Gururaj Gantihole Column: ರಾಷ್ಟ್ರೀಯ ಭದ್ರತೆಯೂ ರಾಜಕೀಯ ವಿಷಯವಾದಾಗ !
ಕಾಲಚಕ್ರ, ಎಲ್ಲವನ್ನೂ ಒರೆಗೆ ಹಚ್ಚುತ್ತದೆ. ಸತ್ಯ ಶಾಶ್ವತವಾಗಿದ್ದು, ಮುಚ್ಚಿಡಲು ಸಾಧ್ಯವಿಲ್ಲ ಎಂಬ ಮಾತಿನಂತೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಮಾಡಿದ್ದ ಪಿತೂರಿ ಪಾಕಿಸ್ತಾನಕ್ಕಿಂತ ಏನು ಕಡಿಮೆಯಿರಲಿಲ್ಲ! ಈಗ, ಇನ್ನೊಬ್ಬ ದಾಳಿಕೋರ ರಾಣಾ ಎಂಬಾತನನ್ನು ಅಮೆರಿಕಾದ ಜೈಲಿ ನಿಂದ ಹೆಡೆಮುರಿ ಕಟ್ಟಿ ಭಾರತಕ್ಕೆ ತರಲಾಗಿದೆ. ಮುಂಬೈ ದಾಳಿಯ ಸತ್ಯಗಳು ಇನ್ನಷ್ಟು ಹೊರಬರಲಿವೆ.


ಗಂಟಾಘೋಷ
ದೇಶದಲ್ಲೇ ಅತ್ಯಂತ ಸುಸಜ್ಜಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಶೀಘ್ರ ಸಾರಿಗೆಗೆ ಮೋನೋ-ಮೆಟ್ರೋ ರೈಲು ಸೌಲಭ್ಯಗಳ ಜೊತೆಗೆ, ಅಂತರಾಷ್ಟ್ರೀಯ ಮಟ್ಟದ ಹೆಸರು, ಆರ್ಥಿಕತೆ, ಸೇನೆ, ವ್ಯಾಪಾರ, ವಹಿವಾಟುಗಳ ವಿಚಾರದಲ್ಲಿ ಸದಾ ಮುಂದಿರುವ ಮುಂಬೈ ನಗರಕ್ಕೆ ಭಯೋತ್ಪಾದಕರ, ದೇಶದ್ರೋಹಿಗಳ ಕಣ್ಣು ಬಿದ್ದದ್ದು ಸಹಜ. ಹೀಗಾಗಿ ಭಯೋತ್ಪಾದಕರ ದಾಳಿಗೆ ಹೆಚ್ಚು ಬಾರಿ ಗುರಿಯಾದ ಭಾರತದ ನಗರ ಎಂಬ ಅಪಖ್ಯಾತಿ ಕೂಡ ಮುಂಬೈ ನಗರಕ್ಕಿತ್ತು. ವಿವಿಧ ಉಗ್ರ ಸಂಘಟನೆಗಳು ಭಾರತದಲ್ಲಿ ದಾಳಿ ನಡೆಸಿದ್ದು ಅವುಗಳಲ್ಲಿ; 1993ರ ಮಾರ್ಚ್ 12ರಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಬರೋಬ್ಬರಿ 257 ಜನ ಆಹುತಿಯಾಗಿ, 700 ಜನ ಗಾಯಾಳು ಗಳಾಗಿದ್ದರು. 2002ರ ಡಿಸೆಂಬರ್ 6ರಂದು ಘಾಟ್ಕೊಪರ್ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಅಸುನೀಗಿ, ಸುಮಾರು 28 ಜನ ಗಾಯಗೊಂಡಿದ್ದರು.
