ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Adarsh Shetty Column: ಸಮಾಜಕ್ಕೆ ಮಾರಕ ಹನಿಟ್ರ್ಯಾಪ್‌ ಘಟನೆಗಳು

ಇತ್ತೀಚೆಗೆ ಕರಾವಳಿ ಭಾಗದಲ್ಲಿ ನಡೆದ ಅಭಿಷೇಕ್ ಆಚಾರ್ಯ ಸಾವಿನ ಪ್ರಕರಣ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ, ರಾಜಕಾರಣಿಯೋರ್ವರ ಸಹೋದರನ ಆತ್ಮಹತ್ಯೆ ಪ್ರಕರಣ, ಬಸ್ ಮಾಲಕರೋರ್ವರ ಹತ್ಯೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಹೆಣ್ಣು ಮಕ್ಕಳನ್ನು ಮುಂದಿಟ್ಟು ಕೊಂಡು ನಡೆಸುವ ದಂಧೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ.

Adarsh Shetty Column: ಸಮಾಜಕ್ಕೆ ಮಾರಕ ಹನಿಟ್ರ್ಯಾಪ್‌ ಘಟನೆಗಳು

-

Ashok Nayak Ashok Nayak Oct 30, 2025 10:00 AM

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ನಮ್ಮ ಸಮಾಜದಲ್ಲಿ ಹಾಗೂ ದೈನಂದಿನ ವ್ಯವಸ್ಥೆಯಲ್ಲಿ ಹಲವಾರು ಅಪರಾಧ ಚಟುವಟಿಕೆ ಗಳನ್ನು ಕಾಣುತ್ತಿದ್ದೇವೆ. ಕಳೆದ ಕೆಲ ವರ್ಷಗಳಿಂದಂತೂ ವಂಚನೆ, ಅಪರಾಧ, ಅಮಾನವೀಯ ಘಟನೆಗಳಿಗೆ ಲಗಾಮೇ ಇಲ್ಲದಂತಾಗಿದೆ. ಇದಕ್ಕೆ ನಮ್ಮ ಕಾನೂನಿನಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಯೋ ಅಥವಾ ಮಾದಕ ವಸ್ತುಗಳ ಪ್ರೇರಣೆಯೋ, ರಾಜಕೀಯ, ಪ್ರಭಾವಿ ಇಲಾಖೆ, ಪ್ರಭಾವಿಗಳ ಕೃಪಾಕಟಾಕ್ಷವೋ, ಕಾನೂನಿನ ಭಯದ ಕೊರತೆಯೋ ಆ ದೇವರೇ ಬಲ್ಲ ಎಂಬಂತಿದೆ ಸದ್ಯದ ಪರಿಸ್ಥಿತಿ.

ದುಡ್ಡು ಗಳಿಸಲು, ಮೋಜು ಮಸ್ತಿಗಾಗಿ, ಐಷಾರಾಮಿ ಬದುಕಿಗಾಗಿ ಮನುಷ್ಯ ಯಾವ ಹಂತಕ್ಕೂ ಇಳಿಯಲು ಹೇಸುವವನಲ್ಲ ಎಂಬಂತಿದೆ. ಮಾನವೀಯತೆ, ಮನುಷತ್ವ ಎಂಬುದು ಸ್ವಾರ್ಥ ಚಿಂತನೆ ಯ ಮುಂದೆ ಸತ್ತೇ ಹೋದಂತಿದೆ. ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಎಂಬ ಜಾಲ ಸಕತ್ತಾಗಿ ಸದ್ದು ಮಾಡುತ್ತಿದೆ.

ಸಾಮಾನ್ಯ ಜನರಿಂದ ಹಿಡಿದು ಪ್ರಭಾವಿ ವ್ಯಕ್ತಿಗಳವರೆಗೂ ಈ ಜಾಲದ ವರ್ತುಲದೊಳಗೆ ಸಿಲುಕಿ ನರಳಿ ಪ್ರಾಣ ಕಳೆದುಕೊಂಡದ್ದಕ್ಕೆ ಲೆಕ್ಕವಿಲ್ಲದಂತಿದೆ. ಈ ಜಾಲದ ಬಳಿಕ ನಡೆಯುವ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಬಹು ದೊಡ್ಡ ಪ್ರಮಾಣದಲ್ಲಿ ದುಡ್ಡು ಕಳೆದುಕೊಂಡವರ ಸಂಖ್ಯೆಯೇ ಕಾಣ ಸಿಗುತ್ತದೆ.

