ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ ಮೆಕ್ಸಿಕನ್‌ ಅಲೆ

ಕಣ್ಣು-ಕಿವಿಗಳಂತೆ ಮೂಗಿಗೂ ಅಲೆಗಳು ಬಂದು ಅಪ್ಪಳಿಸಬಹುದು “ಸೇವಂತಿಯೆ ಸೇವಂತಿಯೇ ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ..." ಪರಿಮಳದ ರೀತಿಯಲ್ಲಿ. ಅಷ್ಟೇಕೆ, ಅಗೋಚರವೂ ಅತೀಂದ್ರಿ ಯವೂ ಆಗಬಲ್ಲವು ಕಷ್ಟಕಾರ್ಪಣ್ಯದ ನೋವಿನ ಅಲೆಗಳು, ಅಥವಾ ಮಧುರವಾಗಿ ಮರುಕಳಿಸುವ ನೆನಪಿನ ಅಲೆಗಳು.

ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ ಮೆಕ್ಸಿಕನ್‌ ಅಲೆ

-

ತಿಳಿರುತೋರಣ

ಅಲೆಗಳು ಮನುಷ್ಯನ ಭಾವಕೋಶಗಳನ್ನು ಹಿತವಾಗಿ ಮೀಟುತ್ತವೆ, ಉದ್ದೀಪಿಸುತ್ತವೆ, ಮನ ತಣಿಸು ತ್ತವೆ. “ಹರಿಯುವ ನದಿಯ ನೋಡುತ ನಿಂತೆ ಅಲೆಗಳು ಕುಣಿದಿತ್ತು... ಕಲಕಲ ಕಲಕಲ ಮಂಜುಳ ನಾದವು ಕಿವಿಗಳ ತುಂಬಿತ್ತು..." ಎಂದು ಹಾಡುತ್ತ ಮೈಮರೆಯುತ್ತಾಳೆ ಉಪಾಸನೆ ಚಿತ್ರದಲ್ಲಿ ಚಿಕ್ಕ ಹುಡುಗಿ ಶಾರದೆ.

“ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ ಮನ ಸೆಳೆದನಲ್ಲ ಕೊಟ್ಟನಲ್ಲ ಕೆನ್ನೆ ಮೇಲೆ ಪ್ರೇಮದುಂಗುರ..." ಎಂದು ನಾಚಿ ನೀರಾಗುತ್ತಾಳೆ ಬೇಡಿ ಬಂದವಳು ಚಿತ್ರದಲ್ಲಿ ಹದಿ ಹರೆಯದ ನಾಯಕಿ ಇಂದು. ಹೀಗೆ ಅಲೆ ಎಂದೊಡನೆ ನೀರಿನ ಅಲೆಗಳೇ ನಮ್ಮ ಕಣ್ಮುಂದೆ ಬರುವು ದೇನೋ ಹೌದು, ಆದರೆ ಬೇರೆ ಇಂದ್ರಿಯಗಳು ಆನಂದಿಸುವ ಅಲೆಗಳೂ ಇವೆ.

“ಅಲೆ ಅಲೆಯಾಗಿ ಕೇಳಿದೆ ತಾಯೇ ಗೋಪುರ ಘಂಟಾನಾದ..." ಎಂದು ಬರುತ್ತದೆ ಬಿ.ಕೆ.ಸುಮಿತ್ರಾ ಹಾಡಿರುವ ದೇವೀದಿವ್ಯದರ್ಶನ ಭಕ್ತಿಗೀತೆಯೊಂದರಲ್ಲಿ. “ಅಲ್ಲಿ ಗಿಳಿಗೊರವಂಕ ಕೋಗಿಲೆ ಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ..." ಎಂದು ಹಾರೈಸಿದ್ದಾರೆ ಕುವೆಂಪು, ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯ ಗುಡಿಸಲಿನ ವಾಸದ ಬಯಕೆಯಲ್ಲಿ.

ಕಣ್ಣು-ಕಿವಿಗಳಂತೆ ಮೂಗಿಗೂ ಅಲೆಗಳು ಬಂದು ಅಪ್ಪಳಿಸಬಹುದು “ಸೇವಂತಿಯೆ ಸೇವಂತಿಯೇ ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ..." ಪರಿಮಳದ ರೀತಿಯಲ್ಲಿ. ಅಷ್ಟೇಕೆ, ಅಗೋಚರವೂ ಅತೀಂದ್ರಿಯವೂ ಆಗಬಲ್ಲವು ಕಷ್ಟಕಾರ್ಪಣ್ಯದ ನೋವಿನ ಅಲೆಗಳು, ಅಥವಾ ಮಧುರವಾಗಿ ಮರುಕಳಿಸುವ ನೆನಪಿನ ಅಲೆಗಳು.

ಇದನ್ನೂ ಓದಿ: Srivathsa Joshi Colum: ಡಬ್ಲ್ಯೂ ದಿಂದ ಜಿ ಯೆಡೆಗೆ ಸರಿಯುವೆವು ಸರ್‌ ಜೀ !

ಮಧುರವಾಗಿ ಎಂದಿದ್ದು ಮಧುರಾಷ್ಟಕವನ್ನು ನೆನಪಿಸಲಿಕ್ಕೆ. ಕೃಷ್ಣನನ್ನು ಕೊಂಡಾಡುವ ಅಧರಂ ಮಧುರಂ ವದನಂ ಮಧುರಂ... ಅದರಲ್ಲೊಂದು ಸಾಲು ಬರುತ್ತದೆ “ಯಮುನಾ ಮಧುರಾ ವೀಚೀ ಮಧುರಾ" ಎಂದು. ವೀಚೀ ಎಂದರೆ ಸಂಸ್ಕ ತದಲ್ಲಿ ಅಲೆ ಎಂದರ್ಥ.

