ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಲೇಖಕ ರಂಗನಾಥನ್‌ ಅವರು ಎತ್ತಿದ ಮತ್ತಷ್ಟು ಪ್ರಶ್ನೆಗಳು !

ಕಳೆದ ವಾರ ‘ನ್ಯಾಯಾಂಗ v/s ಶಾಸಕಾಂಗ’ ಎಂಬ ಲೇಖನದಲ್ಲಿ ನ್ಯಾಯಾಂಗ ವ್ಯವಸ್ಥೆ ಮತ್ತು ಕೆಲವರ ಮಿಶ್ರ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದೆವು. ಇದಕ್ಕೆ ಓದುಗರು, ಹಿತೈಷಿ ಗಳು ವೈಯಕ್ತಿಕವಾಗಿ ಕರೆ ಮಾಡಿ, ವಾಸ್ತವ ಕಟ್ಟಿಕೊಡಲು ಯತ್ನಿಸಿದ್ದೀರಿ ಎಂದರಲ್ಲದೆ, ಇನ್ನೊಂದಿಷ್ಟು ವಿಚಾರಗಳ ಕುರಿತು ಬರೆಯುವಂತೆ ಚರ್ಚಿಸಿ ಲೇಖನಕ್ಕೆ ಸಲಹೆ ನೀಡಿದರು. ಆ ಲೇಖನಕ್ಕೆ ಪೂರಕವಾಗಿ, ಚಿಂತಕ, ಲೇಖಕ ಆನಂದ್ ರಂಗನಾಥನ್ ಅವರು ಎತ್ತಿದ ಕೆಲವು ವಿಚಾರಗಳನ್ನು ಲೇಖಕರ ಗಮನಕ್ಕೆ ತಂದು, ಅವುಗಳ ಬಗ್ಗೆ ವಿಶ್ಲೇಷಿಸುವಂತೆ ಒತ್ತಾಯಿಸಿದ ಕಾರಣ, ಅವುಗಳನ್ನು ನಿಮ್ಮ ಮುಂದಿಡು ತ್ತಿದ್ದೇನೆ.

ಲೇಖಕ ರಂಗನಾಥನ್‌ ಅವರು ಎತ್ತಿದ ಮತ್ತಷ್ಟು ಪ್ರಶ್ನೆಗಳು !

ಗಂಟಾಘೋಷ

ಸುಮಾರು ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮಿಶ್ರ ಧೋರಣೆ ತೋರಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪುಗಳನ್ನು ನೀಡಿದೆ ಎಂದು ಲೇಖಕ, ಸಂಶೋಧಕ ಆನಂದ್ ರಂಗನಾ ಥನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿಂತಕ ರಂಗನಾಥನ್ ಅವರು ತಮ್ಮ ಸಾರ್ವಜನಿಕ ಹೇಳಿಕೆಗಳಲ್ಲಿ ಉಲ್ಲೇಖಿಸಿದಂತೆ, ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ವ್ಯಾಪಕ ಹತ್ಯಾಕಾಂಡ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಹೋದರೆ, ಇದು ಅವಧಿ ಮೀರಿದ ಪ್ರಕರಣವಾಗಿದ್ದು, ತೆಗೆದುಕೊಳ್ಳದಿರುವುದು ಉತ್ತಮ ಎಂದಿತು.

