೆ?’ ಎನ್ನುವ ರೀತಿಯಲ್ಲಿ ಮೌನವಹಿಸಿದ್ದಾರೆಯೇ? ಎನ್ನುವುದಕ್ಕೆ ನಾಯಕರುಗಳೇ ಉತ್ತರಿಸಬೇಕು.

ವ್ಯವಸ್ಥೆ ಹಾಗೂ ಸ್ಥಳೀಯ ಅಧಿಕಾರಿಗಳ ‘ಹೊಂದಾಣಿಕೆ’ ಹೋಗದ ಹೊರತು ಯಾವುದೇ ಸರಕಾರ ಎಷ್ಟೇ ಪಾರದರ್ಶಕ ಯೋಜನೆಯನ್ನು ಜಾರಿಗೊಳಿಸಿದರೂ ಕೆಲವೇ ತಿಂಗಳಲ್ಲಿ ಅದಕ್ಕೊಂದು ಅಡ್ಡದಾರಿಯನ್ನು ಕಂಡುಕೊಳ್ಳುವವರು ನಮ್ಮಲ್ಲಿದ್ದಾರೆ.

ಆದರೆ ಕಾಂಗ್ರೆಸ್ ಈ ವಿಷಯಗಳಿಗೆ ಒತ್ತು ಕೊಡುವುದಕ್ಕಿಂತ ತಾವು ತಂದಿದ್ದ ಯೋಜನೆಯನ್ನು ಬದಲಾಯಿಸಲು ಬಿಜೆಪಿ ಹೊರಟಿದೆ ಎನ್ನುವ ವಿಷಯವನ್ನು ಮಾತ್ರ ಜನರ ಮುಂದಿಡುತ್ತಿದೆ. ಯಾವುದೇ ಕಾಯಿದೆಯನ್ನು ಒಮ್ಮೆ ಜಾರಿಗೆ ತಂದರೆ ಅದನ್ನು ಬದಲಾಯಿಸಲೇಬಾರದು ಎನ್ನುವ ಜಡ ಮನಸ್ಥಿತಿ ಸರಿಯಲ್ಲ.

ಹಾಗೆ ನೋಡಿದರೆ, ಭಾರತದ ಸಂವಿಧಾನವನ್ನೇ 106 ಬಾರಿ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ಯಲ್ಲಿ ರಾಜಕೀಯ ಪ್ರೇರಿತವೆಷ್ಟು, ಜನರಿಗೆ ಅನುಕೂಲವಾಗುವ ತಿದ್ದುಪಡಿಗಳೆಷ್ಟು ಎನ್ನುವುದು ಈಗಲೂ ಬೇರೆಯದೇ ಚರ್ಚಾ ವಿಷಯ. ಅದೇ ರೀತಿ ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಮನರೇಗಾ ಕಾಯಿದೆ ಬದಲಿಗೆ ಕೇಂದ್ರ ವಿಬಿ-ಜಿ ರಾಮ್ ಜಿ ಕಾನೂನನ್ನು ಜಾರಿ ಗೊಳಿಸಿದೆ.

ಈ ನೂತನ ಕಾನೂನಿನಲ್ಲಿರುವುದೆಲ್ಲ ರಾಜಕೀಯ ಪ್ರೇರಿತ ಅಂಶವೆನ್ನಲು ಸಾಧ್ಯವಿಲ್ಲ. ಇದು ಪಾರದರ್ಶಕವಾಗಿದ್ದು, ಇಂದಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ಕೆಲವೊಂದಷ್ಟು ಮಾರ್ಪಾಟು ಗಳೊಂದಿಗೆ ಜಾರಿಗೊಳಿಸಲಾಗಿದೆ. ಅದರಲ್ಲಿಯೂ ವರ್ಷಕ್ಕೆ 125 ದಿನಗಳ ಕೂಲಿದಿನವನ್ನು ನೀಡಿರು ವುದು ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಆದರೆ ಕೇಂದ್ರ ಸರಕಾರವು ಅನುದಾನ ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರಗಳ ಮೇಲೆ ಈಗ ಹಾಕಿರುವ ಹೊರೆಯನ್ನು ತಡೆದುಕೊಳ್ಳುವಷ್ಟು ರಾಜ್ಯಗಳು ಎಷ್ಟು ಉಳಿದುಕೊಂಡಿವೆ? ಎನ್ನು ವುದು ಈಗಿರುವ ಪ್ರಶ್ನೆ. ಶೇ.40ರಷ್ಟು ಅನುದಾನದ ಹೊರೆಯನ್ನು ರಾಜ್ಯಗಳ ಮೇಲೆ ಹೇರುವು ದರಿಂದ ಸಹಜವಾಗಿ ಬಹುತೇಕ ರಾಜ್ಯ ಸರಕಾರಗಳಿಗೆ ಈ ಅನುದಾನವನ್ನು ಹೊಂದಿಸಲು ಸಾಧ್ಯ ವಾಗದೇ ‘ಕೈಚೆಲ್ಲುವ’ ಸಾಧ್ಯತೆಯೇ ಹೆಚ್ಚಿರುತ್ತದೆ.