ಕೃಷ್ಣನನ್ನು ನೆನಪಿಸಿಕೊಂಡರೆ ಯಮುನಾ ನದಿಯೂ ಮಧುರವೇ. ಅದರ ಅಲೆಗಳೂ ಮಧುರವೇ. ಹಾಂ! ಈಗಾದರೆ ಬಹುಶಃ ಯಮುನೋತ್ರಿಯಲ್ಲಿ ಮಾತ್ರ. ದಿಲ್ಲಿ ಆಗ್ರಾ ಮುಂತಾದ ನಗರಗಳ ಬಗಲಲ್ಲಿನ ಯಮುನೆ ಮಧುರವಾಗಿರಲಾರಳು. ಅವಳನ್ನು ಯದ್ವಾತದ್ವಾ ಕುಲಗೆಡಿಸಿ ವಿಷಮಯ ವಾಗಿಸಿದ್ದೇವೆ ಮತ್ತೆಲ್ಲಿಯ ಮಾಧುರ್ಯ!

ಇರಲಿ, ವೀಚೀ ಎಂದರೆ ಅಲೆ ಎಂದೆನಷ್ಟೇ? ಸಂಸ್ಜೃತದಲ್ಲಿ ಅಲೆ ಎಂಬರ್ಥದ ಇನ್ನೂ ಕೆಲವು ಚಂದಚಂದದ ಪದಗಳಿವೆ. “ಭಂಗಸ್ತರಂಗ ಊರ್ಮಿರ್ವಾ ಸಿಯಾಂ ವೀಚಿರಥೋರ್ಮಿಷು| ಮಹತ್ಸೂಲ್ಲೋಲಕಲ್ಲೋಲೌ ಸ್ಯಾದಾವರ್ತೋಧಿಮ್ಭಸಾಂ ಭ್ರಮಃ" ಎನ್ನುತ್ತದೆ ಅಮರಕೋಶ.

ಭಂಗ ಮತ್ತು ತರಂಗ ಇವು ಪುಲ್ಲಿಂಗ ಪದಗಳು. ಊರ್ಮೀ ಮತ್ತು ವೀಚೀ ಪುಲ್ಲಿಂಗದಲ್ಲೂ ಸ್ತ್ರೀ ಲಿಂಗದಲ್ಲೂ ಬಳಸಬಹುದಾದಂಥವು. ಉಲ್ಲೋಲ ಕಲ್ಲೋಲಗಳೆಂದರೆ ದೊಡ್ಡ ಅಲೆ (2021ರಲ್ಲಿ ಕೋವಿಡ್'ನ ಎರಡನೆಯ ಅಲೆ ಬಂದಿತ್ತಲ್ವಾ ಆ ರೀತಿಯದು). ಆವರ್ತ ಎಂದರೆ ಚಿಕ್ಕದು, ನೀರಿನ ಸುಳಿಯಂಥದು. ಇವುಗಳ ಪೈಕಿ ಕನ್ನಡದಲ್ಲೂ ಹೆಚ್ಚು ಬಳಕೆಯಲ್ಲಿರುವುದು, ಎಲ್ಲರಿಗೂ ಪರಿಚಿತ ವಿರುವುದು ತರಂಗ. ಉದಯವಾಣಿ ಬಳಗದಿಂದ ಸಮಗ್ರ ಕುಟುಂಬಕ್ಕೆ ಸಮೃದ್ಧ ಸಾಪ್ತಾಹಿಕದ ಹೆಸರಾಗಿಯೂ ಹೌದು.

ನೋಡಿದಿರಾ! ಅಲೆಯ ಬಗ್ಗೆಯೇ ಆಲೋಚಿಸಿದರೆ ವಿಚಾರಬಿಂದುಗಳು ಅಲೆಅಲೆಯಾಗಿ ಬಂದು ಅಪ್ಪಳಿಸುತ್ತವೆ. ಹಾಗೆಯೇ ವಿಜ್ಞಾನ ಕ್ಷೇತ್ರಕ್ಕೆ ಬಂದರೆ ವಿದ್ಯುತ್ಕಾಂತೀಯ ಅಲೆಗಳು, ರೇಡಿಯೊ ಪ್ರಸಾರದ ಅಲೆಗಳು, ಬೆಳಕಿನ ಅಲೆಗಳು, ಶಬ್ದದ ಅಲೆಗಳು, ರಿಕ್ಟರ್ ಮಾಪಕದಲ್ಲಿ ಅಳೆಯಲಾಗುವ ಭೂಕಂಪನದ ಅಲೆಗಳು ಇತ್ಯಾದಿ.

ರಾಜಕೀಯ ಕ್ಷೇತ್ರದಲ್ಲಾದರೆ ಸತ್ತ ಪುಢಾರಿಯ ಹೆಂಡತಿಯೋ ಮಕ್ಕಳೋ ಚುನಾವಣೆಯಲ್ಲಿ ಸ್ಪರ್ಧಿಸಿದಾಗಿನ ಅನುಕಂಪದ ಅಲೆ, ಆಡಳಿತ ವಿರೋಧಿ ಅಲೆ, ಅಮಿತ್ ಶಾ ಮೋದಿ ಪ್ರಚಾರ ವೈಖರಿಯ ಅಲೆ (ಮೊನ್ನೆ ಪ.ಬಂಗಾಳ ಚುನಾವಣೆಯಲ್ಲಿ ದೀದಿಯ ದಾದಾಗಿರಿಯನ್ನೆಲ್ಲ ಮಟ್ಟ ಹಾಕಿದ ‘ಝಾಲ್ಮುರಿ’ ಅಲೆ) ಇತ್ಯಾದಿ.

