ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ravi Sajangadde Column: ಬ್ಯಾಲೆಟ್‌- ಇವಿಎಂ ಜಗಳದಲ್ಲಿ ನಾಡು ಬಡವಾಗದಿರಲಿ

ದೇಶಾದ್ಯಂತ ಚರ್ಚೆಯಲ್ಲಿರುವ, ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಮತಚೌರ್ಯ/ಮತಗಳವು, ಅಕ್ರಮ ಮತದಾರರ ಪಟ್ಟಿಯ ಆಂದೋಲನ, ದೇಶಾದ್ಯಂತ ಪರ-ವಿರೋಧ ಚರ್ಚೆಯಲ್ಲಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಫ್‌ಐಆರ್) ಮುಂತಾದವುಗಳ ನಡುವೆ ರಾಜಕೀಯ ತಂತ್ರ ಗಾರಿಕೆಯ ಮುಂದುವರಿದ ಭಾಗವಾಗಿ ಸದ್ಯೋಭವಿಷ್ಯದ ಜಿಬಿಎ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಸರಕಾರವು ಬ್ಯಾಲೆಟ್‌ಗೆ ಮಣೆ ಹಾಕಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಬ್ಯಾಲೆಟ್‌- ಇವಿಎಂ ಜಗಳದಲ್ಲಿ ನಾಡು ಬಡವಾಗದಿರಲಿ

-

Ashok Nayak
Ashok Nayak Jan 22, 2026 7:37 AM

ಮೇಲಾಟ

ರವೀ ಸಜಂಗದ್ದೆ

ಅಚ್ಚರಿಯೆಂದರೆ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳ ಬದಲಾಗಿ ‘ಅಂದಕಾಲತ್ತಿಲ’ ಉಪಯೋಗಿಸುತ್ತಿದ್ದ ಮತಪತ್ರಗಳನ್ನು ಬಳಸಲು ರಾಜ್ಯ ಸರಕಾರ ಶಿಫಾರಸು ಮಾಡಿ, ಆ ಕುರಿತು ಕಾನೂನಾತ್ಮಕ ಬದಲಾವಣೆ-ಒಪ್ಪಿಗೆ ಪಡೆದು, ರಾಜ್ಯ ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಿದೆ. ಈ ಬಾರಿ ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ ಉಲ್ಟಾ ಆದರೆ ಅದು ಏನು ಮಾಡಲಿದೆ? ಕಾಂಗ್ರೆಸ್ ನಿಲುವನ್ನು ಸರಿಯಾಗಿ ವಿರೋಧಿಸಲು ಬಿಜೆಪಿಯೂ ಸೋತಿದೆ.

ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಯದೆ, ಮೇಯರ್ ಇಲ್ಲದೆ ಅದಾಗಲೇ ಒಂಭತ್ತು ವರ್ಷಗಳು! ಅನ್ಯಾನ್ಯ ಕಾರಣಗಳಿಂದ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆ ಗಳೂ ಹಲವು ಬಾರಿ ಮುಂದೂಡಿಕೆಯಾಗಿವೆ. ನ್ಯಾಯಾಲಯವು ಈ ಕುರಿತು ವಿವರಣೆ ಕೇಳಿ, ರಾಜ್ಯ ಸರಕಾರವನ್ನು ಗದರಿದರೂ, ಹಲವಾರು ಕಾರಣಗಳನ್ನು ಮುಂದಿಟ್ಟು ಈ ಚುನಾವಣೆಗಳಿಗೆ ಮುಹೂರ್ತ ನಿಗದಿಯಾಗಲಿಲ್ಲ.

ಮೀಸಲಾತಿ ಗೊಂದಲ ಮತ್ತು ಕ್ಷೇತ್ರ ಮರುವಿಂಗಡಣೆ ಎಲ್ಲವೂ ಮುಗಿದು, ಕೋರ್ಟ್ ಛೀಮಾರಿ-ಮುಜುಗರಗಳ ನಂತರ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿ ಚಟುವಟಿಕೆಗಳು ಗರಿಗೆದರಿ ಈ ವರ್ಷದ ಮೇ ತಿಂಗಳಿನಲ್ಲಿ ಚುನಾವಣೆಗಳು ನಡೆಯಲಿವೆ.

