ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಮಮತಾ ರಾಜಕೀಯ ಪತನ ಕಾಂಗ್ರೆಸ್‌ʼಗೆ ವರದಾನ

ಯಾವಾಗ ಮಮತಾ ಬ್ಯಾನರ್ಜಿ ಅವರು ಪಕ್ಷದಲ್ಲಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಗೆ ಹೆಚ್ಚಿನ ಅಧಿಕಾರ ನೀಡಲು ಶುರುಮಾಡಿದ್ದರೋ ಆಗಲೇ ಟಿಎಂಸಿ ಒಂದ ಒಂದು ದಿನ ಒಡೆದುಹೋಗುವುದು ನಿಶ್ಚಿತ ಎಂಬ ಚರ್ಚೆ ಬಂಗಾಳದ ರಾಜಕೀಯ ಕಾರಿಡಾರ್‌ನಲ್ಲಿ ಆರಂಭ ವಾಗಿದ್ದವು. ಟಿಎಂಸಿಯ ಒಂದು ಗುಂಪು ಮಮತಾ ಬ್ಯಾನರ್ಜಿಗೆ ವಿಧೇಯವಾಗಿತ್ತೇ ವಿನಃ ಯುವಕ ಅಭಿಷೇಕ್‌ರನ್ನು ಒಪ್ಪುವ ಸ್ಥಿತಿಯಲ್ಲಿರಲಿಲ್ಲ

ಮಮತಾ ರಾಜಕೀಯ ಪತನ ಕಾಂಗ್ರೆಸ್‌ʼಗೆ ವರದಾನ

-

ಜನಪಥ

ಎಡಪಕ್ಷಗಳು ಕರಾಳ ರಾಜಕೀಯ ಹಿಂಸಾಚಾರದ ಭೀಕರ ಇತಿಹಾಸ ಹೊಂದಿರುವು ದರಿಂದ ಅವರನ್ನು ಜನರು ಮತ್ತೆ ಸ್ವೀಕರಿಸುತ್ತಾರಾ ಎಂಬ ಬಗ್ಗೆ ಅನುಮಾನಗಳಿವೆ. ಹೀಗಾಗಿ, ಮಮತಾ ಬ್ಯಾನರ್ಜಿ ರಾಜಕೀಯ ಪತನ ಕಾಂಗ್ರೆಸ್‌ಗೆ ವರದಾನ. ಇದನ್ನು ರಾಹುಲ್ ಗಾಂಧಿ ಮತ್ತವರ ವಂದಿಮಾಗಧರು ಅರ್ಥ ಮಾಡಿಕೊಳ್ಳಬೇಕಷ್ಟೇ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಐತಿಹಾಸಿಕ ಜಯಭೇರಿ ಸಾಧಿಸಿದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಅನಿರೀಕ್ಷಿತ ವೇನಲ್ಲ. ಟಿಎಂಸಿ ಮತ್ತು ಮುಖ್ಯವಾಗಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಸೋದರಳಿಯ ಅಭಿಷೇಕ್ ಬ್ಯಾನರ್ಜಿ ತಮ್ಮ ಅಧಿಕಾರಾವಧಿಯಲ್ಲಿ ಇಡೀ ರಾಜ್ಯವನ್ನು ಅರಾಜಕ ಸ್ಥಿತಿಗೆ ತಳ್ಳಿದ್ದರ ಫಲವನ್ನೀಗ ಉಣ್ಣುತ್ತಿದ್ದಾರೆ.