ಕಾಶ್ಮೀರಿ ಪಂಡಿತರ ಹೆಣ್ಣು ಮಕ್ಕಳನ್ನು ಹಾಡುಹಗಲೇ ಅತ್ಯಾಚಾರವೆಸಗಿ ಕೊಲ್ಲಲಾಯಿತು. ನೀವು ಈಗಲೇ ಮನೆ, ಆಸ್ತಿ-ಪಾಸ್ತಿ ಬಿಟ್ಟು ಹೊರಟು ಹೋಗುವಂತೆ ಸಾರ್ವಜನಿಕವಾಗಿ ಘೋಷಣೆ ಮಾಡುತ್ತಾ, ಅಮಾಯಕ ಪಂಡಿತ ಯುವಕರನ್ನು ಭರ್ಬರವಾಗಿ ಹತ್ಯೆ ಮಾಡಲಾಯಿತು. ಇಷ್ಟಾ ದರೂ ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯ ಒದಗಿಸಬೇಕೆಂಬ ಆಶಯ ಬರಲಿಲ್ಲ. ಆದರೆ ಇದಕ್ಕೂ 6 ವರ್ಷದ ಹಿಂದಿನ ಸಿಖ್ ದಂಗೆಯ ಕುರಿತು ಇದೇ ಪೀಠ SIT ತನಿಖೆಗೆ ಆದೇಶಿಸಿತು.

ಹಿಂದೂಗಳ ಹತ್ಯೆ ಕುರಿತು ಕೇಂದ್ರ ಸರಕಾರವು ಕಾರಣ ಹುಡುಕಿ, 370ನೇ ವಿಧಿಯನ್ನು ಸಂವಿಧಾನ ಬದ್ಧವಾಗಿ ರದ್ದುಗೊಳಿಸಿದರೆ, ಉನ್ನತ ಪೀಠವು ಈ ಕ್ರಮವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು, ಆ ಮೂಲಕ ಶಾಸಕಾಂಗದ ಕರ್ತವ್ಯಕ್ಕೆ ಮೂಗು ತೂರಿಸುವ ಮೂಲಕ ಅಡೆತಡೆ ಉಂಟು ಮಾಡಿತು. ವಕ್ಫ್‌ ಕಾನೂನಿನಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ, ಡ್ರಕೋನಿಯನ್ ಭಾಗವನ್ನು ಸೇರಿಸುವ ಮೂಲಕ, ಮುಸ್ಲಿಮರು ಯಾರ ಜಾಗವನ್ನು ಬೇಕಾದರೂ ವಕ್ಫ್‌ ಆಸ್ತಿಯೆಂದು ಘೋಷಿಸು ವಷ್ಟು ಅಧಿಕಾರ ನೀಡಿತು.

ಭಾರತ ಸಂವಿಧಾನ ರೂಪಿಸಿರುವ ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿ, , Paralell Extra Judicial tribunal ಮಾತ್ರವೇ ವಕ್ಫ್ ವಿವಾದಗಳನ್ನು ಬಗೆಹರಿಸುವ ವಿಶೇಷ ಶಕ್ತಿ ಹೊಂದಿರು ವುದು ಏಕಮೇವಾದ್ವಿತೀಯ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತಿದ್ದರೂ, ಸುಪ್ರೀಂ ಕೋರ್ಟ್ ಸುಮ್ಮನೆ ಇದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋದರೆ, ಹೈಕೋರ್ಟ್‌ ನಲ್ಲಿ ಪ್ರಶ್ನಿಸಿ ಎನ್ನುತ್ತಾ ದಶಕಗಳ ಕಾಲ ಅಲೆದಾಡಿಸಿತು.

ಇದನ್ನೂ ಓದಿ: Gururaj Gantihole Column: ರಾಷ್ಟ್ರೀಯ ಭದ್ರತೆಯೂ ರಾಜಕೀಯ ವಿಷಯವಾದಾಗ !