2003ರ ಜನವರಿ 27ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯೀಯವರು ಮುಂಬೈಗೆ ಭೇಟಿ ಕೊಡುವ ಮುನ್ನಾ ದಿನ ವಿಲೇ ಪಾರ್ಲೆ ರೈಲು ನಿಲ್ದಾಣದಲ್ಲಿ ಬೈಸಿಕಲ್ ಬಾಂಬ್ ಒಂದು ಸ್ಫೋಟವಾಗಿ ಓರ್ವ ವ್ಯಕ್ತಿ ಸತ್ತು, 25 ಜನ ಗಾಯಾಳುಗಳಾದರು. 2003ರ ಮಾರ್ಚ್ 13ರಂದು ಮುಂಬೈನ ಮುಲುಂಡ್ ರೈಲು ನಿಲ್ದಾಣದ ಬಳಿ ಚಲಿಸುತ್ತಿರುವ ರೈಲಿನ ಒಂದು ಬೋಗಿಯಲ್ಲಿ ಬಾಂಬ್ ಸ್ಫೋಟವಾಗಿ 10 ಜನ ಸತ್ತು, ಸುಮಾರು 70 ಜನ ಗಾಯಾಳುಗಳಾಗುತ್ತಾರೆ.
ಇದನ್ನೂ ಓದಿ: Gururaj Gantihole Column: ಆಧುನಿಕ ಮಂಗಳೂರು ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯ
2003ರ ಜುಲೈ 28ರಂದು ಮುಂಬೈ ನಗರ ಸಾರಿಗೆಗೆ ಸೇರಿದ ಬಸ್ ಒಂದು ಘಾಟ್ಕೋಪರ್ ಎಂಬಲ್ಲಿ ಚಲಿಸುತ್ತಿದ್ದಾಗ ಬಸ್ ಒಳಗೆ ಬಾಂಬ್ ಸ್ಫೋಟವಾಗಿ 4 ಜನ ಸತ್ತು, ಸುಮಾರು 32 ಜನ ಗಾಯಾಳು ಗಳಾಗುತ್ತಾರೆ. ಅದೇ ವರ್ಷದ ಆಗಸ್ಟ್ 25ರಂದು ದಕ್ಷಿಣ ಮುಂಬೈಯಲ್ಲಿ ಸುಪ್ರಸಿದ್ಧ ಗೇಟ್ ವೇ ಆಫ್ ಇಂಡಿಯಾ ಹತ್ತಿರ ಒಂದು ಸ್ಫೋಟ, ಮತ್ತೊಂದು ಜಾವೇರಿ ಬಜಾರ್ ಬಳಿ ಸ್ಫೋಟ ನಡೆದು, ಸುಮಾರು 44 ಜನಗಳನ್ನು ಬಲಿ ಪಡೆದು, 150 ಜನ ಗಾಯಗೊಳ್ಳುತ್ತಾರೆ.
2006ರ ಜುಲೈ11 ರಂದು ಬರೀ 11 ನಿಮಿಷಗಳ ಅಂತರದಲ್ಲಿ ಮುಂಬೈ ಸಬ್ ಅರ್ಬನ್ ರೈಲ್ವೆಯ ವಿವಿಧ ಸ್ಥಳಗಳಲ್ಲಿ ಏಳು ಬಾಂಬುಗಳನ್ನು ಸ್ಫೋಟಿಸಲಾಗಿದೆ. ಈ ಸ್ಫೋಟದಲ್ಲಿ ವಿದೇಶದ 22 ಜನರೂ ಸೇರಿ ಒಟ್ಟು 209 ಜನ ಮೃತಪಟ್ಟು, 700 ಜನರು ಗಾಯಗೊಂಡಿದ್ದರು. ಮುಂಬೈ ಪೋಲಿಸರ ತನಿಖಾ ಹೇಳಿಕೆ ಪ್ರಕಾರ ಲಷ್ಕರ್-ಎ-ತಯ್ಬಾ ಮತ್ತು ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿಗಳ ಚಳವಳಿ (ಸಿಮಿ) ಘಟನೆಗಳು ಬಾಂಬ್ ಸೋಟಿಸಲು ಮುಂದಾಳತ್ವ ವಹಿಸಿದ್ದವು.
