ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gururaj Gantihole Column: ನಕ್ಸಲ್‌ ಮುಕ್ತ, ಲಷ್ಕರ್‌ ಮುಕ್ತ: ಸಂಭ್ರಮಾಚರಣೆಗೆ ಯಾವ ಸೂತಕ ?

ಭಾರತದ ಆಂತರಿಕ ಭದ್ರತೆಗೆ ದಶಕಗಳಿಂದ ಸವಾಲಾಗಿದ್ದ ನಕ್ಸಲ್ ವಾದ ಮತ್ತು ಲಷ್ಕರ್-ಎ-ತೊಯ್ಬಾದಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಹೋರಾಟವು ಇಂದು ಅಂತಿಮ ಹಾಗೂ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ದಶಕಗಳ ರಕ್ತಪಾತವನ್ನು ಅಂತ್ಯಗೊಳಿಸಿರುವ ಈ ಐತಿಹಾಸಿಕ ಸಾಧನೆಗೆ ದೇಶಾದ್ಯಂತ ದೊಡ್ಡ ಮಟ್ಟದ ಸಂಭ್ರಮಾಚರಣೆ ಕಾಣಿಸಬೇಕಿತ್ತು; ಆದರೆ, ಈ ಪ್ರಗತಿಯನ್ನು ಮುಕ್ತವಾಗಿ ಸ್ವಾಗತಿಸುವ ಬದಲು ಕೆಲವು ರಾಜಕೀಯ ಹಾಗೂ ಬೌದ್ಧಿಕ ವಲಯಗಳಲ್ಲಿ ಒಂದು ಬಗೆಯ ‘ಸೂತಕ’ದ ವಾತಾವರಣ ನೆಲೆಸಿರುವಂತೆ ಕಾಣುತ್ತಿದೆ. ನಮ್ಮ ಭದ್ರತಾ ಸಂಸ್ಥೆಗಳ ಈ ಸಾಧನೆ ಸಾಮಾನ್ಯ ದ್ದಲ್ಲ ಎಂಬುದು ಜನರಿಗೆ ತಲುಪದಿರುವುದು ನಿಜಕ್ಕೂ ದುರದೃಷ್ಟಕರ.

ನಕ್ಸಲ್‌ ಮುಕ್ತ, ಲಷ್ಕರ್‌ ಮುಕ್ತ: ಸಂಭ್ರಮಾಚರಣೆಗೆ ಯಾವ ಸೂತಕ ?

-

ಗಂಟಾಘೋಷ

2026ರ ಜುಲೈ 28ರಂದು ಜಾರ್ಖಂಡ್ ನ ಧನ್‌ಬಾದ್-ಗಿರಿಡಿಹ್ ಗಡಿ ಭಾಗದ ಮನಿಯಾಡಿಹ್ ಪ್ರದೇಶದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ, ದೇಶದ ಕೊನೆಯ ಸಕ್ರಿಯ ಅಗ್ರ ಮಾವೋವಾದಿ ನಾಯಕ ಮಿರ್ಸಿ ಬೆಸ್ರಾ, ಅಲಿಯಾಸ್ ಸಾಗರ್, ಭಾಸ್ಕರ್ ಎಂಬಾತನನ್ನು ಭದ್ರತಾ ಪಡೆಗಳು ಬಂಧಿಸಿವೆ. ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಹಾಗೂ ಪಾಲಿಟ್‌ ಬ್ಯೂರೋದ ಕೊನೆಯ ಸಕ್ರಿಯ ಸದಸ್ಯನಾಗಿದ್ದ ಬೆಸ್ರಾ ಜೊತೆಗೆ ಆತನ ನಾಲ್ವರು ಸಹಚರರನ್ನೂ ವಶಕ್ಕೆ ಪಡೆಯಲಾಗಿದೆ. ಈ ಬಂಧನದೊಂದಿಗೆ ಸಿಪಿಐ (ಮಾವೋವಾದಿ) ಸಂಘಟನೆಯ ಪಾಲಿಟ್‌ಬ್ಯೂರೋ ಮತ್ತು ಕೇಂದ್ರ ಸಮಿತಿ ಎರಡೂ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು, ದೇಶದಲ್ಲಿ ಮಾವೋವಾದಿ ಚಳವಳಿಯ ಸಕ್ರಿಯ ಅಗ್ರ ನಾಯಕತ್ವವು ಅಂತ್ಯಗೊಂಡಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 18ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ದೇವ್ಸರ್ ಪ್ರದೇಶದ ಜಂಗಲ್ಪೋರಾ ದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ, ಲಷ್ಕರ್-ಎ-ತೊಯ್ಬಾ (LeT) ಹಾಗೂ ಅದರ ಅಂಗಸಂಸ್ಥೆ ಟಿಆರ್ ಎಫ್ʼನ (TRF) 22 ವರ್ಷದ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್‌ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ನವೆಂಬರ್ 11ರಂದು ಕುಲ್ಗಾಮ್‌ನ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಈತನ ಸಹಚರ ಉಮರ್ ನಿಸಾರ್ ದಾರ್‌ನನ್ನು ಎರಡು ದಿನಗಳ ಹಿಂದಷ್ಟೇ (ನವೆಂಬರ್ 16) ಲಾರೂ ಬಳಿ ವಧೆ ಮಾಡಲಾಗಿತ್ತು. ಲತೀಫ್ ಭಟ್ ಹತ್ಯೆಯೊಂದಿಗೆ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಲಷ್ಕರ್ ಉಗ್ರನೂ ನಿರ್ಮೂಲನೆಯಾಗಿದ್ದಾನೆ.