ಇವೆಲ್ಲವುಗಳಿಗಿಂತ ಭಿನ್ನವಾದೊಂದು ಅಲೆಯಿದೆ, ಅದೇ ಮೆಕ್ಸಿಕನ್ ಅಲೆ. ಮೆಕ್ಸಿಕೋ, ಅಮೆರಿಕ ಸಂಯುಕ್ತ ಸಂಸ್ಥಾನ, ಮತ್ತು ಕೆನಡಾ ದೇಶಗಳ ಸಂಯುಕ್ತ ಆಶ್ರಯದಲ್ಲಿ ಇದೀಗ ಫಿಫಾ ವರ್ಲ್ಡ್‌ಕಪ್ ಫುಟ್‌ಬಾಲ್ ಪಂದ್ಯಾವಳಿ ಆರಂಭವಾಗಿರುವಾಗ ಮೆಕ್ಸಿಕನ್ ಅಲೆಯ ಬಗ್ಗೆಯೇ ಅಂಕಣ ಬರೆಯ ಲಿಕ್ಕೆ ಇದು ಸಕಾಲ. ಅಲ್ಲದೇ, ಮೆಕ್ಸಿಕನ್ ಅಲೆ ಎಂದು ವಿಶ್ವವಿಖ್ಯಾತಿ ಗಳಿಸಿ ಈಗ ಸರಿಯಾಗಿ 40 ವರ್ಷಗಳಾಗುವುದರಿಂದ ಸುಸಂದರ್ಭ.

ಮೆಕ್ಸಿಕನ್ ಅಲೆ ಎಂದರೇನು?

ಕ್ರಿಕೆಟ್, ಫುಟ್‌ಬಾಲ್, ಬೇಸ್‌ಬಾಲ್ ಮುಂತಾದ ಕ್ರೀಡಾಪಂದ್ಯಗಳನ್ನು ಸ್ಟೇಡಿಯಂನಲ್ಲೇ ಕುಳಿತು ನೋಡಿದ್ದರೆ ನೀವೂ ಮೆಕ್ಸಿಕನ್ ಅಲೆಯಲ್ಲಿ ಪಾಲ್ಗೊಂಡಿದ್ದರೂ ಇರಬಹುದು. ಅಥವಾ, ಅಂತಹ ಪಂದ್ಯಗಳನ್ನು ಟಿವಿಯಲ್ಲಿ ನೋಡುವ ಹುಚ್ಚು ನಿಮಗಿದೆಯಾದರೆ ಟಿವಿಯಲ್ಲಾದರೂ ಅದನ್ನು ನೋಡಿಯೇ ಇರುತ್ತೀರಿ. ಅದಕ್ಕೆ ಮೆಕ್ಸಿಕನ್ ವೇವ್ ಎಂಬ ಹೆಸರಿರುವ ವಿಷಯ ಮಾತ್ರ ಗೊತ್ತಿರ ಲಿಕ್ಕಿಲ್ಲ ಅಷ್ಟೇ.

ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸುತ್ತಿರುವ ಪ್ರೇಕ್ಷಕರ ಗ್ಯಾಲರಿಯ ಒಂದು ಭಾಗದಲ್ಲಿ ಹತ್ತಿಪ್ಪತ್ತು ಮಂದಿ ಒಮ್ಮೆಗೇ ಎದ್ದು ನಿಂತು ಎರಡೂ ಕೈಗಳನ್ನು ಮೇಲಕ್ಕಿತ್ತಿ ಹೋ... ಎಂದು ಕಿರುಚಿ ಕುಳಿತುಕೊಳ್ಳುತ್ತಾರೆ. ಅವರನ್ನು ನೋಡಿದ ಎಡ ಪಕ್ಕದವರೂ ಹಾಗೇ ಮಾಡುತ್ತಾರೆ. ಅಮೇಲೆ ಅವರ ಪಕ್ಕದವರು. ಆಮೇಲೆ ಅವರ ನಂತರದವರು... ಹೀಗೆ ಪ್ರದಕ್ಷಿಣಾಕಾರವಾಗಿ ಇಡೀ ಸ್ಟೇಡಿಯಂ ನ ಸುತ್ತಕ್ಕೂ ಒಂದು ದೊಡ್ಡ ಅಲೆ ಮುಂದುವರಿಯುತ್ತದೆ.

ಆಟವನ್ನು ನೇರಪ್ರಸಾರ ಮಾಡುವ ಟಿವಿ ಕ್ಯಾಮರಾಗಳು ಆಟಗಾರರ ಬದಲಿಗೆ ನೋಟಗಾರರ ಅಲೆಯನ್ನೇ ಫೋಕಸ್ ಮಾಡುತ್ತವೆ. ಅದರಿಂದಾಗಿ ಟಿವಿ ವೀಕ್ಷಕರವರೆಗೂ ರೋಮಾಂಚನದ ಅಲೆ ತಲುಪುತ್ತದೆ. ಇದನ್ನೇ ಮೆಕ್ಸಿಕನ್ ಅಲೆ ಎನ್ನುವುದು. 1986ರಲ್ಲಿ ಮೆಕ್ಸಿಕೋದಲ್ಲಿ ಫುಟ್‌ಬಾಲ್ ವರ್ಲ್ಡ್ ಕಪ್ ಪಂದ್ಯಗಳು ನಡೆದಿದ್ದಾಗ ತುಂಬ ಜನಪ್ರಿಯವಾದ ಈ ಅಲೆ, ಆಗಷ್ಟೇ ಟಿವಿ ಮೂಲಕ ಕ್ರೀಡಾಪಂದ್ಯಗಳ ನೇರಪ್ರಸಾರವು ಹೆಚ್ಚುಹೆಚ್ಚು ಚಾಲ್ತಿಗೆ ಬಂದಿದ್ದರಿಂದ ಪ್ರಪಂಚದೆಲ್ಲೆಡೆ ಪರಿಚಿತವಾಗಿ ಮೆಕ್ಸಿಕನ್ ವೇವ್ ಎಂದೇ ಗುರುತಿಸಲ್ಪಟ್ಟಿದೆ.