ಹಾಗೆಯೇ, ಏಕೆ ರೈಫಲ್ಸ್, ಆರ್‌ಡಿಎಕ್ಸ್ , ಕೈಬಾಂಬುಗಳಂತಹ ಶಸ್ತ್ರಾಸ್ತ್ರಗಳನ್ನು ಹೊತ್ತು 12 ಜನ ಪಾಕಿಸ್ತಾನದ ಲಷ್ಕರ್ ತಯ್ಬಾಗೆ ಸೇರಿದ ಉಗ್ರರು ‘ಅಲೋಸ್’ ದೋಣಿಯ ಮೂಲಕ ಮೋಸದಿಂದ ಒಳನುಸುಳಿ, ಮುಂಬೈ ನಗರವನ್ನು ಮೂರು ದಿನಗಳ ಕಾಲ ಅಕ್ಷರಶಃ ಒತ್ತೆಯಾಗಿಟ್ಟುಕೊಂಡಿದ್ದರು. ನವೆಂಬರ್ 26 - 2008ರ ರಾತ್ರಿ 9.30ಕ್ಕೆ ಶುರುವಾದ ಉಗ್ರರ ದಾಳಿಯು ನವೆಂಬರ್ 29ರ ವರೆಗೂ ನಡೆಯಿತು.
ನಗರದ ಲಿಯೊಫೋಲ್ಡ್ ಕೆಫೆ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ , ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಒಬೆರಾಯ್ ಟ್ರೈಡೆಂಟ್, ನಾರಿಮನ್ ಪಾಯಿಂಟ್, ಕಾಮಾ ಆಸ್ಪತ್ರೆ, ನಾರಿ ಮನ್ ಹೌಸ್, ಮೆಟ್ರೋ ಸಿನಿಮಾ ಮತ್ತು ಸೈಂಟ್ ಕ್ಸೇವಿಯರ್ ಕಾಲೇಜ್ ನಂತಹ ಪ್ರಮುಖ ಜಾಗಗಳಲ್ಲಿ ದಾಳಿಗಳು ನಡೆದವು.
ದಾಳಿಯ ಫಲವಾಗಿ ಸರಕಾರಿ ಅಧಿಕಾರಿಗಳು, ಸಿಪಾಯಿಗಳು, ಸಾರ್ವಜನಿಕರೂ ಸೇರಿದಂತೆ 164 ಜನ ಪ್ರಾಣ ಕಳೆದುಕೊಂಡರು, 400ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿ ಚಿಕಿತ್ಸೆ ಪಡೆದರು. ಈ ಘಟನೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಆಂತರಿಕ ಭದ್ರತಾ ವ್ಯವಸ್ಥೆಯ ಬಗ್ಗೆ ಚರ್ಚೆ ಗಳನ್ನು ಹುಟ್ಟುಹಾಕಿತು. ಇಷ್ಟೆಲ್ಲದರ ನಡುವೆ, ಸೆಪ್ಟೆಂಬರ್ 11ರ ದಾಳಿಯನ್ನು ಲಷ್ಕರ್ ತಯ್ಬಾ ಆಯೋಜಿಸಿದ್ದು, ಇದರ ಮುಖ್ಯಸ್ಥ ಹಫೀಜ್ ಮಹಮ್ಮದ್ ಸಯೀದ್ ಆಗಿದ್ದಾನೆ.
ಝಾಫರ್ ಇಕ್ಬಾಲ್ ಶಹಬಾಜ, ಅಬ್ದುಲ್ ರೆಹಮಾನ್ ಮಕ್ಕಿ, ಝಕಿಯರ್ ರೆಹಮಾನ್ ಲಖ್ವಿ ಸೇರಿದಂತೆ 17ಕ್ಕೂ ಹೆಚ್ಚು ಪ್ರಮುಖರು ಸೇರಿ ಲಷ್ಕರ್ ತಯ್ಬಾ ಮತ್ತು ಜಮಾತ್ ಉದ್ ದಾವಾ ಎಂಬ ಇತರೆ ಅನೇಕ ಸಂಘಟನೆ ಗಳನ್ನು ಹುಟ್ಟುಹಾಕಿದ್ದು, ಇವುಗಳ ಉದ್ದೇಶ ಜಿಹಾದ್ ಸಾರುವುದು ಮತ್ತು ಇದಕ್ಕೆ ಚೀನಾ, ಪಾಕಿಸ್ತಾನಗಳು ಎಲ್ಲ ರೀತಿಯ ನೆರವು ನೀಡುತ್ತಿದ್ದುದನ್ನು ತನಿಖಾ ಸಂಸ್ಥೆಗಳು ಬಹಿರಂಗಪಡಿಸಿವೆ.