ಭಾರತದ ಆಂತರಿಕ ಭದ್ರತೆಗೆ ದಶಕಗಳಿಂದ ಸವಾಲಾಗಿದ್ದ ನಕ್ಸಲ್ ವಾದ ಮತ್ತು ಲಷ್ಕರ್-ಎ-ತೊಯ್ಬಾದಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಹೋರಾಟವು ಇಂದು ಅಂತಿಮ ಹಾಗೂ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ದಶಕಗಳ ರಕ್ತಪಾತವನ್ನು ಅಂತ್ಯಗೊಳಿಸಿರುವ ಈ ಐತಿಹಾಸಿಕ ಸಾಧನೆಗೆ ದೇಶಾದ್ಯಂತ ದೊಡ್ಡ ಮಟ್ಟದ ಸಂಭ್ರಮಾಚರಣೆ ಕಾಣಿಸಬೇಕಿತ್ತು; ಆದರೆ, ಈ ಪ್ರಗತಿಯನ್ನು ಮುಕ್ತವಾಗಿ ಸ್ವಾಗತಿಸುವ ಬದಲು ಕೆಲವು ರಾಜಕೀಯ ಹಾಗೂ ಬೌದ್ಧಿಕ ವಲಯ ಗಳಲ್ಲಿ ಒಂದು ಬಗೆಯ ‘ಸೂತಕ’ದ ವಾತಾವರಣ ನೆಲೆಸಿರುವಂತೆ ಕಾಣುತ್ತಿದೆ. ನಮ್ಮ ಭದ್ರತಾ ಸಂಸ್ಥೆಗಳ ಈ ಸಾಧನೆ ಸಾಮಾನ್ಯ ದ್ದಲ್ಲ ಎಂಬುದು ಜನರಿಗೆ ತಲುಪದಿರುವುದು ನಿಜಕ್ಕೂ ದುರದೃಷ್ಟಕರ.

ಇದನ್ನೂ ಓದಿ: Gururaj Gantihole Column: ಎಥೆನಾಲ್:‌ ರೈತ ಹಿತದ ದೂರದೃಷ್ಟಿಗೆ ಇಷ್ಟೊಂದು ತಾತ್ಸಾರವೇ !