ಮಮತಾ ಬ್ಯಾನರ್ಜಿ ಸರ್ವಾಧಿಕಾರ ಮತ್ತು ಅಭಿಷೇಕ್‌ ಬ್ಯಾನರ್ಜಿ ದುರಹಂಕಾರದ ರಾಜಕೀಯ ನಡೆಗಳು ಅವರಿಗೇ ತಿರುಗುಬಾಣವಾಗುತ್ತಿವೆ. ತಾನು ಸ್ಥಾಪಿಸಿದ್ದ ಪಕ್ಷದಲ್ಲಿ ತನ್ನ ಮಾತೇ ನಡೆಯದ ಶೋಚನೀಯ ಸ್ಥಿತಿ ನಿರ್ಮಾಣವಾಗಬಹುದು ಎಂದು ಬಹುಶಃ ಮಮತಾ ಬ್ಯಾನರ್ಜಿ ಕಲ್ಪಿಸಿಯೂ ಇರಲಿಕ್ಕಿಲ್ಲ. ರಾಜಕೀಯ ಅಸ್ತಿತ್ವ ರಕ್ಷಣೆಗೆ ಹೆಣಗಾಡು ತ್ತಿರುವ ಮಮತಾ ಬ್ಯಾನರ್ಜಿ, ದೆಹಲಿಗೆ ಹೋಗಿ ಸೋನಿಯಾ ಗಾಂಧಿಯವರನ್ನು ಬಿಗಿದಪ್ಪಿ ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಯಾವಾಗ ಮಮತಾ ಬ್ಯಾನರ್ಜಿ ಅವರು ಪಕ್ಷದಲ್ಲಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ಹೆಚ್ಚಿನ ಅಧಿಕಾರ ನೀಡಲು ಶುರುಮಾಡಿದ್ದರೋ ಆಗಲೇ ಟಿಎಂಸಿ ಒಂದ ಒಂದು ದಿನ ಒಡೆದುಹೋಗುವುದು ನಿಶ್ಚಿತ ಎಂಬ ಚರ್ಚೆ ಬಂಗಾಳದ ರಾಜಕೀಯ ಕಾರಿಡಾರ್‌ನಲ್ಲಿ ಆರಂಭವಾಗಿದ್ದವು. ಟಿಎಂಸಿಯ ಒಂದು ಗುಂಪು ಮಮತಾ ಬ್ಯಾನರ್ಜಿಗೆ ವಿಧೇಯವಾಗಿತ್ತೇ ವಿನಃ ಯುವಕ ಅಭಿಷೇಕ್‌ರನ್ನು ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ಆದರೆ, ತನ್ನ ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ಎಂದು ಮಮತಾ ತೀರ್ಮಾನ ಮಾಡಿದ್ದರು ಮತ್ತು ತಮ್ಮ ನಂತರ ಅಭಿಷೇಕ್‌ಗೆ ಪೂರ್ಣ ನಾಯಕತ್ವ ಎಂಬ ಸುಳಿವನ್ನು ಆಗಾಗ್ಗೆ ನೀಡುತ್ತಿದ್ದರು.

ಇದನ್ನೂ ಓದಿ: Raghava Sharma Nidle Column: ಅಣ್ಣಾಮಲೈ ಹೃದಯಕ್ಕೆ ಹತ್ತಿರವಾಗಿದ್ದ ಬಿಜೆಪಿ ಭಾರವಾಗಿದ್ದೇಕೆ ?

ಪಕ್ಷದ ಏಳಿಗೆಗೆ ಕಾರಣರಾದ ಇತರೆ ನಾಯಕರು ಸಹಜವಾಗಿಯೇ ಇದನ್ನು ಆಂತರಿಕವಾಗಿ ವಿರೋಧಿಸಿದ್ದರು. ಆದರೆ, ರಾಜಕೀಯ ಅಸ್ತಿತ್ವದ ಪ್ರಶ್ನೆ ಬಂದಾಗ ಮೌನವಾಗಿರುವುದು ಅವರಿಗೆ ಅನಿವಾರ್ಯವಾಗಿತ್ತು. ಅವಕಾಶಕ್ಕಾಗಿ ಕಾದಿದ್ದ ಅವರೆಲ್ಲರೂ ಈಗ ಬಂಡೆದ್ದಿದ್ದಾ ರೆ.