ಆದರೆ ಮೋದಿ ಸರಕಾರ ತಂದ ಬಹುಜನರ ಬೆಂಬಲದ, ಸಂವಿಧಾನಬದ್ಧ, ರಾಷ್ಟ್ರಪತಿಗಳ ಒಪ್ಪಿಗೆ ಮುದ್ರೆಯೊಂದಿಗೆ ಕಾನೂನಾಗಿ ಜಾರಿಯಾಗುವ ಮೊದಲೇ ಪ್ರಕರಣವನ್ನು ಕೈಗೆತ್ತಿಕೊಂಡು ಮಧ್ಯಂತರ ತಡೆಯಾಜ್ಞೆ ಹೊರಡಿಸಲು ಉತ್ಸುಕತೆ ತೋರಿಸಿತು. ರೈಟ್ ಟು ಎಜುಕೇಷನ್ ಎಂಬ ನಿಯಮವಂತೂ ಸ್ಥಳೀಯ ವಾಗಿ ಶಾಲಾ-ಕಾಲೇಜು ನಡೆಸುವವರ ಮೂಲ ಉದ್ದೇಶವನ್ನೇ ಮರೆ ಯುವಂತೆ ಮಾಡಿದೆ,

ಈ ಕುರಿತು ರಾಷ್ಟ್ರಮಟ್ಟದಲ್ಲಿ ಒಂದು ಏಕರೂಪದ ಶಿಕ್ಷಣ ಪದ್ಧತಿ ರೂಪುಗೊಳ್ಳುತ್ತಿಲ್ಲ. ಯಾವತ್ತೂ ಸೆಕ್ಯೂಲರ್ ಬೋಧಿಸುವ ಸುಪ್ರೀಂಕೋರ್ಟ್ ಅನ್ಯಧರ್ಮ ದವರನ್ನು ಹೊರತುಪಡಿಸಿ, ರಾಜ್ಯ ಸರಕಾರಗಳು ಸಂಪೂರ್ಣ ನಿಯಂತ್ರಣ ಹೊಂದಿರುವ ಹಿಂದೂ ದೇಗುಲಗಳ, ಮಠಮಾನ್ಯ ಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಲಕ್ಷಗಟ್ಟಲೆ ಎಕರೆ ಜಮೀನುಗಳನ್ನು ಮಾತ್ರವೇ ಏಕೆ ತನ್ನ ನಿಯಂತ್ರಣದಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದಕ್ಕೆ ಸ್ವಯಂ ಪ್ರಕರಣ ಇದುವರೆಗೂ ದಾಖಲಾಗು ತ್ತಿಲ್ಲ.

ಸ್ವತಃ ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ, ಈ ದೇಶವು ಸಂಪೂರ್ಣವಾಗಿ ಸೆಕ್ಯೂಲರ್ ಆಗಿದ್ದು, ಅಲ್ಲಿ ಧರ್ಮ, ಜಾತಿ ಆಧಾರಿತ ತಾರತಮ್ಯಗಳಿಗೆ ಅವಕಾಶವಿಲ್ಲ ಎಂದಿದೆ. ಆದರೆ ಅಲ್ಪ ಸಂಖ್ಯಾತರ ಹೆಸರಿನಲ್ಲಿ ಕೋಟಿಗಟ್ಟಲೆ ಅನುದಾನ, ಉಚಿತ ಸಬ್ಸಿಡಿ, ಪ್ರತ್ಯೇಕವಾಗಿ ಸರಕಾರಿ ಯೋಜನೆಗಳನ್ನು ಘೋಷಿಸಬಹುದು, ಆಯಾ ರಾಜ್ಯ ಸರಕಾರಗಳು ಜಾರಿಗೆ ತರಬಹುದಾಗಿದೆ.

ಮದರಸಾಗಳನ್ನು ರಾಜ್ಯ ಸರಕಾರಗಳು ಯಾಕೆ ನಡೆಸಬೇಕು? ಮೌಲ್ವಿಗಳಿಗೆ ಸಂಬಳ, ಇತರೆ ಭತ್ಯೆಗಳೂ ಸಹ ಸರಕಾರಗಳಿಂದ ನೀಡಲ್ಪಡುತ್ತಿವೆ. ಇದೆಲ್ಲವೂ ಸೆಕ್ಯೂಲರ್ ದೇಶದೊಳಗೆ ಹೇಗೆ ಸಾಧ್ಯ? ಆದರೆ ಒಂದು ಲಕ್ಷಕ್ಕೂ ಅಧಿಕ ಹಿಂದೂ ದೇವಸ್ಥಾನಗಳು ರಾಜ್ಯ ಸರಕಾರಗಳ ನಿಯಂತ್ರಣ ದಲ್ಲಿವೆ.