ಮರ್ಯಾದೆ, ಘನತೆಗೆ ಅಂಜಿ ದೂರು ನೀಡಲು ಪ್ರಭಾವಿಗಳು ಹಿಂದೇಟು ಹಾಕುವ ಕಾರಣಕ್ಕೆ ಈ ದಂಧೆ ದೊಡ್ಡ ಮಟ್ಟದಲ್ಲಿ ಇಂದು ವಿಸ್ತರಿಸಿಕೊಳ್ಳುತ್ತಿದೆ. ಈ ಜಾಲದ ಸುಳಿಗೆ ಸಿಲುಕಿ ಮತ್ತೆ ಮತ್ತೆ ಹಣ ಕೊಟ್ಟು ಅಂತಿಮವಾಗಿ ನೇಣಿಗೆ ಶರಣಾದ ಅದೆಷ್ಟೋ ಮಂದಿ ನಮ್ಮ ಸಮಾಜದಲ್ಲಿ ಕಾಣ ಸಿಗುತ್ತಾರೆ.

ಇದನ್ನೂ ಓದಿ: Vishwavani Editorial: ಸಭ್ಯತೆಯ ಎಲ್ಲೆ ಮೀರದಿರಲಿ

ಇತ್ತೀಚೆಗೆ ಕರಾವಳಿ ಭಾಗದಲ್ಲಿ ನಡೆದ ಅಭಿಷೇಕ್ ಆಚಾರ್ಯ ಸಾವಿನ ಪ್ರಕರಣ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ, ರಾಜಕಾರಣಿಯೋರ್ವರ ಸಹೋದರನ ಆತ್ಮಹತ್ಯೆ ಪ್ರಕರಣ, ಬಸ್ ಮಾಲಕರೋರ್ವರ ಹತ್ಯೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ನಡೆಸುವ ದಂಧೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ.

ಈ ಹನಿಟ್ರ್ಯಾಪ್‌ಗೆ ಬಹುಮುಖ್ಯವಾಗಿ ಮದುವೆ ವಿಚಾರವನ್ನು ಮುಂದಿಟ್ಟುಕೊಂಡು, ಖಾಸಗಿ ಕ್ಷಣಗಳ ವೀಡಿಯೋ ಬಳಸಿ, ಸಮಾಜದಲ್ಲಿನ ಪ್ರಭಾವಿ ಗಣ್ಯ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಸ್ವತಃ ಪತಿಯೇ ತನ್ನ ಪತ್ನಿಯನ್ನು ಬೇರೊಬ್ಬರ ಬಳಿ ಕಳುಹಿಸಿ ವೀಡಿಯೋ ಚಿತ್ರೀಕರಿಸಿ ಹಣ ದೋಚಿದ ಉದಾಹರಣೆಗಳಿವೆ.

ಅಲ್ಲದೇ ಕೊಲೆ ಕೃತ್ಯಕ್ಕೆ, ಪಾತಕ ಕೃತ್ಯಗಳಿಗೆ ಕೂಡ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುವ ಹಂತಕ್ಕೆ ತಲುಪಿದೆ. ಕರಾವಳಿ ಪ್ರದೇಶದಲ್ಲಿ ಇಬ್ಬರು ಖಡಕ್ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯಿಂದ ಪಾತಕ, ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿದೆ.

ಪ್ರಸ್ತುತ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದೆ ಪೊಲೀಸ್ ಇಲಾಖೆ. ಆದರೆ ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಗ್ಯಾಂಗ್ ವಾರ್‌ಗಳು, ಹಾಡಹಗಲೇ ದರೋಡೆ, ಪ್ರತಿಕಾರದ ಹತ್ಯೆಗಳಿಗೆ ಪುಂಡರು ಮುನ್ನುಡಿ ಬರೆದಿರುವುದು ಒಂದು ರೀತಿ ಸಮಾಜದಲ್ಲಿ ಭೀತಿ ಹುಟ್ಟಿಸುವಂತಿದೆ.