ನಕ್ಸಲ್‌ವಾದ ಮತ್ತು ಲಷ್ಕರ್-ಎ-ತೊಯ್ಬಾದ ಬೆಳವಣಿಗೆ: 1967ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್‌ ಬಾರಿಯಲ್ಲಿ ಆರಂಭವಾದ ನಕ್ಸಲ್ ಸಶಸ್ತ್ರ ಬಂಡಾಯವು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರಗಳಿದ್ದ ದಶಕಗಳಲ್ಲಿ ದೇಶದ ಮಧ್ಯ ಮತ್ತು ಪೂರ್ವ ಭಾಗದ ಅರಣ್ಯ ಪ್ರದೇಶಗಳಿಗೆ ವ್ಯಾಪಿಸಿ ‘ರೆಡ್ ಕಾರಿಡಾರ್’ ಆಗಿ ಬೆಳೆಯಿತು. 2004ರಲ್ಲಿ ಪೀಪಲ್ಸ್ ವಾರ್ ಗ್ರೂಪ್ (PWG) ಮತ್ತು ಮಾವೋ ವಾದಿ ಕಮ್ಯುನಿಸ್ಟ್ ಸೆಂಟರ್ (MCC) ವಿಲೀನಗೊಂಡು ಸಿಪಿಐ (ಮಾವೋವಾದಿ) ಸಂಘಟನೆಯಾಗಿ ರೂಪುಗೊಂಡ ನಂತರ ಹಿಂಸಾಚಾರವು ತಾರಕಕ್ಕೇರಿತು. ‌

ಯುಪಿಎ ಅವಧಿಯನ್ನು ನೀತಿ ಅಸ್ಪಷ್ಟತೆ (Policy Ambiguity) ಮತ್ತು ಸಡಿಲ ಆಡಳಿತದ ಕಾಲ ಘಟ್ಟ ಎಂದು ಕಟುವಾಗಿ ಟೀಕಿಸಲಾಗುತ್ತದೆ. ಇದಕ್ಕೆ ಕಾರಣ ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ ಬುಡಕಟ್ಟು ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸದಿರುವುದೇ ನಕ್ಸಲ್‌ವಾದ ಬೇರೂರಲು ಕಾರಣವಾಯಿತು. ಹಾಗೂ ಅಲ್ಲಿನ ಜನರಲ್ಲಿ ಭ್ರಮನಿರಸನ ಉಂಟಾಗಿ ಕೆಲವು ವಲಯಗಳಲ್ಲಿ ಸೈದ್ಧಾಂತಿಕ ಸಹಾನುಭೂತಿಯೂ ಇತ್ತು ಎಂದು ಅಮಿತ್ ಶಾ ಆರೋಪಿಸಿದ್ದಾರೆ.

2006ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರೇ ನಕ್ಸಲ್‌ವಾದವನ್ನು ದೇಶದ ಅತಿದೊಡ್ಡ ಆಂತರಿಕ ಭದ್ರತಾ ಸವಾಲು ಎಂದು ಒಪ್ಪಿಕೊಂಡಿದ್ದರೂ, ಅದನ್ನು ಮೂಲೋ ತ್ಪಾಟನೆ ಮಾಡಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯನ್ನು ಕಾಂಗ್ರೆಸ್ ತೋರಲಿಲ್ಲ.

2010ರ ದಂತೇವಾಡ ದಾಳಿಯಲ್ಲಿ 76 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಘಟನೆ ಹಾಗೂ 2013ರ ಮೇ ತಿಂಗಳಲ್ಲಿ ಛತ್ತೀಸ್‌ಗಢದ ಜೀರಂ ಘಾಟಿಯಲ್ಲಿ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ ತಮ್ಮದೇ ಪಕ್ಷದ ಹಿರಿಯ ನಾಯಕರು ಹತ್ಯೆಯಾದ ಸಂದರ್ಭದಲ್ಲೂ, ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ನಕ್ಸಲರ ವಿರುದ್ಧ ನಿರ್ಣಾಯಕ ರಾಷ್ಟ್ರೀಯ ಸೇನಾ ಕಾರ್ಯಾ ಚರಣೆಗೆ ಮುಂದಾಗಲಿಲ್ಲ.