justice R

ಈ ಕುರಿತು, Free Hindu Temples ಎಂಬ ಅರ್ಜಿಯನ್ನು 2012ರಲ್ಲೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಿ ದ್ದರೂ ವಿಚಾರಣೆಗೆ ತೆಗೆದುಕೊಳ್ಳುತ್ತಿಲ್ಲ, ಯಾಕೆ? Hate Speech ಕುರಿತಂತೆ ದೇಶದ ಎಲ್ಲ ರಾಜ್ಯ ಗಳಿಗೆ ಕಟು ಆದೇಶ ಹೊರಡಿಸಿ, ಕೂಡಲೇ FIR ದಾಖಲಿಸಬೇಕು, ಇದನ್ನು ಪಾಲಿಸದೇ ಇರುವ ರಾಜ್ಯದ ವಿರುದ್ಧ ಪೀಠವೇ ಸ್ವಯಂ ಕಠಿಣಕ್ರಮ ಕೈಗೊಳ್ಳಲು ಮುಂದಾಗುತ್ತದೆ ಎಂದಿತು. ತಮಿಳು ನಾಡಿನ ಉದಯನಿಧಿ ಸ್ಟಾಲಿನ್ ಹಿಂದೂ ಧರ್ಮವನ್ನು ಈ ದೇಶದಿಂದಲೇ ಅಳಿಸಿ ಹಾಕಿ ಬಿಡುತ್ತೇವೆ ಎಂಬ ದಂಗೆ ಹುಟ್ಟು ಹಾಕಬಲ್ಲ ಹೇಳಿಕೆ ನೀಡಿದರೂ, ರಾಜ್ಯ ಸರಕಾರ ಯಾವ ಕ್ರಮ ಕೈಗೊಳ್ಳ ಲಿಲ್ಲ.