ಆಮೇಲೆ ಇತರ ರಾಷ್ಟ್ರಗಳ ಕ್ರೀಡಾಭಿಮಾನಿಗಳೂ ಅಲೆಯೆಬ್ಬಿಸುವ ಕಲೆಯನ್ನು ಕರಗತ ಮಾಡಿ ಕೊಂಡಿದ್ದಾರೆ. ಕೆನಡಾದಲ್ಲಿ ಹಾಕಿ ಪಂದ್ಯಗಳಲ್ಲಿ, ಅಮೆರಿಕದಲ್ಲಿ ಬೇಸ್‌ಬಾಲ್ ಪಂದ್ಯಗಳಲ್ಲಿ, ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಪಂದ್ಯಗಳಲ್ಲಿ ಭರ್ಜರಿ ಅಲೆಗಳು ಕಾಣಿಸಿಕೊಳ್ಳುವುದು ಮಾಮೂಲಿ ಯಾಗಿದೆ.

ಹೆಸರು ಮಾತ್ರ ಮೆಕ್ಸಿಕನ್ ವೇವ್ ಎಂದೇ. ಅಷ್ಟಾಗಿ, ಮೆಕ್ಸಿಕೋದಲ್ಲಿ ಸ್ಪಾನಿಷ್ ಭಾಷೆಯಲ್ಲಿ ಇದನ್ನು La Ola ಎನ್ನುತ್ತಾರೆ, The wave ಎಂಬರ್ಥದಲ್ಲಿ. ಓಲಾ ಎಂಬ ಸ್ಪಾನಿಷ್ ಶಬ್ದಕ್ಕೂ, ಅಲೆ ಎಂಬ ಕನ್ನಡ ಶಬ್ದಕ್ಕೂ, ಊಲ್ಲೋಲ ಎಂಬ ಸಂಸ್ಕ ತ ಶಬ್ದಕ್ಕೂ ಇರುವ ಸಾಮ್ಯ ಸಂಬಂಧ ಸಮಾನಾರ್ಥಗಳನ್ನು ಗಮನಿಸಿ!

ಈಗೀಗಂತೂ ಪ್ರತಿಯೊಂದು ಕ್ರೀಡಾಪಂದ್ಯವೂ ಟಿವಿಯಲ್ಲಿ ಪ್ರಸಾರವಾಗುವುದಿಂದ, ಕ್ರೀಡಾಳು ಗಳಷ್ಟೇ ಪ್ರೇಕ್ಷಕರೂ ‘ಮೈಲೇಜ್’ ಪಡೆಯಲು ಬಯಸುವುದರಿಂದ- ಮುಖಮೈಗೆಲ್ಲ ಬಣ್ಣಬಣ್ಣದ ಕ್ರೀಮುಗಳನ್ನು ಮೆತ್ತಿಕೊಳ್ಳುವುದೇನು, ತಮ್ಮ ನೆಚ್ಚಿನ ತಂಡದ ಜೆರ್ಸಿಯನ್ನೇ ಧರಿಸಿಕೊಳ್ಳುವು ದೇನು, ಆಯಾ ದೇಶಗಳ ಬಾವುಟ ಬೀಸುತ್ತ ಮೈಮರೆತು ಕುಣಿಯುವುದೇನು, ಭೇರಿ-ನಗಾರಿ-ಶಂಖ-ತಾಳ ಡೋಲು-ಡಂಗೂರವೇ ಮುಂತಾಗಿ ವಿವಿಧ ವಾದ್ಯಗಳನ್ನು ಬಾರಿಸುವುದೇನು- ಇವೆಲ್ಲದರ ಜೊತೆಗೆ ಆಗೊಮ್ಮೆ ಈಗೊಮ್ಮೆ ಮೆಕ್ಸಿಕನ್ ವೇವ್ ಫಾರ್ಮೇಷನ್ ಆದರೇನೇ ಪಂದ್ಯ ವೀಕ್ಷಣೆ ರಸೋತ್ಕಟತೆ ಮುಟ್ಟಿದೆಯೆಂದರ್ಥ.

ಅಮೆರಿಕದಲ್ಲಿ ಕೆಲವು ಪಂದ್ಯಪ್ರಾಯೋಜಕರು ಚಿಯರ್‌ಗರ್ಲ್ಸ್/ಬಾಯ್ಸ್ ಮುಖಾಂತರ ಬೇಕಂತಲೇ ಪ್ರೇಕ್ಷಕರನ್ನು ಪ್ರಚೋದಿಸಿ ಮೆಕ್ಸಿಕನ್ ಅಲೆಗಳನ್ನು ಎಬ್ಬಿಸುತ್ತಾರೆ. ಅದರಲ್ಲೇ ವಿವಿಧ ವಿನ್ಯಾಸ ಗಳನ್ನು- ಪ್ರದಕ್ಷಿಣಾಕಾರ, ಅಪ್ರದಕ್ಷಿಣಾಕಾರ, ಒಟ್ಟೊಟ್ಟಿಗೇ ಎರಡು ಅಲೆಗಳು ಇತ್ಯಾದಿ- ಮೂಡಿಸು ತ್ತಾರೆ.

