ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಪ್ರಾಣ ಉಳಿಸುವ ಸಮಯ ಪ್ರಜ್ಞೆ

ನಾಲ್ಕು ಜನ ಗಂಡು ಮಕ್ಕಳೂ ಹಲವು ವರ್ಷಗಳ ಕಾಲ ವಿವಿಧ ರಂಗಗಳಲ್ಲಿ ಯಕ್ಷಣಿ ಮುಂತಾದ ವಿದ್ಯೆಗಳನ್ನು ಕಲಿತು ಪ್ರತಿಭಾವಂತರಾಗಿ ಬಹಳ ವರ್ಷಗಳ ನಂತರ ತಂದೆ ಹೇಳಿ ಕಳುಹಿಸಿದಾಗ ತಮ್ಮ ಊರಿಗೆ ಮರಳ ತೊಡಗಿದರು. ಹೀಗೆ ನಾಲ್ವರು ಒಟ್ಟಿಗೆ ಬರುತ್ತಿರುವಾಗ ಎಲ್ಲರಿಗೂ ತಾವು ಕಲಿತ ವಿದ್ಯೆಯನ್ನು ಪ್ರದರ್ಶಿಸಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು.

ಪ್ರಾಣ ಉಳಿಸುವ ಸಮಯ ಪ್ರಜ್ಞೆ

ಒಂದೊಳ್ಳೆ ಮಾತು

rgururaj628@gmail.com

ಒಂದು ಊರಿನಲ್ಲಿ ಒಬ್ಬ ವ್ಯಕ್ತಿಯಿದ್ದನು. ಆತನು ತುಂಬಾ ಬುದ್ಧಿವಂತನು ಮತ್ತು ನಾಲ್ಕಾರು ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದನು. ಅವನಿಗಿದ್ದ ನಾಲ್ಕು ಗಂಡು ಮಕ್ಕಳು ಬೇಜವಾಬ್ದಾರಿ ಯವರು. ಇದರಿಂದ ಬೇಸರಗೊಂಡ ಅವನು ನೀವು ಸರಿಯಾದ ವಿದ್ಯೆ ಜ್ಞಾನ ಸಂಪಾದಿಸುವವರೆಗೆ ಮನೆಗೆ ಬರಬೇಡಿ ಎಂದು ಹೇಳಿ ದೇಶ ಪರ್ಯಟನೆಗೆ ಕಳಿಸಿದನು.

ನಾಲ್ಕು ಜನ ಗಂಡು ಮಕ್ಕಳೂ ಹಲವು ವರ್ಷಗಳ ಕಾಲ ವಿವಿಧ ರಂಗಗಳಲ್ಲಿ ಯಕ್ಷಣಿ ಮುಂತಾದ ವಿದ್ಯೆಗಳನ್ನು ಕಲಿತು ಪ್ರತಿಭಾವಂತರಾಗಿ ಬಹಳ ವರ್ಷಗಳ ನಂತರ ತಂದೆ ಹೇಳಿ ಕಳುಹಿಸಿದಾಗ ತಮ್ಮ ಊರಿಗೆ ಮರಳ ತೊಡಗಿದರು. ಹೀಗೆ ನಾಲ್ವರು ಒಟ್ಟಿಗೆ ಬರುತ್ತಿರುವಾಗ ಎಲ್ಲರಿಗೂ ತಾವು ಕಲಿತ ವಿದ್ಯೆಯನ್ನು ಪ್ರದರ್ಶಿಸಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು.

ಅದಕ್ಕಾಗಿ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು. ಅವರು ಒಂದು ಭಯಾನಕವಾದ ಕಾಡನ್ನು ದಾಟಿ ಬರಬೇಕಾಗಿತ್ತು. ಆ ಹಾದಿಯಲ್ಲಿ ಅವರು ಬರುತ್ತಿದ್ದಾಗ ಒಂದು ದೊಡ್ಡ ಮರದ ಕೆಳಗೆ ಸತ್ತು ಹೋದ ಸಿಂಹದ ಮೂಳೆಗಳನ್ನು ಹಾಗೂ ಅದರ ಚರ್ಮದ ಒಂದು ರಾಶಿಯನ್ನು ನೋಡಿದರು. ಆ ನಾಲ್ವರು ಸಹೋದರರು ತಾವು ಕಲಿತ ಜ್ಞಾನವನ್ನು ಪ್ರದರ್ಶಿಸಲು ಇದು ಸರಿಯಾದ ಅವಕಾಶ ವೆಂದು ಭಾವಿಸಿದರು.