ಜೈಶೆ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಹರ್ಕತ್ -ಉಲ್-ಜಿಹಾದ್ ಅಲ್-ಇಸ್ಲಾಮಿ, ಹರ್ಕತ್-ಉಲ್-ಮುಜಾಹಿದ್ದೀನ್, ಅನ್ಸಾರ್ ಘಜ್ವತ್-ಉಲ್-ಹಿಂದ್, ಉಲ್-ಬದ್ರ್, ಉಲ್-ಖೈದಾ, ಅಲ್ ರಶೀದ್ ಟ್ರಸ್ಟ್, ಇಂಡಿಯನ್ ಮುಜಾಹಿದ್ದೀನ್ ಮತ್ತು ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ ನಂತಹ ಅನೇಕ ಸಂಘಟನೆಗಳು ಕುಕೃತ್ಯದಲ್ಲಿ ತೊಡಗಿರುವ ಗುಂಪುಗಳಾಗಿವೆ ಎಂದು ಗುಪ್ತಚರ ಸಂಸ್ಥೆಗಳು ಹೇಳುತ್ತವೆ.
ಇವುಗಳು ಸೇರಿದಂತೆ ಇನ್ನೂ ನೂರಾರು ಸಂಘಟನೆಗಳು, ಪಾಕಿಸ್ತಾನ ಸೇನೆಗೆ ಸಂಬಂಧಿಸಿದ ಯುನೈಟೆಡ್ ಜಿಹಾದ್ ಕೌನ್ಸಿಲ್ ಅಥವಾ ಮುತ್ತಾಹಿದಾ ಜಿಹಾದ್ ಕೌನ್ಸಿಲ್ (ಎಂಜೆಸಿ) ಪಾಕ್ ಮಿಲಿಟರಿ ನೆರಳಲ್ಲಿದ್ದು, ಇದರ ಮೂಲಕವೇ ಉಗ್ರಕೃತ್ಯಗಳಿಗೆ ತರಬೇತಿ ನೀಡಿ, ಹಣದ ಸಹಾಯ ನೀಡುವ ಮೂಲಕ ದಾಳಿಗಳನ್ನು ಪೋಷಿಸುತ್ತ ಬರುತ್ತಿದೆ. ಉಗ್ರರಿಗೆ ತರಬೇತಿ ನೀಡುವ ಮತ್ತು ನಿರ್ವಹಿಸುವ ಮುಖ್ಯಸ್ಥನಾಗಿ ಸಯ್ಯದ್ ಸಲಾಹುದ್ದೀನ್ (ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ) ಕಾರ್ಯನಿರ್ವಹಿಸುತ್ತಿದ್ದಾನೆ.
ಇವರೆಲ್ಲರೂ ಜಾಗತಿಕ ಮಟ್ಟದಲ್ಲಿ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಗಳಾಗಿದ್ದಾರೆ. ಎಂಜೆಸಿಯಲ್ಲಿ ಇನ್ನೂ 14 ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಪಾಕ್ ಸೇನೆ ಮತ್ತು ಐಎಸ್‌ಐ ನಿಯಂತ್ರಣದಲ್ಲಿವೆ ಎನ್ನಲಾಗಿದೆ. ಇಷ್ಟೆಲ್ಲ ಉಗ್ರ ಸಂಘಟನೆಗಳ ಮಾಹಿತಿಗಳು ನಮ್ಮ ತನಿಖಾ ಏಜೆನ್ಸಿ ಬಳಿಯಿದ್ದರೂ, ಮುಂಬೈ ದಾಳಿ ನಡೆಯುತ್ತದೆ ಮತ್ತು ಬಹುದೊಡ್ಡ ಹಾನಿ ಯಾಗುತ್ತದೆ ಎಂಬ ಮಾಹಿತಿ ಅಮೆರಿಕ ಸಿಐಎಗೆ ಗೊತ್ತಿತ್ತು.