ಕೆಲವೊಮ್ಮೆ ಹೋ ಎಂದು ಯಾರೊಬ್ಬರೂ ಕಿರುಚದೆ ಇಡೀ ಗ್ಯಾಲರಿ ಸುತ್ತುವಂತೆ ಒಂದು ಸೈಲೆಂಟ್ ವೇವ್ ಎಬ್ಬಿಸುವುದೂ ಇದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್‌ನಲ್ಲಿ ಮೆಕ್ಸಿಕನ್ ಅಲೆಯ ಪರಾಕಾಷ್ಠೆ ಎಷ್ಟಿತ್ತೆಂದರೆ ಅಲೆಯ ಸೋಗಿನಲ್ಲಿ ಕೆಲ ಉನ್ಮತ್ತ ಪ್ರೇಕ್ಷಕರು ಬಾಟಲಿ ಮತ್ತಿತರ ವಸ್ತುಗಳನ್ನು ಕ್ರೀಡಾಂಗಣಕ್ಕೆ ಎಸೆಯುವಂಥ ದುಷ್ಕೃತ್ಯಗಳನ್ನೂ ಆರಂಭಿಸಿ ದ್ದುಂಟು.

ಆಮೇಲೆ ಅಲ್ಲಿ ಕೆಲ ಕಾಲ ಮೆಕ್ಸಿಕನ್ ವೇವ್‌ಗೆ ನಿಷೇಧ ಹೇರಿದ್ದೂ ಉಂಟು. ಅದೇನೇ ಇರಲಿ, ಮೆಕ್ಸಿಕೋ ದೇಶದವರಿಗಂತೂ ತಮ್ಮ ದೇಶದ ಹೆಸರಿಂದಲೇ ಇಂಥದೊಂದು ಕ್ರೇಜ್ ಜಗದ್ವ್ಯಾಪಿ ಯಾಗಿ ಮೆರೆಯುತ್ತಿರುವುದು ಅಭಿಮಾನದ ಸಂಗತಿಯೇ. ಆ ಸಂಭ್ರಮವನ್ನು ಹೆಚ್ಚಿಸಲೆಂದು ಮೊನ್ನೆ ಜೂನ್ 6ರಂದು ರಾಜಧಾನಿ ಮೆಕ್ಸಿಕೋ ಸಿಟಿಯಲ್ಲಿ ಒಂದು ಅಭೂತಪೂರ್ವ ಮೆಕ್ಸಿಕನ್ ವೇವ್ ಎಬ್ಬಿಸಲಾಯಿತು.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕದಲ್ಲಿ ದಾಖಲೆ ಬರೆಯುವುದಕ್ಕಾಗಿಯೇ. ಇದುವರೆಗಿನ ಗಿನ್ನೆಸ್ ದಾಖಲೆಯಿದ್ದದ್ದು 2008ರಲ್ಲಿ ಅಮೆರಿಕದ ಟೆನ್ನೆಸ್ಸಿ ಸಂಸ್ಥಾನದಲ್ಲಿ ನಾಸ್‌ಕಾರ್ ರೇಸ್ ನೋಡಲು ಸ್ಟೇಡಿಯಂನಲ್ಲಿದ್ದ 1,57,574 ಪ್ರೇಕ್ಷಕರು ಭಾಗವಹಿಸಿದ ಮೆಕ್ಸಿಕನ್ ವೇವ್. ಈಗ ಅದನ್ನು ಮೀರಿದ ಸಂಖ್ಯೆಯಲ್ಲಿ ಜನ ಸೇರಿ ದಾಖಲೆ ಮಾಡಿದ್ದಾರೆ. ಆದರೆ ಇದು ಯಾವುದೇ ಕ್ರೀಡಾಪಂದ್ಯದ ವೇಳೆಯಲ್ಲಲ್ಲ, ಯಾವುದೇ ಸ್ಟೇಡಿಯಂನಲ್ಲೂ ಅಲ್ಲ.

ಮೆಕ್ಸಿಕೋ ಸಿಟಿಯ ‘ಪೆಸೋ ಡೆ ಲಾ ರಿಫಾರ್ಮಾ’ ವರ್ತುಲರಸ್ತೆಯಲ್ಲಿ. ನೆಚ್ಚಿನ ತಂಡವನ್ನು ಹುರಿ ದುಂಬಿಸುವ ಸಂದರ್ಭವಲ್ಲವಾದ್ದರಿಂದ ಎಲ್ಲರೂ “ಮೆಕ್ಸಿಕೋ! ಮೆಕ್ಸಿಕೋ!" ಎಂದು ತಾರಕಸ್ವರ ದಲ್ಲಿ ಹೇಳುತ್ತ ದೇಶಪ್ರೇಮ ಮೆರೆದರಂತೆ.

ಮೆಕ್ಸಿಕನ್ನರೇನೋ ಸಂಭ್ರಮಿಸಿದರು, ಮೆಕ್ಸಿಕನ್ ವೇವ್ ತಮ್ಮದೆಂದು ಹೆಮ್ಮೆಪಟ್ಟರು. 1986ರ ಫಿಫಾ ಪಂದ್ಯಾವಳಿಯಿಂದಾಗಿ ಅಂಥದೊಂದು ಕ್ರೇಜ್ ಪ್ರಪಂಚಕ್ಕೆ ಪರಿಚಯವಾದದ್ದು ಹೌದಾದ್ದರಿಂದ ಆಗ ಆತಿಥೇಯ ರಾಷ್ಟ್ರವಾಗಿದ್ದ ಮೆಕ್ಸಿಕೋಗೆ ಖ್ಯಾತಿ ಸಲ್ಲಬೇಕಾದ್ದೇ. ಆದರೆ ಹಾಗೆ ಕ್ರೀಡಾಪಂದ್ಯದ ಪ್ರೇಕ್ಷಕರು ಗ್ಯಾಲರಿಯಲ್ಲಿ ಅಲೆಯೆಬ್ಬಿಸಿದ್ದು ಅದೇ ಮೊದಲೇನಲ್ಲ.