ನಡೆಸಿಕೊಂಡು ಹೋದರೂ ಕೆಲವರ್ಷಗಳ ಅಂತರದಲ್ಲಿ ಅನುದಾನ ನಿಲ್ಲಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ದೇಶದಲ್ಲಿ ತಂದಿದ್ದ ಅದ್ಭುತ ಯೋಜನೆಯೊಂದು ಮೂಲೆ ಸೇರುವ ಆತಂಕವಿರುವುದು ಸುಳ್ಳಲ್ಲ. ರಾಷ್ಟ್ರಾದ್ಯಂತ ಹೋರಾಟಕ್ಕೆ ಕರೆ ನೀಡಿರುವ ಕಾಂಗ್ರೆಸ್ ನಾಯಕರು ಹೆಸರು ಬದಲಾವಣೆಯಾಗಿರುವುದನ್ನು ಮಾತ್ರ ಮುಂದಿಟ್ಟುಕೊಂಡು ಹೋರಾಟ ನಡೆಸುವ ಬದಲು, ಇಡೀ ಯೋಜನೆ ಯಾವ ರೀತಿಯಲ್ಲಿ ಹೊರೆಯಾಗಲಿದೆ ಎಂಬುದರ ಬಗ್ಗೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಗಬಹುದಾದ ಸಮಸ್ಯೆಗಳ ಕುರಿತು ‘ಬೆಳಕು ಚೆಲ್ಲುವ’ ಕಾರ್ಯದತ್ತ ಗಮನಹರಿಸಬೇಕಿದೆ.

ಏಕೆಂದರೆ, ಹೆಸರು ಬದಲಾವಣೆಯಾಗುವುದು, ರಾಜ್ಯ ಸರಕಾರಗಳಿಗೆ ಅನುದಾನದ ಹೊರೆಯಾಗು ತ್ತದೆ ಎನ್ನುವುದಕ್ಕಿಂತ ಈ ಯೋಜನೆಯಿಂದ ಜನರಿಗೆ ಆಗುವ ಲಾಭ, ಬದಲಾವಣೆ ಮಾಡಿರುವು ದರಿಂದ ಜನರಿಗೆ ಆಗಬಹುದಾದ ನಷ್ಟದ ಬಗ್ಗೆ ಹೇಳದೇ ಹೋದರೆ ಕಳೆದೊಂದು ದಶಕಗಳಿಂದ ನಡೆಸಿಕೊಂಡು ಬಂದಿರುವ ಹತ್ತಾರು ಹೋರಾಟಗಳೊಂದಿಗೆ ಇದು 11ನೇ ಹೋರಾಟ ವಾಗುತ್ತದೆ.

ಅಂತಿಮವಾಗಿ ಯಾವುದೇ ಸರಕಾರದ ವಿರುದ್ಧ ಜನರು ಬೇಸತ್ತುಕೊಳ್ಳುವುದು ತಮಗೆ ಸಿಗಬೇಕಾದ ‘ನ್ಯಾಯ’ ಸಿಗದೇ ಹೋದಾಗಲೇ ಹೊರತು ರಾಜಕೀಯ ಮೇಲಾಟಗಳನ್ನು ನೋಡಿಕೊಂಡು ಅಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರು ಇನ್ನಾದರೂ ಅರಿಯಬೇಕಿದೆ.