ಇದನ್ನು ಸುಪ್ರಿಂನಲ್ಲಿ ಪ್ರಶ್ನಿಸಿದರೆ, ನ್ಯಾಯಾಧೀಶರು ಮುಗುಳ್ನಗುತ್ತಾ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ದಡಿಯಲ್ಲಿ ಬರುತ್ತದೆ ಎಂದುಬಿಟ್ಟರು. ಜಲ್ಲಿಕಟ್ಟು ಇತರೆ ಪ್ರಾಣಿಗಳ ಸಂಬಂಧಿತ ಹಿಂದೂ ಹಬ್ಬ-ಆಚರಣೆಗಳನ್ನು ನಿಷೇಧಿಸುವ ನ್ಯಾಯಾಲಯವು ಬಕ್ರೀದ್ ಸೇರಿದಂತೆ ಇತರೆ ಆಚರಣೆಗಳಲ್ಲಿ ಕ್ರೂರವಾಗಿ ಕುರಿ, ಮೇಕೆಗಳ ವಧೆಯಾಗುವ ಕ್ರಮವನ್ನು ತಡೆಯುವುದಿರಲಿ, ಪ್ರಶ್ನಿಸಲೂ ಹೋಗುವು ದಿಲ್ಲ, ಯಾಕೆ? ಈ ದೇಶದಲ್ಲಿ ಕಾನೂನುಗಳು, ಕಠಿಣ ನಿಯಮಗಳು ಹಿಂದೂಗಳಿಗೆ ಮಾತ್ರವೇ ಯಾಕೆ? ಕ್ರಿಸ್ಮಸ್, ಮೊಹರಂ, ಹೊಸ ವರ್ಷಾಚರಣೆಗಳಲ್ಲಿ ಕಂಡುಬರದ ಪಟಾಕಿ ನಿಷೇಧ, ಹಿಂದೂಗಳು ವರ್ಷಕ್ಕೆ ಒಮ್ಮೆ ಆಚರಿಸುವ ದೀಪಾವಳಿ ಸಂದರ್ಭದಲ್ಲಿ ಮಾತ್ರವೇ ವಾಯು ಮಾಲಿನ್ಯದ ಕಾರಣವೊಡ್ಡಿ, ಪಟಾಕಿ ಹೊಡೆಯುವುದನ್ನು ಏಕೆ ನಿಷೇಧಿಸಲಾಗುತ್ತಿದೆ? ಸಾವಿರಾರು ವರ್ಷಗಳಿಂದ ಪೂಜಿಸುತ್ತಾ ಬರುತ್ತಿರುವ, ಈ ದೇಶದ ಮೂಲ ಸಂಸ್ಕೃತಿಯ ಆಧಾರಸ್ತಂಭಗಳಂತಿ ರುವ ಕಾಶಿ ವಿಶ್ವನಾಥ, ಮಥುರಾ (ಸತತ ಹೋರಾಟದ ಬಳಿಕ ಅಯೋಧ್ಯೆ ಪ್ರಕರಣ ಸಂಪನ್ನ ಗೊಂಡಿದೆ) ಪ್ರಕರಣಗಳು ನೂರಾರು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದರೂ, ಸ್ವಾತಂತ್ರೋ ತ್ತರ 75 ವರ್ಷಗಳಾಗುತ್ತಾ ಬಂದರೂ, ಈ ದೇಶದ ಹಿಂದೂ ತನ್ನ ಮೂಲದೇವರ ಪೂಜೆ ಮಾಡುವ ಮೂಲಭೂತ ಹಕ್ಕನ್ನು ಪಡೆಯಲು ಇನ್ನೂ ಹೋರಾಡಬೇಕಾದ ಸ್ಥಿತಿಯಲ್ಲಿದ್ದಾನೆ, ಯಾಕೆ? ಹೀಗೆ ಇನ್ನೂ ಹತ್ತಕ್ಕೂ ಹೆಚ್ಚು ಇಂತಹ ಪ್ರಕರಣಗಳ ಕುರಿತು ಚರ್ಚಿಸುತ್ತಾ, ಇದು ನಮ್ಮ ಸೆಕ್ಯೂಲರ್ ವ್ಯವಸ್ಥೆ ಎನ್ನುತ್ತಾ, ಈ ಮೇಲಿನ ಪಟ್ಟಿ ನೀಡುತ್ತಾರೆ ಚಿಂತಕ ರಂಗನಾಥನ್.

ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದಾಗ, ಸಾರ್ವಜನಿಕ ಅಭಿಪ್ರಾಯಗಳನ್ನು ಇಲ್ಲಿ ಸಂಕ್ಷೇಪಿಸಿ ಹೇಳುವುದಾದರೆ, ನಮ್ಮ ನ್ಯಾಯಾಂಗವೂ ಸಹ ಆಧುನಿಕತೆ ಮತ್ತು ಬೆಳೆಯುತ್ತಿರುವ ಜನಸಂಖ್ಯೆ ಯನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ತಂದುಕೊಳ್ಳ ಬಹುದೇನೋ ಎನ್ನುತ್ತಾರೆ ಜನಸಾಮಾನ್ಯರು.