ಈ ಸೂಕ್ಷ್ಮ ಮಾಹಿತಿಯನ್ನು ಭಾರತದ ಭದ್ರತಾ ಸಂಸ್ಥೆಗಳೊಂದಿಗೆ ಹಂಚಿಕೊಂಡಿರುವ ಸಂಭವವೂ ಹೆಚ್ಚು. ಹೀಗಿದ್ದರೂ, ದಾಳಿಯ ಕುರಿತು, ತೀವ್ರ ತನಿಖೆ ನಡೆಸಬೇಕಾದ ಸರಕಾರ ದೇಶದ ಭದ್ರತಾ ವಿಚಾರವನ್ನು ಅಂದಿನ ಆಡಳಿತ ಪಕ್ಷ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಂಡಿತು. ಹಿಂದೂ ಭಯೋತ್ಪಾದನೆಯ ಹೆಸರನ್ನು ಹುಟ್ಟು ಹಾಕಿತಲ್ಲದೆ, ಬಿಜೆಪಿ ಮತ್ತು ಅದರ ಮಾತೃ ಸಂಘಟನೆ ಆರ್‌ಎಸ್‌ಎಸ್ ಸಂಸ್ಥೆಯ ತಲೆಗೆ ಕಟ್ಟಲು ನೋಡಿತು. ಹಿಂದೂಗಳನ್ನೇ ಉಗ್ರರೆಂದು ಬಿಂಬಿಸಲು ಯತ್ನಿಸಿತು.
ಮುಂಬೈ ದಾಳಿ ನಡೆಸಿದ ಬಹುತೇಕ ಉಗ್ರರು, ತಮ್ಮ ಕೈಗಳಿಗೆ ಕೇಸರಿ, ಕೆಂಪು ಬಣ್ಣದ ದಾರಗಳನ್ನು ಕಟ್ಟಿಕೊಂಡಿದ್ದು ಮತ್ತು ಕಾಂಗ್ರೆಸ್ ಪಕ್ಷದ ಸಂಚು ಹೊಂದಿಕೊಳ್ಳುತ್ತಿದ್ದುದನ್ನು ಗಮನಿಸಿದರೆ, ಕಾಂಗ್ರೆಸ್ - ಪಾಕ್ ಉಗ್ರರ ವಿಚಾರ ಒಂದೇ ಆಗಿತ್ತು ಎಂಬುದನ್ನು ಯಾರಾದರೂ ಊಹಿಸಬಹುದು. ರಾಜಕೀಯ ಕಾರಣಕ್ಕೆ ಪರಸ್ಪರರು ದೂರುವುದು, ದೂಷಿಸುವುದು, ನಿಯಮಬದ್ಧ ಹೋರಾಟ ಮಾಡುವುದು ಸರ್ವೇ ಸಾಮಾನ್ಯ.
ಆದರೆ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಷಡ್ಯಂತ್ರ ಮಾಡುತ್ತ ಎದುರಾಳಿಗಳನ್ನು ರಾಜಕೀಯವಾಗಿ ಎದುರಿಸದೆ, ನಾಶಮಾಡಲು ಯತ್ನಿಸುವುದು ಮಾತ್ರ ಅಕ್ಷಮ್ಯ. ಹುತಾತ್ಮ, ಮಹಾರಾಷ್ಟ್ರದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ತುಕಾರಾಮ ಓಂಬ್ಳೆ ಎಂಬ ಮಾಜಿ ಸೈನಿಕ, ಒಬ್ಬ ಕಸಬ್‌ನನ್ನು ಹಿಡಿಯದಿದ್ದರೆ ಸಮಸ್ತ ಹಿಂದೂಗಳು, ಹಿಂದೂ ಅನುಯಾಯಿಗಳು, ರಾಷ್ಟ್ರಭಕ್ತರು, ರಾಷ್ಟ್ರೀಯ ಸ್ವಯಂ ಸೇವಕರು ಸೇರಿದಂತೆ ಬಹುಸಂಖ್ಯಾತ ಹಿಂದೂಗಳು, ತಮ್ಮದೇ ನೆಲದಲ್ಲಿ ತಾವೇ ದೇಶದ್ರೋಹಿಗಳಾಗಿ, ಉಗ್ರಗಾಮಿಗಳಾಗಿ ಜಗತ್ತಿನಾದ್ಯಂತ ತಲೆತಗ್ಗಿಸಿ, ಮಾಡದ ಅಪರಾಧವನ್ನು ಹೊತ್ತು ತಿರುಗಾಡಬೇಕಿತ್ತು.