1981ರ ಅಕ್ಟೋಬರ್ 15ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ಒಂದು ಬೇಸ್‌ಬಾಲ್ ಪಂದ್ಯದಲ್ಲಿ ಮೊತ್ತಮೊದಲ ಬಾರಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆ ಥರದ್ದೊಂದು ಅಲೆ ಎದ್ದಿತು. ಆ ಪಂದ್ಯ ನಡೆದದ್ದು ಕ್ಯಾಲಿಫೋರ್ನಿಯಾದ ಆಕ್ ಲ್ಯಾಂಡ್ ಅಥ್ಲೆಟಿಕ್ಸ್ ಮತ್ತು ನ್ಯೂಯಾರ್ಕ್‌ನ ಯಾಂಕೀಸ್ ತಂಡಗಳ ನಡುವೆ. ಚಿಯರ್‌ಲೀಡರ್ ಆಗಿದ್ದವನು ಜಾರ್ಜ್ ಹೆಂಡರ್ಸನ್ ಎಂಬಾತ.

ಪ್ರೇಕ್ಷಕರಿಗೆ ಎಕ್ಸ್‌ಟ್ರಾ ಮನೋರಂಜನೆ ನೀಡಲು ವಿವಿಧ ಟ್ರಿಕ್‌ಗಳನ್ನು ಮಾಡುತ್ತಿದ್ದ ಆತ ಕ್ರೇಜೀ ಜಾರ್ಜ್ ಎಂದೇ ಖ್ಯಾತನಾಗಿದ್ದವನು. ಆವತ್ತು ಆಕ್‌ಲ್ಯಾಂಡ್ ಅಥ್ಲೆಟಿಕ್ಸ್ ತಂಡ ಮೊದಲೆರಡು ಇನ್ನಿಂಗ್ಸಲ್ಲಿ ಹೀನಾಯ ಪ್ರದರ್ಶನ ತೋರಿಸಿತ್ತು. ಮೂರನೆಯ ಇನ್ನಿಂಗ್ಸ್ ವೇಳೆ ಏನಾದರೂ ಮಾಡಿ ಪ್ರೇಕ್ಷಕರಿಗೊಂದಿಷ್ಟು ಲವಲವಿಕೆ ತರಿಸಬೇಕೆಂದುಕೊಂಡ ಜಾರ್ಜ್‌ಗೆ ‘ಅಲೆ ಎಬ್ಬಿಸುವ’ ಐಡಿಯಾ ಹೊಳೆಯಿತು.

ಗ್ಯಾಲರಿಯಲ್ಲಿದ್ದ ಕೆಲವು ಪ್ರೇಕ್ಷಕರನ್ನು ಹುರಿದುಂಬಿಸಿದನು. ಒಂದೆರಡು ಪ್ರಯತ್ನಗಳು ವಿಫಲ ವಾದವು. ಅವರಿಗೆ ಅದೇನೆಂದೇ ಅರ್ಥವಾಗಿರಲಿಲ್ಲ. ಮೂರನೆಯ ಪ್ರಯತ್ನದಲ್ಲಿ ಅಲೆ ಎಬ್ಬಿಸಿ ಇಡೀ ಸ್ಟೇಡಿಯಂಗೆ ವ್ಯಾಪಿಸುವಂತೆ ಮಾಡುವುದು ಸಾಧ್ಯವಾಯಿತು. ಪಂದ್ಯದ ಟಿವಿ ಕಾಮೆಂಟೇ ಟರ್ಸ್ ಕೂಡ ಆಶ್ಚರ್ಯಚಕಿತರಾಗಿ “ಆಹಾ! ಬೇಸ್‌ಬಾಲ್ ಪ್ರೇಕ್ಷಕರಿಂದ ಇಂಥದೊಂದು ಉತ್ಸಾಹದ ವರ್ತನೆಯನ್ನು ಇದುವರೆಗೂ ನಾವು ನೋಡಿದ್ದಿಲ್ಲ!" ಎಂದು ಉದ್ಗರಿಸಿದರು.

ಟಿವಿಯಲ್ಲಿ ಆ ಪಂದ್ಯದ ನೇರಪ್ರಸಾರ ಇದ್ದುದರಿಂದ ‘ವೇವ್’ ಪ್ರಚಾರ ಗಿಟ್ಟಿಸಿತು. ಕ್ರೀಡೆ ಮತ್ತು ಕ್ರೀಡಾಭಿಮಾನಕ್ಕೆ ಸಂಬಂಧಿಸಿದಂತೆ ಮೆಕ್ಸಿಕನ್ ಅಲೆಯ ವಿವರ ಅಷ್ಟಾದರೆ, ವಿಜ್ಞಾನಿಗಳು ಮತ್ತು ಮಾನವಶಾಸ್ತ್ರಜ್ಞರು ಇದನ್ನುಪಯೋಗಿಸಿ ಹೊಸ ವಿಚಾರಗಳ ಶೋಧನೆಯ ಅಲೆಯನ್ನೆಬ್ಬಿಸಿದ ಬಗ್ಗೆಯೂ ಈಗ ಸ್ವಲ್ಪ ತಿಳಿದುಕೊಳ್ಳೋಣ.

ಹಂಗೇರಿ ದೇಶದ ಬುಡಾಪೆಸ್ಟ್ ವಿಶ್ವವಿದ್ಯಾಲಯದ ಪ್ರೊಫೆಸರ್ ಟೆಮಸ್ ವಿಸ್ಸೇಕ್ ನೇತೃತ್ವದ ಒಂದು ತಂಡವು ಕ್ರೀಡಾಭಿಮಾನಿಗಳ ಮೆಕ್ಸಿಕನ್ ವೇವ್ ಚರ್ಯೆಯನ್ನು ಅಧ್ಯಯನ ಮಾಡಿ ಕೆಲವು ಸಂಗತಿ ಗಳನ್ನು ಕಂಡುಕೊಂಡಿದೆ. ಬೇರೆಬೇರೆ ಸ್ಟೇಡಿಯಮ್‌ಗಳಲ್ಲಿ 50,000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದ ಫುಟ್‌ಬಾಲ್ ಪಂದ್ಯಗಳ ವೇಳೆ ಕಂಡುಬಂದ ಒಂದಷ್ಟು ಅಲೆಗಳ ವಿಡಿಯೊ ಚಿತ್ರಗಳನ್ನು ಪರಾಮರ್ಶಿಸಿದೆ.