ಅಚ್ಚರಿಯೆಂದರೆ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳ ಬದಲಾಗಿ ‘ಅಂದಕಾಲತ್ತಿಲ’ ಉಪಯೋಗಿಸುತ್ತಿದ್ದ ಮತಪತ್ರಗಳನ್ನು ಬಳಸಲು ರಾಜ್ಯಸರಕಾರ ಶಿಫಾರಸು ಮಾಡಿ, ಆ ಕುರಿತು ಕಾನೂನಾತ್ಮಕ ಬದಲಾವಣೆ-ಒಪ್ಪಿಗೆ ಪಡೆದು, ರಾಜ್ಯ ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಿದೆ.

ದೇಶಾದ್ಯಂತ ಚರ್ಚೆಯಲ್ಲಿರುವ, ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಮತಚೌರ್ಯ/ಮತಗಳವು, ಅಕ್ರಮ ಮತದಾರರ ಪಟ್ಟಿಯ ಆಂದೋಲನ, ದೇಶಾದ್ಯಂತ ಪರ-ವಿರೋಧ ಚರ್ಚೆಯಲ್ಲಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಫ್‌ಐಆರ್) ಮುಂತಾದವುಗಳ ನಡುವೆ ರಾಜಕೀಯ ತಂತ್ರಗಾರಿಕೆಯ ಮುಂದುವರಿದ ಭಾಗವಾಗಿ ಸದ್ಯೋಭವಿಷ್ಯದ ಜಿಬಿಎ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಸರಕಾರವು ಬ್ಯಾಲೆಟ್‌ಗೆ ಮಣೆ ಹಾಕಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಇದನ್ನೂ ಓದಿ: Ravi Sajangadde Column: ದಬ್ಬಾಳಿಕೆಯ ಬೆಂಕಿಯಲ್ಲಿ ಮುದುಡುತ್ತಿರುವ ಗಡಿನಾಡು !

ಈ ‘ಬ್ಯಾಲೆಟ್ vs ಇವಿಎಂ’ ವಿಚಾರದ ಕುರಿತಾದ ರಾಜಕೀಯ ತಂತ್ರಗಾರಿಕೆಯ ವಿಶ್ಲೇಷಣೆಯಿದು. ರಾಜ್ಯ ಸರಕಾರದ ಅಧೀನದಲ್ಲಿ ಬರುವ ಸ್ಥಳೀಯ ಸಂಸ್ಥೆಗಳು, ನಗರ ಸಭೆಗಳು ಮತ್ತು ಮಹಾನಗರ ಪಾಲಿಕೆಗಳ ಚುನಾವಣೆಗಳನ್ನು ನಡೆಸುವ ಕರ್ತವ್ಯ ಮತ್ತು ಜವಾಬ್ದಾರಿ ಆಯಾ ರಾಜ್ಯಸರಕಾರ‌ ಗಳದ್ದು. ‘ರಾಜ್ಯದ ಚುನಾವಣಾ ಆಯೋಗವು ರಾಜ್ಯ ಸರಕಾರದ ನಿರ್ಧಾರ ಮತ್ತು ನಿರ್ದೇಶನಗಳ ಅನುಸಾರ ಕ್ಲುಪ್ತ ಸಮಯಕ್ಕೆ, ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆ ನಡೆಸಬೇಕು’ ಎನ್ನುವುದು ಕೇಂದ್ರ ಚುನಾವಣಾ ಆಯೋಗದ ನಿಯಮಗಳಂದು.

ಅದೇ ನಿಯಮದ ಆಧಾರದಲ್ಲಿ, ರಾಜ್ಯ ಸರಕಾರವು ಸದ್ಯ ಚಾಲ್ತಿಯಲ್ಲಿರುವ ಇವಿಎಂ ಬದಲಾಗಿ ಮತಪತ್ರ ವಿಧಾನದ ಮೂಲಕ ಈ ಚುನಾವಣೆಗಳನ್ನು ನಡೆಸಲು ಕಾರ್ಯಪ್ರವೃತ್ತವಾಗಿದೆ. ಇತ್ತೀಚಿನ ಸಂಪುಟ ಸಭೆಯು ಸರ್ವಾನುಮತದಿಂದ ‘ಸ್ಥಳೀಯ ಸಂಸ್ಥೆಗಳ ಚುನಾವಣೆ ಮತಪತ್ರಗಳ ಮೂಲಕ ನಡೆಸಲು’ ತೀರ್ಮಾನಿಸಿದೆ. ರಾಜ್ಯ ಚುನಾವಣಾ ಆಯೋಗವೂ ಮತಪತ್ರ ಬಳಸಿ ಚುನಾವಣೆ ನಡೆಸಲು ನಿರ್ಧರಿಸಿದೆ.