ಟಿಎಂಸಿಯ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಸೇರಿ ಅನೇಕರು ಅಭಿಷೇಕ್ ಕಾರಣಕ್ಕಾಗಿಯೇ ಮೂಲ ಟಿಎಂಸಿ ಮೇಲೆ ತಮ್ಮ ಹತೋಟಿ ಸಾಧಿಸಲು ಮುಂದಾಗಿದ್ದಾರೆ. ಮಮತಾ ಬ್ಯಾನರ್ಜಿ ರಾಜಕೀಯ ಜೀವನ ಬಹುತೇಕ ಅಂತ್ಯದ ಸನಿಹದಲ್ಲಿದೆ. ಅವರ ಪ್ರಭಾವಲಯ ನೆಲಕಚ್ಚಿದೆ. ಜನರು ರಾಜಕೀಯ ಚಿತ್ರಣವನ್ನೇ ಬದಲಿಸಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಕಾರ್ಯವೈಖರಿ ವಿರುದ್ಧ ಜನರೇ ಮತ ಹಾಕಿದ್ದಾರೆ. ಹಿಂಸಾತ್ಮಕ ಆಡಳಿತದಿಂದ ಬೇಸತ್ತ ಜನರು, ಅಭಿವೃದ್ಧಿಗಾಗಿ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಹೀಗಿದ್ದಾಗ ಅಭಿಷೇಕ್ ನಾಯಕತ್ವ ನಂಬಿಕೊಂಡು ರಾಜ್ಯದಲ್ಲಿ ರಾಜಕೀಯ ಮಾಡಲು ಸಾಧ್ಯವಿದೆಯೇ? ಈಗಾಗಲೇ ಹಣಕಾಸು ಅವ್ಯವಹಾರ ಹಲವು ಕೇಸುಗಳಲ್ಲಿ ಸಿಲುಕಿರುವ ಅವರನ್ನು ಜನ ಮತ್ತೆ ಸ್ವೀಕರಿಸಿಯಾರೇ? ಮೇಲಾಗಿ, ಕೇಂದ್ರ ಬಿಜೆಪಿ ಸುಮ್ಮನಿರುವುದೇ? ಇವೆಲ್ಲವನ್ನೂ ಅಳೆದು-ತೂಗಿ ಲೆಕ್ಕ ಹಾಕಿರುವ ಟಿಎಂಸಿಯ ಒಂದು ಗುಂಪು, ಎನ್‌ಡಿಎ ಮೈತ್ರಿಕೂಟದ ಪರ ವಾಲಿದೆ.

ಬಹುಶಃ ಬಿಜೆಪಿ ನಾಯಕರ ಒತ್ತಡವೂ ಇವರ ಮೇಲಿದ್ದಿರಬಹುದು. ಇಂದಿನ ರಾಜಕೀಯ ದಲ್ಲಿ ಇದು ಸರ್ವೇಸಾಮಾನ್ಯವಾಗಿದೆ. ಸದ್ಯ 28 ಟಿಎಂಸಿ ಸಂಸದರಲ್ಲಿ 20 ಮಂದಿ ಸಂಸತ್ತಿನಲ್ಲಿ ಎನ್ಡಿಎಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಲೋಕ ಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಹಾಗಾಗಿ, ಟಿಎಂಸಿ ಎನ್‌ಡಿಎಯ ಅಧಿಕೃತ ಮಿತ್ರಪಕ್ಷವಾಗಿ ಹೊರಹೊಮ್ಮುವ ಕಾಲ ದೂರದಲ್ಲಿಲ್ಲ. ಅಗತ್ಯ ಸಂಖ್ಯಾಬಲ ವಿಲ್ಲದ ಮಮತಾ ಬ್ಯಾನರ್ಜಿ ನೇತೃತ್ವದ ಗುಂಪಿಗೆ ಮೂಲ ಟಿಎಂಸಿ ಪಕ್ಷ ಎಂಬ ಮಾನ್ಯತೆ ಸಿಗುವುದೂ ಅನುಮಾನ.

mamata

ರಾಜ್ಯ ವಿಧಾನಸಭೆಯಲ್ಲೂ ಮಮತಾ ಮತ್ತು ಅಭಿಷೇಕ್ ವಿರುದ್ಧ ಬಂಡಾಯ ಬಿರುಸಾ ಗಿದ್ದು, ಅದರ ಪರಿಣಾಮವಾಗಿಯೇ ಸಿಗ್ನೇಚರ್ ಫೋರ್ಜರಿ ಪ್ರಕರಣದ ವಿಚಾರಣೆಗಾಗಿ ಮಂಗಳವಾರದಂದು ಟಿಎಂಸಿ ಕೇಂದ್ರ ಕಚೇರಿ ಮುಂದೆ ಸಿಐಡಿ ಅಧಿಕಾರಿಗಳು ಬಂದು ನಿಂತಿದ್ದಾರೆ.