ಕೊಲೆ ಕೃತ್ಯಗಳಲ್ಲಿ ಭಾಗಿಯಾಗುವ ಪುಡಿ ರೌಡಿಗಳು ಜೈಲಿನಿಂದಲೇ ಮತ್ತೊಂದು ಹತ್ಯೆಗೆ ಸ್ಕೆಚ್ ಹಾಕುವುದು, ಕೋರ್ಟ್ ಆವರಣದಲ್ಲಿ ಶೋಕಿ, ಆವಾಝ್ ಹಾಕುವುದು, ಜೈಲಿನಲ್ಲಿ ಮೋಜು-ಮಸ್ತಿ, ಪಾರ್ಟಿ, ಐಷಾರಾಮಿ ಬದುಕು ಆರು ತಿಂಗಳಲ್ಲಿ ಜಾಮೀನು ಮಂಜೂರು ಇಷ್ಟರ ಒಂದು ಕೊಲೆಯ ಅಧ್ಯಾಯ ಮುಗಿದು ಬಿಡುತ್ತದೆ.

ಇನ್ನು ಆನ್‌ಲೈನ್ ವಂಚನಾ ಜಾಲವು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಇಲ್ಲೂ ಅವಿದ್ಯಾವಂತ ರಷ್ಟೇ ಪ್ರಮಾಣದಲ್ಲಿ ವಿದ್ಯಾವಂತರೇ ದುಡ್ಡು ಕಳೆದುಕೊಂಡ ನಿದರ್ಶನಗಳಿವೆ. ಇಲ್ಲೂ ವೀಡಿಯೋ ಕಾಲ್ ಚಿತ್ರೀಕರಿಸಿ ಹಣ ದೋಚುವುದು, ಜಾಲತಾಣಗಳ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುವುದು, ದೂರವಾಣಿ ಸಂಖ್ಯೆಯನ್ನೇ ಬಳಸಿ ಹಣಕ್ಕಾಗಿ ಬೇಡಿಕೆ ಇಡುವುದು ಮುಂತಾದ ಕಾರಣಗಳಿಗಾಗಿ ವೈದ್ಯರು, ಎಂಜಿನಿಯರ್, ಕೃಷಿಕರು, ರಾಜಕಾರಣಿಗಳು, ಮಹಿಳೆಯರು ಸುಳ್ಳು ಸಂದೇಶವನ್ನೇ ಸತ್ಯವೆಂದು ನಂಬಿ ಹಣ ಕಳೆದುಕೊಂಡು ಪರಿತಪಿಸಿದ ಉದಾಹರಣೆಗಳಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತಿನ ನೆಪವೊಡ್ಡಿ, ಲೋನ್ ಮಂಜೂರಾಗಿರುವುದಾಗಿ ತಿಳಿಸಿ ಅನಾಮಿಕ ಲಿಂಕ್ ಗಳನ್ನು ಕಳುಹಿಸಿ ಆಧಾರ್, ಪಾನ್, ಬ್ಯಾಂಕ್ ಖಾತೆ ವಿವರ ಓಟಿಪಿ ಪಡೆದು ಲಕ್ಷಗಟ್ಟಲೇ ಹಣ ದೋಚುವ ಆನ್‌ಲೈನ್ ನಕಲಿ ಕಿರಾತಕರಿಗೇನು ಪ್ರಸ್ತುತ ಸಮಾಜದಲ್ಲಿ ಕೊರತೆ ಯಿಲ್ಲ.

ಇನ್ನು ಹಣ ದ್ವಿಗುಣಗೊಳಿಸುವ ಯೋಜನೆ, ಗೃಹೋಪಯೋಗಿ ವಸ್ತು, ಫ್ಲ್ಯಾಟ್ ಮುಂತಾದವುಗಳಿಗೆ ತಿಂಗಳ ಹೂಡಿಕೆಯಂತಹ ಸ್ಕೀಮ್‌ಗಳು ಅಲ್ಲಲ್ಲಿ ಕಂಡು ಬರುತ್ತಿದ್ದು, ಇವುಗಳ ಪೈಕಿ ಕೆಲವೊಂದು ಸಂಸ್ಥೆಗಳು ಹೂಡಿಕೆದಾರರಿಗೆ ಪಂಗನಾಮ ಹಾಕಿ ಪರಾರಿಯಾದ ಘಟನೆಯಲ್ಲಿ ಇತ್ತ ಹೂಡಿಕೆಯ ಹಣವೂ ಇಲ್ಲದೆ ಅತ್ತ ವಸ್ತುವೂ ಸಿಗದೆ ಮೋಸ ಹೋದ ಘಟನೆಗಳಿವೆ.