‘ಇವಿಎಂ ಹ್ಯಾಕ್ ಮಾಡುವ ಚಾಳಿಯನ್ನು ಬಿಜೆಪಿ ಹೊಂದಿದೆ’ ಮತ್ತು ತಾನು ಇತ್ತೀಚಿನ ದಶಕದಲ್ಲಿ ಸೋತಿರುವ ಎಲ್ಲಾ ಚುನಾವಣೆಗಳಲ್ಲಿ ಮತಗಳವು ಆಗಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ವಾದ ಮತ್ತು ಆರೋಪ. ಈ ವಿಚಾರಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಕಾರ್ಯತಂತ್ರದ ಭಾಗವಾಗಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವ ಕಾರ್ಯತಂತ್ರ ರೂಪಿಸಿ ಜಾರಿಗೊಳಿಸಿದೆ.

ಕರ್ನಾಟಕದಲ್ಲಿ ಈವರೆಗಿನ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮತಪತ್ರ ಉಪಯೋಗಿಸಿ ನಡೆಸಲಾಗಿದೆ. ಹಾಗಾಗಿ ಅದೇನೂ ಹೊಸದಲ್ಲ ಮತ್ತದು ಮುಂದುವರೆಯಲಿದೆ. ಜಿಬಿಎ ಸೇರಿದಂತೆ ಪಾಲಿಕೆ ಚುನಾವಣೆಗಳಲ್ಲಿ, ಜಿಲ್ಲೆ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಕಳೆದೆರಡು ದಶಕಗಳಿಂದ ಇವಿಎಂ ಬಳಕೆಯಾಗುತ್ತಿತ್ತು. ಇನ್ಮುಂದೆ ಕರ್ನಾಟಕದಲ್ಲಿ ಆ ಚುನಾವಣೆಗಳೂ ಮತಪತ್ರಗಳ ಮೂಲಕ ನಡೆಯಲಿವೆ.

ಬಿಜೆಪಿಯ ವಿರೋಧಿ ಪಕ್ಷಗಳು ಸೋತಾಗಲೆಲ್ಲ (ಸೋತಾಗ ಮಾತ್ರ!) ಇವಿಎಂಗಳ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರಕಾರ ಈ ಮಹತ್ವದ (?) ತೀರ್ಮಾನವನ್ನು ತೆಗೆದುಕೊಂಡಂತೆ ಕಾಣುತ್ತಿದೆ. ಮುಂಬರುವ ‘ಮತ ಪತ್ರದ ಚುನಾವಣೆ’ಯಲ್ಲೂ ಒಂದು ವೇಳೆ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಕಾಂಗ್ರೆಸ್ ನಿಲುವು ಏನಾಗಲಿದೆ ಎನ್ನುವುದೂ ಕುತೂಹಲಕಾರಿ ವಿಚಾರ.

ಯಾಕೆಂದರೆ ಇವಿಎಂಗಳನ್ನು ಹ್ಯಾಕ್ ಮಾಡಲು ಯಾರಿಂದಲೂ ಈವರೆಗೆ ಸಾಧ್ಯವಾಗಿಲ್ಲ ಮತ್ತು ಚುನಾವಣಾ ಆಯೋಗ ಇವಿಎಂ ಹ್ಯಾಕ್ ಮಾಡಲು ಹಾಕಿದ ಮುಕ್ತ ಸವಾಲನ್ನು ಸ್ವೀಕರಿಸಿ ಯಾರೂ ಈವರೆಗೆ ಯಶಸ್ವಿಯಾಗಲಿಲ್ಲ. ಇವಿಎಂಗಳ ಕುರಿತ ಈವರೆಗಿನ ಆರೋಪಗಳು ಮತ್ತು ಬೊಬ್ಬೆಗಳು ಸಂಪೂರ್ಣ ರಾಜಕೀಯ ಪ್ರೇರಿತ ಅನ್ನುವುದು ಸ್ವತಃ ಆರೋಪ ಮಾಡುವವರಿಗೂ ಗೊತ್ತಿದೆ!