ವಿಧಾನಸಭೆಯಲ್ಲಿ ವಿಪಕ್ಷ ನಾಯಕನನ್ನಾಗಿ ತಮ್ಮ ಆಪ್ತ ಶಾಸಕ ಸೋವಂದೇಬ್ ಚಟ್ಟೋ ಪಾಧ್ಯಾಯ ಅವರನ್ನು ಆಯ್ಕೆ ಮಾಡಿದ ಮಮತಾ ಬ್ಯಾನರ್ಜಿ ತೀರ್ಮಾನ ವಿರೋ ಧಿಸಿರುವ ಟಿಎಂಸಿಯ ಬಹುಪಾಲು ಶಾಸಕರು (80 ಶಾಸಕರಲ್ಲಿ 58 ಮಂದಿ ಇದ್ದಾರೆ ಎಂದು ಬಂಡಾಯ ಗುಂಪು ಹೇಳುತ್ತಿದೆ) ಸೋವಂದೇಬ್ ಬದಲಿಗೆ ಉಚ್ಛಾಟಿತ ಶಾಸಕಿ ರಿತಬೃತಾ ಬ್ಯಾನರ್ಜಿ ಅವರನ್ನು ಆ ಹುದ್ದೆಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿ ದ್ದರು. ಆದರೆ, ಮಮತಾ-ಅಭಿಷೇಕ್ ಇದಕ್ಕೊಪ್ಪಿರಲಿಲ್ಲ. ಇದರಿಂದಾಗಿ ಬಂಡಾಯ ಗುಂಪು ಶಾಸಕಾಂಗ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಶಾಸಕಿ ರಿತಬೃತಾ ಬ್ಯಾನರ್ಜಿಯನ್ನು ವಿಪಕ್ಷ ನಾಯಕಿಯಾಗಿ ಆಯ್ಕೆ ಮಾಡಿದೆ. ಇದಕ್ಕೆ ವಿಧಾನಸಭಾ ಸ್ಪೀಕರ್ ಮಾನ್ಯತೆಯೂ ಸಿಕ್ಕಿದೆ. ಅಲ್ಲಿಗೆ, 1998ರಲ್ಲಿ ಸ್ಥಾಪನೆಗೊಂಡ ಟಿಎಂಸಿಯಲ್ಲಿ ಮೊದಲ ಅಧಿಕೃತ ವಿಭಜನೆಗೆ ಚಾಲನೆ ಸಿಕ್ಕಿದೆ.

2021ರಲ್ಲಿ ಮಮತಾ ನಂದಿಗ್ರಾಮದಲ್ಲಿ ಸೋತಿದ್ದಾಗ ಕೋಲ್ಕತ್ತಾದ ಭವಾನಿಪುರ ಸೀಟು ಬಿಟ್ಟುಕೊಟ್ಟಿದ್ದ ಸೋವಂದೇಬ್, ಮಮತಾರ ವಿಧೇಯ ಶಿಷ್ಯನಾಗಿ ಗುರುತಿಸಿಕೊಂಡಿದ್ದರು. ಶಿಷ್ಯನಿಗೆ ಅಧಿಕಾರ ನೀಡುವ ಮಮತಾ ನಿರ್ಧಾರ ಉಳಿದವರಿಗೆ ಪಥ್ಯವಾಗಿಲ್ಲ.

2011ರಿಂದ ಬಂಗಾಳದಲ್ಲಿ ಪ್ರಶ್ನಾತೀತ ನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ, 2014 ರಿಂದ ಕೇಂದ್ರದಲ್ಲಿ ಪಿಎಂ ಮೋದಿ ಆಡಳಿತ ಶುರುವಾದಲ್ಲಿಂದ ಆಕ್ರಮಣಕಾರಿ ರಾಷ್ಟ್ರೀಯ ವಿಪಕ್ಷ ನಾಯಕಿಯಾಗಿ ಕಾಣಿಸಿಕೊಂಡವರು. ಬಂಗಾಳದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಒಬ್ಬಂಟಿಯಾಗಿ ಹೋರಾಟ ನಡೆಸುತ್ತಿದ್ದಾಗಲೂ, ಕಾಂಗ್ರೆಸ್ ದಿಲ್ಲಿ ದೊರೆಗಳುಮಾತ್ರ ಮಮತಾ ವಿರುದ್ಧ ಸಣ್ಣ ಧ್ವನಿಯನ್ನೂ ಎತ್ತಿದವರಲ್ಲ.