ಸ್ಟೇಡಿಯಂನ ಸುತ್ತಕ್ಕೂ ಎಷ್ಟು ವೇಗದಲ್ಲಿ ಅಲೆ ಚಲಿಸುತ್ತದೆ, ಹೇಗೆ ಅದು ಸಾಮಾನ್ಯವಾಗಿ ಪ್ರದಕ್ಷಿಣಾಕಾರದಲ್ಲೇ ಇರುತ್ತದೆ, ಆರಂಭದಲ್ಲಿ ಅಲೆಯನ್ನೆಬ್ಬಿಸಲು ಹೇಗೆ ಬರೀ ಕೈಬೆರಳೆಣಿಕೆ ಯಷ್ಟೇ ಸಂಖ್ಯೆಯ ಪ್ರೇಕ್ಷಕರು ಸಾಕಾಗುತ್ತಾರೆ, ಕೊನೆಗೆ ಇಡೀ ಪ್ರೇಕ್ಷಕಗಣವನ್ನೇ ನಿರ್ದೇಶಿಸುವುದಕ್ಕೆ ಕಾರಣೀಭೂತರಾಗುತ್ತಾರೆ ಮುಂತಾದ ಕೂಲಂಕಷ ವಿವರಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ.

೨೦೦೨ರಲ್ಲಿ ನೇಚರ್ ಪತ್ರಿಕೆಯಲ್ಲಿ ಒಂದು ಸಂಶೋಧನ ಪ್ರಬಂಧವನ್ನೂ ಪ್ರಕಟಿಸಿದೆ. ಮೆಕ್ಸಿಕನ್ ಅಲೆ ಒಂದು ಮಾನವಸಹಜ ಚರ್ಯೆ ಅಷ್ಟೇ. ಆದರೆ ಅದರ ಗಣಿತರೂಪವನ್ನು ಪ್ರಕೃತಿಯಲ್ಲಿ ಕಂಡುಬರುವ ನಿಸರ್ಗನಿರ್ಮಿತ ‘ಅಲೆ ರೂಪದ ಚಲನೆ’ಯ ಅಧ್ಯಯನಕ್ಕೆ ಬಳಸಬಹುದಾಗಿದೆ.

ಅಮೆರಿಕದ ಕೆಲವು ಪ್ರದೇಶಗಳನ್ನು ಪ್ರತಿವರ್ಷ ಕಾಡುವ ‘ಕಾಡುಬೆಂಕಿ’ ಅಂಥದ್ದೊಂದು ನೈಸರ್ಗಿಕ ಅಲೆ ಚಲನೆ. ಒಂದುಕಡೆ ಹುಟ್ಟಿಕೊಂಡ ಬೆಂಕಿ ಇತರೆಡೆಗೆ ಕ್ಷಿಪ್ರವಾಗಿ ಪಸರಿಸುವುದು ಮತ್ತು ಸ್ಟೇಡಿಯಂನಲ್ಲಿ ಕ್ರೀಡಾಭಿಮಾನಿಗಳ ಉದ್ರೇಕದ ಅಲೆ ಚಲಿಸುವುದು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿ!

ಇನ್ನೂ ಒಂದು ಗಮನಾರ್ಹ ಅಂಶವಿದೆ. ‘ಉದ್ರಿಕ್ತ ಪರಿಸ್ಥಿತಿ’ ಎಂಬ ಪದಪುಂಜ ಹೆಚ್ಚಾಗಿ ಗಲಭೆ-ದೊಂಬಿಗಳಿಗೆ ಸಂಬಂಧಿಸಿದ ವಾರ್ತೆಗಳಲ್ಲಿ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಈ ಉದ್ರಿಕ್ತ ಪರಿಸ್ಥಿತಿಯು ಸಾಕಷ್ಟು ಶಕ್ತಿಯನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿರುತ್ತದೆ. ಕಾಳ್ಗಿಚ್ಚಿಗೆ ಕಾರಣವಾಗುವ ಒಣಮರಗಳು ಮತ್ತು ತರಗೆಲೆಗಳ ಪ್ರದೇಶವೂ ಒಂಥರದ ಉದ್ರಿಕ್ತ ಪರಿಸ್ಥಿತಿಯೇ.

ಅದಕ್ಕೆ ಸ್ವಲ್ಪೇ ಸ್ವಲ್ಪ ಪ್ರಚೋದನೆ- ಘರ್ಷಣೆಯಿಂದಾದ ಕಿಡಿ- ಸಿಕ್ಕಿದರೂ ಸಾಕು, ಆ ಪ್ರಚ್ಛನ್ನ ಶಕ್ತಿ ಪ್ರಕಟವಾಗುತ್ತದೆ. ಉದ್ರಿಕ್ತ ಸ್ಥಿತಿಗೆ ಇನ್ನೊಂದು ಉದಾಹರಣೆ ಮಾನವಶರೀರದಲ್ಲಿ ಹೃದಯದ ಸುತ್ತಲಿನ ಸ್ನಾಯುಗಳು. ಇವುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ವಿದ್ಯುತ್‌ಪ್ರೇರಣೆ ಸಿಕ್ಕಿದರೂ ಸಾಕು, ಅವು ಸಂಕುಚಿತ ಅಥವಾ ವಿಕಸಿತಗೊಳ್ಳುತ್ತವೆ.