ಹಾಗಿತ್ತು, ಅಂದಿನ ಕಾಂಗ್ರೆಸ್ ಪಕ್ಷದ ಆಡಳಿತ ಸರಕಾರದಲ್ಲಿನ ದೊಡ್ಡ ದೊಡ್ಡ ವ್ಯಕ್ತಿಗಳು ಸೇರಿ ಮಾಡಿದ ಕುತಂತ್ರ! ಇದರ ಭಾಗವಾಗಿ ಇಸ್ಲಾಂ ಜಿಮ್ಖಾನಾದಲ್ಲಿ ನಡೆದ ಗೋಷ್ಠಿಯಲ್ಲಿ ಅಜೀಜ್ ಎಂಬಾತ ಬರೆದ, ಆರ್‌ಎಸ್‌ಎಸ್ ಷಡ್ಯಂತ್ರ- 9/11 ಎಂಬ ಪುಸ್ತಕವನ್ನು ಬಿಡುಗಡೆಗೊಳಿಸ ಲಾಯಿತು. ಇಡೀ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದು ಕಾಂಗ್ರೆಸ್ ಮುಖಂಡ ದಿಗ್ವಿಜಯಸಿಂಗ್. ಇದಕ್ಕೆ ಪೂರಕವಾಗಿ ನಿಂತಿದ್ದವರಲ್ಲಿ ಪಿ.ಚಿದಂಬರಂ, ಸುಶೀಲ್ ಕುಮಾರ್ ಪ್ರಮುಖರು.
ತದನಂತರ, ಆ ಪುಸ್ತಕದ ಲೇಖಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಬಗ್ಗೆ ತಪ್ಪಾಗಿ ಬರೆದಿದ್ದಕ್ಕೆ ಕ್ಷಮೆ ಕೋರಿದ್ದು, 2011ರ ಜನೇವರಿ 29ರಂದು ಇಂಡಿಯನ್ ಎಕ್ಸ್ ಪ್ರೆಸ್ ಸೇರಿದಂತೆ ಬಹುತೇಕ ಪತ್ರಿಕೆ, ಮಾಧ್ಯಮಗಳಲ್ಲಿ ಪ್ರಕಟವಾಯಿತು. ಈ ಮೂಲಕ, ವಿಶ್ವಮಟ್ಟದಲ್ಲಿ ಕಾಂಗ್ರೆಸ್ ತನ್ನ ಕೈ ಸುಟ್ಟುಕೊಂಡಿತು ಕೂಡ!
ಇಷ್ಟೆಲ್ಲ ಪಿತೂರಿ, ಹಿಂದೂ ಉಗ್ರವಾದಿತನ ಎಂಬ ಹೊಸ ಸಿದ್ಧಾಂತವನ್ನು ಹುಟ್ಟು ಹಾಕಲು ಯತ್ನಿಸಿದ ಹಿರಿಯ ಕಾಂಗ್ರೆಸ್ ನಾಯಕರ ಎಲ್ಲ ಕುತಂತ್ರಗಳನ್ನು ಅಂದಿನ ಸರ್ಕಾರದ ಮುಖ್ಯಸ್ಥೆ ಯಾಗಿದ್ದ ಸೋನಿಯಾ ಗಾಂಧಿ, ಕಂಡೂ ಕಾಣದವರಂತೆ ಇದ್ದದ್ದು ಪರೋಕ್ಷ ಬೆಂಬಲವಲ್ಲದೇ ಮತ್ತೇನು ಎಂದು ಕಾಂಗ್ರೆಸ್ ಪಕ್ಷದಲ್ಲಿನ ದೇಶಭಕ್ತ ಕಾರ್ಯಕರ್ತರೂ ಸಹ ಪ್ರಶ್ನೆ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ!