ಅಷ್ಟರಮಟ್ಟಿಗೆ ವಿಪಕ್ಷಗಳ ಮೈತ್ರಿಕೂಟಕ್ಕೆ ಮತ್ತು ಕೇಂದ್ರ ಕಾಂಗ್ರೆಸ್ಗೆ ಮಮತಾ ಅನಿವಾರ್ಯವಾಗಿದ್ದರು. 2024ರ ಲೋಕಸಭೆ ಚುನಾವಣೆಗೆ ಇಂಡಿ ಒಕ್ಕೂಟದ ಸಂಚಾಲಕ ರಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡಬೇಕು ಎಂದು ಹೇಳಿದ್ದ ಮಮತಾ, ಕಾಂಗ್ರೆಸನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಮೈತ್ರಿಕೂಟದ ಸಂಚಾಲಕರನ್ನಾಗಿ ನಿತೀಶ್ ಕುಮಾರ್ ಅವರನ್ನು ನೇಮಿಸಬೇಕು ಎಂಬ ಹಿಂದಿನ ನಿರ್ಧಾರಕ್ಕೆ ತದ್ವಿರುದ್ಧ ನಡೆ ಪ್ರದರ್ಶಿಸಿದ್ದ ಮಮತಾ, ಮೈತ್ರಿಕೂಟದ ಒಗ್ಗಟ್ಟಿನಲ್ಲಿ ಒಡಕು ಮೂಡಿಸಿದ್ದವರು.

ಇದೇ ಕಾರಣಕ್ಕೆ, ಮಮತಾ ಅವರ ಇಂದಿನ ದುಸ್ಥಿತಿಯನ್ನು ಕಂಡು ಕೇವಲ ಬಿಜೆಪಿ ಮಾತ್ರ ವಲ್ಲ, ಬಹುಪಾಲು ವಿಪಕ್ಷಗಳೂ ಇದು ಮಮತಾಗೆ ಆಗಬೇಕಾದ್ದೇ ಎಂದು ಮಾತನಾಡಿ ಕೊಳ್ಳುತ್ತಿವೆ. ನಾವು ನಿಮ್ಮೊಂದಿಗಿದ್ದೇವೆ ಎಂದು ವಿಪಕ್ಷಗಳು ಬಹಿರಂಗ ಬೆಂಬಲ ನೀಡಿದರೂ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ರಾಜಕೀಯ ಜೀವನ ಸಂಧ್ಯಾ ಕಾಲ ತಲುಪಿದೆ.

ಒಂದರ್ಥದಲ್ಲಿ, ಇದು ಬಂಗಾಳದಲ್ಲಿ ಕಾಂಗ್ರೆಸ್‌ಗೆ ವರದಾನವೂ ಹೌದು. ಬಂಗಾಳ ಕಾಂಗ್ರೆಸ್ ಪುನರುಜ್ಜೀವನಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಕಾಂಗ್ರೆಸ್‌ಗೆ ಮತ್ತೊಂದು ಇರದು. 1947ರ ದೇಶ ವಿಭಜನೆ ನಂತರ ಬಂಗಾಳದಲ್ಲಿ ರಾಜಕೀಯ ಪ್ರಾಬಲ್ಯ ಸಾಧಿಸಿದ್ದ ಕಾಂಗ್ರೆಸ್, ಮಾಜಿ ಸಿಎಂ ಬಿ.ಸಿ. ರಾಯ್ ಅವರ ನೇತೃತ್ವದಲ್ಲಿ ಗಣನೀಯ ರಾಜಕೀಯ ಪ್ರಗತಿ ಸಾಧಿಸಿತ್ತು.