ಇನ್ನು ಸಂಸ್ಕೃತ ಶಿಕ್ಷಣ ಸಂಸ್ಥೆಯ ಶಿಕ್ಷಕರೋರ್ವರು ಮೊಬೈಲ್‌ನಲ್ಲಿ ಸಂಬಂಧಿಕರೊಡನೆ ಮಾತ ನಾಡಿದರೆಂಬ ಕಾರಣಕ್ಕೆ ವಿದ್ಯಾರ್ಥಿಗೆ ಕಾಲಿನಿಂದ ಒದ್ದು ಮನಬಂದಂತೆ ಥಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿ ಕೊನೆಗೆ ಆ ಶಿಕ್ಷಕನ ಬಂಧನವು ನಡೆದಿದೆ. ಇಂತಹ ಘಟನೆಗಳು ಆಗಾಗ್ಗೆ ನಮ್ಮ ಸಮಾಜದಲ್ಲಿ ಮರುಕಳಿಸುತ್ತಿದೆ. ಈ ಹಿಂದೆ ಹೆತ್ತ ತಾಯಿಯನ್ನೇ ಕುಡಿದ ಮತ್ತಿನಲ್ಲಿ ಸ್ವಂತ ಮಗನೇ ಮನ ಬಂದಂತೆ ಥಳಿಸಿ ಎತ್ತಿ ಎಸೆದು, ಕ್ರೌರ್ಯ ಮೆರೆದ ಘಟನೆಯು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ.

ಇಂದಿನ ಆಧುನಿಕ ವಾತಾವರಣ, ಸಾಮಾಜಿಕ ಮಾಧ್ಯಮಗಳ ಪ್ರಭಾವ, ದುಶ್ಚಟಗಳು, ಅಮಲು ಪದಾರ್ಥಗಳ ಮಿತಿಮೀರಿದ ಸೇವನೆ ಇವೆಲ್ಲವೂ ಹದಿಹರೆಯದ ಯುವ ಸಮುದಾಯವನ್ನು ಅಪರಾಧ ಚಟುವಟಿಕೆಗಳಿಗೆ ಸೆಳೆಯುತ್ತಿರುವುದನ್ನು ಕಾಣಬಹುದು. ಅಪರಾಧ ಕೃತ್ಯ ನಡೆಸುವುದು, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಪುಂಡರು ಭಾಗಿಯಾಗುವುದು ಒಂದು ಭಾಗವಾದರೆ ಇಂತಹ ವರನ್ನು ರಕ್ಷಿಸಲೆಂದೇ ಒಂದಷ್ಟು ಪ್ರಭಾವಿಗಳು ನಮ್ಮ ಸಮಾಜದಲ್ಲಿರುವುದು ಮತ್ತೊಂದು ವಿಶೇಷ.

ಯಾವುದೇ ಗಂಭೀರ ಪ್ರಕರಣಗಳು ಸಂಭವಿಸಿದರೂ ಕಾನೂನಿನ ಕಣ್ಣು ತಪ್ಪಿಸಿ ವ್ಯವಹಾರ ನಡೆಸಿ ಅಪರಾಧಿಗಳನ್ನು ಕಾನೂನಿನ ಕುಣಿಕೆಯಿಂದ ಹೊರತರುವ ವ್ಯವಸ್ಥೆಗಳಿರುವಾಗ, ಹಣದ ಪ್ರಭಾವಕ್ಕೆ ವ್ಯವಸ್ಥೆಗಳು ಮಣಿಯುವಾಗ ಅಪರಾಧ ಚಟುವಟಿಕೆಗಳು ಸಮಾಜದಲ್ಲಿ ಸಲೀಸಾಗಿ ನಡೆಯುತ್ತಿದೆ.