ಏನು ಮಾಡುವುದು? ರಾಜಕೀಯದಲ್ಲಿ, ಅಧಿಕಾರದಲ್ಲಿರುವ ಮತ್ತು ತಮ್ಮ ರಾಜಕೀಯ ವಿರೋಧಿ ಪಕ್ಷ ಮತ್ತದರ ನಿಲುವುಗಳನ್ನು ವಿರೋಧಿಸುವುದೇ ವಿರೋಧ ಪಕ್ಷಗಳ ಕೆಲಸ ಅನ್ನುವಷ್ಟು ನಿಕೃಷ್ಟ ಹಂತಕ್ಕೆ ಪಕ್ಷಾತೀತವಾಗಿ ಭಾರತದಲ್ಲಿ ರಾಜಕಾರಣ ಬಂದು ನಿಂತಿದೆ.

ಬ್ಯಾಲೆಟ್‌ಗೆ ಮಣೆ ಹಾಕಿದ ವಿಚಾರವನ್ನು ಬಿಜೆಪಿ-ಜೆಡಿಎಸ್ ನಿರೀಕ್ಷೆಯಂತೆ ವಿರೋಧಿಸಿವೆ. ಅವರು ನೀಡಿರುವ ಕಾರಣಗಳನ್ನು ಅವಲೋಕಿಸಿದರೆ ಕೆಲವು ಕಾರಣಗಳು ಸಮಂಜಸ ಎನಿಸಿದರೂ ಇನ್ನೂ ಕೆಲವು ಕಾರಣ-ಹೇಳಿಕೆಗಳು ಇತರ ಪಕ್ಷಗಳು ವಿವಿಧ ಸಂದರ್ಭಗಳಲ್ಲಿ ಬಿಜೆಪಿಯನ್ನು ‘ವಿರೋಧಿಸುವ ಸಲುವಾಗಿ’ ಹೇಳುವ ಹೇಳಿಕೆಗಳಂತೆ ರಾಜಕೀಯ ಪ್ರೇರಿತ ಎಂದು ಅನಿಸದಿರದು!

‘ಇಡೀ ಜಗತ್ತು ತಂತ್ರಜ್ಞಾನವನ್ನು ಆಧರಿಸಿ ವೇಗವಾಗಿ ಮತ್ತು ಆಧುನಿಕತೆಯ ಕಡೆಗೆ ಮುಖ ಮಾಡು ತ್ತಿದ್ದರೆ, ಕಾಂಗ್ರೆಸ್ ಮತಪತ್ರದ ಚುನಾವಣೆಗೆ ಒಲವು ತೋರುವ ಮೂಲಕ ಹೆಬ್ಬೆಟ್ಟಿನ ದಿನಗಳೆಡೆಗೆ ಸಾಗುತ್ತಿದೆ’ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷರ ಮಾತು ಒಪ್ಪತಕ್ಕದ್ದು. ಇದರ ಜೊತೆಗೆ ಮತಪತ್ರಗಳ ಮೂಲಕ ಚುನಾವಣೆಗಳು ನಡೆಯುತ್ತಿದ್ದ ಕಾಲದಲ್ಲಿ ಹೆಚ್ಚಿನ ಅಕ್ರಮಗಳು, booth capturing, ಕಳ್ಳ ಮತದಾನ, ಅಡ್ಡ ಮತದಾನ ಮುಂತಾದ ಅಪಸವ್ಯಗಳು ಪ್ರತಿಯೊಂದು ಚುನಾವಣೆಯಲ್ಲೂ ನಡೆಯುತ್ತಿರುವಾಗ ಕೇಂದ್ರ ಮತ್ತು ರಾಜ್ಯದಲ್ಲಿ ಬಹುತೇಕ ಸಂದರ್ಭಗಳಲ್ಲಿ ಅಧಿಕಾರದಲ್ಲಿ ಇದ್ದದ್ದು ಆಗಿನ ದೊಡ್ಡ ರಾಜಕೀಯ ಪಕ್ಷ ಕಾಂಗ್ರೆಸ್ ಎನ್ನುವುದೂ ಸತ್ಯ!