1960ರ ದಶಕದಲ್ಲಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಆಹಾರ ಉತ್ಪಾದನೆ ಪ್ರಮಾಣವನ್ನು ಶೇ.50ರಷ್ಟು ಹೆಚ್ಚಿಸಿದ್ದ ಕಾಂಗ್ರೆಸ್ʼಗೆ ನಂತರದಲ್ಲಿ ಬಂಗಾಳಿ ನಿರಾಶ್ರಿತರ ಬಿಕ್ಕಟ್ಟು, ನಕ್ಸಲ್ ಚಳವಳಿಯ ಆರಂಭಗಳು ದೊಡ್ಡ ಸವಾಲಾಗಿ ಕಾಡಲಾರಂಭಿಸಿದ್ದವು. ಅನಿಶ್ಚಿತ ಮೈತ್ರಿ ಕೂಟವೂ 1967-70ರ ದಶಕದಲ್ಲಿ ರಾಜಕೀಯ ಬಿಕ್ಕಟ್ಟಿಗ ಎಡೆಮಾಡಿತ್ತು. ಸೊಮೇನ್ ಮಿತ್ರ, ಪ್ರಿಯರಂಜನ್ ದಾಸ್ ಮುಂಶಿ ಅವರಂತಹ ಅಂದಿನ ಯುವ ನಾಯಕರು ಯುವ ಕಾಂಗ್ರೆಸ್ ಮೂಲಕ ಎಡಪಕ್ಷಗಳ ಪ್ರಾಬಲ್ಯಕ್ಕೆ ಬ್ರೇಕ್ ಹಾಕುವ ಯತ್ನ ಮಾಡಿದರೂ, ತುರ್ತು ಪರಿಸ್ಥಿತಿ ಕಾಂಗ್ರೆಸ್‌ನ ರಾಜಕೀಯ ಬೇರನ್ನೇ ಬುಡಮೇಲು ಮಾಡಿತು. ಇದು 1977ರ ನಂತರರಾಜ್ಯದಲ್ಲಿ ಎಡಪಕ್ಷಗಳ ಅಧಿಪತ್ಯಕ್ಕೆ ಕಾರಣವಾಯಿತು. 1982 ರಲ್ಲಿ 49% ಮತ ಗಳಿಕೆ ಮೂಲಕ ಪುನಶ್ಚೇತನ ಕಂಡರೂ, ಆಂತರಿಕ ಬಿಕ್ಕಟ್ಟು ಮತ್ತು ದುರ್ಬಲ ಮೈತ್ರಿಕೂಟ ಕಾಂಗ್ರೆಸ್‌ನ ಬಲವನ್ನು ಮತ್ತೆ ತಗ್ಗಿಸಿತ್ತು.

ಕಾಂಗ್ರೆಸ್ ನಾಯಕರು ಎಡಪಕ್ಷಗಳ ವಿರುದ್ಧ ಮೃದು ಧೋರಣೆ ತಾಳುತ್ತಿದ್ದಾರೆ ಎಂಬ ಅಸಮಾಧಾನ 1998ರಲ್ಲಿ ರಾಜ್ಯ ಕಾಂಗ್ರೆಸ್‌ನ ಬಹದೊಡ್ಡ ವಿಭಜನೆಗೆ ಕಾರಣವಾಗಿ, ಯುವ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ ಸ್ಥಾಪನೆಗೆ ಮುಂದಾದರು.