CPIM

ಗಡಿಯಾಚೆಗಿನ ಭಯೋತ್ಪಾದನೆಯ ವಿಚಾರದಲ್ಲೂ ಇದೇ ರೀತಿಯ ಲೋಪ ಕಾಂಗ್ರೆಸ್ ಮಾಡುತ್ತ ಬಂದಿದೆ. 1980ರ ದಶಕದ ಅಂತ್ಯದಲ್ಲಿ ಪಾಕಿಸ್ತಾನದಲ್ಲಿ ಹುಟ್ಟಿಕೊಂಡ ಲಷ್ಕರ್-ಎ-ತೊಯ್ಬಾ ಸಂಘಟನೆಯು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಜಾಲವನ್ನು ವಿಸ್ತರಿಸಿತು. 2002ರಲ್ಲಿ ವಾಜಪೇಯಿಯವರ ಸರಕಾರದ ಅವಧಿಯಲ್ಲಿ ತಂದಿದ್ದ ಭಯೋತ್ಪಾದನಾ ತಡೆ ಕಾಯ್ದೆ (POTA) ಭದ್ರತಾ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಿ ಭಯೋತ್ಪಾದನೆ ತಡೆಯಲು ಒಂದು ಒಳ್ಳೆಯ ನಿರ್ಣಯವಾಗಿತ್ತು. ಆದರೆ ಯುಪಿಎ ಸರ್ಕಾರವು ಅಧಿಕಾರಕ್ಕೆ ಬಂದ ತಕ್ಷಣ ರದ್ದುಗೊಳಿಸಿದ್ದು ಭದ್ರತಾ ಸಂಸ್ಥೆಗಳ ಕೈಕಟ್ಟಿ ಹಾಕಿತು.

2008ರ ಮುಂಬೈ 26/11ರ ಭೀಕರ ದಾಳಿಯ ನಂತರವೂ ಲಷ್ಕರ್ -ಎ-ತೊಯ್ಬಾ ಮತ್ತು ಪಾಕಿಸ್ತಾನದ ವಿರುದ್ಧ ಕಠಿಣ ಸೇನಾ ಪ್ರತ್ಯುತ್ತರ ನೀಡುವ ಬದಲು, ಯುಪಿಎ ಸರ್ಕಾರವು ಕೇವಲ ರಾಜತಾಂತ್ರಿಕ ಪತ್ರವ್ಯವಹಾರ ಮತ್ತು ದಾಖಲೆಪತ್ರಗಳನ್ನು (Dossiers) ಕಳುಹಿಸುವುದಕ್ಕೆ ಸೀಮಿತವಾಯಿತು; ಇದರಿಂದಾಗಿ ಭಯೋತ್ಪಾದಕ ಸಂಘಟನೆಗಳಿಗೆ ಭಯವೇ ಇಲ್ಲದಂತಾಗಿತ್ತು ಎಂದು ಹಲವು ಭದ್ರತಾ ತಜ್ಞರು ವಿಶ್ಲೇಷಿಸಿದ್ದಾರೆ.

2014ರ ನಂತರದ ನಿರ್ಣಾಯಕ ಬದಲಾವಣೆ: 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಆಂತರಿಕ ಭದ್ರತೆಯ ಕುರಿತ ದೃಷ್ಟಿಕೋನವೇ ಆಮೂಲಾಗ್ರವಾಗಿ ಬದಲಾಯಿತು ಎಂಬುದು ಫಲಿತಾಂಶದಿಂದಲೇ ಗುರುತಾಗುತ್ತದೆ. 2015ರಲ್ಲಿ ಜಾರಿಗೆ ತರಲಾದ ‘ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ’ ಹಾಗೂ ಕೇಂದ್ರ ಗೃಹ ಸಚಿವಾಲಯದ ‘ಸಮಾಧಾನ್’ (SAMADHAN) ಕಾರ್ಯತಂತ್ರದಡಿ, ಭದ್ರತಾ ಕಾರ್ಯಾಚರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಒಟ್ಟಿಗೆ ಕೊಂಡೊಯ್ಯಲಾಯಿತು.