ಹಾಗಾಗಿ ಬ್ಯಾಲೆಟ್ ವ್ಯವಸ್ಥೆಯೂ ಪಾರದರ್ಶಕವಾಗಿ ಇರಲಿಲ್ಲ ಎನ್ನುವ ಬಿಜೆಪಿಯ ವಾದದಲ್ಲೂ ಹುರುಳಿದೆ. ರಾಜ್ಯ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಜಾಣ ನಡೆ ಅನುಸರಿಸಿ ಈ ಮತಪತ್ರದ ಚುನಾವಣೆಯನ್ನು ಹಾರ್ದಿಕವಾಗಿ, ತುಂಬು ಹೃದಯದಿಂದ ಸ್ವಾಗತಿಸಬೇಕಿತ್ತು!

ಹಾಗಾಗಲಿಲ್ಲ ಎನ್ನುವುದು ಬೇರೆ ಮಾತು. ಯಾಕೆ ಸ್ವಾಗತಿಸಬೇಕಿತ್ತು ಎಂದರೆ ಚುನಾವಣೆ ನಡೆಯುವ ವಿಧಾನ ಯಾವುದೇ ಇರಲಿ, ಕೇಂದ್ರ ಸರಕಾರದ ಸದ್ಯದ ಹಲವಾರು ಜನಪರ ನೀತಿ-ನಿರ್ಣಯಗಳು ಮತ್ತು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ವೆಚ್ಚದಿಂದ ಉಳಿದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡು ಅಭಿವೃದ್ಧಿ ನಿಂತ ನೀರಿನಂತಾಗಿದೆ.

ಇದೆಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಮುಖ ಪ್ರಚಾರದ ವಸ್ತುವಾಗಿಸಿ, ಹೆಚ್ಚಿನ ಮತ ಗಳನ್ನು ಬಾಚುವ ಎಲ್ಲಾ ಅವಕಾಶಗಳು ಎನ್‌ಡಿಎ ಮೈತ್ರಿಕೂಟಕ್ಕೆ ಇರುವುದು ಸತ್ಯ. ಅದನ್ನು encash ಮಾಡಿಕೊಂಡು, ಮತಪತ್ರದ ಚುನಾವಣೆಯಲ್ಲೂ ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷಕ್ಕೆ ‘ಡಬ್ಬಲ್ ಟಕ್ಕರ್’ ನೀಡುವ ಸುವರ್ಣ ಅವಕಾಶ ಈಗಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಇದೆ. ಆ ದೆಸೆಯಲ್ಲಿ ಕಾರ್ಯಪ್ರವೃತ್ತವಾಗಿ, ಕಾರ್ಯತಂತ್ರ ಹೆಣೆಯುವ ಬದಲು, ಸುಖಾಸುಮ್ಮನೆ ಮಾಧ್ಯಮ ದಲ್ಲಿ ಬೊಬ್ಬೆ ಹಾಕಿ, ಈ ಪಕ್ಷಗಳ ಧುರೀಣರು ಕಾಲಹರಣ ಮಾಡುತ್ತಿದ್ದಾರೆ.

ದಿನಗಳೆದಂತೆ ಕಾಂಗ್ರೆಸ್ ಈ ಚುನಾವಣೆಯನ್ನು ಗೆಲ್ಲಲು ರಣತಂತ್ರ ರೂಪಿಸುವಲ್ಲಿ ನಿರತವಾಗಿದೆ. ಡಿಕೆಶಿ ಅವರಿಗೆ ಮುಖ್ಯಮಂತ್ರಿ ಪಟ್ಟ ದಕ್ಕಲು ಈ ಚುನಾವಣಾ ಗೆಲುವು ಖಂಡಿತಾ ಹೆಬ್ಬಾಗಿಲು! ಹಾಗಾಗಿ ಅವರು ತನ್ನೆಲ್ಲ ಶಕ್ತಿ-ಸಾಮರ್ಥ್ಯವನ್ನು ಈ ಚುನಾವಣಾ ಅಖಾಡದಲ್ಲಿ ಒರೆಗೆ ಹಚ್ಚುವುದು ನಿಸ್ಸಂಶಯ.