ಇದನ್ನೂ ಓದಿ: Roopa Gururaj Column: ಅತಿಯಾಸೆ ಯಾರಿಗೂ ಒಳ್ಳೆಯದಲ್ಲ

ಎಲ್ಲರೂ ಸಿಂಹದ ಮೂಳೆ ಮತ್ತು ಚರ್ಮದ ರಾಶಿ ಬಿದ್ದಿರುವ ಮರದ ಬುಡಕ್ಕೆ ಹೋದರು. ಅದನ್ನು ನೋಡಿದ ಮೊದಲನೆಯವನು, ನಾನು ಈ ಸಿಂಹದ ಚರ್ಮ ಮತ್ತು ಮೂಳೆಗಳನ್ನೆಲ್ಲ ಜೋಡಿಸಿ ಅದು ಜೀವಂತ ಸಿಂಹ ಹೇಗಿರುತ್ತದೆಯೋ ಹಾಗೆ ಮಾಡಿ ತೋರಿಸುತ್ತೇನೆ ಎನ್ನುತ್ತಾ ತನ್ನ ಚಾಣಾಕ್ಷ ತನದಿಂದ ಅದರ ಮೂಳೆ ಚರ್ಮಗಳನ್ನು ಸರಿಯಾಗಿ ಜೋಡಿಸಿ ಅದಕ್ಕೆ ಸಿಂಹದ ಆಕಾರವನ್ನು ಕೊಟ್ಟ.. ಅದನ್ನು ನೋಡುತ್ತಿದ್ದರೆ ನಿಜವಾಗಿಯೂ ಒಂದು ಜೀವಂತ ಸಿಂಹ ನಿಂತಂತೆ ಕಾಣಿಸು ತ್ತಿತ್ತು.

ಎರಡನೆಯ ಸಹೋದರನು ತನ್ನ ಮಂತ್ರಶಕ್ತಿಯಿಂದ ಅದರ ಅಸ್ತಿಗಳ ಸುತ್ತಲೂ ಮಾಂಸವನ್ನು ತುಂಬಿದ, ಹಾಗಾಗಿ ಅದು ತಳ ತಳ ಹೊಳೆಯುವ ಉಗ್ರ ಸಿಂಹದಂತೆ ಕಾಣತೊಡಗಿತ್ತು. ಮೂರನೇ ಸಹೋದರನು ಕೆಲವೊಂದು ಮಂತ್ರಗಳನ್ನು ಜಪಿಸುತ್ತಾ ಅದಕ್ಕೆ ಜೀವ ತುಂಬಿಸಲು ಪ್ರಯತ್ನ ಪಡತೊಡಗಿದ. ಆಗ ಮಧ್ಯೆ ಬಾಯಿ ಹಾಕಿದ ನಾಲ್ಕನೇ ಸಹೋದರನು, ಅಯ್ಯೋ! ಖಂಡಿತ ಅದಕ್ಕೆ ಜೀವ ತುಂಬ ಬೇಡ,ಹಾಗೆ ಏನಾದರೂ ನೀನು ಅದಕ್ಕೆ ಜೀವ ತುಂಬಿದರೆ, ಅದು ನಮ್ಮೆಲ್ಲರನ್ನು ಕೊಂದು ಹಾಕಬಹುದು ಎಂದು ಬೇಡಿಕೊಂಡ.