ಎಡಪಂಥೀಯ ಉಗ್ರವಾದವನ್ನು ಹತ್ತಿಕ್ಕಲು 2017ರಲ್ಲಿ ರೂಪಿಸಲಾದ ‘ಸಮಾಧಾನ್’ ಕಾರ್ಯ ತಂತ್ರವು ಚುರುಕಾದ ನಾಯಕತ್ವ, ಆಕ್ರಮಣಕಾರಿ ತಂತ್ರಗಾರಿಕೆ, ನಿಖರ ಗುಪ್ತಚರ ಮಾಹಿತಿ, ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ನಕ್ಸಲರ ಹಣಕಾಸಿನ ಮೂಲಗಳನ್ನು ಕಡಿತಗೊಳಿಸುವ ಎಂಟು ಪ್ರಮುಖ ಅಂಶಗಳ ಸಮಗ್ರ ಭದ್ರತಾ ನೀತಿಯಾಗಿದೆ. ಇದನ್ನು ಕಾರ್ಯಗತಗೊಳಿಸಿ ದಟ್ಟ ಅರಣ್ಯಗಳಲ್ಲಿ ನಕ್ಸಲರ ಭದ್ರಕೋಟೆಗಳನ್ನು ಭೇದಿಸಲು ಫಾರ್ವರ್ಡ್ ಆಪರೇಟಿಂಗ್ ಬೇಸ್‌ಗಳನ್ನು (FOBs) ಸ್ಥಾಪಿಸಲಾಯಿತು ಹಾಗೂ ರಾಜ್ಯ ಮತ್ತು ಕೇಂದ್ರ ಪಡೆಗಳ ನಡುವೆ ಸಮನ್ವಯ ಸಾಧಿಸಲಾಯಿತು ಎಂದು ಗೃಹ ಸಚಿವಾಲಯ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2014ರಲ್ಲಿ ದೇಶದಲ್ಲಿ 126 ಇದ್ದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯು 2026ರ ಮಾರ್ಚ್ 31ರ ವೇಳೆಗೆ ಶೂನ್ಯಕ್ಕೆ ಇಳಿದಿದ್ದು, ಭಾರತವು ಎಡಪಂಥೀಯ ಉಗ್ರವಾದದಿಂದ ಮುಕ್ತವಾಗಿದೆ ಎಂದು ಘೋಷಿಸಲಾಗಿದೆ. 2014ರಿಂದ ಈವರೆಗೆ ಒಟ್ಟು 16653 ನಕ್ಸಲ್ ಕಾರ್ಯಕರ್ತರ ಬಂಧನ, 10645 ಮಂದಿಯ ಶರಣಾಗತಿ, 1929 ನಕ್ಸಲ್‌ಗಳ ಹತ್ಯೆ ಹಾಗೂ ಶಸ್ತ್ರಾಸ್ತ್ರ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಸಿಪಿಐ (ಮಾವೋವಾದಿ) ಸಂಘಟನೆಯ 41 ಪಾಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿ ಸದಸ್ಯರನ್ನು ನಿರ್ಮೂಲನೆ ಮಾಡುವ ಮೂಲಕ ನಕ್ಸಲ್ ಚಳವಳಿಯ ನಾಯಕತ್ವವನ್ನೇ ಕಿತ್ತುಹಾಕಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕೇವಲ ಶಸ್ತ್ರಾಸ್ತ್ರ ಕಾರ್ಯಾಚರಣೆ ಮಾತ್ರವಲ್ಲದೆ, ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರಲು 201ರ ನಂತರ 668 ಹೊಸ ಭದ್ರತಾ ಶಿಬಿರಗಳು, 615 ಸುರಕ್ಷಿತ ಪೊಲೀಸ್ ಠಾಣೆಗಳು, 9983 ಕಿಲೋಮೀಟರ್ ಗ್ರಾಮೀಣ ರಸ್ತೆಗಳು, 9561 ಟೆಲಿಕಾಂ ಟವರ್ ಗಳು ಮತ್ತು 179 ಏಕಲವ್ಯ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಅರಣ್ಯ ಹಕ್ಕುಗಳ ಕಾಯ್ದೆಯಡಿ 9,71,853 ಭೂ ಹಕ್ಕುಪತ್ರ ಗಳನ್ನು ವಿತರಿಸುವ ಮೂಲಕ ನಕ್ಸಲ್‌ವಾದಕ್ಕೆ ಇದ್ದ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳನ್ನು ತೊಡೆದುಹಾಕಲಾಗಿದೆ.