ಒಂದು ಮೊಕದ್ದಮೆಯನ್ನು ಒಂದು ಪೀಠ ನಡೆಸುತ್ತಿರಬೇಕಾದರೆ, ತೀರ್ಪು ನೀಡುವ ಹಂತದಲ್ಲಿ ಪೀಠ ಬದಲಾಗಿಬಿಡುತ್ತದೆ. ಹೊಸದೊಂದು ಪೀಠಕ್ಕೆ ವರ್ಗಾವಣೆಯಾದಾಗ, ಮತ್ತೆ ಹೊಸದಾಗಿ ವಾದ-ಪ್ರತಿವಾದಗಳನ್ನು ಆಲಿಸಬೇಕಾಗುತ್ತದೆ. ಹೀಗಾಗಿ ಒಂದು ನಿಗದಿತ ಸಮಯದ ಗಡುವು ಇಲ್ಲದೆ ಮೊಕದ್ದಮೆಗಳು ಮುಂದಕ್ಕೆ ಹೋಗುತ್ತಿರುತ್ತವೆ. ಹೀಗಾಗಿ ನ್ಯಾಯ ವಿಳಂಬವಾಗುವ ಸಂಭವವೇ ಹೆಚ್ಚು ಎಂಬ ಅಭಿಪ್ರಾಯವನ್ನು ಘನವೆತ್ತ ರಾಷ್ಟ್ರಪತಿಗಳು ಜಾಖಂಡ್ ಕಾರ್ಯಕ್ರಮವೊಂದರಲ್ಲಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿ ವ್ಯವಸ್ಥೆಯು ತನ್ನದೇ ಆದ ಪರಿಧಿಯಲ್ಲಿ ಕೆಲಸ ಮಾಡುತ್ತ ಹೋಗುತ್ತದೆ ಮತ್ತು ನಿಗದಿತ ಅವಧಿಯಲ್ಲಿ ಸಾರ್ವಜನಿಕ ಕಾರ್ಯಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುತ್ತವೆ ಕೂಡ! ಅದರಂತೆ ಯೇ, ನ್ಯಾಯಾಂಗವೂ ಪ್ರತಿ ಮೊಕದ್ದಮೆಯನ್ನು ಇಂತಿಷ್ಟು ಅವಧಿಯಲ್ಲಿ ಎಂದು ಆಯಾ ಮೊಕದ್ದಮೆಯ ಸಾಧ್ಯತೆ ಯನ್ನು ಗಮನಿಸಿ, ಮುಗಿಸುವ ಆಂತರಿಕ ನಿಯಮಗಳನ್ನು ಏನಾದರೂ ಜಾರಿಗೆ ತಂದಲ್ಲಿ, ನ್ಯಾಯಾಲಯಕ್ಕೆ ಹೊರೆಯಾಗಿರುವ ಸಾವಿರಾರು ಮೊಕದ್ದಮೆಗಳು ಬಗೆಹರಿ ಯುತ್ತ ಒಂದು ಹಂತಕ್ಕೆ ಬರಬಹುದೇನೋ ಎನ್ನುತ್ತಾರೆ ಖ್ಯಾತ ವಕೀಲರೊಬ್ಬರು.

ಭಾರತದಲ್ಲಿ ಒಟ್ಟು 21285 ನ್ಯಾಯಾಧೀಶರು (2025ರ ಮೇ) ವಿವಿಧ ನ್ಯಾಯಾಂಗ ಹಂತಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮಾನ್ಯತೆ ಪಡೆದ ಒಟ್ಟು 34 ನ್ಯಾಯಾಧೀಶ ಸ್ಥಾನ ಗಳಿದ್ದರೂ, ಪ್ರಸ್ತುತ 32 ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು, ಹೈಕೋರ್ಟ್‌ಗಳಲ್ಲಿ ಒಟ್ಟು 1114 ಸ್ಥಾನಗಳಿಗೆ ಮಾನ್ಯತೆ ಇದ್ದು, ಪ್ರಸ್ತುತ 783ರಷ್ಟು ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದು, 331 ಸ್ಥಾನಗಳು ಖಾಲಿಯಿವೆ.ಇನ್ನುಳಿದಂತೆ, ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರು ಜಿಲ್ಲಾ ಹಾಗೂ ತಳಮಟ್ಟದ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರನ್ನೂ ಒಳಗೊಂಡಂತೆ ದೇಶದ ಒಟ್ಟು ನ್ಯಾಯಾಧೀಶರ ಸಂಖ್ಯೆ ಸುಮಾರು 21285ರಷ್ಟಿದೆ. ಭಾರತದಲ್ಲಿ ಪ್ರತಿ 10 ಲಕ್ಷ ಜನರಿಗೆ ಕೇವಲ 15 ನ್ಯಾಯಾಧೀಶರು ಇದ್ದಾರೆ. 1987ರ ಕಾನೂನು ಆಯೋಗದ ಶಿಫಾರಸು ಪ್ರಕಾರ ಈ ಪ್ರಮಾಣ 50 ನ್ಯಾಯಾಧೀಶರು ಇರಬೇಕು.