ಈಗಿರುವ ಪೂರಕ ಪರಿಸ್ಥಿತಿಯನ್ನು ತನ್ನೆಡೆಗೆ ವಾಲಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ಪಡೆ ಇನ್ನೂ ಮೀನ-ಮೇಷ ಎಣಿಸುತ್ತಿರುವುದು ಕಾಂಗ್ರೆಸ್ ಮತ್ತು ಡಿಕೆಶಿಗೆ ವರದಾನವೇ ಸರಿ. ಕಾಂಗ್ರೆಸ್ ಪಕ್ಷವನ್ನು ಮತಯಂತ್ರದ ಚುನಾವಣೆಯಲ್ಲೂ ಸೋಲಿಸಿ ರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿ ಕೊಳ್ಳುವ ಸುವರ್ಣಾವಕಾಶವನ್ನು ಕರ್ನಾಟಕದ ಬಿಜೆಪಿ-ಜೆಡಿಎಸ್ ಮೈತ್ರಿ ಪಡೆ ಹೇಗೆ ಬಳಸಿಕೊಳ್ಳ ಲಿದೆ ಎನ್ನುವುದು ಸದ್ಯದ ಕೌತುಕ.

‘ಮತಪತ್ರದ ಚುನಾವಣೆಯ ಮೇಲೆ ಮಾತ್ರ ನಂಬಿಕೆ ಇಟ್ಟಿರುವ ರಾಜ್ಯ ಸರಕಾರ, ಇವಿಎಂ ಮತ ಯಂತ್ರ ಬಳಸಿ ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಆರಿಸಿ ಬಂದಿರುವ 140 ಕಾಂಗ್ರೆಸ್ ಶಾಸಕ ರಿಂದ ಮತ್ತು 9 ಕಾಂಗ್ರೆಸ್ ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಲಿ, ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ, ಇಲ್ಲದಿದ್ದರೆ ಮತಗಳ್ಳತನದಿಂದ ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಒಪ್ಪಿಕೊಳ್ಳಲಿ’ ಎಂದು ಬಿಜೆಪಿಯು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದೆ. ಇದೆಲ್ಲ ಆಗಿ ಹೋಗುವ ವಿಷಯ ಅಲ್ಲ ಎನ್ನುವುದು ಜನರಿಗೂ ಗೊತ್ತಿದೆ!

‘ಮತಪತ್ರಗಳ ಬಳಕೆ ನಿಷೇಧಿಸಲಾಗಿಲ್ಲ. ಅಮೆರಿಕದಂತಹ ಮುಂದುವರಿದ ದೇಶಗಳ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿದೆ. ಕಾನೂನಿನಲ್ಲಿ ಬ್ಯಾಲೆಟ್ ಪೇಪರ್ ಅಥವಾ ಇವಿಎಂ ಬಳಸಿಕೊಂಡು ಚುನಾವಣೆಗಳನ್ನು ನಡೆಸಲು ಅವಕಾಶವಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ. ಅವರ ಪ್ರಕಾರ ಇವಿಎಂ ಬಳಸಿ ಮಾಡುವ ಚುನಾವಣೆಯ ವೆಚ್ಚ ಮತ್ತು ಮತಪತ್ರಗಳ ಬಳಕೆಯ ಚುನಾವಣಾ ವೆಚ್ಚದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.