ಸೇನಾ ಆಧುನೀಕರಣ, ಕಾರ್ಯಾಚರಣೆ ಸ್ವಾತಂತ್ರ್ಯ: ಭದ್ರತಾ ಪಡೆಗಳಿಗೆ ಪೂರ್ಣ ಪ್ರಮಾಣದ ‘ಕಾರ್ಯಾ ಚರಣಾ ಸ್ವಾತಂತ್ರ್ಯ’ ನೀಡಿರುವುದು ಮತ್ತು ಸೇನಾ ಆಧುನೀಕರಣವು ಉಗ್ರವಾದಕ್ಕೆ ನಿರ್ಣಾಯಕ ಪ್ರತ್ಯುತ್ತರ ನೀಡಲು ನೆರವಾಗಿದೆ. ಕೇಂದ್ರ ಗೃಹ ಸಚಿವಾಲಯವು ಆಗ 2026ರಲ್ಲಿ ಲೋಕಸಭೆಗೆ ನೀಡಿದ ಮಾಹಿತಿಯಂತೆ, 1523 ಕೋಟಿ ರೂಪಾಯಿ ವೆಚ್ಚದ ‘ಆಧುನೀಕರಣ ಯೋಜನೆ-4(Modernisation Plan- IV) ಅಡಿಯಲ್ಲಿ ಕೇಂದ್ರೀಯ ಸಶಸ ಪೊಲೀಸ್ ಪಡೆಗಳಿಗೆ (CAPF) ಅತ್ಯಾಧುನಿಕ ಅಸಾಲ್ಟ್ ರೈಫಲ್‌ಗಳು, ಕಾರ್ನರ್-ಶಾಟ್ ವ್ಯವಸ್ಥೆಯ ಗ್ಲಾಕ್ ಪಿಸ್ತೂಲ್‌ಗಳು, ಬುಲೆಟ್‌ಪ್ರೂಫ್ ಜಾಕೆಟ್‌ಗಳು, ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳು, ಥರ್ಮಲ್ ಇಮೇಜರ್‌ಗಳು, ರಾತ್ರಿ ವೀಕ್ಷಣಾ ಉಪಕರಣಗಳು, ಡ್ರೋನ್‌ಗಳು, ನೆಲಬಾಂಬ್ ನಿರೋಧಕ ವಾಹನಗಳು ಹಾಗೂ ಸುರಕ್ಷಿತ ಡಿಜಿಟಲ್ ಸಂವಹನ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ‌

ಭಯೋತ್ಪಾದಕರ ಆರ್ಥಿಕ ಮೂಲಗಳನ್ನು ಕಡಿತಗೊಳಿಸಲು 2019ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಗೆ (UAPA) ತಿದ್ದುಪಡಿ ತಂದು, ಸಂಘಟನೆಗಳ ಜೊತೆಗೆ ವ್ಯಕ್ತಿಗಳನ್ನೂ ಭಯೋತ್ಪಾದಕರೆಂದು ಘೋಷಿಸುವ ಹಾಗೂ ಉಗ್ರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಽಕಾರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ನೀಡಲಾಗಿದೆ.

ಇದರೊಂದಿಗೆ, 2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಲ್ಲುತೂರಾಟ ಹಾಗೂ ಸಂಘಟಿತ ಬಂದ್ ಗಳು ಗಣನೀಯವಾಗಿ ಇಳಿಕೆಯಾಗಿವೆ. 2016ರ ಉರಿ ದಾಳಿಯ ನಂತರದ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಪುಲ್ವಾಮಾ ದಾಳಿಯ ನಂತರದ ಬಾಲಾಕೋಟ್ ವಾಯುದಾಳಿಯು ಭಾರತದ ಹೊಸ ರಕ್ಷಣಾ ಸಿದ್ಧಾಂತವನ್ನು ಜಗತ್ತಿಗೆ ಸಾರಿತು. ಇದರ ಮುಂದುವರಿದ ಭಾಗವಾಗಿ, 2025ರ ಏಪ್ರಿಲ್ 22ರಂದು 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ, ಮೇ 2025ರಲ್ಲಿ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯನ್ನು ನಡೆಸಿದವು. ಇದರಲ್ಲಿ ಸ್ವದೇಶಿ ಮತ್ತು ಆಧುನಿಕ ತಂತ್ರಜ್ಞಾನವಾದ ಬ್ರಹ್ಮೋಸ್ ಕ್ಷಿಪಣಿಗಳು, ಕಾಮಿಕಾಜೆ ಡ್ರೋನ್‌ಗಳು, ನಾವಿಕ್ (NavIC) ಮಾರ್ಗದರ್ಶನ ಹಾಗೂ ಆಕಾಶ್ ಮತ್ತು ಆಕಾಶ್‌ತೀರ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಜೊತೆಗೆ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ಕಠಿಣ ರಾಜತಾಂತ್ರಿಕ ಕ್ರಮವನ್ನೂ ಕೈಗೊಳ್ಳಲಾಯಿತು.