ಈ ಒಂದು ಸರಾಸರಿಯು, ನ್ಯಾಯಾಂಗದ ಮೊಕದ್ದಮೆ ಬಾಕಿಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದನ್ನು ಪರಿಹರಿಸಲು ಸರಕಾರ, ನ್ಯಾಯಾಧೀಶರ ಸ್ಥಾನಮಾನ ಹೆಚ್ಚಿಸುವುದು ಹಾಗೂ ನೇಮಕಾತಿ ಪ್ರಕ್ರಿಯೆಗೆ ಕ್ರಮ ಕೈಗೊಂಡಿದೆ ಎನ್ನಬಹುದು. ಜೊತೆಗೆ, ಇದರ ವೇಗ ಇನ್ನಷ್ಟು ಹೆಚ್ಚಿಸಬೇಕಿದೆ. ಈಗಿರುವ ಸ್ಥಿತಿಗೆ ಅನುಸಾರವಾಗಿ 2025ರ ಮೇ ವೇಳೆಗೆ, ಭಾರತದ ಸುಪ್ರೀಂಕೋರ್ಟ್‌ನಲ್ಲಿ ಹಲವು ಪ್ರಕರಣಗಳು ತಿಂಗಳಲ್ಲ, ವರ್ಷಗಳಲ್ಲ, ಹಲವು ದಶಕಗಳ ಕಾಲ ನಿರಾಕರಣೆಯಾಗದೆ, ಪರಿಹಾರ ಕಾಣದೆ ಬಾಕಿ ಉಳಿದಿವೆ. ಇವುಗಳಲ್ಲಿ, 1. ಅಬ್ದುಲ್ ಕರೀಂ ಬಂಡೆ ವಿ.ಯೂನಿಯನ್ ಆಫ್ ಇಂಡಿಯಾ‌ (ಅಕ್ಟೋಬರ್ 11, 1987) ಪ್ರಕರಣವು ಸುಮಾರು 42 ವರ್ಷಗಳಿಂದ ಇತ್ಯರ್ಥವಾಗದೇ ಹಾಗೆ ಉಳಿದುಕೊಂಡಿದೆ.

2.ಎಂ.ಸಿ. ಮೆಹ್ತಾ ವಿ. ಯೂನಿಯನ್ ಆಫ್ ಇಂಡಿಯಾ (ತಾಜ್‌ ಟ್ರಾಪೀಜಿಯಂ) ತಾಜ್ ಮಹಲ್ ಮತ್ತು ಪರಿಸರ ಸಂರಕ್ಷಣೆ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಕರಣವು ಏಪ್ರಿಲ್ 16, 1985ರಲ್ಲಿ ಸಲ್ಲಿಕೆಯಾಗಿ, ಸುಮಾರು 39 ವರ್ಷಗಳಿಂದ ಬಾಕಿಯಿದೆ.