ಕೆಲವು ಸಂದರ್ಭಗಳಲ್ಲಿ ಸ್ನಾಯುಗಳು ಅಪೇಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯಿಸದೇ ಇರಬಹುದು. ಅದೇ ಹೃದಯಸ್ತಂಭನದ ಪ್ರಾಣಾಂತಿಕ ಅಲೆ! ಉದ್ರಿಕ್ತ ಪರಿಸ್ಥಿತಿ ಎದ್ದುಕಾಣಬೇಕಾದರೆ ಸುತ್ತಲೂ ಒಂದು ರೀತಿಯ ಜಡತ್ವ ಅಥವಾ ನಿಷ್ಕ್ರಿಯತೆ ಇರಬೇಕು. Calm before the storm ಇದ್ದಂತೆ.

ಮೆಕ್ಸಿಕನ್ ಅಲೆಯಲ್ಲಿ ಆಗುವುದು ಅದೇ. ಆಟ ನೀರಸವಾಗಿ ಸಾಗುತ್ತಿರುವಾಗ ಇಡೀ ಗ್ಯಾಲರಿಯಲ್ಲಿ ಔದಾಸೀನ್ಯದ ಛಾಯೆ ಮೂಡಿದಾಗ ಹಠಾತ್ತಾಗಿ ಹತ್ತಿಪ್ಪತ್ತು ಜನ ಒಮ್ಮೆಲೇ ಎದ್ದುನಿಂತು ಹೋ ಎಂದು ಕಿರುಚಿ ಪಕ್ಕದವರನ್ನೂ ಉದ್ರೇಕಿಸುತ್ತಾರೆ. ಹಾಗೆ ಹುಟ್ಟಿದ ಅಲೆ ಇಡೀ ಸ್ಟೇಡಿಯಂಅನ್ನು ಕ್ರಮಿಸುತ್ತದೆ.

ಬೇಕಿದ್ದರೆ ಗಮನಿಸಿ. ಪಂದ್ಯದಲ್ಲಿ (ಅದು ಫುಟ್‌ಬಾಲ್ ಅಥವಾ ಕ್ರಿಕೆಟ್ ಯಾವುದೇ ಆಗಿರಲಿ) ಲವಲವಿಕೆ ಇಲ್ಲವಾದಾಗ, ತುದಿಗಾಲಲ್ಲಿ ನಿಂತು ನೋಡುವಂಥ ಕಾತರದ ಕ್ಷಣಗಳು ಕಾಣದಾದಾ ಗಲೇ ಮೆಕ್ಸಿಕನ್ ಅಲೆ ಮತ್ತಿತರ ಮೋಜುಗಳು ಶುರುವಾಗುವುದು. ತೀವ್ರ ಆಸಕ್ತಿಯ ಆಟ ನಡೆಯು ತ್ತಿದ್ದದ್ದೇ ಆದರೆ, ಪ್ರೇಕ್ಷಕರು ಮೈಯೆಲ್ಲ ಕಣ್ಣಾಗಿ ಅದನ್ನೇ ನೋಡುತ್ತಿದ್ದದ್ದೇ ಆದರೆ, ಪಕ್ಕದವರು ಏನ್ಮಾಡ್ತಿದ್ದಾರೆಂದು ತಿಳಿಯುವ ಗೋಜಿಗೆ ಯಾರಾದರೂ ಯಾಕೆ ಹೋಗುತ್ತಾರೆ? ಹಾಗಾಗಿ, ಮೆಕ್ಸಿಕನ್ ಅಲೆ ಏಳುವುದಕ್ಕೆ ಸಾಮಾನ್ಯ ಕಾರಣವೇನೆಂದರೆ- ಟಿಕೆಟ್ ಖರೀದಿಸಿ ಆಟ ನೋಡಲು ಹೋದ ಪ್ರೇಕ್ಷಕರಿಗೆ ‘ಪೈಸಾ ವಸೂಲ್’ ತೃಪ್ತಿ ಸಿಗದೆ ಇರುವುದು, ಬೋರೆನಿಸುವ ಆಟದ ಮುಂದೆ ತಾವೇ ಏನಾದರೂ ಮನೋರಂಜನೆಯನ್ನು ಕಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು. ಅದಕ್ಕೇ ಹೇಳಿದ್ದು, ಮೆಕ್ಸಿಕನ್ ಅಲೆಯೆಂದರೆ ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ.

ಇನ್ನು ಈ ಸಲದ ಫಿಫಾ ಫುಟ್‌ಬಾಲ್ ಪಂದ್ಯಗಳ ನೇರಪ್ರಸಾರವನ್ನು ಟಿವಿಯಲ್ಲಿ ನೋಡುವಾಗ ಮೆಕ್ಸಿಕನ್ ವೇವ್ ಕಂಡುಬಂದರೆ ಅದರ ಹಿಂದೆ ಇಷ್ಟೆಲ್ಲ ಚರಿತ್ರೆ ಮತ್ತು ವಿಜ್ಞಾನ ಇದೆಯೆಂಬ ತಿಳಿವಳಿಕೆಯು ನೀವು ಅದನ್ನು ಇನ್ನಷ್ಟು ಆನಂದಿಸುವುದಕ್ಕೆ ಕಾರಣವಾಗುತ್ತದೆ. ಅಷ್ಟೆ ಅಲ್ಲ, ಆಟದತ್ತ ಗಮನ ಕಡಿಮೆಯಾಗಿ ಮೆಕ್ಸಿಕನ್ ವೇವ್‌ಗಾಗಿಯೇ ಕಾಯುತ್ತ ಕೂರುವ ಸಂದರ್ಭವೂ ಬಂದೀತು.