ಹಾಗಾಗಿ ಇದರಿಂದ ಆರ್ಥಿಕ ಹೊರೆ ಆಗದು. ಆದರೆ ಇದಕ್ಕಾಗಿ ಪೇಪರ್ ಬಳಕೆ ಜಾಸ್ತಿ ಆಗುವುದ ರಿಂದ, ಮರಗಳನ್ನು ಕಡಿದು ಪರಿಸರದ ಮೇಲೆ ಆಗುವ ಹಾನಿಯ ಕುರಿತ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ! ಇವಿಎಂ ವ್ಯವಸ್ಥೆಗೆ ಹೋಲಿಸಿದರೆ ಮತಪತ್ರದ ಬಳಕೆಯಿಂದ ಚುನಾವಣಾ ಪ್ರಕ್ರಿಯೆ ಮತ್ತು ಮತಗಣತಿಯ ಪ್ರಕ್ರಿಯೆ ಒಂದಷ್ಟು ನಿಧಾನವಾಗಿ, ಫಲಿತಾಂಶ ಪ್ರಕಟಣೆ ತಡವಾಗಲಿದೆ. ರಾಜ್ಯದಲ್ಲಿ ಸರಕಾರದ ಬಹುತೇಕ ಯೋಜನೆಗಳು ಪೂರ್ಣಗೊಳ್ಳಲು ವರ್ಷಗಳಷ್ಟು ತಡವಾಗುವ ವ್ಯವಸ್ಥೆಗೆ ಒಗ್ಗಿಕೊಂಡಿರುವ ನಮಗೆ ಇದೆಲ್ಲ ಹೊಸದಲ್ಲವಲ್ಲ!

ರಾಜ್ಯದಲ್ಲಿ ಜನರು ಅನುಭವಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳು, ಡ್ರಗ್ಸ್ ಮಾಫಿಯಾ ಮುಂತಾದ ವಿಚಾರಗಳ ಪರಿಹಾರಕ್ಕಾಗಿ ಹಕ್ಕೊತ್ತಾಯ ಮಾಡಿ, ಪ್ರತಿಭಟನೆ ನಡೆಸಿ, ರಾಜ್ಯ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸುವ ಬದಲು, ಕ್ಷುಲ್ಲಕ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿಕೂಟಕ್ಕೆ ಹೆಚ್ಚಿನ ಅನುಕೂಲವನ್ನೇ ಮಾಡಬಹುದಾದ ಮತಪತ್ರದ ಚುನಾವಣೆಯನ್ನು ‘ಪ್ರತಿಪಕ್ಷಗಳಾಗಿ ರಾಜ್ಯ ಸರಕಾರವನ್ನು ವಿರೋಧಿಸಲೇಬೇಕು’ ಎನ್ನುವ ಹಟಕ್ಕೆ ಬಿಜೆಪಿ-ಜೆಡಿಎಸ್ ಬಿದ್ದಂತಿದೆ.

ನಾಯಕತ್ವದ ಕೊರತೆ, ದೂರದೃಷ್ಟಿಯ ಮಂದತೆ ಮತ್ತು ಮಾಹಿತಿ-ಮಾರ್ಗದರ್ಶನದ ಬರವನ್ನು ರಾಜ್ಯ ಬಿಜೆಪಿ-ಜೆಡಿಎಸ್ ಎದುರಿಸುತ್ತಿವೆ. ಅಧಿಕಾರದಲ್ಲಿ ಇದ್ದಾಗ ಜನರಿಗೆ ಸಹಕಾರಿಯಾಗದ, ವಿರೋಧ ಪಕ್ಷದಲ್ಲಿ ಇದ್ದಾಗ ಜನಪರ ಧ್ವನಿ ಎತ್ತದೇ ತಂತಮ್ಮ ಅನುಕೂಲಕ್ಕೆ ಕೆಲಸ ಮಾಡುವ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳನ್ನು ಪಡೆದ ನಾವೇ ಧನ್ಯರು. ಅಲ್ಲಿಗೆ ಮತ್ತೊಮ್ಮೆ ಉದಯ ವಾಯಿತು ನಮ್ಮ ಚೆಲುವ ಕನ್ನಡ ನಾಡು!‘

ಬ್ಯಾಲೆಟ್ ಆದರೂ, ಇವಿಎಂ ಆದರೂ, ಈಗಿನ ಅವ್ಯವಸ್ಥೆಗಳಿಂದ ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ?’ ಎಂದು ಜನರು ಕೇಳುತ್ತಿzರೆ. ರಾಜಕಾರಣಿಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳು ತ್ತಿಲ್ಲ. ‘ಮಲಗಿರುವವರನ್ನು ಎಬ್ಬಿಸಬಹುದು, ಮಲಗಿದಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವೇ?’ - ಸಾಧ್ಯವಿಲ್ಲ! ಛೇ.