ಒಂದು ಕಾಲದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಅಸಾಧ್ಯವೆಂದು ಭಾವಿಸಲಾಗಿದ್ದ ನಕ್ಸಲ್ ನಿರ್ಮೂಲನೆ ಮತ್ತು ಭಯೋತ್ಪಾದಕ ಜಾಲಗಳ ಮೇಲಿನ ಆಕ್ರಮಣಕಾರಿ ಕ್ರಮಗಳನ್ನು ಇಂದು ದೇಶವು ಕಣ್ಣಾರೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿ, ಮಾವೋವಾದಿಗಳ ಪಾಲಿಟ್‌ಬ್ಯೂರೋ ಹಾಗೂ ಕೇಂದ್ರ ಸಮಿತಿಯ ನಿರ್ಮೂಲನೆ ಮತ್ತು ಪ್ರತಿ ಗ್ರಾಮಕ್ಕೂ ಆಡಳಿತ ಹಾಗೂ ಅಭಿವೃದ್ಧಿಯನ್ನು ತಲುಪಿಸಿರುವುದರಿಂದ ಭಾರತವು ಇಂದು ನಕ್ಸಲ್ ಮುಕ್ತವಾಗಿದೆ. ಅಲ್ಲದೆ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಉಗ್ರರ ಜಾಲಗಳ ವಿರುದ್ಧ ಪೂರ್ವಭಾವಿ ಹಾಗೂ ಆಕ್ರಮಣಕಾರಿ ನೀತಿ ಉಗ್ರವಾದದ ಕಡಿವಾಣಕ್ಕೆ ಕಾರಣವಾಗಿದೆ.

ದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ನಕ್ಸಲ್ ವಾದ ಮತ್ತು ಭಯೋತ್ಪಾದನೆಯ ಬೆನ್ನುಮೂಳೆ ಮುರಿದಿರುವುದು ನಮ್ಮ ರಕ್ಷಣಾ ಹಾಗೂ ಭದ್ರತಾ ಪಡೆಗಳ ಪಾಲಿಗೆ ಯಾವುದೇ ಸಣ್ಣ ಸಾಧನೆಯಲ್ಲ. ಅದೆಷ್ಟೋ ಯೋಧರ ತ್ಯಾಗ, ಬಲಿದಾನ ಮತ್ತು ಶೌರ್ಯದ -ಲವಾಗಿ ದಕ್ಕಿರುವ ನಮ್ಮ ಭದ್ರತಾ ಸಂಸ್ಥೆಗಳ ಈ ಅಸಾಮಾನ್ಯ ಗೆಲುವು ಜನಸಾಮಾನ್ಯರಿಗೆ ಸರಿಯಾಗಿ ತಲುಪದಿರು ವುದು ನಿಜಕ್ಕೂ ದುರದೃಷ್ಟಕರ. ರಾಜಕೀಯ ಲೆಕ್ಕಾಚಾರಗಳನ್ನು ಬದಿಗೊತ್ತಿ, ದೇಶದ ಭದ್ರತಾ ಪಡೆಗಳ ಈ ಅಭೂತಪೂರ್ವ ಸಾಧನೆಯನ್ನು ‘ಕಾರ್ಗಿಲ್ ವಿಜಯ್ ದಿವಸ್’ ಮಾದರಿಯಲ್ಲಿಯೇ ಇಡೀ ದೇಶವು ರಾಷ್ಟ್ರೀಯ ಹೆಮ್ಮೆಯೊಂದಿಗೆ ಸಂಭ್ರಮಿಸಬೇಕಿದೆ.