ದಿಲ್ಲಿ ನಾಯಕ ಸೀತಾರಾಮ್ ಕೇಸರಿ, ಪ್ರಣಬ್ ಮುಖರ್ಜಿ, ರಾಜ್ಯ ಕಾಂಗ್ರೆಸ್ ನಾಯಕ ಸೊಮೇನ್ ಮಿತ್ರ ಕಾರ್ಯವೈಖರಿಯಿಂದ ಬೇಸತ್ತಿದ್ದ ಮಮತಾ ಬ್ಯಾನರ್ಜಿ, ಪಕ್ಷದ ವಿರುದ್ಧ ಬಂಡೆದ್ದು ಸ್ವಂತ ಪಕ್ಷ ಕಟ್ಟಿದರು. ಮಮತಾ ಕಾಂಗ್ರೆಸ್ ತೊರೆದ ಪರಿಣಾಮ ಎಷ್ಟಿತ್ತೆಂದರೆ, 1996ರ ವಿಧಾನಸಭೆ ಚುನಾವಣೆಯಲ್ಲಿ 82 ಸೀಟು ಗೆದ್ದಿದ್ದ ಕಾಂಗ್ರೆಸ್ 20001ರಲ್ಲಿ ಕೇವಲ 26ಕ್ಕೆ ಸೀಮಿತಗೊಂಡಿತ್ತು. ತನ್ನ 29ನೇ ವಯಸ್ಸಿನ ಹಿರಿಯ ರಾಜಕಾರಣಿ ಸೋಮನಾಥ್ ಚಟರ್ಜಿಯವರನ್ನು ಸೋಲಿಸಿದ್ದ ಮಮತಾ, ಎಡಪಕ್ಷಗಳ ವಿರುದ್ಧ ಹೋರಾಡುತ್ತಲೇ ತಮ್ಮ ರಾಜಕೀಯ ನೆಲೆ ಬಿಗಿಗೊಳಿಸಿದ್ದವರು. ಆದರೆ, ಎಡಪಕ್ಷಗಳ ರಾಜಕೀಯ ಹಿಂಸಾ ಚಾರ ಕಂಡೂ ಕಾಣದಂತೆ ಕುಳಿತಿದ್ದ ಕಾಂಗ್ರೆಸ್ನಾ ಯಕತ್ವವನ್ನು ನಂಬಿ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದೇ ಅವರು ಪಕ್ಷದಿಂದ ಪ್ರತ್ಯೇಕಗೊಂಡರು. ನಂತರದ ವರ್ಷಗಳಲ್ಲಿ, ಕಾಂಗ್ರೆಸ್ ಪಕ್ಷ ಟಿಎಂಸಿ ಜತೆ ಮೈತ್ರಿ ಸಾಧಿಸಿತು ಮತ್ತು 2011ರ ಚುನಾವಣೆ ಯನ್ನು ಗೆದ್ದಾಗ ಕಾಂಗ್ರೆಸ್ ಟಿಎಂಸಿಯ ಮಿತ್ರಪಕ್ಷವಾಗಿತ್ತು ಕೂಡ. ಆದರೆ, ಈ ಮೈತ್ರಿ ಹೆಚ್ಚು ದಿನ ಬಾಳಲಿಲ್ಲ.

2016ರ ಚುನಾವಣೆಗೆ ಕಾಂಗ್ರೆಸ್ಸಿಗರು ಎಡಪಕ್ಷದೊಂದಿಗೆ ಮಿತ್ರತ್ವ ಸಾಧಿಸಿದ್ದರು. 2011ರಲ್ಲಿ ಕಾಂಗ್ರೆಸ್ 42 ಸೀಟು ಗೆದ್ದಿದ್ದರೆ 2016ರಲ್ಲಿ 44 ಸೀಟು ಗೆದ್ದಿತ್ತು. ಆದರೆ, 2021ರ ನಂತರ ಕಾಂಗ್ರೆಸ್‌ನದ್ದು ಹೆಚ್ಚು-ಕಡಿಮೆ ಶೂನ್ಯ ಸಾಧನೆ. ಈಗಲೂ ಅದೇ ಮುಂದುವರಿದಿದೆ. ಟಿಎಂಸಿ ಎಂದಿಗೂ ಕೇರ್ಡರ್ ಆಧಾರಿತ ಪಕ್ಷವಾಗಿರಲಿಲ್ಲ.

ಬಿಜೆಪಿ ಅಥವಾ ಎಡಪಕ್ಷಗಳಂತೆ ಸಂಘಟನಾತ್ಮಕವಾಗಿ ಈ ಪಕ್ಷ ರೂಪುಗೊಂಡದ್ದಲ್ಲ. ಇಂದಿನ ಟಿಎಂಸಿ ವಿಭಜನೆಗೆ ಮುಖ್ಯ ಕಾರಣ ಕೂಡ ಅದೇ ಆಗಿದೆ. ಕಮ್ಯುನಿಸ್ಟರ ಹೋರಾಟ ಅಥವಾ ಆರ್‌ಎಸ್‌ಎಸ್‌ನ ಹಿಂದುತ್ವ ಮಾದರಿಯ ರಾಜಕೀಯ ಸಾಮರ್ಥ್ಯದ ದೃಢ ಸೈದ್ಧಾಂತಿಕ ಜಾಲ ಟಿಎಂಸಿಯಲ್ಲಿ ಸೃಷ್ಟಿಯಾಗಲೇ ಇಲ್ಲ.