ಕಾಶ್ಮೀರದಲ್ಲಿ ಭದ್ರತಾಪಡೆಗಳು ಬುರ್ಹಾನ್ ವಾನಿ ಎಂಬ ಜಿಹಾದಿಯನ್ನು ಗುಂಡಿಕ್ಕಿ ಕೊಂದಾಗ, ಆತನ ಅಂತ್ಯಕ್ರಿಯೆಗೆ ಸೇರಿದ್ದ ಲಕ್ಷೋಪಲಕ್ಷ ಜನರನ್ನು ನೋಡಿ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ದೇಶದ ಗುಪ್ತಚರ ಇಲಾಖೆಗಳು ಏನು ಮಾಡುತ್ತಿವೆ, ಇಷ್ಟೆಲ್ಲ ಯುವಕರು ಅದ್ಹೇಗೆ ದಾರಿತಪ್ಪಿ ಉಗ್ರರ ಹಿಡಿತಕ್ಕೆ ಸಿಕ್ಕುತ್ತಿದ್ದಾರೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಿದ್ದ ಸರಕಾರವು, ಸೂಕ್ಷ್ಮ ಸಂವೇದನೆಯನ್ನು ಮರೆತು ರಾಷ್ಟ್ರೀಯ ಹಿತವನ್ನು ಬದಿಗಿಟ್ಟು ತನ್ನ ಅಧಿಕಾರವನ್ನು ಮುಗ್ಧ ಹಿಂದೂಗಳ ಮೇಲೆ, ರಾಜಕೀಯ ವ್ಯಕ್ತಿಗಳ ಮೇಲೆ, ರಾಜಕೀಯ ಪಕ್ಷಗಳ ಮೇಲೆ ಹೀನ ಕೃತ್ಯಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದು ಮಾತ್ರ ಅತ್ಯಂತ ಅವಮಾನಕರ.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಬಳಿಕ ಇಂತಹ ಒಂದೇ ಒಂದು ಉಗ್ರ ದಾಳಿ ನಡೆಯದಿರುವುದು, ಬಲಿಷ್ಠ ಭಾರತ ಮತ್ತು ಸಮರ್ಥ ನಾಯಕತ್ವದ ಸಾಮರ್ಥ್ಯವನ್ನು ತೋರಿಸುತ್ತದೆ. ಶಕ್ತಿಶಾಲಿ ಸೇನೆ, ಗುಪ್ತಚರ ಇಲಾಖೆಗಳು ಬಲಿಷ್ಠವಾಗಿ ಬೆಳೆದಿರುವ ಸೂಚನೆ ತೋರಿಸುತ್ತದೆ. ಹೆಜ್ಜೆಹೆಜ್ಜೆಗೂ ದೇಶದೊಳಗೆ ಭಯ ಸೃಷ್ಟಿಸುತ್ತಿದ್ದ ಪಾಕ್, ನಮ್ಮ ವೀರಯೋಧ ಅಭಿನಂದನ್ ಅವರನ್ನು ಬಿಡುಗಡೆಗೊಳಿಸುವಾಗ, ಇಡೀ ಪಾಕ್ ಸೇನೆ, ಪ್ರಧಾನಿಯ ಕಾಲುತೊಡೆ ಗಳು ಗಡಗಡ ನಡುಗುತ್ತಿದ್ದವೆಂಬುದನ್ನು ಆ ದೇಶದ ಸಂಸತ್ತಿನಲ್ಲೇ ಒಪ್ಪಿಕೊಳ್ಳುವ ಮೂಲಕ, ಗೌರವಯುತವಾಗಿ ಅಭಿನಂದನ್ ಅವರನ್ನು ಬಿಟ್ಟು ಕಳಿಸಿದ್ದು ಮೋದಿ ಸರಕಾರದ ತಾಕತ್ತು ತೋರಿಸುತ್ತದೆ.