ಇನ್ನು ಭಾರತೀಯ ಕೌಟುಂಬಿಕ ವ್ಯವಸ್ಥೆಗಳ ಸದ್ಯದ ಪರಿಸ್ಥಿತಿ ಕೂಡ ಆಧುನಿಕ ವ್ಯವಸ್ಥೆಯಲ್ಲಿ ನಲುಗಿ ಹೋಗಿದೆ. ವೈವಾಹಿಕ ಸಂಬಂಧಗಳು ಕೂಡ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಉನ್ನತ ಶ್ರೇಣಿಯ ಶಿಕ್ಷಣ, ಲಕ್ಷಗಟ್ಟಲೇ ಸಂಬಳದ ಕಾರಣಕ್ಕೆ ಪತಿ ಪತ್ನಿಯನ್ನು ಅವಲಂಬಿತರಾಗುವ ಹಾಗೂ ಪತ್ನಿ ಪತಿಯನ್ನು ಅವಲಂಬಿತರಾಗುವ ಪ್ರಮೇಯವೇ ಪ್ರಸ್ತುತ ದಿನಗಳಲ್ಲಿ ಇಲ್ಲದೆ ಇರುವುದು, ದಾಂಪತ್ಯ ಜೀವನದಲ್ಲಿ ತಾಳ್ಮೆ, ಸಹನೆ ಎನ್ನುವುದು ನಶಿಸಿ ಹೋಗಿರುವ ಕಾರಣಕ್ಕೆ, ಕ್ಷುಲ್ಲಕ ವಿಚಾರ ಗಳಿಗೆ ಮದುವೆಯಾದ ತಿಂಗಳೊಳಗೆ ವಿಚ್ಚೇದನ ಪ್ರಕರಣಗಳು ಸಮಾಜದಲ್ಲಿ ಮಿತಿ ಮೀರುತ್ತಿದೆ.

ಆಧುನಿಕ ಬದುಕಿನ ಶೈಲಿಗೆ ಕುಟುಂಬ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುವ ಸಂತಾನ ವ್ಯವಸ್ಥೆಗಳು ನಶಿಸುತ್ತಿರುವುದು, ಫ್ಯಾಷನ್, ಸೌಂದರ್ಯದ ಮೋಡಿಗೆ ಮಕ್ಕಳಿಂದ ಹೊರತಾದ ದಾಂಪತ್ಯ ಜೀವನವನ್ನು ಹೆಣ್ಣು ಮಕ್ಕಳು ಬಯಸುವುದು ಕೂಡ ಕುಟುಂಬ ವ್ಯವಸ್ಥೆಗೆ ಮಾರಕವೆಂದರೂ ತಪ್ಪಾಗಲಾರದು.

ಇನ್ನು ದಾಂಪತ್ಯ ಜೀವನದಲ್ಲಿ ಕೌಟುಂಬಿಕ ಕಲಹಗಳು, ಆಸ್ತಿ ಅಂತಸ್ತಿಗಾಗಿ ದಾಯಾದಿ ಕಲಹಗಳು, ಅನೈತಿಕ ಸಂಬಂಧಗಳು ಕುಟುಂಬವನ್ನೇ ಇಬ್ಭಾಗವನ್ನಾಗಿಸುವ ಘಟನೆಗಳು ಕೂಡ ನಮ್ಮ ಸಮಾಜ ದಲ್ಲಿದೆ. ಕೂಡು ಕುಟುಂಬಗಳು, ಅವಿಭಕ್ತ ಕುಟುಂಬಗಳಿಂದ ಕೂಡಿದ್ದ ಸಂಸ್ಕಾರಯುತ ಬದುಕಿನ ಕುಟುಂಬ ಪದ್ಧತಿ ಇಂದು ಆಧುನಿಕ ಸೌಕರ್ಯ, ಸೆಲೆಬ್ರಿಟಿಗಳ ಅನುಕರಣೆ, ಫ್ಯಾಷನ್ ಜಗತ್ತಿನ ಮಧ್ಯೆ, ಜಾಲತಾಣಗಳ ಪ್ರಭಾವದ ಮಧ್ಯೆ ಯಾಂತ್ರಿಕೃತವಾದ ಬದುಕಿನ ಶೈಲಿಗೆ ಮನುಷ್ಯ ಇಂದು ಮಾರುಹೋಗುತ್ತಿರುವುದು ಸುಳ್ಳಲ್ಲ.

ನಮ್ಮ ಪೂರ್ವಜರು ಹಾಕಿ ಕೊಟ್ಟ ಸಂಸ್ಕೃತಿಯ ತಳಹದಿಯನ್ನು ಯಾವುದೋ ಅಂಧಾನುಕರಣೆಗೆ ಎಳ್ಳು ನೀರು ಬಿಟ್ಟಿರುವ ನಾವು ಮಾನವೀಯ ಗುಣ ನಶಿಸಿ ಹೋದ ಸಮಾಜದಲ್ಲಿ ಪರಿತಪಿಸ ಬೇಕಾದ ಸ್ಥಿತಿಗತಿಗಳು ಮುಂದಿನ ಪೀಳಿಗೆಗೆ ಎದುರಾದರೂ ಅಚ್ಚರಿಯಿಲ್ಲ.