  1. ಸೆಂಟ್ರಲ್ ಬೋರ್ಡ್ ಆಫ್ ದಾವೂದಿ ಬೋಹ್ರಾ ಕಮ್ಯೂನಿಟಿ‌ ವಿ. ಮಹಾರಾಷ್ಟ್ರ ಸರಕಾರ ಪ್ರಕರಣವು ಫೆಬ್ರವರಿ 28,1986ರಲ್ಲಿ ದಾಖಲಾಗಿದ್ದು, 38 ವರ್ಷ ಕಳೆದಿದ್ದರೂ ಹಾಗೇ ಇದೆ.
  2. ಅಸ್ಸಾಂ ಮತ್ತು ಅದಕ್ಕೆ ಹತ್ತಿರದ ರಾಜ್ಯಗಳ ನಡುವಿನ ಗಡಿಭಾಗ ವಿವಾದ ಸಂಬಂಧ, ಅಸ್ಸಾಂ ಸರಕಾರ ವಿ. ಯೂನಿಯನ್ ಆಫ್ ಇಂಡಿಯಾ ಪ್ರಕರಣವು ಜುಲೈ 20, 1989‌ ಆರಂಭಗೊಂಡು, 35 ವರ್ಷಗಳಿಂದ ಇತ್ಯರ್ಥಕ್ಕೆ ಕಾಯುತ್ತಿದೆ.

ಇಂತಹ ಪ್ರಕರಣಗಳು ಇಷ್ಟು ವರ್ಷಗಳ ಕಾಲ ಬಾಕಿಯಿರಲು ಹಲವು ಕಾರಣಗಳಿದ್ದು, ಹಲವಾರು ಪ್ರಕರಣಗಳು ಗಂಭೀರ ಸಂವಿಧಾನಾತ್ಮಕ ಪ್ರಶ್ನೆಗಳನ್ನು ಹೊಂದಿದ್ದು, 5 ಅಥವಾ ಹೆಚ್ಚು ನ್ಯಾಯ ಮೂರ್ತಿಗಳಿರುವ ಸಂವಿಧಾನಿಕ ಪೀಠ ಬೇಕಾಗುತ್ತದೆ. ಇವುಗಳನ್ನು ಸಮಯಕ್ಕೆ ಸರಿಯಾಗಿ ರೂಪಿಸುವುದು ಅಪರೂಪ. ಜೊತೆಗೆ, ಅತಿಯಾದ ಬಾಕಿ ಉಳಿದ ಪ್ರಕರಣಗಳ ಸಂಖ್ಯೆಗಳು (Backlog ) ನ್ಯಾಯ ವಿಳಂಬಕ್ಕೆ ಕಾರಣಗಳಲ್ಲೊಂದಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 69000ಕ್ಕೂ ಹೆಚ್ಚು ಪ್ರಕರಣಗಳು ಬಾಕಿಯಿವೆ ಎನ್ನಲಾಗಿದೆ.

ಕೆಲವೊಂದು ಪ್ರಕರಣಗಳಲ್ಲಿ ಸಮಯದೊಂದಿಗೆ ಕಾನೂನು ಬದಲಾಗುತ್ತದೆ, ಅದರ ಕಾರಣದಿಂದ ಹೊಸ ರೀತಿಯ ಚರ್ಚೆ ಬೇಕಾಗುತ್ತದೆ. ಪ್ರಕರಣಗಳು ಸಮಯ ಬೇಡುತ್ತವೆ. ಇನ್ನುಳಿದಂತೆ ವಕೀಲ ರಿಂದ ಅಥವಾ ಪೀಠದ ಅಲಭ್ಯತೆಯ ಕಾರಣದಿಂದಲೂ ಮುಂದೂಡುವುದು ಸಾಮಾನ್ಯ. ಹೊಸ ಅಥವಾ ತುರ್ತು ಪ್ರಕರಣಗಳಿಗೆ ಆದ್ಯತೆ ಕೊಡಲಾಗುತ್ತದೆ, ಹಳೆಯವುಗಳು ಹಿಂದೆ ಹೋಗುತ್ತವೆ. ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ನ್ಯಾಯದಾನದ ವಿಳಂಬ ಪದ್ಧತಿ ತಪ್ಪಿತು ಅಂತಾದರೆ, ಈ ಚರ್ಚೆಯು ಬಹು ಆರೋಗ್ಯಪೂರ್ಣ ಎನಿಸಿಕೊಳ್ಳುವುದು.