ಇದೇ 2025ರ ಏಪ್ರಿಲ್ 4ರಂದು ಉಮೀದ್ (ವಕ್ಫ್) ಬಿಲ್ ಮಂಡನೆಯ ಸಂದರ್ಭದಲ್ಲಿ ಕೇಂದ್ರ ಗೃಹಮಂತ್ರಿಗಳಾದ ಅಮಿತ್ ಶಾ ಅವರು ಗಂಭೀರವಾಗಿಯೇ, “ಪಾಕ್ ಪ್ರೇರಿತ ಉಗ್ರದಾಳಿಯನ್ನು ಆರೆಸ್ಸೆಸ್ ಮತ್ತು ಬಿಜೆಪಿಗೆ ಕಟ್ಟಲು ಏನೆಲ್ಲ ಮಾಡಬೇಕೋ ಅಷ್ಟೂ ಪ್ರಯತ್ನ ಮಾಡಿದ್ದೀರಿ ಮತ್ತು ವಿಫಲವಾಗಿದ್ದೀರಿ.
ತಾಕತ್ತಿದ್ದರೆ, ಅದನ್ನು ಈ ಸದನದ ಸಾಬೀತು ಮಾಡಿ" ಎಂದು ದಿಗ್ವಿಜಯಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಸದನ ದಾಖಲೆಗಳಲ್ಲಿ ಸೇರುವ ಮೂಲಕ ಇತಿಹಾಸ ಸೃಷ್ಟಿಸಿತು. ಕಾಲಚಕ್ರ, ಎಲ್ಲವನ್ನೂ ಒರೆಗೆ ಹಚ್ಚುತ್ತದೆ. ಸತ್ಯ ಶಾಶ್ವತವಾಗಿದ್ದು, ಮುಚ್ಚಿಡಲು ಸಾಧ್ಯವಿಲ್ಲ ಎಂಬ ಮಾತಿನಂತೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಮಾಡಿದ್ದ ಪಿತೂರಿ ಪಾಕಿಸ್ತಾನಕ್ಕಿಂತ ಏನು ಕಡಿಮೆಯಿರಲಿಲ್ಲ!
ಈಗ, ಇನ್ನೊಬ್ಬ ದಾಳಿಕೋರ ರಾಣಾ ಎಂಬಾತನನ್ನು ಅಮೆರಿಕಾದ ಜೈಲಿನಿಂದ ಹೆಡೆಮುರಿ ಕಟ್ಟಿ ಭಾರತಕ್ಕೆ ತರಲಾಗಿದೆ. ಮುಂಬೈ ದಾಳಿಯ ಸತ್ಯಗಳು ಇನ್ನಷ್ಟು ಹೊರ ಬರಲಿವೆ. ಯಾವತ್ತೂ ‘ರಾಷ್ಟ್ರ ಮೊದಲು’ ಎನ್ನುತ್ತ ರಾಷ್ಟ್ರೀಯ ಹಿತವನ್ನೇ ಬಯಸುತ್ತ, ರಾಷ್ಟ್ರೀಯ ಭದ್ರತೆಯನ್ನು ಯಾವತ್ತೂ ರಾಜಕೀಯದಲ್ಲಿ ಬೆರೆಸದ ಪ್ರಧಾನಿ ಮೋದಿ, ಇಂದು ನಾಯಕರಾಗಿ ವಿಶ್ವಮಟ್ಟದಲ್ಲಿ ದ್ದರೆ, ದೇಶದ ಭದ್ರತೆಯಲ್ಲೂ ರಾಜಕೀಯ ಲಾಭ ಪಡೆಯಲು ವಾಮಮಾರ್ಗ ಅನುಸರಿಸಿದ ವರನ್ನು ಜನರು ಸಹ ಎಲ್ಲಿಡಬೇಕೋ ಅಲ್ಲಿಯೇ ಇಟ್ಟಿದ್ದಾರೆನಿಸದಿರದು!