ಮಮತಾ ಬ್ಯಾನರ್ಜಿಯವರ ವೈಯಕ್ತಿಕ ವರ್ಚಸ್ಸಿನ ಆಕರ್ಷಣೆ ಮತ್ತು ಅವರ ಆಡಳಿತವು ಪಕ್ಷದ ಬೆನ್ನೆಲುಬಾಗಿತ್ತು. ಮಮತಾ ಬ್ರ್ಯಾಂಡ್ ಮೌಲ್ಯ ಮತ್ತು ಸರಕಾರಿ ಸಂಪನ್ಮೂಲಗಳೇ ಪಕ್ಷದ ಆಸ್ತಿಯಾಗಿತ್ತು. ಟಿಎಂಸಿ ನಾಯಕರು ತಮ್ಮ ಬೆಂಬಲಿಗರ ಮೂಲಕ ಹಿಂಸಾಚಾರ ಪ್ರೇರೇಪಿಸಿದರೆ ವಿನಃ ಸಂಘಟನೆ ಕಟ್ಟುವ ಕಾಯಕ್ಕೆ ಮುಂದಾಗಲಿಲ್ಲ.

ಇಂದು ಮಮತಾ ಪ್ರಭಾವಲಯ ದುರ್ಬಲಗೊಂಡಿರುವುದು ಈ ಕಾರಣದಿಂದಲೇ. ಮಮತಾ ಕಟ್ಟಿದ ಟಿಎಂಸಿಯ ಅವನತಿ ಬಹುಶಃ ರಾಜ್ಯದಲ್ಲಿ ಎಡಪಕ್ಷಗಳ ಪುನರುತ್ಥಾನಕ್ಕೆ ಅಥವಾ ಕಾಂಗ್ರೆಸ್ ರಾಜಕೀಯ ಪುನಶ್ಚೇತನಕ್ಕೆ ಪೂರಕ ವಾತಾವರಣ ರೂಪಿಸಬಹುದು.

ಬಂಗಾಳದ ಪ್ರತಿ ಗ್ರಾಮಗಳಲ್ಲಿ ಈಗಲೂ ಹಳೆ ತಲೆಮಾರಿನ 7-8 ಮಂದಿ ಪ್ರಭಾವಿ ಕಮ್ಯುನಿ ನಾಯಕರಿದ್ದಾರೆ. ಮಮತಾ ಪ್ರಾಬಲ್ಯದಿಂದಾಗಿ ಅವರೆ ಮೌನಕ್ಕೆ ಶರಣಾಗಿದ್ದರು. ಆದರೆ, ರಾಜ್ಯ ರಾಜಕೀಯವೀಗ ಬದಲಾವಣೆಗೆ ತೆರೆದು ನಿಂತಿದ್ದು, ಎಡಪಕ್ಷಗಳು ಈಗಾಗಲೇ ಕಾಲೇಜುಗಳಲ್ಲಿ ಸಂಘಟನೆ ಬಲಗೊಳಿಸುವ ತಂತ್ರ ಹೆಣೆಯಲಾರಂಭಿಸಿದ್ದಾರೆ.

ಭಾರೀ ಪ್ರಮಾಣದಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಂ ಮತಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಹಂಚಿಕೆಯಾಗಬಹುದು. ಎಡಪಕ್ಷಗಳಿಗೆ ಕರಾಳ ರಾಜಕೀಯ ಹಿಂಸಾಚಾರದ ಭೀಕರ ಇತಿಹಾಸ ಹೊಂದಿರುವುದರಿಂದ ಅವರನ್ನು ಜನರು ಮತ್ತೆ ಸ್ವೀಕರಿಸುತ್ತಾರಾ ಎಂಬ ಬಗ್ಗೆ ಅನುಮಾನಗಳಿವೆ. ಹೀಗಾಗಿ, ಮಮತಾ ಬ್ಯಾನರ್ಜಿ ರಾಜಕೀಯ ಪತನ ಕಾಂಗ್ರೆಸ್‌ಗೆ ವರದಾನ. ಇದನ್ನು ರಾಹುಲ್ ಗಾಂಧಿ ಮತ್ತವರ ವಂದಿ ಮಾಗಧರು ಅರ್ಥ ಮಾಡಿಕೊಳ್ಳಬೇಕಷ್ಟೇ.