ಅದಕ್ಕೆ ಉಳಿದ ಮೂವರು ನಗುತ್ತಾ, ಮೂರ್ಖ ಶಿಖಾಮಣಿ, ನೀನು ವಿದ್ಯೆ ಕಲಿತಿರುವುದೇ ದಂಡ, ನಮ್ಮ ವಿದ್ಯೆಗಳನ್ನು ಪ್ರದರ್ಶಿಸಲು ಇರುವ ಈ ಅವಕಾಶವನ್ನು ಬೇಡ ಎನ್ನುತ್ತಿದ್ದೀಯ. ನಿನಗೆ ಇಲ್ಲಿ ನಿಂತುಕೊಳ್ಳಲು ಭಯವಾಗುವುದಾದರೆ, ನಮ್ಮ ಜೊತೆ ಇರಬೇಡ ಇಲ್ಲಿಂದ ಹೊರಟು ಹೋಗು ಎಂದು ಅವನ ಮೇಲೆ ರೇಗಿದರು.

ಆಗ ನಾಲ್ಕನೇ ಸಹೋದರ, ಸ್ವಲ್ಪ ತಡೆಯಿರಿ, ನಾನು ಈ ಮರದ ಮೇಲೆ ಕುಳಿತುಕೊಂಡು ನನ್ನ ಜೀವ ಉಳಿಸಿಕೊಳ್ಳುತ್ತೇನೆ. ಅಲ್ಲಿಯವರೆಗೂ ಅವಕಾಶ ಕೊಡಿ ಎನ್ನುತ್ತಾ ಅವರ ಅನುಮತಿಗೂ ಕಾಯದೇ ಮರದ ಮೇಲೆ ಹತ್ತಿ ಅಡಗಿ ಕುಳಿತುಕೊಂಡನು. ಮೂರನೇ ಸಹೋದರರು ತನ್ನ ಮಂತ್ರ ಶಕ್ತಿಯ ಪ್ರಭಾವದಿಂದ ಸತ್ತ ಸಿಂಹದ ಜೀವಕ್ಕೆ ಜೀವ ತುಂಬಿಸಿದ. ಜೀವ ಬಂದ ತಕ್ಷಣವೇ ಆ ಸಿಂಹವು ಘರ್ಜಿಸುತ್ತಾ ಮೂರು ಜನ ಸೋದರ ಮೇಲೆ ಹಾರಿ, ಅವರನ್ನು ತಿಂದು ಕಾಡಿನತ್ತ ಓಡಿಹೋಯಿತು.

ಹೀಗೆ ಅಣ್ಣಂದಿರನ್ನು ಕಳೆದುಕೊಂಡು ದುಃಖದಿಂದ ಮನೆಗೆ ಬಂದ ನಾಲ್ಕನೇ ಸಹೋದರನು ತಂದೆಗೆ ವಿಷಯವನ್ನು ತಿಳಿಸಿದ. ಅದನ್ನು ಕೇಳಿಸಿಕೊಂಡ ತಂದೆಯು, ಸಾವಧಾನದಿಂದ ‘ಯಾವ ವಿದ್ಯೆ ಕಲಿತರೇನು? ಅದನ್ನು ಯಾವ ಸಂದರ್ಭದಲ್ಲಿ ಹೇಗೆ ಉಪಯೋಗಿಸಬೇಕು ಎಂಬುದರ ಪರಿಜ್ಞಾನವಿರಬೇಕು. ಇಲ್ಲದಿದ್ದರೆ ಅಂತಹ ವಿದ್ಯೆಯಿಂದ ಒಮ್ಮೊಮ್ಮೆ ಅನುಕೂಲಕ್ಕಿಂತ ಅನಾನು ಕೂಲವೇ ಜಾಸ್ತಿ ಆಗಬಹುದು’ ಎನ್ನುತ್ತಾ ನಾಲ್ಕನೆಯ ಮಗನನ್ನು ಸಮಾಧಾನಪಡಿಸಿದನು.

ಆ ತಂದೆ ಹೇಳಿದ ಮಾತು ನಮಗೂ ಅನ್ವಯಿಸುತ್ತದೆ ಅಲ್ಲವೇ? ಅತಿ ಬುದ್ಧಿವಂತಿಕೆಗಿಂತ, ಸಮಯ ಪ್ರಜ್ಞೆ ಬಹಳ ಮುಖ್ಯ.